ಪ್ರೇಮ ಪ್ರವಾದಿಯ ಪರಿಸರ ಪ್ರೇಮ: ಅಶ್ಫಾಕ್ ಪೀರಜಾದೆ

ತನ್ನ ಪ್ರಥಮ ಕೃತಿ ” ಮಮದಾಪೂರ ಚುಟುಕುಗಳು ” ಮೂಲಕ ಪ್ರೇಮ ಪ್ರವಾದಿ ಎಂದು ನಾಡಿನಾದ್ಯಂತ ಪ್ರಸಿದ್ದಿ ಪಡೆದಿರುವ ಈಶ್ವರ ಮಮದಾಪುರ ಅವರು ಇತ್ತೀಚೆಗೆ ಇನ್ನೊಂದು ಕೃತಿ “ಮಮದಾಪೂರ ಹನಿಗವಿತೆಗಳು” ಓದುಗರ ಕೈಗಿಟ್ಟಿದ್ದಾರೆ. ಚುಟುಕು, ಹನಿಗವಿತೆ, ಹಾಯ್ಕು, ಕಿರುಪದ್ಯ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಸಾಹಿತ್ಯ ಪ್ರಕಾರ ಕವಿಯ ಮನದ ಪರದೆಯ ಮೇಲೆ ಆ ಕ್ಷಣಕ್ಕೆ ಮಿಂಚಿ ಮಾಯವಾಗುವ ಭಾವ ಸ್ಪಂದನ.. ಅದೇ ಬರಹದ ರೂಪ ಪಡೆದುಕೊಂಡು ಓದುಗರ ಹೃದಯ ತಾಕುವ ತಂತುವಾಗಿ ಮಾರ್ಪಡುತ್ತದೆ. ಈಶ್ವರ ಮಮದಾಪುರ ಬಿಟ್ಟರೆ ಕೈಜಾರಿಹೋಗುವ ಅಮೂಲ್ಯ ಕ್ಷಣಗಳನ್ನು ತಮ್ಮ ಭಾವಭಿತ್ತಿಯಲ್ಲಿ ಸೆರೆಹಿಡಿದು ಅವುಗಳಿಗೆ ಅಕ್ಷರದ ರೂಪಕೊಟ್ಟು ಸಾಹಿತ್ಯಾಸಕ್ತರ ಹೃದಯದಲ್ಲಿ ಪ್ರತಿಧ್ವನಿಯಾಗಿಸಿದ್ದಾರೆ. ಮೊದಲು ಕೃತಿಯಲ್ಲಿ ತಮ್ಮ ಮನದ ಭಾವಬಿಂದುಗಳು ನಾಲ್ಕೇ ನಾಲ್ಕು ಸಾಲುಗಳಲ್ಲಿ ಅಂದರೆ ಚೌಪದಿಯಲ್ಲಿ ಪ್ರಾಸಬದ್ಧವಾಗಿ ಹಿಡಿದಿಡಲು ಪ್ರಯತ್ನಿಸಿದರೆ ಇಲ್ಲಿ ಸಾಲು ಮತ್ತು ಪ್ರಾಸಗಳ ಹಂಗ ತೊರೆದು ಮುಕ್ತವಾಗಿ ತಮ್ಮಲ್ಲಿನ ಕವಿತ್ವವನ್ನು ಹರಿಬಿಟ್ಟಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೆ ಹಿರಿಯ ಚುಟುಕು ಕವಿ ಸಿಪಿಕೆ ಇವರಿಂದ ಪ್ರೇಮ ಪ್ರವಾದಿಯಂದು ಕರೆಸಿಕೊಂಡಿರುವ ಈಶ್ವರವರ ಕಾವ್ಯದ ಶಕ್ತಿ ಮತ್ತು ಸ್ಥಾಯಿಭಾವ ಪ್ರೇಮವೆನ್ನುವುದು ಈ ಕೃತಿಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಆದರೆ ಕವಿಯ ಈ ಪ್ರೇಮ ಇಲ್ಲಿ ಕೇವಲ ಗಂಡು ಹೆಣ್ಣಿನ ಪ್ರೇಮವಾಗಿ ಉಳಿಯದೇ ವಿವಿಧ ರೂಪಗಳಲ್ಲಿ ಟಿಸಿಲೊಡೆಯುವದನ್ನು ಇಲ್ಲಿ ಕಾಣಬಹುದಾಗಿದೆ. ಅದರಲ್ಲೇ ಮುಖ್ಯವಾಗಿ ಇಲ್ಲಿನ ಹನಿಗಳು ಪರಿಸರ ಪ್ರೇಮಿಯ ಹೃದಯಾಗಸದಿಂದ ಭೂವಿಗಿಳಿದ ಮಳೆಯ ಹನಿಗಳಾಗಿವೆ ಎಂದು ಹೇಳಬಹುದು. ಈ ಸಂಕಲನಕೆ ಪರಿಸರ ಪ್ರೇಮವೇ ಸ್ಥಾಯಿಯಾಗಿ ಕವಿಯ ಪರಿಸರ ಕಾಳಜಿಯನ್ನು ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೆಳಬಹುದು. ಇದನ್ನು ನಾವು ಮೊದಲ ಹನಿಯಲ್ಲೆ ಮನಗಾನಬಹುದಾಗಿದೆ-

ನಾ ನೆರಳು ಕೊಟ್ಟೆ
ತೊಗಟೆ ಖಾಂಡ ಕೊಟ್ಟೆ
ಎಲೆ ಕೊಟ್ಟೆ
ಔಷಧಿ ಕೊಟ್ಟೆ
ಮಾನವಾ?
ನೀನೇನು ಕೊಟ್ಟೆ? (ಸ್ವಾರ್ಥಿ)
ಎಂದು ಮನುಷ್ಯನ ಸ್ವಾರ್ಥ ಪ್ರಶ್ನಿಸುವ ಕವಿ ತನ್ನ ಸಾತ್ವಿಕ ಸಿಟ್ಟನ್ನು ಹೀಗೆ ಹೊರಹಾಕುತ್ತಾರೆ..

ಖಾಂಡ ಸಹಿತ ಸುಟ್ಟಾಕಿ
ನಿನ್ನ ದಾಹ ತೀರಿಸಿಕೊಂಡೆ – ಎನ್ನುತ್ತಾರೆ
ಮನುಷ್ಯ ಸ್ವಾರ್ಥಕ್ಕೆ ಬಲಿಯಾದ ಮರದ ಈ ಸ್ವಗತವನ್ನು ನಾವು ಇಲ್ಲಿ ಅತ್ಯಾಚಾರಕ್ಕೆ ಶೋಷಣೆಗೆ ಒಳಗಾದ ಹೆಣ್ಣಿನ ಆಕ್ರಂದನವಾಗಿಯೂ ನೋಡಬಹಯದಾಗಿದೆ. ಅದೇ ರೀತಿ ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ನೀನಾರಿಗಾದೆಯೋ ಎಲೆ ಮಾನವಾ? ಎನ್ನುವ ಬಸವಣ್ಣನವರ ವಚನ ಕೊಡ ನೆನಪಿಸುವಂತೆ ಸರ್ವಸ್ವನ್ನೆ ಕೊಟ್ಟ ಮರಕೆ ಹೆಣ್ಣಿಗೆ ಎಲೇ ಮಾನವಾ ನೀನೇನು ಕೊಟ್ಟೆ ? ಕೊನೆಗೆ ಅದಕ್ಕೆ ಬೆಂಕಿ ಹಚ್ಚಿ ನಿನ್ನ ವಿಕೃತಿ ಮೆರೆದೆ ಎನ್ನುವ ಮೂಲಕ ವಾಸ್ತವತೆಯನ್ನು ಬಿಚ್ಚಿಡುತ್ತಾರೆ. ಧರ್ಮ ಅಭ್ಯಾಸ, ವಚನಗಳ ಸಾಂಗತ್ಯ, ಆಧ್ಯಾತ್ಮ ಜೀವಿಗಳ ಒಡನಾಟದಲ್ಲಿ ಒಬ್ಬ ಸಂತನಂತೆ ತಮ್ಮ ಬದುಕನ್ನು ರೂಪಿಸಿಕೊಂಡಿರು ಈಶ್ವರ ಅವರ ಸಾಹಿತ್ಯದ ಮೇಲೆ ಅದರ ಪ್ರಭಾವ ಇರುವದನ್ನು ಅಲ್ಲಗೆಳೆಯವಂತಿಲ್ಲ.

ದೇವ ದೇವಾ
ನೀನೆಲ್ಲಿದಿಯೋ ಗೊತ್ತಿಲ್ಲ
ಕಣ್ಣಿಗೂ ಕಂಡಿಲ್ಲ
ಜಗದಾಚೇಯೋ ಜಗದೀಚೇಯೋ
ಗೊತ್ತಿಲ್ಲ
ಈಗಲೂ ಹುಡುಕುತ್ತಿದ್ದೇನೆ
ಮಾನವೀಯ ನೆಲಗಟ್ಟಿನ
ಅಂತರಾತ್ಮದ ಅರಿವಿರುವ
ನಿಜ ಮಾನವನ ಆಂತರ್ಯದಲ್ಲಿ
ಸಿಗುವೆಯಾ ? (ದೇವರು)
ಎನ್ನುವ ಸಾಲುಗಳು ದೇವರ ಅಸ್ತಿತ್ವ ಹುಡುಕಾಟದ ಭಾಗಗಳಾಗುತ್ತವೆ. ಇದರ ಅರ್ಥ ದೇವರನ್ನು ನಿರಾಕರಿಸುವದಲ್ಲ ಬದಲಾಗಿ ತಮ್ಮೊಳಗೆ ದೇವರನ್ನು ಕಂಡುಕೊಳ್ಳವು ಪ್ರಕ್ರಿಯೆ ಆಗಿದೆ. ಪ್ರತಿ ಅಧ್ಯಾತ್ಮ ಸಾಧಕನ ಗುರಿಯೂ ಇದೇ ಆಗಿತ್ತು. ಹಲವು ಮಹಾತ್ಮರು ಹಲವು ರೂಪದಲ್ಲಿ ದೇವರನ್ನು ಕಂಡುಕೊಂಡರು‌. ಸಮಾಜ ಸೇವೆಯಲ್ಲಿ, ರೋಗಿಗಳ ಉಪಚಾರದಲ್ಲಿ, ಬಡವರಲ್ಲಿ, ದಲಿತರಲ್ಲಿ, ದುಃಖಿತರಲ್ಲಿ.. ಅವೆಲ್ಲವು ದೇವರನ್ನು ಅರಿಯುವ ಮಾರ್ಗೋಪಾಯವಾಗಿ ಕಂಡುಬರುತ್ತವೆ. ಹಾಗೇ ಮಾನವೀಯತೆ ಇರುವ ಅಂತರಾತ್ಮದ ಅರಿವಿರುವ ನಿಜ ಮಾನವನ ಆಂತರ್ಯದಲ್ಲಿ ಕವಿ ಕಾಣದ ದೇವರನ್ನು ಹುಡುಕುವ ಪ್ರಯತ್ನದಲ್ಲಿದ್ದಾನೆ. ಅಥವಾ ನಿಜಮಾನವನಾಗಿಗಿ ಬದಲಾಗಿ ತನ್ನ ಅಂತರಂಗವನ್ನೆ ದೇವಸ್ಥಾನವಾಗಿ ಪರಿವರ್ತಸುವ ಪ್ರಯತ್ನದಲ್ಲಿರುವುದು ಇಲ್ಲಿ ಗೋಚರವಾಗುವವ ಅಂಶ.
ಮೊದಲೆ ಹೇಳಿದಂತೆ ಕವಿ ಇಲ್ಲಿ ಪರಿಸರ ಪ್ರೇಮಿಯಾಗಿದ್ದಾನೆ ಎನ್ನುವುದಕ್ಕೆ ಇಲ್ಲಿನ ಸಾಕಷ್ಟು ಹನಿಗವಿತೆಗಳು ಸಾಕ್ಷಿಯಾಗುತ್ತವೆ-

ಕಾಗೆಗಳಿಲ್ಲದೆ
ಒಂದೇ ಕೂಗಿಗೆ
ಒಂದೆಡೆ ಕೂಡುವಿಕೆ
ಗುಬ್ಬಿಗಳಲ್ಲಿದೆ
ಜಗಳಿಲ್ಲದೆ ಒಂದೆಡಿ
ಕೂಡಿ ತಿನ್ನುವಿಕೆ
ಜಿಂಕೆ ಆನೆ ಕುರಿ
ಇತ್ಯಾದಿಗಳಲ್ಲಿದರೆ
ಕೂಡಿ ಬಾಳುವಿಕೆ
ಈ ಸ್ನೇಹ ಪ್ರೀತಿಯ
ಹೊಂದಾಣಿಕೆ? (ಹೊಂದಾಣಿಕೆ)
ಇಲ್ಲಿ ಪಶು ಪ್ರಾಣಿಗಳಲ್ಲಿರುವ ಹೊಂದಾಣಿಕೆ ಸ್ವಭಾವ ಮನುಷ್ಯರಲ್ಲಿ ಇಲ್ಲದಿರುವುದು ಸೂಚಿಸುತ್ತದೆ. ಮನುಷ್ಯ ಮತ್ತು ಪಶುಗಳ ಅಂತರ ಕಾಣಿಸುವ ಇನ್ನಷ್ಟು ಹನಿಗಳನ್ನು ಗಮನಿಸಬಹುದು.

ಎಷ್ಟು ಸಂತೋಷ ಅವುಗಳಲ್ಲಿ
ಎಲ್ಲವೂ ಬೇಕೆಂಬ ಹರವೂ ಇಲ್ಲ
ನಾನು ನನ್ನದೆಂಬ ಅಹಂವೂ ಇಲ್ಲ
ಗಿಡ ಮರ ಟೊಂಗೆಗಳಲ್ಲಿ
ಗಾಳಿ ನೀರು ಬೆಳಕಿನಲ್ಲಿ
ಚಿಲಿಪಿಲಿ ಗಾನ ಗಾಯನದಲ್ಲಿ
ಎಲ್ಲವೂ ಪೃ ಹಿತಕ್ಕೆ ಈ
ಸಹಜ ನಿಸರ್ಗ ಮಡಿಲಲ್ಲಿ
ಸಹಜ ತೃಪ್ತಿ ಬರೀ ನೀಡುವಿಕೆಯಲ್ಲಿ
ಬರಲಿ ಎಲ್ಲ ಮನುಜರಲ್ಲಿ
ಈ ಭಾವ ಪ್ರೀತಿ ರೀತಿ (ತೃಪ್ತಿ)
*
ಮೂಕ ಪ್ರಾಣಿಗಳ
ಜೀವ ಚೈತನ್ಯವಿದು
ಕಾಡಿನಲ್ಲೂ ಕರಗುವ
ಮನಸ್ಸುಗಳಿವೆ
ಮಿಡಿಯುವ ಮರಗಳಿವೆ
ಇದು ಸಾರ್ಥಕತೆ !
ನಾಡಿನಲ್ಲಿ
ಹೃದಯ ಶೂನ್ಯವಿದೆ
ಕರಗದ ಹೃದಯಗಳಿವೆ
ಮಿಡಿಯದ ಮನಸ್ಸುಗಳಿವೆ
ಇದು ಸ್ವಾರ್ಥವ್ಯತೆ (ಸಾರ್ಥಕತೆ)

ಹೀಗೆ ಈಶ್ವರ ಹಲವಾರು ಹನಿಗಳಲ್ಲಿ ಮನುಷ್ಯರಕ್ಕಿಂತ ಪ್ರಾಣಿಗಳೇ ಗುಣದಲ್ಲಿ ಮೇಲು ಎಂದು ಸಾರುತ್ತಾರೆ.

ಸೃಷ್ಟಿಕೃತನ ಕೃಪೆ
ಜಗವೆಲ್ಲ ಸುಂದರ
ಎಲ್ಲೆಡೆ ಸಂಭ್ರಮ
ಸ್ವಾರ್ಥವಿಲ್ಲದ
ಜೀವಸಂಕುಲ
ನಮ್ಮ ನೋಟವು
ಸುಂದರವಿರಲಿ
ಸ್ವಾರ್ಥವಿಲ್ಲದ
ಮನಸ್ಸಿನೊಂದಿಗೆ (ಸುಂದರ)
*
ಮುಂಜಾನೆ
ಸೊಬಗಿನ ಉದಯ
ಹಕ್ಕಿಗಳ
ಕಲರವ ಗಾನ
ಸೋತ ಮನ
ನುಡಿಯಿತು
ಹೃದಯಗಾನ
ನುಡಿಯಿತು ಮನ
ಶುಭೋದಯ (ಶುಭೋದಯ)
*
ಬೆಳಸಿದರೆ
ಹಸಿರು
ಉಳಿಯುವುದು
ಉಸಿರು
ಎಚ್ಚರ!
ಮೈಮರೆತರೆ
ಬರುವುದು
ಪರಿಸರಕ್ಕೆ
ಗಂಡಾಂತರ (ಪರಿಸರ)

ಹೀಗೆ ಮರಗಳನ್ನು ಉಳಿಸಿಬೆಳಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಾರೆ. ಪರಿಸರ ಉಳಿದರೆ ನಾವೂ ಉಳಿಯುತ್ತೇವೆ ಇಲ್ಲವಾದರೆ ಮನುಕುಲದ ಸರ್ವನಾಶ ಗ್ಯಾರಂಟಿ ಎಂದು ಕೊನೆ ಎಚ್ಚರಿಕೆಯನ್ನು ಪರಿಸರ ಪ್ರೇಮಿಯಾಗಿ ನೀಡುತ್ತಾರೆ. ಹೀಗೆ ಬಹುತೇಕ ಕವನಗಳು ಪರಿಸರ ಪ್ರೇಮವನ್ನೆ ಅಭಿವ್ಯಕ್ತಿಸಿದರೆ ಇನ್ನು ಸಾಕಷ್ಟು ಕವನಗಳು ಸಮಾಜದ ವಿವಿಧ ಸಮಸ್ಯೆಗಳ ಮೇಲೆ ಬೆಳಕು ಚಲ್ಲುತ್ತವೆ. ಉದಾಹರಣೆಗೆ ರೈತ ಎಂಬ ಪದ್ಯ ನೋಡಿ
ಕುಡಿಯಲು ನೀರು
ಕೇಳಿದರೆ
ಲಾಟಿ ಏಟು
ಬೀಜ ಕೇಳಿದರೆ
ಬೆತ್ತದೇಟು
ಬರಗಾಲದ ಬವಣೆಗೆ
ಸಾಲದ ಉರಳು
ಕೇಳುವರ್ಯಾರು
ನನ್ನಯ ಗೋಳು? (ರೈತ)ನ ಆಕ್ರಂದನವನ್ನು ತುಂಬಾ ಆರ್ದ್ರವಾಗಿ ಕವಿ ಹಿಡಿದಿಡುತ್ತಾರೆ.
*
ಇತ್ತಿಚೆಗೆ
ರಾಜಕಾರಣಿಗಳಿದೂ
ಗಿಮಿಕ್ಕು
ದಃಖದ ಅನುಕಂಪದ
ಕುಮಕ್ಕು
ಇಲ್ಲಿ ಗೆದ್ದು ಬಂದವರ
ಲಕ್ಕು
ಮುಗ್ಧ ಜನರ
ಬ್ಯಾಡ್ ಲಕ್ಕು (ಗಿಮಿಕ್ಕು) ರಾಜಕೀಯ ವ್ಯವಸ್ಥೆ ಮತ್ತು
ಮುಗ್ಧ ಪ್ರಜೆಗಳ ಆವಸ್ಥೆಯನ್ನು ಅನಾವರಣಗೊಳಿಸುತ್ತದೆ.

ಧರ್ಮ ಧರ್ಮಗಳ
ಹೆಸರಿನ ಕಿತ್ತಾಟ
ಮೌಲ್ಯಗಳ ಸಾವು
ವಿದಾಯ ಹೇಳಬೇಕಿದೆ
ಅಂಧಕಾರದ ಮೇಲಾಟಕ್ಕೆ
ತುಂಬಬೇಕಾಗಿದೆ
ಭ್ರಾತೃತ್ವದ ಬೆಳಕನ್ನು
ಪ್ರೇಮ ಬೆಳಕಿನ ತಿರುಳನ್ನು (ತಿರುಳು)
*
ಭಕ್ತಿಯಿಲ್ಲದೆ
ದಯೆಯಂಬ ಸಾರ್ಥಕತೆ
ಇರಕೂಡದು
ಪರಾಕಾಷ್ಠೆಯ ನೆಪದಲ್ಲಿ
ಬಲಿದಾನದ ನಿಷ್ಠುರತೆ
ಮೆಚ್ಚಿಯಾನೆ ಭಗವಂತ
ಮೂಕ ಪ್ರಾಣಿಗಳ ಆ
ಮೂಕ ರೋಧನೆ (ದಯೆಯಿರಲಿ)
ಎಂಬಂತಹ ಪದ್ಯಗಳು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮೌಢ್ಯಗಳ ವಿರುದ್ಧದ ದನಿಯಾಗಿ ಪ್ರತಿಧ್ವನಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಬಹುದು.
*
ಮಗು
ನಿನ್ನ ನಗು
ಮನೆಗೆ ಬಂದ
ಬೆಳಕು
ಮುಗ್ಧ ನಗೆಯ
ಭಾಷೆಯಲ್ಲಿ
ದೇವ ಭಾಷೆಯ
ಥಳಕು (ಮಗು)ವಿನ ನಗುವಿನಲ್ಲಿ ಕವಿ ಭಗವಂತನ ತೊದಲು ಭಾಷೆ ಕಾಣುತ್ತಾನೆ.
*
ಎಲ್ಲವನ್ನು ಎಲ್ಲರನ್ನು
ತೊರೆದು ಬುದ್ಧ
ಕಾಡಿನಲ್ಲಿ ಕುಳಿತು
ಧ್ಯಾನಾಕ್ತನಾದ
ಚಿಂತೆಯ ಮುಕ್ತತೆ
ಇವಳಿಗೆ ಅವನದೇ
ಧ್ಯಾನ ಗಂಡನಿಲ್ಲದ
ಒಂಟಿ ಭಾವದ ಚಿಂತೆ (ಧ್ಯಾನ)
*
ಆಸೆಯಂಬುದು
ಆಸರೆಯಲ್ಲ
ಬಯಕೆಯಂಬುದು
ಬುನಾದುಯಲ್ಲ
ಸ್ನೇಹವೆಂಬುದು
ಸುನಾಮಿಯಲ್ಲ
ಪ್ರೀತಿಯಿರಲು
ಬದುಕೇ ಬೆಲ್ಲ (ಸ್ನೇಹ)
*
ನಮ್ಮೆಲ್ಲರ ತಪ್ಪಗಳನ್ನು
ಮನ್ನಿಸಿ
ಅನ್ನ ನೀಡುತ್ತಿರುವ
ಧರಿತ್ರಿ
ನಿನ್ನ ಸಹನೆಯ ಋಣ
ತೀರಿಸಲು ನನಗಿಲ್ಲ
ಶಕ್ತಿ (ಋಣ)
*
ಅನುಭವದಿಂದ
ಬಂದ ನುಡಿ
ಬಾಳ್ನುಡಿ
ಹಿತನುಡಿ
ನಲ್ನುಡಿ
ಚಿರ ನುಡಿ
ದೇವ ನುಡಿ (ಬಾಳ್ನುಡಿ)

ಹೀಗೆ ಈಶ್ವರ ಮಮದಾಪುರ ಅವರು ತಮ್ಮ ಅನುಭವಕ್ಕೆ ಸಿಕ್ಕ ಸಂಗತಿಗಳೆಲ್ಲ ತಮ್ಮ ಮಾಗಿದ ಮನಸ್ಸಿನ ಕುಲುಮೆಗೆ ಹಾಕಿ ಬಾಳ್ನುಡಿ, ಹಿತ್ನುಡಿ,ನಲ್ನುಡಿ,ಚಿರ್ನುಡಿ, ಕೊನೆಗೆ ಮನುಷ್ಯ ಜೀವನಕ್ಕೆ ಬೆಳಕು ನೀಡುವ ದೇವ ನುಡಿಗಳಾಗಿ ಪರಿವರ್ತಿಸಿ ನಮ್ಮ ಮುಂದೆ ಇಟ್ಟಿದ್ದಾರೆ. ಸಾಮಾನ್ಯ ಓದುಗನಿಗು ನಿಲುಕಬಹುದಾದ ಸಾಲುಗಳಲ್ಲಿ ಸರಳ ಸುಂದರವಾಗಿ ತಮ್ಮ ಅನುಭವದ ಮುತ್ತುಗಳನ್ನು ಸುರುವಿದ್ದಾರೆ. ಪರಿಸರಕ್ಕೆ ಸಮಾಜಕ್ಕೆ ಉಳಿತು ಮಾಡುವ ಅವರ ಸದುದ್ದೇಶ ನಮಗೆಲ್ಲ ದಾರಿ ದೀಪವಾಗಲಿ ಎಂದು ಹಾರೈಸುತ್ತೇನೆ.


೮೦ರ ಹರೆಯದ ಹಿರಿಯ ಕವಿ ಡಾ, ಸಿ. ಪಿ .ಕೆ ಅವರಿಗೆ ಅರ್ಪಿಸಿದ ೧೦೦ ಪುಟಗಳ ಪುಸ್ತಕದ ಬೆಲೆ ೧೪೦/- ಇರುತ್ತದೆ. ಪ್ರತಿಗಳಿಗಾಗಿ-
ಈಶ್ವರ ಮಮದಾಪುರ ೯೫೩೫೭೨೬೩೦೬,
ವೈದ್ಯ ವಾರ್ತಾ ಪ್ರಕಾಶನ ಮೈಸೂರು ೯೪೪೮೪೦೨೦೯೨ ಇವರನ್ನು ಸಂಪರ್ಕಿಸಬಹುದು.

-ಅಶ್ಫಾಕ್ ಪೀರಜಾದೆ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x