
ರಾಗ-ರತಿ
ಸೋನೆಸೋನೆಯಾಗಿ ಸುರಿವ ಸಂಜೆಮಳೆಗೆ
ಕಣ್ಮಿಂಚಿನಲೆ ರಂಗೇರಿದ ರಾಗ-ರತಿ.
ಬಾಗಿತಬ್ಬಿ ಬೆಸೆವ ಬಂಧದ ತವಕ
ನಸು ಬಾಗಿದ ಬಾನು ತುಸು ಸರಿದ ಭುವಿ
ಪ್ರತಿಕ್ಷಣಗಳ ಲೆಕ್ಕವಿಟ್ಟ ವಿರಹದುರಿಯಲ್ಲಿ
ಹುಸಿಮುನಿಸು ನಸುಗೋಪ
ಕಾದುಕುದ್ದ ಕ್ಷಣಗಳನೆಲ್ಲ ಕಾರಿ ಬಿಡುವ ತವಕ
ರಾಜಿಸೂತ್ರದ ಸಂಭ್ರಮ ಕಣ್ಣ ತುದಿಗೇ ಕುಳಿತ ಸಾಂತ್ವ
ಕಾಲಜಾರುವ ಮೊದಲೇ ಲೆಕ್ಕ ಕೂಡಿಸುವಾಟ
ಸೋಲಬಾರದ ಹಠಕೆ ಸೋತುಗೆಲ್ಲುವ ಪ್ರೀತಿ
ತುಟಿಯೊಡೆಯದೆಲೆ ಎದೆಮುಟ್ಟಿದ ಮಾತು
ಕಣ್ಣನೋಟದ ಕೂಡುಬೇಟವ ದಾಟಿಬರುವ ಮೈಮರೆತ
ಮುಟ್ಟಲಾರದ ಬೇಗುದಿಗೆ ಬಾಗಿ ಸೇರುವ ಬಯಕೆ
ಶೃತಿಹಿಡಿದು ಒರತೆಯೊಡೆದು ಅಂಕಿಯಂಕೆಯ ಮೀರಿ
ಭಾವದೊರತೆ ನಸುಗಂಪು ಮೃದು ಕಂಪನ
ಸುರಿದು ಇಂಗಿಹೋದ ಸೋನೆಗೋ
ಜಾರಿಹರಿವ ಹನಿಮುತ್ತ ಒಡಲ ತುಂಬಿ
ಎರಡೊಂದಾಗಿ ಮತ್ತೆರಡಾಗಿ ಲೆಕ್ಕಗೆಲ್ಲುವ ಸಂಭ್ರಮ.
-ಶೈಲಜಾ ಗೊರನಮನೆ
ಗಜಲ್
ಬಣ್ಣ ಬಣ್ಣದ ಹೂ ತಂದು ಪೋಣಿಸಿದವನ ಹುಡುಕುತ್ತಿರುವೆ/
ನೆರಳೇ ಇರದ ಅಂಗಳಕೆ ಹಂದರ ಹೊದೆಸಿದವನ ಹುಡುಕುತ್ತಿರುವೆ/
ಬಂಜರು ನೆಲದಲ್ಲಿ ಮೂಡಿ ಅದುರುತ್ತಿತ್ತು ಮೊಳಕೆ
ಹಕ್ಕಿಗಳ ಲಾಲಿ ಹಾಡಿನ ಖುಷಿ ತಂದವನ ಹುಡುಕುತ್ತಿರುವೆ./
ನಲಿವು ಅರ್ಥ ಕಳೆದುಕೊಂಡರೆ ನೋವಾಗಿ ಕಾಡುವದು ದಿಟ
ನವಿಲು ಗರಿಯಿಟ್ಟು ಮರಿ ಹಾಕಿದಾಗ ಕರೆ ಎಂದವನ ಹುಡುಕುತ್ತಿರುವೆ/
ಮುಗಿಲ ಒಡಲಿಂದ ಉದುರುವ ಪ್ರತೀ ಹನಿಗೂ ಮುತ್ತಾಗುವ ಬಯಕೆ
ಮುತ್ತಿನಂತ ಮಾತಿನಲಿ ಮನಸೆಳೆದವನ ಹುಡುಕುತ್ತಿರುವೆ./
ತೇಗದ ಮರದಡಿಗೆ ತುಂಡು ಹುಲ್ಲೂ ತತ್ವಾರವೇ
ಗರಿಕೆ ಹಬ್ಬಿಸಿ ಗರಿಗೊಳ್ಳಿಸಿದವನ ಹುಡುಕುತ್ತಿರುವೆ/
ಕನಸೇ ಬೀಳದ ರಾತ್ರಿಗಳು ಏನನ್ನೂ ಸೃಷ್ಟಿ ಸುವದಿಲ್ಲ “ಸ್ಮಿತ”ವೇ
ಅಳುವಿನಲ್ಲಿ ನಗುವ ಕಲಿಸಿ ನನಸಾಗದವನ ಹುಡುಕುತ್ತಿರುವೆ
–ಸ್ಮಿತಾ ರಾಘವೇಂದ್ರ
ಅವಳ ನೆನಪು
ಎಂದೊ ಬರೆದ ಅಪ್ರಕಟಿತ ಕವನದ ಸಾಲುಗಳೇ – ಅವಳ ನೆನಪು !
ಸೀಲ್ ಒಡೆಯದ ಹಳೆಯ ವೈನಿನ ಉನ್ಮಾದವೇ -ಅವಳ ನೆನಪು !
ಮೋಡ ಕವಿಯಲು ಗರಿಗೆದರಿ ಕುಣಿಯುವ ನವಿಲೇ- ಅವಳ ನೆನಪು !
ಪಾತರಗಿತ್ತಿಯಾಗದ ನತದೃಷ್ಟ ಹುಳುವಿನ ಕನಸೇ-ಅವಳ ನೆನಪು !
ಕಡಲೊಡಲು ಸೇರಲು ತವಕದಿ ಹರಿಯುವ ನದಿಯೇ-ಅವಳ ನೆನಪು !
ಬೆಳಗುವ ದೀಪದಡಿಯಲಿ ಮರೆಯಾದ ಕತ್ತಲೇ -ಅವಳ ನೆನಪು !
ತೀಡಿದಷ್ಟು ಸುಗಂಧಬೀರುವ ಶ್ರೀಗಂಧವೇ – ಅವಳ ನೆನಪು !
ಅವಶೇಷಗಳಡಿಯ ಉತ್ಖನನವಾಗದ ಶಾಸನವೇ -ಅವಳ ನೆನಪು !
ಮಂಜಿನ ಮಬ್ಬು ಸರಿಸಲು ನುಸುಳಿದ ಎಳೆಬಿಸಿಲೇ -ಅವಳ ನೆನಪು !
ಗಡಿಕಾಯಲು ನಿಂತ ಸೈನಿಕನ ಗುಂಡಿಗೆಯ ಪ್ರಾಣಪಕ್ಷಿಯೇ- ಅವಳ ನೆನಪು !
–ಶಕೀಲ್ ಉಸ್ತಾದ್, ಹಟ್ಟಿ ಚಿನ್ನದ ಗಣಿ
ನನ್ನ ಪ್ರೇಮ ನಿವೇದನೆ
ನನ್ನ ಕಣ್ಣು ನಿರ್ಮಲ ತಾರೆ
ನನ್ನ ಆತ್ಮ ಕನ್ನಡಿ
ನಿನ್ನ ನೋಟ ದಾರಿ ದೀಪ
ಪ್ರೇಮಕ್ಕಾಗಿ ಮುನ್ನುಡಿ.
ನಿನ್ನ ಮಾತು ಜೇನ ಹನಿಯು
ನನಗೆ ಜೀವಧಾರೆ
ನನ್ನ ಮನಸು ತೆರೆದ ಪುಟವು
ನೀನೇ ಕಾವ್ಯ ಧಾರೆ
ನನ್ನ ಹೆಜ್ಜೆ ನಿನ್ನ ನೆರಳು
ದಾರಿ ಸವಿಯಲಿ ಹಗಲು ಇರುಳು
ನೀನೇ ಮೋಡ ನಾನೇ ನವಿಲು
ಬಾಳೊಂದು ಸುಂದರ ಹೊನಲು
ನಿನ್ನ ತೋಳು ಜಗದ ಸುಖವು
ಮರೆಸಿತೆಲ್ಲ ನೋವು
ಕೈಯ ಹಿಡಿದು ಜೊತೆಗೆ ನಡೆಯೇ
ಸ್ವರ್ಗ ಮೂರು ಗೇಣು.
-ಶಿಲ್ಪಾ ಬಸ್ತವಾಡೆ

ಪಿರೂತಿ ಪದ್ಯ:
ಕಣ್ಣಾಗೆ ಕಾಳ್ ಹಾಕೋ ನೀನಂದ್ರೆ
ಮೆತ್ ಮೆತ್ಗಿರೋ ನಾಟಿ ಕೋಳಿಪಿಳ್ಳೆ
ಇತ್ ಇತ್ಲಾಗೆ ರವಷ್ಟು ತಲೆ ಕೆಟ್ಟದೆ ನಿನ್ನಿಂದ
ಆಡ್ ಬಾರೆ ಎದೆ ಹಿತ್ಲಾಗೆ ಕುಂಟೇ ಬಿಲ್ಲೆ.
ಬಾಡಾಮ್ರ,ಬಸ್ಸಾರು, ಒಬ್ಬಟ್ಟು, ಹಾಲ್ಪಾಯ್ಸ
ಇದ್ರೂನು ಬ್ಯಾಡಂತಾದೆ ಹಾಳಾದ್ ಹೊಟ್ಟೆ
ಮೆಲ್ ಮೆಲ್ಲಗೆ ನೀನು ಮಾತಾಡ್ತಾಯಿದ್ರೆ
ಸದ್ ಮಾಡ್ದಂಗೆ ನಮ್ಮಟ್ಟಿ ಕರೀನ್ ಕತ್ತಿನ ಘಂಟೆ
ಸುನೋ, ಪೌಡ್ರು ಹಾಕ್ದಿದ್ರೂ ಕೂಡ
ನಿನ್ ಮಕ್ದಾಗೆ ಮಲ್ಕಂಡದೇ ಬೆತ್ತಿಂಗ್ಳು
ಹಂಗೇ ವಸೀ ನೀನು ಮುಟ್ಟುದ್ರೂನು
ನಚ್ಚ್ ನಚ್ಚಗೆ ಬೆಚ್ಚಗಾಯ್ತದೆ ತಂಗಳು
ಮಂತ್ರ ಹಾಕ್ಸಿ, ನಾಟಿ ಮದ್ದು ತಿಂದ್ರು
ಮೇಲಾಗ್ತಾಯಿಲ್ಲ ನನಗಿಡ್ದಿರೋ ನಿನ್ನ ತಿಕ್ಲು
ನಿನ್ ಹಾಲ್ನಂತ ಕಾಲ್ನಿಂದ ಸೇರನ್ನ ಒದ್ದು
ದೊಡ್ಡದು ಮಾಡ್ಬಾರೆ ಅಮ್ಮಣ್ಣಿ ನಮ್ಮನೆ ಒಕ್ಲು.
–ಡಾ.ಮಹೇಂದ್ರ ಎಸ್ ತೆಲಗರಹಳ್ಳಿ

ನನ್ನ ನಗಿಸುವವನು
ನನ್ನೊಂದಿಗೆ ನಗುವವನು
ನನ್ನ ಜೊತೆಗೂಡುವವನು
ಕೋಪದಿ ಕಿತ್ತಾಡುವವನು
ನನ್ನ ಆಗು ಹೋಗುಗಳ ಅರಿತವನು
ನನ್ನೊಂದಿಗೆ ಬೆರೆತವನು
ಅವನೇ ನನ್ನವನು
–ಸುಮಾ ಶಾಸ್ತ್ರಿ

ಇಂತಿ ನಿನ್ನವಳೆ
ಒಂದೇ ಬಾರಿ, ಒಂದೇ ಒಂದು ಬಾರಿ
ಏನನ್ನೂ ಕೇಳದೆ, ಸರಿ-ತಪ್ಪಿನ ಗೊಡವೆಗೂ ಹೋಗದೆ
ಈ ಕ್ಷಣ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದೆಯೆಂಬ ಗೋಜಿಗೂ ಇಳಿಯದೆ
ಬಿಗಿದಪ್ಪಿ ಚುಂಬಿಸು, ಗಾಳಿಗೂ ನಮ್ಮ ನಡುವೆ ಜಾಗ ಕೊಡದೆ
ನಿನ್ನ ತೋಳ್ಬಂಧನದಲ್ಲಿ ಸೆರೆಯಾಗಿಸು ನನ್ನ
ಸನಿಹಕ್ಕೆ ಸೆಳೆದು ಅವತರಿಸು ನನ್ನ ಮೈ ಗಂಧವನ್ನ
ಕಣ್ಣಲ್ಲಿ ಕಣ್ಣಿಟ್ಟು ನನ್ನ ನಡುವ ಬಳಸು
ಹಣೆಗೊಂದು ಮುತ್ತಿಟ್ಟು ಉಸಿರಿನೇರಿಳಿತವ ಎಣಿಸು
ನನ್ನ ಮುಖದ ಮೇಲೆ ಆಗಾಗ ಬಂದು
ಗೇಲಿ ಮಾಡುವ ಪೋಲಿ ಮುಂಗುರುಳ
ನಿನ್ನುಸಿರೂದಿ ಓಡಿಸು
ನಿನ್ನ ಕೈ ಬೆರಳುಗಳು ನನ್ನ ಕಿವಿಯ ಸ್ಪರ್ಶಿಸಲಿ
ಪೋಲಿ ಪಿಸುಮಾತುಗಳು ನನ್ನೆದೆಯಲ್ಲಿ ಪ್ರತಿಧ್ವನಿಸಲಿ
ಅತ್ತಿತ್ತ ನೋಡಿ ಯಾರೂ ಇಲ್ಲದ್ದ ಗಮನಿಸಿ ಮೆಲ್ಲಗೆ ಮೆಲ್ಲು
ನನ್ನ ತುಟಿಯಂಚಲಿ ನಿನಗಾಗೇ ಅಡಗಿಸಿಟ್ಟಿದ್ದ ಮಕರಂದವ
ನಿನ್ನ ಬಣ್ಣನೆಗೆ ನಾ ನಾಚಿ ನೀರಾಗುವಂತೆ
ಹೊಗಳು ನನ್ನ ಅಂದವ
ನಿನ್ನ ಪ್ರೀತಿಯ ಕಾವಿಗೆ ಕೆಂಪಾದ ಕೆನ್ನೆಗಳ
ಅಂಗೈಯಲ್ಲಿ ಹಿಡಿದು ನನ್ನನ್ನೇ ನೋಡು,
ಪ್ರಪಂಚದಲಿ ನನಗಿಂತ ಸುಂದರವಾದದ್ದು ಮತ್ತೇನೂ ಇಲ್ಲವೆಂಬಂತೆ
ಕಣ್ಗೆ ಕಣ್ ತಾಕಿಸು, ನಿನ್ನ ಹೃದಯದ ಸ್ವರ್ಗ ನನಗೆ ಕಾಣುವಂತೆ
ಪ್ರೀತಿಸು, ನನ್ನನ್ನೇ ಪ್ರೀತಿಸು
ನಿನಗಾಗೇ ಇಳಿದು ಬಂದ ಸ್ವಪ್ನ ಕನ್ಯೆಯಂತೆ
ನಿನ್ನೆದೆಯ ಪ್ರೀತಿ ಪುರವಣಿಯಲ್ಲಿ ಖಾಯಂಆಗಿ ಅಚ್ಚಾಗಲಿ
ನನ್ನೀ ಪುಟ್ಟ ಕವಿತೆ..,
–ಶ್ರೀರಂಗ. ಕೆ. ಆರ್

ಹುಡುಕಲಿಲ್ಲ (ಗಜಲ್ )
ನಿನ್ನೊಲವ ಅರಿತ ಮೇಲೆ ಪ್ರೀತಿಯ ವ್ಯಾಖ್ಯಾನವನ್ನು ಹುಡುಕಲಿಲ್ಲ
ಜೀವಭಾವ ಬೆರೆತ ಮೇಲೆ ಅನುಸಂಧಾನದ ಅರ್ಥವನ್ನು ಹುಡುಕಲಿಲ್ಲ
ನಿನ್ನ ಮೇಲೆ ಮುನಿಸು ಹೆಚ್ಚಿದಂತೆಲ್ಲಾ ಕುದಿಯುವುದು ನನ್ನದೇ ಹೃದಯ
ನೀ ನನ್ನೊಳಗಿರುವೆ ಎಂದರಿತ ಮೇಲೆ ಸಲ್ಲದ ನೆಪಗಳನ್ನು ಹುಡುಕಲಿಲ್ಲ
ಎಂಟುದಿಕ್ಕುಗಳಿಂದ ತೂರಿಬರುತಿವೆ ರಾಗಗಳು ಯಾವುದಕ್ಕೆ ಕಿವಿ ತೆರೆಯಲಿ
ಎದೆಯ ತುಂಬಿರಲು ಅನುರಾಗದ ಅಲೆಗಳು ವಿರಹದ ಹಾಡುಗಳನ್ನು ಹುಡುಕಲಿಲ್ಲ
ಈ ಪ್ರೀತಿಯು ಮಧುರ ಮಾಯೆಯಂತೆ ಆದರೂ ಮೊದಲ ಆದ್ಯತೆ ನಿನಗೆ
ನಿನ್ನ ಸನಿಹ ನನ್ನ ಸ್ವರ್ಗ ಎಂದರಿವಾದಾಗ ಯಾವ ಆಕರ್ಷಣೆಗಳನ್ನು ಹುಡುಕಲಿಲ್ಲ
ಬರಿದೇ ಇನ್ನೇನು ಹುಡುಕಲಿ ತೃಪ್ತಿ ಆಳದಲ್ಲಿ ಮನವು ನೆಲೆನಿಂತಾಗ
ಆತ್ಮಕ್ಕೆ ಪ್ರೇಮ ದರ್ಶನವಾದ ಮೇಲೆ ಕಾಣದ ದೇವರನ್ನು ಹುಡುಕಲಿಲ್ಲ
–ರೇಖಾ ಭಟ್ ಹೊನ್ನಗದ್ದೆ

ಹೆಚ್ಚೇನೂ ಬರೆಸದಿರು
ಕೊಚ್ಚಿ ಹೋಗುತಿರುವೆ
ನಿನ್ನ ಪ್ರೀತಿಯ ಅಮಲು
ಗಿರಗಿಟ್ಟಿ ಆಡಿಸಿದಂತಿದೆ
ಮತ್ತಲ್ಲಿ ತೇಲಾಡುವ
ಖುಷಿ ಮನಸಿಗೆ
ಇಂಬು ಕೊಟ್ಟಂತೆ
ಪದೇ ಪದೇ
ನೆನಪಿನ ಚಿಟಿಕೆ ಹಾರಿಸಬೇಡಾ.
ಮತ್ತದೇ ಕನವರಿಕೆಯಲಿ
ಗೀಚಿ ಗೀಚಿ ಪದ ಭಂಡಾರವೇ
ಖಾಲಿಯಾಗಿ ಶೂನ್ಯದತ್ತ
ಸರಿಯುವ ಇರಾದೆ
ಕಿಂಚಿತ್ತೂ ಇಲ್ಲ ಕಣೋ….
ಏನು ಗೊತ್ತಾ?
ನಾ ಸದಾ ನಿನಗಾಗಿ
ಚುಟುಚುಟುಕಾಗಿ ಮತ್ತೆ ಮತ್ತೆ
ಬರೆಯುತ್ತಲೇ ಇರಬೇಕು
ಉಸಿರ ಪತಾಕೆ
ತಟಸ್ಥವಾಗುವತನಕ
ನೀ ನೆನಪಿಸಿಕೊಂಡು ಆಗಾಗ
ಓದುತ್ತಲೇ ಇರಬೇಕು
ನಾನಿಲ್ಲದ ದಿನಗಳಲಿ!
-ಗೀತಾ ಜಿ ಹೆಗಡೆ ಕಲ್ಮನೆ.

ಗೋರಿ ಸೇರಿದ ಪುಟ
ಅವಳು ಸತ್ತಿದ್ದಾಳೆ
ಗೋರಿಯು ಬಿಸಿಲಲ್ಲಿ ಬೇಯುತ್ತಿದೆ
ನನ್ನುಸಿರು ಅದರ ಸುತ್ತ ಅಲೆಯುತ್ತಿದೆ
ಬದುಕಿನ ಚಿತ್ತಾರ ಬಿಡಿಸಲು
ಹೆಜ್ಜೆಯ ಉಗುರು ತಾಕಿ
ಮೌನದಲೇ
ಸೊರಗಿ ಸುಣ್ಣವಾದವಳು
ಪ್ರೀತಿಯ ಕೊರಳು
ಸ್ವರ ತಪ್ಪಿ ಅಲೆವಾಗ
ಪದವಾದ ಅವಳು
ಹಾರಿದಳು ಚಿಟ್ಟೆಯಾಗಿ
ನರ್ತಿಸಿದಳು ನವಿಲಾಗಿ
ನೆಲದ ಹೆಜ್ಜೆಗೆ ಗೆಜ್ಜೆಯಾಗಿ
ಎದೆಯ ಕಾವಿನಲಿ ಅರಳಿದ ಮನಸು
ಬರೆಯುತ್ತಲೇ ಇತ್ತು ಪ್ರೇಮ ಪತ್ರ
ಕೆಲವು ಪುಟಗಳು ಕವಿತೆಯಾಗಿ
ರೆಕ್ಕೆ ಕಟ್ಟಿಕೊಂಡು ಹಾರಿದವು
ಬಾನ ತುಟಿಯ ಚುಂಬಿಸಲು
ಇನ್ನು ಕೆಲವು ನರಳಿ ಕೆರಳಿದವು
ಅವಳ ಸೆರಗಲ್ಲಿ ಜೋತು ಬಿದ್ದ
ನಡುರಾತ್ರಿಯ ಪುಟ ಸಿಗದೇ ಗೋರಿ ಸೇರಿತು
ಬಹುಶಃ ಅವಳು
ಅದನ್ನ ತಿದ್ದಿ ಚಂದದ ಕವಿತೆ ಮಾಡಿ
ನನ್ನ ಬಳಿಗೆ ಕಳಿಸಬಹುದೆಂದು
ಅಲೆಯುತ್ತಲೇ ಇದೆ ನನ್ನುಸಿರು.
ಮೇಲೆ ಬಿದ್ದ ಇಬ್ಬನಿಯ ಚೂರು
ಬಿಸಿಲ ನುಂಗಿ
ಗೋರಿಗಿಳಿಯುವಾಗ
ಕವಿತೆಯ ಸ್ಪರ್ಶತಾಕಿ
ನನ್ನುಸಿರ ನೋವು
ಕವಿತೆಯ ಬೆನ್ನ ಭಿತ್ತಿಯಲಿ ಚಿತ್ರ ಬರೆದು
ಅವಳು ಬಿಟ್ಟೋದ ಕನಸುಗಳ
ಆಕಾರವನು ಬಿಡಿಸಿ
ಕಾಯುವೆನು ಗೋರಿಯ ಮೇಲೆ.
–ಬಿದಲೋಟಿ ರಂಗನಾಥ್
