ಪ್ರೌಢಶಾಲಾ ಶಿಕ್ಷಕರಿಗಾಗಿ ಶಿಕ್ಷಣದಲ್ಲಿ ರಂಗಕಲೆ ಕಾರ್ಯಾಗಾರ: ಶ್ರೀಮತಿ. ಶಾರದ. ಎಚ್.ಎಸ್

ದಿನಾಂಕ 13.06.2015ರಂದು ಸರ್ಕಾರಿ ಪ್ರೌಢಶಾಲೆ, ಕುಕ್ಕರಹಳ್ಳಿಯಲ್ಲಿ ಮೈಸೂರು ದಕ್ಷಿಣ ವಲಯ ಮತ್ತು ಮೈಸೂರು ತಾಲ್ಲೂಕಿನ ಆಯ್ದ ಸರ್ಕಾರಿ ಪ್ರೌಢಶಾಲೆಗಳ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಬೋಧಿಸುವ ಶಿಕ್ಷಕರಿಗಾಗಿ ಶಿಕ್ಷಣದಲ್ಲಿ ರಂಗಕಲೆ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ, ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಆರ್.ಪೂರ್ಣಿಮ ಅವರು ಇಡೀ ಕಾರ್ಯಾಗಾರವನ್ನು ನಡೆಸಿಕೊಡುವ ಜವಾಬ್ದಾರಿಯನ್ನು ಹೊತ್ತಿದ್ದರು. ಸುಪ್ರಸಿದ್ಧ ನಾಟಕಕಾರ ಶೇಕ್ಸ್‍ಪಿಯರ್‍ನ ಜನಪ್ರಿಯ ಉಕ್ತಿ

 “ಜೀವನವೆಂಬೀ ನಾಟಕರಂಗದಿ
 ಪಾತ್ರಧಾರಿಗಳು ಗಂಡು ಹೆಣ್ಣುಗಳು,
 ಅವರವರದ್ದೇ ನಿರ್ಗಮನ ಆಗಮನಗಳು,
 ನಟನೋರ್ವನ ಜೀವಿತಾವಧಿಯಲಿ,
 ಅವನಭಿನಯದ ಪಾತ್ರಗಳು ಹಲವಾರು”

ಇದನ್ನು ಡಾ.ಆರ್.ಪೂರ್ಣಿಮ ಅವರು ಶಿಬಿರಾರ್ಥಿಗಳಿಗೆ ಹೇಳಿಕೊಡುವುದರ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮತ್ತು ವಿಶಿಷ್ಟವಾಗಿ ಉದ್ಘಾಟಿಸಿದರು.

ತರಗತಿಯಲ್ಲಿ ರಂಗಕಲೆಯನ್ನು ಹೇಗೆ ಬಳಸಿಕೊಳ್ಳಬಹುದು? ಯಾವುದೇ ಸಲಕರಣೆಗಳಿಲ್ಲದಿದ್ದರೂ ಸಹ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಬೋಧಿಸುವುದು ಹೇಗೆ? ವಿದ್ಯಾರ್ಥಿಗಳಿಗೆ ಕ್ಲಿಷ್ಟಕರ ಸನ್ನಿವೇಶಗಳನ್ನು ಅರ್ಥಮಾಡಿಸುವುದು ಹೇಗೆ? ಎಂಬುದನ್ನು ಡಾ.ಆರ್.ಪೂರ್ಣಿಮ ಅವರು ಸ್ವತಃ ಅಭಿನಯ ಮಾಡುವುದರ ಮೂಲಕ ಪ್ರಸ್ತುತಪಡಿಸಿದರು.

 

ನಾಟಕ ಎಂದಾಕ್ಷಣ ಕೇವಲ ಸಂಭಾಷಣಾ ರೂಪದಲ್ಲಿರುವ ಗದ್ಯವಷ್ಟೇ ಅಲ್ಲ, ಕಥೆಗಳನ್ನು, ಪದ್ಯಗಳನ್ನೂ ಸಹ ಸಂಭಾಷಣೆ ಬರೆಯುವುದರ ಮೂಲಕ ಅಭಿನಯಿಸಬಹುದು ಎಂಬುದನ್ನು ವಿವರಿಸಿ, ಟ್ಯಾಗೋರರ, “ಐ ವೆಂಟ್ ಎ ಬೆಗ್ಗಿಂಗ್” ಮತ್ತು ಎಜóಕಿಲ್ ಅವರ  “ಎ ನೈಟ್ ಆಫ್ ದ ಸ್ಕಾರ್ಪಿಯನ್” ಎಂಬ ಪದ್ಯಗಳನ್ನು ಶಿಬಿರಾರ್ಥಿಗಳೇ ಅಭಿನಯಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ರಾಷ್ಟ್ರಕವಿ ಕುವೆಂಪು ಅವರ ಪ್ರಸಿದ್ಧ ಕೃತಿ “ಮಲೆಗಳಲ್ಲಿ ಮದುಮಗಳು” ಇದರ ಒಂದು ಅಧ್ಯಾಯವನ್ನು ಮನಮುಟ್ಟುವಂತೆ ವಿವರಿಸಿ, ಶಿಬಿರಾರ್ಥಿಗಳೇ ಅದನ್ನು ರಂಗದ ಮೇಲೆ ಪ್ರಯೋಗಿಸುವಂತೆ ಪ್ರೋತ್ಸಾಹಿಸಿದರು. ಅಲ್ಲದೇ,“ಕಾನೂರು ಸುಬ್ಬಮ್ಮ ಹೆಗ್ಗಡತಿ” ಕೃತಿಯ ಸೀತೆಯ ಕನಸನ್ನೂ ಮತ್ತು ಜೂಲಿಯಸ್ ಸೀಸರ್ ನಾಟಕದ ಕ್ಯಾಲ್ಪರ್ನಿಯ ಕನಸನ್ನೂ ಅಭಿನಯಿಸಿ, ಸಾಹಿತ್ಯದಲ್ಲಿ ಪ್ರಯೋಗವಾಗುವ ತಂತ್ರಗಳಿಗೆ ಇರುವ ಪ್ರಾಮುಖ್ಯತೆಯ ಬಗ್ಗೆ ಗಮನ ಸೆಳೆದರು.ಭಾಷಾಶುದ್ಧಿ, ಧ್ವನಿಯ ಏರಿಳಿತಗಳು, ಹಾವಭಾವ, ಆಂಗಿಕ ಅಭಿನಯ, ಇವುಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸಿ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತೆ ವಿಷಯಗಳನ್ನು ಮುಟ್ಟಿಸುವುದು ಹೇಗೆ? ಎಂಬುದನ್ನು ರಸವತ್ತಾಗಿ ತೋರಿಸಿದರು.

ಒಟ್ಟಾರೆಯಾಗಿ ಇಡೀ ದಿನದ ಕಾರ್ಯಕ್ರಮ ಲವಲವಿಕೆಯಿಂದ ಕೂಡಿದ್ದು, ಶಿಬಿರಾರ್ಥಿಗಳು, ತಮ್ಮ ತರಗತಿಗಳಲ್ಲಿ ರಂಗಕಲೆಯನ್ನು ಅಳವಡಿಸಿಕೊಳ್ಳುತ್ತೇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಕಾರ್ಯಾಗಾರದ ಸಫಲತೆಯನ್ನು ಬಿಂಬಿಸಿತು.ಕುಕ್ಕರಹಳ್ಳಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀ.ವಿ.ಎಸ್.ಪ್ರಕಾಶ್ ಅವರು, ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರ ನಾಯಕ್ ಅವರು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ. ಶಾರದ. ಎಚ್.ಎಸ್ ಅವರು ವಂದಿಸಿದರು.

-ಶ್ರೀಮತಿ. ಶಾರದ. ಎಚ್.ಎಸ್

*****
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x