ವಿಜ್ಞಾನ-ಪರಿಸರ

ಬಂಗಾರಮ್ ಎಂಬ ಹುಲಿಯೂ-ಸಾಗರದ ಮಾರಿಜಾತ್ರೆಯೂ: ಅಖಿಲೇಶ್ ಚಿಪ್ಪಳಿ

ಪಶ್ಚಿಮ ಬಂಗಾಳದ ದಾಬಾ ಅರಣ್ಯ ಪ್ರದೇಶದಲ್ಲಿ ೨೦೦೯ರಲ್ಲಿ ಹುಲಿಮರಿಯೊಂದು ಅನಾಥವಾಗಿ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿತ್ತು. ಮುದ್ದಾದ ಪುಟ್ಟ ಹುಲಿ ಮರಿ ತಾಯಿಯಿಂದ ಬೇರ್ಪಟ್ಟು ಅಸಹಾಯಕವಾಗಿ ಅನಾಥವಾಗಿತ್ತು. ಅರಣ್ಯಾಧಿಕಾರಿಗಳು ತಾಯಿ ಬರುವುದೆಂದು ಕಾದು ನೋಡಿದರು. ತಾಯಿ ಬರಲಿಲ್ಲ. ಮರಿಯನ್ನು ತಂದು ಬೋರ್ ವನ್ಯಜೀವಿ ಉದ್ಯಾನವನಕ್ಕೆ ತಂದು ಬೆಳೆಸಿದರು. ಹುಲಿ ಮರಿ ಬೆಳದ ಮೇಲೆ ಮತ್ತೆ ಅರಣ್ಯಕ್ಕೆ ಬಿಡುವ ಯೋಜನೆ ಅರಣ್ಯ ಇಲಾಖೆಯದಾಗಿತ್ತು. ಎಲ್ಲಾ ಮೃಗಾಲಯ ಮತ್ತು ಸಂರಕ್ಷಿತ ಉದ್ಯಾನವನಗಳಲ್ಲಿ ಹಿಂಸ್ರ ಪ್ರಾಣಿಗಳಿಗೆ ಆಹಾರವಾಗಿ ಸಾಮಾನ್ಯವಾಗಿ ದನದ ಮಾಂಸವನ್ನು ನೀಡುತ್ತಾರೆ. ಹುಲಿ ಮರಿಗೆ ಬಂಗಾರಮ್ ಎಂಬ ಹೆಸರನ್ನು ಇಟ್ಟರು. ಆಹಾರ ತಿಂದು ಹುಲಿ ಮರಿ ಚೆನ್ನಾಗಿ ಬೆಳೆಯಿತು. ಎರಡು ವರ್ಷದ ನಂತರ ತನ್ನ ಬದುಕನ್ನು ತಾನು ಕಟ್ಟಿಕೊಳ್ಳಬಹುದು ಎಂಬ ಯೋಚನೆಯಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದಕ್ಕೆ ಬೇಟೆಯಾಡುವುದನ್ನು ಕಲಿಸುವ ಪ್ರಯತ್ನ ಮಾಡಿದರು. ದೊಡ್ಡದಾದ ಒಂದು ಕುರಿಯನ್ನು ತಂದು ಬಂಗಾರಮ್ ಎದುರಿಗೆ ಬಿಟ್ಟರು.

ದಿನಾಂಕ:೧೮/೦೨/೨೦೧೪ರಿಂದ ಸಾಗರದಲ್ಲಿ ರಾಜ್ಯದಲ್ಲೇ ದೊಡ್ಡದಾದ ಮಾರಿಜಾತ್ರೆ ಶುರುವಾಗಿದೆ. ಜಾತ್ರೆ ೨೬/೦೨/೨೦೧೪ರ ವರೆಗೂ ನಡೆಯುತ್ತದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಹಲವು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಾಜ್ಯದ ಎಲ್ಲೆಡೆಯಿಂದ ಭಕ್ತರು ಆಗಮಿಸಿ ಮಾರಿಯ ಕೃಪೆಗೆ ಪಾತ್ರರಾಗುತ್ತಾರೆ. ಬ್ರಾಹ್ಮಣ ಹೆಣ್ಣನ್ನು ಮೋಸಗೊಳಿಸಿ ಮದುವೆಯಾದ ಅನ್ಯಜಾತಿಯ ಗಂಡನ್ನು ಸ್ವತ: ಹೆಂಡತಿಯೇ ಕೊಲ್ಲುವ ಇತಿಹಾಸವಿರುವ ಮಾರಿಜಾತ್ರೆಗೆ ನೂರಾರು ಬಣ್ಣ-ಬಣ್ಣದ ಅಂಗಡಿಗಳು ಬರುತ್ತವೆ. ಜೈಂಟ್ ವೀಲ್‌ಗಳು, ಟೊರ-ಟೊರ, ತೂಗುವ ದೋಣಿ ಇತ್ಯಾದಿಗಳು ಹದಿಹರೆಯದವರ ಆಕರ್ಷಣೆಯಾದರೆ, ಸರ್ಕಸ್-ಬೆಂಡು-ಬತ್ತಾಸು, ತಿಂಡಿ ತಿನಿಸುಗಳು ಮಕ್ಕಳಿಗೆ ಆಕರ್ಷಣೆಯಾಗುತ್ತವೆ. ಇನ್ನೂ ಮಹಿಳೆಯರಿಗೆ ಕಡಿಮೆ ದರದಲ್ಲಿ ಅಡುಗೆ ಮನಗೆ ಬೇಕಾಗುವ ಮತ್ತು ಸೌಂಧರ್ಯ ಸಾಧನಗಳು, ಹೇರ್ ಬ್ಯಾಂಡ್‌ಗಳು ದೊರಕುತ್ತವೆ. ಮಕ್ಕಳಿಗಾಗಿ ಹಲವು ರೀತಿಯ ಆಟಿಕೆಗಳು ಜಾತ್ರೆಯಲ್ಲಿ ಲಭ್ಯ.

ಫೇಸ್‌ಬುಕ್‌ನಲ್ಲಿ ಗೆಳೆಯರು ಭಯ ಹುಟ್ಟಿಸುವ ಕೆಂಪು ಬಣ್ಣದಲ್ಲಿ ಅಲಂಕೃತವಾದ ಮಾರೆಮ್ಮನ ಫೋಟೊವನ್ನು ಹಾಕಿ ಶುಭಾಷಯ ಕಳುಹಿಸಿದ್ದರು, ಕೆಲವರು ಸರ್ಕಸ್‌ನ ಫೋಟೋ ಹಾಕಿದರೆ, ಕೆಲವರು ಮಾರಿಗುಡಿಗೆ ಹಾಕಿದ ಪೆಂಡಾಲಿನ ಫೋಟೊವನ್ನು ಹಾಕಿ ಶುಭಾಷಯ ಹೇಳಿದ್ದರು. ಒಟ್ಟಾರೆ ಇಡೀ ಸಾಗರ ತಾಲ್ಲೂಕಿನ ಜನ ಜಾತ್ರೆಯ ಸಂಭ್ರಮದಲ್ಲಿ ಮೀಯುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಮಾರಿಗುಡಿ ಸಾಗರ ನಗರದ ಹೃದಯ ಭಾಗದಲ್ಲಿದೆ. ಜಾತ್ರೆಗಾಗಿ ಬರುವ ಜನಸಾಗರವನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಮಾಡುತ್ತಿದ್ದಾರೆ. ಮಾರಿಗುಡಿಗೆ ಹೋಗಿ ಸೇರುವ ಎಲ್ಲಾ ರಸ್ತೆಗಳಿಗೂ ಬಿದಿರಿನ ಬ್ಯಾರಿಕ್ಯಾಡನ್ನು ನಿರ್ಮಿಸಿ ವಾಹನಗಳು ಪ್ರವೇಶ ಮಾಡದಂತೆ ನಿರ್ಭಂದ ಹಾಕಿದ್ದಾರೆ. ಹಿಂದೆಲ್ಲಾ ಮಾರಿಜಾತ್ರೆಗೆ ಕೋಣದ ಬಲಿ ನೀಡುತ್ತಿದ್ದರು. ಆಗ ವರದಾಪುರದಲ್ಲಿ ನೆಲೆಸಿದ್ದ ಶ್ರೀ ಶ್ರೀಧರರು ಕೋಣದ ಬಲಿಯನ್ನು ಜನರ ಮನವೊಲಿಸಿ ನಿಲ್ಲಿಸುವಲ್ಲಿ ಯಶಸ್ವಿಯಾದರು. ನಂತರದಲ್ಲಿ ಕೋಣದ ರಕ್ತವನ್ನು ಸಿರಿಂಜ್ ಮೂಲಕ ತೆಗೆದು ದೇವಿಗೆ ಅರ್ಪಿಸುವ ಸಂಪ್ರದಾಯ ಶುರುವಾಯಿತು. ಆದರೂ ಕುರಿ-ಕೋಳಿಗಳ ಬಲಿ ನಡೆದೇ ಇತ್ತು. ಈಗಲೂ ಇದೆ. ಸಸ್ಯಹಾರ ಒಳ್ಳೆಯದೋ ಅಥವಾ ಮಾಂಸಹಾರ ಒಳ್ಳೆಯದೋ ಎಂಬ ಬಗ್ಗೆ ಇಲ್ಲಿ ಚರ್ಚೆ ಬೇಡ. ಆದರೆ, ಬಲಿಯನ್ನು ನೀಡುವಾಗ ಅನುಸರಿಸುವ ಕ್ರಮದ ಬಗ್ಗೆ ಚರ್ಚೆ ಖಂಡಿತಾ ಇದೆ. ಮಾರಿಹಬ್ಬವೆಂದರೆ, ಸಡಗರದ ಜೊತೆಗೆ ಖರ್ಚಿನ ಬಾಬತ್ತು. ಬರುವ ನೆಂಟರಿಗೆ ಮಟನ್ ನೀಡದಿದ್ದರೆ ಆತಿಥೇಯನ ಘನತೆಗೆ ಕುಂದು. ಸಾಲ ಮಾಡಿಯಾದರೂ ಕುರಿ ಕಡಿದು ಊಟ ಹಾಕಬೇಕು. ಎಷ್ಟು ಕುರಿಗಳನ್ನು ಈ ಸಂದರ್ಭದಲ್ಲಿ ಕಡಿದಿರಬಹುದು ಎಂಬುದನ್ನು ನಾಲ್ಕಾರು ಜನರೊಂದಿಗೆ ಚರ್ಚೆ ಮಾಡಿದೆ. ಸಾಗರ ತಾಲ್ಲೂಕಿನಲ್ಲಿ ಏನಿಲ್ಲವೆಂದರೂ ೧೦ ಸಾವಿರ ಕುರಿಗಳನ್ನು ಈ ಸಂದರ್ಭದಲ್ಲಿ ಕಡಿಯಲಾಗಿದೆ ಎಂದು ತಿಳಿದು ಬಂತು. ಈಗಿನ ರೇಟಿನಲ್ಲಿ ಒಂದು ಸಾಧಾರಣ ಗಾತ್ರದ ಕುರಿಗೆ ೮ ಸಾವಿರ ಮತ್ತು ದೊಡ್ಡ ಗಾತ್ರದ ಕುರಿಗೆ ೧೫೦೦೦. 

ಪ್ರಪಂಚದಲ್ಲಿ ಸಂಪೂರ್ಣ ಸಸ್ಯಾಹಾರಿಗಳ ಸಂಖ್ಯೆ ಕಡಿಮೆ. ಈಗೀಗ ಮುಂದುವರೆದ ರಾಷ್ಟ್ರಗಳಲ್ಲಿ ವಾರಕ್ಕೆ ಒಂದು ದಿನ ಸಂಪೂರ್ಣ ಸಸ್ಯಾಹಾರವನ್ನು ಸೇವಿಸಬೇಕು ಎಂಬ ಮನೋಭಾವ ಶುರುವಾಗಿದೆ. ಹೋಲಿಸಿದಲ್ಲಿ ಸಸ್ಯಾಹಾರದಿಂದ ಪರಿಸರಕ್ಕಾಗುವ ಮಾಲಿನ್ಯ ಕಡಿಮೆ. ಒಂದು ಕೆ.ಜಿ. ಆಲೂ ಬೆಳೆಯಲು ೧೦೦ ಲೀಟರ್ ನೀರು ಸಾಕಾದರೆ, ಒಂದು ಕೆ.ಜಿ. ಮಾಂಸ ಬೆಳೆಯಲು ೪೦೦೦ ಲೀಟರ್ ಬೇಕಾಗುತ್ತದೆ. ನೂರಾರು ಕೆ.ಜಿ. ಧಾನ್ಯ ತಿನ್ನಿಸಿ, ಹಲವು ಕೆ.ಜಿ. ಮಾಂಸ ಪಡೆಯಲಾಗುತ್ತದೆ. ಸಾಗರದ ಮಾರಿಜಾತ್ರೆಯ ಸಂದರ್ಭದಲ್ಲಿ ೧೦೦೦೦ ಕುರಿಗಳನ್ನು, ಇದರ ದುಪ್ಪಟ್ಟು ಕೋಳಿಗಳನ್ನು ಕಡಿದಿದ್ದಾರೆ ಎಂದರೆ, ತನ್ಮೂಲಕ ಆದ ಪರಿಸರ ಮಾಲಿನ್ಯವೆಸ್ಟು? ಕುರಿಗಳು ತಿನ್ನುವುದು ಸೊಪ್ಪು ಸದೆಗಳನ್ನು ಮಾತ್ರ, ಒಂದು ಪ್ರದೇಶದಲ್ಲಿ ಕುರಿ ಸಾಕಣೆ ಮಾಡುತ್ತಿದ್ದಲ್ಲಿ, ನಿರಂತರ ಸೊಪ್ಪಿನ ಬಳಕೆಯಿಂದಾಗಿ ಆ ಪ್ರದೇಶ ನಿಧಾನವಾಗಿ ಹಾಳಾಗುತ್ತದೆ. ಯಾವುದೇ ಪ್ರದೇಶದಲ್ಲಿ ಕುರಿಗಳು ನಿರಂತರವಾಗಿ ತಿರುಗಾಡುತ್ತಿದ್ದಲ್ಲಿ, ಆ ಪ್ರದೇಶದ ಮಣ್ಣಿನ ರಚನೆಯೂ ಹಾಳಾಗುತ್ತದೆ. ಆಹಾರ ಪದ್ಧತಿಯು ಆಯಾ ಪ್ರದೇಶದ ಜನರು ರೂಡಿಸಿಕೊಂಡಿರುವುದು. ವ್ಯಕ್ತಿಗತವಾಗಿಯೂ ಆಹಾರದ ಆಯ್ಕೆ ತೀರಾ ವೈಯಕ್ತಿಕ ವಿಚಾರ. ಪಕ್ಕಾ ಸಸ್ಯಾಹಾರಿಗಳ ಕುಟುಂಬದಿಂದ ಬಂದವರು ಕದ್ದು-ಮುಚ್ಚಿ ಮಾಂಸಹಾರ ಸೇವನೆ ಮಾಡುವುದಿದೆ. ಹುಟ್ಟಿನಿಂದಲೇ ಮಾಂಸಾಹಾರಿಗಳಾಗಿದ್ದವರು, ಮಾಂಸಾಹಾರವನ್ನು ತ್ಯಜಿಸಿ ಶುದ್ಧ ಸಸ್ಯಹಾರಿಗಳಾದ ಉದಾಹರಣೆಯೂ ಇದೆ. 

ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ಒಂದಂತೂ ಸ್ಪಷ್ಟವಾಗುತ್ತದೆ. ಜನರಲ್ಲಿ ಹಿಂಸೆಯ ಪ್ರವೃತ್ತಿ ಹೆಚ್ಚುತ್ತಿದೆ. ಹಿಂಸೆಯನ್ನು ವಿಜೃಂಭಿಸುವ ಮನೋಭಾವ ಎದ್ದು ಕಾಣುತ್ತದೆ. ಮಾರಿಜಾತ್ರೆ ಪ್ರಾರಂಭವಾದಗಿನಿಂದ, ರಸ್ತೆಯ ಮೇಲೆ ಕುರಿಯ ಕತ್ತನ್ನು ಕತ್ತರಿಸುವ ಹೃದಯವಿದ್ರಾವಕ ದೃಶ್ಯ ಸ್ಪಷ್ಟವಾದ ದೃಶ್ಯಮಾಲಿನ್ಯಕ್ಕೆ ಉದಾಹರಣೆಯಾಗಿದೆ. ಕುರಿ ಕಡಿಯುವ ಮನುಷ್ಯ ದೊಡ್ಡದಾದ ಕತ್ತಿಯನ್ನು ಹಿಡಿದು ಬರುವ ಮನುಷ್ಯ, ಕುರಿಯ ಕತ್ತಿಗೆ ದಾರವನ್ನು ಕಟ್ಟಿ ಎಳೆದು ಹಿಡಿದುಕೊಳ್ಳುವ, ಹಿಂಗಾಲನ್ನು ಮತ್ತೊಬ್ಬ ಎಳೆದು ಹಿಡಿದುಕೊಂಡ ನಂತರ ಒಂದೇ ಏಟಿಗೆ ಕುರಿಯ ಕತ್ತನ್ನು ಕತ್ತರಿಸುವ, ರಸ್ತೆಯ ತುಂಬೆಲ್ಲಾ ಹರಡಿಕೊಳ್ಳುವ ರಕ್ತ. ತಲೆಕಡಿದ ಮುಂಡ ಒದ್ದಾಡುವ, ಇದನ್ನೆಲ್ಲಾ ನೋಡಲು ಸಾಧ್ಯವೇ? ಅದೂ ಸಾರ್ವಜನಿಕರು ತಿರುಗಾಡುವ ರಸ್ತೆಯ ಬದಿಯಲ್ಲಿ ಈ ತರಹದ ಕೃತ್ಯವೆಸಗುವವರಿಗೆ ಏನೆನ್ನಬೇಕು. ಇದನ್ನೆಲ್ಲಾ ನೋಡಿದ ಮಾಂಸಾಹಾರಪ್ರಿಯ ಸ್ನೇಹಿತರೊಬ್ಬರು ರಸ್ತೆಯ ಬದಿಯಲ್ಲಿ ಸಾರ್ವಜನಿಕವಾಗಿ ಕುರಿ ಕಡಿಯುವುದು ಶುದ್ಧ ತಪ್ಪು ಎಂದು ಬೇಸರದಿಂದ ಹೇಳಿದರು. ಇದೊಂತರ ಹಿಂಸೆಯನ್ನು ವೈಭವಿಕರಿಸಿದ ಹಾಗೆ. ಅದರಲ್ಲೂ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಈ ಕೃತ್ಯ ಬೀರುವ ಪರಿಣಾಮ ಅತ್ಯಂತ ಘೋರವಾದದು. 

ಲಕ್ಷಾಂತರ ಜನ ಜಾತ್ರೆಯ ಸಂದರ್ಭದಲ್ಲಿ ನಗರಕ್ಕೆ ಭೇಟಿ ನೀಡುತ್ತಾರೆ. ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಜಾತ್ರೆಯೊಂದು ಅಲ್ಲಿನ ಸಂಸ್ಕ್ರತಿಯನ್ನು ಬಿಂಬಿಸುವ ಕೆಲಸವನ್ನು ಮಾಡುವುದರ ಜೊತೆಗೆ, ಇನ್ನಿಲ್ಲದ ಮಾಲಿನ್ಯಕ್ಕೆ ಕಾರಣವಾಗುತ್ತದೆ, ರೋಗ-ರುಜಿನಗಳ ಗೂಡಾಗುತ್ತದೆ. ಪ್ರತಿ ಜಾತ್ರೆಯ ನಂತರದಲ್ಲಿ ಪ್ರತಿ ಆಸ್ಪತ್ರೆ, ಪ್ರತಿ ಕ್ಲಿನಿಕ್‌ಗಳಲ್ಲಿ ಹೊರರೋಗಿ ಮತ್ತು ಒಳರೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ. ಜಾತ್ರೆಯಲ್ಲಿನ ಕಳಪೆ ಆಹಾರ ಪದಾರ್ಥಗಳು, ಕಳಪೆ ಆಟಿಕೆಗಳು ಎಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಲ್ಲೆಂದರಲ್ಲಿ ವಿಸರ್ಜಿಸುವ ಮಲ-ಮೂತ್ರಗಳಿಂದಾಗಿ ಸೊಳ್ಳೆ-ನೊಣಗಳ ಕಾಟ ಹೆಚ್ಚುತ್ತದೆ. ಇನ್ನು ಪ್ಲಾಸ್ಟಿಕ್ ಮಾಲಿನ್ಯದ ಘೋರ ಪರಿಣಾಮವನ್ನಂತೂ ವಿವರಿಸಲು ಸಾಧ್ಯವಿಲ್ಲ. ಟನ್‌ಗಟ್ಟಲೆ ಪ್ಲಾಸ್ಟಿಕ್‌ಗಳು ನಗರಸಭೆಯ ಚರಂಡಿ ಸೇರಿ ಮಳೆಗಾಲದಲ್ಲಿ ಹರಿದು ಸಮುದ್ರದವರೆಗೂ ಪಸರಿಸುತ್ತವೆ. ಮಾರಿಜಾತ್ರೆಯಲ್ಲಿ ಪ್ರದರ್ಶಿಸಲ್ಪಡುವ ಸರ್ಕಸ್‌ನ್ನು ನೋಡುವ ಮಕ್ಕಳೇನೋ ಖುಷಿಯಾಗಿ ಮನೆಗೆ ಬರುತ್ತಾರೆ. ಆನೆ ಫುಟ್‌ಬಾಲ್ ಆಡುತ್ತದೆ. ಕುರ್ಚಿಯ ಮೇಲೆ ಕೂಡುತ್ತದೆ. ಆನೆಯಿಂದ ಪೂಜೆಯನ್ನೂ ಮಾಡಿಸುತ್ತಾರೆ. ಆನೆಯಂತಹ ದೊಡ್ಡ ಪ್ರಾಣಿಯು ಸ್ವಾಭಾವಿಕವಾಗಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ನಿಯಮದಂತೆ ಪ್ರತಿದಿನ ಆನೆಗೆ ೧೦೦೦ ಲೀಟರ್ ನೀರು ಮತ್ತು ಕನಿಷ್ಟ ೨ ಕ್ವಿಂಟಾಲ್ ಸೊಪ್ಪು-ಸದೆ ಬೇಕಾಗುತ್ತದೆ. ಸರ್ಕಸ್‌ನಲ್ಲಿ ನಾಲ್ಕಾರು ಆನೆಗಳಿದ್ದಲ್ಲಿ ನೀರು ಆಹಾರವನ್ನು ಪೂರೈಸುವ ಬಗೆ ಹೇಗೆ? ಆದ್ದರಿಂದ ಸರ್ಕಸ್ಸಿನ ಪ್ರಾಣಿಗಳಿಗೆ ಕನಿಷ್ಟ ಮಟ್ಟ ನೀರು-ಆಹಾರ ಪೂರೈಕೆಯಾಗುತ್ತದೆ. ಸರ್ಕಸ್ ನಡೆಸುವುದು ಒಂದು ಸವಾಲಿನ ಕೆಲಸ. ಸರ್ಕಸ್‌ನ ಮಾಲಿಕನಿಗೆ ಲಾಭ ಮುಖ್ಯವೇ ಹೊರತು, ಅಲ್ಲಿ ಕೆಲಸ ಮಾಡುವ ನೌಕರರ ಅಥವಾ ಪ್ರಾಣಿಗಳ ಹಿತರಕ್ಷಣೆ ಮುಖ್ಯವಲ್ಲ. ಸರ್ಕಸ್ಸಿನಲ್ಲಿ ಏಕಕಾಲಕ್ಕೆ ಮಾನವ ಹಕ್ಕು ಮತ್ತು ಪ್ರಾಣಿಗಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಪಳಗಿಸಿದ ಆನೆಗಳ ನಾಲ್ಕೂ ಕಾಲುಗಳಿಗೆ ಕಬ್ಬಿಣದ ಸಂಕೋಲೆಯಲ್ಲಿ ಬಂಧಿಸಿಡಲಾಗುತ್ತದೆ. ಸರ್ಕಸ್ಸಿನಲ್ಲಿ ಪ್ರಾಣಿಗಳನ್ನು ಬಳಸುವುದನ್ನು ಸರ್ವೊಚ್ಛ ನ್ಯಾಯಾಲಯ ನಿಷೇಧಿಸಿದೆ. ಆದರೆ ಈಗಾಗಲೇ ಬಳಸುತ್ತಿರುವ ಪ್ರಾಣಿಗಳ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿಲ್ಲ. ಪ್ರತಿದಿನ ಪಶುವೈದ್ಯರು ಬಂದು ಪ್ರಾಣಿಗಳ ಆರೋಗ್ಯ ಪರಿಶೀಲಿಸಬೇಕು ಎಂಬ ನಿಯಮವಿದೆ. ಅವುಗಳಿಗೆ ನೀಡುವ ಆಹಾರದ ಗುಣಮಟ್ಟ ಮತ್ತು ಪ್ರಮಾಣವನ್ನು ಪರೀಕ್ಷಿಸಿ ಪಶುವೈದ್ಯರು ಪ್ರಮಾಣ ಪತ್ರ ನೀಡಬೇಕೆಂಬ ನಿಯಮವೂ ಇದೆ. ಆದರೆ ಇವುಗಳನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗುತ್ತದೆ ಎಂಬ ಬಗ್ಗೆ ದಟ್ಟ ಅನುಮಾನವಿದೆ.

ಯಂತ್ರ-ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಯಂತ್ರಮಯವಾಗಿದೆ. ಹಳ್ಳಿಯಲ್ಲೂ ನಾಶವಾಗುತ್ತಿರುವ ಆಲೆಮನೆ ಸಂಸ್ಕ್ರತಿಯನ್ನು ಯಥಾವತ್ತಾಗಿ ಎತ್ತಿ ತಂದು ಜಾತ್ರೆಯಲ್ಲಿ ಇಟ್ಟಿದ್ದಾರೆ. ಕೋಣ, ಆಲೆಕಣೆ ಇತ್ಯಾದಿಗಳಿವೆ. ರೈತರು ನಡೆಸುವ ಈ ಆಲೆಮನೆಗೆ ನಿರೀಕ್ಷಿತ ಪ್ರಮಾಣದ ಜನ ಬರುತ್ತಿಲ್ಲವಾದ್ದರಿಂದ, ರೈತನ ಮುಖ ಕಪ್ಪಾಗಿದೆ. ಜಾತ್ರೆಯ ಮಧ್ಯದಲ್ಲಿ ಅವಕಾಶ ನೀಡಿದ್ದರೆ ಸ್ಥಳೀಯ ಸಂಸ್ಕ್ರತಿಗೊಂದು ಉತ್ತೇಜನ ನೀಡಿದಂತಾಗುತ್ತಿತ್ತು. ಹೊರೆಗಟ್ಟಲೆ ಕಬ್ಬು ಒಣಗಿ ಹೋಗುತ್ತಿರಲಿಲ್ಲ. ಇಲ್ಲಿ ಶ್ರಮಜೀವಿ ರೈತ ಮಾರುಕಟ್ಟೆ ಸೃಷ್ಟಿಸುವಲ್ಲಿ ದೂರದೃಷ್ಟಿ ಕೊರತೆಯಿಂದ ಸಂಪೂರ್ಣ ವಿಫಲನಾಗಿದ್ದಾನೆ. ಮುಂದಿನ ಜಾತ್ರೆಯ ಹೊತ್ತಿಗೆ ಇದೇ ರೈತ ಮತ್ತೆ ಜಾತ್ರೆಯಲ್ಲಿ ಆಲೆಮನೆ ಹೂಡಲು ಧೈರ್ಯ ಮಾಡಲಾರ. 

ಈ ರಾಜಕೀಯದವರು ಎಲ್ಲಾ ಸಂಧರ್ಭಗಳನ್ನು ತಮ್ಮ ಲಾಭಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬ ಆಲೋಚನೆಯಲ್ಲಿರುತ್ತಾರೆ. ರಾಜ್ಯದ ಎರಡನೇ ದೊಡ್ಡ ಜಾತ್ರೆ ಸಾಗರದ ಮಾರಿಜಾತ್ರೆ. ಗ್ರಾಮ ಪಂಚಾಯ್ತಿಯ ಮರಿ ಪುಡಾರಿಗಳಿಂದ ಹಿಡಿದು, ಮಾಜಿ, ಹಾಲಿ ಎಂ.ಎಲ್.ಎ ವರೆಗಿನ ಎಲ್ಲಾ ರಾಜಕೀಯ ನಾಯಕರ ದೊಡ್ಡ ಗಾತ್ರದ ಫ್ಲೆಕ್‌ಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿವೆ. ಫ್ಲೆಕ್ಸ್ ಅಳವಡಿಸಿದವರು ಜಾತ್ರೆ ಮುಗಿದ ನಂತರ ತಾವು ಹಾಕಿದ ಫ್ಲೆಕ್ಸ್‌ಗಳನ್ನು ತೆಗೆದು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಬದ್ಧತೆ ತೋರಬೇಕು. ಜಾತ್ರಾ ಸಮಿತಿ ಮತ್ತು ನಗರಸಭೆ ಈ ನಿಟ್ಟಿನಲ್ಲಿ ಗಂಭೀರವಾಗಿ ಗಮನಹರಿಸಬೇಕು.

ಬೋರ್ ವನ್ಯಜೀವಿ ಉದ್ಯಾನವನದ ಸಿಬ್ಬಂದಿಗಳು ಕುತೂಹಲದಿಂದ ಹುಲಿ ಕುರಿಯನ್ನು ಬೇಟೆಯಾಡುವ ದೃಶ್ಯವನ್ನು ಕಲ್ಪಿಸಿಕೊಂಡು ಕಾಯುತ್ತಿದ್ದರು. ಪಕ್ಕಾ ಹಿಂಸ್ರಪಶುವಾದ ಬಂಗಾರಮ್ ಹುಲಿ, ತಲೆಯತ್ತಿ ಕುರಿಯನ್ನು ನೋಡಿತು. ಎರಡು ದಿನದಿಂದ ಆಹಾರವನ್ನು ಕಂಡಿರಲಿಲ್ಲ. ಕುರಿ ಪ್ರಾಣಭಯದಿಂದ ತತ್ತರಿಸುತ್ತಿತ್ತು. ಬಂಗಾರಮ್ ಹುಲಿ ತನ್ನ ಮೂಲತನವನ್ನು ಬಿಟ್ಟು ವ್ಯತಿರಿಕ್ತವಾಗಿ ವರ್ತಿಸಿತು. ಕುರಿಯನ್ನು ಕೊಲ್ಲುವುದಕ್ಕೆ ಬದಲಾಗಿ ಕುರಿಯ ಸ್ನೇಹಿತನಂತೆ ವರ್ತಿಸಿತು. ಹತ್ತಿರ ಬಂದು ಆಟವಾಡಲು ತೊಡಗಿತು. ಒಂದು ಬಾರಿಯಂತೂ ಕುರಿಯನ್ನು ಅಲ್ಲಿಯ ಕೊಳದಲ್ಲಿ ನೂಕಿ ಸಂಭ್ರಮಿಸಿತು. ಎರಡು ದಿನ ಕಳೆದರೂ, ಹೊಟ್ಟೆಗೆ ಆಹಾರವಿಲ್ಲದಿದ್ದರೂ ಹುಲಿ ಕುರಿಯನ್ನು ಕೊಂದು ತಿನ್ನಲಿಲ್ಲ. ತಾಯಿಯಿಂದ ಬೇರ್ಪಟ್ಟ ಹುಲಿಗೆ ನಿಸರ್ಗಸಹಜವಾಗಿ ಬರಬೇಕಾಗಿದ್ದ ಬೇಟೆ ಮಾಡುವ ಮನೋಭಾವ ಬಂದಿರಲಿಲ್ಲ. ಕಡೆಯದಾಗಿ ಕುರಿಯನ್ನು ಹುಲಿಯಿಂದ ಬೇರ್ಪಡಿಸಿ, ಹುಲಿಗೆ ದನದ ಮಾಂಸವನ್ನು ಅಲ್ಲಿನ ಅಧಿಕಾರಿಗಳು ನೀಡಿದರು ಎಂಬುದನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ. ಬಂಗಾರಮ್ ಹುಲಿಯನ್ನು ಮತ್ತೆ ಕಾಡಿಗೆ ಬಿಡುವುದು ಅಸಾಧ್ಯ, ಕಾರಣ ತಾಯಿಯಿಂದ ಮಾತ್ರ ಕಲಿಯಬಹುದಾಗಿದ್ದ ಬೇಟೆಯ ಗುಟ್ಟುಗಳೇ ಬಂಗಾರಮ್‌ಗೆ ಗೊತ್ತಿಲ್ಲವಾದ್ದರಿಂದ, ಕಾಡಿನಲ್ಲಿ ಅದು ಬದುಕುಳಿಯುವುದು ಕಷ್ಟ ಎಂದು ಅಲ್ಲಿನ ಸಿಬ್ಬಂದಿ ಎಂ.ಎಸ್.ಚೌಹಾಣ್ ಹೇಳಿದ್ದಾರೆ. ಅಪರೂಪದ ಬೆಂಗಾಲ್ ಹುಲಿಯನ್ನು ಬೋರ್ ವನ್ಯಜೀವಿ ಉದ್ಯಾನವನದಲ್ಲೇ ಇಟ್ಟುಕೊಳ್ಳಲಾಗಿದೆ. ಹಿಂಸ್ರಪಶು ಹುಲಿಗೆ ತಿನ್ನಲೆಂದು ಬಿಟ್ಟ ಕುರಿ ಬದುಕಿಕೊಂಡಿತು. ಮೌಢ್ಯಯುತ ಮಾರಿಜಾತ್ರೆ ಹತ್ತಾರು ಸಾವಿರ ಕುರಿಗಳನ್ನು ನುಂಗಿತು. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಬಂಗಾರಮ್ ಎಂಬ ಹುಲಿಯೂ-ಸಾಗರದ ಮಾರಿಜಾತ್ರೆಯೂ: ಅಖಿಲೇಶ್ ಚಿಪ್ಪಳಿ

Leave a Reply

Your email address will not be published. Required fields are marked *