ಫೋಟೋ ಚೌಕಟ್ಟಿನ ಆಚೀಚೆ: ಅಮರ್ ದೀಪ್ ಪಿ.ಎಸ್.

ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳವು.  ವರ್ಷಕ್ಕೊಮ್ಮೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಮೇಷ್ಟ್ರು “ಎಲ್ರೂ ನಾಳೆ ನೀಟಾಗಿ ನಿಮಗಿಷ್ಟವಾದ ಡ್ರೆಸ್ ಹಾಕ್ಕೊಂಡ್ ಬನ್ನಿ” ಅನ್ನುತ್ತಿದ್ದರೆ, ನಮ್ಮ ಮುಖ ಇಷ್ಟಗಲವಾಗಿ ಅಲ್ಲೇ ಹಲ್ಕಿರಿದು ನಿಂತು ಬಿಡುತ್ತಿದ್ದೆವು.   ಮತ್ತೆ ಫೋಟೋ ತೆಗೆಯೋ ದಿನ ಮಾತ್ರ  ಅದು ನಡೆಯುತ್ತೋ, ಓಡುತ್ತೋ, ನಿಂತಲ್ಲೇ ಎಲ್ಡು ಬಾರಿ ಸರಿಯಾದ ಟೈಮು ತೋರ್ಸುತ್ತೋ, ಬಿಡುತ್ತೋ, ಒಟ್ನಲ್ಲಿ ಎಲ್ಲಿಂದಲೋ ಒಂದ ವಾಚ್ ಕಟ್ಗ್ಯಂಡು ಅದು ಫೋಟೋದಲ್ಲಿ ಕಾಣೋ ಹಂಗೆ ನಿಂತು ಫೋಸ್ ಕೊಡುತ್ತಿದ್ದೆವು.  ಫೋಟೋ ಪ್ರಿಂಟ್ ಕೈ ಸೇರೋವರ್ಗೆ ಅದರ ಬಗ್ಗೆ ಕುತೂಹಲವಂತೂ ಇದ್ದೇ ಇರೋದು. ಆಮೇಲಾಮೇಲೆ ಕಾಲೇಜ್ ಹಂತದಲ್ಲಿ ಗೆಳೆಯರು ಎಲ್ಲೆಲ್ಲಿಂದಲೋ ರೀಲ್ ಕ್ಯಾಮೆರಾಗಳನ್ನು ಹುಡಿಕ್ಯಂಡು, ರೀಲ್ ಹಾಕ್ಸಿ  ಫೋಟೋ ತೆಗೆಯೋದು ಶುರುವಾಯ್ತು.   ಅವು ಚೆನ್ನಾಗಿ ಬಂದಿದ್ದಾವೋ ಇಲ್ವೊ? ಅನ್ನೋದು ಅವುಗಳನ್ನು ಪ್ರಿಂಟ್ ಹಾಕಿಸದಾಗ್ಲೇ ಅವುಗಳ ಹಣೇಬರಹ ಗೊತ್ತಾಗೋದು. ಅದರಲ್ಲೂ ಹುಡುಗೀರ ಪಕ್ಕದಲ್ಲಿ ನಿಂತು ತೆಗೆಸಿಕೊಂಡ ಫೋಟೋಗಳು ಬ್ಲರ್ರಾಗಿದ್ದರಂತೂ ಆ ಫೋಟೋ ಗತಿಯಂತೇ ನೋಡಿದ ಮುಖಗಳು ಸೊಟ್ಟಾಗಿರ್ತಿದ್ದವು. 

ಟ್ರಿಪ್ಪಿಗೆ ಹೋದಾಗ, ಗೆಳೆಯರ ಜೊತೆ ಅಪರೂಪಕ್ಕೆ ಸಿಕ್ಕಾಗ ಕಳೆದ ಕ್ಷಣಗಳ ಒಂದಷ್ಟು ನೆನಪುಗಳಿಗೋಸ್ಕರವಾಗೇ ಫೋಟೋಗಳು ಜೊತೆಗಿರ್ತಾವೆ.  ಬರುಬರುತ್ತಾ ಡಿಜಿಟಲ್ ಮಯವಾದ ಫೋಟೋಗಳು ಹೆಚ್ಚೆಚ್ಚು ಆಕರ್ಷಕವಾಗತೊಡಗಿದವು.  ಫೋಟೋಗಳನ್ನು ನೋಡಿದರೆ, ಕ್ಯಾಮೆರಾಗಳನ್ನು ಹಿಡಿದವರನ್ನು ನೋಡಿದರೆ ನನಗೂ ಫೋಟೋ ತೆಗೆವ ಆಸೆ.   ಯಾವಾಗ ನೋಡ್ತೀನೋ, ಯಾವಾಗ ಅನ್ನಿಸ್ತಿತ್ತೋ ಅಷ್ಟೇ ಖರೆ, ಆಗ ಮಾತ್ರ ಚೂರು ಮನಸ್ಸು ಕೆದರಿದಂತಾಗೋದು.  ಮತ್ತೆ ಮರೆತುಬಿಡುತ್ತಿದ್ದೆ. ಮರೆಯೋದಕ್ಕೂ ಒಂದು ಕಾರಣ ಇತ್ತು.  ಅದು ದುಡ್ಡಿಂದು.  ಸ್ನೇಹಿತರ, ಅವರಿವರ ಕೈಯಲ್ಲಿ ಕ್ಯಾಮೆರಾ ನೋಡ್ದಾಗೆಲ್ಲಾ “ಎಷ್ಟು ಬೀಳುತ್ತೇ ರೇಟು?” ಅನ್ನುವುದು. ರೇಟು ಕೇಳಿ ಸುಮ್ಮನಾಗುವುದು. ಅಷ್ಟು ದುಡ್ಡು  ಜೋಡಿಸುವುದು ಕಷ್ಟದ ಕೆಲಸವಾಗಿರಲಿಲ್ಲ.  ಆದರೆ ಅದಕ್ಕೆ ಮನಸ್ಸು ಮಾಡೋದೇ ದೊಡ್ಡ ಕಷ್ಟವಾಗಿತ್ತು.  ಈಗಿನ ಸವಲತ್ತುಗಳು, ಡಿಜಿಟಲ್, 3ಜಿ ಯುಗದಲ್ಲಿ ಮೊಬೈಲುಗಳು ಖರೀದಿಸಿ ತಿಂಗಳಾಗುತ್ತಲೇ ಹಳತಾಗಿ ಹೊಸ ವರ್ಷನ್ ಗಳಿಗೆ ಮನಸ್ಸು ಹಾತೊರೆಯುತ್ತೆ. ಅಂಥಾದ್ದರಲ್ಲಿ ನಾನು ಅವರಿವರು ತೆಗೆದ ಚಿತ್ರಗಳನ್ನು ನೋಡಿ ಖುಷಿಪಡುತ್ತಲೇ ದೊಡ್ಡ ದೊಡ್ಡ ಫೋಟೋ ಮುಂದೆ, ಅಲ್ಲಿ ಇಲ್ಲಿ  ನಿಂತ್ಗಂಡು ಫೋಟೋ ತೆಗುಸ್ಕಂಡು ನೋಡೋದೇ ಆಗಿತ್ತು. 

ಇತ್ತೀಚೆಗೆ ಒಂದೆರಡು ವರ್ಷದಿಂದ ಸ್ನೇಹಿತರಾದ ಶಿವಶಂಕರ್ ಬಣಗಾರ್ ಇವರ ಮತ್ತು ಇನ್ನಿತರ ಛಾಯಚಿತ್ರಗಾರರು ತೆಗೆದ ಸೂರ್ಯಾಸ್ತ, ಸೂರ್ಯೋದಯ, ಪ್ರಕೃತಿ ಪಕ್ಷಿಗಳು, ಗ್ರಾಮ್ಯ ಸಹಜ ಬದುಕಿನ, ರೈತಾಪಿ ಜನಗಳ, ನೈಜವಾದ ಫೋಟೋಗಳನ್ನು ಫೇಸ್ಬುಕ್ಕಲ್ಲಿ ನೋಡೋದು, ಅವುಗಳಿಗೆ ಚುಟುಕು ಬರೆದು ಫೇಸ್ಬುಕ್ಕಿಗೆ ಹಾಕುವುದು ಮಾಡುತ್ತಿದ್ದೆ.   ಬರುಬರುತ್ತಾ ಈ ಫೋಟೋಗ್ರಫೀ ಹುಚ್ಚು ಹೆಚ್ಚುತ್ತಾ ಹೋಯ್ತು.  ಒಂದಿನ ನಿರ್ಧರಿಸಿ ಕಳೆದ ವರ್ಷ ಚಿಕ್ಕದಾದ ಕ್ಯಾಮೆರಾ ತೆಗೆದುಕೊಂಡೆ.  ಮೊದಮೊದಲು ಯಾವ ಚಿತ್ರ, ಯಾವ ಸೆಟ್ಟಿಂಗು, ಊಹೂಂ.. ಒಂದೂ ಗೊತ್ತಿರಲಿಲ್ಲ.  ಈಗ್ಲೂ ಜಾಸ್ತಿ ಗೊತ್ತಿಲ್ಲ.  ಇಷ್ಟ ಬಂದ ಹಾಗೆ ಒಂದೊಂದೇ ಚಿತ್ರ ತೆಗೆಯುತ್ತಾ ಹೋದೆ.  ಒಂದು ಹಂತಕ್ಕೆ ಹದವೆನ್ನುವುದು ಕೈಗಂಟಿತು. ಬೆಳಿಗ್ಗೆ ಎದ್ದವನೇ ಕೊಳ್ಳಾಗ ಕ್ಯಾಮೆರಾ ನೇತಾಕಿಕೊಂಡು ಸುತ್ತುವುದು, ಸೂರ್ಯೋದಯ, ಸೂರ್ಯಾಸ್ತದ ಚಿತ್ರಗಳನ್ನು ತೆಗೆಯಲು ಶುರು ಮಾಡಿದೆ.  ನಂತರ ಪಕ್ಷಿಗಳ ಬಗ್ಗೆ  ಕುತೂಹಲ ಹುಟ್ಟಿತು.  ಅವುಗಳ ಬೆನ್ನು ಬಿದ್ದೆ. ಕ್ಯಾಮೆರಾ ಕೊಳ್ಳುವುದಕ್ಕೂ ಮುಂಚೆ ಒಮ್ಮೆ ಬಣಗಾರರ ಜೊತೆ ಹಂಪಿ, ಕಮಲಾಪುರ, ಪೊಂಪಯ್ಯಸ್ವಾಮಿ ಮಳೇಮಠ್ ( ಇವರೂ ಸಹ ಉತ್ತಮ ಛಾಯಗ್ರಾಹಕರು.  2015ನೇ ಜನವರಿಯಲ್ಲಿ ಇವರ ವನ್ಯಜೀವನ ವಿಭಾಗದಲ್ಲಿ ಇವರ  ಛಾಯಾಚಿತ್ರಕ್ಕೆ ಪ್ರಥಮ ಸ್ಥಾನ ಲಭಿಸಿದೆ) ಇವರ ನಿಸರ್ಗಧಾಮಕ್ಕೆ ಒಮ್ಮೆ ಭೇಟಿ ನೀಡಿದ್ದೆ.  ಅದಾದ ನಂತರ ಸುಮಾರು ಬಾರಿ ಅವರೊಂದಿಗೆ ತಿರುಗಿದ್ದೇನೆ.  ಆಗೆಲ್ಲಾ ಬಣಗಾರ್  ಪಕ್ಷಿ ಸಂಕುಲದ ಬಗೆಗಿನ ವಿಸ್ತೃತವಾದ ಮಾಹಿತಿ ನೀಡಿದರು.  ದುರಾದೃಷ್ಟವಶಾತ್ ನನಗಿನ್ನೂ ಅದು ಪೂರ್ತಿ ತಲೆಹೊಕ್ಕಿಲ್ಲ.   ಈ ಪಕ್ಷಿ ವೀಕ್ಷಣೆಗೆ ಸಂಬಂಧಿಸಿದಂತೆ ನನ್ನ ಸಹೋದರನ ಸಹಪಾಠಿ ಹಗರಿಬೊಮ್ಮನಹಳ್ಳಿಯ ವಿಜಯ ಇಟಿಗಿ ಇವರಿಗೆ ನನಗಿಂತ ಹೆಚ್ಚೇ ಮಾಹಿತಿ ಇದೆ.

ಈ ಮಧ್ಯೆ ಸುಮಾರು ಫೋಟೋಗಳನ್ನು ಫೇಸ್ಬುಕ್ಕಿನಲ್ಲಿ ಹಾಕಿದೆ. ನೋಡುವ ಸ್ನೇಹಿತರ ಮೆಚ್ಚುಗೆ ವ್ಯಕ್ತಪಡಿಸಿದಂತೆಲ್ಲಾ ಖುಷಿಯಾಗಿ ಮತ್ತೆ ಮತ್ತೆ ಒಳ್ಳೆಯ ಸಂಧರ್ಭಗಳನ್ನು ಹುಡುಕಿ ಮುಳುಗು ಸಂಜೆಯ, ಬೆಳಗು ಮುಂಜಾನೆಯ, ಪಕ್ಷಿಗಳ, ಜನಜೀವನದ ಒಂದಷ್ಟು ಫೋಟೋಗಳು ಬಹಳ ಮೆಚ್ಚುಗೆ ಪಾತ್ರವಾದವು.  ಸ್ನೇಹಿತ ಸಿರಾಜ್ ಬಿಸರಳ್ಳಿ ಅದೊಮ್ಮೆ ನಿಮ್ಮವೇ ಛಾಯಚಿತ್ರಗಳ ಒಂದು ಪ್ರದರ್ಶನವನ್ನು ಏರ್ಪಡಿಸಿದರೆ ಹೇಗೆ? ಅಂದರು. ಪೇಚಿಗೆ ಸಿಲುಕಿಬಿಟ್ಟೆ.  ಮೊದಲೇ ಪ್ರದರ್ಶನಗಳ ಬಗ್ಗೆ, ಕಾರ್ಯಕ್ರಮಗಳ ಪ್ರೋಟೋಕಾಲ್ ಬಗ್ಗೆ ಹೆಚ್ಚು ಮಾಹಿತಿ ಮತ್ತು ಅನುಭವವಿರದ ನಾನು ಹಿಂದೇಟು ಹಾಕುತ್ತಿದ್ದೆ.   ಮೊನ್ನೆ ನಮ್ಮ  ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆವ ದಿನಾಂಕ ನಿಗದಿಯಾಯಿತು. ಮೊದಮೊದಲು ಈ ವಿಚಾರವನ್ನು ಗೆಳೆಯ ಸಿರಾಜ್ ಮತ್ತು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮತ್ತು ನನ್ನ ಸ್ನೇಹಿತರಾದ ನಾಗರಾಜರಲ್ಲಿ ಪ್ರಸ್ತಾಪಿಸಿದೆ.  ಅವರು ಹ್ಞೂಂ. ಅಂದಿದ್ದೇ ಬಂತು.   ಅಲ್ಲಿವರೆಗೆ ಯೋಚನೆ ಮಾಡಿರದ ನಾನು ಯಾವ ಚಿತ್ರ, ಯಾವ ಸೈಜು, ಪ್ರಿಂಟು ಎಲ್ಲಿ ಹಾಕ್ಸೋದು? ಪ್ರದರ್ಶನದ ಹೆಂಗೆ? ಕೇಳಿ ಕೇಳಿಯೇ ಅವಸರವಸರವಾಗಿ ರೆಡಿ ಮಾಡ್ಕೊಂಡೆ.  ಆಕರ್ಷಕ ಶೀರ್ಷಿಕೆಗಳನ್ನು ಸಹ ಕೊಟ್ಟು ಕ್ರೀಡಾಕೂಟದ ಉದ್ಘಾಟನೆ ದಿನದಂದು “ನಮ್ಮ ಕೊಪ್ಪಳ” ಎಂಬ ವಿಷಯಾಧರಿತ ಛಾಯಾಚಿತ್ರ ಪ್ರದರ್ಶನಕ್ಕೆ ಅಣಿಗೊಳಿಸಿದೆನು.  

ಅದಕ್ಕೂ ಮುಂಚೆ ಆಗಿದ್ದೆಂದರೆ, ನನ್ನ ಉದ್ಧೇಶ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯೆ ನೌಕರ ವರ್ಗದಲ್ಲಿನ ಒಂದು ಬಗೆಯ ಹವ್ಯಾಸದ ಚಿತ್ರಣವನ್ನು ತೆರೆದಿಡುವುದಷ್ಟೇ ಆಗಿತ್ತು.  ಅದರಿಂದಾಗಿ ಲಾಭ ಅಥವಾ ಪ್ರತ್ಯೇಕವಾದ ರೆಕಗ್ನಿಷನ್ ಗಾಗಲೀ ಅಲ್ಲ.  ಅಲ್ಲಿದ್ದ ಜಾಗಕ್ಕೆ ಎಷ್ಟು ಚಿತ್ರಗಳನ್ನು ಜೋಡಿಸುವುದು ಹೇಗೆ? ಎಂದು ನೋಡಿಕೊಂಡು ಬಂದೆ.  ಮೊದಲೇ ನಮ್ಮ ಭಾಗದ ಜನರ ಭಾಷೆ ಒರಟು ಆದ್ರೆ ಸ್ವಚ್ಛ ಮತ್ತು ನೆಟ್ಟಗೆ.  ಅಲ್ಲಿಗೆ ಬಂದ ಒಬ್ಬ ಗೆಳೆಯ “ಬರ್ರೀ ಸರ್ರಾ…. ನಿಮ್ ಫೋಟಕ್ಕ ಲೈಟ್ ಸೀರೀಸ್ ಹಾಕ್ಸೋನು” ಅಂದ.  ಇನ್ನು ಕೆಲವರು “ನಿಮ್ಮದೊಂದು ಫೋಟೋ ಹಾಕಿ ಒಂದ್ ಬ್ಯಾನರ್ ಹಾಕಬೇಕಿತ್ ನೋಡ್ರಿ” ಅಂದ್ರು. ಒಂದನ್ನು ಈ ಕಿವೀಲಿ ಕೇಳಿ ಆ ಕಿವೀಲಿ ಬಿಟ್ಟೆ ಇನ್ನೊಂದನ್ನು ಸಲಹೆ ಅಂದುಕೊಂಡೆ.  ಮಾರನೇ ದಿನ ಎಲ್ಲಾ ಫೋಟೋಗಳನ್ನು ಜೋಡಿಸುವಷ್ಟರಲ್ಲಿ ಒಬ್ಬೊಬ್ಬರೇ ಜೊತೆಗೂಡಿ ಖುಷಿಯಿಂದ ಸಹಕರಿಸಿದರು. ಉದ್ಘಾಟನೆಗೆ ಬಂದ ಅತಿಥಿಗಳು ಕಾರ್ಯಕ್ರಮದ ನಂತರ ಫೋಟೋಗಳನ್ನು, ಅವುಗಳ ಬುಡಕ್ಕೆ ನೀಡಿದ ಶೀರ್ಷಿಕೆ ನೋಡಿ ಖುಷಿಪಟ್ಟು ಹಾರೈಸಿದರು. ಬಂದ ನೌಕರ ವರ್ಗದವರೆಲ್ಲರೂ ನಿಂತು ನೋಡಿ “ಅರೆರೇ,,,, ಇವು ನಮ್ ಕ್ವಪ್ಳದಾಗ ತೆಗಿದಿದ್ವಾ? ಎಷ್ಟ್ ಬೇಷಿದಾವಲ್ರಿ?” ಅಂದರು.

ನಾನು ದೂರದಲ್ಲೇ ನಿಂತು ನೋಡುವವರನ್ನು ಗಮನಿಸುತ್ತಿದ್ದೆನು. “ಅದೇನ್ ಕೆಟ್ಟ ಹುಚ್ಚೋ ಏನ್ ಕತೀನೋ, ಸುಡುಗಾಡು ಫೇಸ್ಬುಕ್ನ್ಯಾಗೆ ಫೋಟೋ ಹಾಕ್ಯಂಬದು,  ಅವುನ್ನ ನೋಡ್ನೋಡಿ ಬ್ಯಾಸ್ರ ಬಂದ್ ಬಿಟ್ಟೈತ್ನೋಡ್ರಿ”  “ಕೆಲ್ಸ ಬೊಗ್ಸಿ ಬಿಟ್ಟು ಇದೊಳ್ಳೆ ಐಲು ಬಡ್ಕಂಡು ತಿರುಗ್ತಾನ” ಹೀಗೆ ಒಬ್ಬೊಬ್ಬ ಗೆಳೆಯರು ಹಿಂದೆ ಮತ್ತು ಎದುರಿಗೆ ಅಂದದ್ದು ನೆನಪಾಯ್ತು.  ಮತ್ತದೇ ದಿನಾ ಕ್ರೀಡಾಕೂಟದಲ್ಲಿ ಭಾಗವಹಿಸಿದವರಲ್ಲೊಬ್ಬ ಹಿರಿಯರು ದಿನಾ ಬೆಳಿಗ್ಗೆ ಎದ್ದು ರಾಕೆಟ್ ಹಿಡ್ದು ಮೈಯಾಗಿನ ನೆಣ ತೆಗ್ದು “ಈ ಸಲ ಸ್ಟೇಟ್ ಲೆವೆಲ್ ಗೆ ಇನ್ನೇನು ಹೊಂಟೆ” ಅನ್ನೋ ಹಂಗೆ  (ಅದೆಷ್ಟನೇ ಬಾರಿ ಟ್ರೈ ಮಾಡಿದ್ರೋ  ಏನೋ) ಶೆಟಲ್ ಕಸರತ್ತು ಮಾಡಿದ್ರೂ ಆ ದಿನ ಎರಡು ಮೂರ್ನೇ ರೌಂಡ್ ಗೆ ಔಟಾಗಿ ಅಂಗಿಯೊಳಗೆ ತೂರ್ಕ್ಯಂಡು ಹೊರಗೆ ನಿಂತಿದ್ರು.  ಕೈಯಲ್ಲಾಗ್ಲೇ ಟೇಬಲ್ ಟೆನ್ನಿಸ್ ಬ್ಯಾಟ್ ಹಿಡಿದಿದ್ರು.   “ಏನ್ ಸಾರ್, ಶೆಟಲ್ ಬಿಟ್ಟು ಟಿ.ಟಿ. ಹಿಡ್ದೀರಿ?” ಅಂದೆ.    “ಹೌದೌದ್,  ನಂದು ಇಂಗ್ಲೀಷ್ ಟಿ.ಟಿ.   ನಿಮ್ದು  ಕನ್ನಡ ತೀಟಿ” ಅಂತ ಕಟೆದರು.  ಅಲ್ಲಿಗೆ ಯಾವ ಉದ್ದೇಶದಿಂದ ಹೇಳುತ್ತಿದ್ದಾರೆನ್ನುವುದು ಖಾತ್ರಿಯಾಯ್ತು.

ಅದಾಗಿ ಮರುದಿನ ದಿನಪತ್ರಿಕೆಗಳಲ್ಲಿ ಕ್ರೀಡಾಕೂಟದಲ್ಲಿ ವಿಶೇಷವಾಗಿ “ಮನಸೂರೆಗೊಂಡ ಛಾಯಚಿತ್ರ ಪ್ರದರ್ಶನ” ಎಂಬ ಸುದ್ದಿ ನನ್ನ ಹೆಸರಿನ ಸಮೇತ ಬಂತು ನೋಡಿ. ಎಲ್ಲೋ ಯಾರೋ ತೆಗೆದ ಛಾಯಚಿತ್ರಗಳನ್ನು ಖುಷಿಪಟ್ಟು ನೋಡುತ್ತಿದ್ದವನು ತೆಗೆದ ಫೋಟೋಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡ ವೀಕ್ಷಕರ ಚಿತ್ರಗಳು ನನ್ನನ್ನು ಎಲ್ಲಾ ಮೂದಲಿಕೆಗಳಿಂದ ಹೊರ ತಂದವು.   ಅದೇ ಸಂಜೆ ಸಾಹಿತ್ಯ ಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನ್ನು ಸನ್ಮಾನಿಸಿದ ನಂತರ ಸ್ನೇಹಿತ ಮತ್ತು ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಇವರು ಕ್ರೀಡಾಕೂಟದಲ್ಲಿ ವಿಶೇಷವಾಗಿ ಆಕರ್ಷಿಸಿ ಛಾಯಚಿತ್ರ ಪ್ರದರ್ಶಿಸಿದ ನನ್ನನ್ನು ಅತಿಥಿಗಳಿಂದ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.  ಎದುರಿಗೆ ಚಪ್ಪಾಳೆ ಸದ್ದು. ಆದರೆ, ಆ ಚಪ್ಪಾಳೆಯಲ್ಲಿ ಸದ್ದು ಮಾಡದೇ ಮನೆಯ ಗೋಡೆಯ ಮೇಲೆ ಚೌಕಟ್ಟಿನ ಫೋಟೋದೊಳಗೆ ನಗುತ್ತಿದ್ದ ಅಪ್ಪ ನೆನಪಾಗಿದ್ದ.  ಯಾಕಂದ್ರೆ ಅಪ್ಪ ಅಂಥವೇ ಫೋಟೋಗಳಿಗೆ ಫ್ರೇಮ್ ಹಾಕುವ ಕೆಲಸ ಮಾಡುತ್ತಿದ್ದ.  ನಾನು ಗ್ಲಾಸು, ಫ್ರೇಮುಗಳನ್ನು ಹೊತ್ತು ತರುತ್ತಿದ್ದೆ; ಚಿಕ್ಕವನಿದ್ದಾಗ. 
 
ಹವ್ಯಾಸ ಗುರುತಿಸಿದ ಆರಂಭದಲ್ಲೇ ಈ ತರಹದ ಸನ್ಮಾನಗಳು ಹುಮ್ಮಸ್ಸು ನೀಡುತ್ತವೆ. ಗೆಳೆಯ ನಾಗರಾಜ ಜುಮ್ಮಣ್ಣವರ್ ಖುಷಿಪಟ್ಟೇ ಇದನ್ನೆಲ್ಲಾ ಮಾಡಿದ್ದರು.  ನನಗೆ ಮಾತ್ರ ಮಾಹಿತಿ ಇದ್ದಿಲ್ಲ. ಆದರೆ, ಸನ್ಮಾನ ಮಾಡುವವರ ಸಾಲಿನಲ್ಲೋ ಅಥವಾ ಹಿಂದೆ ನನಗೆ ಶಾಲು ಹೊದೆಸುವ ಸಮಯದಲ್ಲಿ ಕುಳಿತಾಗ ಯಾರೋ ಅಂದರು “ಹ್ಹ ಹ್ಹ ಹ್ಹ… ಛಾಯಚಿತ್ರ ಅಂತಪ್ಪ…. ಹಾಕ್ರಿ ಹಾಕ್ರಿ…”. ಅಷ್ಟೇ. ಆದರೆ, ಇಷ್ಟು ಮಾತ್ರ ಸತ್ಯ ವೇದಿಕೆ ಮೇಲಿದ್ದ ಕೆಲ ಅತಿಥಿಗಳು ಛಾಯಚಿತ್ರಗಳ ಪ್ರದರ್ಶನ ನೋಡಿದವರಲ್ಲ. ಆವತ್ತು ರಾತ್ರಿ ಗೆಳೆಯರ ಜೊತೆ ಊಟಕ್ಕೆ ಹೋದಾಗ ಊಟ ಮಾಡಲಾಗದೇ ಹ್ಹ.ಹ್ಹ.ಹ್ಹ. ಧ್ವನಿ ಕೇಳಿದ್ದಕ್ಕೋ, ಅಪ್ಪನ ನೆನಪಾಗಿದ್ದಕ್ಕೋ ಅಥವಾ ಬದುಕಿದ್ದ ಅವ್ವನನ್ನು ಸಮಾರಂಭಕ್ಕೆ ಕರೆದೊಯ್ಯಲಿಲ್ಲವೆಂಬುದಕ್ಕೋ ಒಟ್ಟಿನಲ್ಲಿ  ಬಯಲಲ್ಲಿ ನಿಂತು ಬಿಕ್ಕಳಿಸಿಬಿಟ್ಟೆ.   ಎಲ್ಲರೂ ಊಟ ಮುಗಿಸಿ ಹೊರಟ ನಂತರ ಎಷ್ಟೋ ಹೊತ್ತು ನಾನು ಆ ಢಾಬಾ ಪಕ್ಕದ ರಸ್ತೆಯಲ್ಲಿ ನಿಂತೇ ಇದ್ದೆ, ಬೆಂಕಿಯ ತುಂಡೊಂದನ್ನು ಬಾಯಿಗಿಟ್ಟು; ಕಂಡಲ್ಲಿ, ಕಂಡವರ ಎದುರಲ್ಲಿ ಕಣ್ಣೀರು ಕೆಡವಿದ ತಪ್ಪಿನ ಪ್ರಾಯಶ್ಚಿತ್ತವಾಗಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
Anitha Naresh Manchi
Anitha Naresh Manchi
9 years ago

ಒಳ್ಳೆಯ ಲೇಖನ.. ಲೋಕದ ಮಾತಿಗೆ ಕಿವುಡಾಗಿರುವುದು ನಮ್ಮ ಹವ್ಯಾಸದ ಬೆಳವಣಿಗೆಗೆ ಒಳ್ಳೆಯದು.. ನಿಮ್ಮ ಉತ್ತಮ ಚಿತ್ರಗಳನ್ನು ನೋಡಿ ನಾನು ಸಂತಸಪಟ್ಟಿದ್ದೇನೆ. ಶುಭವಾಗಲಿ 

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ತುಂಬಾ ಧನ್ಯವಾದಗಳು ಮೇಡಂ…..

C.M.Srinivasa
9 years ago

Its good article sir

Shivashanakar banagar
Shivashanakar banagar
9 years ago

ಧನ್ಯವಾದಗಳು ನೆನೆಕೆಗೆ… (y)

ganesh
ganesh
9 years ago

ಅಮರ್ ದೀಪ್ ರವರೆ, ನಿಮಗೆ ಅಭಿನಂದನೆಗಳು, ನಿಮ್ಮ ಹವ್ಯಾಸಿ ಛಯಾಚಿತ್ರ ಕಲೆಗೆ ಮೊದಲು ನನ್ನ ಕಡೆಯಿಂದ ಮನಪೂರ್ವಕ ಮೆಚ್ಚುಗೆಗಳು.  ನೋಡಿ ಒಂದು ವಿಷಯದ ಬಗ್ಗೆ ಬೇರೆಯವರು ನಮ್ಮನ್ನು ನೋಡಿ ಆಡಿಕೊಳ್ಳುತ್ತಿದ್ದಾರೆ ಎಂದರೆ ನಿಮ್ಮಲ್ಲಿರುವ ಒಂದು ವಿಶೇಷತೆ ಅವರಲ್ಲಿ ಇಲ್ಲ ಎಂಬುದು ಸತ್ಯ. ಹಗಾಗಿ ಲೋಕ ಕೊಂಕಿಗೆ ಬೆಲೆ ಕೊಡದೆ ನಿಮ್ಮ ಕಾಯಕ ಮಾಡುತ್ತಿದ್ದೀರಿ, ಮನಸಂತೋಷಕ್ಕಿಂತ ದೊಡ್ಡ ಸನ್ಮಾನ ಇನ್ನಿಲ್ಲ. 

Rukmini Nagannavarಋ
Rukmini Nagannavarಋ
9 years ago

ಒಳ್ಳೆಯ ಲೇಖನ ಸರ್… ಲೋಕದ ಲೊಂಕ ತೀಡುವಲ್ಲಿ ನಾವು ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಬಾರದ..

ನಿಮ್ಮ ಛಾಯಾಗ್ರಹಣದ ಕುರಿತು ಕೇಳಿ ತುಂಹ ಖುಷಿ ಆಯ್ತು..

kotresh.s
kotresh.s
9 years ago

ಅಮರ್
ತಮ್ಮ ಲೇಖನ ಚಿತ್ರಗಳ ಪ್ರದರ್ಶನದ ಸ್ಪಸ್ಟಮಾಹಿತಿಯನ್ನು ಹೊರಹಾಕಿತು. ಆತ್ಮ ಸಮಾಧಾನಕ್ಕಿನ್ತಲೂ ದೊಡ್ಡ ಖುಶಿ ಯಾವುದೂ ಇಲ್ಲ. ಜಸ್ಟ್ ಎನ್ಜಾಯ್ ಮಾಡೀ

Dr. Kotraswamy M
Dr. Kotraswamy M
9 years ago

Udaaseena-upahaasa-viroadha-sweekaara ellavoo jeevanada avibhaajya angagalu Amar! Keep the good work going. Barahada moolaka nimma havyaasa haagoo kaaryakramada hindu-mundu galannu ele-eleyaagi parichayisiddeeri.

Srinivas Pandit
Srinivas Pandit
8 years ago

ಲೇಖನ ಬಹಳ ಬಹಳ ಚನ್ನಾಗಿದೆ. ನಿಮ್ಮದು ಅಲ್ಲ ನಮ್ಮ ಬಾಲ್ಯದ ಬದುಕು ನೆನಪಿಸಿದಿರಿ. ನಿಮ್ಮ ಬರಹ ಓದಿದ ಮೇಲೆ ಬಿಚಿ ಅವರು ನೆನಪಾದ್ರು.ಶುಭವಾಗಲಿ.

9
0
Would love your thoughts, please comment.x
()
x