ಐದು ದಿನಗಳಿಂದ ಫ್ಯಾಕ್ಟ್ರಿಗೆ ಲೇಟಾಗುತ್ತಿತ್ತು. ಇಂದು ಏನಾದರೂ ಸರಿ, ಸರಿಯಾದ ಸಮಯಕ್ಕೆ ಫ್ಯಾಕ್ಟ್ರಿ ತಲುಪಲೇಬೇಕೆಂದು ಹಠದಿಂದ ಹೊರಟಿದ್ದೆ. ಸೈರನ್ನಿಗೆ ಐದು ನಿಮಿಷ ಮುಂಚೆಯೇ ಹಾಜರಿ ಬೆರಳಚ್ಚು ಒತ್ತಿ ಡಿಪಾರ್ಟುಮೆಂಟು ಸೇರಿದೆ.
ಇನ್ನೂ ಚುಮುಚುಮು ಕತ್ತಲು! ಮಹಡಿಯಲ್ಲಿದ್ದ ನನ್ನ ಚೇಂಬರಿನಲ್ಲಿ ವಿಸಿಟರ್ಸ್ ಕುರ್ಚಿಯಲ್ಲಿ ಯಾರೋ ಕೂತಿದ್ದರು!! ಇನ್ನೂ ಆಗಷ್ಟೇ ಷಾಪಿಗೆ ಜನ ಬರುತ್ತಿದ್ದರು. ಅಷ್ಟು ಬೆಳಿಗ್ಗೆ ನನ್ನ ಚೇಂಬರಿಗೆ ಯಾವ ವಿಸಿಟರ್ಸೂ ಬರಲು ಸಾಧ್ಯವಿರಲಿಲ್ಲ! ಅಂದರೆ ಅಲ್ಲಿ ವಕ್ಕರಿಸಿರುವವರು ಯಾರು ಎಂದು ಅಚ್ಚರಿಯಾಯಿತು. ಹಾರರ್ ಸಿನಿಮಾಗಳು ನೆನಪಾದವು! ಕಳೆದ ತಿಂಗಳು ಕ್ರೇನ್ ರಿಪೇರಿ ಮಾಡುವಾಗ ಕಂಟ್ರಾಕ್ಟರ್ ಕಡೆಯ ಕಾರ್ಮಿನೊಬ್ಬ ಬಿದ್ದು ಸತ್ತಿದ್ದ!! ಅವನು ದೆವ್ವವಾಗಿದ್ದಾನೆ ಎಂದು ಮೂರನೆಯ ಶಿಫ್ಟಿನ ಕಾರ್ಮಿಕರು ಗುಸುಗುಸು ಮಾತಾಡುತ್ತಿದ್ದರು! ಅದೇ ದೆವ್ವ ಇಲ್ಲಿ ವಕ್ಕರಿಸಿದೆಯೆ? ಬೆಚ್ಚಿದೆ, ಬೆವರಿದೆ!! ಸಧ್ಯಕ್ಕೆ ಲೈಟಿನ ಸ್ವಿಚ್ಚು ಬಾಗಿಲಲ್ಲೇ ಇತ್ತು.
"ಅರೆ..ವಿಶ್ವ!" ಬೆಳಕಿನಲ್ಲಿ ಕಂಡ ಆಕೃತಿ ಕಂಡು ನನ್ನ ಬಾಯಿಂದ ಉದ್ಗಾರ ಹೊರಬಿತ್ತು! ದೇಹದಿಂದ ಹಾರಲು ಹೊರಟಿದ್ದ ನನ್ನ ಆತ್ಮ ನಿಂತಿತು!
"ಅಯ್ಯೋ ಪಾಪಿ? ಹೀಗೇನೋ ಹೆದರಿಸೋದು? ದಿನಾ ಒಂಬತ್ತಕ್ಕೆ ಒಕ್ಕರಿಸುತ್ತಿದ್ದವನು ಇವತ್ತು ಆರೂವರೆಗೂ ಮುಂಚೆ ಬಂದು ನಿನ್ನ ಡಿಪಾರ್ಟ್ಮೆಂಟಿಗೆ ಹೋಗದೆ ಇಲ್ಲಿ ಬಂದು, ಕತ್ತಲಲ್ಲಿ ದೆವ್ವದ ತರಾ ಕೂತಿದ್ದೀಯ?"
"ನನಗೊಂದು ಹೊಸಾ ಐಡಿಯಾ ಹೊಳೀತು!" ವಿಶ್ವÀ್ವ ಅತ್ಯುತ್ಸಾಹದಿಂದ ಹೇಳಿದ.
ನನಗೆ ತಲೆ ಚಚ್ಚಿಕ್ಕೊಳ್ಳುವಂತಾಯಿತು! ವಿಶ್ವನ ಸ್ವಭಾವವೇ ಹೀಗೆ! ತನಗೆ ಆಗಾಗ್ಗೆ ದಿಢೀರನೆ ಹೊಳೆಯುವ ಐಡಿಯಾಗಳಿಂದ ಸಿಕ್ಕವರ ತಲೆ ತಿನ್ನುತ್ತಿದ್ದ. ಅದಕ್ಕೆ ತನಗೆ ಎಲ್ಲ ರೀತಿಯ ಪರಮಾಧಿಕಾರ ಇದೆ ಎಂದು ನಂಬಿದವನು! ಉಳಿದವರೆಲ್ಲಾ ಅವನ ಮಾತು ಕೇಳಲು, ಅವನ ಸಹಾಯಕ್ಕೆ ನಿಂತಿರುವವರು ಎಂದು ತಿಳಿದಿರುವವನು. ಜೊತೆಗೆ ಆಗಾಗ್ಗೆ ಅವನಿಗೆ ಚಿತ್ರವಿಚಿತ್ರ ಯೋಚನೆಗಳು ಬಂದು ನನ್ನನ್ನೂ ಸೇರಿದಂತೆ ಎಲ್ಲರ ತಲೆ ತಿನ್ನುತ್ತಿದ್ದ.
"ಏನದು?" ನಿರಾಸಕ್ತಿಯಿಂದ ಕೇಳಿದೆ.
"ನಾನು ಟಿವಿಯಲ್ಲಿ ಆಂಕರ್ ಆದರೆ ಹೇಗೆ?"
"ಯಾವುದಕ್ಕೆ ಆಂಕರ್ ಆಗ್ತೀಯ..? ನಿನ್ನ ಎಕ್ಸ್‍ಪರ್ಟೈಸೇನು? ನಿನ್ನ ಅನುಭವ ಏನು?" ಪ್ರಶ್ನೆಗಳ ಮಳೆ ಸುರಿಸಿದೆ.
"ಯಾವುದರಲ್ಲಿ ನನ್ನ ಎಕ್ಸ್‍ಪರ್ಟೈಸಿಲ್ಲ ಹೇಳು. ನಾನು ಸಕಳಕಲಾವಲ್ಲಭ. ಈಗ ಜನರಿಗೆÀ ತಿನ್ನುವ ಚಪಲ ಹೆಚ್ಚು! ಎಲ್ಲಾ ಚಾನಲ್ಲುಗಳಲ್ಲೂ ಅಡಿಗೆ ಪ್ರೋಗ್ರಾಮುಗಳು ಬರ್ತಿವೆ. ಇಂತಾದೊಂದು ಪ್ರೋಗ್ರಾಮಿಗೆ ಆಂಕರ್ ಆಗ್ತೀನಿ. ಹೇಗೂ ಉಪ್ಪಿಟ್ಟು ಮಾಡೋದು, ನೂಡಲ್ಸ್ ಮಾಡೋದು ಬರುತ್ತೆ ನನ್ನ ಈ ಪ್ರೋಗ್ರಾಮಿಗೆ ಒಂದು ಒಳ್ಳೆ ಟೈಟಲ್ ಯೋಚಿಸು. ಅಂತಾ ಸಾಮಾನ್ಯ ಕೆಲಸ ನನ್ಕೈಲ್ ಆಗೊಲ್ಲ. ಅದಕ್ಕೆ ನೀನೇ ಲಾಯಕ್ಕು"
ವಿಶ್ವನ ಮಾತಿಗೆ ಅಳು, ನಗು ಎರಡೂ ಒಟ್ಟೊಟ್ಟಿಗೆ ಬಂದುವು! ಕ್ರಿಯಾತ್ಮಕ ಕೆಲಸ ಅವನ ದೃಷ್ಟಿಯಲ್ಲಿ ಸಾಮಾನ್ಯ ಕೆಲಸ!! ಅದಕ್ಕೆ ನಾನೇ ಲಾಯಕ್ಕಂತೆ!! ಜೊತೆಗೆ ಫ್ಯಾಕ್ಟ್ರಿಯಲ್ಲಿ ಇನ್ನೂ ಕೆಲಸವೇ ಶುರುವಾಗಿರಲಿಲ್ಲ ಆಗಲೇ ಇವನ ಕಾಟ! ಇವನನ್ನು ಹೇಗೆ ಆಚೆ ಕಳಿಸಲಿ ಎಂದು ಯೋಚಿಸಿದೆ.
"ಆಗಲಿ, ಯೋಚನೆ ಮಾಡ್ತೀನಿ. ಇನ್ನು ಹತ್ತು ನಿಮಿಷದಲ್ಲಿ ನನ್ನ ಸೂಪರ್‍ವೈಸರ್ಗಳು ಬರ್ತಾರೆ ಜಾಬ್ ಪ್ರೋಗ್ರೆಸ್ ಮೀಟಿಂಗಿದೆ. ತಾವು ದಯಮಾಡಿ ಜಾಗ ಖಾಲಿ ಮಾಡಿದರೆ ಒಳ್ಳೆಯದು"
ನಯವಾಗಿ ವಿಶ್ವನಿಗೆ ಹೇಳಿದೆ.
"ಓಕೆ. ನಿನಗೊಬ್ಬನಿಗೇ ಕೆಲಸ ಇರೋದು, ನಾವೆಲ್ಲಾ ದಂಡಪಿಂಡಗಳು ಅಂದ್ಕೊಂಡಿದ್ದೀಯಾ..? ಕಾಫಿ ಟೈಮಿಗೆ ಬರ್ತೀನಿ. ಆಗ ಟೈಟಲ್ಲು ರೆಡಿಯಾಗಿರಲಿ" ವಿಶ್ವ ಎದ್ದ.
ಸಧ್ಯ ಅವನು ಹೊರಟರೆ ಸಾಕೆಂದಿದ್ದು ಅವನ ಮಾತಿಗೆ ಹೂಗುಟ್ಟಿದೆ.
ವಿಶ್ವ ಹೊರಟೊಡನೆಯೇ ಕಾರ್ಖಾನೆಯ ಬೃಹತ್ ಸಾಗರದಲ್ಲಿ ಮುಳುಗಿದೆ. ಕಾಫಿ ಟೈಮು ಬಂದಿದ್ದೇ ಗೊತ್ತಿರಲಿಲ್ಲ.
"ಸಿಕ್ತಾ..?" ಎನ್ನುತ್ತಾ ವಿಶ್ವ ಚೇಂಬರಿನೊಳಕ್ಕೆ ಬಂದ.
"ಏನು?" ಕಾಫಿ ಹೀರುತ್ತಿದ್ದ ನಾನು ಅಚ್ಚರಿಯಿಂದ ಕೇಳಿದೆ.
"ರಾತ್ರಿಯೆಲ್ಲಾ ರಾಮಾಯಣ ಕೇಳಿ ಬೆಳಿಗ್ಗೆ ಎದ್ದು ರಾಮ-ಸೀತೆಯರಿಗೆ ಏನು ಸಂಬಂಧ ಅಂದು ಕೇಳಿದನಂತೆ ಒಬ್ಬ!! ಅಲ್ವೋ ಬೆಳ್ಳಂಬೆಳಿಗ್ಗೇನೇ ಹೇಳಿ ಹೋದೆ. ನನ್ನ ಕುಕಿಂಗ್ ಪೆÇ್ರೀಗ್ರಾಮಿಗೆ ಒಂದು ಆಕರ್ಷಕವಾದ, ಅಧ್ಭುತವಾದ ಟೈಟಲ್ ಯೋಚಿಸು ಅಂತಾ ಹೇಳಿ ಹೋದೆ. ಮರ್ತೇಬಿಟ್ಟೆಯಾ..?"
"ಮರ್ತಿಲ್ಲ, ಯೋಚಿಸ್ತಾ ಇದ್ದೀನಿ. ಲಂಚ್ ಟೈಮಲ್ಲಿ ಹೇಳ್ತೀನಿ" ಬೀಸೋ ದೊಣ್ಣೆಯಿಂದ ತಪ್ಪಿಸಿಕ್ಕೊಳ್ಳೋ ಪ್ರಯತ್ನ ಮಾಡಿದೆ.
"ಓ.ಕೆ. ಮತ್ತೆ ಮರತ್ರೆ ಜೋಕೆ! ಹತ್ಸಾವ್ರ ಸಾಲ ಕೇಳಿದ್ದೆಯಲ್ಲ ಅದು ಸಿಗೊಲ್ಲ ಅಷ್ಟೆ"
ವಿಶ್ವ ಧಮಕೀ ಹಾಕಿ ಎದ್ದು ಹೋದ. ನನ್ನ ಆಪತ್ಕಾಲದ ರಿಸರ್ವ್ ಬ್ಯಾಂಕ್ ವಿಶ್ವ. ಅವನ ಕೋರಿಕೆಯನ್ನು ನಾನು ಲಘುವಾಗಿ ತೆಗೆದುಕ್ಕೊಳ್ಳುವಂತೆಯೂ ಇರಲಿಲ್ಲ. ಕೆಲಸದಲ್ಲಿ ಭರದಲ್ಲಿ ವಿಶ್ವನೂ ಅವನ ಕುಕಿಂಗ್ ಪ್ರೋಗ್ರಾಮ್ ಟೈಟಲ್ಲಿನ ನೆನಪೇ ಇರಲಿಲ್ಲ.
ವರ್ಕ್‍ಷಾಪಿನಲ್ಲಿ ಸೂಪರ್ವೈಸರ್ ನಾಗೇಶ್ ಜೊತೆ ಮಾತಾಡುತ್ತಿದ್ದಾಗ 'ನನ್ನ ನೀನು ಗೆಲ್ಲಲಾರೆ' ಎಂಬ ರಿಂಗ್‍ಟೋನು ಮೊಬೈಲಿನಲ್ಲಿ ಉಲಿಯಿತು. ಅದು ವಿಶ್ವ ಎಂದು ಬೇರೆ ಹೇಳಬೇಕಾಗಿರಲಿಲ್ಲ.
'ತಕ್ಷಣ ಕ್ಯಾಂಟೀನಿಗೆ ಬರದಿದ್ರೆ ಕೂಳು ಸಿಕ್ಕೊಲ್ಲ! ಕ್ಯಾಂಟೀನು ಮುಚ್ತಾ ಇದೆ" ಫೋನಿನಲ್ಲಿ ವಿಶ್ವನ ದನಿ ಕೇಳಿತು.
"ಹೇಳು, ನನ್ನ ಟಿವಿ ಪ್ರೋಗ್ರಾಮಿಗೆ ಏನು ಟೈಟಲ್ ಯೋಚಿಸಿದೆ?"
ತುತ್ತು ಬಾಯಿಗಿಡುವಾಗ ಕ್ಯಾಂಟೀನಿನಲ್ಲಿ ವಿಶ್ವ ಕೇಳಿದ. ಆ ಮಾತಿಗೆ ತುತ್ತು ಗಂಟಲಿಂದ ಕೆಳಗಿಳಿಯಲಿಲ್ಲ! ಅವನ ಅಂಕರಿಂಗ್ ವಿಷಯ ಮರೆತೇ ಹೋಗಿತ್ತು! ಅವನಾಗಲೇ ಊಟ ಮುಗಿಸಿ ನನಗಾಗಿ ಕಾಯಿತ್ತಿದ್ದ.
"ಅದು..ಅದಕ್ಕೆ ಸೂಕ್ತವಾದ ಟೈಟಲ್..ಊಂ..?" ಅದರ ಬಗೆಗೆ ಕಿಂಚಿತ್ತೂ ಯೋಚಿಸದಿದ್ದರಿಂದ ಮಾತೆಳೆದೆ.
"ನುಗ್ಗೇಕಾಯಲ್ಲಿ ಪ್ರೋಟೀನು ಜಾಸ್ತಿ ಇರುತ್ತೆ..ಇನ್ನೊಂದೆರಡು ಹೋಳು ಹಾಕ್ಕೋ.." ವಿಶ್ವ ಉಪಚರಿಸಿದ.
"ಫಟಾಫಟ್ ಅಡಿಗೆ ಅಂದರೆ ಹೇಗಿರುತ್ತೆ" ತಕ್ಷಣ ಹೊಳೆದದ್ದು ಹೇಳಿದೆ.
"ವ್ಹಾ..ಸೂಪರ್! ಒಂದೊಂದ್ಸಲ ನಿನ್ನ ತಲೇನೂ ಓಡುತ್ತೆ.." ಬೆನ್ನಿನ ಮೇಲೆ ಮೆಚ್ಚುಗೆಯಿಂದ ಗುದ್ದಿದ ವಿಶ್ವ.
ಕೈಯಲ್ಲಿದ್ದ ತುತ್ತು ಟೇಬಲ್ ಮೇಲೆ ಎರಚಿತು!
"ಸಂದರ್ಭ ನೋಡ್ಕೊಂಡು ನಿನ್ನ ಭಾವನೆಗಳನ್ನ ತೋರಿಸು. ಹೀಗೆ…" ಆಕ್ಷೇಪಿಸಿದೆ.
"ಸಾರಿ. ಟೈಟಲ್ ಚೆನ್ನಾಗಿದೆ. ಇಲ್ಲೀವರೆಗೂ ಯಾರಿಗೂ ಇಂತಾ ಟೈಟಲ್ ಹೊಳೆದಿಲ್ಲ! ಫಾಸ್ಟ್ ಲೈಫಿಗೆ ಇದು ಸೂಟ್ ಆಗುತ್ತೆ. ನೋಡ್ತಿರು..ಇಡೀ ಕರ್ನಾಟಕದಲ್ಲಿ ನನ್ನ ಪೆÇ್ರೀಗ್ರಾಮ್ ಸೂಪರ್ ಆಗಿಬಿಡುತ್ತೆ"
"ಆಲ್ ದಿ ಬೆಸ್ಟ್. ನೀನು ಸೂಪರ್ ಆಂಕರ್ ಆದಮೇಲೆ ನನ್ನ ಮರೀಬೇಡ" ವಿಶ್ವನನ್ನು ಹಳಿಯಿಲ್ಲದ ರೈಲು ಮೇಲೆ ಓಡಿಸಿದೆ!! ವಿಶ್ವ ಗೆಲುವಿನ ನಗೆ ನಕ್ಕ!
ಮಾರನೆ ದಿನ ವಿಶ್ವ ಫ್ಯಾಕ್ಟ್ರಿಗೆ ಬಂದಿರಲಿಲ್ಲ. ಅವನ ಡಿಪಾರ್ಟ್ಮೆಂಟಲ್ಲಿ ವಿಚಾರಿಸಿದ್ದಕ್ಕೆ ಅವನು ಹದಿನೈದು ದಿನ ರಜಾ ಹಾಕಿದ್ದಾನೆ ಅನ್ನೋ ಸುದ್ದಿ ತಿಳಿಯಿತು. ರಜಾಕ್ಕೆ ಕಾರಣ ತಿಳಿಯಲಿಲ್ಲ. ಫೋನಾಯಿಸಿದೆ. ಸ್ವಿಚ್ ಆಫ್ ಆಗಿತ್ತು. ವಿಶ್ವನ ವಿಚಿತ್ರ ಸ್ವಭಾವ ನನಗೇನೂ ಹೊಸದಲ್ಲ. ನಿಜಕ್ಕೂ ವಿಶ್ವನಿಗೆ ಕೆಲಸದ ಅವಶ್ಯಕತೆಯೇ ಇರಲಿಲ್ಲ. ಶ್ರೀಮಂತ ಅಪ್ಪನ ಏಕೈಕ ಪುತ್ರ ವಿಶ್ವ, ಇಂಜಿನಿಯರಿಂಗ್ ಡಿಗ್ರಿ ಪಡೆದಿರುವುದಕ್ಕಷ್ಟೆ ಕೆಲಸಕ್ಕೆ ಬಂದಿದ್ದ! ಸದಾ ಏನಾದರೂ ಹುಚ್ಚು ಹತ್ತಿಸಿಕೊಂಡು ಓಡಾಡುವ ಪ್ರವೃತ್ತಿ ವಿಶ್ವನದು. ಈ ಹಿಂದೆ ವಿಶ್ವನ ಇಂತಾ ಅನೇಕ ತಿಕ್ಕಲುಗಳನ್ನು ನೋಡಿದ್ದರಿಂದ ನಾನು ನನ್ನ ಕೆಲಸದಲ್ಲಿ ಮುಳುಗಿದೆ.
ವಿಶ್ವ ರಜೆ ಹಾಕಿ ಹತ್ತು ದಿನ ಕಳೆದಿತ್ತು. ಅಂದು ಶನಿವಾರ. ರಾತ್ರಿ ಊಟದ ನಡುವೆ "ರೀ..ನಾಳೆ ನಿಮ್ಮ ಫ್ರೆಂಡ್ ವಿಶ್ವ ಅವರದ್ದು ಫಟಾಫಟ್ ಅಡಿಗೆ ಪ್ರೋಗ್ರಾಮ್ ಶುರುವಾಗುತ್ತೆ ಎಂದು ನನ್ನ ಪತ್ನಿ ಹೇಳಿದಾಗ ಪರಮಾಶ್ಚರ್ಯ! ಭಲೇ ವಿಶ್ವ! ಹೇಳಿದ್ದು ಸಾಧಿಸಿಯೇಬಿಟ್ಟೆ! ಎಂದುಕೊಂಡೆ.
ಎಂದೂ ಟಿವಿ ನೋಡದ ನಾನು ವಿಶ್ವನ ಪ್ರೋರೀಗ್ರಾಮ್ ನೋಡಲು ಕೂತೆ. ರಿಮೋಟ್ ನನ್ನ ಕೈನಲ್ಲಿದ್ದುದಕ್ಕ್ಕೆ ನನ್ನ ಮಕ್ಕಳು ಮುದುಡಿಕೊಂಡು ಕೂತಿದ್ದರು. ಮನೆಯವಳು ಬೇಗ ಕೆಲಸ ಮುಗಿಸಿ ಬಂದು ಕೂತಳು.
ವಿಶ್ವ ಟಿವಿಯಲ್ಲಿ ಕಾಣಿಸಿದ. ಮುತುವರ್ಜಿಯಿಂದ ಮೇಕಪ್ ಮಾಡಿಸಿಕೊಂಡಿದ್ದ. ವಿಶ್ವನ ಮಾತು ಶುರುವಾಯಿತು.
"ವೀಕ್ಷಕರೆ, ಫಟಾಫಟ್ ಅಡಿಗೆಯ ಮೊಟ್ಟಮೊದಲ ಕಾರ್ಯಕ್ರಮಕ್ಕೆ ಸ್ವಾಗತ, ಸುಸ್ವಾಗತ. ಇದು ಲೈವ್ ಕಾರ್ಯಕ್ರಮ. ಅದು ಈ ಕಾರ್ಯಕ್ರಮದ ವಿಶೇಷ. ದಯವಿಟ್ಟು ಗಮನದಲ್ಲಿಡಿ, ಇದು ರೆಕಾರ್ಡೆಡ್ ಅಲ್ಲ. ಈ ಕಾರ್ಯಕ್ರಮದಲ್ಲಿ ಇಂದಿನ ಆಧುನಿಕ ಜೀವನಶೈಲಿಗೆ ಹೊಂದುವಂತ ಫಟಾಫಟ್ ಅಡಿಗೆಗಳ ಪ್ರಾತ್ಯಕ್ಷಿಕೆಯನ್ನು ತೋರಿಸುತ್ತೇವೆ. ಕೇವಲ ಹತ್ತು ನಿಮಿಷದಲ್ಲಿ ಮಾಡುವ ಫಟಾಫಟ್ ಅಡಿಗೆಗಳನ್ನು ಇಲ್ಲಿ ರಿಯಲ್ ಟೈಮಲ್ಲಿ ತೋರಿಸ್ತೇವೆ. ಈ ಕಾರ್ಯಕ್ರಮದ ಪಾಯೋಜಕರು…"
ಪ್ರಾಯೋಜಕರು ಮತ್ತವರ ಉತ್ಪನ್ನದ ಪರಿಚಯ ಎರಡು ನಿಮಿಷಗಳ ಸಮಯ ತೆಗೆದುಕೊಂಡಿತು. ಮತ್ತೆ ವಿಶ್ವ ಟಿವಿಯಲ್ಲಿ ಕಾಣಿಸಿದ.
"ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾರೆ ಶ್ರೀಮತಿ ಸುರಭಿ. ಸುರಭಿಯವರೆ ನಿಮಗೆ ಸ್ವಾಗತ. ತಾವು ಎಲ್ಲಿಂದ ಬಂದಿದ್ದೀರಿ?"
"ಸಿಂಗಾಪುರ" ಭರ್ಜರಿ ಮೇಕಪ್ಪಿನಲ್ಲಿದ್ದ ಮಧ್ಯವಯಸ್ಸಿನ ಆಕೆ ನಾಚುತ್ತಾ ಉಲಿದಳು
"ಓ..ಸೂಪರ್..ನೋಡಿ ವೀಕ್ಷಕರೆ ನಮ್ಮ ಈ ಪೆÇ್ರೀಗ್ರಾಮಿಗೆ ವಿದೇಶದಿಂದ ಶ್ರೀಮತಿ ಸುರಭಿ ಬಂದಿದ್ದಾರೆ. ಇದಂತೂ ನಿಜಕ್ಕೂ ಅದ್ಭುತ ಅಲ್ಲವೆ..?"
"ವಿದೇಶದಿಂದ ಅಲ್ಲ ಸ್ವದೇಶದಿಂದ. ಇಲ್ಲೇ ಬೆಂಗ್ಳೂರಿನಿಂದ ಇಪ್ಪತ್ತೈದು ಕಿಲೋಮೀಟರಿನಲ್ಲಿ ನಮ್ಮೂರು ಸಿಂಗಾಪುರ ಇರೋದು" ಆಕೆಯ ಮಾತಿಗೆ ವಿಶ್ವನಿಗೆ ಕೊಂಚ ಕಸಿವಿಸಿಯಾದಂತಿತ್ತು.
"ಸೂಪರ್! ಭಾರತದಲ್ಲೇ ಸಿಂಗಾಪುರ ಇದೆ! ಸರಿ ಸುರಭಿಯವರೆ ಇವತ್ತು ನಮ್ಮ ವೀಕ್ಷಕರಿಗೆ ಯಾವ ಅಡಿಗೆ ತೋರಿಸುತ್ತೀರಿ?"
"ಸುಲಬವಾಗಿ, ಕಡಿಮೆ ಸಮಯದಲ್ಲಿ ತಯಾರಿಸಿ ಹೆಚ್ಚು ಸಮಯ ತಿನ್ನಬಹುದಾದ ಮಟರ್ ಕಟರ್ ಕರಿ"
ಕಾರ್ಯಕ್ರಮ ಹೀಗೇ ಮುಂದುವರಿದು, ಅದನ್ನು ತಯಾರಿಸಲು ಬೇಕಾದ ಸಾಮಾನುಗಳ ವಿವರ, ಮಾಡುವ ವಿಧಾನದ ಪ್ರಾತ್ಯಕ್ಷಿಕೆ ಕೂಡ ಕಂಡಿತು.
"ಮಟರ್ ಕಟರ್ ಕರಿ ಈಗ ಸಿದ್ಧವಾಗಿದೆ, ಅದನ್ನು ಸವಿಯಲು ನಾನು ಕಾತರನಾಗಿದ್ದೇನೆ. ನೀವು ಕೂಡ ಇದನ್ನು ನಿಮ್ಮ ಮನೆಯಲ್ಲಿ ಮಾಡಿ ಸವಿಯಿರಿ. ಸುರಭಿಯವರೆ ಈಗ ಈ ಕರಿಯನ್ನ ನಾವು ಸವಿಯೋದು ಬೇಡ ಇದನ್ನ ಮೂರನೆಯವರು ತಿಂದು ಹೇಳಿದರೆ ಚೆನ್ನ ಅಲ್ಲವೆ..?" ವಿಶ್ವ ಕೇಳಿದ.
"ಯಾಕೆ ? ತಿನ್ನೋಕೆ ನಿಮಗೆ ಹೆದರಿಕೇನಾ..?" ಅಕೆ ದಭಾಯಿಸಿದರು!
ಆಕೆಯ ಮಾತಿಗೆ ವಿಶ್ವನಂತೆ ನಾನೂ ಕೂಡ ಮೆಟ್ಟಿಬಿದ್ದೆ. ಗಟ್ಟಿ ಹೆಣ್ಣು ಅನ್ನಿಸಿತು.
"ಹಾಗಲ್ಲ.."
"ಹಾಗೂ ಇಲ್ಲ ಹೀಗೂ ಇಲ್ಲ. ಮೊದಲು ನೀವೇ ತಿನ್ನಬೇಕು. ಇಲ್ಲದಿದ್ರೆ ನಾನು ಸುಮ್ಮನಿರೊಲ್ಲ"
ಇದ್ದಕ್ಕಿದ್ದಂತೆ ಸ್ಕ್ರೀನ್ ಬ್ಲಾಂಕ್ ಆಯಿತು.
"ತಾಂತ್ರಿಕ ಕಾರಣಗಳಿಂದ ಕಾರ್ಯಕ್ರಮವನ್ನು ತೋರಿಸಲಾಗುತ್ತಿಲ್ಲ. ನಾಳೆ ಇದೇ ಸಮಯಕ್ಕೆ ಫಟಾಫಟ್ ಅಡಿಗೆ ತೋರಿಸುತ್ತೇವೆ. ಮುಂದಿನ ಕಾರ್ಯಕ್ರಮ.."
"ಏನ್ರೀ ಇದು..?" ನನ್ನವಳು ಆಶ್ಚರ್ಯದಿಂದ ಕೇಳಿದಳು.
"ಏನೋ ತೊಂದ್ರೆ ಇರಬೇಕು. ನಾಳೆ ಬರುತ್ತಲ್ಲಾ ಬಿಡು" ಎಂದೆ.
ಬೆಳ್ಳಂಬೆಳಿಗ್ಗೆ, ಇನ್ನೂ ಕತ್ತಲಿರುವಾಗಲೇ ವಿಶ್ವ ನನ್ನ ಚೇಂಬರಿನಲ್ಲಿ ಕಂಡ! ಮೊದಲ ಟೆಸ್ಟಿನಲ್ಲಿ ಸೊನ್ನೆ ಬಾರಿಸಿದ ಕ್ರಿಕೆಟಿಗನಂತೆ ಮುಖ ಮಾಡಿದ್ದ!!
"ಏನಾಯ್ತೋ? ಯಾಕೆ ಹೀಗೆ ಡಿಪಾಜಿಟ್ ಕಳ್ಕೊಂಡ ಸಿಟ್ಟಿಂಗ್ ಎಮ್ಮೆಲ್ಲೇ ತರಾ ಕೂತಿದ್ದೀಯ?" ಎಂದು ಕೇಳಿದೆ.
"ಎಕ್ಕುಟ್ಟೋಯ್ತು! ಆ ಬಜಾರಿ ಸುರಭಿ, ಕರೀನ ನಾನು ತಿನ್ನೋಕೆ ಒಪ್ಪಲ್ಲಿಲ್ಲಾಂತ ನನ್ನ ಮುಖಕ್ಕೇ ಮೆತ್ತೋಕೆ ಬಂದ್ಲು! ಡೈರೆಕ್ಟರ್ ಕಟ್ ಕಟ್ ಎಂದ. ಅಲ್ಲಿಗೆ ಎಲ್ಲಾ ಮುಗಿದೋಯ್ತು" ಅಳು ಮುಖ ಮಾಡಿದ ವಿಶ್ವ.
"ಅದ್ಸರಿ, ಆಕೆ ಮಾಡಿದ್ದು ನೀನ್ಯಾಕೆ ತಿನ್ನೋಕೆ ಒಪ್ಪಲಿಲ್ಲ?"
"ಆಕೆ ಮಾಡಿದ್ದು ನೋಡಿ ಹೆದ್ರಿಕೆಯಾಯ್ತು. ಸರಿಯಾಗಿ ಬೇಯಿಸೇ ಇರಲಿಲ್ಲ! ತಿಂದ್ರೆ ವಾಂತಿ ಬೇಧಿ ಗ್ಯಾರಂಟಿ ಅನ್ನಿಸಿತು"
"ಅಡಿಗೆ ಆಂಕರುಗಳು ರುಚಿ ನೋಡಬೇಕು ವಿಶ್ವಾ..ಹೋಗ್ಲಿ ಬಿಡು ಮತ್ತೆ ಈ ಪ್ರೋಗ್ರಾಮು..?"
"ಮತ್ತೆ ಬರೊಲ್ಲ. ನೆನ್ನೇದೆ ಮೊದಲು ಮತ್ತು ಕೊನೆ"
ವಿಶ್ವನ ಬಗೆಗೆ ಅಯ್ಯೋ ಪಾಪ ಎನಿಸಿತು.
"ಅಪ್ಪಿತಪ್ಪಿ ಈ ಪ್ರೋಗ್ರಾಮ್ ಬಗ್ಗೆ ಯಾರ ಹತ್ರಾನಾದ್ರೂ ನೀನು ಬಾಯಿಬಿಟ್ರೆ ಹಲ್ಲು ಉದ್ರಿಸಿಬಿಡ್ತೀನಿ. ಜೋಕೆ"
ವಿಶ್ವ ಎಚ್ಚರಿಕೆ ನೀಡಿ ಎದ್ದು ಹೋದ! ನಾನು ಅವನು ಹೋದ ದಿಕ್ಕನ್ನೇ ನೋಡುತ್ತಾ ನಿಂತೆ!!
-ಎಸ್.ಜಿ.ಶಿವಶಂಕರ್,