ಆ ದಿನ ಎಂದಿನಂತಿರಲಿಲ್ಲ ವಿಜಯ್ ಗರಬಡಿದವನಂತೆ ಕುಳಿತಿದ್ದ. “ಯಾಕೋ ಹೀಗೆ ಕುಳಿತಿರುವೆ ಏನಾಗಿದೆ ನಿನಗೆ? “ಎಂದ ಅಮಿತ್. “ಮಾಡೋದೆಲ್ಲ ಮಾಡಿಬಿಟ್ಟು ಏನೂ ಗೊತ್ತಿಲ್ಲ ಅನ್ನುವಂತೆ ಇದ್ದೀಯಲ್ಲ ನೀನೂ ಒಬ್ಬ ಗೆಳೆಯನಾ? “ಎಂದ. “ಯಾಕಪ್ಪಾ ಅಂಥಾ ತಪ್ಪು ನನ್ನಿಂದ ಆಗಿದ್ದಾದರೂ ಏನು? ” ಎಂದು ಅಮಿತ್ ಕುತೂಹಲದಿಂದ ಪ್ರಶ್ನಿಸಲು “ನನ್ನ ಭಾವಿ ಪತ್ನಿಗೆ ಪತ್ರ ಬರೆದಿದ್ದು ಎಡವಟ್ಟಾಗಿದೆ ಏನು ಮಾಡಲಿ? ” ಎಂದ ಸಪ್ಪೆ ಮೋರೆಯಿಂದ, “ಅದಕ್ಯ್ಕಾಕೋ ಬೇಜಾರು? ” ಎಂದ ಅಮಿತ್ .
ಆಗ ವಿಜಯ್ “ನೀನು ಮಾಡಿದ್ದು ಸರೀನಾ? ” ಎಂದ. ಅಮಿತ್‍ಗೆ ಅರ್ಥವಾಗಲಿಲ್ಲ. ಇಬ್ಬರೂ ಮೊದಲಿನಿಂದಲೂ ಒಟ್ಟಿಗೆ ಓದುತ್ತಿದ್ದವರು. ವಿಜಯ್‍ಗೆ ಇಂಗ್ಲೀಷ ಸರಿಯಾಗಿ ಬಾರದು. ಅವನ ಅಕ್ಕನ ಮಗಳು ಇಂಗ್ಲೀಷ ಮೀಡಿಯಂ ಹುಡುಗಿ. ಮೊದಲೇ ಇವರಿಬ್ಬರ ಮಧ್ಯೆ ಪ್ರೇಮ್ ಕಹಾನಿ ಆರಂಭವಾಗಿತ್ತು. ಆಗಿನ್ನೂ ಈಗಿನಂತೆ ಮೋಬೈಲ್, ಪೋನ್ ಇರಲಿಲ್ಲ ಏನೇ ಮಾಡಿದರೂ ಅದು ಇನ್‍ಲ್ಯಾಂಡ್ ಲೆಟರ್ ಮೂಲಕವೇ, ಆತ ಅಮಿತ್ ರೂಮಿಗೆ ಬಂದು ಇಂಗ್ಲೀಷನಲ್ಲಿ ಪತ್ರ ಬರೆದು ಕೊಡಲು ಕೇಳಿದಾಗ, ಸ್ನೇಹಿತನ ಪ್ರೇಮಕ್ಕೋಸ್ಕರ ಅವರಿಬ್ಬರ ಪ್ರೇಮ ಸ್ಪೂರ್ತಿಯ ಕ್ಷಣಗಳನ್ನು ದಾಖಲಿಸಿ ಪತ್ರ ಬರೆದು ಕೊಡಲು ಪ್ರಾರಂಭಿಸಿದ್ದ ಅಮಿತ್. ಅದಕ್ಕವಳು ಕೂಡ ಪ್ರತಿಯಾಗಿ ವಿಜಯ್‍ಗೆ ಪತ್ರ ಬರೆದಾಗ, ಮತ್ತೆ ಅಮಿತ್ ಬಳಿ ಅದನ್ನು ತಂದು ಓದಿ ಅರ್ಥ ತಿಳಿಸಲು ಕೇಳುತ್ತಿದ್ದ ಅಷ್ಟೇ ಅಲ್ಲ ಮತ್ತೊಂದು ಪತ್ರ ಇಂಗ್ಲೀಷಲ್ಲಿ ಬರೆದುಕೊಡುವಂತೆ ಪೀಡಿಸುತ್ತಿದ್ದ. ಇದರಿಂದ ಹಲವು ಸಲ ಬೇಸರಗೊಂಡರೂ ಅವನಿಗೆ ಪತ್ರ ಬರೆದುಕೊಡತೊಡಗಿದ. ಅವಳ ಆ ಪ್ರೇಮದ ಪತ್ರ ಮತ್ತೆ ಮತ್ತೆ ಬರತೊಡಗಿದಂತೆ ಅವುಗಳಿಗೆ ಉತ್ತರ ನೀಡುವ ಪ್ರಕ್ರಿಯೆ ಅವನಿಂದ ಇಂಗ್ಲೀಷ ಪತ್ರ ಬರೆಯಲು ಪ್ರೇರಣೆ ನೀಡಿತ್ತು.
ವಿಜಯ್ ಸದಾ ವಾರಕ್ಕೊಮ್ಮೆ ಬಂದು ಅಮಿತ್‍ಗೆ ಪತ್ರ ಬರೆದು ಕೊಡಲು ಒತ್ತಾಯಿಸುತ್ತಿದ್ದ. ಕೆಲವು ಸಲ ಅಮಿತ್ ಕೂಡ ಬೇಡ “ಇದು ಬಹಳ ದಿನ ನಡೆಯದು ನೀನು ಈ ರೀತಿ ಮಾಡಿದರೆ ಒಂದಲ್ಲ ಒಂದು ಸಲ ಸಿಕ್ಕಿಬಿದ್ದರೆ ನೀನು ಮೋಸಗಾರ ಅನ್ನೋ ಸಂಗತಿ ನಿಮ್ಮ ಅಕ್ಕನ ಮಗಳು ನಿನ್ನ ಭಾವೀ ವುಡ್‍ಬಿಗೆ ಗೊತ್ತಾದರೆ ಏನು ಗತಿ? . ನಿಮ್ಮಿಬ್ಬರ ಮಧ್ಯೆ ಅಂತಾ ಗ್ಯಾಪ್ ನಿನ್ನ ಸ್ನೇಹಿತನಾಗಿ ನನ್ನಿಂದ ನೋಡೋಕಾಗಲ್ಲ ಕಾರಣ ಅವಳಿಗೆ ನಿನಗೆ ಇಂಗ್ಲೀಷ ಸರಿಯಾಗಿ ಬರುವುದಿಲ್ಲ ಎನ್ನುವ ಸಂಗತಿ ತಿಳಿಸಿಬಿಡು ಇನ್ಮುಂದೆ ಇಬ್ಬರೂ ಕನ್ನಡದಲ್ಲೇ ಪತ್ರ ವ್ಯವಹಾರ ಮಾಡಬಹುದು”ಎಂದ.
ಅದಕ್ಕವನು “ಛೇ ! ಹಾಗಾಗೋಕೆ ಬಿಡೋದಾ. ಅವಳು ನನ್ನ ಮೇಲೆ ಪ್ರಾಣ ಇಟ್ಕೊಂಡಿದ್ದಾಳೆ. ಯಾವತ್ತೂ ಇಂಥ ಪತ್ರಗಳಿಂದ ಅವಳು ಅಪಾರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ” ಅಂಥಾ ವಾದ ಮಾಡಿದ್ದ.
ಈಗ ನೋಡಿದರೆ ದಿಡೀರ್ ಆಗಿ ಅಮಿತ್ ಮೇಲೆ ಆಪಾದನೆ ಮಾಡುತ್ತಿರುವುದನ್ನು ಕಂಡಾಗ ಅವನಿಗೆ ಸೋಜಿಗವಾಗಿತ್ತು. “ಸರಿ ಆಗಿರೋ ಎಡವಟ್ಟನ್ನು ನಿಖರವಾಗಿ ಬಿಡಿಸಿ ಹೇಳು ನನ್ನಿಂದ ತಪ್ಪಾಗಿದ್ದರೆ ನಾನೇ ನಿನ್ನ ಹುಡುಗಿಯ ಕ್ಷಮೆ ಯಾಚಿಸುವೆ” ಎಂದ.
ಆಗ ಅವನು ಪತ್ರವೊಂದನ್ನು ಅಮಿತ್ ಕೈಗಿಟ್ಟು ಓದು. ಎಂದ “ಅರೆ ಇದು ನಾನೇ ಬರೆದಿದ್ದು, ಪೋಸ್ಟ ಮಾಡಿಲ್ವಾ ಎಂದ ಅಮಿತ್ . “ಪೋಸ್ಟ ಮಾಡಿದ್ದೆ ಅದು ವಾಪಸ್ಸು ಬಂದಿದೆ. ನೀನು ಬರೆದುಕೊಟ್ಟಿದ್ದನ್ನು ಮೊದಲು ಗಮನವಿಟ್ಟು ಓದು”ಎಂದ.
“ಮೊದಲ ಓದಿಗಾಗಿ ಅವಳ ಸವಿನೆನಪಿನ ಕೆಲವು ಶಾಯರಿ ಬರೆದಿದ್ದ ಅಮಿತ್ . ನಂತರ ಕಳೆದ ನಾಲ್ಕೈದು ತಿಂಗಳುಗಳ ಅವರ ಪ್ರೇಮ ಸಮಾಚಾರ ಇತ್ಯಾದಿ ಬರೆದಿದ್ದ ಅವನಿಗೆ ಅದರಲ್ಲಿ ತಪ್ಪುಗಳೇನೂ ಕಾಣಲಿಲ್ಲ” ವಿಜಯ್‍ನ ಮುಖ ನೋಡಿದ, ಸಿಂಡರಿಸಿದ ಮುಖದಿಂದ “ಮುಂದೆ ಓದೋ, “ಎಂದ ಮತ್ತೆ ಓದುತ್ತ ಸಾಗಿದ ಪತ್ರದ ಅಂತಿಮ ಒಕ್ಕಣೆ ತಲುಪಿದೆ ಆಗಲೂ ಯಾವ ದೋಷ ಕಾಣಲಿಲ್ಲ, ಯಾವ ದೋಷದಿಂದ ನಿನ್ನ ಭಾವಿ ಪತ್ನಿ ನಿನ್ನ ಮೇಲೆ ಕೋಪ ಮಾಡಿಕೊಂಡಿದ್ದಾಳೆ ಎಂದು ಪ್ರಶ್ನಾರ್ಥಕವಾಗಿ ನೋಡಿದ. “ಪೂರ್ತಿ ನೋಡೋ. “? ಎಂದ. ಅವನ ಸಹಿ ಗಮನಿಸಿದ, ಸರಿ ಇದೆಯಲ್ಲ ಎಂದ “ಮುಟ್ಟಾಳ ಸಹಿ ಕೆಳಗೆ ಯಾವ ಹೆಸರಿದೆ? ” ಎಂದ. ಅಮಿತ್ ಒಂದು ಕ್ಷಣ ತಬ್ಬಿಬ್ಬಾಗಿ ಹೋದ. ಕಳೆದ ವಾರ ಪರೀಕ್ಷೆಯ ಸಮಯ ಓದಲೆಂದು ಪುಸ್ತಕ ಹಿಡಿದು ಓದುವ ಸಂದರ್ಭ ವಿಜಯ್ ಒತ್ತಾಯಪೂರ್ವಕವಾಗಿ ಪತ್ರ ಬರೆಸಿಕೊಂಡು ಹೋಗಿದ್ದ ಆ ಕ್ಷಣ ನೆನಪಿಸಿಕೊಂಡ, .
ಆ ದಿನ ಆತ ಗಾಡವಾಗಿ ಓದುತ್ತಿರುವಾಗ ಪತ್ರ ಬರೆದುಕೊಡಲು ಆತನ ಬಳಿ ಬಂದು ಪೀಡಿಸಿದ್ದ ವಿಜಯ್ ಬೇಡವೆಂದರೂ ಒತ್ತಾಯದ ಮೇರೆಗೆ ಆ ದಿನ ಒಲ್ಲದ ಮನಸ್ಸಿನಿಂದ ಪತ್ರ ಬರದು ಕೊಟ್ಟಿದ್ದ ಅಮಿತ್ ವಿಜಯ್‍ನ ಹೆಸರನ್ನು ಪತ್ರದ ಕೊನೆಗೆ ಬರೆಯುವ ಬದಲು ಅವನ ಹೆಸರು ತನ್ನ ಹೆಸರು ಬರೆದು ಅವನಿಗೆ ಸಹಿ ಹಾಕಿ ಪೋಸ್ಟ ಮಾಡು ಎಂದು ಕೊಟ್ಟಿದ್ದ ಅವನು ಕೂಡ ಪ್ರತಿ ಸಲದಂತೆ ಈ ಸಾರಿಯೂ ಕೂಡ ಹಿಂದೆ ಮುಂದೆ ವಿಚಾರಿಸದೇ ತನ್ನ ಸಹಿ ಹಾಕಿ ಆ ಪತ್ರ ಅಂಚೆ ಡಬ್ಬಿಗೆ ಹಾಕಿಬಿಟ್ಟಿದ್ದ ಈಗ ಆ ಪತ್ರ ಅವನ ಪ್ರೇಮ ನಿವೇದನೆಯನ್ನು ತೊಂದರೆಗೀಡು ಮಾಡಿತ್ತು.
ಆಗ ಅಮಿತ್ “ಇದನ್ನು ಅವಳು ವಾಪಸ್ಸು ಮಾಡಿದರೆ ಏನಾಯ್ತು ಮೊದಲೇ ನಾನು ನಿನಗೆ ತಿಳಿಸಿದ್ದೆ ಸತ್ಯ ಎನು ಅಂಥ ಹೇಳಿ ಕನ್ನಡದಲ್ಲಿ ಲವ್ ಮಾಡು ಅಂಥಾ ಆಗಲೇ ಇದನ್ನು ಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ. “ಎಂದ.
“ಅದು ಗೊತ್ತಾಯ್ತು ಮಾರಾಯಾ, ನನ್ನ ಭಾವಿ ಪತ್ನಿ ಕೂಡ ಅದನ್ನೇ ಹೇಳಿದ್ದಾಳೆ ನೋಡಿಲ್ಲಿ ಅಂಥಾ ಮತ್ತೊಂದು ಪತ್ರ ಕೊಟ್ಟ ಅದು ಅಚ್ಚ ಕನ್ನಡದಲ್ಲಿತ್ತು ಆಶ್ಚರ್ಯ ಅವಳು ಸ್ವತಃ ತಾನೇ ಕನ್ನಡದಲ್ಲಿ ಬರೆದಿದ್ದಳು. ನನ್ನ ಪ್ರೀತಿಯ ಇನಿಯ, ಸ್ನೇಹಿತನ ಕೈಯಿಂದ ಪತ್ರ ಬರೆಯಿಸಿ ನೀನೇನೂ ತಾಜಮಹಲ್ ಕಟ್ಟುವ ಅಮರ ಪ್ರೇಮಿಯಾಗುವ ಸಾಹಸಕ್ಕೆ ಕೈ ಹಾಕಬೇಡ. ನನಗೂ ಕನ್ನಡ ಬರುತ್ತದೆ. ಪ್ರೀತಿಸಲು ನಾಟಕ ಮಾಡುವ ಬದಲು ಇರುವ ವಿಷಯ ನೈಜವಾಗಿ ಹಂಚಿಕೊಂಡಿದ್ದರೆ ನಿನಗೇನೂ ಆಗುತ್ತಿರಲಿಲ್ಲ ನನಗೂ ನಿನ್ನ ಪತ್ರ ನೋಡಿದಾಗಲೆಲ್ಲ ಆಶ್ಚರ್ಯ ಸುರ ಸುಂದರಾಂಗ ನನ್ನ ಭಾವೀ ಮಾವ ಇಷ್ಟೊಂದು ಇಂಗ್ಲೀಷ ಕಲಿತಿರಲು ಸಾಧ್ಯವೇ ಅಂಥಾ. ಕೊನೆಗೆ ಸಿಕ್ಕಿತಲ್ಲ ನಿನ್ನ ಎಡವಟ್ಟು ಇಂಗ್ಲೀಷ. ಇನ್ನು ಮುಂದಾದರೂ ಆ ನಿನ್ನ ಸ್ನೇಹಿತನಿಗೆ ಹೇಳು ಬೇರೆಯವರಿಗೆ ಪತ್ರ ಬರೆಯಬೇಡ ಅಂಥ. ನೀನೂ ಕೂಡ ಕನ್ನಡದಲ್ಲಿ ನಿನ್ನ ಅಭಿಪ್ರಾಯ ತಿಳಿಸು ನನಗೂ ನೀನು ಏನು ಅಂಥಾ ಗೊತ್ತಿದೆ. ಒಂದು ಸಲ ಪ್ರೀತಿಯ ಅಲೆಯಲ್ಲಿ ಬಿದ್ದಿದ್ದೇವೆ. ಅದಕ್ಕ್ಯಾಕೆ ಭಾಷೆ ಅಡ್ಡಿ. ಇನ್ನು ಮುಂದೆ ಕನ್ನಡದಲ್ಲಿ ಪತ್ರ ಬರೀತಿ ತಾನೇ, ? “ಎಂದು ಮುಗಿಸಿದ್ದಳು,
“ಅಬ್ಬಾ ನಿಮ್ಮ ಪ್ರೇಮ ಕೊನೆಗೊಂಡಿಲ್ಲವಲ್ಲ. ನಾನು ಮೊದಲೇ ಹೇಳಿದ್ದರೂ ಕೇಳದೇ ನನ್ನನ್ನೇ ಇಬ್ಬರೂ ಸೇರಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಬಿಡೋದಾ. ಇದ್ಯಾವ ನ್ಯಾಯ” ಎಂದಿದ್ದ ಅಮಿತ್
“ನ್ಯಾಯಾನೋ ? ಅನ್ಯಾಯಾನೋ ? ನನಗೆ ಗೊತ್ತಿಲ್ಲ ಒಟ್ಟಿನಲ್ಲಿ ನಿನ್ನ ಹೆಸರು ಬರೆದು ನನಗೆ ಇಂಗ್ಲೀಷ ಬರುವುದಿಲ್ಲ ಅಂಥಾ ತೋರಿಸಿಕೊಟ್ಟೆಯಲ್ಲ ನೀನೂ ಒಬ್ಬ ಗೆಳೆಯನಾ? ಎಂದು ಪ್ರಶ್ನಿಸಿದ ವಿಜಯ್.
ಆಗ ಅಮಿತ್ “ಸಹಿ ಮಾಡುವಾಗ ನೀನು ನೋಡಿದ್ದರೆ ಇಷ್ಟೊಂದು ರಂಪ ಆಗ್ತಿರಲಿಲ್ಲ ಈಗ ನೋಡಿದರೆ ನಾನೇನೂ ಮಾಡೋಕ ಆಗೋಲ್ಲ. ಒಟ್ಟಿನಲ್ಲಿ ನೀವಿಬ್ಬರೂ ಒಂದಾಗಿದ್ದೀರಲ್ಲ ಅಷ್ಟು ಸಾಕು ಮಾರಾಯಾ. ಮದುವೆ ದಿನ ಮಾತ್ರ ನನ್ನ ತೋರಿಸಿ ಪತ್ರ ಬರೆದ ಮಹಾಶಯ ಇವನು ಅಂಥಾ ಮಾತ್ರ ಹೇಳಬೇಡ” ಅಂದಾಗ ಇಬ್ಬರ ಮುಖದಲ್ಲಿ ಮಂದಹಾಸ.
–ವೈ. ಬಿ. ಕಡಕೋಳ