ಪ್ರೊ. ಎಂ.ಎಂ. ಕಲ್ಬುರ್ಗಿ ನಾನು ಕಂಡಂತೆ.. : ಗಿರಿಜಾಶಾಸ್ತ್ರಿ, ಮುಂಬಯಿ.


ಸುಮಾರು 1990ರ ಆಸುಪಾಸು. ಪ್ರೊ. ಎಂ.ಎಂ. ಕಲ್ಬುರ್ಗಿ ಯವರು ಒಂದು ಉಪನ್ಯಾಸ ಮಾಡಲು ಮುಂಬಯಿ ವಿ.ವಿಯ ಕನ್ನಡ ವಿಭಾಗಕ್ಕೆ ಬಂದಿದ್ದರು. ಬಹುಶಃ ಅವರ “ಮಾರ್ಗ” ಸಂಪುಟಗಳ ಬಗ್ಗೆ ಮಾತನಾಡಿದರೆನಿಸುತ್ತೆ. ಅದರ ವಿವರಗಳು ಈಗ ಸರಿಯಾಗಿ ನೆನಪಿಲ್ಲದಿದ್ದರೂ, ನಮ್ಮನ್ನೆಲ್ಲಾ ಅಂದು ಬೆರಗುಗೊಳಿಸಿದ್ದ ಅವರ ಪಾಂಡಿತ್ಯದ ಆಳ ಅಗಲಗಳ ವರ್ಚಸ್ಸು, ಆ ಪ್ರಭಾವ ಇನ್ನೂ ಹಸಿಯಾಗಿಯೇ ಇದೆ.

ಕಲ್ಬುರ್ಗಿಯವರನ್ನು ನಾನು ಮೊದಲ ಸಲ ನೋಡಿದ್ದು ಹೀಗೆ. ಆಗ ನಮ್ಮ ಮಾರ್ಗದರ್ಶಕರಾಗಿದ್ದ ಪ್ರೊ. ತಾಳ್ತಜೆ ವಸಂತ ಕುಮಾರ್ ಅವರು ಅಲ್ಲಿನ ಎಲ್ಲಾ ಸಂಶೋಧನ ವಿದ್ಯಾರ್ಥಿಗಳನ್ನೂ ಅವರಿಗೆ ಪರಿಚಯಿಸಿದ್ದರು. ನನ್ನ ಪಿಎಚ್.ಡಿ ಅಧ್ಯಯನದ ಭಾಗವಾಗಿ ನಾನು ಸ್ವಾತಂತ್ರ್ಯಪೂರ್ವ ಸಣ್ಣಕತೆಗಳನ್ನು ನೋಡಬೇಕಿತ್ತು. ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಅಂತಹ ಕತೆಗಳ ಅಪೂರ್ವ ಸಂಗ್ರಹವಿದೆಯೆಂದು ತಿಳಿದು ಅಲ್ಲಿಗೆ ಹೋದೆ. ವಿದ್ಯಾವರ್ಧಕ ಸಂಘಕ್ಕೆ ಹೋದಾಗ, ಅಂತಹ ಹಳೆಯ ಕತೆಗಳಿಗೆ ಈಗ ಓದುಗರಿಲ್ಲ ಎಂಬ ಕಾರಣದಿಂದ ಅವುಗಳನ್ನೆಲ್ಲಾ ಕೆಲವು ಕಪಾಟುಗಳಲ್ಲಿ ಭದ್ರವಾಗಿರಿಸಿ, ಬೀಗ ಜಡಿದು ಅದರ ಮುಂದೆ ಕೆಲಸಕ್ಕೆ ಬಾರದ ಗುಜರಿ ಸಾಮಾನುಗಳನ್ನೆಲ್ಲಾ ಪೇರಿಸಿ ಇಟ್ಟಿದ್ದರು.  

ಧೂಳು ತುಂಬಿದ್ದ ಆ ಜಾಗಕ್ಕೆ ನನಗೆ ಪ್ರವೇಶ ಸಾಧ್ಯವಿರಲಿಲ್ಲವಾದರೂ, ನಾನು ಎಷ್ಟು ಕೇಳಿಕೊಂಡರೂ, ಸಂಘದವರು ಸಾಧ್ಯವಿಲ್ಲ ಎಂದು ನಿರಾಕರಿಸಿಬಿಟ್ಟರು. ಆಗ ನಾನು ಸಹಾಯಕ್ಕಾಗಿ ಪ್ರೊ. ಕಲ್ಬುರ್ಗಿಯವರ ಮನೆಗೆ ಹೋದೆ. ಆ ಪುಸ್ತಕಗಳನ್ನು ನೋಡಲು ನನಗೆ ಅನುವು ಮಾಡಿಕೊಡಬೇಕೆಂದು ಅವರು ಸ್ವತಃ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಿಗೆ ಒಂದು ಪತ್ರವನ್ನು ಬರೆದುಕೊಟ್ಟರು. ಕಲ್ಬುರ್ಗಿಯವರ ಆಣತಿಯ ಮೇರೆಗೆ ವಿದ್ಯಾವರ್ಧಕ ಸಂಘದ ಸಿಬ್ಬಂದಿ ವರ್ಗದವರು ಬಹಳ ಶ್ರಮವಹಿಸಿ ಕಪಾಟುಗಳಿಟ್ಟಿದ್ದ ಜಾಗವನ್ನು ಸ್ವಚ್ಛಗೊಳಿಸಿ ಪುಸ್ತಕಗಳನ್ನು ನೋಡುವುದಕ್ಕೆ ಸಹಾಯ ಮಾಡಿದರು. 

ಪ್ರೊ. ಎಂ.ಎಂ. ಕಲ್ಬುರ್ಗಿ

ಹೀಗೆ ನನ್ನ ಸಂಶೋಧನೆ ಪ್ರಾರಂಭವಾದುದೇ ಪ್ರೊ. ಕಲ್ಬುರ್ಗಿಯವರ ಸಹಾಯದಿಂದ. ಈ ನಂಟು ಇಲ್ಲಿಗೇ ಮುಗಿಯಲಿಲ್ಲ. ನನ್ನ ಪಿಎಚ್.ಡಿ ಪ್ರಬಂಧದ ಮೌಲ್ಯಮಾಪಕರೂ ಅವರೇ ಎಂದು ತಿಳಿದುಬಂದದ್ದು- ಪಿಎಚ್.ಡಿ ಮೌಖಿಕ ಪರೀಕ್ಷೆಗೆಂದು ಮುಂಬಯಿ ವಿ.ವಿ.ಯ ರಾಜಾಬಾಯಿ ಟವರ್ ನ ಒಂದು ಕೋಣೆಯಲಿ, ಹೆದರುತ್ತಾ ಕುಳಿತಿದ್ದ ನನ್ನೆದುರಿಗೆ ಅವರು ಪ್ರತ್ಯಕ್ಷವಾದಾಗಲೇ. ಕೆಲವು ಪ್ರಾತಿನಿಧಿಕ ಕತೆಗಾರರನ್ನು ಇಟ್ಟುಕೊಂಡು ಇದರ ಸಮಾಜಶಾಸ್ತ್ರೀಯ ಅಧ್ಯಯನವನ್ನು ಮಾಡಿದ್ದರೆ ಹೆಚ್ಚು ಸಮರ್ಪಕವಾಗುತ್ತಿತ್ತೆಂದು ನನ್ನ ಪ್ರಬಂಧದ ಇನ್ನೊಬ್ಬ ಮೌಲ್ಯಮಾಪಕರು ಅಭಿಪ್ರಾಯ ಪಟ್ಟಿದ್ದರು. 

ಡಾ. ತಾಳ್ತಜೆ ವಸಂತ್ ಕುಮಾರ್ ಅವರು, ಈ ವಿಷಯದ ಬಗ್ಗೆ ಕಲ್ಬುರ್ಗಿಯವರ ಗಮನ ಸೆಳೆದಾಗ. “ಛೆ..ಛೆ..ಹಂಗ್ ಮಾಡಿದ್ರ ಉಳಿದ ಅನೇಕ ಕತೆಗಾರರು ಹೋಗಿಬಿಡುತ್ತಾರೆ..ಈ ಪ್ರಬಂಧದ ಶಕ್ತಿಯಿರುವುದೇ ಅಸಂಖ್ಯಾತ, ಅಜ್ಞಾತ ಕತೆಗಾರರನ್ನು ಪರಿಚಯಿಸಿರುವುದರಲ್ಲಿ.. ಈ ಪ್ರಬಂಧವನ್ನು ಪ್ರಕಟಿಸುವಾಗ ಇದನ್ನು ಗಮನದಲ್ಲಿರಿಸಿಕೊಳ್ಳುವುದು ಆವಶ್ಯಕ” ಎಂದು ಮೆಚ್ಚುಗೆ ಸೂಚಿಸಿ, ನಾನು ಪಿಎಚ್.ಡಿ ಪದವಿಗೆ ಅರ್ಹಳೆಂದು ಘೋಷಿಸಿ, ಅಭಿನಂದಿಸಿದ್ದರು. 

ಬಹಳ ವರ್ಷಗಳು ಕಳೆದ ಮೇಲೆ ನನಗೆ ಅಕ್ಕಮಹಾದೇವಿಯ ಕುರಿತಾದ ಸಾಕ್ಷ್ಯ ಚಿತ್ರಕ್ಕೆ ಸಂಶೋಧನೆ ಮಾಡುವ ಒಂದು ಯೋಗ ದೊರೆಯಿತು. ಆ ಸಮಯದಲ್ಲಿ ಅಕ್ಕನ ಕುರಿತಾದ ಒಂದು ಪ್ರಶ್ನಾವಳಿಯನ್ನು ತಯಾರಿಸಿ ನಾಡಿನ ಎಲ್ಲಾ ಹಿರಿಯ ವಿದ್ವಾಂಸರಿಗೂ ಕಳಿಸಿದ್ದೆ.  ಶೈಲಜಾ ಉಡಚಣ ಅವರು, ನನ್ನ ಪ್ರಶ್ನೆಗಳ ಕುರಿತಾಗಿ ಕೆಲವು ಅನುಮಾನಗಳನ್ನು ಪರಿಹರಿಸಿಕೊಳ್ಳಲು ಕಲ್ಬುರ್ಗಿಯವರಿಗೆ ಫೋನ್ ಮಾಡಿದಾಗ, “ ಆಕಿ ನನಗೂ ಪತ್ರ ಬರೆದು ತಲೀ ತಿಂದಾಳ” ಎಂದು ಹೇಳಿದ್ದರಂತೆ. ಲಜ್ಜಾಗೌರಿಯ ಆಚರಣೆಗೂ, ಅಕ್ಕಮಹಾದೇವಿಯ ನಿರ್ವಾಣಕ್ಕೂ ಏನಾದರೂ ಸಂಬಂಧವಿದೆಯೇ ಎಂಬುದನ್ನು ಶೋಧಿಸುವ ನನ್ನ ಕೆಲಸಕ್ಕೆ ನೆರವಾಗಿದ್ದೂ ಕಲ್ಬುರ್ಗಿಯವರೇ,  ಲಜ್ಜಾಗೌರಿಯ ಬಗ್ಗೆ ವ್ಯಾಪಕವಾದ ಅಧ್ಯಯನವನ್ನು ಮಾಡಿರುವ ಅವರು ಈ ವಿಷಯದಲ್ಲಿ ಮರಾಠಿಯ ಖ್ಯಾತ ವಿದ್ವಾಂಸ ಪ್ರೊ ಡೇರೆಯವರಿಗೆ ಋಣಿಯಾಗಿದ್ದಾರೆ. ಡೇರೆಯವರನ್ನಾಗಲೀ, ಕಲ್ಬುರ್ಗಿಯವರನ್ನಾಗಲೀ, ಅಕ್ಕನ ಸಾಕ್ಷ್ಯ ಚಿತ್ರದ ನೆಪದಲ್ಲಿ ಅದರ ನಿರ್ದೇಶಕಿಯಾದ ಬಂಗಾಳಿಯ ಮಧುಶ್ರೀ ಯವರಿಗೆ ಪರಿಚಯಿಸಿದ ನನ್ನ ಸಂತೋಷಕ್ಕೆ ಎಣೆಯೇ ಇಲ್ಲ. ಹೀಗೆ ನನ್ನ ಬೆಳವಣಿಗೆಯ ಮೆಟ್ಟಿಲುಗಳಲ್ಲಿ ಅನೇಕ ಬಾರಿ ಕಲ್ಬುರ್ಗಿಯವರನ್ನು ಸಂಧಿಸಿದ್ದೇನೆ. 

ಈಗ ಕೆಲ ವರುಷಗಳ ಹಿಂದೆ ತಾಳ್ತಜೆ ವಸಂತ ಕುಮಾರ್ ಅವರ ಅಭಿನಂದನಾ ಗ್ರಂಥದ ಬಿಡುಗಡೆ ಮತ್ತು  ಅಭಿವಂದನಾ ಸಮಾರಂಭಕ್ಕೆ ಉದ್ಘಾಟಕರಾಗಿ ಕಲ್ಬುರ್ಗಿಯವರು ಬಂದಿದ್ದರು. ಆ ಸಮಯದಲ್ಲಿ ಮುಂಬಯಿ ಕನ್ನಡಿಗರ ಪ್ರತಿನಿಧಿಯಾಗಿ ನನ್ನನ್ನೂ ಅತಿಥಿಯಾಗಿ ಕರೆಯಲಾಗಿತ್ತು. ನಾವು ಇಳಿದುಕೊಂಡ ಹೋಟೆಲ್ ನಲ್ಲಿಯೇ ಅವರೂ ಇಳಿದುಕೊಂಡಿದ್ದರು. ಕಾರಿನಲ್ಲಿ ಎಲ್ಲರೂ ಕೂಡಿಯೇ ಸಭಾಂಗಣಕ್ಕೆ ಹೋಗಿದ್ದೆವು. ಈಚೀಚೆಗೆ ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಬಗ್ಗೆ ನಿಷ್ಠೆ, ಪರಿಶ್ರಮ, ಪಾವಿತ್ರ್ಯ ಕಡಿಮೆಯಾಗುತ್ತಿರುವುದರ ಬಗ್ಗೆ ಅವರು ವಿಷಾದಿಸಿದ್ದರು. ಅಂದು ಕಾರ್ಯಕ್ರಮವೆಲ್ಲಾ ಮುಗಿದ ಮೇಲೆ ಯಾರೊಡನೆಯೋ ನಾನು ಮಾತನಾಡುತ್ತಾ ನಿಂತಿದ್ದಾಗ ಹಿಂಬದಿಯಿಂದ ಬಂದು ತಮ್ಮ ಕೈಯಲ್ಲಿದ್ದ ಪತ್ರಿಕೆಯ ಸುರಳಿಯಿಂದ ನನ್ನ ಬೆನ್ನ ಮೇಲೆ ಹೊಡೆದು “ಛಲೋ ಮಾತಾಡಿದೀ” ಎಂದು ಮೆಚ್ಚಿಗೆ ಸೂಚಿಸಿದ್ದರು. 

ನಾವು ಸಂಶೋಧನ ವಿದ್ಯಾರ್ಥಿಗಳಾಗಿದ್ದಾಗ ನಮ್ಮ ಮಾರ್ಗದರ್ಶಕರಾಗಿದ್ದ ತಾಳ್ತಜೆಯವರು ಸಂಶೋಧನೆಯೆನ್ನುವುದು ಪಿಎಚ್.ಡಿ ಯೊಂದಿಗೆ ಮುಗಿಯುವುದಲ್ಲ, ಅದು ಪ್ರಾರಂಭವಷ್ಟೇ, ನಿಜವಾದ ಸಂಶೋಧನೆ ಪ್ರಾರಂಭವಾಗುವುದೇ ಪಿಎಚ್.ಡಿಯ ಆನಂತರ ಎಂದು ಆಗಾಗ ಹೇಳುತ್ತಿದ್ದರು. “ಸಂಶೋಧನೆಯೆನ್ನುವುದು ಅಲ್ಪ ವಿರಾಮ, ಅರ್ಧ ವಿರಾಮಗಳ ಮೂಲಕ ಪೂರ್ಣ ವಿರಾಮಕ್ಕೆ ಸಾಗುವ ಕ್ರಿಯೆಯಾಗಿದೆ” ಎಂದು ಕಲ್ಬುರ್ಗಿಯವರು ಹೇಳುತ್ತಿದ್ದ ವಿಚಾರಗಳು, ಕಲ್ಬುರ್ಗಿಯವರ ನಿಕಟವರ್ತಿಗಳೂ, ಸಂಶೋಧಕರೂ ಆಗಿರುವ ತಾಳ್ತಜೆಯವರ ಮೇಲೆ ಸಹಜವಾಗಿಯೇ ಬೀರಿರುವ ಪ್ರಭಾವದ ರೀತಿಯನ್ನು ಇದು ತೋರಿಸುತ್ತದೆ.  

ಮುಂಬಯಿಗೆ ಅನೇಕ ಸಲ ಕಲ್ಬುರ್ಗಿಯವರು ಬಂದಿದ್ದರು.  ಹಾಗೆ ಬಂದಾಗಲೆಲ್ಲಾ ತಮ್ಮ ಶಾಸನ, ಜಾನಪದ, ನಾಮವಿಜ್ಞಾನ ಮುಂತಾದ ಸಾಂಸ್ಕೃತಿಕ ಜ್ಞಾನಶಾಖೆಗಳ ಕುರಿತಾದ ತಮ್ಮ ವೈಚಾರಿಕ ಪ್ರಖರತೆಯಿಂದ  ನಮ್ಮನ್ನೆಲ್ಲಾ ಮಂತ್ರಮುಗ್ಧರನ್ನಾಗಿಸಿ ಹೋಗಿದ್ದರು.  
ಅಂತಹ ಅಪರೂಪದ ವಿದ್ವಾಂಸರನ್ನು ಇಂದು ಗುಂಡಿಟ್ಟು ಕೊಲ್ಲಲಾಗಿದೆ.
 
ನಮಗೆ ಯಾವುದಾದರೂ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೆ, ಸಮಾನ ಸಾಮಥ್ರ್ಯದೊಂದಿಗೆ, ವಿದ್ವತ್ ಪೂರ್ಣವಾಗಿ ಅದನ್ನು ಖಂಡಿಸಿ ಮಂಡಿಸಬಹುದು.  ಆಗ ಅದು ಎರಡು ಗಂಧದ ಕೊರಡುಗಳನ್ನು ತೀಡಿದಾಗ ಹೊಮ್ಮುವ ಸುವಾಸನೆಯಂತೆ ಆಪ್ಯಾಯಮಾನವಾಗಿರುವುದಲ್ಲದೇ, ಆರೋಗ್ಯಕರ ಚರ್ಚೆಗೂ ಕಾರಣವಾಗುತ್ತದೆ. ನಿಜವಾಗಿ ಏನಾದರೂ ಅರ್ಥಪೂರ್ಣವಾದದ್ದು ಹೊರಬರುತ್ತದೆ.  ‘ವಾದೇ ವಾದೇ ಜಾಯತೇ ತತ್ವ ಬೋಧಃ’ ಅನ್ನುವಂತೆ ವಿಭಿನ್ನ ತತ್ವಗಳು ಬೆಳಕಿಗೆ ಬಂದು, ಸತ್ಯದ ಆಯಾಮಗಳು ವೃದ್ಧಿಗೊಂಡು ನಮ್ಮ ಸಂಸ್ಕೃತಿಯ ಹೆಮ್ಮೆಗೆ ಗರಿಮೂಡುತ್ತದೆ.  ಗಂಧದ ಸಾಮಥ್ರ್ಯವಿಲ್ಲದೇ ಬರಿದೇ ಕೊರಡಾದವರೂ ಕೂಡ ತಮಗೆ ಒಪ್ಪದ ವಿಚಾರಗಳನ್ನು ಖಂಡಿಸಬಹÅದು. (ನಮ್ಮದು ಪ್ರಜಾ ಪ್ರಭುತ್ವ)   ಅಂತಹವರು ಮೋರ್ಛಾ ತೆಗೆದುಕೊಂಡು ಹೋಗಬಹುದು, ಧಿಕ್ಕಾರ ಕೂಗಬಹುದು, ಪ್ರತಿಭಟಿಸಿ ಮೆರವಣಿಗೆ ಹೊರಡ ಬೇಕಾದರೆ ಪ್ರತಿಕೃತಿಗಳನ್ನೂ ಸುಟ್ಟು ಸಿಟ್ಟನ್ನು ತೀರಿಸಿಕೊಳ್ಳಬಹುದು. ಆದರೆ ಈ ಯಾವುದಕ್ಕೂ ಆಸ್ಪದವನ್ನೇ ಕೊಡದಂತೆ ನೇರವಾಗಿ ಎದೆಗೇ ಗುಂಡಿಕ್ಕಿ ಕೊಂದೇ ಬಿಡುವುದೆಂದರೆ?!

ಅನಂತಮೂರ್ತಿಯವರ ಲೇಖನವನ್ನು ಉಲ್ಲೇಖ ಮಾಡಿ ಕಲ್ಬುರ್ಗಿಯವರು ಭಾಷಣಮಾಡಿದಾಗ, ಅದರಿಂದ ರೊಚ್ಚಿಗೆದ್ದ ಜನ ಹೋಗಿ ಅವರ ಮನೆಯ ಕಾಂಪೌಂಡಿಗೆ ಉಚ್ಚೆಹುಯ್ದು ಬಂದಿದ್ದರಂತೆ. ಅನಂತಮೂರ್ತಿಯವರ ಆ ಲೇಖನವನ್ನು ಮತ್ತೆ ಓದಿದೆ. ಅದರಲ್ಲಿ ಅವರು ತಮ್ಮ ಹದಿಹರೆಯದಲ್ಲಿ, ಪರೀಕ್ಷೆಮಾಡಲೋಸುಗ ದೆವ್ವದ ಕಲ್ಲಿಗೆ ಉಚ್ಚೆ ಹುಯ್ದಿದ್ದಾಗಿ ಹೇಳಿಕೊಂಡಿದ್ದಾರೆ. ದೇವರ ಮೂರ್ತಿಗಲ್ಲ.  ಇದೊಂದು ಬಾಲ ಸಹಜವಾದ ಕುತೂಹಲ ಎಂಬುದನ್ನು ಸಂವೇದನಾಶೀಲ,  ಜವಾಬ್ದಾರಿಯುತ ಓದುಗರು ಅರ್ಥಮಾಡಿಕೊಳ್ಳಬಹುದು. ಕೊನೆ ಕೊನೆಗೆ ಅನಂತಮೂರ್ತಿಯವರು ಗೀಳು ಹಿಡಿದಂತೆ ಪೂರ್ವಮೀಮಾಂಸೆಯ ಬಗೆಗೆ ಮಾತನಾಡುತ್ತಿದ್ದರು. ಬ್ರಾಡ್ಲೇ ಗೀಡ್ಲೇ ಓದಿಕೊಂಡು ಪುರಂದರದಾಸರನ್ನು, ಆನಂದ ವರ್ಧನನ್ನು  ಓದಲಿಲ್ಲವಲ್ಲಾ ಎಂದು ಹಲುಬಿದರು. ಜಾಗತೀಕರಣದ, ಅಭಿವೃದ್ಧಿಯ ನಶೆಯಲ್ಲಿ ಓಲಾಡುತ್ತಿರುವ ಪೆಢಂಭೂತಕ್ಕೆ ಉತ್ತರವೆಂದರೆ ಇನ್ನು ಹಿಂದಕ್ಕೆ ಹೋಗುವುದು ಎಂದು ಮತ್ತೆ ಮತ್ತೆ ಹೇಳಿದರು.  

ಆದರೆ ಅವರ ವರ್ತಮಾನದ ಪ್ರತಿಕ್ರಿಯೆಯನ್ನು ಮಾತ್ರ ಕಂಡುಕೊಂಡ ಜನಕ್ಕೆ ಅವರೊಬ್ಬ ಸಂಸ್ಕೃತಿಯ ಕಡು ವಿರೋಧಿಯಾಗಿ ಕಂಡರು. ಅವರ ಅಗಾಧ ಓದಿನ ಹಿನ್ನೆಲೆಯಲ್ಲಿ ಅವರನ್ನು ಅರ್ಥಮಾಡಿಕೊಳ್ಳಲಿಲ್ಲ.  ಒಬ್ಬ ಲೇಖಕನ ಸಾಹಿತ್ಯದ ಒಟ್ಟು ಧೋರಣೆಯನ್ನು ಅರಿಯದ ಮಾಧ್ಯಮದವರು ತಮಗೆ ತಿಳಿದಿದ್ದನ್ನು ಮಾತ್ರ ಗ್ರಹಿಸುತ್ತಾ ಮುಖ್ಯ ತಾತ್ವಿಕ ನೆಲಗಟ್ಟನ್ನೇ ತಿರುಚಿ ಪ್ರಕಟಿಸುವಾಗ ಅವುಗಳ ಆಧಾರದ ಮೇಲೆ ಸಾಮಾನ್ಯ ಜನ ಸಮೂಹ ಸನ್ನಿಗೆ ಒಳಗಾಗುವುದು ಸಹಜ.  ಆನಂತರ ಬಾಯಿಂದ ಬಾಯಿಗೆ ಅವುಗಳಿಗೆ ರೆಕ್ಕೆ ಪುಕ್ಕಗಳೂ ಹುಟ್ಟಿಕೊಂಡು ಬಿಡುತ್ತವೆ. ಯಾವುದೇ ಲೇಖಕ/ಕಿಯ ಒಟ್ಟು ತಾತ್ವಿಕ ನೆಲೆ ಯಾವುದು ಎಂದು ಆಯಾ ಲೇಖಕರ ಓದಿನ ಮೂಲಕ  ತಿಳಿದುಕೊಳ್ಳುವ ವ್ಯವಧಾನ, ಗಂಭೀರವಾದ ಆಸಕ್ತಿ ಇಂದು ಯಾರಿಗಿದೆ? ಯಾವುದೇ ಸಾಹಿತಿಯ ಸಾಂಧರ್ಭಿಕ ಮಾತುಗಳನ್ನು ಅದರ ಕಾಂಟೆಕ್ಸ್ಟ್ (context) ನಿಂದ ಆಚೆಗೆ ಎಳೆದು ತಂದು , ತಪ್ಪು ಕೋಟ್ ಮಾಡಿ ಯಾವಾಗಲೂ ಸಮಾಜವನ್ನು ಒಂದು ಸೆನಸ್ಸೇಷನಲ್ ಟೆನ್ಷನ್ (sensational  tension) ನಿಂದ ಬಂಧಿಸಿಡುವುದು ಇಂದಿನ ಮಾದ್ಯಮಗಳ ಕಸುಬಾಗಿದೆ. ಇದರ ಹಿಂದೆ ಯಾವುದಾದರೂ ‘ರಾಜಕಾರಣ’ವಿರುತ್ತದೆ. ಬೆಂದ ಮನೆಗಳ ಗಳ ಹಿರಿಯುವ, ಅದರಲ್ಲಿ ಚಳಿಕಾಯಿಸಿಕೊಳ್ಳುವ ಉದ್ದೇಶವೇ ಇಲ್ಲಿ ಪ್ರಮುಖವಾದಂತಿದೆ.. ಮಾಧ್ಯಮದವರ ತಪ್ಪಿಗೆ ಕಲ್ಬುರ್ಗಿಯಂತಹವರು ತಲೆದಂಡ ಕೊಡಬೇಕಾಗಿದೆ.
ನಾವು ದಯಾನಂದ ಸರಸ್ವತಿಯವರನ್ನು ಬಿಡಲಿಲ್ಲ. ಗಾಂಧೀಜಿಯನ್ನು ಬಿಡಲಿಲ್ಲ, ಓಶೋ ಅವರನ್ನು ಬಿಡಲಿಲ್ಲ. ಹೀಗೆ ಹಿಂದಕ್ಕೆ ನಡೆಯುತ್ತಾ ಹೋದರೆ ಚರಿತ್ರೆಯಲ್ಲಿ ದಂಡಕೊಟ್ಟ ಇಂತಹ ಅಸಂಖ್ಯಾತ ತಲೆಗಳು ದೊರೆಯುತ್ತವೆ. 
  


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Makara
Makara
9 years ago

"ಅಶ್ವತ್ಥಾಮ ಹತಃ ಕುಂಜರಃ" ಎನ್ನುವುದನ್ನು ಧರ್ಮರಾಯನಂತೆ "ಅಶ್ವತ್ಥಾಮ ಹತಃ" ಎಂದು ನಮ್ಮ ಪತ್ರಿಕಾ ರಂಗದವರು ಬಿಂಬಿಸಿ ದ್ರೋಣರಂಥಹವರು ತಲೆದಂಡ ಕೊಡಬೇಕಾಗಿರುವುದು ನಿಜಕ್ಕೂ ಖೇದನೀಯ. ಉತ್ತಮ ಲೇಖನಕ್ಕೆ ಅಭಿನಂದನೆಗಳು. 

Dr. Taltaje Vasanthakumara
Dr. Taltaje Vasanthakumara
9 years ago

ಪ್ರೀತಿಯ ಗಿರಿಜಾ, ಲೇಖನ ಚೆನ್ನಾಗಿದೆ. ಕಲಬುರಗಿಯವರ ಬಗೆಗೆ ಭಾವಿಸಿ ಸ್ಪಂದಿಸಿದ್ದೀರಿ. ನಾನೂ ತುಂಬ ದು:ಖಿತನಾಗಿದ್ದೇನೆ.   ತಾಳ್ತಜೆ

2
0
Would love your thoughts, please comment.x
()
x