ಗಣೇಶ ಬಂದ
ಫ್ಲಾಪಿಬಾಯ್ ಮಾತಿಂದ ಕರೆಂಟ್ ಕಂಡುಹಿಡಿಯಬೇಕೆಂದು ಶತಾಯಗತಾಯ ಪ್ರಯೋಗನಿರತನಾಗಿದ್ದ. ಲಗೋರಿಬಾಬಾ ಎಲ್ಲಿಂದಲೋ ಒಂದಷ್ಟು ಬೂದಿ ತಂದ್ಕೊಂಡು ಮುಲ್ತಾನಿ ಮಿಟ್ಟಿ ತರಾ ಮೈಗೆಲ್ಲಾ ಹಚ್ಕೊಂಡು ಇಡೀ ಬಾಡಿನೇ ಫೇಷಿಯಲ್ ಮಾಡ್ಕೊಳ್ತಾ ಇದ್ದ. ಅದೇ ಟೈಮಿಗೆ ಬಂದ್ರು ನಾಲ್ಕಾರು ಜನರು- ಕೈಲಿ ರಶೀದಿ ಪುಸ್ತಕ ಹಿಡ್ಕಂಡು!
“ಅಣಾ ಏರಿಯಾದಲ್ಲಿ ಗಣೇಶನ್ನ ಕೂರಿಸ್ತಾ ಇದೀವಿ ಚಂದಾ ಕೊಡಿ, ಏಯ್! ಫ್ಲಾಪಿ ಅಣ್ಣನ ಹೆಸ್ರಲ್ಲಿ ಬರ್ಕೊಳೋ ಎರಡು ಸಾವಿರ” ತಮ್ಮವರತ್ರಾನೆ ಹೇಳಿ ಬರ್ಕೊಳೊಕೆ ಅಣಿಯಾದ ಗಣೇಶ ಕೂರಿಸೋ ಕಬಳೇಶ.
“ತಡ್ರಪಾ, ನನ್ನತ್ರ ಈಗ ಕಾಸಿಲ್ಲ. ಎಲ್ಲಾನೂ ಈ ಪ್ರಯೋಗದ ಮೇಲೆ ಸುರಿದಿದ್ದೀನಿ. ಬೇಕಿದ್ರೆ ನಮ್ ಬಾಬಾ ಹತ್ರ ಕೇಳಿ ಹೋಗಿ” ಅಂತಾ ಫ್ಲಾಪಿಬಾಯ್ ಅಲ್ಲಿನವರ ಮನದ ಪಟಾಕಿ ಬತ್ತಿಗೆ ಬೆಂಕಿ ಅಂಟಿಸ್ದ.
“ಅಯ್ಯೋ ಬ್ಯಾಡ ಬಿಡಣ. ಬಾಬಾ ಹತ್ರ ಹೋದ ವರ್ಷ ನಮ್ಮವರಿಗೆ ಹಣ ಕೇಳಿ ಜನ್ಮಕ್ಕಾಗುವಷ್ಟು ಸಾಕಾಗಿದೆ ಅಂತಿದ್ರು!. ನಾನೇ ಬರ್ತೀನಿ ಗಣೇಶನ ಬದಲು ನನ್ನೇ ಕೂರಿಸಿ ಅಂತ ಗಂಟು ಬೀಳ್ತಾನೆ ಆಮೇಲೆ!” ಅಲವತ್ತುಕೊಂಡರು ಚಂದಾ ವಸೂಲಿಯವರು.
“ಆಯ್ತಲಾ, ಹಂಗೇ ಮಾಡಿ. ನಮ್ ಬಾಬಾನನ್ನೇ ಕೂರಿಸಿಬಿಡಿ. ಸ್ವಲ್ಪ ಡಿಫರೆಂಟು ಬೇಕಂದ್ರೆ ಶೀರ್ಷಾಸನದಲ್ಲಿ ನಿಲ್ಲಿಸಿ ಬಿಡಿ. ಒಂದ್ ಆ್ಯಂಗಲ್ ಇಂದ ಉಪ್ಪಿ2 ಥರ ಕಾಣಿಸ್ತಾರೆ. ಉಪ್ಪಿ2 ಗಣೇಶ ಅಂತ ಉಲ್ಟಾ ನೇತಾಕಿ ಕರ್ಕೊಂಡೋಗಿ ಬಾಬಾನ” ಅಂತ ಕಿಚಾಯಿಸಿದ ಫ್ಲಾಪಿ.
“ಜಾಸ್ತಿ ಮಾತು ಬೇಡ. ನಾವು ಧಾರ್ಮಿಕ ವಿಧಿ ವಿಧಾನದಿಂದ ಹಬ್ಬ ಮಾಡ್ತೀವಿ ಹಣ ಕೊಡಿ ಇಲ್ಲಾಂದ್ರೆ ಆಗಲ್ಲಾ ಅನ್ನಿ ಬೇರೆ ಮಾತು ಬೇಡ. ಯಾವಾಗ ನೋಡಿದ್ರೂ ಚುಟ್ಟಾ ಸೇದ್ಕೊಂಡು ವಿಲಕ್ಷಣವಾಗಿರುವ ಆ ಬೂದಿ ಬಾಬಾಗೆ ಏನು ಗೊತ್ತು ನಮ್ಮ ಧರ್ಮದ ಬಗ್ಗೆ? ನಮ್ಮ ಗಣೇಶನ ಜಾಗದಲ್ಲಿ ಆ ವಯ್ಯನ್ನ ಕೂರಿಸ್ಬೇಕಾ ಥೂ” ಕೆರಳಿದ ಕಬಳೇಶ.
ಫ್ಲಾಪಿಬಾಯ್ – “ತಡ್ಕೊ ಕಬಳು ಯಾಕೆ ರೈಜಾಕ್ತಿ? ನಂಗೆ ಕೆಲವೊಂದು ಡೌಟಿದೆ ಕ್ಲಿಯರ್ ಮಾಡು. ನಂಗೆ ಬಾಬಾಗೆ ಮೊದಲಿಂದಲೂ ದೇವರು, ಆಚರಣೇ ಅಂದ್ರೆ ಅಷ್ಟಕ್ಕಷ್ಟೆ! ನೀವು ಹೇಗಿದ್ರೂ ಸಂಪ್ರದಾಯಸ್ಥರು, ಧಾರ್ಮಿಕ ವಿಧಿ ವಿಧಾನದಿಂದ ಹಬ್ಬ ಮಾಡೋರು. ನಿಮ್ಮಿಂದಲೇ ಉತ್ರ ಸಿಗತ್ತೆ ಅಂದ್ರೆ ಅದಲ್ವಾ ಭಾಗ್ಯ?”
ಫ್ಲಾಪಿ ಬಾಯ್ ಶುರು ಹಚ್ಕಂಡ- “ಗಣೇಶ ಹಬ್ಬವನ್ನ ಈವಾಗ್ಲೇ ಯಾಕೆ ಮಾಡ್ಬೇಕು? ಬೇರೆ ತಿಂಗ್ಳಲ್ಲಿ ಅಂದ್ರೆ ಜನವರಿಗೋ, ಫೇಬ್ರವರಿಗೋ ಯಾಕೆ ಮಾಡಲ್ಲ? ಗಣೇಶನಿಗೆ ದೂರ್ವೆ ಗರಿಕೆ ಯಾಕೆ ಹಾಕ್ತೀರಿ? ಗಣೇಶ ಚತುರ್ಥಿಗೆ ಚಂದ್ರನ್ನ ನೋಡಿದ್ರೆ ಅಪವಾದ ಯಾಕೆ ಬರ್ಬೇಕು?”
“ಆಣಾ ಅದಕ್ಕೆಲ್ಲಾ ಕಾರಣ ಇರತ್ತೆ ನಮ್ಮ ಹಿಂದಿನವರು ಹೇಳಿರೋದನ್ನ ನಾವು ಪಾಲಿಸ್ತಾ ಇದೇವೆ ಅಷ್ಟೇ! ಸಂಪ್ರದಾಯವನ್ನ ಹಾಗೆಲ್ಲಾ ಪ್ರಶ್ನಿಸಬಾರದು ಆಯ್ತಾ? ಆಯ್ತು ಬಿಡಿ ನೀವು ಕೊಡಲ್ಲ ಅಂದ್ರೆ ನಾವು ಬೇರೆ ಕಡೆ ಹೋಗ್ತೀವಿ ತುಂಬಾ ಕಡೆ ಹೋಗೋದಿದೆ, ಸುಮ್ನೆ ಸಮಯ ವೇಸ್ಟ್ ಮಾಡ್ಬೇಡಿ!”- ರೇಗಿದ ಕಬಳೇಶ.
“ಎಲಾ ನಿನ್ನ ಮಗಾ ನನ್ ಟೈಮ್‍ನ ನೀವು ಹಾಳುಮಾಡಿ ಈಗ ನನ್ನೇ ದೂಷಿಸ್ತೀರಾ? ತಡಿರಿ ಹಳೇ ಸಂಪ್ರದಾಯ ಅಂತ ಅಜ್ಜ ನೆಟ್ಟ ಆಲಕ್ಕೆ ನೇಣು ಹಾಕೊಳಕ್ಕಾಗತ್ತಾ? ಸರಿಯಾಗಿ ಅರ್ಥವೇ ಗೊತ್ತಿಲ್ಲದೇ ಆಚರಣೆ ಮಾಡ್ತೀರಾ? ನಿಮಗೇ ಗೊತ್ತಿಲ್ಲಾ ಅಂದ್ರೆ ಬೇರೆ ಧರ್ಮದವರಿಗೆ ಏನಂತ ಹೇಳ್ತೀರಾ? ನೀವು ಮಾಡೋ ಕಾರ್ಯ ಸ್ವತಃ ಗಣೇಶನೂ ಮೆಚ್ಚಲ್ಲ. ಬಾಬಾ ಇವರಿಗೆ ಸ್ವಲ್ಪ ಬುದ್ಧಿ ಹೇಳಿ!”
ಲಗೋರಿಬಾಬಾ ಶುರು ಮಾಡಿದ- “ಫ್ಲಾಪಿ ಇತ್ತೀಚೆಗೆ ಎಲ್ಲಾ ಇಂತವೇ ತುಂಬೋಗಿದಾರೆ, ಆಲ್ ಹಾಫ್ ಬೇಕ್ಡ್ ಮಡಿಕೇಸ್. ಛೆ… ಕೇಳ್ರೋ ಇಲ್ಲಿ, ನಮ್ಮ ಹಬ್ಬ, ಉತ್ಸವ ಯಾಕೆ ಅನ್ನೋಕೆ ಧಾರ್ಮಿಕ ಕಾರಣಗಳ ಜೊತೆಗೆ ಆಧ್ಯಾತ್ಮ ಕಾರಣ ಹಾಗೆ ವೈಜ್ಞಾನಿಕ ಕಾರಣಗಳೂ ಇದೆ. ಯಾವ ಸೈಂಟಿಸ್ಟನೂ ಇಲ್ಲ ಅನ್ನೋಕಾಗಲ್ಲ ನಮ್ಮ ಸನಾತನ ಹಿಂದೂ ಧರ್ಮದ ಹಲವಾರು ಆಚರಣೆಗಳಲ್ಲಿನ ಮಹತ್ವವನ್ನ! ಗಣೇಶ ಹಬ್ಬ ಗಣೇಶನ ಹಬ್ಬ ಈಗ್ಲೇ ಯಾಕೆ ಮಾಡ್ಬೇಕೂ ಅಂದ್ರೆ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ 120 ದಿನಗಳ ಕಾಲದಲ್ಲಿ ವಿನಾಶಕಾರಕ ತಮಪ್ರಧಾನ ಯಮಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಈ ಸಮಯದಲ್ಲಿ ಅವುಗಳ ತೀವ್ರತೆಯೂ ಹೆಚ್ಚು. ಈ ಕಾಲಾವಧಿಯಲ್ಲಿ ಅಂದರೆ ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ. ಇಲ್ಲಿ ಲಹರಿ ಅಂದ್ರೆ ನಿಮಗೆ ಗೊತ್ತಿರೋ ಯಾವುದೋ ಹುಡುಗಿ ಅಲ್ಲ ಎನರ್ಜಿ, ಪಾಸಿಟಿವ್ ಅಂಡ್ ನೆಗೆಟಿವ್ ಎನರ್ಜಿ!
ಇನ್ನು ದೂರ್ವೆ ಆಯುರ್ವೇದಿಕವಾಗಿ ತಂಪು. ಶರೀರದಲ್ಲಿನ ಉಷ್ಣತೆ ಕಡಿಮೆಗಾಗಿ ದೂರ್ವೆ ರಸ ಉಪಯೋಗಿ. ವೈಜ್ಞಾನಿಕವಾಗಿ ಇದರಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗಿ ಬರುತ್ತೆ. ಗಣೇಶ ಮೂರ್ತಿ ಸುಮ್ನೆ ಗೊಂಬೆ ಅಲ್ಲ ಅದರಲ್ಲಿಯೂ ಪ್ರತಿಷ್ಟಾಪನೆ ಮಾಡಿ ಶಕ್ತಿ ತುಂಬ್ತಾರೆ. ಈ ಶಕ್ತಿ ಸೂಕ್ಷ್ಮದಲ್ಲಿ ಗೊತ್ತಾಗತ್ತೆ. ಮಂತ್ರಕ್ಕೆ ಅದ್ಭುತವಾದ ಶಕ್ತಿ ಇದೆ. ದೂಈರ್ವೆಯಲ್ಲಿ ಗಣೇಶ ತತ್ವ ಆಕರ್ಷಿಸುವ ಕ್ಷಮತೆ ಹೆಚ್ಚಿಗೆ ಇದೆ.
ಇನ್ನು ಗಣೇಶ ಚತುರ್ಥೀಗೆ ಚಂದ್ರ ದರ್ಶನ ಯಾಕೆ ಮಾಡಬಾರದು ಅಂದ್ರೆ ಇದಕ್ಕೆ ಪೌರಾಣಿಕ ಕಥೆಗಳಿದ್ದರೂ ವೈಜ್ಞಾನಿಕವಾಗಿ ಮನಸ್ಸಿನ ಮೇಲೆ ಚಂಚಲತೆಯ ಪರಿಣಾಮ ಬೀರುವುದರಿಂದ ಆ ದಿನ ಚಂದ್ರನನ್ನು ನೋಡುವಂತಿಲ್ಲ. ಈ ರೀತಿಯ ಎಲ್ಲಾ ವಿಷಯಗಳನ್ನು ಇಲ್ಲಿ ಹೇಳ್ತೀನಿ ಆದ್ರೆ ನನಗೆ ಗೊತ್ತು ಕೇಳೊಕೆ ಇಲ್ಲಿ ಯಾರಿಗೂ ಸಮಯ ಇಲ್ಲಾ ಅಂತ!”
ಕಬಳೇಶ ಮತ್ತು ಅವನ ಸಂಗಡಿಗರು ಎನೂ ಮಾತಾಡದೇ ಸುಮ್ಮನೆ ನಿಂತಿದ್ದರು.
“ಗಣೇಶನಿಗೆ ಸೊಂಡಿಲು ಯಾಕಿದೆ? ಅವ ಅಷ್ಟು ದೊಡ್ಡ ಇದ್ರೂ ಇಲಿ ಮೇಲೆ ಯಾಕಿದಾನೆ? ಕೈಯಲ್ಲಿ ಮೋದಕ, ಅಂಕುಶ, ಪಾಶ, ಸೊಂಟಕ್ಕೆ ನಾಗ, ಅವನಿಗಿರುವ ಸಾವಿರಾರು ಹೆಸರು, ಗಣೇಶನ ವೈವಿಧ್ಯತೆ ಎಲ್ಲದರ ಬಗ್ಗೆಯೂ ನಾನು ಹೇಳಬಲ್ಲೆ ಅದೂ ವೈಜ್ಞಾನಿಕವಾಗಿ! ಕೇಳೊಕೆ ಅದರಂತೆ ಆಚರಣೆ ಮಾಡೋಕೆ ನಿಮ್ಮಲ್ಲಿ ಸಾಧ್ಯವಾ?”
ಲಗೋರಿಬಾಬಾನ ಪ್ರಶ್ನೆಗೆ ಮತ್ತದೇ ಮೌನ.
“ನಡ್ರಿ ಸಾಕು. ಬಂದ್ ಬಿಟ್ರು ಹಬ್ಬ ಮಾಡ್ತಾರಂತೆ, ಧಾರ್ಮಿಕ ವಿಧಿ ವಿಧಾನ ಅಂತೆ. ಗಣೇಶ ಮೂರ್ತಿ ಹೇಗಿರಬೇಕು. ಹಬ್ಬ ಹೇಗೆ ಮಾಡಬೇಕು. ವಿಸರ್ಜನೆ ಹೇಗೆ ಮಾಡಬೇಕು ಅಂತಾನೆ ಗೊತ್ತಿಲ್ಲ ಮಾತಾಡೋಕೆ ಬಂದ್ರು. ಹೋಗ್ರಿ ಚಂದಾ ಎತ್ತಿ ಹಬ್ಬದ ಹೆಸರಲ್ಲಿ ಮಜಾ ಮಾಡಿ. ಕುಡಿದು ಕುಣಿದು ಕುಪ್ಪಳಿಸಿ. ಯಾವುದೂ ತಿಳ್ಕೊಬೇಡಿ. ನಡ್ರಿ ಇಲ್ಲಿಂದ”- ಬಾಬಾ ಕೆಂಗಣ್ಣಿನಿಂದ ನುಡಿದ ಬಿರುಸಾಗಿ.
ಒಬ್ಬೊಬ್ರೆ ಸೈಲೆಂಟಾಗಿ ಜಾಗ ಖಾಲಿ ಮಾಡಿದ್ರು, “ಬಾಬಾ ಸೂಪರ್!! ಪಾಪಾ ಇಷ್ಟಕ್ಕೆ ತಡ್ಕೊಂಡಿಲ್ಲ ಅವರು.. ಇನ್ನು ನಿನ್ನ ಜೊತೆ ಚರ್ಚಿಸಿದ್ದರೆ ಸತ್ತೇ ಹೋಗ್ತಿದ್ರೇನೋ ಹ್ಹ ಹ್ಹ ಹ್ಹ..” ಅಂತಂದು ಮತ್ತೆ ಕೆಲಸಕ್ಕೆ ಅಣಿಯಾದ ಫ್ಲಾಪಿಬಾಯ್.
Abbha yella tillko bekappa ela papi baba enda nauo hoge hakotivi
🙂 🙂
ನಮ್ಮ ಎಲ್ಲ ಸಂಪ್ರದಾಯಗಳ ಬಗ್ಗೆ ಲಗೋರಿ ಬಾಬಾ ನ ಬಾಯಲ್ಲಿ ವೈಜ್ನಾನಿಕ ಕಾರಣ ಕೊಟ್ಟು ಹೇಳಿಸಿದರೆ ಗೊಡ್ಡು ಸಂಪ್ರದಾಯ ಎಂದು ಮೂಗು ಮುರಿಯುವವರ ಬಾಯಿಗೆ ಬೀಗ ಹಾಕಿಸಿದಂತೆ !
ಆಯ್ತು ಮಗಳೆ, ತಥಾಸ್ತು..