ಪ್ರೇಮಿಗಳ ದಿನಾಚರಣೆಯನ್ನು ಹೇಗೆ ಆಚರಿಸಬೇಕು?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಪ್ರೀತಿ ಅತಿ ಅಮೂಲ್ಯ! ಜಗದ ತುಂಬ ತುಂಬಿದೆ. ಮಾನವನ ಜಗತ್ತನ್ನು ಆಳುತ್ತಿದೆ. ಸಕಲ ಜೀವಜಂತುಗಳಲ್ಲೂ ಮನೆ ಮಾಡಿದೆ. ಜಗತ್ತು ಆಗಿರುವುದೇ ಪ್ರೀತಿಯಿಂದ. ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಪ್ರೀತಿ, ಪ್ರೇಮ ತೋರಿಸುವಂಥವು ಆಗಿರದೆ ನಡೆ, ನುಡಿ, ಮಾಳ್ಕೆಗಳಲ್ಲಿ ಕಂಡುಬರುವಂಥವು ಆಗಿವೆ. ಅವರವರ ಸಂಬಂಧ, ಭಾವನೆ, ಇಬ್ಬರಲ್ಲಿರುವ ಇಷ್ಟವಾಗುವ ಗುಣಗಳಿಂದ ಅವರ ಪ್ರೀತಿಯ ಅನ್ಯೋನ್ಯತೆ ತೀರ್ಮಾನವಾಗುತ್ತದೆ. ಪ್ರೀತಿ ಎಲ್ಲಾ ಜೀವಿಗಳಲ್ಲೂ ಸಹಜವಾಗಿ ಇರುವಂತಹದ್ದೇ! ಆದ್ದರಿಂದ ಪ್ರೇಮಿಗಳ ದಿನ, ಅಪ್ಪಂದಿರ ದಿನ, ಸ್ನೇಹಿತರ ದಿನ, ಅಮ್ಮಂದಿರ ದಿನ… ಆಚರಿಸುವುದು ಭಾರತೀಯ ಪರಂಪರೆಯಲ್ಲಿಲ್ಲ! ಆಗಂತ ಆಚರಿಸಬಾರದು ಅಂತ ಏನೂ ಇಲ್ಲ! ಹಾಗೆ ಆಚರಿಸುವುದರಿಂದ ಅವರ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎಂದಾದಲ್ಲಿ ಆಚರಿಸಬಾರದೇಕೆ? ಮಾನವ ಸಂಬಂಧಗಳನ್ನು ಬೆಸೆಯುತ್ತವಾದ್ದರಿಂದ ಆಚರಿಸುವುದು ಒಳ್ಳೆಯದು. ಆದರೆ ಹೇಗೆ ಆಚರಿಸಬೇಕು ಎಂದು ತಿಳಿದು ಆಚರಿಸಬೇಕಿದೆ.

ವ್ಯಾಲಂಟೈನ್ ಡೇ ಹೆಸರಲ್ಲಿ ಪ್ರೇಮಿಗಳ ದಿನದಂದು ಹೋಟೆಲ್ ಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ, ಪಬ್ ಗಳಲ್ಲಿ ಹೆಣ್ಣು ಗಂಡು ಒಟ್ಟಿಗೆ ಸೇರಿ ಕಂಠಪೂರ್ತಿ ಕುಡಿದು ಮಜಾ ಉಡಾಯಿಸುತ್ತಾರೆ. ಅಪ್ರಾಪ್ತರೂ ಇದನ್ನು ಅನುಕರಿಸಿ ಸಮಾಜ ಅಧೋಗತಿ ಹೊಂದಲು ಕಾರಣರಾಗುತ್ತಿದ್ದಾರೆ! ಸಾರ್ವಜನಿಕ ಸ್ಥಳಗಳಲ್ಲಿ, ಅದೂ ಎತ್ತರದ ವೇದಿಕೆಗಳಲ್ಲಿ ಪ್ರೇಮಿಗಳು ಪರಸ್ಪರರು ಬಿಗಿಯಾಗಿ ತಬ್ಬಿಕೊಂಡು, ಅಪ್ಪುಗೆಯ ಜತೆಗೆ ಮುತ್ತು ಕೊಟ್ಟು, ಕೆನ್ನೆಗಷ್ಟೇ ಅಲ್ಲದೆ ಮುಖ, ಇತರ ಅಂಗಗಳಿಗೆಲ್ಲಾ ಮುತ್ತು ಕೊಟ್ಟು, ಕೊಟ್ಟು, ಗಂಟೆಗಟ್ಟಲೆ ಲಿಪ್ ಲಾಕ್ ಮಾಡಿ, ಐ ಲವ್ ಯು ಎಂದು ಸಾವಿರಾರು ಸಲ ಕಿರುಚಾಡಿ, ನೂರಾರು ಗುಲಾಬಿ ಹೂಗಳ ಗುಚ್ಛ ಕೊಟ್ಟು, ಗುಲಾಬಿ ಹೂಗಳ ಮಳೆಯನೇ ಕರೆದು, ಹೃದಯದಾಕಾರದ ಬಲೂನುಗಳ ಕೊಟ್ಟು, ಅವುಗಳಿಂದನೇ ಆ ವೇದಿಕೆ ಸಿಂಗರಿಸಿ ಪ್ರೀತಿ ವ್ಯಕ್ತಪಡಿಸುತಾ ಪ್ರೇಮಿಗಳ ದಿನ ಆಚರಿಸುವುದು ಎಷ್ಟು ಸರಿ? ಹಾಗೆ ಪ್ರೀತಿ ವ್ಯಕ್ತಪಡಿಸಿದವರಲ್ಲಿ ಕೆಲವರು ಮರುದಿನ ಸಂಜೆ ಕೈಗೆ ಸಿಕ್ಕ ವಸ್ತುಗಳ ಹಿಡಿದು ಕಿರುಚಾಡುತ್ತಾ ಬಡಿದಾಡುವುದನ್ನು ನೋಡಿರುತ್ತೇವೆ! ಅದು ಎಂಥಾ ಪ್ರೀತಿ? ಪ್ರೀತಿ ತೋರಿಸಬೇಕು. ಹೀಗೆ ಲೋಕಕಲ್ಲ! ಯಾರಿಗೆ ತೋರಿಸಬೇಕಾಗಿರುತ್ತೋ ಅವರಿಗೆ ತೋರಿಸಲೇಬೇಕು. ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸಬೇಕು, ಹೇಗೆ ತೋರಿಸಬೇಕೋ ಹಾಗೆ ತೋರಿಸಬೇಕು! ಎಷ್ಟು ತೋರಿಸಬೇಕೋ ಅಷ್ಟು ತೋರಿಸಬೇಕು! ತೋರಿಸಬೇಕಾದವರಿಗೆ ಅವಕಾಶವಾದಾಗಲೆಲ್ಲಾ ತೋರಿಸಬೇಕು! ಹಾಗೆ ದಿನಕ್ಕೆಷ್ಟೋಸಲ ತೋರಿಸುತ್ತಿರುತ್ತಾರೆ. ಪ್ರೀತಿ ಹೃದಯಕ್ಕೆ ಅರ್ಥವಾಗುವ ಭಾಷೆ! ಎಲ್ಲಿದ್ದರೂ ಪ್ರೇಮಿಗಳಿಗೆ ಅರ್ಥವಾಗುತ್ತದೆ! ಹೀಗೆ ಪ್ರದರ್ಶಿಸುವ ಅವಶ್ಯಕತೆಯಿಲ್ಲ! ಹಬ್ಬ ಹರಿದಿನಗಳಲ್ಲಿ ಅವರಿಗೆ ಇಷ್ಟವಾಗುವ ಒಡವೆಗಳ, ವಸ್ತುಗಳ, ತಿನಿಸುಗಳ, ಉಡುಪುಗಳ, ವಾಹನಗಳ ಕೊಡಿಸುತ್ತ ವ್ಯಕ್ತಪಡಿಸುತ್ತಿರುತ್ತಾರೆ! ಇಷ್ಟವಾದ ಆಹಾರವ ಆಗಾಗ ಮಾಡಿ ಬಡಿಸುವುದೂ ಪ್ರೀತಿಯಿಂದಲ್ಲವೇ? ಇದರಿಂದ ಪರಸ್ಪರರು ಒಬ್ಬರನ್ನೊಬ್ಬರು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆಂದು ತಿಳಿಯುವ ಜತೆಗೆ ಅವರ ಮಧ್ಯದ ಪ್ರೀತಿಯ ಗಾಢತೆ ತಿಳಿಯುತ್ತದೆ! ಇದರಿಂದ ಸಂಬಂಧಗಳು ಬಿಗಿಗೊಳ್ಳುವುವು. ಪ್ರೀತಿ ಮರವಾಗುವುದು! ಬೆಳಗಿನಿಂದ ಪರಸ್ಪರರು ಪರಸ್ಪರರಿಗೆ ಇಷ್ಟವಾದುದ ಮಾಡುತ್ತನೇ ಇರುತ್ತಾರೆ. ಹೀಗೆ ಪ್ರೀತಿ ಜೀವನವ ಆವರಿಸಿರುತ್ತದೆ.

ಬದುಕು ವ್ಯವಹಾರವಾಗಬಾರದು! ಬದುಕಿನಲ್ಲಿ ವ್ಯವಹಾರವಿರಬೇಕು! ಇಂದು ಬದುಕು ವ್ಯವಹಾರವಾಗುತ್ತಿದೆ! ವರದಕ್ಷಿಣೆ ಪದ್ದತಿ ಬಹಳ ವರ್ಷಗಳಿಂದಲೂ ಹೆಚ್ಚುತ್ತಿರುವುದು ಅದನ್ನೇ ಹೇಳುತ್ತದೆ! ಜಾಹಿರಾತುಗಳು ಎಲ್ಲಾ ಕಡೆ ವಿಜೃಂಭಿಸಿವೆ! ಜಾಹಿರಾತುಗಳು ಏನಿದ್ದರೂ ವ್ಯವಹಾರಕ್ಕೆ ಸಂಬಂಧಿಸಿದವು. ಆದರೆ ಅವು ಇಂದು ಬದುಕಿಗೆ ಸಂಬಂಧಿಸಿದವಾಗಿ ಪರಿಣಮಿಸುತ್ತಿರುವುದರಿಂದ ಬದುಕು ವ್ಯವಹಾರವಾಗುತ್ತಿದೆ! ಪ್ರೀತಿ ತೀರಾ ವೈಯಕ್ತಿಕವಾದುದು. ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಂತು, ಸುತ್ತಲು ಎಲ್ಲರಿಗೂ ತಿಳಿಯುವಂತೆ ವ್ಯಕ್ತ ಪಡಿಸುವುದು, ಮಾಧ್ಯಮಗಳ ಮುಖಾಂತರ ಎಲ್ಲರಿಗೂ ತಲುಪಿಸುವ ಉದ್ಧೇಶವೇನು? ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಹರಿದಾಡಿಸುವುದರ ಅವಶ್ಯಕತೆಯೇನು? ಇದು ಜಾಹಿರಾತು ಎನಿಸುವುದಿಲ್ಲವೇ? ಜಾಹಿರಾತುಗಳು ವ್ಯವಹಾರಕ್ಕೆ ಸಂಬಂಧಿಸಿದವಲ್ಲವೇ?

ತಂದೆ, ತಾಯಿ, ಪ್ರೇಮಿ … ದಿನಗಳ ಆಚರಿಸುವುದು, ಆ ದಿನ ಅವರಿಗೆ ಇಷ್ಟವಾದ ಕಾಣಿಕೆಗಳನ್ನು ತಂದು ಕೊಟ್ಟು ತಮ್ಮ ಪ್ರೀತಿ ವ್ಯಕ್ತಪಡಿಸುವುದು ನಡೆಯುತ್ತಿದೆ. ಹೀಗೆ ಆ ಒಂದು ದಿನ ವಸ್ತು ಒಡವೆಗಳ ಮೂಲಕ ಪ್ರೀತಿಯನ್ನು ಅಳೆಯುವುದು ಎಷ್ಟು ಸರಿ? ಹಾಗೆ ಪ್ರೀತಿ ವ್ಯಕ್ತ ಪಡಿಸಿದರೆ ಮಾತ್ರ ನಮಗೆ ಅವರ ಮೇಲೆ ಪ್ರೀತಿಯಿದೆ ಎಂದು ಅರ್ಥವೇ? ಆ ಒಂದು ದಿನ ವ್ಯಕ್ತ ಪಡಿಸಿ ಬೇರೆ ದಿನಗಳಂದು ಹೇಗಾದರೂ ಇರಬಹುದೆ? ಬೇರೆ ದಿನಗಲ್ಲಿ ನಾವು ಪ್ರೀತಿ ವ್ಯಕ್ತ ಪಡಿಸುತ್ತಿಲ್ಲವೆ? ಈ ದಿನಕ್ಕಿಂತ ಹೆಚ್ಚು ವ್ಯಕ್ತಪಡಿಸಿರಬಹುದಲ್ಲವೆ? ಅದು ಮುಖ್ಯವೆನಿಸುವುದಿಲ್ಲವೆ? ಪೋಷಕರ ಇಷ್ಟಾನಿಷ್ಟಗಳ ವಿಚಾರಿಸದೆ, ಅವರ ಮಾತಿಗೆ ಕವಡೆ ಕಿಮ್ಮತ್ತಿನ ಬೆಲೆ ಕೊಡದೆ ಅವರ ಹುಟ್ಟಿದ ದಿನ ಮಾತ್ರ ಬೆಲೆಬಾಳುವ ಕೊಡುಗೆ ಕೊಟ್ಟು ಜಗತ್ತಿಗೆ ಕಾಣುವಂತೆ ಫೇಸ್ಬುಕ್, ವಾಟ್ಸಪ್ ಗಳಲ್ಲಿ ಹರಿದಾಡಿಸುವುದು ಎಂತಹ ಪ್ರೀತಿ? ವ್ಯಕ್ತಿ ವ್ಯಕ್ತಿಗಳ ಮಧ್ಯೆ ನಿರಂತರವಾಗಿ ಪ್ರೀತಿ ವ್ಯಕ್ತ ಆಗುತ್ತನೇ ಇರುತ್ತದೆ. ಜೀವನದಲ್ಲಿನ ಕೆಲವು ಸಂದರ್ಭಗಳು, ಘಟನೆಗಳು ಪ್ರೀತಿಯನ್ನು ಪೂರ್ಣ ಪ್ರಮಾಣದಲ್ಲಿ ಹೊರಹೊಮ್ಮಿಸುತ್ತವೆ. ಅದು ಸಹಜ ಪ್ರೀತಿ! ಕೆಲವರು ಆ ಒಂದು ನಿಗಧಿಗೊಳಿಸಿದ ನಿರ್ದಿಷ್ಟ ದಿನಕ್ಕೆ ಮಾತ್ರ ತಮ್ಮ ಪ್ರೀತಿಯನ್ನು ಸೀಮಿತಗೊಳಿಸುತ್ತಾರೆ. ಇದು ಎಷ್ಟರಮಟ್ಟಿಗೆ ಸರಿ?

ಇದು ನಿಜವಾದ ಪ್ರೀತಿನ? ಅಲ್ಲವಾ? ಎಂದು ಚರ್ಚಿಸುವುದಕ್ಕಿಂತ ಈ ಒಂದು ದಿನ ಪೂರ್ತಿ ವ್ಯಕ್ತ ಪಡಿಸಲು ಅವಕಾಶವಾಯಿತಲ್ಲಾ ಎಂದೂ ಸಂತೋಷಿಸಬಹುದಲ್ಲವೆ? ಯಾವುದೋ ಒಂದು ಕಾರಣಕ್ಕೆ ಕಡಿದು ಹೋದ ಸಂಬಂಧಗಳನ್ನು ಕೂಡಿಸಲು, ಕೆಟ್ಟ ಗಳಿಗೆಯಲ್ಲಿ ದೂರವಾದವರನ್ನು ಒಂದು ಮಾಡಲು ಈ ಸಂದರ್ಭಗಳು ಅನುಕೂಲ ಮಾಡುತ್ತವೆ. ಆ ದೃಷ್ಟಿಯಿಂದ ಅನುಕೂಲಕರ. ಯಾವುದೋ ಒಂದು ದುರ್ಘಟನೆಯಿಂದ ದೂರವಾಗಿ ಮಾಡಿದ ತಪ್ಪಿನ ಅರಿವಾಗಿ ತಿದ್ದಿಕೊಂಡು ಸಂಬಂಧ ಮುಂದುವರಿಸಲು ಆಶಿಸುವವರ ಆ ದಿನ ಒಂದಾಗುವಂತೆ ಮಾಡುವ ಅವಕಾಶವನ್ನು ಒದಗಿಸುವುದರಿಂದ ಅಂದು ಆಚರಿಸಬಾರದೇಕೆ ? ಅವರವರಿಗೆ ಗೊತ್ತಾಗುವಂತೆ ಅಷ್ಟೇ ಆಚರಿಸುವುದು ಮುಖ್ಯ!

ಈಗ ಎಲ್ಲಾ ನಗರಗಳಲ್ಲಿ ಶೋ ರೂಂಗಳು ಹೆಚ್ಚುತ್ತಿವೆ. ಏಕೆಂದರೆ ವಸ್ತುಗಳನ್ನು ಪ್ರದರ್ಶಿಸುವುದರ ಮೂಲಕ ಗಿರಾಕಿಗಳನ್ನು ಆಕರ್ಷಿಸಲು. ಅವುಗಳು ಇರುವುದಕ್ಕಿಂತ ಚೆನ್ನಾಗಿ ಕಾಣುವಂತೆ ಮಾಡಿರುತ್ತಾರೆ. ಏಕೆಂದರೆ ಗಿರಾಕಿಗಳು ಆಕರ್ಷಿತರಾಗಲೆಂದು, ತಮಗೆ ವ್ಯವಹಾರ ಹೆಚ್ಚಾಗಿ ಲಾಭದ ಪ್ರಮಾಣ ಹೆಚ್ಚಲೆಂದು. ಆ ಅಪ್ಪಂದಿರ, ಅಮ್ಮಂದಿರ, ಪ್ರೇಮಿಗಳ ದಿನಗಳನ್ನು ಘೋಷಿಸಿರುವುದೂ ಹೀಗೇ ಇರಬೇಕು ಅನಿಸುತ್ತಿದೆ! ನಾವು ನೀವು ಅಂದುಕೊಂಡಿದ್ದಕ್ಕಿಂತಾ ಹೆಚ್ಚು ಪ್ರೀತಿಸುತ್ತಿದ್ದೇವೆ ಎಂದು ತೋರಿಸುವಂತಾಗಿದೆ! ಇದು ಪಾಶ್ಚಾತ್ಯರ ಅನುಕರಣೆಯ ಫಲ! ಭೂಮಿಯೇ ಒಂದು ಕುಟುಂಬವಾಗುವ ಕಡೆಗೆ ಹೋಗುತ್ತಿದೆ! ಆದ್ದರಿಂದ ಒಂದು ಮೂಲೆಯ ಘಟನೆ ಜನ ಇಚ್ಛಿಸುದರೆ ಅತಿ ಬೇಗ ವಿಶ್ವದಾದ್ಯಂತ ಆವರಿಸುತ್ತದೆ! ಕಾಲಕ್ಕೆ ತಕ್ಕಂತೆ ಬದಲಾಗಬೇಕಿದೆ. ಬದಲಾವಣೆಯೆ ಜಗದ ನಿಯಮ! ಅನಿವಾರ್ಯ!

ಆದರೆ ಪ್ರೀತಿ ಆ ಇಬ್ಬರು ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಅವರ ಒಡನಾಟ ಪರಸ್ಪರ ಹೊಂದಾಣಿಕೆ ಇವುಗಳನ್ನು ಪ್ರೀತಿ ಆಧಾರಿಸಿರುತ್ತದೆ. ಆದ್ದರಿಂದ ವಸ್ತು, ಒಡವೆಗಳಿಂದ ಅದನ್ನು ಅಳೆಯಲಾಗದು. ಆದರೂ ಆ ಸಂದರ್ಬಗಳು ಪ್ರೀತಿಯ ಕಾಣಿಕೆಗಳಿಂದ ಸಂತಸ ಉಂಟುಮಾಡುತ್ತವೆ. ಸಂತಸಗಳು ಆರೋಗ್ಯಕ್ಕೆ ಕಾರಣವಾಗುತ್ತವೆ. ಆದ್ದರಿಂದ ಆ ಕಾಣಿಕೆಗಳು ಕೊಡುವ ಅಭ್ಯಾಸ ಒಳ್ಳೆಯದೆ. ಅ ಕಾಣಿಕೆಗಳು ಅವರ ಮಧ್ಯದ ಪ್ರೀತಿಯನ್ನು ಬೆಲೆಕಟ್ಟುವುದಿಲ್ಲ. ಆದರೆ ಪ್ರೀತಿಯ ಸಂಕೇತವಾಗುತ್ತವೆ. ನೆನಪಿನ ಕಾಣಿಕೆಗಳಾಗಿ ಇಟ್ಟುಕೊಂಡು ಆಗಾಗ ಆನಂದಕ್ಕೆ, ಆತ್ಮೀಯತೆಗೆ ಕಾರಣವಾಗುತ್ತವೆ. ಪ್ರಯುಕ್ತ ಅಬ್ಬರ ಆಡಂಬರಗಳಿಗೆ ಅವಕಾಶ ಮಾಡಿಕೊಡದಂತೆ ಪರಸ್ಪರರಿಗಷ್ಟೇ ತಿಳಿಯುವಂತೆ ಆಚರಿಸುವುದು ಒಳಿತು! ಪ್ರೀತಿ ಪ್ರೇಮವೆಂದರೇನೆಂದರಿಯದ ಟೀನ್ ಏಜ್ ನವರ ಮೇಲೆ ಮತ್ತು ಸಮಾಜದ ಮೇಲೂ ದುಷ್ಪರಿಣಾಮ ಬೀರದು!

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x