ಹಾಸ್ಯ

ಫಿಟ್ಟಿಂಗ್ ನಲ್ಲಿ ಫಿಕ್ಸಿಂಗ್ ಫಿಕ್ಸು..!: ಎಂ. ಆರ್. ಸಚಿನ್


ಇವ ಸುಮ್ನೆ ಗೀಚ್ತಾನೆ, ಸೀರಿಯಸ್ ಆಗ್ಬೇಡಿ..!!

ಮೊನ್ನೇ ದಾರೀಲಿ ಒಬ್ನೇ ನಡೆದುಕೊಂಡು ಹೋಗ್ತಾ ಇದ್ದೇ. ಎಳಿಯೋಕೆ ಯಾರ ಕಾಲೂ ಸಿಗದೇ, ಜೊತೆಗೆ ಯಾರೂ ಇಲ್ದೆ, ಸಿಕ್ಕಾಪಟ್ಟೆ ಬೋರಾಗ್ತಾ ಇತ್ತು. ಅದೇ ಸಮಯಕ್ಕೆ ಸರಿಯಾಗಿ ಒಂದು ನಾಲ್ಕೈದು ಮಂದಿ ಕೈಲಿ ಕೆಲ ಕ್ರಿಕೇಟ್ ಆಟಗಾರರ ಮಕಕ್ಕೆ ಮಸಿ ಬಳಿದ ಪಟ, ಬ್ಯಾನರ್ ಎಲ್ಲ ಹಿಡಿದು, ಘೋಷಣೆ ಕೂಗುತ್ತಾ ತಮ್ಮ ಹಳೇ ಚಪ್ಪಲಿಯಿಂದ ಪಟಪಟ ಅಂತಾ ಬಾರಿಸುತ್ತಿದ್ದರು. ನಾ ಕೇಳಿದೆ "ಸಾರ್ ಎಂಥಾ ಆಗ್ತಾ ಉಂಟು ಇಲ್ಲಿ? ನೀವ್ಯಾಕೆ ಈ ಪರಿ ರೋಚ್ಚಿಗೆದ್ದಿರೋದು? ಸ್ವಲ್ಪ ನಂಗೂ ಹೇಳಿ ನಾನೂ ಬರುವೆ ನಿಮ್ಮ ಜೊತೆ" ಅಂತ ಸುಮ್ನೆ ಅಂದೆ ಅಷ್ಟೆ..!

"ಅದೇ ಕಣ್ರೀ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದಾರೆ ಈ **ಮಕ್ಳು, ದುಡ್ಡು ತಗೊಂಡು, ಇಡೀ ದೇಶದವರಿಗೇ ಮೋಸ ಮಾಡಿಬಿಟ್ರು. ಇವರ ಮೇಲೇ ನಂಬಿಕೆ ಇಟ್ಟು ಆರಾಧಿಸುತ್ತಿದ್ದ ನಮ್ಮಂತ ಅಸಂಖ್ಯಾತ ಅಭಿಮಾನಿಗಳಿಗೆ ನಂಬಿಕೆ ದ್ರೋಹ ಮಾಡಿಬಿಟ್ರು ಇವರು. ಇವರನ್ನ ಸುಮ್ನೇ ಬಿಡಬಾರದು. ಇವರಿಗೆ ಉಗ್ರ ಶಿಕ್ಷೆಯಾಗಬೇಕು, ನೀನೂ ಬಾ, ಈ ಫೋಟೋಗೆ ಒಂದೆರಡು ಏಟು ಹಾಕ್ತಾ ಇರು, ಅಷ್ಟರಲ್ಲಿ ಟೀವೀಯವರು, ಪೇಪರ್‍ನವರು ಎಲ್ರೂ ಬರ್ತಾರೆ ಆಮೇಲೆ ಒಂದು ನಾಕು ಮಾತಾಡಿ, ಇವತ್ತಿನ ಪ್ರತಿಭಟನೆ ಮುಗಿಸೋಣ" ಅಂತ ಅಂದ ಹಳೇ ದೋಸ್ತನ ತರಾ.

ನಾನಂದೆ "ಸರಿ ಆದ್ರೆ ನಾನಿನ್ನು ಅಮಾಯಕ ಇದರ ಬಗ್ಗೆ ಜಾಸ್ತಿ ತಿಳಿಸಿ ಸಾರ್, ಕೆಲ ಸಂದೇಹಗಳಿವೆ ನೀವು ಪರಿಹರಿಸಬೇಕು.. ಹಂಗಾದ್ರೇ ನಾನೂ ಒಂದಿಷ್ಟು ಹುಡುಗರನ್ನ ಗುಡ್ಡೆ ಹಾಕ್ಕಂಡು ಬರ್ತೀನಿ ಎಲ್ರೂ ಸೇರಿ ನಿಮ್ಮ ಅಧ್ಯಕ್ಷತೆಯಲ್ಲಿ ಜೋರಾಗಿ ಪ್ರತಿಭಟನೆ ಮಾಡುವ, ಹಾಗೇ ಕೆಲ ರಿಪೋರ್ಟರ್ಸ ಕೂಡಾ ಗೊತ್ತು ಅವರನ್ನೂ ಬರಕ್ಕೆ ಹೇಳ್ತೀನಿ, ಒಂದೊಳ್ಳೆ ಕೆಲಸಾನ ಜೋರಾಗಿ ಮಾಡುವ" ಹೀಗೆ ಹೇಳುತ್ತಿದ್ದಂತೆ,

ಇನ್ನೊಬ್ಬ ಉಂಡಾಡಿ ಗುಂಡನ ತರ ಇದ್ದ ಯಾರೋ ಇಂಟರೆಸ್ಟ ಸನ್ ಮುಂದೆ ಬಂದು ಹೇಳಿದ, " ಬಾರೋ ತಮಾ, ನಾನೇ ಈ ಪ್ರೊಟೆಸ್ಟಗೆ ಹೆಡ್ಡು, ಕೇಳು ಏನ್ ನಿನ್ ಡೌಟು?"

ನಾನಂದೆ "ಏನಿಲ್ಲ ಸರ್, ಆ ಲೀಗ್ ಮ್ಯಾಚಲ್ಲಿ ಯಾರೋ ದುಡ್ಡಿಸ್ಕೊಂಡು ಫಿಕ್ಸ ಮಾಡ್ಕೊಂಡು ಆಡಿದ್ರೆ ಅವರು ಆ ಫ್ರಾಂಚೈಸಿಗೆ ಮೋಸ ಮಾಡಿದ ಹಾಗಲ್ಲವಾ? ಅವರು ನಮಗೆ ಹೇಗೆ ಮೋಸ ಮಾಡಿದರು? ಅವರು ಗೆದ್ರೂ ಸೋತ್ರೂ ನಮಗೇನು ಸಿಗತ್ತೆ?"

"ಇಲ್ಲಿ ನಂಬಿಕೆ ಮುಖ್ಯ.. ನಾವು ಆ ಟೀಮ್ ಸಪೋರ್ಟರ್ ಆಗಿದ್ದು, ನಮ್ಮ ಕೆಲಸ ಕಾರ್ಯ ಎಲ್ಲ ಬಿಟ್ಟು ಕ್ರಿಕೇಟೇ ನಮ್ಮ ಧರ್ಮ ಅಂದುಕೊಂಡು ಮ್ಯಾಚ್ ನೋಡ್ತಾ ಇರ್ತೀವಿ, ಅವಾಗವಾಗ ಸುಮ್ನೇ ವಿನೋದಕ್ಕಾಗಿ ಪ್ರೆಂಡ್ಸ ಹತ್ರ ಬೆಟ್ಟಿಂಗ್ ಸಹಾ ಕಟ್ಟಿರುತ್ತೀವಿ. ಈ ನನ್ನ್ ಮಕ್ಳು ಹೀಗೆ ಮಾಡೋದ್ರಿಂದ, ಗೆಲ್ಲೊ ಮ್ಯಾಚ್ ಸೋಲೋದ್ರಿಂದ ಬೆಟ್ಟಿಂಗ್ ಕಟ್ಟಿದ ಎಷ್ಟು ಜನಾ ಬೀದಿಗೆ ಬರ್ತಾರೆ ಗೊತ್ತಾ? ಯಾರಿಗೂ ಇದರ ಬಗ್ಗೆ ಕೇರ್ ಇಲ್ಲ. ಇಂದು ಅವರ ಟೀಮಿಗೆ ಮೋಸ ಮಾಡಿದೋರು ನಾಳೆ ಇದೇ ದುಡ್ಡಿಗೋಸ್ಕರ ನಮ್ಮ ದೇಶಕ್ಕೆ ಮೋಸ ಮಾಡೋಲ್ಲ ಅಂತ ಏನು ಗ್ಯಾರಂಟಿ? ಅದಿಕ್ಕೆ ನಾವು ಪ್ರತಿಭಟನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ, ಮುಂದೆ ಈ ತರ ಎಲ್ಲೂ ಆಗದೇ ಇರಲಿ, ತಪ್ಪು ಮಾಡಿದವರಿಗೆ ಉಗ್ರ ಶಿಕ್ಷೆಯಾಗಲಿ ಎನ್ನುವುದೇ ನಮ್ಮ ಉದ್ದೇಶ" ಅಂತ ಅಂದ.

"ವ್ಹಾವ್ !! ಸೂಪರ್ ಸರ್ ನೀವು, ನಿಮ್ಮಂತವರು ಬೇಕು ನಮ್ ಸಮಾಜಕ್ಕೆ, ಅದಿರ್ಲಿ ಈಗ ಇದು ಬೆಟ್ಟಿಂಗ್ ಪರವಾಗಿ ಫಿಕ್ಸಿಂಗ್ ವಿರುದ್ದವಾಗಿ ಇದು ನಿಮ್ಮ ಪ್ರತಿಭಟನೇಯೋ ಹೇಗೆ? ಫಿಕ್ಸಿಂಗ್ ಈಗ ಟ್ರೆಂಡು, ರಾಜಕಾರಣೀಗಳ ಕ್ಷೇತ್ರದಿಂದ ಹಿಡಿದು ಗೋಲಿ ಆಡೋ ಮಕ್ಕಳವರೆಗೂ ಈಗ ಎಲ್ರೂ ಫಿಕ್ಸ್ ಆಗೇ ಇರ್ತಾರೆ. ಕಸೀನೋ ರಾಯಲ್‍ನಿಂದ ಪಾಯಿಕಾನೆ ಮನೆವರೆಗೂ ಎಲ್ಲರೂ ಫಿಕ್ಸು, ಎಲ್ಲವೂ ಫಿಕ್ಸು. ಮೊದಲೆಲ್ಲಾ ಪ್ರೇಮಿಗಳ ಬಾಯಲ್ಲಿ ಮಾತ್ರಾ ಕೇಳ್ತಾ ಇದ್ದ ಈ ಸ್ಪಾಟ್ ಫಿಕ್ಸ್, ಡೇಟ್ ಫಿಕ್ಸ್, ಇಂದು ಚೆಡ್ಡಿ ಹಾಕೋ ಹುಡುಗಂಗೂ ಚಾಕಲೇಟ್ ಆಮಿಷ ತೋರಿಸಿ ಫಿಕ್ಸ್ ಮಾಡಬೇಕಾದ ಪರಿಸ್ಥಿತಿ ಇದೆ. ಫಿಕ್ಸ್ ಇಲ್ಲದೇ ಸಕ್ಸಸ್ ಇಲ್ಲ ಅಂತಾ ಎಲ್ಲರೂ ತಿಳ್ಕೊಂಬಿಟ್ಟಿದ್ದಾರೆ. ಈಗ ಹೇಳಿ ಈ ಪ್ರತಿಭಟನೆ ಜೊತೆಗೆ ಬೆಟ್ಟಿಂಗನ್ನೂ ಕೂಡಾ ರಾಷ್ಟ್ರೀಕರಣ ಮಾಡಿ, ಡರ್ಬೀ ರೇಸ್ ತರಾ ಒಪನ್ ಬೆಟ್ಟಿಂಗಿಗೆ ಮನವಿ ನೀಡೋಣವಾ? ಅದರಿಂದ ಕೆಲವು ಮಾಮಂದಿರಿಗೆ ಅವಾಗವಾಗ ಕೊಡಬೇಕಾದ ಮಾಮೂಲಿಯಾದ್ರೂ ಉಳಿಯತ್ತೆ, ಹೆದರಿಕೊಂಡು ಬೆಟ್ಟಿಂಗ್ ಆಡಿ ಬೀದಿಗೆ ಬೀಳೋ ಬದಲು ರಾಜಾರೋಷವಾಗಿ ಮೊರಿ ಸೇರೋಣ, ಏನಂತೀರಾ?" ಎಂದೆ ಅವನನ್ನು ಲಾಕ್ ಮಾಡುವ ಉದ್ದೇಶದಿಂದ.

"ಅಯ್ಯೋ ಬೆಟ್ಟಿಂಗ್ ವಿಷ್ಯ ಬೇಡಾ ಮಾರಾಯ, ಫಿಕ್ಸಿಂಗ್ ಬಗ್ಗೆ ಅಷ್ಟೆ ನಾವು ಮಾತಾಡುವ, ಏನೋ ಸ್ವಲ್ಪ ಪೇಪರು, ಟೀವಿಲಿ ನಮ್ ಮುಕ ತೋರಿಸಿ, ಸ್ವಲ್ವ ಹೆಸರು ಗಿಸರು ಮಾಡ್ಕಂಡು ಮುಂದೆ ರಾಜಕೀಯಕ್ಕೆ ಧುಮುಕಿ ಒಳ್ಳೆ ಆಡಳಿತ ಕೊಟ್ಟು ಜನರ ಸೇವೆ ಮಾಡುವ ಅಂತಿದ್ರೆ ನೀ ದಾರಿ ತಪ್ಪಿಸುವ ಮಾತಾಡಿ ನಮಗೂ ಕಂಫ್ಯೂಜ್ ಮಾಡಿಸಿ ತಲೇಲಿ ಹುಳಾ ಬಿಟ್ಟಿರೋ ನಿನ್ನ ಹೆಸರೇನಯ್ಯಾ?" ಅಂತ ಅಂದ ವಿಚಿತ್ರವಾಗಿ.

"ಸುಮ್ನೇ ಇರೀ ಸರ್ ನನ್ನ್ ಹೆಸರು ಕೇಳಿದ್ರೆ ನಿಮ್ ಕಿವಿಯಿಂದ ಕಂಬಳಿಹುಳ ಬುದುಬುದು ಅಂತಾ ಉದುರೋ ಸಂಭವ ಇದೆ. ನೀವ್ ಕಂಟಿನ್ಯೂ ಮಾಡಿ ನಿಮ್ಮ ಚಪ್ಪಲಿ ಬಡಿಯೋ ಕೆಲಸಾನ, ನಮ್ಮ ಜನಗಳ ಮೈಂಡೇ ಸರಿಯಾಗಿ ತಲೆಯೊಳಗೆ ಫಿಕ್ಸ್ ಆಗಿದೆಯೋ ಇಲ್ವೋ ಅಂತ ಡೌಟ್ ಇದೆ ನಂಗೆ, ಇದು ಬೇರೇನ? ಜೀವನದಲ್ಲಿ ಹಾಳಾಗೋಕೂ ಬಲವಾದ ಕಾಂಪಿಟೇಶನ್ ಇದೆ ನಮ್ಮಲ್ಲಿ. ಆಟಗಾರರ ಮ್ಯಾಚ್ ಫಿಕ್ಸಿಂಗಿಗೆ ನಾವೇ ಕಾರಣ, ನಮ್ಮ ಅತಿಯಾದ ಪ್ರೀತೀ ಮತ್ತು ನಂಬಿಕೆಯೇ ಕಾರಣ ಅಂದರೂ ತಪ್ಪಾಗಲ್ಲ..! ಕೆಲ ದಿನ ಈಷಾರಾಮಿ ಜೈಲಲ್ಲಿದ್ದು, ಕೆಲದಿನ ಮಾನ ಹೋದರೂ ಇರೋ ದುಡ್ಡಿನ ಮುಂದೆ ಎಲ್ಲವೂ ಗೌಣ. ಸುಮ್ನೆ ನಾವು ನೀವು ಇಲ್ಲಿ ಚಚ್ಚಿಕೊಳ್ಳೊದ್ರಿಂದ ಏನು ಬದಲಾವಣೆಯೂ ಆಗೊಲ್ಲ, ಯಾಕಂದ್ರೆ ಪ್ಯಾಂಟ್ ಎಷ್ಟೇ ಅಗಲ ಇದ್ರೂ, ಬ್ರಾಂಡ್ ಯಾವುದೇ ಆಗಿದ್ರೂ, ಕಲರ್ ಎಷ್ಟೇ ಮಿಕ್ಸ ಇದ್ರೂ ಜಿಪ್ ಇದ್ಮೇಲೆ ಅದು ಯಾವ ಜಾಗದಲ್ಲಿ ಇರಬೇಕೋ ಅಲ್ಲೇ ಇದ್ರೆ ಉತ್ತಮ. ನನಗೆ ಗೊತ್ತು ನಿಮ್ಗೆ ಅರ್ಥ ಆಗಿರಲ್ಲ ಅಂತಾ, ಅರ್ಥ ಆದ್ರೂ ನಿಮಗೆ ಹೇಳಿಕೊಳ್ಳಕ್ಕೆ ಆಗೊಲ್ಲ ಅನ್ನೋದು ಗೊತ್ತು, ನಾನಿನ್ನು ಬರ್ಲಾ ಸರ್, ಚೊಂಬಾದ ಜೀವನದಲ್ಲಿ ಒಂದು ಬಕೀಟು ಕೊಡಿಸಪ್ಪಾ ದೇವರೇ..!!" ಅಂತಾ ನಾಟಕೀಯವಾಗಿ ಕೈಮುಗಿದು ಕೆಲಸ ಇಲ್ಲದ ಈ ನನ್ನ ಮಕ್ಕಳಿಗೆ ಹುಳ ಬಿಟ್ಟಿರೋ ಖುಷೀಲಿ ಮನೆಕಡೆ ಹೊಂಟೆ..!!

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಫಿಟ್ಟಿಂಗ್ ನಲ್ಲಿ ಫಿಕ್ಸಿಂಗ್ ಫಿಕ್ಸು..!: ಎಂ. ಆರ್. ಸಚಿನ್

  1. ಸಚಿನ್ ಅಣ್ಣಾವ್ರೇ….ಹಹ…ಹ….ಹಹಹ….ಚೆನ್ನಾಗಿ ಹೊಡೆದಿದ್ದೀರಾ….

    1. ಶರತ ಸಚಿನ ಅಂದ್ರೆ ಏನ್ ಸುಮ್ನೇನಾ ?? =D

Leave a Reply

Your email address will not be published. Required fields are marked *