ಫ್ರೀಡಾ ಕಾಹ್ಲೋ: ಬದುಕು, ಬವಣೆ ಮತ್ತು ಬಣ್ಣಗಳು: ಪ್ರಸಾದ್ ಕೆ.

"ಇಲ್ಲಿಂದ ಹೊರಬಿದ್ದವಳೇ ಮೂರು ಕೆಲಸಗಳನ್ನು ಮಾಡಬೇಕಿದೆ ನನಗೆ. ಪೈಂಟಿಂಗ್, ಪೈಂಟಿಂಗ್ ಮತ್ತು ಪೈಂಟಿಂಗ್" 

ಮೂವತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು, ನೋವನ್ನೆಲ್ಲಾ ದೇಹದ ಮೂಲೆಮೂಲೆಯಲ್ಲೂ ಆವರಿಸಿಕೊಂಡು ಮೆಕ್ಸಿಕೋದ ಆಸ್ಪತ್ರೆಯ ವಾರ್ಡೊಂದರಲ್ಲಿ ಮಲಗಿದ್ದ ಹೆಣ್ಣೊಬ್ಬಳು ಹೇಳಿದ ಮಾತಿದು. ಈ ಚಿತ್ರಕಲಾವಿದೆಯ ಹೆಸರು ಫ್ರೀಡಾ ಕಾಹ್ಲೋ. ಪಿಕಾಸೋ ಮತ್ತಿತರ ದಿಗ್ಗಜರ ಸಮಕಾಲೀನಳಾದಳೂ ಕೂಡ ತನ್ನ ಜನ್ಮಭೂಮಿ ಮೆಕ್ಸಿಕೋದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನದೇ ಆದ ಛಾಪನ್ನು ಕಲಾಲೋಕದಲ್ಲಿ ಮೂಡಿಸಿದವರು ಫ್ರೀಡಾ. ತನ್ನ ದೇಹವನ್ನು ಮತ್ತು ಮನಸ್ಸಿನಲ್ಲಾ ಮಡುಗಟ್ಟಿ ಆವರಿಸಿದ್ದ ನೋವುಗಳೊಂದಿಗೆ ಜೀವನದುದ್ದಕ್ಕೂ ಹಟಬಿಡದೆ ಸೆಣಸಾಡಿ, ಖ್ಯಾತಿಯ ಉತ್ತುಂಗಕ್ಕೇರಿ ಸೈ ಎನಿಸಿಕೊಂಡು ತನ್ನ ಜೀವಿತಕ್ಕೊಂದು ಘನತೆಯನ್ನು ತಂದವರು ಫ್ರೀಡಾ ಕಾಹ್ಲೋ. 

ಫ್ರೀಡಾ ಎಂದರೆ ಅಸಾಮಾನ್ಯ ಪ್ರತಿಭಾವಂತೆ ಹೆಲೆನ್ ಕೆಲ್ಲರಳಂತೆ. ಫ್ರೀಡಾ ಎಂದರೆ ನಮ್ಮವರೇ ಆದ ನಾಟ್ಯಪ್ರವೀಣೆ, ಸಾಹಸಿ ಸುಧಾ ಚಂದ್ರನ್ ಇದ್ದಂತೆ. ಅವರ ಕಥೆಯು ಜೀವನಪ್ರೀತಿಗೊಂದು ಭಾಷ್ಯವಿದ್ದಂತೆ. ಮೆಕ್ಸಿಕನ್ ಕ್ಯಾಥೊಲಿಕ್ ಹಿನ್ನಲೆಯ ಮ್ಯಾಟಿಲ್ದಾ ಮತ್ತು ಯುರೋಪಿಯನ್ ಮೂಲದ ನಾಸ್ತಿಕವಾದಿ ಯುವಕ ಗುಯ್ಲೆರ್ಮೋ ಕಾಹ್ಲೋ ದಂಪತಿಗಳ ಮೂರನೇ ಮಗಳೇ ಫ್ರೀಡಾ. ಅತೀ ಚೂಟಿ ಮತ್ತು ಬುದ್ಧಿವಂತೆಯಾಗಿದ್ದ ಮಗು ಎಲ್ಲರಿಗೂ, ಅದರಲ್ಲೂ ತಂದೆಯ ಫೇವರಿಟ್. ತಾಯಿಗಿಂತಲೂ ತಂದೆಯೊಂದಿಗೆ ಹೆಚ್ಚು ಉತ್ತಮ ಬಾಂಧವ್ಯವಿದ್ದ, ಅಷ್ಟಿಷ್ಟು ರೆಬೆಲ್ ಮನೋಭಾವದ, ಬೋಲ್ಡ್ ಶೈಲಿಯ ಈ ಮಗುವಿಗೆ ವೈದ್ಯೆಯಾಗುವ ಕನಸೊಂದಿತ್ತು. ಆದರೆ ಆರನೇ ವಯಸ್ಸಿನಲ್ಲೇ ಪೋಲಿಯೋ ಫ್ರೀಡಾಳ ಜೊತೆಯಾಗುತ್ತದೆ. ತನ್ನ ಹದಿನೆಂಟನೇ ವಯಸ್ಸಿನಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಫ್ರೀಡಾಳ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ. ಗಂಭೀರವಾಗಿ ಗಾಯಗೊಂಡಿದ್ದ ಈ ಹುಡುಗಿ ಬದುಕುಳಿಯುವುದೇ ಕಷ್ಟವೆಂದು ವೈದ್ಯರುಗಳು ಕೈಚೆಲ್ಲಿ ಕೂತಿದ್ದರಂತೆ. ಬೆನ್ನುಮೂಳೆ, ಸೊಂಟದ ಮೂಳೆ, ಭುಜದ ಮೂಳೆಗಳು ಈ ಅಪಘಾತದಲ್ಲಿ ಇನ್ನಿಲ್ಲದಂತೆ ಘಾಸಿಗೊಂಡವು. ಬಲಪಾದವು ನಜ್ಜುಗುಜ್ಜಾಗಿದ್ದೇ ಅಲ್ಲದೆ ಭುಜದ ಮೂಳೆಗಳಂತೆಯೇ ಸ್ಥಾನಪಲ್ಲಟಗೊಂಡವು. ಬಸ್ಸಿನ ಉದ್ದವಾದ ಕಬ್ಬಿಣದ ಹಿಡಿಯೊಂದು ಹೊಟ್ಟೆಯ ಕೆಳಭಾಗದಿಂದ ತೂರಿಕೊಂಡು ಹೋಗಿ ಯೋನಿಮಾರ್ಗವಾಗಿ ಹೊರಬಂದು ಬಹುತೇಕ ದೇಹವನ್ನೇ ಜರ್ಝರಿತಗೊಳಿಸಿತ್ತು. ತಿಂಗಳುಗಟ್ಟಲೆ ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯೆ ಮಲಗಿದ್ದ ಫ್ರೀಡಾ ಪವಾಡವೆಂಬಂತೆ ಚೇತರಿಸಿಕೊಳ್ಳುತ್ತಾ ನಿಧಾನವಾಗಿ ಚಿತ್ರಕಲೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲಾರಂಭಿಸಿದರು. ನೋವಿನ ಭಾಷೆಗೊಂದು ಮಾಧ್ಯಮವಾದ ಬಣ್ಣಗಳು ಮುಂದೆ ಅವರ ಬಾಳಿನುದ್ದಕ್ಕೂ ಬೆಳಕಾದವು. 

’ಸೆಲ್ಫ್ ಪೋಟ್ರೇಟ್’ (ಸ್ವಯಂ ಭಾವಚಿತ್ರ) ಫ್ರೀಡಾರ ಪ್ರಮುಖ ಕಾರ್ಯಕ್ಷೇತ್ರ. ರಚಿಸಿದ ಅಜಮಾಸು ನೂರ ನಲವತ್ತಕ್ಕೂ ಹೆಚ್ಚಿನ ಕಲಾಕೃತಿಗಳಲ್ಲಿ ಐವತ್ತಕ್ಕೂ ಹೆಚ್ಚು ಕಲಾಕೃತಿಗಳು ತನ್ನನ್ನು ತಾನೇ ಚಿತ್ರಿಸಿಕೊಂಡಂಥವುಗಳು. "ಈ ಜಗತ್ತಿನಲ್ಲಿ ನಾನು ಚೆನ್ನಾಗಿ ಅರ್ಥಮಾಡಿಕೊಂಡಿರುವ ವ್ಯಕ್ತಿಯೆಂದರೆ ನಾನೇ. ಆದ್ದರಿಂದಲೇ ನಾನು ನನ್ನನ್ನೇ ಚಿತ್ರರೂಪಕ್ಕಿಳಿಸುತ್ತೇನೆ. ನನ್ನ ಸತ್ಯಗಳೇ ನನ್ನ ಕಲಾಕೃತಿಗಳು" ಎಂದಿದ್ದಾರೆ ಫ್ರೀಡಾ. ಅವರ ಮಾತಿನಂತೆಯೇ ಅವರ ಜೀವನದ ಸಂತಸ, ಹತಾಶೆ, ಯಾತನೆ, ಒಬ್ಬಂಟಿತನ ಹೀಗೆ ಎಲ್ಲವನ್ನೂ ಅವರ ಕಲಾಕೃತಿಗಳಲ್ಲಿ ಧಾರಾಳವಾಗಿ ಕಾಣಬಹುದು. ಬಹು ಡೀಟೈಲ್ಡ್ ಆಗಿದ್ದ ಅವರ ಕಲಾಕೃತಿಗಳಲ್ಲಿ ಗಾಢ ಬಣ್ಣಗಳು, ತೀಕ್ಷ್ಣ ಬ್ರಷ್ ಸ್ಟ್ರೋಕ್ ಗಳು ಅವರ ಭಾವನೆಗಳ ಏರಿಳಿತಗಳನ್ನು ಸ್ಪಷ್ಟವಾಗಿ ಮೂಡಿಸಿವೆ. ಪ್ರಖ್ಯಾತ ಕಲಾವಿದ, ಮ್ಯೂರಲಿಸ್ಟ್ ಡೀಗೋ ವಿರೇರಾರನ್ನು ವಿವಾಹವಾಗಿದ್ದ ಫ್ರೀಡಾ ತನ್ನ ಪತಿಯನ್ನೂ, ವೈವಾಹಿಕ ಸಂಬಂಧದ ಏರಿಳಿತಗಳನ್ನೂ ಬಣ್ಣಗಳಲ್ಲೇ ಪ್ರಪಂಚದ ಮುಂದಿರಿಸಿದವರು. ಹದಿನೆಂಟನೆಯ ವಯಸ್ಸಿನಲ್ಲಾದ ಭೀಕರ ಅಪಘಾತ ಅವರನ್ನೆಂದೂ ತಾಯಿಯಾಗಿಸಲಿಲ್ಲ. ಇದರಿಂದ ಕೆಲಕಾಲ ಖಿನ್ನತೆಗೊಳಗಾಗಿದ್ದ ಫ್ರೀಡಾ ಕೋತಿಗಳು, ಗಿಳಿಗಳು ಮತ್ತು ಗಿಡುಗವನ್ನೂ ಸೇರಿದಂತೆ ಹಲವು ಸಾಕುಪ್ರಾಣಿಗಳನ್ನು ಸಾಕಿಕೊಂಡು ಮಾತೃಪ್ರೇಮವನ್ನು ಧಾರೆಯೆರೆಯುತ್ತಿದ್ದರು. ಸೆಲ್ಫ್ ಪೋಟ್ರೇಟ್ ವಿದ್ ಮಂಕೀಸ್ (೧೯೪೩), ಸೆಲ್ಫ್ ಪೋಟ್ರೇಟ್ ವಿದ್ ಮಂಕೀ ಅಂಡ್ ಪ್ಯಾರಟ್ (೧೯೪೨) ನಂತಹ ಕಲಾಕೃತಿಗಳಲ್ಲಿ ಮಗುವಿನಂತೆ ಕಲಾವಿದೆಯ ಎದೆಗಪ್ಪಿಕೊಂಡು ಕೂತಿರುವ ಕೋತಿಗಳನ್ನು, ಗಿಳಿಗಳನ್ನು ಕಾಣಬಹುದು. 
 

ಫ್ರೀಡಾರ ಕಲರ್ ಫುಲ್ ಬದುಕಿನಲ್ಲಿ ವಿವಾಹದ್ದೂ ಒಂದು ಕಥೆ. ಮ್ಯೂರಲ್ ಗಳನ್ನು ರಚಿಸಿ ಆಗಲೇ ಪ್ರಸಿದ್ಧಿಯನ್ನು ಪಡೆದಿದ್ದ ಸ್ತ್ರೀಲೋಲ ಜೀನಿಯಸ್ ಕಲಾವಿದ ಡೀಗೋ ವಿರೇರಾನಡೆಗೊಂದು ವಿಚಿತ್ರವಾದ ಆಕರ್ಷಣೆ ಹರೆಯದ ಫ್ರೀಡಾಗಿತ್ತು. ಭೇಟಿಯ ಮೊದಲ ದಿನಗಳಲ್ಲಿ ತನ್ನ ಪೈಂಟಿಂಗ್ ಒಂದನ್ನು ಡೀಗೋಗೆ ತೋರಿಸಲು ಹಲವು ದಿನ ಡೀಗೋನ ಬೆನ್ನಹಿಂದೆಯೇ ಫ್ರೀಡಾ ಚಿಕ್ಕಮಗುವಿನಂತೆ ಸುತ್ತುತ್ತಿದ್ದರಂತೆ. ಕೊನೆಗೂ ಮುಹೂರ್ತ ಕೂಡಿಬಂದು ಇಪ್ಪತ್ತರ ಈ ತರುಣಿಯ ಪೈಂಟಿಂಗ್ ಅನ್ನು ನೋಡಿದ ಡೀಗೋ, "ಪ್ರತಿಭೆಯೆಂಬುದು ನಿನ್ನಲ್ಲಿದೆ" ಎಂದಾಗ ಫ್ರೀಡಾಳ ಸ್ವರ್ಗಕ್ಕೇ ಮೂರೇ ಗೇಣು. ಆ ಆರಂಭದ ದಿನಗಳ ತರುವಾಯ ಉದಯೋನ್ಮುಖ ಕಲಾವಿದೆ ಫ್ರೀಡಾರ ಮಾರ್ಗದರ್ಶಕನಾಗುವ ಡೀಗೋ ಬಹುಬೇಗ ಫ್ರೀಡಾರ ತಾಯಿಯ ಅಸಮಧಾನದ ನಡುವೆಯೂ ಅವರ ಬಾಳಸಂಗಾತಿಯಾಗಿ ಮಾರ್ಪಾಡಾಗುತ್ತಾನೆ. ಫ್ರೀಡಾಗಿಂತ ಇಪ್ಪತ್ತು ವರ್ಷ ಹಿರಿಯನೂ, ದೃಢಕಾಯಿಯೂ ಆಗಿದ್ದ ಡೀಗೋ ಬಳುಕುವ ಬಳ್ಳಿಯಂತಿದ್ದ ಫ್ರೀಡಾಳನ್ನು ವಿವಾಹವಾದಾಗ, ’ಇದೊಂದು ಆನೆ ಮತ್ತು ಪಾರಿವಾಳದ ಜೋಡಿ’ ಎಂದು ಫ್ರೀಡಾಳ ಪೋಷಕರು ಅಸಮಧಾನದಲ್ಲಿ ಗೊಣಗಿಕೊಂಡಿದ್ದರಂತೆ. ಇವರ ವೈವಾಹಿಕ ಜೀವನ ಅದೆಷ್ಟು ಏರಿಳಿತಗಳನ್ನು ಕಂಡರೂ, ಇಬ್ಬರೂ ಖ್ಯಾತಿಯ ಉತ್ತುಂಗಕ್ಕೇರಿದರೂ ಪ್ರೀತಿಗೇನೂ ಬರವಿರಲಿಲ್ಲ. ತನ್ನ ಗಂಡ ತನ್ನ ತಂಗಿಯೊಂದಿಗೆ ಹಾಸಿಗೆ ಹಂಚಿಕೊಂಡಾಗ ಫ್ರೀಡಾ ತೀವ್ರ ಯಾತನೆಗೊಳಗಾದಂತೆಯೇ, ಫ್ರೀಡಾಳ ಬೈಸೆಕ್ಷುವಲ್ ಲೈಂಗಿಕತೆ ಡೀಗೋಗೆ ಅರಗಿಸಿಕೊಳ್ಳಲಾರದ ತುತ್ತಾಗಿತ್ತು. ಪರಸ್ತ್ರೀಯರೊಂದಿಗೆ ಸಂಬಂಧ ಬೆಳೆಸಿಕೊಂಡರೂ ಸುಮ್ಮನಿದ್ದ ಡೀಗೋಗೆ ಪರಪುರುಷರೊಂದಿಗೆ ಫ್ರೀಡಾಳ ದೈಹಿಕ ಸಂಬಂಧಗಳು ರೇಜಿಗೆಯನ್ನೂ, ಹೊಟ್ಟೆಕಿಚ್ಚನ್ನೂ ಉಂಟುಮಾಡಿಸುತ್ತಿದ್ದವು. ಡೀಗೋನೆಡೆಗಿನ ತನ್ನ ಪ್ರೀತಿಯ ಭಾವತೀವ್ರತೆಯನ್ನು ಲೆಕ್ಕವಿಲ್ಲದಷ್ಟು ಬಾರಿ ಫ್ರೀಡಾ ತನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದಾರೆ. ಡೀಗೋನ ಹಲವು ಮ್ಯೂರಲ್ ಗಳಲ್ಲಿ ಫ್ರೀಡಾಳ ಸುಂದರ ಮುಖ ಕಂಗೊಳಿಸುತ್ತದೆ. ೧೯೩೯ ರ ನವೆಂಬರ್ ನಲ್ಲಿ ವಿಚ್ಛೇದನದೊಂದಿಗೆ ವಿವಾಹವು ಮುರಿದುಬಿದ್ದರೂ, ೧೯೯೦ ರಲ್ಲಿ ಇಬ್ಬರೂ ಮತ್ತೆ ಒಂದಾದರು. "ನನ್ನ ಜೀವನದಲ್ಲಿ ಎರಡು ಬಹುದೊಡ್ಡ ಅಪಘಾತಗಳು ಆಗಿಹೋಗಿವೆ. ಒಂದು ಬಸ್ ಅಪಘಾತ ಮತ್ತು ಇನ್ನೊಂದು ಡೀಗೋ. ಎರಡನೆಯ ಅಪಘಾತವೇ ಮರೆಯಲಾರದ್ದು" ಎಂದು ಫ್ರೀಡಾ ಒಂದೆಡೆ ಬರೆದುಕೊಳ್ಳುತ್ತಾರೆ. ಎಲ್ಲಾ ಸೃಜನಶೀಲರಂತೆಯೇ ಇವರಿಬ್ಬರೂ ಇಷ್ಟಿಷ್ಟೇ ವಿಭಿನ್ನರು, ಇಷ್ಟಿಷ್ಟೇ ವಿಕ್ಷಿಪ್ತರು. ಬಟ್ ದೇ ವೇರ್ ಮೇಡ್ ಫಾರ್ ಈಚ್ ಅದರ್.                

ಶಸ್ತ್ರಚಿಕಿತ್ಸೆಯ ದೃಷ್ಟಾಂತಗಳು ಹದಿನೆಂಟರ ಹರೆಯದಲ್ಲಾದ ಅಪಘಾತದ ಗಾಯಗಳ ನೋವಿನಂತೆ, ಅದರ ಕರಾಳ ನೆನಪುಗಳಂತೆ ಸಮಯದೊಂದಿಗೆ ಮಾಸಿಹೋಗಲಿಲ್ಲ. ಪರಿಣಾಮವಾಗಿ ಫ್ರೀಡಾರ ತಾಯಿಯಾಗುವ ಕನಸು ಎಂದೂ ನೆರವೇರಲಿಲ್ಲ. ಮೂರು ಬಾರಿ ಗರ್ಭ ಧರಿಸಿದರೂ ತೀವ್ರ ರಕ್ತಸ್ರಾವದೊಂದಿಗೆ ಗರ್ಭಪಾತಗಳಾದವು. ಫ್ರೀಡಾರ ತಾಯಿ ಒಂದು ವಿಭಿನ್ನವಾದ ಕ್ಯಾನ್ವಾಸ್ ಸ್ಟ್ಯಾಂಡ್ ಅನ್ನು ಆಸ್ಪತೆಯಲ್ಲಿ ಮಲಗಿದ ಮಗಳಿಗಾಗಿಯೇ ಸಿದ್ಧಪಡಿಸಿಟ್ಟುಕೊಂಡಿದ್ದರಂತೆ. ತನ್ನನ್ನು ತಾನು ನೋಡಿಕೊಳ್ಳಲು ಅನುವಾಗುವಂತೆ ಕನ್ನಡಿಯೊಂದನ್ನೂ ಫ್ರೀಡಾರ ಬೆಡ್ ಗೆ ಜೋಡಿಸಿಡಲಾಗಿತ್ತು. ಹೀಗೆ ಹಲವು ವಿಶಿಷ್ಟ ಕಲಾಕೃತಿಗಳು ಆಸ್ಪತ್ರೆಯ ವಾರ್ಡುಗಳಲ್ಲೇ ಈ ಕಲಾವಿದೆಯ ಕುಂಚದಿಂದ ಮೂಡಿಬಂದವು. ನೋವು, ಹತಾಶೆ, ಒಂಟಿತನಗಳು ಒಂದೊಂದಾಗಿ ಕ್ಯಾನ್ವಾಸಿನಲ್ಲಿ ಮಿಳಿತಗೊಂಡವು. ೧೯೪೦ ರ ಆಸುಪಾಸಿಗೆ ಮತ್ತೊಮ್ಮೆ ಸರಿಸುಮಾರು ಮೂವತ್ತು ಶಸ್ತ್ರಚಿಕಿತ್ಸೆಗಳಿಗೆ ಫ್ರೀಡಾ ತನ್ನ ದೇಹವನ್ನು ಒಡ್ಡಿಕೊಳ್ಳಬೇಕಾಯಿತು. ದೇಹಕ್ಕೆ ಬಲ ನೀಡಲು ಸ್ಟೀಲಿನ ಕವಚವನ್ನೂ ಅಳವಡಿಸಿದ್ದಾಯಿತು. ಇಂತಹ ನರಕಯಾತನೆಯ ದಿನಗಳಲ್ಲಿ ರಚಿಸಿದ ಒಂದು ಸೆಲ್ಫ್ ಪೋಟ್ರೇಟ್ ಕಲಾಕೃತಿಯಲ್ಲಿ ಯೋನಿಯಿಂದ ಕತ್ತಿನವರೆಗೂ ಸೀಳಿಕೊಂಡು ಹೋದ ರಾಡೊಂದನ್ನು ಮತ್ತು ದೇಹದಲ್ಲೆಲ್ಲಾ ರೋಮದಂತೆ ಚುಚ್ಚಿಸಿಕೊಂಡಿದ್ದ ಲೋಹದ ಮೊಳೆಗಳನ್ನು ಕಾಣಬಹುದು. (೧೯೪೦: ದ ಬ್ರೋಕನ್ ಕಾಲಂ). ಬಂಜರು ಹಿನ್ನೆಲೆಯಲ್ಲಿ ನಗ್ನದೇಹಿಯಾಗಿ ಕಣ್ಣೀರಿಡುತ್ತಾ ನಿಂತಿರುವ ಫ್ರೀಡಾರ ದೇಹವನ್ನು ಇಲ್ಲಿ ಶ್ವೇತವರ್ಣದ ಲೋಹದ ಕವಚವಷ್ಟೇ ಆವರಿಸಿಕೊಂಡಿದೆ. ಫ್ರಖ್ಯಾತ ಕಲಾವಿದನೊಬ್ಬ ಅಂದಿದ್ದನಂತೆ, "ಫ್ರೀಡಾರ ಜೀವನವನ್ನು ಅವರ ಕಲಾಕೃತಿಗಳಿಂದ ಬೇರ್ಪಡಿಸಲು ಸಾಧ್ಯಲಿಲ್ಲ. ಅವರ ಕಲಾಕೃತಿಗಳೇ ಅವರ ಆತ್ಮಕಥೆಗಳು", ಎಂದು. ಫ್ರೀಡಾರ ಕಲಾಕೃತಿಗಳನ್ನು ಸೂಕ್ಷ್ಮವಾಗಿ ನೋಡುತ್ತಾ ಹೋದರೆ ಈ ಮಾತುಗಳು ಅತಿಶಯೋಕ್ತಿಯೆನಿಸುವುದಿಲ್ಲ.
 
ಹೀಗೆ ನಲವತ್ತೇಳು ವರುಷ ಬದುಕಿ ಅದರಲ್ಲೂ ಹಲವು ಕಾಲ ಆಸ್ಪತ್ರೆಗಳಲ್ಲೇ ಒಂದಾದರೊಂದಂತೆ ಸರಣಿ ಶಸ್ತ್ರಚಿಕಿತ್ಸೆಗಳ ನೋವನ್ನು ನುಂಗುತ್ತಾ ಬಂದಿದ್ದ ಫ್ರೀಡಾಳ ಬದುಕಿನಲ್ಲಿ ಜೀವನಪ್ರೀತಿಗೇನೋ ಕೊರತೆಯಿರಲಿಲ್ಲ. ಆ ಕಾಲದ ಲಿಯೋನ್ ಟ್ರೋಸ್ಕಿಯಂಥಾ ಪ್ರಖ್ಯಾತ ಕಮ್ಯೂನಿಸ್ಟರ ಒಡನಾಟ ಡೀಗೋ-ಫ್ರೀಡಾ ದಂಪತಿಗಿತ್ತು. ಇಬ್ಬರೂ ರಾಜಕೀಯ ನೆಲೆಯಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸತೊಡಗಿದ್ದರು. ಫ್ರೀಡಾಳ ಸೌಂದರ್ಯ, ಬುದ್ಧಿವಂತಿಕೆ, ಅಗಾಧ ಪ್ರತಿಭೆ ಎಲ್ಲರನ್ನೂ ಸೆಳೆಯುತ್ತಲಿತ್ತು. ಖಾಸಗಿ ಪಾರ್ಟಿಗಳಲ್ಲೆಲ್ಲಾ ತನ್ನ ಹಾಸ್ಯಪ್ರವೃತ್ತಿ, ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕುವ ಡರ್ಟಿ ಜೋಕುಗಳಿಂದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಫ್ರೀಡಾಳಲ್ಲಿ ಅದೇನೋ ಸಿಡಕ್ಟಿವ್ ಆದ ಸೆಳೆತವಿತ್ತು ಎಂದು ಅವರ ನಿಕಟವರ್ತಿಗಳು ಹಲವು ಕಡೆ ಉಲ್ಲೇಖಿಸುತ್ತಾರೆ. ತನ್ನ ಕಲಾಕೃತಿಯ ಪ್ರದರ್ಶನವೊಂದಕ್ಕೆ ಹೋಗುವುದು ಕಷ್ಟವೆಂದಾದಾಗ ಸ್ನೇಹಿತರ ನೆರವಿನಿಂದ ತನ್ನ ಹಾಸಿಗೆಯನ್ನೇ ಗ್ಯಾಲರಿಯವರೆಗೆ ಶಿಫ್ಟ್ ಮಾಡಿ ಪಾರ್ಟಿಯನ್ನು ಎಂಜಾಯ್ ಮಾಡಿದ್ದರಂತೆ ಈ ಫ್ರೀಡಾ. ಇವರ ಕೇಶಶೈಲಿ, ಆಭರಣ ಮತ್ತು ಕಣ್ಣುಕುಕ್ಕುವ ಬಣ್ಣಗಳ ದಿರಿಸುಗಳು ಆ ಕಾಲದಲ್ಲೇ ಕ್ಯಾಮೆರಾದ ಕಣ್ಣುಗಳಿಗೆ ಹಬ್ಬದಂತಿದ್ದವು. ಕಲಾವಿಮರ್ಶಕರು "ಸರ್ರಿಯಲಿಸ್ಟ್" ಲೇಬಲ್ ಕೊಟ್ಟಾಗ "ನಾನು ಕನಸುಗಳನ್ನು ಯಾವತ್ತೂ ಚಿತ್ರಿಸಲೇ ಇಲ್ಲ. ನನ್ನದೇನಿದ್ದರೂ ಕಟುಸತ್ಯಗಳು" ಎಂದು ನಗುತ್ತಲೇ ತಳ್ಳಿಹಾಕಿದರು. ೧೯೫೦ ರ ಸುಮಾರಿನಲ್ಲಿ ಮತ್ತೊಮ್ಮೆ ವರುಷ ಪೂರ್ತಿ ಆಸ್ಪತ್ರೆಯಲ್ಲಿ ಭರ್ತಿಯಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬೇಕಾಯಿತು. ಗ್ಯಾಂಗ್ರೀನ್ ಆದ ಕಾಲನ್ನು ಕತ್ತರಿಸಲೇಬೇಕೆಂದು ವೈದ್ಯರು ಹೇಳಿದಾಗ "ಹಾರಲು ರೆಕ್ಕೆಗಳಿದ್ದಾಗ, ಕಾಲಿನ ಹಂಗೇಕೆ?" ಎಂದು ತಮ್ಮ ಡೈರಿಯಲ್ಲಿ ಬರೆದುಕೊಂಡರು. ಈ ಕೊನೆಯ ಹಂತದಲ್ಲೂ ಮಲಗಿದ್ದಲ್ಲೇ ಸತತವಾಗಿ ಕಲಾಕೃತಿಗಳನ್ನು ರಚಿಸುತ್ತಲೇ, ಭಾವನೆಗಳನ್ನು ಬಣ್ಣಗಳಲ್ಲಿ ಬಿಂಬಿಸುತ್ತಲೇ ಹೋದರು. "ಟ್ರೀ ಆಫ್ ಹೋಪ್" ಎಂಬ ಹೆಸರಿನ ಕಲಾಕೃತಿಯಲ್ಲಿ ತಾನು ಮರಣಶಯ್ಯೆಯಿಂದ ಗುಣಮುಖರಾಗಿ ಜೀವಂತಿಕೆಯೇ ಮೈತಳೆದಂತೆ ಸಿಂಗರಿಸಿ ಚಿತ್ರಿಸಿದ ಕಲಾಕೃತಿಯೇ ಇವರ ಜೀವನಪ್ರೀತಿಯನ್ನು ಸಾರಿಹೇಳುತ್ತದೆ.  

ಬಲಗಾಲಿಗಾದ ಗ್ಯಾಂಗ್ರೀನ್ ತರುವಾಯದ ದಿನಗಳು ಫ್ರೀಡಾರ ಜೀವನದ ಕೊನೆಯ ಕ್ಷಣಗಳೂ, ಅತೀವ ನೋವಿನಿಂದ ತುಂಬಿಕೊಂಡಿದ್ದಂಥವೂ ಆಗಿದ್ದವು. ೧೯೫೪ ರ ಜುಲೈ ೧೩ ರಂದು ಫ್ರೀಡಾ ಈ ಜಗತ್ತಿಗೆ ವಿದಾಯವನ್ನು ಹೇಳುತ್ತಾರೆ. ಡೀಗೋ ವಿರೇರಾ ಈ ದಿನವನ್ನು ತನ್ನ ಜೀವನದ ಅತೀ ವಿಷಾದದ ದಿನವೆಂದೂ, ಫ್ರೀಡಾರೊಂದಿಗೆ ಕಳೆದ ಒಂದೊಂದು ಕ್ಷಣಗಳೂ ತನ್ನ ಜೀವನದ ಅತ್ಯಂತ ಮಧುರ ಕ್ಷಣಗಳೆಂದು ಆತ್ಮಕಥೆಯಲ್ಲಿ ಹೇಳಿಕೊಳ್ಳುತ್ತಾನೆ. "ದ ಬ್ಲೂ ಹೌಸ್" ಎಂದೇ ಖ್ಯಾತಿಯುಳ್ಳ ಮ್ಯೂಸಿಯಂ ಆಗಿ ಬದಲಾದ ಫ್ರೀಡಾರ ನಿವಾಸ ಇಂದು ಮೆಕ್ಸಿಕೋ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದು. ಫ್ರೀಡಾ ಬಾಳಿದ ಶೈಲಿ ಎಲ್ಲರಿಗೂ ಒಂದು ಸಾರ್ವಕಾಲಿಕ ಸ್ಫೂರ್ತಿ. ಫ್ಯಾಶನ್ ಉದ್ಯಮಕ್ಕೆ ಇಂದಿಗೂ ಫ್ರೀಡಾರ ಫ್ಯಾಶನ್ ಸೆನ್ಸ್ ಎಂಬುದು ಸದಾ ಹೊಸ ಹೊಸ ಪ್ರಯೋಗಕ್ಕೊಳಗಾಗುವ ಒಂದು ಪರಿಕಲ್ಪನೆ. ಜೂಲಿ ಟೇಮರ್ ನಿರ್ದೇಶನದಲ್ಲಿ, ಖ್ಯಾತ ಮೆಕ್ಸಿಕನ್-ಅಮೆರಿಕನ್ ನಟಿ ಸಲ್ಮಾ ಹಾಯೆಕ್ ಫ್ರೀಡಾ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ ೨೦೦೨ ರಲ್ಲಿ ತೆರೆಕಂಡ "ಫ್ರೀಡಾ" ಚಲನಚಿತ್ರ ಎರಡು ಅಕಾಡೆಮಿ ಅವಾರ್ಡುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಗಲ್ಲಾ ಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ ಜಯಭೇರಿ ಬಾರಿಸಿದ ಈ ಚಿತ್ರ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನೂ, ನಟಿ ಸಲ್ಮಾಗೆ ಪ್ರತಿಷ್ಠಿತ ಅಕಾಡೆಮಿ ಪುರಸ್ಕಾರ, ಬಾಫ್ತಾ ಪುರಸ್ಕಾರ, ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಿಗೂ ನಾಮನಿರ್ದೇಶನಗೊಳ್ಳುವಂತೆ ಮಾಡಿದವು.           

ಫ್ರೀಡಾ ಇಂದು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಜೀವನ, ಸಾಧನೆ ಇಂದಿಗೂ ಎಲ್ಲರಿಗೂ ಪ್ರೇರಣಾದಾಯಕ, ದಾರಿದೀಪ ಮತ್ತು ಅಜರಾಮರ. ಕತ್ತಲಿನ ಸುರಂಗದಾಚೆಗೆ ಬೆಳಕನ್ನು ಕಾಣುವ ಆಶಾವಾದ ಎಲ್ಲರ ಮನದಲ್ಲೂ ಕತ್ತಲಿನಲ್ಲಿ ಮಿಣುಕುವ ಮಿಣುಕುಹುಳಗಳ ಪುಟ್ಟಬೆಳಕಿನಂತೆ ಆಗೊಮ್ಮೆ ಈಗೊಮ್ಮೆಯಾದರೂ ಮಿನುಗಲಿ. ನೋವಿನ ಕಾರ್ಮೋಡಗಳ ಮರೆಯಿಂದಲೂ ನಗುವಿನ ಬೆಳ್ಳಿಕಿರಣವೊಂದು ಕಾಣುವಂತಾಗಲಿ. ಆಫ್ಟರಾಲ್ ಬದುಕೊಂದು ಪೈಟಿಂಗ್ ಇದ್ದಂತೆಯೇ ಅಲ್ಲವೇ! ಅಸಂಖ್ಯಾತ ಬಣ್ಣಗಳ ಒಂದು ಅಪೂರ್ವ ಕಲಸುಮೇಲೋಗರ.    

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x