” ನಿನ್ನ ಬಿಟ್ಟು ಬದುಕುವ ಶಕ್ತಿ ನನಗಿಲ್ಲ ” ಆಕೆಯ ಬೆರಳಿಗೆ ತನ್ನ ಬೆರಳು ತೂರಿಸಿಕೊಂಡು, ಸಣ್ಣಗೆ ಕಂಪಿಸುತ್ತಿರುವ ಅದರದಿಂದ ಹೊರಬಿದ್ದ ಆತನ ಮಾತು, ಆಕೆಯ ಮೈಮನವನ್ನೆಲ್ಲ ರೋಮಾಂಚನಗೊಳಿಸಿತ್ತು. “ಹೌದು ಕಾಣೋ ನೀನಿಲ್ಲದ ಬದುಕನ್ನು ನನಗೆ ಊಹಿಸಿಕೊಳ್ಳಲು ಆಗುತ್ತಿಲ್ಲ ” ಜೋರಾಗಿ ಬೀಸುತ್ತಿದ್ದ ಏರಿಕಂಡಿಷನಿನ ಗಾಳಿಯಲ್ಲಿ ಸಣ್ಣನೆ ಬೆವತ್ತಿದ್ದ ಆಕೆ ನುಡಿಯುತ್ತಾಳೆ. ಐಸ್ ಕ್ರೀಮ್ ಪಾರ್ಲರಿನ ಮೂಲೆಯ ಟೇಬಲಿನಲ್ಲಿ ಕುಳಿತ್ತಿದ್ದ ಅವರಿಬ್ಬರ ಮುಂದಿದ್ದ ಅದೇ ಐಸ್ ಕ್ರೀಮ್ ಪಾರ್ಲರಿನ ಹೆಸರು ಹೊಂದಿರುವ ಸ್ಪೆಷಲ್ ಐಸ್ ಕ್ರೀಮನ್ನು ತನ್ನೊಡಲೊಗೆ ತುಂಬಿಸಿಕೊಂಡಿದ್ದ ಎರಡು ಗಾಜಿನ ಗ್ಲಾಸ್ಸುಗಳು, ಅವರ ಆ ಪಿಸುಮಾತುಗಳಿಗೆ ಒಳಗಿದ್ದ ಐಸ್ ಕ್ರೀಮಿನ ಬಗೆ ಬಗೆಯ ಬಣ್ಣದ ಫ್ಲೇವರಿನಿಂದ ಅವರಿಬ್ಬರ ಲೋಕವನ್ನು ರಂಗಾಗಿಸಿದ್ದವು. ಆಕೆ ಕಡು ನೀಲಿ ಬಣ್ಣದ ಸೀರೆ ಉಟ್ಟಿದ್ದರೆ ಆತ ಹಳದಿ ಬಣ್ಣದ ಶರ್ಟ್ ಮತ್ತು ಕಡು ನೀಲಿ ಬಣ್ಣದ ಪ್ಯಾಂಟಿನಲ್ಲಿ ಮಿನುಗುತ್ತಿದ್ದ ಅವರಿಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರತಿವರ್ಷ ಇದೆ 14 ರಂದು ಇಲ್ಲಿ ಸೇರಿ ಇದೆ ಡೈಲಾಗ್ ಉದುರಿಸುತ್ತಿದ್ದರು. ಬೇರೆ ಬೇರೆ ಊರಿಂದ ಬಂದವರನ್ನು ಈ ಮಹಾನಗರ ಒಂದಾಗಿಸಿತ್ತು. ಮೂರುವರ್ಷದ ಹಿಂದಿನ ಇದೇ ದಿನ ಅವರಿಬ್ಬರ ಕಣ್ಣುಗಳು ಮೆಜೆಸ್ಟಿಕ್ಕಿನ ಯಾವೋದು ಫ್ಲಾಟ್ ಫಾರ್ಮಿನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಸಂದಿಸಿದ್ದವು. ಇಬ್ಬರು ಕಾಯುತ್ತಿದ್ದದ್ದು ಒಂದೇ ಬಸ್ಸಿಗೆ ಮತ್ತು ಹೊರಟಿರುವುದು ಒಂದೇ ಕಂಪನಿಯ ಒಂದೇ ಕೆಲಸದ ಇಂಟರ್ವ್ಯೂಗೆ ಅಂತ, ಇಬ್ಬರು ಬಸ್ಸಿನ ಒಂದೇ ಸೀಟ್ನಲ್ಲಿ ಕುಳಿತು ಇನ್ನೇನು ಇಬ್ಬರ ಸ್ಟಾಪು ಬಂದು ಇಳಿಯಬೇಕು ಅಂದಾಗ ಆತ ಮೊದಲು ಮಾತನಾಡಿಸಿದಾಗ ಗೊತ್ತಾಗಿದ್ದು. ಆತನಿಗೆ ಅಲ್ಲಿ ಕೆಲಸ ಸಿಕ್ಕಿ, ಕೊನೆಗೆ ಆತನೇ ಅವಳಿಗೆ ತನ್ನ ಗೆಳೆಯನ ಕಚೇರಿಯಲ್ಲೇ ಕೆಲಸಮಾಡಿ ಕೊಡುವ ಹೊತ್ತಿಗೆ ಇಬ್ಬರ ಮಧ್ಯೆ ಒಲವು ಮೂಡಿತ್ತು. ತಮ್ಮ ಮೊದಲ ಭೇಟಿಯ ನೆನಪಲ್ಲಿ ಪ್ರತಿವರ್ಷ 14 ನೇ ತಾರೀಕು ತಪ್ಪದೆ ಈ ಕ್ರೀಮ್ ಪಾರ್ಲರಿನಲ್ಲಿ ಮಾತಾಡುತ್ತಿದ್ದರು. ಅಂದ ಹಾಗೆ ಅದು ತಾರೀಕು 14 ಆದರೂ, ತಿಂಗಳು ಮಾತ್ರ ನೀವು ಅಂದುಕೊಂಡ ಹಾಗೆ ಫೆಬ್ರುವರಿ ಅಲ್ಲ , ವರ್ಷದ ಇನ್ಯಾವುದೋ ತಿಂಗಳು.
*
ಪ್ರೇಮಿಗಳಿಗೆ ಒಂದು ದಿನ ! ಹಾಗಂತ ಫೆಬ್ರುವರಿ 14 ನ್ನು ಜಗತ್ತು ಅಪ್ಪಿಕೊಂಡಿದೆ. ಸುಮಾರು ಎರಡು ದಶಕಗಳಿಂದ ಭಾರತೀಯರಿಗೂ ಈ ದಿನ ಈಗ ರೋಮಾಂಚನದ ಮಹಾ ದಿನವಾಗಿದೆ. ಅವತ್ತು ಪಾರ್ಕಿನಲ್ಲಿರುವ ಪ್ರೇಮಿಗಳಿಗೆ ಮದುವೆ ಮಾಡಿಸುವ ಧಾವಂತ ಕೆಲವರಿಗಾದರೆ, ಗುಲಾಬಿ ಕೊಟ್ಟು ಹುರಿದುಂಬಿಸುವ ಹುಮ್ಮಸ್ಸು ಇನ್ನೊಂದಷ್ಟು ಮಂದಿಗೆ. ಇದನ್ನು ಕಿಸ್ ಡೇ ಮಾಡ್ತೀನಿ ಅಂತ ಒಂದು ಗುಂಪು ತುಟಿಯೇರಿಸಿ ನಿಂತರೆ, ಹೊಡಿ ಬಡಿ ದಿನ ಮಾಡ್ತೀವಿ ಅಂತ ಇನ್ನೊಂದು ಗುಂಪು ಎದೆಯೇರಿಸಿ ನಿಲ್ಲುತ್ತೆ. ಈ ಎಲ್ಲ ಗೊಂದಲಗಳ ಮಧ್ಯೆ ಗಿಫ್ಟ್ , ಪಾರ್ಕು, ಹೋಟೆಲು, ಕೆಫೆ , ಮಾಲು, ಪೆಟ್ರೋಲ್ ಅಂತ ಒಂದಷ್ಟು ಕಿಸೆ ಖಾಲಿ ಮಾಡಿಕೊಂಡು ಪ್ರೇಮಿಗಳ ದಿನದ ಊಟ ಉಂಡು, ಮಾರನೇ ದಿನ ಅದನ್ನು ಜೀರ್ಣಿಸಿಕೊಳ್ಳಲಾಗದೆ ಒದ್ದಾಡುವ ಸೊ ಕಾಲ್ಡ್ ಪ್ರೇಮಿಗಳಿಗೆ ವರ್ಷದ ನೀರಿಕ್ಷೆಗಳಿಗೆ ಅಲ್ಪ ವಿರಾಮ ಸಿಕ್ಕ ಸಂತೃಪ್ತಿ.
ಇಷ್ಟಕ್ಕೂ ಪ್ರೇಮಿಗಳಿಗೂ ಒಂದು ದಿನ ಬೇಕಾ ? ಪ್ರೀತಿಸುವ ಹೃದಯಗಳಿಗೆ ದಿನಾ ಹಬ್ಬವಲ್ಲವೇ ? ಖಂಡಿತ ಬೇಡ ಮತ್ತು ಹೌದು ಜಗತ್ತಿನ ಯಾವುದೋ ಮೂಲೆಯಲ್ಲಿ ಯಾರೋ ಯಾವುದೋ ಚಿಕ್ಕ ಕಾರಣಕ್ಕೆ, ಒಂದು ದಿನಾಚರಣೆಯನ್ನು ಆರಂಭಿಸಿದ್ದು ಇದ್ದಕ್ಕಿದಂತೆ ಸಾವಿರಾರು ವರ್ಷಗಳ ನಂತರ ಇಷ್ಟೊಂದು ಪರಿ ನಮ್ಮನ್ನು ಆವರಿಸಿದ ಕಾರಣದ ಹಿಂದಿರುವುದು ದುಡ್ಡು ಅನ್ನುವ ಮಹಾಮಾಯೆ. ದುಡ್ಡಿನ ಬೆನ್ನಿಗೆ ಬಿದ್ದ ಜಗತ್ತು ದುಡ್ಡು ಮಾಡಲು ಹುಡುಕಿಕೊಂಡ ಸಾವಿರಾರು ದಾರಿಗಳಲ್ಲಿ ಇದೂ ಒಂದು. ನಮ್ಮಲ್ಲಿ ಮಾಲ್ ಸಂಸ್ಕೃತಿ ಬೆಳೆದಂತೆ ಇಂತಹ ದಿನಾಚರಣೆಗಳು ಮುಂಚೂಣಿಗೆ ಬಂದವು. ಜನರ ಭಾವನೆಗಳನ್ನು ತಮ್ಮ ವ್ಯವಹಾರಕ್ಕೆ ಬಳಸಿಕೊಳ್ಳುವ ಮಾಲ್ ಮಂದಿಗೆ ಪ್ರೇಮಿಗಳ ದಿನ ಅನ್ನೋದು ಇಡೀ ವರ್ಷ ಜಾಸ್ತಿ turnover day. ಒಟ್ಟಾರೆ ಅಂದು ಒಂದಷ್ಟು ಜನ Valentine’s Day ನ ಮತ್ತಿನಲ್ಲಿ ಕಿಸೆ ಖಾಲಿ ಮಾಡಿಕೊಂಡರೆ, ಹೈಟೆಕ್ ವ್ಯಾಪಾರಿಗಳು ತಮ್ಮ ತಿಜೋರಿ ತುಂಬಿಸಿಕೊಳ್ಳುತ್ತಾರೆ.
“ಇಲ್ಲಾ ಸರ್ ಅವನಿಗೆ ತುಂಬಾ ಕಮಿಟ್ಮೆಂಟ್ ಇತ್ತು. ಅಕ್ಕನ ಮದುವೆಗೆ ಮಾಡಿದ ಸಾಲ ತಲೆ ಮೇಲಿತ್ತು, ತಮ್ಮನ ಇಂಜಿನಿಯರಿಂಗ್ ಓದಿನ ಖರ್ಚು ಅವನೇ ನೋಡಿಕೊಳ್ಳ ಬೇಕಿತ್ತು , ಊರಲ್ಲಿ ಇದ್ದ ಹಳೆ ಮನೆ ಮುರಿದು ಬೀಳುವ ಸ್ಥಿತಿಯಲ್ಲಿತ್ತು. ಈಗಿರುವ ಸಂಬಳಕ್ಕೆ ಅದನ್ನೆಲ್ಲಾ ನಿಭಾಯಿಸೋದು ಕಷ್ಟ ಆಗಿದ್ದರಿಂದ ಆರು ತಿಂಗಳ ಹಿಂದೆ ದುಬೈನಲ್ಲಿ ಕೆಲಸ ಹುಡುಕಿಕೊಂಡು ಹೋದ. ಇನ್ನು ಮೂರೂ ನಾಲ್ಕು ವರ್ಷ ದೇಶದ ಕಡೆ ಬರೋಕ್ಕಾಗದಷ್ಟು ಕಮಿಟ್ಮೆಂಟ್ ಇದೆ. ನಿನಗೆ ಅಲ್ಲಿ ತನಕ ಕಾಯೋಕ್ಕಾಗೋದು ಕಷ್ಟ. ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗು ಅಂತ ಅಂದ. ಈಗ ಮನೆಯವರೇ ಹುಡುಕಿದ ಹುಡುಗನ್ನನ್ನು ಮದುವೆಯಾಗುತ್ತಿದ್ದೇನೆ ” ಅನ್ನುತಾ ತನ್ನ ಕೈಗೆ ಮದುವೆ ಆಮಂತ್ರಣ ಪತ್ರ ನೀಡಿದ ಆ ಹುಡುಗಿಯನ್ನೇ ದೀರ್ಘವಾಗಿ ದಿಟ್ಟಿಸಿದ್ದ ಅದೇ ಐಸ್ ಕ್ರಿಮ್ ಪಾರ್ಲರಿನ ಮಾಲೀಕ. ಇಂದು ಸಹ ಕಡು ನೀಲಿ ಬಣ್ಣದ ಸೀರೆಯನ್ನೇ ಉಟ್ಟಿದ್ದ ಆಕೆಗೆ ಒಮ್ಮೆಲೇ ಹಳೆಯ ನೆನಪುಗಳು ಒತ್ತರಿಸಿಬಂದತಾಗಿ, ಒಮ್ಮೆ ಪಾರ್ಲರಿನ ಎಲ್ಲಾ ಟೇಬಲುಗಳತ್ತ ಕಣ್ಣು ಹಾಯಿಸಿದಳು. ಪ್ರತಿ ಟೇಬಲಿನಲ್ಲೂ ಐಸ್ ಕ್ರೀಮ್ ಗೆ ತುಟಿಯೊಡ್ಡಿ ಬಣ್ಣ ಬಣ್ಣದ ಚಿಟ್ಟೆಗಳು ತಣ್ಣನೆ ವಿಹರಿಸುತ್ತಿದ್ದವು. ಅಂದೂ ಸಹ ತಾರೀಖು ಹದಿನಾಲ್ಕು ಆಗಿತ್ತು ಮತ್ತು ಅದು ನೀವು ಮೊದಲಾರ್ಧದಲ್ಲಿ ಯೋಚಿಸಿದಂತೆ ಫೆಬ್ರುವರಿ ತಿಂಗಳಾಗಿತ್ತು ..
ಪ್ರೇಮಿಗಳಿಗೆ ದಿನವಿಲ್ಲ , ದಿನವೆಲ್ಲಾ …. ಅಷ್ಟೇ.
–ಸತೀಶ್ ಶೆಟ್ಟಿ ವಕ್ವಾಡಿ
ಸರ್ ಅರ್ಥಗರ್ಭಿತ ಲೇಖನ. ಪ್ರೀತಿಸಿದವರಿಗಾಗಿ ಕಾಯುವ ಸುಖ ಒಂದೆಡೆ ಆದರೆ, ಎಲ್ಲೋ ಒಂದು ಕಡೆ ಬಹಳ ದಿನಗಳ ದೂರ ಮನಸುಗಳ ನಡುವೆ ಅಂತರ ಸೃಷ್ಟಿಸಿ, ಪ್ರೀತಿಯನ್ನು ಮರೆಸಿಬಿಟ್ಟರೆ ಕಷ್ಟವೆನಿಸಿಬಿಡುತ್ತದೆ. ಇಲ್ಲಿ ಆದದ್ದು ಅದೇ ಅನಿಸುತ್ತದೆ. ಉತ್ತಮ ಕಥಾ ಲೇಖನ