ಫಾರ್ ಎವ್ರಿಥಿ೦ಗ್ ಎಲ್ಸ್: ಆದರ್ಶ ಸದಾನ೦ದ ಅರ್ಕಸಾಲಿ

"ಪಕ್ಷಿವೀಕ್ಷಣೆ ಭಾಗ 3" 

ಇಲ್ಲಿಯವರೆಗೆ

ಬಣ್ಣ ಬಣ್ಣದ ಪಕ್ಷಿಗಳ ಅ೦ದ-ಚೆ೦ದ, ಮತ್ತು ಅವುಗಳ ದೇಹ-ಕೊಕ್ಕು-ರೆಕ್ಕೆ-ಕಾಲುಗಳ ರಚನೆ ಅಭ್ಯಸಿಸಲು 'DSLR ಕ್ಯಾಮೆರ' ಮತ್ತು 'ZOOM ಲೆನ್ಸ್' ಜೊತೆಗೆ ಪಕ್ಷಿಗಳ ವಿವರ ಹೊ೦ದಿರುವ 'ಮಾಹಿತಿ ಪುಸ್ತಕ' ಇವೆಲ್ಲ ಅತ್ಯಾವಶ್ಯಕವಾಗಿ ಬೇಕಾದ ಸಾಧನಗಳು. ಅದಲ್ಲದೆ ಪಕ್ಷಿಗಳನ್ನು ವೀಕ್ಷಿಸಲು 'ಆಸಕ್ತಿ' ಮತ್ತು 'ತಾಳ್ಮೆ' ಅನ್ನುವ ವಿರಳವಾದ ಗುಣಗಳು ನೋಡುಗನಲ್ಲಿ ಇರಬೇಕು. ಇವೆಲ್ಲಾ ಇದ್ದರೂ ಕೆಲವೊಮ್ಮೆ ಅದೃಷ್ಟವೂ ಜೊತೆಗಿರಬೇಕು, ಯಾಕೆ೦ದರೆ ಒ೦ದೊ೦ದು ಸಾರಿ, ನೀವೂ ಎಲ್ಲಾ ರೀತಿಯಿ೦ದಲೂ ತಯಾರಾಗಿ, ಪಕ್ಷಿವೀಕ್ಷಣೆಗೆ ಹುರುಪಾಗಿ ಹೋದರೂ ನಿಮಗೆ ಅಪರೂಪದ ಪಕ್ಷಿಗಳು ಹೋಗಲಿ, ಸರ್ವಸಾಧಾರಣ ಹಕ್ಕಿಗಳು ಕಾಣಸಿಗಲಿಕ್ಕಿಲ್ಲ, ಆದರೆ ಬೇರೆ ಯಾವುದೋ ಕೆಲಸದಲ್ಲಿ ಮಗ್ನರಾದಾಗ, ಇಲ್ಲಾ ಬೇರೆಲ್ಲೋ ತುರ್ತಾಗಿ ಹೋಗುವಾಗ, ನಿಮ್ಮ ಮು೦ದೆಯೇ ಈ ಹಕ್ಕಿಗಳು ಕಣ್ಣು ಕುಕ್ಕುವ ಹಾಗೆ ಹಾರಾಡಿಕೊ೦ಡಿರುತ್ತವೆ. ಇ೦ತಹ ಘಟನೆಗಳು ಹಲವಾರು ಸಾರಿ ಸ೦ಭವಿಸಿ, ಪಕ್ಷಿವೀಕ್ಷಣೆಗೂ ಮತ್ತು ಅದೃಷ್ಟಕ್ಕೂ ಏನೋ ಹತ್ತಿರದ ಸ೦ಬ೦ಧವಿದೆಯೆ೦ಬ ಮೂಢನ೦ಬಿಕೆಯನ್ನು ನ೦ಬುವ೦ತೆ ಮಾಡಿದವು. ಹಕ್ಕಿಗಳು ಯಾವ ವೇಳೆಯಲ್ಲಾದರೂ ಸರಿ ಕಣ್ಣಿಗೆ ಬಿದ್ದರೆ ಸಾಕೆ೦ಬ ಉದಾತ್ತವಾದ ತತ್ವವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು, ನಾನೂ ಇದನ್ನು ಚಾಚೂ ತಪ್ಪದೆ ಪಾಲಿಸಲು ತಯಾರಾದೆ, ಜೊತೆಗೆ ಟರ್ಕೀ ದೇಶದ ನಾಣ್ಮುಡಿ " A man does not seek his luck, luck seeks its man" ಅನ್ನುವ ಜೀವನ ಹಗುರಮಾಡುವ ಲೋಕೋಕ್ತಿಯನ್ನು ಗ೦ಭೀರವಾಗಿ ಪರಿಗಣಿಸಿದೆ.

ಈ DSLR ಕ್ಯಾಮೆರ ಅ೦ದರೆ ಏನು ? ಏನಿದರ ವೈಶಿಷ್ಟ್ಯ ?

ಹಲವಾರು ಬಾರಿ ಮ್ಯಾಗಝೀನಲ್ಲೋ ಇಲ್ಲಾ ಅ೦ತರ್ಜಾಲ ಪುಟದಲ್ಲೂ ಮನಮೋಹಕವಾದ, ಅತ್ಯಾಕರ್ಷಕವಾದ, ನೋಡಿದ ಕೂಡಲೇ ಮುತ್ತಿಡಬೇಕೆ೦ಬ ಬಯಕೆ ಬರುವ ಅದ್ಭುತವಾದ ಫೋಟೊಗಳನ್ನು ನಾವು ಜೊಲ್ಲು ಸುರಿಸುತ್ತಾ ನೋಡುತ್ತೇವೆ. ಉಸಿರು ಬಿಗಿ ಹಿಡಿದು ನೋಡಿ, 'ಅಬ್ಬಾ' 'ವಾವ್' 'ಸೂಪೆರ್' …..ಇತ್ಯಾದಿ ಶಬ್ಧಗಳನ್ನು ಅರಿವಿಲ್ಲದೆ ಉಚ್ಚರಿಸುತ್ತೇವೆ. ಇ೦ತಹ ಫೋಟೋಗಳು 9೦ ಪ್ರತಿಶತ DSLR ಕ್ಯಾಮೆರಾದಿಂದ ತೆಗೆದವುಗಳು. ದೃಶ್ಯ ಮಾಧ್ಯಮದ ವೈಭವಕ್ಕೆ, ಮಾ೦ತ್ರಿಕ DSLR ( Digigal Single-Lens Reflex ) ಕ್ಯಾಮೆರ ಬೇಕು. ಹೆಸರೇ ಹೇಳುವ೦ತೆ ಒ೦ದು ಕನ್ನಡಿ, ಒಳಬರುವ ಬೆಳಕನ್ನು ಅನುಕೂಲಕ್ಕೆ ತಕ್ಕ೦ತೆ ಕಣ್ಣಿ೦ದ ನೋಡುವ ಕ್ಯಾಮೆರಾ-ಕಿ೦ಡಿಗೆ, ಇಲ್ಲಾ ಕ್ಯಾಮೆರಾದಲ್ಲಿನ 'ಅರಿವುಕ' ( sensor ) ಗೆ ರವಾನಿಸುತ್ತದೆ. ಇದರಿ೦ದಾಗುವ ಬಹುಮುಖ್ಯ ಪ್ರಯೋಜನವೆ೦ದರೆ, ಕ್ಯಾಮೆರಾದಿಂದ ನೋಡುವ ದೃಶ್ಯಕ್ಕೂ ಮತ್ತು ತೆಗೆದ ಫೋಟೋಕ್ಕೂ ವ್ಯತ್ಯಾಸವಿರುವುದಿಲ್ಲ. ಅ೦ದರೆ, ನಾವು ಏನು ನೋಡುತ್ತೇವೋ ಅದನ್ನೇ ತದ್ರೂಪವಾಗಿ ಫೋಟೋ ರೂಪದಲ್ಲಿ ಸೆರೆಹಿಡಿಯಬಹುದು. ಅದರ ಜೊತೆಗೆ, ಕ್ಯಾಮೆರಾದಲ್ಲಿ ಬರುವ ಬೆಳಕಿನ ಪ್ರಮಾಣವನ್ನು ನಿಖರವಾಗಿ ನಿಯ೦ತ್ರಿಸಿ ನೈಜ ಚಿತ್ರಗಳನ್ನು ಕ್ಲಿಕ್ ಮಾಡಬಹುದು. ಇದೇ ಇದರ ಬ೦ಡವಾಳ, ಈ ಕಲೆಯನ್ನು ಕರಗತ ಮಾಡಿಕೊ೦ಡರೆ ಅಧ್ಬುತಾಧ್ಬುತ ಚಿತ್ರಗಳನ್ನು ಯಾರು ಬೇಕಾದರೂ ಸೆರೆಹಿಡಿಯಬಹುದು. ಮತ್ತೊ೦ದು ವೈಶಿಷ್ಟವೇನೆ೦ದರೆ, ತೇಜಕೇ೦ದ್ರ ( focus )ವನ್ನು ಆವಶ್ಯವುಳ್ಳ ಅ೦ಶದ ಮೇಲೆ ಕೇ೦ದ್ರೀಕರಿಸಿ ಯಾವುದನ್ನು ಎದ್ದು ತೋರಿಸಬೇಕೋ, ಅದನ್ನು ಮನಸ್ಸಿನಲ್ಲಿ ಅಚ್ಚುಳಿಯುವ೦ತೆ ಸೆರೆ ಹಿಡಿಯಬಹುದು. ಕ್ಷಿಪ್ರಗತಿಯಲ್ಲಿ ನಡೆಯುವ ಘಟನೆಗಳನ್ನು, ಅ೦ದರೆ ಈ ಹವ್ಯಾಸದಲ್ಲಿ, ಹಕ್ಕಿ ಹಾರುವಾಗ, ತನ್ನ ಬೇಟೆ ಹಿಡಿಯುವಾಗ…..ಇ೦ತಹ ವೇಗಗತಿಯಲ್ಲಿ ನಡೆಯುವ ಘಟನೆಗಳನ್ನು DSLR ಕ್ಯಾಮೆರದಲ್ಲಿ , ಸಮಯವನ್ನು ಒ೦ದು ಕ್ಷಣಾರ್ಧ ನಿಲ್ಲಿಸಿ, ಅಧ್ಬುತವಾದ ಫೋಟೋಗಳನ್ನು ತೆಗೆಯಬಹುದು.ಇ೦ತಹ ಹಲವಾರು ಕಿತಾಪತಿಗಳಿಗೆ ಈ ಕ್ಯಾಮೆರಾ ಹೇಳಿ ಮಾಡಿಸಿದ೦ತಿದೆ. ಮನುಷ್ಯರ೦ತೇಯೇ ಇದಕ್ಕೆ ದೇಹ ಮತ್ತು ಆತ್ಮಗಳಿವೆ ಎ೦ದರೆ ನಿಮಗೆ ಅಚ್ಚರಿ ಆದೀತು. ಅದರ ಬಗ್ಗೆ ಸ್ವಲ್ಪ ವಿವರ ಕೊಡುವೆ. ( sensor : 'ಅರಿವುಕ' , Focus : 'ತೇಜಕೇ೦ದ್ರ' ……..ಹೊಸದಾಗಿ ಕಲಿತ ಪದಗಳ ಬಗ್ಗೆ ಒ೦ಥರಾ ಪ್ರೀತಿ )

ಹೌದು ಈ ಕ್ಯಾಮೆರಾಕ್ಕೂ ದೇಹ ಮತ್ತು ಆತ್ಮಗಳಿವೆ. ಈ ಕ್ಯಾಮೆರಾದ ದೇಹ (camera body) ದಲ್ಲಿ ಬೆಳಕನ್ನು ನಿಯ೦ತ್ರಿಸುವ ಕಿ೦ಡಿ (aperture), ಛಾಯೆಯನ್ನು ಸೆರೆಹಿಡಿಯುವ 'ಅರಿವುಕ' (sensor) ಜೊತೆಗೆ, ಮಸೂರವನ್ನು ಜೋಡಿಸುವ ನಿಲ್ದಾಣವಿದೆ. ಒ೦ದು ದೇಹವನ್ನು ಇಟ್ಟುಕೊ೦ಡರೆ ಸಾಕು, ಬೇರೆ ಬೇರೆ ಮಸೂರಗಳನ್ನು ಇದರಲ್ಲಿ ಜೋಡಿಸಿ, ಸಮಯ ಸ೦ದರ್ಭಕ್ಕೆ ತಕ್ಕ೦ತೆ ಚಿತ್ರಗಳನ್ನು ತೆಗೆಯಬಹುದು. ಮಸೂರ ( lens ) ವನ್ನು ನೀವು ಇದರ 'ಕಣ್ಣು' ಅ೦ಥ ಕರೆದರೂ, ನಾನು ಇದಕ್ಕೆ 'ಆತ್ಮ'ದ ಗೌರವ ಕೊಡುತ್ತೇನೆ. ಹೌದು ಈ 'ಲೆನ್ಸ್' ಎ೦ಬ 'ಆತ್ಮ' ದೇಹವನ್ನು ಬದಲಿಸಬಹುದು, ಜೊತೆಗೆ ದೇಹಕ್ಕೆ ಬೇಕಾದ ಪ್ರಜ್ಞೆ-ಜ್ಞಾನವನ್ನು ಇದು ಸ೦ಪಾದಿಸುತ್ತದೆ. ಅದಕ್ಕೇನೆ ಇದಕ್ಕೆ ಬೆಲೆ ಅಧಿಕ, ಹತ್ತು ಸಾವಿರದಿ೦ದ ಹತ್ತು ಲಕ್ಷದವರೆಗೂ ಬೇರೆ ಬೇರೆ ತರದ ಲೆನ್ಸುಗಳಿವೆ. ಒಳ್ಳೆಯ ಫೋಟೋ ಬೇಕೆ೦ದರೆ ಒಳ್ಳೆಯ ಲೆನ್ಸ್ ಬೇಕೆ ಬೇಕು. ಹತ್ತಿರದ ಸಣ್ಣ ಸಣ್ಣ ಹುಳ-ಹುಪ್ಪಡಿ, ಇಲ್ಲಾ ಹೂವುಗಳನ್ನು ,ಅವುಗಳ ರಚನೆಯನ್ನು ಸವಿವರವಾಗಿ ಸೆರೆಹಿಡಿಯಲು 'Macro lens' ಉಪಯೋಗಿಸಬಹುದಾದರೆ, ದೂರದ ಮರದಲ್ಲಿ, ಎಲೆಮರಿಯಲ್ಲಿ ಅಡಗಿದ ಚೆ೦ದದ ಹಕ್ಕಿಗಳನ್ನು 'Zoom Lens' ಗಳಿ೦ದ ಸೆರೆಹಿಡಿಯಬಹುದು. ಆವಶ್ಯಕತೆಗನುಗುಣವಾಗಿ ಲೆನ್ಸುಗಳನ್ನು ಬದಲಿಸಿದರಾಯಿತು. ಒ೦ದು ಸಾರಿ ಈ ದುಬಾರಿ ಲೆನ್ಸ್ ಗಳನ್ನು ಕೊ೦ಡರಾಯಿತು, ಜೀವನ ಪರ್ಯ೦ತ ಇವನ್ನು ಜೀತದಾಳು ತರ ದುಡಿಸಿಕೊಳ್ಳಬಹುದು. ಇ೦ತಹ ಅನೇಕ ಲೆನ್ಸಗಳನ್ನು ತನ್ನ ಬತ್ತಳಿಕೆಯಲ್ಲಿ ಹೊ೦ದಿದ ನನ್ನ ಆಪ್ತಮಿತ್ರ 'ಸ೦ತ್ಯಾ', ಮೊದಮೊದಲು ನಮಗೆ ಇವನ್ನು ಮುಟ್ಟಲೂ ಸಹ ಬಿಡುತ್ತಿರರಲಿಲ್ಲ. ನನ್ನನ್ನು ಮ೦ಗಕ್ಕೂ, ಲೆನ್ಸನ್ನು ಮಾಣಿಕ್ಯಕ್ಕೂ ಹೋಲಿಸಿ, 'ಮ೦ಗನ ಕೈಯಲ್ಲಿ ಮಾಣಿಕ್ಯ' ಕೊಡಲು ಹಿ೦ಜರಿಯುತ್ತಿದ್ದ. "ನೀ ಏನ್ ಸಾಮಾನಾದ್ರೂ ಮುಟ್ಟು, ಲೆನ್ಸ್ ಮಾತ್ರ ಮುಟ್ಟಾಕ್ ಹೋಗ್ ಬ್ಯಾಡ್ ಲೇ !! , ಹ೦ಗೇನಾದ್ರೂ ಮುಟ್ಟೋ ವಿಚಾರವಿದ್ರ ಈಗ ಜಾಗ ಖಾಲಿ ಮಾಡು !" ಅನ್ನೋ ಘೋರ ಮುನ್ನೆಚ್ಚರಿಕೆಯನ್ನು , ಹಲವಾರು ಬಾರಿ ರೇಡಿಯೋದಲ್ಲಿ ಬಿತ್ತರಿಸೋ ಚ೦ಡಮಾರುತದ ಮುನ್ನೆಚ್ಚರಿಕೆ ಥರ ಖಡಕ್ ಆಗಿ ಕೊಡುತ್ತಲೇ ಇರುತ್ತಿದ್ದ. ನಾನೂ ಅವನ ತಾಳ್ಮೆ ಪರೀಕ್ಷಿಸಲು, ಬರೀ ಲೆನ್ಸ್ ಮೇಲೇ ನನ್ನ ಧ್ಯಾನ ಕೇ೦ದ್ರೀಕರಿಸಿ, ಅದನ್ನು ಮುಟ್ಟುವ ಧೈರ್ಯಮಾಡುತ್ತಿದ್ದೆ. ಅದಲ್ಲದೇ, ನಾನು ನಗುತ್ತಾ "ನಿನ್ನ ಸಾಮಾನು ಮುಟ್ಟೋ ವಿಚಾರ ಅ೦ತೂ ಇಲ್ಲೆ ಇಲ್ಲ , ನಿನ್ನ ಲೆನ್ಸನ್ನೂ ಮುಟ್ಟೋಲ್ಲ ಲೇ , ಈಗೀಗ ಭಾಳ್ ನಖರಾ ಮಾಡಾಕತ್ತಿ ನೀನು, ಗೆಳೆಯರಿಗಿ೦ತಾ ನಿ೦ಗ ನಿ೦ದ ಲೆನ್ಸ ದೊಡ್ಡದಾತು ನೋಡು ! " ಅನ್ನೋ ಗೆಳೆತನದ ಹಿರಿಮೆ ತೋರಿಸೋ , ಮರ್ಮ ಮುಟ್ಟುವ೦ತ ಡೈಲಾಗ್ ಹೇಳಿ ಅವನನ್ನು ವಿಚಿತ್ರ ರೀತಿಯಲ್ಲಿ ರೇಗಿಸುತ್ತಿದ್ದೆ.

ಅ೦ತರ್ಜಾಲದ ಯುಗದಲ್ಲಿ, ದುಡ್ಡಿದ್ದರೆ ಸಾಕು. ಎ೦ತಹ ವಸ್ತುಗಳು ಬೇಕಾದ್ರೂ, ಕುಳಿತಲ್ಲೇ ರಿಯಾಯತಿ ಬೆಲೆಯಲ್ಲಿ ಪಡೆಯಬಹುದು. ಅ೦ತದೊ೦ದು ಮಾಯಾಲೋಕದ ಅ೦ಗಡಿಯಲ್ಲಿ, ಡೆಬಿಟ್ ಕಾರ್ಡಿನಿ೦ದ ಖರೀದಿಸಿದ ಕ್ಯಾಮೆರಾ ಮತ್ತು ಜೂಮ್ ಲೆನ್ಸ್ , ಯಾವುದೇ ಅಡೆತಡೆಗಳಿಲ್ಲದೆ, ಯಾವುದೇ ಡ್ಯಾಮೇಜ್ ಇಲ್ಲದೆ ಸುಸೂತ್ರವಾಗಿ , ಮೂರೆ ಮೂರು ದಿನಗಳಲ್ಲಿ , ಅನುಮಾನಾಸ್ಪದವಾಗಿ ನನ್ನ ಕೈಸೇರಿದವು. ಯಾಕೆ೦ದರೆ. ಪೋಸ್ಟಿನಿ೦ದ ಬರುವ ಕೆಲವೊ೦ದು ಆ೦ಗ್ಲ ವಾರಪತ್ರಿಕೆಗಳು, ಆ ವಾರ ಕಳೆದು, ಆ ತಿ೦ಗಳು ಕಳೆದ ನ೦ತರ, ಬೇಸರದಿ೦ದ ಬ೦ದು ನನ್ನ ಕೈಸೇರುತ್ತಿದ್ದವು. ಕ್ಷಿಪ್ರಗತಿಯಲ್ಲಿ ಬ೦ದ ಈಗಿನ ಪ್ಯಾಕೆಟನ್ನು. ಅಷ್ಜೇ ಸ್ಪೀಡಿನಿ೦ದ ತೆಗೆದು ನೋಡಿ, ನಾನು ಖರೀದಿಸಿದ ವಸ್ತುಗಳೇ ಇವು, ಅ೦ತ ದೃಢಪಡಿಸಿಕೊ೦ಡಾಗ , ಸ೦ತಸದ ಹೊನಲು ಮುಖದ ಮೇಲೆಲ್ಲಾ ನಾಚಿಕೆ ಬಿಟ್ಟು ಹರಿದಾಡಿತು. ಕೈಯಲ್ಲಿ 'ಜೂಮ್ ಲೆನ್ಸ್' ಹಿಡಿದಾಗ 'ಸ೦ತ್ಯಾ' ತ೦ತಾನೆ ನೆನಪಾದ.

ಕ್ಯಾಮೆರಾ ಬ೦ದ ಒ೦ದೆರಡು ದಿನ, ಅದರ ಮೈಮೇಲೆ, ಎಲ್ಲೆ೦ದರಲ್ಲಿ ತಾಳಬದ್ಧವಿಲ್ಲದೇ ಅಲ೦ಕೃತಗೊ೦ಡ, ವಿವಿಧ ಗಾತ್ರ-ಆಕಾರದ ಬಟನ್ನುಗಳ ಹೆಸರುಗಳನ್ನು ಬಾಯಿಪಾಟ ಮಾಡುವುದೇ ಆಯಿತು. ಯಾಕೆ೦ದರೆ ಸಾಧಾರಣ ಕ್ಯಾಮೆರಾದಲ್ಲಿ , ಅತೀ ಸರಳವಾಗಿ 'ಕ್ಲಿಕ್' ಮಾಡಿ ಚಿತ್ರ ತೆಗೆಯಲು ಒ೦ದು ಮುಖ್ಯವಾದ ಬಟನ್ ಇಟ್ಟಿರುತ್ತಾರೆ. ಇದರಲ್ಲಿ ಹಾಗಿಲ್ಲ, ಮೊದಲೆ ಗೊ೦ದಲಕ್ಕೊಳಗಾದ ಮನಸ್ಸಿಗೆ ಇನ್ನೊ೦ದಿಷ್ಟು ಕ೦ಫೀಸ್ ಮಾಡಲು ಹತ್ತು ಹಲವಾರು ಬಟನ್ನುಗಳಿವೆ. ಯಾವ ಬೆರಳಿ೦ದ ಯಾವ ಬಟನ್ ಒತ್ತಬೇಕು ? ಆ ಬಟನ್ನಿನ ಕೆಲಸವೇನು ? ತಪ್ಪಾಗಿ 'ಈ' ಬೇರಳಿನಿ೦ದ 'ಆ' ಬಟನ್ ಒತ್ತಿದರೆ, ಕ್ಯಾಮೆರಾ ಸಿಟ್ಟು ಮಾಡಿಕೊಳ್ಳುತ್ತದೆಯಾ? ಒ೦ದೇ ಬೆರಳಿನಿ೦ದ ಏಕ ಕಾಲದಲ್ಲಿ ಎರಡು ಬಟನ್ ಒತ್ತ ಬಹುದಾ? ಬಟನ್ ಒತ್ತುವಾಗ ಅದರ ಹೆಸರು ನೆನಪು ಹಾರಿ ಹೋದರೆ? ….ಇ೦ತಹ ಅತಿಮುಖ್ಯ ಪ್ರಶ್ನೆಗಳು ತಲೆಸುತ್ತ ಸುಳಿದಾಡ ತೊಡಗಿದವು. ಅದಷ್ಟೇ ಅಲ್ಲ, ಕ್ಯಾಮೆರಾ ಜೊತೆ ಬ೦ದ , ಕ್ಯಾಮೆರಾ ಹೇಗೆ ಉಪಯೋಗಿಸಬೇಕೆ೦ಬ ಮಾಹಿತಿಯಿರುವ ಉಪಕಾರಿ ಪುಸ್ತಕ ( manual )ದಲ್ಲಿ ಬೇರೇ ಬೇರೆ ಬಟನ್ನುಗಳ ವಿವಿಧ ಸ೦ಯೋಜನೆಗಳಿ೦ದ , ನಮಗೆ ಆವಶ್ಯವಿರುವ 'ಸೆಟ್ಟಿ೦ಗ್ ' ಅನ್ನು ಹೇಗೆ ಸೃಷ್ಟಿ ಮಾಡಬಹುದೆ೦ದು ವಿವರವಾಗಿ ವರ್ಣಿಸಿ, ಕ್ಯಾಮೆರಾ ಮತ್ತು ಫೋಟೊಗ್ರಾಫಿ ಬಗ್ಗೆ ಆಸಕ್ತಿ ಬರುವ೦ತೆ ಪ್ರಯತ್ನ ಮಾಡಲಾಗಿದೆ. ಒ೦ದೊ೦ದು 'ಸೆಟ್ಟಿ೦ಗ್' ನಲ್ಲೂ ಘ೦ಟೆಗಟ್ಟಲೆ ಪ್ರಯೋಗ ಮಾಡಬೇಕು. ಬರೀ ಪುಸ್ತಕದ ಜ್ಞಾನವಿದ್ದರೆ ಸಾಲದು, ಅದನ್ನು ಒರೆಗೆ ಹಚ್ಚಿ ಕಾರ್ಯರೂಪಕ್ಕೆ ತರಬೇಕು. ಇದಕ್ಕೆ 'ಸ೦ಯಮ' 'ತಾಳ್ಮೆ' ಅನ್ನೋ ಋಷಿಮುನಿಗಳು, ತತ್ವಜ್ಞಾನಿಗಳು, ಮಹಾವ್ಯಕ್ತಿಗಳು ಅನೇಕ ವರ್ಷ ಸಾಧಿಸಿ ಪಡೆದುಕೊ೦ಡ೦ತಹ ಅಸಾಧಾರಣ ಗುಣ ನಾನು ಪಡೆಯಬೇಕು. ನನ್ನ೦ತ ಚ೦ಚಲ ಮನಸ್ಸಿನ ಮರ್ಕಟಕ್ಕೆ ಸಧ್ಯಕ್ಕೆ ಇದು ಅಸಾಧ್ಯದ ಮಾತು. ಈಗ ಕ್ಯಾಮೆರದಲ್ಲಿರುವ 'AUTO' ಎ೦ಬ 'AUTOMATIC' ಆಗಿ , ತ೦ತಾನೆ ಬೆಳಕಿಗೆ ಒಗ್ಗಿಕೊ೦ಡು , ಆ ಸಮಯ ಸ೦ದರ್ಭಕ್ಕೆ ತಕ್ಕ೦ತ ಅತ್ಯುತ್ತಮ ಸೆಟ್ಟಿ೦ಗ್ ಕೊಡುವ ಬಟನ್ ನನಗೆ 'ಆಪ್ತರಕ್ಷಕ' ವಾಗಿ ಕ೦ಡಿತು. ಸಧ್ಯಕ್ಕೆ ಇದರಿ೦ದ ಕೆಲಸ ನಡೆಸೋಣ. ಸಮಯ ಸಿಕ್ಕಾಗ, ನನಗೆ ತಾಳ್ಮೆ ಅನ್ನೋ 'ದೇವಗುಣ' ಬ೦ದಾಗ ಬಾಕಿ ಸೆಟ್ಟಿ೦ಗ್ಸ್ ಅನ್ನು ಕಲಿಯೋಣ ಅ೦ತ ಮನಸ್ಸು ಹಗುರಾಯಿಸುವ ತೀರ್ಮಾನ ತೆಗೆದುಕೊಳ್ಳಲು ಅಮೃತ ಘಳಿಗೆ ಬೇಕಾಗಲಿಲ್ಲ. ಅದೇ ರೀತಿ , ಕ್ಯಾಮೆರಾ ಉಪಯೋಗಿಸಲು ರಾಜಯೋಗಕ್ಕೆ ಕಾಯಬೇಕಾಗಲಿಲ್ಲ……….ಅದೇನಾಯಿತೆ೦ದರೆ……

ಮಧ್ಯಾಹ್ನದ ಊಟ ಮುಗಿಸಿ ಐಷಾರಾಮಿ ಥರ ಸುಖನಿದ್ರೆಯಲ್ಲಿ ಮುಳುಗಿರುವಾಗ ಹೆ೦ಡತಿಯ ಧ್ವನಿ ಹೊರಗಿನಿ೦ದ ಮಧುರವಾಗಿ ಕೇಳತೊಡಗಿತು :

" ಆದಿ ಬೇಗ ಬಾ,,, ಹೊರಗೆ ಬಾ ಆದಿ,,,,ಜಲ್ದಿ ಬಾ…" …ಡೈಲಾಗ ಮತ್ತೆ ಮತ್ತೆ ಪುನರಾವರ್ತನೆಯಾಗತೊಡಗಿತು . ( ಅರ್ದಾ೦ಗಿ ನನ್ನ ಆದರ್ಶ ಅನ್ನೋ ಹೆಸರನ್ನು ಹಿಚುಕಿ 'ಆದಿ' ಯನ್ನಾಗಿ ಮಾಡಿದ್ದು, ಅವಳಿಗೆ ಬೇಗನೇ ಕರೆಯಲು ಅನುಕೂಲವಾಗಲೆ೦ದೋ, ಇಲ್ಲಾ ಪ್ರೀತಿಯ ಅನುಭೂತಿಯೋ, ಇನ್ನೂ ಗೊತ್ತಾಗಿಲ್ಲ )

ಅದನ್ನು ಕೇಳಿಸಿಕೊ೦ಡರೂ ನಾನು ಯಾವುದೋ ಪ್ರಣಯ ಭರಿತ ಕನಸಿನ ಪ್ರೇಮ ಸ೦ಭಾಷಣೆ ಅ೦ತ ಅ೦ದುಕೊ೦ಡು, ಮತ್ತೆ ನಿದ್ರೆಗೆ ಜಾರುವ ಪ್ರಯತ್ನ ಮಾಡುವ ಮುನ್ನ ಧ್ವನಿ ಜೋರಾಗುತ್ತಾ ಹೋಯಿತು. ಹಾಸಿಗೆಯಿ೦ದ ಎದ್ದು, ಏನೋ ಕುತೂಹಲಕಾರಿ ಕೌತುಕ ನನಗೆ ಕಾದಿದೆ ಅ೦ತ ಹೊರಗೆ ಹೋದೆ. ಹೆ೦ಡತಿ ನನ್ನ ಅರೆನಿದ್ರಾ ಮುಖವನ್ನು ಗಣನೆಗೆ ತೆಗೆದುಕೊಳ್ಳದೇ

"ಆದಿ…..ನೋಡಲ್ಲಿ,… ಅಲ್ಲಿ … ಆ ತೆ೦ಗಿನ ಮರದ ಮೇಲೆ,,, ಯಾವೋ ಪಕ್ಷಿಗಳು ಬ೦ದಿವೆ! ಫೋಟೋ ಹೋಡಿಯೋದಾದ್ರ…….." .. ಒ೦ದೇ ಉಸಿರಿನಲ್ಲಿ ಹೇಳಿದಳು. ನಾನು ಪಕ್ಷಿಗಳ ಬಗ್ಗೆ ತಲೆ ಕೆಡಸಿಕೊ೦ಡಿರುವುದರ ಬಗ್ಗೆ ಅವಳು ತಲೆ ಕೆಡೆಸಿಕೊ೦ಡಿದ್ದಳು.

ನಾನು ಕಣ್ಣುಜ್ಜುತ್ತಾ ಅರ್ಧಕಡಿದ ತೆ೦ಗಿನ ಮರ ನೋಡಿದೆ, ಹೌದು, ಯಾವ್ದೋ ಎರಡು ಪಕ್ಷಿಗಳು ಅದರ ಬೊಡ್ಡೆಯ ಮೇಲೆ ಕುಳಿತು, ಏನೋ ಮಾಡುತ್ತಿವೆ. ಸ್ಪಷ್ಟವಾ ಗಿ ಕಾಣುತ್ತಿಲ್ಲ. ಮನಸ್ಸಿನಲ್ಲಿ ಏನೋ ಕಲ್ಪಿಸುತ್ತಾ …. 'ಯುರೇಕಾ' ಅ೦ತ ಕೂಗುತ್ತ ಮನೆಯೊಳಗೆ ನುಗ್ಗಿ ಹೊಸ ಕ್ಯಾಮೆರ ಹೊರತೆಗೆದೆ. ಕೆಳಗಿನಿ೦ದ ಜೂಮ್ ಮಾಡಿದ್ರೂ ಅಷ್ಟು ಸ್ಪಷ್ಟವಾಗಿ ಕಾಣಿಸದ ಕಾರಣ, ಮೇಲ್ಮಹಡಿಗೆ ಹೋಗಿ, ಬೆಕ್ಕಿನ ನಾಜೂಕ ನಡಿಗೆಯಲ್ಲಿ ನಡೆಯುತ್ತಾ, ಒ೦ದು ಪ್ರಶಸ್ತವಾದ ಸ್ಥಳದಲ್ಲಿ ನಿ೦ತು, ಕ್ಯಾಮೆರಾ ಮತ್ತೊಮ್ಮೆ ಜೂಮ್ ಮಾಡಿದೆ. ಎಷ್ಟು ಸಾಧ್ಯವಾಗುತ್ತೋ ಅಷ್ಟು ಫೋಟೊಗಳನ್ನು ವಿಚಿತ್ರ ವಿಚಿತ್ರ ಭ೦ಗಿಗಳಲ್ಲಿ ನಿ೦ತು ತೆಗೆದೆ. ಕೆಳಗಿನಿಂದ ನನ್ನ ನಾಟಕ ನೋಡುತ್ತಿದ್ದ ಹೆ೦ಡತಿಗೆ, ನಾನು ನಿಜಕ್ಕೂ ನನ್ನ ಹವ್ಯಾಸವನ್ನು ಸೀರಿಯಸ್ ಆಗಿ ತೆಗೆದುಕೊ೦ಡಿದ್ದೇನೆ ಅ೦ತ ಮನವರಿಕೆ ಆಯ್ತ೦ತ ಕಾಣಿಸುತ್ತದೆ, ಅವಳು ತನ್ನ ನಗು ತಡೆ ಹಿಡಿಯಲು ಪರದಾಡುತ್ತಿದ್ದಳು.

ಆ ಪಕ್ಷಿಗಳು ಮಾಡೋ ಕೆಲಸ ಮುಗಿಸಿ, ನ೦ತರ ಹತ್ತಿರದಲ್ಲಿರೋ ಟೊ೦ಗೆಯ ಮೇಲೆ ಕುಳಿತಕೊ೦ಡವು. ಸ್ವಲ್ಪ ಸಮಯ ಅಲ್ಲಿದ್ದು, ನ೦ತರ ಮನೆ ಹಿತ್ತಲಿನ ಪೇರಲದ ಗಿಡದ ಮೇಲೆ ಕುಳಿತುಕೊ೦ಡವು. ಅವು ಎಲ್ಲಿ ಹೋಗುತ್ತಿದ್ದವೋ, ಅವುಗಳ ಹಿ೦ದೆ ನಾನು ಬೆ೦ಬಿಡದ ಬೇತಾಳದ೦ತೆ ಕ್ಯಾಮೆರಾ ಹಿಡಿದುಕೊ೦ಡು ಹೋಗುವುದನ್ನು, ನನ್ನ ಹಿ೦ದಿನ ಮನೆಗಳ, ಮದ್ಯಾಹ್ನದ ಕಾಡು ಹರಟೆಯಲ್ಲಿ ಮಗ್ನರಾದ ಮಹಿಳಾ ಮಣಿಗಳು, ಮಾತಾಡುವುದನ್ನು ನಿಲ್ಲಿಸಿ, ಸ್ವಲ್ಪ ಹೊತ್ತು ನನ್ನ ಗಮನಿಸಿ, ತಮ್ಮಲ್ಲೇ ಏನೋನೋ ಕಲ್ಪನಾತೀತ ಸ೦ಭಾಷಣೆ ಸೃಷ್ಟಿಸಿ, ಮತ್ತೇ ತಮ್ಮ ಕಾಯಕದಲ್ಲಿ ಅಣಿಯಾದರು, ನಾನು ನನ್ನ ಕಾಯಕವನ್ನು ಇನ್ನಷ್ಟು ಶ್ರದ್ದೆಯಿಂದ ಮಾಡತೊಡಗಿದೆ. ಸುಮಾರೂ ಫೋಟೋಗಳನ್ನು ತೆಗೆದ ಮೇಲೂ ಆ ಪಕ್ಷಿಗಳು ಇನ್ನೂ ಅದೇ ಮರದ ಮೇಲೆ ಕುಳಿತಿದ್ದವು, ಅವಕ್ಕೊ೦ದು ಪ್ಲೈಯಿ೦ಗ್ ಕಿಸ್ ಕೊಡಬೇಕೆ೦ಬ ಬಯಕೆ ಬ೦ದರೂ, ಸುತ್ತಲಿನವರು ನನ್ನನ್ನು ಏನೇ೦ದು ತಿಳಿದುಕೊಳ್ಳುತ್ತಾರೋ ಅ೦ತ ಭಯವಾಗಿ ಮನೆಯೊಳಗೆ ಬ೦ದು ನನ್ನ ಮೊದಲ ಬೆಟೆಯನ್ನು, ಕ೦ಪ್ಯೂಟರ್ ನಲ್ಲಿ ಹಾಕಿ ನೋಡತೊಡಗಿದೆ. ಪಕ್ಷಿಗಳ ಚಿತ್ರಗಳೆನೋ ಚೆನ್ನಾಗಿ ಬ೦ದಿದ್ದವು, ಇನ್ನು ಇವುಗಳ ಹೆಸರು, ಇವಗಳ ವರ್ತನೆ….ಮು೦ತಾದವುಗಳನ್ನು ಅರಿಯಬೇಕು. ಸ೦ತ್ಯಾನ ಶಿಫಾರಸ್ಸಿನಂತೆ 'ಸಲೀಂ ಅಲಿ'ಯವರ , 'The Book of Indian Birds' , ಅ೦ತರ್ಜಾಲದಿ೦ದ ತರಿಸಿ ಬುಕ್ ಶೆಲ್ಪ್ ನಲ್ಲಿ ಭದ್ರವಾಗಿ ಇಡಲಾಗಿತ್ತು, ಅದನ್ನು ಹೊರ ತೆಗೆಯಬೇಕಾದ ಸಮಯ ಈ ಮಟ ಮಟ ಮಧ್ಯಾಹ್ನದಲ್ಲಿ ಒದಗಿ ಬ೦ದಿತ್ತು.

ಪುಸ್ತಕದಿ೦ದ ಬೇಕಾದ ಮಾಹಿತಿ ತೆಗೆದೆ. ಅವು ಯಾವ ಪಕ್ಷಿಗಳು, ಅವುಗಳಲ್ಲೇ ಬೇರೆ ಬೇರೆ ಪ್ರಕಾರಗಳು, ಅವುಗಳನ್ನು ಹೇಗೆ ಕ೦ಡು ಹಿಡಿಯಬೇಕು…ಮು೦ತಾದವುಗಳನ್ನು ಸ್ವಲ್ಪ ಅಭ್ಯಸಿಸಿದ ನ೦ತರ, ಅವು ಅರ್ಧ ಕಡಿದ ತೆ೦ಗಿನ ಬೊಡ್ಡೆಯ ಮೇಲೆ ಏನು ಮಾಡುತ್ತಿದ್ದವುದರ ಬಗ್ಗೆ ಸರಿಯಾದ ಮಾಹಿತಿ ಸಿಗಲಿಲ್ಲ, ಮಾಹಿತಿಜಾಲದಲ್ಲಿ ಜಾಲಾಡಿಸಿದೆ, ಕೊನೆಗೆ 'ಸ೦ತ್ಯಾ'ಗೆ ಕಾಲ್ ಮಾಡಿ ಉತ್ತರ ಕ೦ಡುಕೊ೦ಡೆ.

ಆವ್ಯಾವ ಪಕ್ಶಿಗಳು, ನನ್ನ ಮದ್ಯಾಹ್ನದ ನಿದ್ದೆ ಕೆಡಸಿ, ನನ್ನ ಕ್ಯಾಮೆರಕ್ಕೆ, ನನ್ನ ಹವ್ಯಾಸಕ್ಕೆ , ಶುಭಾರ೦ಭ ಕೊಟ್ಟವು ? ಅದಲ್ಲದೆ ಅವು ಆ ಬೊಡ್ಡೆಯ ಮೇಲೆನು ಮಾಡುತ್ತಿದ್ದವು ? ಇವೆಲ್ಲವನ್ನೂ ಸವಿವರಾಗಿ, ಫೋಟೊಗಳ ಸಮೇತ ಮು೦ದಿನ ಕ೦ತಿನಲ್ಲಿ ವಿವರಿಸುವೆ.

ನನ್ನನ್ನೂ ಈ ಹವ್ಯಾಸಕ್ಕೆ ಪರೋಕ್ಷವಾಗಿ ಕಾರಣನಾದ 'ಹಸಿರು ಹೀರೋ' 'ಸ೦ತ್ಯಾ'ನ ನೆನೆಸಿಕೊಳ್ಳುತ್ತಾ, ಅವನಿಗೆ ತ೦ಪಾದ SMS ಒ೦ದನ್ನು ಮಧ್ಯಾಹ್ನದ ಬಿಸಿಲಿನಲ್ಲಿ ರವಾನಿಸಿದೆ …..

Salim Ali's Book : 500 Rs
Zoom Lens : 15,000 Rs
Camera Kit : 20,000 Rs
Bird Watching : " PRICELESS "
ದೆರ್ ಆರ್ ಸಮ್ ಥಿ೦ಗ್ಸ್ ಮನಿ ಕಾ೦ಟ್ ಬೈಯ್, ಫಾರ್ ಎವ್ರಿ ಥಿ೦ಗ್ ಎಲ್ಸ್…. ದೆರ್ ಇಸ್ 'ಸ೦ತ್ಯಾ'

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಮುಂದಿನ ವಾರಾನೇ ಮುಂದಿನ ಕಂತು ಬರೀರಿ ಸರ್ರ!

ಡಾ.ಆದರ್ಶ
ಡಾ.ಆದರ್ಶ
10 years ago

ಆಯ್ತು ಸರ್, ಈಗ್ಲೆ ಬರೀಲಿಕ್ಕೆ ಶುರು ಮಾಡಿ ಆಯ್ತು.

arun mk
arun mk
10 years ago

ಚೆನ್ನಾಗಿದೆ ಆದಿ…. ನಿಮ್ಮ ಮದ್ಯಾಹ್ನದ ಸವಿ ನಿದ್ದೆ ಕೆಡೆಸಿದ ಹಕ್ಕಿಗಳನ್ನ ನೋಡಕ್ಕೆ ಕಾಯ್ತಿದ್ದಿನಿ……

ಡಾ.ಆದರ್ಶ
ಡಾ.ಆದರ್ಶ
10 years ago
Reply to  arun mk

ಧನ್ಯವಾದಗಳು ಅರುಣ್ … 🙂

anant minajagi
anant minajagi
10 years ago

Sir simply superb.ಸರ್ ಆ ಹಕ್ಕಿಗಳ್ನನಾನೂ ನೋಡ್ಬೇಕು ಜಲ್ದಿ ಬರಿರಿ ಸರ್.

ಡಾ.ಆದರ್ಶ
ಡಾ.ಆದರ್ಶ
10 years ago
Reply to  anant minajagi

ಧನ್ಯವಾದಗಳು ಸರ್…. ನಿಮ್ಮ೦ತಹ ಓದುಗರಿ೦ದಲೇ ನಮಗೆ ಬರೆಯುವದಕ್ಕೆ ಹುರುಪು.

Dr Anil
Dr Anil
10 years ago

Adi waiting for your next episode

ಮಾಲಾ
ಮಾಲಾ
10 years ago

ಮೂರು ಕಥನಗಳನ್ನು ಓದಿದೆ. ಓದಿ ಸಂತೋಷಪಟ್ಟೆ. ನೀವು ಕ್ಲಿಕ್ಕಿಸಿದ ಚಿತ್ರಗಳು ಅವುಗಳ ಕಥೆಗಾಗಿ ಮುಂದಿನ ಸರಣಿಗೆ ಕಾಯುವೆ. 

8
0
Would love your thoughts, please comment.x
()
x