ಹೂವೊಂದು ಬಳಿಬಂದು
ತಾಕಿತು ಎನ್ನೆದೆಯಾ
ಏನೆಂದು ಕೇಳಲು
ಹೇಳಿತು ಜೇನಂಥ ಸವಿನುಡಿಯಾ …
ಎದೆ ತುಂಬಾ ಭಾವಗಳ ಧಾರೆ ಇತ್ತು…ಮೊದಲ ಪ್ರೇಮ ಪತ್ರಕ್ಕೆ ಅದೆಷ್ಟು ನಾಚಿಕೆಯ ಘಮವಿತ್ತು …ಕಾಲ ಓಡಿತು ..ಪ್ರೀತಿ ಪ್ರೇಮಕ್ಕೆ ಬೇರೆಯದೇ ಹೆಸರಿತ್ತು!!
ಆಗಷ್ಟೇ ಅರಳಿದ ಹೂವೊಂದರ ಜೇನ ಹೀರುವ ಮುನ್ನ ಪಿಸುನುಡಿಯಿತು ದುಂಬಿ .."ನೋವು ಮಾಡೋದಿಲ್ಲ ..ನಿನ್ನ ಪರಾಗ ಜೇನು ನನಗೆ..ನಿನ್ನ ಕಾಯಾಗಿಸಿ ಹಣ್ಣಾಗಿಸುವ ಜೀವನ ಪ್ರೀತಿ ನಿನಗೆ!!" ಅಂಜಲಿಲ್ಲ ಅಳುಕಲಿಲ್ಲ ತನ್ನ ಜೇನ ಒಡಲನ್ನ ಒಮ್ಮೆಗೆ ತೆರೆದು ಅರ್ಪಿಸಿ ಕೊಂಡಿತು .. ಅದು ಪ್ರೀತಿಯಲ್ಲವೇ??
ಅದಷ್ಟೇ ಕಿಶೋರ ಅರಳುವ ಸಮಯ..ಮನೆಯ ತುಂಬಾ ಬದಲಾಗುವ ನಿಯಮಗಳು"ಯಾಕೆ ಬೇಗ ಬಂದೆ..ಯಾಕೆ ಲೇಟ್ ಆಯಿತು..ಅವರು ಯಾರು ಇವರು ಯಾರು?? ನಿನ್ನ ಉಡುಗೆ ಸರಿ ಇಲ್ಲ"..ಎಲ್ಲ ಕಟ್ಟುಗಳ ನಡುವೆ ಒಂದು ದಿನ ಊಟ ಮಾಡಲಿಲ್ಲ ಎಂದರೆ ಸಂತೈಸಿ ತನ್ನ ತಟ್ಟೆಯಲ್ಲಿ ತುತ್ತು ನೀಡುವ ಅಮ್ಮನಂಥ ಅಪ್ಪ … ಅದು ಪ್ರಿತಿಯಲ್ಲವೇ??
ಚಿಕ್ಕ ಪುಟ್ಟದ್ದಕ್ಕು ಕಿತ್ತಾಡುವ ತಂಗಿ ತಮ್ಮ ಅದ್ಯಾಕೆ ಬೇಜಾರಾದಾಗಲೆಲ್ಲಾ ತಮ್ಮ ಪಾಕೆಟ್ ಮನಿಯಲ್ಲಿ ಐಸ್ ಕ್ರೀಮ್ ಕೊಡಿಸುತ್ತಾರೆ!! ಮುದ್ದಿಸಿ ಸಮಾಧಾನ ಮಾಡುತ್ತಾರೆ ??ಅದು ಪ್ರೀತಿಯಲ್ಲವೇ ??
ಹಾಲು ತರಕಾರಿಯಲ್ಲಿ ಕಾಸು ಉಳಿಸಿ ಹೊಸಾ ವರ್ಷದ ದಿನ ಕಾಲೇಜಿಗೆ ಹೊಸಾ ಡ್ರೆಸ್ ಕೊಡಿಸುವ ಅಮ್ಮ ..ದಿನಾ ಕಳಿಸುವಾಗಲೆಲ್ಲಾ "ಹುಷಾರಾಗಿ ಹೋಗಿ ಬಾ" ಅನ್ನುತಾಳೆ ಆ ಕಾಳಜಿ ಪ್ರೀತಿಯಲ್ಲವೇ??
ಬೇಜಾರಾದಾಗಲೆಲ್ಲಾ ಜೋಕು ಮಾಡಿ ನಗಿಸುವ ಗೆಳತಿ..ಓದಿನಲ್ಲಿ ಹಿಂದೆ ಬಿದ್ದಾಗಲೆಲ್ಲ ಪಕ್ಕದ ಬೆಂಚಿನ ಚಾಕೊಲೆಟ್ ಮುಖದ ಗೆಳೆಯ ಕೊಡುವ ಸಲಹೆಗಳು..ಅವರದ್ದು ಪ್ರೀತಿಯಲ್ಲವೇ??
ಆಗಷ್ಟೇ ಮದುವೆಯ ಆದ ಹೊಸತು ..ಹೊಸಾ ಜಗತ್ತಿಗೆ ಹೊಂದಿಕೊಳ್ಳಲು ತೊಡಕು ಬಂದಾಗಲೆಲ್ಲಾ ತೋಳಲ್ಲಿ ಅಪ್ಪಿ ಮಗುವಿನಂತೆ ತಲೆ ಸವರುವ ಅವನದಂತು ಥೇಟ್ ಅಪ್ಪನ ಪ್ರೀತಿ ಅಲ್ಲವೇ??
ಮಡಿಲಲ್ಲಿ ಮಗು ಕಕ್ಕ ಮಾಡಿದೆ…ಅಜ್ಜನೋ ನಗುತ್ತಿದ್ದಾನೆ..ಹೊಲಸಿಗಿಂತ ಎದ್ದು ಕಂಡದ್ದು ಮಗುವಿನ ಕೈಕಾಲು ಬಡಿತದ ಜೊತೆಗಿನ ನಗು ಮಕ್ಕಳಲ್ಲಿ ಮಕ್ಕಳಾಗುವ ಅಜ್ಜ ಅಜ್ಜಿಯಂದಿರ ಪ್ರೀತಿ ಪ್ರೀತಿ ಅಲ್ಲವೇ??
ಮತ್ತದೇ ಚಕ್ರ ಮರಳಿದೆ..ಕೈಯಲ್ಲಿ ಅಪ್ಪನ ಜೇಬಿಂದ ಗೊತ್ತಿಲ್ಲದೇ ತೆಗೆದ ಕಾಸು..ಅದು ಗೊತ್ತಾಗಿ ರುದ್ರಿಯಂತೆ ನಿಂತ ಅಮ್ಮ ಇದ್ದಕ್ಕಿದ್ದಂತೆ ಕುಸಿದು ಬಿಕ್ಕುತ್ತಾಳೆ "ನನ್ ಒಡಲಿಗೆ ಚೂರಿ ಹಾಕಬೇಡ ಕಣೋ…ಒಳ್ಳೆಯ ಮಗನಾಗು" ಇಬ್ಬರೂ ಬಿಕ್ಕುತ್ತಾರೆ ತಪ್ಪು ಅರ್ಥವಾಗಿಸಿದ ಅಲ್ಲಿ ಪ್ರೀತಿ ಇಲ್ಲವೇ??
ಪಾರ್ಕಿನ ಬೆಂಚಿನಲ್ಲಿ ಇಳಿ ಸಂಜೆಯ ಬೆಳಕು ಮುಖದ ಮೇಲೆಲ್ಲಾ ಹೊಮ್ಮುವ ಜೀವನ ಅನುಭವದ ಸಂತಸ ಅದೋ ಅಜ್ಜನ ಕೈ ಅಜ್ಜಿಯ ಕೈಯಲ್ಲಿದೆ .. ಅದ್ಯಾವುದೋ ಮಾಯದ ಮುಗುಳ್ನಗು … ಜೀವರಸವೆಲ್ಲಾ ಅರೆದು ಕುಡಿದ ಮಾಗಿದ ಪ್ರೇಮ…ಅದು ಪ್ರೀತಿ!!
ಹೌದು ಅಂತದ್ದೊಂದು ಅಮೃತ ವಾಹಿನಿಗೆ ಯಾವ ಬಂಧವಿಲ್ಲ ದಿನಗಳ ಅವಶ್ಯಕತೆ ಇಲ್ಲ…ನಿತ್ಯವೂ ಪ್ರೇಮೋತ್ಸವವೆ!! ಹರಿಯುತಿರುತ್ತದೆ ನಿರಂತರ..ಮೌನವಾಗಿ ಗಮನಿಸಿದರೆ ನಮ್ಮಲ್ಲೇ ಅರಿವಾಗುವ ಸ್ಥಿತಿ ಅದು… ನೀವು ನಾವೆಲ್ಲಾ ಮಾಧವ ರಾಧೆಯರೇ..ಸದಾ ಪ್ರಿತಿಗಾಗಿ ತುಡಿಯುವ ಹೃದಯವೊಂದು ಸದಾ ಮಿಡಿಯುತ್ತಿರುವದಾದರೆ!! ಪ್ರೇಮ ಚಿರಂತನವಾಗಲಿ..ಚಿರಂಜಿವಿಯಾಗಲಿ. ಅದೇ ಪ್ರಕೃತಿಯ ಧರ್ಮ!!
ಚೆನ್ನಾಗಿದೆ ಮೇಡಂ…..ಸಂಭಂಧವಾರು ಪ್ರೀತಿಯ ಬಗೆ ನಿರೂಪಣೆ….
Wonderful….ಚಂದದ ಬರಹ
Damn true……:-) nice presentation .. Formidable one:-)