ಈ ಪ್ರೀತಿಗೆ ಪರಿಧಿ ಎಂಬುದಿಲ್ಲ. ಭ್ರೂಣದಿಂದ ಮರಣದವರೆಗೂ ಪ್ರೀತಿ ವಿಸ್ತಾರವಾಗಿ ಮನಸ್ಸನ್ನು ಹರಡಿಕೊಳ್ಳುತ್ತದೆ. ಅಲ್ಲದೇ ಪ್ರೇಮಿಗಳ ದಿನವನ್ನು ಕೂಡ ಯುವಕ ಯುವತಿಯರು ಮಾತ್ರ ಆಚರಿಸಬೇಕೆಂದಿಲ್ಲ. ಪ್ರೀತಿಯನ್ನು ಆರಾಧಿಸುವ ಪ್ರತಿಯೊಬ್ಬನಲ್ಲೂ ಆ ಸಂಭ್ರಮ ಮನೆ ಮಾಡುತ್ತದೆ. ತೋರಿಸಿಕೊಳ್ಳದೆ ಇರಬಹುದು. ಇಲ್ಲ ಮುಂಜಾನೆದ್ದು ಮಡದಿ ಕೆನ್ನೆಗೆ ಸಿಹಿ ಮುತ್ತನಿಟ್ಟು ಶುಭಾಶಯ ಕೋರಬಹುದು. ಮಗುವಿನ ಹಣೆಗೆ ಮುತ್ತನಿಟ್ಟು ಅಪ್ಪಿಕೊಂಡು ಮುದ್ದಾಡಬಹುದು. ವಯೋವೃದ್ದ ದಂಪತಿಗಳು ಕೂಡ ಒಂದು ಕೆಂಪು ಗುಲಾಬಿ ನೀಡಿ ಪರಸ್ಪರ ಖುಷಿಪಡಬಹುದು.
ಆದರೂ ಪ್ರೇಮಿಗಳ ದಿನಾಚರಣೆ ಎಂದಾಗ ಎಲ್ಲರ ಕಣ್ಣು ತರುಣರ ಮೇಲೇ ಇರುತ್ತದೆ. ಗುಲಾಬಿ ಹೂವುಗಳು , ದುಬಾರಿ ಬೆಲೆಬಾಳುವ ಉಡುಗೊರೆಗಳು ಎಲ್ಲವೂ ಎಗ್ಗಿಲ್ಲದಂತೆ ಖರೀದಿಸುತ್ತಾರೆ. ಏಕಮುಖಿ ಪ್ರೇಮಿಯಾಗಿದ್ದವನು ಈ ಸುದಿನಕ್ಕೆ ಕಾದು ಕುಳಿತು ತನ್ನ ಪ್ರಿಯಳಿಗೆ ಪ್ರೀತಿ ನಿವೇದಿಸಲು ಮುಂದಾಗುತ್ತಾನೆ. ಅವಳು ಒಪ್ಪಿದರೆ ಸುಗ್ಗಿ. ಹಬ್ಬದೂಟ ಸವಿದಷ್ಟೇ ಖುಷಿಪಡುತ್ತಾನೆ. ಅದೇ ನಿರಾಕರಿಸಿದರೆ…?!?
ಹೌದು ಪ್ರೀತಿ ನಿವೇದನೆಯನ್ನು ಎಲ್ಲರೂ ಒಪ್ಪಬೇಕೆಂದಿಲ್ಲ. ಸ್ನೇಹಿತರಾಗಿದ್ದವರು, ಚೆನ್ನಾಗಿಯೇ ಇದ್ದು, ಈ ದಿನಕ್ಕೆ ಕಾದು ಇದ್ದಕ್ಕಿದ್ದಂತೆ ಪ್ರೀತಿಯನ್ನು ತೋಡಿಕೊಂಡರೆ ಆ ಹುಡುಗಿ/ಗ ಹೇಗೆ ತಾನೆ ಒಪ್ಪಿಗೆ ನೀಡುವನು/ಳು.?? ನಂಬಿಕೆಗೆ ಮೋಸ ಮಾಡಿದ ಹಾಗೆ ತಾನೆ. ಅಲ್ಲದೇ ಆ ನಿರಾಕರಣೆಯಿಂದ ಮನಸ್ಸು ಎಷ್ಟು ನೊಂದುಕೊಳ್ಳುವುದಿಲ್ಲ ಇಷ್ಟು ದಿನವಿದ್ದ ಸ್ನೇಹ ಕೂಡ ಕಳಚಿಕೊಳ್ಳುವ ಭೀತಿ ಆವರಿಸದೇ ಇರದು.
ಹೌದು. ಪ್ರೀತಿ ಎಷ್ಟು ಖುಷಿಕೊಡುತ್ತದೆಯೋ ಅಷ್ಟೇ ನೋವನ್ನು ಕೊಡುತ್ತದೆ. ಪ್ರೀತಿ ನಿವೇದಿಸುವ ಮೊದಲೇ ಮನಸ್ಸು ಗಟ್ಟಿ ಮಾಡಿಕೊಂಡಿರಬೇಕು. ಒಪ್ಪಿದರೆ ಸಂತೋಷ. ಇಲ್ಲದಿರೆ ದುಃಖ ಪಡೆದೇ ಸಮಾಧಾನವಾಗಿರಬೇಕು. ಮನಸ್ಸನ್ನು ಹೇಗೆ ಬೇಕು ಹಾಗೆ ಹರಿಯಬಿಡದೇ “ಅವಳಿಲ್ಲದಿದ್ದರೆ ಬದುಕೇ ಇಲ್ಲ, ಸಾಯುವುದೇ ನನ್ನ ನಿರ್ಧಾರ…” ಎಂದೆಲ್ಲ ಯೋಚಿಸಿ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ಕೈಗೊಂಡರೆ ನಿಮ್ಮನ್ನು ಪ್ರೀತಿಸುವ, ನಂಬಿಕೊಂಡಿರುವ ಹೆತ್ತವರ ಗತಿ ಏನಾಗಬೇಡ. ಅವರ ಅಳುವನ್ನು ನಿಲ್ಲಿಸಲು ಯಾರು ಬರುವರು.
ಹಾಗಾಗಿ ಸ್ನೇಹಿತರೇ, ಪ್ರೇಮಿಗಳ ದಿನಾಚರಣೆಯಂದು ಅತಿರೇಕ ತೋರದೇ ಸಮಚಿತ್ತದಿಂದ ದಿನವನ್ನು ಕಳೆಯಿರಿ.
–ಸಿಂಧು ಭಾರ್ಗವ್. ಬೆಂಗಳೂರು