ವಿಟಮಿನ್ ಎ ಕೊರತೆಯಿಂದ ಪ್ರಪಂಚದಲ್ಲಿ ಪ್ರತಿವರ್ಷ ೨೦ ಲಕ್ಷ ಜನ ಸಾಯುತ್ತಾರೆ ಮತ್ತು ೫ ಲಕ್ಷ ಮಕ್ಕಳು ಕುರುಡರಾಗುತ್ತಿದ್ದಾರೆ ಎಂಬುದೊಂದು ಅಂಕಿ-ಅಂಶ. ವಿಟಮಿನ್ ಎ ಮನುಷ್ಯ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಜೀವಸತ್ವ. ವಿಟಮಿನ್ ಎ ಕೊರತೆಯು ಮುಖ್ಯವಾಗಿ ಕಣ್ಣಿನ ಮೇಲಾಗುತ್ತದೆ ಎಂಬುದು ಆರೋಗ್ಯ ವಿಜ್ಞಾನ ಕಂಡುಕೊಂಡಿರುವ ಸತ್ಯ. ಏರುತ್ತಿರುವ ಜನಸಂಖ್ಯೆ, ಬಡತನ ಇತ್ಯಾದಿ ಕಾರಣಗಳಿಂದಾಗಿ ಬಡವರ ಮಕ್ಕಳಿಗೆ ವಿಟಮಿನ್ ಎ ಕೊರತೆಯಾಗಿ ಕಾಡುತ್ತದೆ ಮತ್ತು ಇದರಿಂದಾಗಿ ಪ್ರಪಂಚದ ಮೇಲೆ ತೀವ್ರವಾದ ಪರಿಣಾಮವಾಗುತ್ತದೆ. ಹೆಚ್ಚಿನ ಬಡ ಮಕ್ಕಳು ದೃಷ್ಟಿಮಾಂದ್ಯರಾದರೆ ಅವರನ್ನು ಸಲಹುವುದು ಕಷ್ಟಕರ. ವಿಟಮಿನ್ ಎ ಹೇರಳವಾಗಿ ಸಿಗುವ ಯಾವುದಾದರೂ ಆಹಾರ ಪದಾರ್ಥವನ್ನು ಉತ್ಪಾದಿಸಿದಲ್ಲಿ, ಈ ಸಮಸ್ಯೆಗೊಂದು ಶಾಶ್ವತ ಪರಿಹಾರವಾಗುತ್ತದೆ ಎಂದುಕೊಂಡ ಕುಲಾಂತರಿ ತಜ್ಞರು ಬಂಗಾರದ ಬಣ್ಣವಿರುವ ಅಕ್ಕಿಯನ್ನು ಕಂಡು ಹಿಡಿದರು. ಈಗ ಉಣ್ಣುತ್ತಿರುವ ಅಕ್ಕಿಯ ಬದಲು ಬಂಗಾರದ ಅಕ್ಕಿಯನ್ನು ಪೂರೈಸಿದಲ್ಲಿ ಪ್ರಪಂಚದಲ್ಲಿ ವಿಟಮಿನ್ ಎ ಕೊರೆತೆಯಿಂದಾಗುವ ದೃಷ್ಟಿಮಾಂಧ್ಯವನ್ನು ಹೋಗಲಾಡಿಸಬಹುದು ಎಂದು ತರ್ಕ ಮಾಡುತ್ತಾರೆ. ನಿಸರ್ಗದತ್ತವಾಗಿಯೇ ವಿಟಮಿನ್ ಎ ಲಭ್ಯವಿರುವ ವಸ್ತುಗಳು ಹೀಗಿವೆ. ಕ್ಯಾರೇಟ್, ಆಲೂ, ಹಾಲು, ಮೊಸರು, ಬೆಣ್ಣೆ, ಟೊಮ್ಯಾಟೊ, ಹಸಿರು ತರಕಾರಿಗಳು ಹಾಗೂ ಮೊಟ್ಟೆ-ಮೀನು, ಮದ್ಯ-ಮಾಂಸ ಇತ್ಯಾದಿ. ಹಾಗಂತ ಕೊಬ್ಬಿನಲ್ಲಿ ಕರಗುವ ವಿಟಮಿನ್ ಎ ಪ್ರಮಾಣ ದೇಹದಲ್ಲಿ ಹೆಚ್ಚಾದರೂ ಹಲವು ಕಾಯಿಲೆಗಳು ಬರಬಹುದು. ಮುಖ್ಯವಾಗಿ ಯಕೃತ್ತಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಸಂಶೋಧನೆಗಳು ಹೇಳುತ್ತವೆ.
ಈ ಹಿಂದೆ ರೈತ ನಾಯಕ ದಿವಂಗತ ಪ್ರೋಫೆಸರ್ ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಒಂದು ಐತಿಹಾಸಿಕ ಘಟನೆ ನಡೆದಿತ್ತು. ಕೆಂಟುಕಿ ಚಿಕನ್ ಎಂಬ ಅಂತಾರಾಷ್ಟ್ರೀಯ ಮಾಲ್ ಮೇಲೆ ರೈತರು ಹಲ್ಲೆ ನಡೆಸಿದ್ದರು ಎಂಬುದೀಗ ಇತಿಹಾಸ. ಜಾಗತೀಕರಣದ ಪ್ರಭಾವದಲ್ಲಿ ಸಿಕ್ಕಿ ತನ್ನ ಮೂಲ ಅಂತಃಸತ್ವವನ್ನೂ ಮತ್ತು ಸಂಸ್ಕ್ರತಿಯನ್ನು ಕಳೆದುಕೊಂಡ ಬೆಂಗಳೂರಿನಲ್ಲಿ ಅದೆಷ್ಟು ಕೆಂಟುಕಿಗಳು, ಅದೆಷ್ಟು ಫಿಜ್ಜಾ ಹಟ್‌ಗಳು ತಲೆಯೆತ್ತಿ ಯುವಸಮೂಹದ ಆರೋಗ್ಯವನ್ನು ತಿಂದು ಹಾಕುತ್ತಿದೆಯೋ, ಪ್ರತಿಭಟಿಸಲು ಫ್ರೋಪೆಸರ್ ಇಲ್ಲವಲ್ಲ. ಇರಲಿ ಈಗ ಹೇಳಲು ಹೊರಟಿರುವ ಘಟನೆಯೂ ಆಹಾರಕ್ಕೆ ಸಂಬಂಧಿಸಿದ್ದೇ ಆಗಿದೆ. ಆದರೆ ಘಟನೆ ನಡೆದದ್ದು ನಮ್ಮಲ್ಲಲ್ಲ ದೂರದ ಫಿಲಿಫೈನ್ಸ್‌ನಲ್ಲಿ.
ಫಿಲಿಫೈನ್ಸಿನ ಫಿಲಿ ಕ್ಯಾಮರೀನ್ ಊರಿನಲ್ಲಿ ಸರ್ಕಾರದ ಕೃಪಾಪೋಷಿತ ಒಂದು ಎಕರೆ ಪ್ರದೇಶದಲ್ಲಿ ಬಂಗಾರದಕ್ಕಿಯನ್ನು ಬೆಳೆದು ಸಂಶೋಧಿಸಲು ತಯಾರುಮಾಡಿಕೊಂಡು, ಇನ್ನೇನು ವಿಟಮಿನ್ ಎ ಕೊರತೆಯನ್ನು ಹೋಗಲಾಡಿಸಿಯೇ ಬಿಟ್ಟೆವು ಎಂದು ಬೀಗುವ ಸಮಯದಲ್ಲಿ, ಅಕ್ಕ-ಪಕ್ಕದ ನಾಲ್ಕು ನೂರು ಜನ ರೈತರು ಏಕಾಏಕಿ ಈ ಸರ್ಕಾರಿ ಪೋಷಿತ ಜಮೀನಿನಲ್ಲಿ ಬೆಳೆದ ಎಲ್ಲಾ ಬಂಗಾರದಕ್ಕಿ ಬೆಳೆಗಳನ್ನು ನಾಶ ಮಾಡಿದರು. ರೈತ ಮುಖಂಡ ವಿಲ್ಲಿ ಮರ್‌ಬೇಲಾ ಪ್ರಕಾರ ತಮ್ಮ ಜಮೀನಿನಲ್ಲಿ ಬೆಳೆಯುತ್ತಿರುವ ಸಾಂಪ್ರಾದಾಯಿಕ ಅಕ್ಕಿಯ ಜೊತೆ ಈ ಕುಲಾಂತರಿ ಸಂಬಂಧ ಬೆಳೆಸಿ ನಮ್ಮ ಫಸಲುಗಳನ್ನು ಕುಲಾಂತರಿಯಾಗಿ ಮಾರ್ಪಡಿಸಿದರೇನು ಮಾಡುವುದು?. ಆಗ ನಮ್ಮ ಅರೆಬರೆ ಬಂಗಾರದಕ್ಕಿಯನ್ನು ಯಾರು ಕೊಳ್ಳುತ್ತಾರೆ? ಅಲ್ಲದೆ ಪೇಟೆಂಟ್ ಕಾಯ್ದೆಯಡಿಯಲ್ಲಿ ಸಾಮೂಹಿಕವಾಗಿ ಮೊಕದ್ದಮೆ ಹೂಡಿದರೇನು ಮಾಡುವುದು? ಸಾಂಪ್ರದಾಯಿಕ ರೈತರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ನ್ಯೂ ಸೈಂಟಿಸ್ಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇವೆಲ್ಲಾ ಅಂತಾರಾಷ್ಟ್ರೀಯ ವಿಚಾರವಾದರೆ, ನಮ್ಮಲ್ಲಿ ಏನಾಗುತ್ತಿದೆ ಎಂಬುದನ್ನು ಕೊಂಚ ನೋಡೋಣ. ಯಾವುದೇ ಪಕ್ಷಗಳಾದರೂ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವುದು ಚುನಾವಣೆಯನ್ನು ದೃಷ್ಟಿಯಲ್ಲಿಟುಕೊಂಡು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆಹಾರ ಭದ್ರತೆ, ಅನ್ನಭಾಗ್ಯ, ಕ್ಷೀರಭಾಗ್ಯದ ಜೊತೆಗೆ ಕಾರ್ಪೊರೇಟ್ ಜಗತ್ತಿನ ಶ್ರೀಮಂತರ ಸಾಲಮನ್ನ ಮಾಡುವುದು ಹೀಗೆ ಹಣ ಬೇಕಾಗುತ್ತದೆ. ಸರ್ಕಾರಗಳಿಗೆ ಹಣ ಬರುವುದು ಸಾರ್ವಜನಿಕರಿಂದ ಎಂಬುದು ಸತ್ಯ. ಸರ್ಕಾರದ ಜನಪರ ಕೆಲಸಗಳಿಗೆ ಮತ್ತು ಮಂತ್ರಿಮಹೋದಯರ ದುಂದುಗಳಿಗೆ ಹಾಗೂ ವಿವಿಧ ಯೋಜನೆಗಳಿಂದ ಲಕ್ಷಾಂತರ ಕೋಟಿ ನುಂಗುವುದಕ್ಕೆ ಹಣ ಸಾಲದಾದಗ, ಇದ್ದೇ ಇದೆ ವಿಶ್ವಬ್ಯಾಂಕ್‌ನಿಂದ ಸಾಲ ಪಡೆದಯುವುದು. ಸಾಲ ಪಡೆದು ಸುಸ್ಥಿರ ಅಭಿವೃದ್ಧಿಯನ್ನು ಮಾಡಿದಲ್ಲಿ ದೇಶವೂ ಪ್ರಗತಿಪಥದಲ್ಲಿ ಸಾಗುತ್ತದೆ. ಮಾಡಿದ ಸಾಲವನ್ನು ಸಕಾಲಕ್ಕೆ ಹಿಂತಿರುಗಿಸಿ ಮತ್ತೆ ಹೊಸ ಸಾಲಕ್ಕೆ ಕೈಯೊಡ್ಡಬಹುದು. ಕಂಡು ಕೇಳರಿಯದ ಹಣದುಬ್ಬರದಿಂದ ದೇಶದ ಕೆಳ ಮಧ್ಯಮವರ್ಗ ಬದುಕಲೇ ಕಷ್ಟಪಡುತ್ತಿದೆ. ಬಡವರಿಗೆ ಬರೀ ಅಕ್ಕಿ ಕೊಟ್ಟೇನು ಪ್ರಯೋಜನ? ಕಾಳು-ಬೇಳೆ ತರಕಾರಿ, ಉಪ್ಪು ಹುಳಿ ಯಾರು ಕೊಡುತ್ತಾರೆ? ಇಂತಹ ಹುನ್ನಾರಗಳನ್ನು ಸರ್ಕಾರಗಳು ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಾಡುತ್ತವೆ. ಜನಸಾಮಾನ್ಯರಿಗೆ ಎಷ್ಟೇ ದುಡಿದರೂ ಸಂಸಾರಕ್ಕೆ ಸಾಕಾಗುವುದಿಲ್ಲ ಎನ್ನುವ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡುತ್ತವೆ. ಇಂತಹ ಸನ್ನಿವೇಶದಲ್ಲಿ ಬದುಕುವ ದೇಶದ ಸಾಮಾನ್ಯ ಪ್ರತಿಭಟಿಸುವುದು ಹೋಗಲಿ, ಕನಿಷ್ಟ ಯೋಚನೆಯನ್ನು ಮಾಡಲಾರದ ಸ್ಥಿತಿಗೆ ತಲುಪುತ್ತಾನೆ. ಇದೀಗ ಸಂಸತ್ತು ತನ್ನೆಲ್ಲಾ ಗುಪ್ತ ಕಾರ್ಯಸೂಚಿಗಳನ್ನು ಜಾರಿಗೆ ತರಲು ಸಕಾಲವೆಂದು ಭಾವಿಸಿ, ಜಾರಿಗೆ ತರುತ್ತದೆ. ಭಾರತದ ರಾಜಕಾರಣಿಗಳಿಗೀಗ ತುರ್ತಾಗಿ ಕುಲಾಂತರಿ ಅಕ್ಕಿ, ಗೋಧಿ, ಕಾಳು-ಬೇಳೆ, ತರಕಾರಿಗಳನ್ನು ಪರಿಚಯಿಸಬೇಕಾದ ಅನಿವಾರ್ಯತೆಯಿದೆ. ಮಾನ್ಸೋಂಟೋ ಬಹುರಾಷ್ಟ್ರೀಯ ಕಂಪನಿಯಿಂದ ಉಪಕೃತರಾದ ಅದೆಷ್ಟೋ ಸಂಸದರು ಋಣಮುಕ್ತರಾಗುವ ಸದವಕಾಶಕ್ಕಾಗಿ ಕಾಯುತ್ತಿದ್ದಾರೆ. ಇದಕ್ಕಾಗಿಯೇ ಬೀಜ ಮಸೂದೆಯನ್ನು ಪಾಸು ಮಾಡಲು ಸಂಸತ್ತು ಉತ್ಸುಕವಾಗಿದೆ. ಈ ಮಸೂದೆಯಲ್ಲಿರುವ ಎಲ್ಲಾ ಅಂಶಗಳು ಕುಲಾಂತರಿ ಕಂಪನಿಗಳ ಪರವಾಗಿದೆ ಎಂಬುದು ಬಹುತೇಕ ರೈತರಿಗೆ ಗೊತ್ತಿರುವುದಿಲ್ಲ. ಕುಲಾಂತರಿಯಿಂದ ನಿಮ್ಮ ಜೀವನ ಸ್ವರ್ಗಸದೃಶವಾಗುವುದು ಎಂಬಂತ ಹೇಳಿಕೆಗಳು ಸರ್ಕಾರದ ಮಟ್ಟದಲ್ಲಿ ಬಿಂಬಿಸಲ್ಪಡುತ್ತವೆ.
ಕೇಂದ್ರ ಸರ್ಕಾರ ಬಯೋಟೆಕ್ನಾಲಜಿ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (BRAI) ಕುಲಾಂತರಿ ಬೀಜ ಮಸೂದೆಯನ್ನು ಇದೀಗ ತುರ್ತಾಗಿ ಮಂಡಿಸಿ ಅನುಮತಿ ಪಡೆಯಲು ಹೊರಟಿದೆ. ಅಂದರೆ ಜನಸಾಮಾನ್ಯರ ಬದುಕಿಗೆ ಬೇಕಾದ ಅಗತ್ಯ ಆಹಾರ ಸಾಮಾಗ್ರಿಗಳನ್ನು ಬೆಳೆಯಲು ನಾವು ಯಾರದೋ ಎದುರು ದೈನೇಸಿಯಂತೆ ಕೈಯೊಡ್ಡಬೇಕಾಗುತ್ತದೆ. ತಲಾತಲಾಂತರದಿಂದ ಬೆಳೆಯುತ್ತಿರುವ ನಮ್ಮ ಭತ್ತದ ಬೀಜವನ್ನು ಬಹುರಾಷ್ಟ್ರೀಯ ಕಂಪನಿಗಳು ರೈತರಿಗೆ ನೀಡುತ್ತವೆ ಮತ್ತು ಇದಕ್ಕೆ ರೈತ ಸಾಕಷ್ಟು ಅಥವಾ ಕಂಪನಿಯವರು ನಿಗದಿ ಮಾಡಿದ ದುಬಾರಿ ಬೆಲೆಯನ್ನು ತೆತ್ತು ಬೀಜ ತರಬೇಕು. ಒಂದೊಮ್ಮೆ ಆ ಬೀಜಗಳು ಮೊಳಕೆ ಬರದಿದ್ದಲ್ಲಿ, ರೈತ ಬೇಕಾದರೆ ಆತ್ಮಹತ್ಯೆ ಮಾಡಿಕೊಳ್ಳಬಹುದು.
ವ್ಯಕ್ತಿಗಳು, ಸಂಘ-ಸಂಸ್ಥೆಗಳು ಈಗಾಗಲೇ ಕುಲಾಂತರಿಗಳ ಅವಘಡಗಳನ್ನು ವಿವರಿಸಿ ಪ್ರಧಾನಿಯವರಿಗೆ ಈ ಕುಲಾಂತರಿ ಮಸೂದೆಯನ್ನು ಮಂಡಿಸದಿರುವಂತೆ ಮನವಿ ಮಾಡಿದ್ದಾರೆ. ಲಕ್ಷಾಂತರ ಜನ ಬಿಟಿ ಬದನೆಯನ್ನು ವಿರೋದಿಸಿ ತಾತ್ಕಾಲಿಕ ತಡೆ ತಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬಯೋಟೆಕ್ನಾಲಜಿ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಇದೆಷ್ಟು ಕುಟಿಲತೆಯಿಂದ ವರ್ತಿಸುತ್ತಿದೆಯೆಂದರೆ, ಕಾನೂನಿನ ವ್ಯಾಪ್ತಿಯಲ್ಲಿ ಯಾರೂ ಬೇಕಾದರೂ ಪಡೆಯಬಹುದಾದ ಮಾಹಿತಿ ಹಕ್ಕಿನ ಕಾಯ್ದೆಯಿಂದಲೇ ಈ ಮಸೂದೆಯನ್ನು ಹೊರಗಿಡಲು ಹವಣಿಸುತ್ತಿದೆ. ಅಂದರೆ ಯಾರೂ ಕೂಡ ಕುಲಾಂತರಿಯ ವಿಷಯಗಳ ಬಗ್ಗೆ ಆಯಾ ಕಂಪನಿಗಳನ್ನು ಪ್ರಶ್ನಿಸುವ ಹಕ್ಕನ್ನು ರದ್ದು ಪಡಿಸುವುದು. ಅಂದ ಮೇಲೆ ಅಂತರಾಷ್ಟ್ರೀಯ ಮಟ್ಟದ ಮೇಜಿನಡಿಯ ಲೆಕ್ಕಾಚಾರ ಎಷ್ಟು ಸಾವಿರ ಕೋಟಿಯದಿರಬಹುದು? ಒಳಗೊಳಗೆ ಈ ಮಸೂದೆಯನ್ನು ಅಂಗೀಕರಿಸಿದಲ್ಲಿ, ನಾವು ವಿಷಯುಕ್ತ ಅಕ್ಕಿಯನ್ನು ತಿನ್ನುವ ದಿನ ದೂರವಿಲ್ಲ ಮತ್ತು ಹೀಗೆ ಐವತ್ತಾರು ಇನ್ನಿತರ ಬೆಳೆಗಳು ಕುಲಾಂತರಿ ರೂಪದಲ್ಲಿ ಬರಲು ಕ್ಯೂನಲ್ಲಿವೆ. ಈಗ ಸರ್ಕಾರ ಕಣ್ಮುಚ್ಚಿ ಸಹಿ ಹಾಕಿತೋ ಸರತಿ ಸಾಲಿನಲ್ಲಿರುವ ಎಲ್ಲಾ ವಿಷಯುಕ್ತ ಕುಲಾಂತರಿ ಬೀಜಗಳು-ಬೆಳೆಗಳು ನಮ್ಮ ಅನ್ನದ ತಟ್ಟೆಯಲ್ಲಿ ಬಂದು ಕೂರುತ್ತವೆ.
ಮುಂಬಯಿ ಮೂಲದ ನಂದಿತಾ ದಾಸ್ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ದೇಶದ ಜನರನ್ನು ಸಂಪರ್ಕಿಸಿ ಸಂಸತ್ತು ಅಂಗೀಕರಿಸಲು ಹೊರಟಿರುವ ಬೀಜ ಮಸೂದೆಯನ್ನು ವಿರೋಧಿಸಲು ಮತ್ತು ಆ ಮೂಲಕ ದೇಶದ ರೈತರ-ಗ್ರಾಹಕರ ಹಿತವನ್ನು ಹಾಗೂ ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಸಾರ್ವಜನಿಕ ಅರ್ಜಿಯನ್ನು ಸಂಸತ್ತಿನ ವಿಜ್ಞಾನ-ತಂತ್ರಜ್ಞಾನ, ಪರಿಸರ-ಅರಣ್ಯದ ಸ್ಟ್ಯಾಂಡಿಂಗ್ ಕಮಿಟಿ ಚೇರ್‌ಮನ್‌ರಾದ ಡಾ.ಟಿ.ಸುಬ್ರಮಣಿ ರೆಡ್ಡಿಯವರಿಗೆ ಕಳೆದ ಶುಕ್ರವಾರ (೨೩/೦೮/೨೦೧೩) ದಂದು ಸಲ್ಲಿಸಿದ್ದಾರೆ. ಇವರ ಈ ಅರ್ಜಿಯನ್ನು ಬೆಂಬಲಿಸಿ ದೇಶದ ೪ ಲಕ್ಷ ಜನ ಸಹಿಯನ್ನೂ ಹಾಕಿದ್ದಾರೆ. ಅರ್ಜಿಯಲ್ಲಿ ಈ ಲೇಖನದಲ್ಲಿ ವಿವರಿಸಲಾದ ಕುಲಾಂತರಿಯ ಅವಘಡಗಳನ್ನು ಪಟ್ಟಿ ಮಾಡಿದ್ದಾರೆ. ೧೩೦ ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ಮುಕ್ಕಾಲು ಭಾಗ ರೈತರೇ ಇದ್ದಾರೆ ಎಂದಾದರೆ, ೮೦-೯೦ ಕೋಟಿಯಷ್ಟು ರೈತರ ಹಿತಾಸಕ್ತಿಯನ್ನು ಕಾಪಾಡಲು ಬರೀ ೪ ಲಕ್ಷ ಜನರ ಬೆಂಬಲ ಸಾಕಾದೀತೇ ಎಂಬುದು ಪ್ರಶ್ನೆ. ಆದರೂ ೧೩೦ ಕೋಟಿ ಜನರನ್ನು ಆಳುತ್ತಿರುವ ಬರೀ ೫೨೫ ಎಂ.ಪಿ.ಗಳು ೪ ಲಕ್ಷ ಜನರ ಮನವಿಯನ್ನು ಮನ್ನಿಸುವುದರ ಜೊತೆಗೆ ತರಾತುರಿಯ ಬೀಜ ಮಸೂದೆಯನ್ನು ಕೈಬಿಡುವುದು ನೈತಿಕ ದೃಷ್ಟಿಯಿಂದ ಸರಿ. ಇದೀಗ ಮಾನ್ಸೋಂಟೊ ಎಂಬ ಬಹುರಾಷ್ಟ್ರೀಯ ಹಣ ಮೇಲುಗೈ ಪಡೆಯುತ್ತದೆಯೋ ಅಥವಾ ಭಾರತದ ಜನರ ಕುಲಾಂತರಿ ವಿರೋಧಿತನ ಮೇಲುಗೈ ಆಗುತ್ತದೆಯೋ ಕಾಲವೇ ನಿರ್ಣಯಿಸಬೇಕು.
ಮಾನ್ಸೋಂಟೋ ಎಂಬ ದೈತ್ಯ ಬಹುರಾಷ್ಟ್ರೀಯ ಕಂಪನಿಯ ಬಗ್ಗೆ ಕೊಂಚ ಹೇಳುವುದು ಸೂಕ್ತ. ೧೯೦೧ರಲ್ಲಿ ಕೃಷಿಯಾಧಾರಿತ ವ್ಯವಹಾರದ ಈ ಪಬ್ಲಿಕ್ ಕಂಪನಿಯನ್ನು ಪ್ರಾರಂಭಿಸಿದವನ ಹೆಸರು ಜಾನ್ ಫ್ರಾನ್ಸಿಸ್ ಕ್ವೀನಿ ಎಂದು. ಮೂಲ ಉದ್ಧೇಶ ಕೀಟನಾಶಕ ಮತ್ತು ಬೀಜೋತ್ಪಾದನೆ. ೨೦೧೧ರ ಹಣಕಾಸು ವರ್ಷದಲ್ಲಿ ಕಂಪನಿಯ ವಹಿವಾಟು ೧೨ ಶತಕೋಟಿ ಡಾಲರ್‌ಗಳು. ಇದೇ ವರ್ಷದ ಅಂಕಿ-ಅಂಶದಂತೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಸಂಖ್ಯೆ ೨೦೬೦೦ ಹಾಗೂ ಹೊಂದಿರುವ ಆಸ್ತಿ ೧೯ ಶತಕೋಟಿ ಡಾಲರ್‌ಗಳು. ಕಂಪನಿಯ ಮುಖ್ಯ ಕಚೇರಿಯಿರುವುದು ಅಮೇರಿಕಾದ ಮಿಸ್ಸೋರಿಯಲ್ಲಿ.
ಪ್ರಪಂಚದಲ್ಲಿ ಬಹಳಷ್ಟು ದೇಶಗಳು ಕುಲಾಂತರಿ ಅಥವಾ ಬಿಟಿಯನ್ನು ಒಂದಲ್ಲಾ ಒಂದು ರೀತಿಯಲ್ಲಿ ವಿರೋಧಿಸುತ್ತಾ ಬಂದಿವೆ. ಕೆಲವೊಂದು ಸ್ಯಾಂಪಲ್ ನೋಡೋಣ. ಅಮೇರಿಕಾದಲ್ಲೇ ಮೆಂಡೋಸಿನೊ, ಟ್ರೀಂಟಿ ಮತ್ತು ಮಾರಿನ್ ಪ್ರದೇಶಗಳಲ್ಲಿ ಕುಲಾಂತರಿಯನ್ನು ನಿಷೇಧಗೊಳಿಸಿದ್ದಾರೆ. ಆಸ್ಟ್ರೇಲಿಯಾ ಖಂಡದಲ್ಲಿನ ಉತ್ತರ ಆಸ್ಟ್ರೇಲಿಯಾವನ್ನು ಹೊರತುಪಡಿಸಿ, ಇನ್ನೆಲ್ಲಾ ಕಡೆಗಳಲ್ಲೂ ನಿಷೇಧ ಹೇರಿದ್ದಾರೆ. ಜಪಾನ್ ಕೂಡ ಜಿ.ಎಂ.ತಳಿಗಳಿಗೆ ನೋ ಎಂದಿದೆ. ನ್ಯೂಜಿಲೆಂಡ್‌ನಲ್ಲಿ ಜಿ.ಎಂ.ತಳಿ ಬೆಳೆಯುವುದನ್ನು ನಿಷೇಧಿಸಿದೆ. ಜರ್ಮನಿಯಲ್ಲಂತೂ ಬೆಳೆಯುವುದರ ಜೊತೆಗೆ ಜಿ.ಎಂ.ಉತ್ಪನ್ನಗಳ ಮಾರಾಟಕ್ಕೂ ತಡೆ ಹೇರಿದೆ. ಐರ್‍ಲೈಂಡ್‌ನಲ್ಲಿ ೨೦೦೯ರಿಂದ ಕುಲಾಂತರಿ ತಳಿಗಳಿಗೆ ಶಾಶ್ವತ ನಿಷೇಧ ಹೇರಿದೆ. ಆಸ್ಟ್ರೀಯಾ, ಹಂಗೇರಿ, ಗ್ರೀಸ್, ಬಲ್ಗೇರಿಯಾ ಮತ್ತು ಲಕ್ಸಂಬರ್ಗ್ ದೇಶಗಳು ಜಿ.ಎಂ.ತಳಿಗಳ ಬಿತ್ತನೆ ಮತ್ತು ಮಾರಾಟವನ್ನು ನಿಷೇಧಿಸಿವೆ. ೨೦೦೮ರಲ್ಲಿ ಫ್ರಾನ್ಸ್ ದೇಶವು ಮಾನ್ಸೊಂಟೋ ಕಂಪನಿಯ MON810ಎಂಬ ಹೆಸರಿನ ಜೋಳವನ್ನು ಬೆಳೆಯಲು ಅನುಮತಿ ನೀಡಿತ್ತಾದರೂ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ನಿಷೇಧ ಹೇರಿತು. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಎಲ್ಲಾ ರೀತಿಯ ಜಿ.ಎಂ. ತಳಿಗಳನ್ನು ೨೦೦೫ರಲ್ಲಿ ೫ ವರ್ಷಗಳ ಕಾಲ ನಿಷೇದಿಸಿತ್ತು ಮತ್ತು ಈ ಅವಧಿಯನ್ನು ೨೦೧೩ವರೆಗೂ ವಿಸ್ತರಿಸಿದೆ. ಭಾರತದಲ್ಲಿ ಕುಲಾಂತರಿ ಮೊಟ್ಟೆಗಳನ್ನು ಉತ್ಪಾದಿಸಲು ನಿಷೇಧವಿದ್ದರೂ, ಬಿಟಿ ಹತ್ತಿಯನ್ನು ವ್ಯಾಪಕವಾಗಿ ಬಳಸಿದ ಭಾರತದ ೧,೨೫೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ. ಯಾವುದೇ ತರಹದ ದೇಶಿ ತಳಿಗಳ ಬಳಕೆಯನ್ನು ನಿಲ್ಲಿಸಬೇಕು, ಬೆಳೆದರೆ ಮಾನ್ಸೋಂಟೊದ ಬಿಟಿ ಹತ್ತಿಯನ್ನೆ ಬೆಳೆಯಬೇಕು ಎಂಬ ಧೋರಣೆಯನ್ನು ಭಾರತ ಸರ್ಕಾರ ಹೊಂದಿದೆಯಾದರೂ, ಅಪರೂಪಕ್ಕೊಮ್ಮೆ ದೇಶಿ ಹತ್ತಿ ತಳಿಯನ್ನು ಸಂರಕ್ಷಿಸುತ್ತಿರುವ ಯಶೋಗಾಥೆಯ ಕಥೆ ಕರ್ನಾಟಕದಲ್ಲೇ ಇದೆ. ಉತ್ತರ ಕರ್ನಾಟಕದ ಮಾಕರಿ ಹಳ್ಳಿಯ ೫೨ ವರ್ಷದ ನಾಗಪ್ಪ ನಿಂಬೆಗುಂಡಿಯವರು ೧೧ ದೇಶಿ ಹತ್ತಿ ತಳಿಯನ್ನು ತಮ್ಮ ಹೊಲದಲ್ಲಿ ಬೆಳೆದು ಸಂರಕ್ಷಿಸುತ್ತಿದ್ದಾರೆ. ಭಾರತದ ೯೦% ರೈತರು ಇದೀಗ ಅನಿವಾರ್ಯವಾಗಿ ಬಿಟಿ ಹತ್ತಿಯನ್ನೇ ಬೆಳೆಯಬೇಕು, ದೇಶಿ ತಳಿಗಳು ಬಿಟಿ ಅಬ್ಬರದಲ್ಲಿ ಕೊಚ್ಚಿಹೋದ ಈ ಸಂಧರ್ಭದಲ್ಲಿ ನಾಗಪ್ಪ ನಿಂಬೆಗುಂಡಿಯಂತವರು ಪರರ ದಾಸ್ಯದಿಂದ ರೈತರನ್ನುಳಿಸುವ ಹೋರಾಟದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರೆ ಇದು ದೇಶಕ್ಕೆ ಹೆಮ್ಮೆಯ ಸಂಗತಿ. ಮುಂದಿನ ಸ್ವತಂತ್ರ ದಿನಾಚರಣೆಯ ಹೊತ್ತಿಗಾದರೂ ಪರಿಸ್ಥಿತಿ ಸುಧಾರಿಸಲಿ, ರಾಷ್ಟ್ರದ್ವಜವನ್ನು ದೇಶಿ ಹತ್ತಿಯ ಬಟ್ಟೆಯಿಂದಲೇ ತಯಾರಿಸಿ ಹಾರಿಸೋಣ.
ಗಂಭೀರವಾಗಿ ಯೋಚಿಸಬೇಕಾದ ವಿಚಾರ; ಮಾಹಿತಿಪೂರ್ಣ ಬರಹ, ಧನ್ಯವಾದಗಳು