ಹಾಯ್ ಫ್ರೆಂಡ್ಸ್,
ಹೇಗಿದ್ದೀರ? ಎಷ್ಟೊಂದು ದಿನಗಳೇ ಆಗಿಹೋಯಿತು ನಿಮ್ಮೊಡನೆ ಸರಿಯಾಗಿ ಮಾತನಾಡಿ. ಒಂದಷ್ಟು ವರುಷಗಳ ಹಿಂದೆ ಹೀಗೆ ಸುಮ್ಮನೆ ಕಣ್ಣಿಗೆ ಬಿದ್ದ ಫೇಸ್ಬುಕ್ ನಲ್ಲಿ ಅಪರಿಚಿತರಾಗಿದ್ದ ನಾವು ಪರಿಚಿತರಾಗುತ್ತ ಹೋದ್ವಿ. ಈ ಪರಿಚಯಗಳಿಗೆ ಈಗ ವರುಷಗಳ ಸಂಭ್ರಮ. ಮೊನ್ನೆ ಮೊನ್ನೆ ಫೇಸ್ ಬುಕ್ ನಮ್ಮ ಗೆಳೆತನಗಳನ್ನು ಪುಟ್ಟ ವಿಡಿಯೋ ರೂಪದಲ್ಲಿ ಸಮ್ಮರಿ ಮಾಡಿ ನಮ್ಮ ಮುಂದಿಟ್ಟಿದೆ. ಈ ತರಹದ ವಿಡಿಯೋವನ್ನು ಫೇಸ್ಬುಕ್ ನೀಡುತ್ತಿರುವುದು ಇದು ಮೊದಲಲ್ಲ. ಆದರೂ ಯಾಕೋ ಈ ವಿಡಿಯೋಗಳು ವಿಶೇಷ ಅನಿಸುತ್ತಿದೆ. ಯಾಕೆಂದರೆ ಈ ವಿಡಿಯೋಗಳು ನಮ್ಮದೇ ಆದ ಫೇಸ್ ಬುಕ್ ದಿನಗಳ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವಂತೆ ಮಾಡುತ್ತಿವೆ. ಈ ಪುಟ್ಟ ವಿಡಿಯೋಗಳಲ್ಲಿ ನಮ್ಮ ಬದುಕಿನ ಒಂದಷ್ಟು ಮುಖ್ಯಘಟ್ಟಗಳನ್ನು ಫೋಟೋಗಳಲ್ಲಿ ತೋರಿಸಲಾಗಿದೆ. ಇವು ನಾವೇ ಫೇಸ್ ಬುಕ್ ನಲ್ಲಿ ಗೆಳೆಯರೊಡನೆ ಹಂಚಿಕೊಂಡ ನಮ್ಮ ಬದುಕಿನ ಘಟ್ಟಗಳು ಎಂಬುದು ಗಮನಾರ್ಹ. ಈ ಎಲ್ಲಾ ಘಟ್ಟಗಳನ್ನು ಒಂದಷ್ಟಾದರೂ ಎಫ್ ಬಿ ಗೆಳೆಯರು ಲೈಕು, ಕಾಮೆಂಟ್ ಮಾಡಿಯೋ ಅಥವಾ ನೋಡಿಯೂ ಸುಮ್ಮನಿದ್ದೋ, ಒಂದಲ್ಲ ಒಂದು ರೀತಿಯಲ್ಲಿ ಗಮನಿಸಿರುತ್ತಾರೆ ಅಥವಾ ಆ ಘಟ್ಟದ ಭಾಗವಾದರೂ ಆಗಿರುತ್ತಾರೆ. ಹೀಗಿರುವಾಗ ಎಷ್ಟೋ ಬಿಲಿಯನ್ ಜನರ ನಡುವೆ ನಾವು ನೀವಷ್ಟೇ ಪರಿಚಯವಾಗಿದ್ದು ನಿಜಕ್ಕೂ ಅಚ್ಚರಿಯ ಮತ್ತು ಖುಷಿಯ ಸಂಗತಿ.
ನೆನಪಿದೆಯಾ ನಾವು ಎಫ್ ಬಿ ಯಲ್ಲಿ ಪರಿಚಯವಾದ ಒಂದಷ್ಟು ವರುಷಗಳ ಹಿಂದೆ ಜಾತಿ, ಮತ, ಸಂಪ್ರದಾಯ, ಧರ್ಮ, ರಾಜಕೀಯ ಅನ್ನೋ ಯೋಚನೆಗಳೇ ಇಲ್ಲದೆ ನಮ್ಮ ನಡುವೆ ಗೆಳೆತನಗಳು ಮೂಡಿದ್ದವು. ಬೆಳಿಗ್ಗೆ ಅಥವಾ ಸಂಜೆ ಆಯ್ತು ಎಂದರೆ ಹಾಯ್ ಹೇಗಿದ್ದೀರ, ಕಾಫಿ ಆಯಿತಾ? ಏನು ಸಮಾಚಾರ? ಅನ್ನುವ ಪುಟ್ಟ ಸಂದೇಶಗಳನ್ನು ಆನ್ ಲೈನ್ ನಲ್ಲಿ ಸಿಕ್ಕವರಿಗೆ ಕೇಳುತ್ತಾ ಇದ್ವಿ. ಕೆಲವು ಸಲ ಈ ತರಹದ ಮೆಸೇಜ್ ಗಳಿಗೆ ಹೊತ್ತುಗೊತ್ತು ಅನ್ನುವುದು ಇರುತ್ತಿರಲೇ ಇಲ್ಲ. ಮುಗಿಸಿದ ಡಿಗ್ರಿಗಳು, ಸಿಕ್ಕ ಕೆಲಸ, ದೊರಕಿದ ಅಥವಾ ದೊರೆಯದ ಪ್ರೀತಿ, ಎಂಗೇಜ್ಮೆಂಟ್, ಕಟ್ಟಿಕೊಂಡ ಸಂಸಾರ, ಹುಟ್ಟಿದ ಮಕ್ಕಳು, ಬೆಳೆದ ಮಕ್ಕಳ ಹುಟ್ಟುಹಬ್ಬ, ಖರೀದಿಸಿದ ಕಾರು, ಬೈಕು, ಕನಸಿನ ಮನೆ, ದಾಂಪತ್ಯದ ವರ್ಷಾಚರಣೆ, ಯಾವುದೋ ಊರಿನ ಪಯಣ, ಒಂಟಿತನ, ಬೇಸರಿಕೆ, ನಮ್ಮೂರು, ನಮ್ಮ ಜನ, ಹೊಲ ಮನೆ, ಊರಿನ ಹಬ್ಬ, ನಗರಗಳ ನರಕ ಸಂಭ್ರಮ, ಹೀಗೆ ಲೆಕ್ಕವಿಲ್ಲದಷ್ಟು ವಿಷಯಗಳ ಕುರಿತ ಸ್ಟೇಟಸ್ ಗಳು ನಮಗೆ ಅಕ್ಷರ ರೂಪದಲ್ಲೋ ಫೋಟೋಗಳ ರೂಪದಲ್ಲೋ ಕಾಣಸಿಗುತ್ತಿದ್ದವು. ಇವತ್ತಿಗೂ ಸಿಗುತ್ತವೆ. ನಾವು ಒಂದು ಕುಟುಂಬದ ಸದಸ್ಯರಂತೆ ಖುಷಿಯ ಸಂಗತಿಗಳನ್ನು ಸಂಭ್ರಮಿಸಿ, ದುಃಖಕ್ಕೆ ಸಾಂತ್ವನ ನೀಡುವ ಜಸ್ಟ್ ಎಫ್ ಬಿ ಗೆಳೆಯರಾಗಿದ್ದೆವು. ಆಗಿದ್ದೇವೆ ಕೂಡ. ಎಷ್ಟೊಂದು ಗೆಳೆತನಗಳು ಎಫ್ ಬಿ ಎಂಬ ಚೌಕಟ್ಟನ್ನು ಮೀರಿ ಒಳ್ಳೊಳ್ಳೆಯ ಸಂಬಂಧಗಳನ್ನು ಹುಟ್ಟು ಹಾಕಿರುವ ಸಾಕಷ್ಟು ಉದಾಹರಣೆಗಳು ಈ ಎಫ್ ಬಿ ಯಲ್ಲೇ ಕಾಣಸಿಗುತ್ತವೆ. ನಾವು ಅಂತಹ ಸಂಬಂಧಗಳಿಗೆ ಪ್ರತ್ಯಕ್ಷವಾಗೋ ಪರೋಕ್ಷವಾಗೋ ಕಾರಣೀಭೂತರೋ ಸಾಕ್ಷಿಗಳೋ ಆಗಿರುತ್ತೇವೆ. ಯಾಕೆಂದರೆ ಹೆಚ್ಚಿನವರು ಎಫ್ ಬಿ ಯಲ್ಲಿ ಹುಡುಕಿಕೊಂಡಿದ್ದು ಗೆಳೆತನವನ್ನು, ಮಾನವೀಯತೆಯನ್ನು ಅಷ್ಟೆ. ಇವತ್ತು ಮಾನವೀಯತೆಯನ್ನು ಮಿಡಿಯುವ ಮನಸ್ಸುಗಳು ನಮ್ಮ ನಡುವೆ ಸಾಕಷ್ಟು ಕಾಣಸಿಗುತ್ತವೆ ಎಂದರೆ ಅದರಲ್ಲಿ ಅವರನ್ನು ನಮಗೆ ಪರಿಚಯಿಸಿದ ಎಫ್ ಬಿ ಯ ಪಾಲು ಒಂದಷ್ಟು ಇದೆ ಎಂದರೆ ತಪ್ಪಾಗಲಾರದು..
ಇವುಗಳ ಜೊತೆಗೆ ಕವಿತೆ ಬರೆಯೋರು, ಹಾಡು ಹಾಡೋರು, ಕಥೆ ಕಟ್ಟೋರು, ಚಿತ್ರ ಬಿಡಿಸೋರು ಹೀಗೆ ನಮ್ಮ ನಡುವೆ ಅಗಾಧವಾಗ ಪ್ರತಿಭೆ ಉಳ್ಳ ಕಲಾವಿದರು ಇರುವುದು ನಮ್ಮ ಅರಿವಿಗೆ ಬರುತ್ತಲೇ ಸರಿರಾತ್ರಿಯಲ್ಲಿ ಚಂದದ ಕವಿತೆಗಳನ್ನು ಓದಿ, ಇಲ್ಲ ಹಾಡುಗಳನ್ನು ಕೇಳಿ ಶೇರ್ ಮಾಡಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದ ಹುಡುಗರು ಹಂತ ಹಂತವಾಗಿ ಎತ್ತರಕ್ಕೆ ಏರುತ್ತಾ ಹೋದದನ್ನು ನಾವು ನೀವು ನೋಡಿದ್ದೇವೆ. ನಮ್ಮ ನಡುವಿನ ಸಾಮಾನ್ಯ ಹುಡುಗರು ಅಸಮಾನ್ಯ ಸಾಧನೆ ಮಾಡಿದಾಗ ಅವರನ್ನು ಅಭಿನಂದಿಸಲು ನಿಂತವರು ಎಫ್ ಬಿ ಗೆಳೆಯರೇ ಅಲ್ಲವೇ? ಎಫ್ ಬಿ ಗೆ ಬಂದ ಮೇಲೆ ತುಂಬಾ ಬೆಳೆದು ಯಶಸ್ಸಿನ ಶಿಖರ ಮುಟ್ಟಿದ ಎಷ್ಟೋ ಉದಾಹರಣೆಗಳು ನಮಗೆ ಕಾಣಸಿಗುತ್ತವೆ.
ಫ್ರೆಂಡ್ಸ್, ನಿಜ ಹೇಳಬೇಕು ಎಂದರೆ ನಮ್ಮನ್ನು ಮೊದಲಿಗೆ ಬೆಸೆದಿದ್ದು ಆಫೀಸಿನ ಇಂಟರ್ನೆಟ್ ಗಳು. ಆಫೀಸಿನ ಇಂಟರ್ನೆಟ್ ಗಳು ಇಲ್ಲದಿದ್ದ ಸಮಯದಲ್ಲಿ ನೆಟ್ ಕೆಫೆ ಅಥವಾ ಇಂಟರ್ ನೆಟ್ ಸೆಂಟರ್ ನಲ್ಲಿ ಚಾಟಿಂಗ್ ಮಾಡಲೆಂದೋ ಇಲ್ಲ ನಿಮ್ಮ ಅಪ್ಡೇಟ್ಸ್ ನೋಡಲೆಂದೋ ಇಂಟರ್ನೆಟ್ ಸೆಂಟರ್ ಗಳನ್ನು ಹುಡುಕಿಕೊಂಡು ಹೋದ ದಿನಗಳೂ ಇವೆ ಎಂದರೆ ನೀವು ನಂಬಲೇ ಬೇಕು. ಅವತ್ತು ಗಂಟೆಗೆ ಹತ್ತೋ ಹದಿನೈದೋ ಅಬ್ಬಬ್ಬಾ ಅಂದರೆ ಇಪ್ಪತ್ತು ರೂಪಾಯಿ ಇದ್ದ ಇಂಟರ್ನೆಟ್ ರೇಟ್ ಇವತ್ತು ಹೆಚ್ಚೇನೂ ಆಗಿಲ್ಲ. ಆಫೀಸಿನಲ್ಲಿ ಯಾವತ್ತಿಗೂ ಫೇಸ್ ಬುಕ್ ಉಪಯೋಗಿಸಬಾರದು ಅಂತ ಒಂದು ದಿನ ಅನಿಸಿದ ಮೇಲೆ ಮನೆಯ ಲ್ಯಾಪ್ ಟಾಪಿಗೆ ಡಾಂಗಲ್ ಗಳು ಬಂದಿದ್ದು. ಸುಮಾರು ಒಂದೂವರೆ ಸಾವಿರ ರೂಪಾಯಿ ಬೆಲೆಯ ಡಾಂಗಲ್ ಗಳಿಗೆ ಯಾವುದೋ ಸಿಮ್ ಹಾಕಿಕೊಂಡು ರಿಚಾರ್ಜ್ ಮಾಡಿಸಿ ನೆಟ್ ಸ್ಲೋ ಆಗಿರೋದರನ್ನು ನೋಡಲಾರದೆ ರಿಚಾರ್ಚ್ ಮಾಡಿಸಿ ಹಣ ಕಳೆದುಕೊಂಡು ಒದ್ದಾಡಿದ ದಿನಗಳು ಇವೆ. ತದನಂತರ ಡಾಂಗಲ್ ಗಿಂತ ಮೋಡಮ್ ಬೆಸ್ಟ್ ಅಂದುಕೊಂಡು 2013 ರ ವೇಳೆಗೆ ಮನೆಗೆ ಬಿಎಸ್ ಎನ್ ಎಲ್ ಮೋಡಮ್ ಹಾಕಿಸಿಕೊಂಡು ಎಫ್ ಬಿ ಗಾಗಿಯೂ ಇಂಟರ್ನೆಟ್ ಉಪಯೋಗಿಸಿದ್ದು ಈಗಲೂ ಹಸಿ ಹಸಿ ನೆನಪು. ಹೆಚ್ಚೇನಲ್ಲ ಮೂರ್ನಾಲ್ಕು ವರ್ಷಗಳ ಹಿಂದೆ ಯಥೇಚ್ಚವಾಗಿ ಇದ್ದುದ್ದು ಬೇಸಿಕ್ ಸೆಟ್ ಮೊಬೈಲ್ ಗಳು. 2014ರ ಮೊದಲಿಗೆ ಗೆಳೆಯರು “ಏನಪ್ಪಾ ಇನ್ನು ಹಳೇ ಬೇಸಿಕ್ ಸೆಟ್ ಉಪಯೋಗಿಸ್ತೀಯ? ಒಂದು ಆಂಡ್ರ್ಯಾಯ್ಡ್ ಮೊಬೈಲ್ ತಗೊಳ್ಳಪ್ಪ. ವಾಟ್ಸ್ ಅಪ್ ಯೂಜ್ ಮಾಡಬಹುದು" ಅನ್ನೋವಾಗ ಆಂಡ್ರ್ಯಾಯ್ಡ್ ಮತ್ತು ವಾಟ್ಸ್ ಅಪ್ ನನ್ನ ಪಾಲಿಗೆ ಹೊಸ ಪದಗಳಾಗಿದ್ದವು. ಅವರ ಒತ್ತಾಯಕ್ಕೆ ಮಣಿದು ಸುಮಾರು ಆರು ಸಾವಿರ ಬೆಲೆಯ ಆಂಡ್ರ್ಯಾಯ್ಡ್ ಮೊಬೈಲ್ ಅನ್ನು ಕೊಂಡಾಗ ಎಷ್ಟೊಂದು ಖರ್ಚು ಮಾಡಿಬಿಟ್ಟೆನಲ್ಲ ಅನಿಸುತ್ತಿತ್ತು. ಆಗಿನ್ನೂ ಫ್ರಂಟ್ ಕ್ಯಾಮೆರಾ ಅನ್ನೋ ಕಾನ್ಸೆಪ್ಟ್ ಮೊಬೈಲ್ ಗಳು ಇನ್ನೂ ಬಂದಿರಲಿಲ್ಲ ಅನಿಸುತ್ತು. 2015ರ ವೇಳೆಗೆ ಸೆಲ್ಫಿ ಕ್ರೇಜ್ ಶುರು ಆಯಿತು. ವಾಟ್ಸ್ ಅಪ್ ಕೂಡ ಒಂದು ಮಟ್ಟಕ್ಕೆ ಫೇಸ್ ಬುಕ್ ಅನ್ನು ಹಿಂದೆ ಹಾಕಿ ಮಟ್ಟಸವಾಗಿ ಬೆಳೆದಿತ್ತು. ಇದೇ ಸಮಯಕ್ಕೆ ಫೇಸ್ ಬುಕ್ ಒಂತರಾ ಕೆಸರೆರೆಚಾಟದ ರಣರಂಗವಾಯಿತು. ಆಗ ಮುಖ ಮಾಡಿದ್ದು ಎಫ್ ಬಿ ಗಿಂತ ವಾಟ್ಸ್ ಅಪ್ ಕಡೆಗೆ ಹೆಚ್ಚು.
ಫೇಸ್ ಬುಕ್ ನಲ್ಲಿ ಪರಿಚಯವಾದ ಅನೇಕ ಸ್ನೇಹಿತರ ಮೊಬೈಲ್ ನಂಬರ್ ಬಳಿ ಇದ್ದ ಕಾರಣಕ್ಕೆ ವಾಟ್ಸ್ ಅಪ್ ಇಸ್ಟಾಲ್ ಆದ ಕೂಡಲೇ ವಾಟ್ಸ್ ಅಪ್ ನಲ್ಲಿ ಯಾರ್ಯಾರು ವಾಟ್ಸ್ ಅಪ್ ಉಪಯೋಗಿಸುತ್ತಿದ್ದಾರೆ ಅಂತ ತಿಳಿದುಬಿಡುತ್ತಿತ್ತು. ಯಾಕೋ ಫೇಸ್ ಬುಕ್ ಗಿಂತ ವಾಟ್ಸ್ ಅಪ್ ಹೆಚ್ಚು ಆತ್ಮೀಯವಾಯಿತು ಎನ್ನಬಹುದು. ಸುಮ್ಮಸುಮ್ಮನೆ ಎಫ್ ಬಿ ಯಲ್ಲಿ ಹಾಯ್ ಊಟ ಆಯಿತಾ ಹೇಗಿದ್ದೀರ ಅಂತೆಲ್ಲಾ ಮೆಸೇಜ್ ಹಾಕಬೇಡಿ ಅಂತ ಕೆಲವರು ಬೋರ್ಡ್ ನೇತು ಹಾಕಿಕೊಂಡರು. ಬಹುಶಃ ಅವರಿಗೆ ಗೊತ್ತಿರದ ಸಂಗತಿ ಎಂದರೆ ಒಂದು ಕಾಲದಲ್ಲಿ ಇದೇ ಎಫ್ ಬಿ ಯಲ್ಲಿ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳಲು ಆಶ್ರಯಿಸಿದ್ದು ಇದೇ ಎಫ್ ಬಿ ಮೆಸೇಜ್ಗಳನ್ನು. ಇವತ್ತಿಗೂ ಎಫ್ ಬಿ ಮೆಸೇಜ್ ಗಳನ್ನು ಒಮ್ಮೆ ಸ್ಕ್ರೋಲ್ ಮಾಡಿ ನೋಡಿದರೆ ನಾವು ಎಷ್ಟೊಂದು ಜನಗಳ ಜೊತೆ ಮೆಸೇಜ್ ಮಾಡಿರುವುದು ಅರಿವಿಗೆ ಬರುತ್ತದೆ. ಆ ಮೆಸೇಜ್ ಗಳು ನಿಜಕ್ಕೂ ಗೆಳೆತನ ಒಂದು ಮಟ್ಟಕ್ಕೆ ಬೆಳೆಯಲು ಕಾರಣವಾದ ಮೆಸೇಜ್ ಗಳು ಎಂದರೆ ತಪ್ಪಾಗಲಾರದು. ಖುಷಿಯ ಸಂಗತಿ ಎಂದರೆ ಎಫ್ ಬಿ ನಮ್ಮ ಪ್ರತಿ ಮೆಸೇಜ್ ಗಳನ್ನು ಭದ್ರವಾಗಿಟ್ಟಿದೆ. ಎಂದಾದರೂ ಸುಮ್ಮನೆ ಕಣ್ಣಾಡಿಸಿದರೆ ಅಯ್ಯೋ ಇವರ ಪರಿಚಯ ಇತ್ತಾ ಮೊದಲೇ ಅಂತ ಆಶ್ಚರ್ಯ ಆಗುತ್ತೆ.
ಹೀಗಿರುವಾಗ ಯಾಕೋ ನಾವು ಪರಿಚಿತರಲ್ಲವೇನೋ ಎನ್ನುವಂತೆ ಈಗೀಗ ವರ್ತಿಸುತ್ತೇವೆ. ಹೆಸರುಗಳಲ್ಲಿ ಜಾತಿ ಧರ್ಮ ರಾಜಕೀಯದ ಒಲವು ಹೀಗೆ ಒಂದಲ್ಲಾ ಒಂದನ್ನು ಹುಡುಕಿ ವ್ಯಕ್ತಿಯನ್ನು ದೂರ ಇಡುತ್ತಾ ನಾವು ಸಹ ಒಬ್ಬರಿಂದ ಒಬ್ಬರು ದೂರ ಸರಿಯುತ್ತಿದ್ದೇವೆ ಅನಿಸುತ್ತೆ. ಆದರೂ ಇತ್ತೀಚೆಗೆ ಎಫ್ ಬಿ ಯಲ್ಲಿ ಹರಿದಾಡುವ ವಿಡಿಯೋಗಳಲ್ಲಿ ಮಾನವೀಯತೆಯ ಸಂದೇಶಗಳು ವ್ಯಕ್ತಿಗಳ ಸಾಧನೆಗಳು, ಕಷ್ಟದಲ್ಲಿ ಇದ್ದವರಿಗೆ ಕೈ ಚಾಚುತ್ತಿರುವ ಸಹಾಯ ಹಸ್ತಗಳು, ಇದು ಕೆಡುಕು ಇದು ಒಳಿತು ಎನ್ನುವ ಪಾಠಗಳು ನಮಗೆ ದಕ್ಕುತ್ತಲೇ ಇವೆ. ಜಾತಿ, ಧರ್ಮ, ಮತ್ತು ರಾಜಕೀಯಗಳು ನಮ್ಮನ್ನು ಬೇರೆ ಮಾಡಿದ್ದಷ್ಟು ಬೇರೆ ಯಾವ ವಿಷಯವೂ ವ್ಯಕ್ತಿಗಳ ನಡುವೆ ಕಂದಕವನ್ನು ಬಗೆದಿಲ್ಲ. ಆದರೂ ಇವೆಲ್ಲವನ್ನು ಮೀರಿ ನಮ್ಮ ನಡುವೆ ಗೆಳೆತನಗಳು ಬೆಳೆಯುತ್ತಲೇ ಇವೆ. ಈ ಗೆಳೆತನಗಳು ಎಂದಿಗೂ ಶಾಶ್ವತವಾಗಿರಲಿ. ಯಾಕೆಂದರೆ ನಾವೇ ಕಂಡ ಹಾಗೆ ನಮ್ಮ ನಡುವೆ ಲವಲವಿಕೆಯಿಂದ ತುಂಬಾ ಖುಷಿಯಿಂದ ಇದ್ದ ಎಷ್ಟೋ ಸಹೃದಯಿಗಳು ಅನಾರೋಗ್ಯದ ಕಾರಣಕ್ಕೋ ಇನ್ಯಾವುದೋ ಕಾರಣಕ್ಕೋ ನಮ್ಮ ನಡುವೆ ಈ ದಿನಗಳಲ್ಲಿ ಇಲ್ಲ ಎನ್ನುವುದ ನೆನೆಸಿಕೊಂಡಾಗ ಯಾಕೋ ಭಾವುಕತನ ಮನಸ್ಸನ್ನು ಒದ್ದೆ ಮಾಡುತ್ತೆ. ಇಲ್ಲಿ ಯಾವುದೋ ಕಾರಣಕ್ಕೆ ನಮ್ಮ ನಡುವೆ ಉಂಟಾಗೋ ಜಗಳಗಳು ಮನಸ್ತಾಪಗಳು ಗೆಳೆತನಗಳನ್ನು ಮುರಿಯದಿರಲಿ. ಎಫ್ ಬಿ ಯಲ್ಲಿ ದೊರೆತ ಈ ಗೆಳೆತನಗಳು ಹೆಚ್ಚು ಕಾಲ ನಮ್ಮ ಜೊತೆ ಉಳಿಯಲಿ ಎಂಬುದು ಈ ಲೇಖನದ ಆಶಯ. ಈ ಲೇಖನದ ಜೊತೆ ಹಳೆಯದೊಂದು ಎಫ್ ಬಿ ಕುರಿತ ಲೇಖನ ನಿಮಗಾಗಿ……
ನಲ್ಮೆಯಿಂದ
ನಿಮ್ಮ ಪ್ರೀತಿಯ
ನಟರಾಜು
ಬಹಳ ದಿವಸದ ನಂತ್ರ ಸಂಪಾದಕರಿಂದೊಂದು ಪತ್ರ. ಖುಷಿ ಇದೆ.
ತುಂಬ ದಿನಗಳ ನಂತರ ನಿಮ್ಮ ಲೇಖನ ಒದುತ್ತಿದ್ದೆನೆ ಖುಷಿ ಆಯ್ತು ಹಿಂದೊಮ್ಮೆ ನಿಮ್ಮ ಇಂತಹ ಲೇಖನ ನಮ್ಮ ಗೆಳೆತನಕ್ಕೆ ಕಾರಣ ವಾಗಿದ್ದು ಹೀಗೆ ಬರೆಯುತ್ತಿರುವ ನಮ್ಮ ಗೆಳೆತನ ಶಾಶ್ವತವಾಗಿರಲಿ
ಚೆನ್ನಾಗಿದೆ, ಧನ್ಯವಾದಗಳು
ಚೆನ್ನಾಗಿದೆ ಸರ್ ನಿಮ್ಮ ಲೇಖನ ಓದಿ ಖುಶಿಯಾಯ್ತು…
– ಬಿ.ಎನ್. ವಾಸರೆ, ಪತ್ರಕರ್ತ
(9902043450)