ಪಂಜು-ವಿಶೇಷ

ಪ್ರೇಮಿಗಳ ದಿನಾಚರಣೆ: ಭಾರ್ಗವಿ ಜೋಶಿ

ಮೊಟ್ಟ ಮೊದಲು ಎಲ್ಲರಿಗು ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು. ಭೂಮಿಮೇಲೆ ಜೀವಿಸುವ ಪ್ರತಿ ಜೀವಿಗಳು ಪ್ರೇಮಿಗಳೇ. ಈ ಜಗದಲ್ಲಿ ಗಾಳಿ, ನೀರು, ಬೆಳಕಿನ ಅಸ್ತಿತ್ವ ಎಷ್ಟು ಸತ್ಯವೋ ಹಾಗೆ ಈ ಪ್ರೀತಿ, ಪ್ರೇಮವೆಂಬ ಭಾವನೆಗಳ ಅಸ್ತಿತ್ವವು ಅಷ್ಟೇ ಸತ್ಯ ಮತ್ತು ಅವಶ್ಯಕ.

ಪ್ರೀತಿ ಎಂದರೆ ತಂಗಾಳಿ,
ಪ್ರೀತಿ ಎಂದರೆ ಹರಿವ ನೀರು,
ಪ್ರೀತಿ ಎಂದರೆ ಬಿಸಿ ಉಸಿರು,
ಪ್ರೀತಿ ಎಂದರೆ ಸಿಹಿ ಸ್ಪರ್ಶ,
ಪ್ರೀತಿ ಎಂದರೆ ಹುಸಿ ಮುನಿಸು,
ಪ್ರೀತಿ ಎಂಬುದು ಸದಾ ಹಸಿರು.

ಪ್ರೀತಿ ಎಂಬುದು ಕಣ್ಣಿಗೆ ಕಾಣದೆ ಮನಸಿಗೆ ಮಾತ್ರ ಮುದ ನೀಡುವ ಒಂದು ಭಾವನೆ. ಪ್ರೀತಿ ದಿನ ನಿತ್ಯದ ಬದುಕಿನ ಒಂದು ಭಾಗ. ಅದನ್ನು ಆಚರಿಸಲು ಒಂದು ದಿನದ ಅಗತ್ಯ ಇಲ್ಲ ಅನ್ನೋದು ಕೆಲವರ ವಾದ. ಹೌದು ಆದರೆ ನಾವು ಹುಟ್ಟಿ ವರ್ಷಗಳು ಕಳೆದು, ನಿತ್ಯ ಜೀವನ ನಡೆಸುತ್ತಿದ್ದರು ಜನುಮದ ದಿನದ ಆಚರಣೆ ಒಂದು ವಿಶೇಷತೆ ತಂದುಕೊಡುತ್ತದೆ. ನಿತ್ಯವೂ ಪೂಜೆ ಮಾಡುತ್ತಿದ್ದರು ಹಬ್ಬದ ದಿನದ ವಿಶೇಷತೆಗಳು ಹೆಚ್ಚಿನ ಮೆರಗು ಕೊಡುತ್ತವೆ. ಅದೇ ರೀತಿ ನಿತ್ಯವೂ ಉಸಿರಲ್ಲಿ ಬೆರೆತ ಪ್ರೀತಿಯ ನಿವೇದನೆಗೆ ಅಂತ ಒಂದು ದಿನ ಆಚರಿಸಿದರೆ ತಪ್ಪಿಲ್ಲ ಅನ್ನೋದು ನನ್ನ ಅಭಿಪ್ರಾಯ.

ಪ್ರೇಮಿಗಳ ದಿನಾಚರಣೆಯ ಪಾಶ್ಚಾತ್ಯ ಸಂಸ್ಕೃತಿ ನಿಜ. ಆದರೆ ಒಳ್ಳೆಯದನ್ನು ಒಳ್ಳೆಯರೀತಿಯಲ್ಲಿ ಆಚರಿಸುವುದನ್ನು ಜಗತ್ತಿನ ಯಾವುದೇ ಮೂಲೆಯಿಂದ ತೆಗೆದುಕೊಳ್ಳಬಹುದು. ಪ್ರೇಮಿಗಳ ದಿನಾಚರಣೆಯ ಆಚರಿಸಲು ವಯಸ್ಸಿನ ಅಡಚಣೆ ಬೇಕಿಲ್ಲ. ಪ್ರೀತಿಯ ಭಾವನೆ ಒಂದೇ ಸಾಕು. ಇನ್ನು ಹದಿ ಹರೆಯದ ವಯಸ್ಸಿನ ಯುವ ಮನಸುಗಳಿಗೆ ಈ “ವ್ಯಾಲೇಂಟೇನ್ಸ್‌ ಡೇ” ಅನ್ನೋದು ಒಂದು ಸುಂದರ ದಿನ. ಎಷ್ಟೋ ದಿನಗಳಿಂದ ಅವಳ ಅಂದಕ್ಕೆ, ನಗುವಿಗೆ ಮಾರುಹೋದ ಇವನ ಮನಸು ಇಂದು ಮೌನ ತೊರೆದು ಮಾತಗಳು ಹಾತೊರೆಯುವ ಸಮಯ. ಇಷ್ಟು ದಿನ ಹಿಂದೆ ಮುಂದೆ ಸುತ್ತುತ್ತಿದ್ದ ಆ ಹುಡುಗ ಇಂದಾದರೂ ಬಂದು ನನ್ನ ಮುಂದೆ ತನ್ನ ಪ್ರೀತಿಯನ್ನೆಲ್ಲ ಹೇಳಿ ಬಿಡುವನೇನೋ ಎಂದು ಅವಳು ಕಾಯುವ ಸುಸಮಯ. ಪ್ರೀತಿಯ ಸಂಕೇತವಾದ ಕೆಂಪು ಗುಲಾಬಿ, ಎದೆಯೊಳಗಿನ ಮಾತು ಅಕ್ಷರ ರೂಪದಲ್ಲಿ ಮೂಡಿದ ಆ ಪ್ರೇಮ ಪತ್ರ, ನೀನೇ ನನ್ನ ಜಗತ್ತು ಎಂದು ಸಾರಿ ಹೇಳುವ ಆ ಗ್ರೀಟಿಂಗ್‌ ಕಾರ್ಡ್‌ ಗಳನ್ನು ಕೊಡೋದು, ತಗೊಳ್ಳೋದು ಆ ಏನೋ ಒಂದು ಸಾಧಿಸಿದ ಹೆಮ್ಮೆ ಆ ಮನಸುಗಳಿಗೆ.

ಪ್ರೀತಿ ತಪ್ಪಲ್ಲ, ಪ್ರೇಮಿಗಳ ದಿನಾಚರಣೆಯು ತಪ್ಪಲ್ಲ. ನಾಲ್ಕು ಜನರ ಮಧ್ಯ ಹೆಮ್ಮೆಯಿಂದ ಇದೆ ನನ್ನ ಪ್ರೀತಿ ಎಂದು ಹೇಳುವುದು ತಪ್ಪಲ್ಲ. ಯಾವುದೊ ಗಿಡದ ಮರೆಯಲ್ಲಿ, ನಿರ್ಜನ ಪ್ರದೇಶದಲ್ಲಿ, ಪ್ರೀತಿ ಹುಡುಕುವುದು ತಪ್ಪು. ಎಲ್ಲದಕ್ಕೂ ಅದರದೇ ಆದ ಪರಿಧಿ ಇರುತ್ತದೆ. ಎಲ್ಲೇ ಮೀರದೆ ಸಂಭ್ರಮಿಸುವ ಸಂಭ್ರಮವು ಖಂಡಿತ ತಪ್ಪಲ್ಲ. ವಯಸ್ಸು ಯಾವುದೇ ಇರಲಿ, ಪ್ರೀತಿಯನ್ನು ಕಲ್ಪಿಸಿಕೊಳ್ಳುವ, ಪ್ರೀತಿಯನ್ನು ತೋರ್ಪಡಿಸುವ ರೀತಿ ಬೇರೆ ಬೇರೆ ಇರಬಹುದು. ಆದರೆ ಎಲ್ಲರಲ್ಲೂ ಪ್ರೀತಿಒಂದೆ. ಸಂಭ್ರಮಿಸೋಣ. ನಮಗಾಗಿ, ನಮ್ಮ ಪ್ರೀತಿಪಾತ್ರರಿಗಾಗಿ ಒಂದು ದಿನ. ಉಡುಗೊರೆ ವಿನಿಮಯ ಅವರವರಿಗೆ ಬಿಟ್ಟಿದ್ದು ಆದರೆ ಒಂದು ವಿಶ್, ಜೊತೆಗೆ ಒಂದು ಮುದ್ದಾದ ನಗು.. ಇತ್ನಾ ತೋ ಬನ್ತಾ ಹೈ.

ಪ್ರೇಮಿಗಳ ದಿನಾಚರಣೆಯ ವಿಶೇಷ ಕವನ

ನಿನ್ನೊಲವಲ್ಲಿ ಅರಳಿದ ಮಂದಾರ
ಸುಮ ಘಮವ ಚೆಲ್ಲಿ
ಹರಡಿತ್ತು ಎದೆಯಂಗಳದಲ್ಲಿ.

ಪೋಣಿಸಿ ಪ್ರೀತಿಸಲು ಪದಗಳಿಗೂ
ಸಿಗದಷ್ಟು, ಕೈಗೆಟುಕದಷ್ಟು
ಪಸರಿಸಿತ್ತು,

ಕಣ್ಣಂಚಿನ ಆ ಮಾತು
ಸನ್ನೆ ಯಲ್ಲೇ ಹೇಳಿದ ಆ ಪ್ರೀತಿ
ಬೀರಿದ ತುಂಟ ನಗೆ ಎದೆ ಮೀಟಿತ್ತು

ಪ್ರತಿಸ್ಪರ್ಷವು ಸುರಿಸಿತ್ತು
ಹೊಸ ಹೂವ ಬಿಸಿ ಉಸಿರ ಸಾಮಿಪ್ಯ
ಬೆಳೆಸಿತ್ತು ಹೊಸ ಭಾವ.

ನಾನಿರಲಿಲ್ಲ ಅಲ್ಲಿ ಆವರಿಸಿದ್ದೆ ನಿ
ಪೂರ್ತಿಯಾಗಿ ನನ್ನನ್ನೇ,
ಮರೆತಿದ್ದೆ ನಾ ಜಗವನ್ನೇ.

ನಿನ್ನೊಲವ ಓಕುಳಿಯಲ್ಲಿ ಮಿಂದ
ಆ ಮಧುರಭಾವ, ಮರೆಸಿತು
ಜಗದ ಎಲ್ಲ ನೋವ.

Wish you all a very fabulous valentines day.

-ಭಾರ್ಗವಿ ಜೋಶಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಪ್ರೇಮಿಗಳ ದಿನಾಚರಣೆ: ಭಾರ್ಗವಿ ಜೋಶಿ

 1. ಲೇಖನ ಸೊಗಸಾಗಿದೆ ರಿ ವೈನಿ. ಪ್ರೀತಿಯನ್ನು ಎಲ್ಲಿ ಹುಡುಕಬೇಕು, ಎಲ್ಲಿ ಹುಡುಕಬಾರದೆಂಬುದು ಎಲ್ಲ ಯುವ ಪ್ರೇಮಿಗಳಿಗೆ ತಿಳಿಸುವ ಲೇಖನ. ಪ್ರೇಮಿಗಳ ದಿನಾಚರಣೆ ಆಚರಿಸಲು ವಯಸ್ಸಿನ ಮಿತಿಯಿಲ್ಲ. ಸಂಗಾತಿಗಳು ನಿತ್ಯ ನೂತನ ಪ್ರೇಮಿಗಳು. ಸಂಗಾತಿಗೆ ಒಲವಿನಿಂಗ ಪ್ರೇಮಿಗಳ ದಿನದ ಶುಭಾಶಯ ಹೇಳಿದರೆ ಅವನ(ಳ) ಮುಖದಲ್ಲಿ ಹುಟ್ಟುವ ನಗುವಿಗೆ ಸಾವೇ ಇಲ್ಲ. ಅಭಿನಂದನೆಗಳು ರಿ ವೈನಿ

 2. ಮಾತೆಲ್ಲಾ ಮೌನವಾಗಿ, ಸನ್ನೆಗಳು ಮಾತಾಗಿ,
  ಭಾವನೆಗಳು ಜೋರಾಗಿ, ತಂಗಾಳಿ ತಂಪಾಗಿ,
  ತನುವೆಲ್ಲಾ ಬಿಸಿಯಾಗಿ, ಒಲವೆಲ್ಲಾ ಮೈತುಂಬಿ,
  ಬಿಗಿಯಾಗಿ ತಬ್ಬಿರಲು, ಎದೆಬಡಿತ ಹೆಚ್ಚಾಗಿ,

  ಕಿವಿಯೋಲೆಗಳ ಚುಂಬಿಸಲು, ತನುವೆಲ್ಲಾ ಕಂಪಿಸಿದೆ,
  ತುಟಿಗಳು ಒಂದಾಗಲು, ಉಸಿರಾಟ ಮರೆತಂತಿದೆ,
  ಕುತ್ತಿಗೆಗೆ ಮುತ್ತಿಡಲು, ನೊವುಗಳೆಲ್ಲಾ ಮಾಯವಾಗಿದೆ.
  ಪ್ರೀತಿಯ ಅಪ್ಪುಗೆಯಲಿ, ಕಾಮದ ಮತ್ತೇರಿದೆ.

  ಮುತ್ತುಗಳ ಮಳೆಯಾಗಿ, ರತಿಯೆಂಬ ನದಿಯಲಿ ಮಿಂದು,
  ಪ್ರೀತಿಯೆಂಬ ಸಾಗರವಾ ಸೆರಿದ ರಾತ್ರಿ.

Leave a Reply

Your email address will not be published. Required fields are marked *