‘ಹೇ..ಪೆದ್ದು ನೋಡಲ್ಲಿ ಒಲೆ ಮುಂದೆ ನಿಂತ್ಕೊಂಡು ಏನು ಯೋಚನೆ ಮಾಡ್ತಿದಿಯಾ. ತಲೆ ಸರಿಗಿದಿಯೋ..ಇಲ್ವೋ. ಹಾಲು ಉಕ್ತಿರೋದು ಕಾಣ್ತಿಲ್ವ’ ಕೊಂಕು ನುಡಿದಳು ಅತ್ತೆ. ಅತ್ತೆಯ ಮಾತಿನಿಂದ ಯಾವುದೋ ಲೋಕದಿಂದ ಹೊರ ಬಂದಳು ಭಾರತಿ. ‘ನಿನ್ನ ಯೋಗ್ಯತೆಗೆ ಮದುವೆ ಆಗಿ ಹತ್ತು ವರ್ಷ ಆದರೂ ಮಗು ಕೊಡೋಕೆ ಆಗಿಲ್ಲ ನಿನ್ನ ಕೈಲಿ.’ ಮತ್ತೆ ಅತ್ತೆಯ ಕೊಂಕು ನುಡಿಗಳು ಶುರುವಾದವು. ಭಾರತಿಗೆ ಹೊಸದೇನೂ ಅಲ್ಲ ಇದು. ಪ್ರತಿದಿನ ಅತ್ತೆಯ ಕೊಂಕು ನುಡಿಗಳನ್ನು ಕೇಳಿ ಬೇಸತ್ತಿದ್ದಳು. ‘ನನ್ನ ಅಂತರಂಗ ಬಲ್ಲವರು ಯಾರು? ನನ್ನ ಕನಸ್ಸುಗಳನ್ನು ಕೇಳುವವರು ಯಾರು? ನನಗೆ ಮಗು ಹೆರುವುದಕ್ಕೆ ಯೋಗ್ಯತೆ ಇಲ್ಲವೇ? ಆ ಅರ್ಹತೆ ನನಗೆ ಇಲ್ಲವೇ?’ ಎನ್ನುವ ಪ್ರಶ್ನೇಗಳ ಸುರಿಮಳೆಯೇ ಅವಳ ಮನಸ್ಸಿನಲ್ಲಿ ಹೊಯ್ದಾಡುತ್ತಿದ್ದವು. ಅತ್ತೆಯ ಮಾತುಗಳಿಗೆ ಕೆಲವೊಮ್ಮೆ ಕೋಪ ಬಂದು ಅತ್ತೆಗೆ ವಾದಿಸುತ್ತಿದ್ದಳು. ತದಾನಂತರ ಪಶ್ಚತ್ತಾಪ ಪಡುತ್ತಿದ್ದಳು.
ಮನೆಗೆ ಬಂದು ಹೋಗುವವರ ಮುಂದೆ, ಅಕ್ಕ ಪಕ್ಕದ ಮನೆಯವರ ಮುಂದೆ, ‘ಇನ್ನೂ ಮಕ್ಕಳಾಗಿಲ್ಲ. ಸಂಬಂಧದಲ್ಲಿ ಮದುವೆ ಮಾಡಿಕೊಂಡಿದ್ದಕ್ಕೆ ಮಕ್ಕಳಾಗಿಲ್ಲ. ಬೇರೆ ಹುಡುಗಿಯನ್ನು ಮದುವೆ ಆಗಿದ್ದರೆ ಮಕ್ಕಳು ಆಗುತ್ತಿತ್ತು. ಇದು ಎಲ್ಲಿಂದ ಗಂಟು ಬಿತ್ತೋ ನನ್ನ ಮಗನಿಗೆ, ಎಲ್ಲಾ ನಮ್ಮ ಕರ್ಮ. ನಮ್ಮ ಗ್ರಹಚಾರ ಸರಿಗಿಲ್ಲ. ಇಂತಹವಳನ್ನು ನಮ್ಮ ಮಗನಿಗೆ ತಂದಿದ್ದು ದೊಡ್ಡ ತಪ್ಪು. ಇವಳ ಕಾಲ್ಗುಣನೇ ಸರಿಗಿಲ್ಲ ಬೇರೆ ಹೆಣ್ಣು ಮಕ್ಕಳು ಮದುವೆ ಆಗಿ ಒಂದು ವರ್ಷಕ್ಕೆ ಮಗು ಹೆತ್ತು ಕೊಟ್ಟಿದ್ದಾರೆ. ಇವಳಿಗೆ ಏನು ಧಾಡಿ. ಒಂದು ಮಗು ಹೆತ್ತು ಕೊಡೋಕೆ.’ ಎಂದು ಮಾತನಾಡುವ ಅತ್ತೆಯ ನಡವಳಿಕೆ ಇವಳ ಮನಸ್ಸನ್ನು ಘಾಸಿಗೊಳಿಸುತ್ತಿತ್ತು.
‘ಪೂಜೆ, ಪುನಸ್ಕಾರ ಸರಿಯಾಗಿ ಮಾಡುವುದಿಲ್ಲ. ಸರಿಯಾಗಿ ದೇವರಿಗೆ ಕೈ ಮುಗಿಯುವುದಿಲ್ಲ. ಅರಳಿ ಮರ ಸುತ್ತುವುದಿಲ್ಲ, ದೇವಸ್ಥಾನಕ್ಕೆ ಹೋಗುವುದಿಲ್ಲ. ಹೇಳಿದ್ದು ಮಾತು ಒಂದೂ ಕೇಳುವುದಿಲ್ಲ.’ ಎನ್ನುವ ಅತ್ತೆಯ ಮಾತುಗಳು ಇವಳ ಮನಸ್ಸಿಗೆ ನೋವು ತರುತ್ತಿತ್ತು. ಇವಳೂ ಏನೇ ಮಾಡಿದರೂ ಅತ್ತೆ ನಂಬುವುದಿಲ್ಲ. ಇವಳೂ ಮನೆ ದೇವರಿಗೆ ಉಪವಾಸ ಮಾಡಿದ್ದಾಳೆ. ದೇವರನ್ನು ಬೇಡುತ್ತಾಳೆ. ವೈದ್ಯರ ಹತ್ತಿರವೂ ಚಿಕಿತ್ಸೆಯೂ ತೆಗೆದುಕೊಂಡಿದ್ದಾಳೆ. ಆದರೂ ಅತ್ತೆಗೆ ಸಮಾಧಾನವಿಲ್ಲ. ಇವಳ ಮನಸ್ಸಿನಾಳವನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ಅವರಿಗಿಲ್ಲ. ಇವಳೂ ಬೇಸತ್ತು ಕೆಲವೊಮ್ಮೆ ಸಾಯಬೇಕು ಅನಿಸಿದ್ದು ಉಂಟು ಇವಳಿಗೆ. ಆದರೆ ಇವಳಿಗೆ ಸಾಯುವುದಕ್ಕೆ ಇಷ್ಟವಿಲ್ಲ. ‘ಅದು ಹೇಡಿಗಳು ಮಾಡುವ ಕೆಲಸ’ ಎಂದು ಸುಮ್ಮನಾಗುತ್ತಾಳೆ. ‘ಸಾಯುವುದರಿಂದ ಪ್ರಯೋಜನವಿಲ್ಲ. ಸತ್ತರೆ ಇರುವವರಿಗೆ ನೋವು ಕೊಡ್ತಿವಿ ಹೊರತು, ಯಾರಿಗೂ ಒಳ್ಳೆಯದು ಆಗೊಲ್ಲ. ಆತ್ಮಹತ್ಯೆ ಮಹಾಪಾಪ. ನಮ್ಮ ಆತ್ಮಕ್ಕೆ ನಾವೇ ದ್ರೋಹಬಗೆದಂತೆ ಅಲ್ಲವೇ?’ ಎಂದು ತನ್ನಲ್ಲೇ ಹೇಳಿಕೊಳ್ಳುತ್ತಾಳೆ.
ಇವಳಿಗೂ ಮಗು ಹೆರಬೇಕೆಂಬ ಬೆಟ್ಟದಷ್ಟು ಆಸೆ ಇದೆ. ಆದರೆ ಆ ದೇವರೇ ಕರುಣಿಸಿಲ್ಲ. ಮಗುವನ್ನು ತನ್ನ ಮಡಿಲಲ್ಲಿ ಮಲಗಿಸಿ ಹಾಲುಣಿಸಬೇಕು. ತನ್ನ ಬೆನ್ನ ಮೇಲೆ ಕೂರಿಸಿ ಕೂಸುಮರಿ ಮಾಡಬೇಕು, ಚಂದ್ರನನ್ನು ತೋರಿಸುತ್ತಾ, ಹಾಡು ಹೇಳುತ್ತಾ ಒಂದೊಂದು ತುತ್ತು ತಿನ್ನಿಸಬೇಕು. ಹಬ್ಬಗಳಲ್ಲಿ ಹೊಸ ಬಟ್ಟೆ ತೊಡಿಸಿ ಅದರ ನಗುವನ್ನು ನೋಡುತ್ತಾ ಮನಸಾರೆ ಖುಷಿಪಡಬೇಕು. ರಾತ್ರಿ ಚಂದಮಾಮ ಕಥೆ ಹೇಳುತ್ತಾ ಮಲಗಿಸಬೇಕು.’ ಹೀಗೆ ಅವಳಿಗೆ ಚಿಕ್ಕ ಚಿಕ್ಕ ಆಸೆಯೋ..ಕನಸೋ ಇದ್ದವು. ಆದರೂ ಅತ್ತೆಯ ಮಾತುಗಳು ಅವಳ ಮನಸ್ಸಿಗೆ ತುಂಬಾ ನೋವು ಮಾಡುತ್ತಿದ್ದವು.
‘ಅಕ್ಕರೆಯ ಮಾತನಾಡುವ ಅತ್ತೆಯಂದಿರಿದ್ದರೆ, ಎಷ್ಟು ಚೆನ್ನ ಇರುತ್ತೇ ಅಲ್ಲವೇ. ಮಕ್ಕಳಾಗಿಲ್ಲ ಎಂಬ ಒಂದೇ ಕಾರಣಕ್ಕೆ ಕೆಲ ಅತ್ತೆ, ಮಾವಂದಿರು, ತಮ್ಮ ಮಗನಿಗೆ ಇನ್ನೊಂದು ಮದುವೆ ಮಾಡಲು ನೋಡುತ್ತಾರೆ. ಸೊಸೆಯನ್ನು ಕೀಳಾಗಿ ಕಾಣುತ್ತಾರೆ. ತಮ್ಮ ಮನೆಯಲ್ಲೇ ಅವಳನ್ನು ಪರಕೀಯಳನ್ನಾಗಿ ಮಾಡಿರುತ್ತಾರೆ. ಪ್ರತಿಯೊಂದು ಕೆಲಸವನ್ನು ಅವಳೇ ಮಾಡಬೇಕಿರುತ್ತದೆ. ಕೆಲವೊಮ್ಮೆ ಅವಳಿಗೆ ದೈಹಿಕ ಹಿಂಸೆಯೂ ಕೊಡುತ್ತಾರೆ. ಬಾಯಿಗೆ ಬಂದಂತೆ ಬೈದು ಅವಳಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಾರೆ. ಇವರು ಎಂಥವರು ಅಲ್ಲವೇ? ಎನ್ನುವ ಭಾರತಿ ತನ್ನ ಹತಾಶೆಯನ್ನು ತನ್ನಲ್ಲೇ ಹೇಳಿಕೊಳ್ಳುತ್ತಾಳೆ.
ಬೇರೆ ತಾಯಿಯರು ತಮ್ಮ ಮಕ್ಕಳ ಜೊತೆ ಇರುವುದನ್ನೋಡಿ ಇವಳಿಗೆ ಸಂಕಟವಾಗುತ್ತಿತ್ತು. ಮುದ್ದು ಮುದ್ದಾಗಿ ಕಾಣುವ ಮಕ್ಕಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಇವಳಿಗೆ. ‘ನನಗೂ ಒಂದು ಮಗು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ನಾನೂ ನನ್ನ ಮಗುವನ್ನು ಆಟ ಆಡಿಸಲು ಪಾರ್ಕ್ ಗಳಿಗೆ ಕರೆದುಕೊಂಡು ಹೋಗುತ್ತಿದ್ದೆ. ಅದು ಕೇಳುವ ಐಸ್ ಕ್ರೀಮ್, ಚಾಕ್ಲೇಟ್, ಕೇಕ್ ಏನು ಕೇಳಿದರೂ ಚಕಾರವೆತ್ತದೆ ಕೊಡಿಸುತ್ತಿದ್ದೆ. ಕೊಡಿಸುವದರಲ್ಲೇ ಎಷ್ಟೋ ಖುಷಿ ಅನಿಸುತ್ತೆ. ನನ್ನ ಮಗುವಿನ ನಗುವನ್ನು ನೋಡಿ ಖುಷಿ, ಸಂತೋಷ ಪಡುವ ಅದೃಷ್ಟ ನನಗಿಲ್ಲ.’ ಎಂದು ಎಷ್ಟೋ ಬಾರಿ ಒಬ್ಬಳೇ ಇರುವಾಗ ಕಣ್ಣೀರು ಹಾಕುತ್ತಾಳೆ. ಮಾನಸಿಕವಾಗಿ ನೋವು ಅನುಭವಿಸುತ್ತಾಳೆ. ಕೆಲವೊಮ್ಮೆ, ‘ನನ್ನ ಗಂಡನಿಗೆ ಇನ್ನೊಂದು ಮದುವೆ ಮಾಡಿಸಬೇಕು. ನನ್ನಿಂದ ಅವರಿಗೆ ನೋವಾಗುವುದು ಬೇಡ. ನನ್ನ ಕರ್ಮವನ್ನು ನಾನೇ ಅನುಭವಿಸುತ್ತೇನೆ.’ ಎಂದು ಎಷ್ಟೋ ಬಾರಿ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಳು.
ಅತ್ತೆಗೆ ಇವಳ ಮೇಲೆ ಅಪನಂಬಿಕೆ. ಮಕ್ಕಳಾಗಿಲ್ಲ ಬಂಜೆ ಎಂದು ಹೇಳುವ ಅತ್ತೆಗೆ ಇವಳ ಮೇಲೆ ಅನುಮಾನ. ಯಾರ ಜೊತೆ ಮಾತು ಆಡಿದರೂ, ಹೊರಗಡೆ ಹೋದರೂ ಅನುಮಾನ ಪಡುವ ಚಾಳಿ ಮೈಗೂಡಿಸಿಕೊಂಡಿದ್ದಳು. ಅತ್ತೆಯ ಈ ನಡವಳಿಕೆ ಕೆಲವೊಮ್ಮೆ ಇವಳಿಗೆ ‘ಸಾಯುವುದೇ ವಾಸಿ, ಇದ್ರೆ ಏನೂ ಪ್ರಯೋಜನವಿಲ್ಲ. ನನ್ನಂಥ ಮಕ್ಕಳಾಗದೇ ಇರೋರು ಸತ್ತರೂ ಯಾರಿಗೂ ನಷ್ಟವಿಲ್ಲ. ಒಂದಷ್ಟೂ ದಿನ ಅಳುತ್ತಾರೆ. ಆಮೇಲೆ ಎಲ್ಲಾ ಮರೆತು ತಮ್ಮ ಪಾಡಿಗೆ ತಾವು ಇರುತ್ತಾರೆ. ನಾನು ಅವರಿಗೆ ಹೊಣೆ ಆಗುವುದು ಬೇಡ’ ಎಂದುಕೊಳ್ಳುತ್ತಿದ್ದಳು ಕೆಲವೊಮ್ಮೆ. ಮತ್ತೇ ‘ನಾನೇಕೆ ಸಾಯಬೇಕು? ನಾನು ಮಾಡಿದ ತಪ್ಪೇನು? ಮಕ್ಕಳಾಗದೇ ಇರೋದು ನನ್ನ ತಪ್ಪೇ? ಎಂದು ಮನಸ್ಸಿನಲ್ಲೇ ಹೇಳಿಕೊಂಡು ಸುಮ್ಮನಾಗುತ್ತಿದ್ದಳು.
ಪ್ರತಿದಿನ ಅನುಮಾನ ಪಡುವ ಅತ್ತೆಯ ಈ ನಡವಳಿಕೆ ಅವಳ ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸುತ್ತಿತ್ತು. ‘ಈ ಮನೆಯಲ್ಲಿ ಇರುವುದೇ ಬೇಡ. ಯಾವುದಾದರೂ ಅನಾಥಾಶ್ರಮಕ್ಕೆ ಹೋಗಿ, ಅಲ್ಲಿನ ಮಕ್ಕಳನ್ನು ನೋಡುತ್ತಾ, ಅವರ ನಗುವಿನಲ್ಲೇ ನಾನು ಸಂತೋಷ ಕಾಣಬೇಕು, ಸಮಾಜಸೇವೆ ಮಾಡುತ್ತಾ ಜೀವನ ಕಳೆಯಬೇಕು.’ ಎಂಬ ಮಾತುಗಳು ಭಾರತಿಯ ಮನಸ್ಸಿನಾಳದಲ್ಲಿ ಕುಳಿತುಬಿಡುತ್ತವೆ.
-ಚೈತ್ರಾ ವಿ.ಮಾಲವಿ