“ಪ್ರೇಮಿಸಬೇಕು ಪ್ರೇಮಿಗಳು
ಮನಸನ್ನು,
ಅರಿಯಬೇಕು
ಕನಸಿನಂತಿಲ್ಲ ಬದುಕೆಂಬುದನು.
ಎದುರಿಸಬೇಕು
ಮದುವೆಗೆ ಮುನ್ನ ಬರುವ ಕಷ್ಟಗಳನ್ನು,
ಸಹಿಸಬೇಕು
ಮದುವೆನಂತರ
ಬರುವ ಕ್ಲಿಷ್ಟಗಳನ್ನು”
ಪ್ರೇಮಿಗಳು, ಮದುವೆಗೆ ಮುನ್ನ ಹೃದಯದೊಳಗೆ ಹುಟ್ಟಿದ ಪ್ರೇಮದ ಚಿಗುರಿಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು. ಮದುವೆ ಬಳಿಕ ಸಂಸಾರದ ಜಂಜಾಟವನ್ನು ಗೆದ್ದು ಪ್ರೇಮವನ್ನು ಉಳಿಸಿ, ಬೆಳೆಸಿ, ಹೆಚ್ಚಿಸಿಕೊಂಡವರು ನಿಜವಾದ ಪ್ರೇಮಿಗಳು.
ಪ್ರೇಮ, ಒಂದು ಮಧುರವಾದ ಯಾತನೆ. ಈ ಮಧುರವಾದ ಮಾನಸಿಕ ಯಾತನೆಗೆ ಸೋಲದವರಿಲ್ಲ. ಈ ಯಾತನೆಯನ್ನು ಬೇಡವೆಂದವರೂ, ಬೇಡ ಎನ್ನುವವರೂ ಇಲ್ಲ. ಪ್ರೇಮವಿಲ್ಲದೆ ಬದುಕಲು ಸಾಧ್ಯವಿಲ್ಲ ಧರೆಯಲ್ಲಿ. ಧರೆಯ ಪ್ರೇಮದ ಫಲವೇ ನಮ್ಮ ಆಹಾರ. ಎಲ್ಲಕ್ಕೂ ಮೂಲವಾದ ಈ ಪ್ರೇಮದ ಸವಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಅದೊಂದು ವರ್ಣಿಸಲಾಗದು ಅನುಭೂತಿ. ಪ್ರೇಮದಿ ಕಳೆಯುವ ಒಂದೊಂದು ಕ್ಷಣಗಳೂ ಮನಸಿಗೆ ಆಹ್ಲಾದತೆಯನ್ನುಂಟು ಮಾಡುತ್ತವೆ ಎಂಬುದು ಸತ್ಯ.
“ಪ್ರೇಮಿಗಳ ದಿನ” ಆಹಾ, ಯುವ ಪ್ರೇಮಿಗಳು ತಮ್ಮ ಪ್ರೇಮದ ಪರಿಯನ್ನು ವಿನಿಮಯ ಮಾಡಿಕೊಳ್ಳುವ ಸಂಭ್ರಮದ ಮತ್ತು ಅವರ ಪಾಲಿಗೆ ಶಾಶ್ವತವಾಗಿ ನೆನಪುಳಿಯುವ ದಿನ. ಈ ದಿನದಲ್ಲಿ ಯುವ ಜೋಡಿಗಳು ದಾರಿ ತಪ್ಪುತ್ತಾರೆಂಬ ಕಾರಣಕ್ಕಾಗಿ, ಈ ದಿನವನ್ನು ವಿರೋಧಮಾಡುವವರೂ ಇದ್ದಾರೆ. ಇದು ನಮ್ಮ ಸಂಸ್ಕೃತಿಯಲ್ಲ ಎನ್ನುವ ಅವರು ಯಾರನ್ನೂ ಪ್ರೇಮಿಸಿಲ್ಲವೆ? ನಮಗೇಕೆ ಅಡ್ಡಿ ಮಾಡಬೇಕು? ಎಂದು ಪ್ರೇಮಿಗಳು ಉದ್ವೇಗಕ್ಕೆ ಒಳಗಾಗುವುದೂ ಉಂಟು. ಹೌದು ಅವರೇಕೆ ವಿರೋಧಿಸುತ್ತಾರೆಂಬುದನ್ನು ಯೋಚಿಸಬೇಕು. ಯುವ ಮನಸುಗಳು ತಮ್ಮ ಪ್ರೇಮಕ್ಕಾಗಿ ಹೆತ್ತವರ ಪ್ರೇಮವನ್ನು ಬಲಿಕೊಡುತ್ತಾರೆ. ಹೆತ್ತವರ ಮನ ನೋಯಿಸಿ ಪ್ರೇಮಿಸುವ ಅನಿವಾರ್ಯತೆ ಏನಿದೆ ? ಎಂಬುದು ಅವರ ವಾದವಷ್ಟೆ. ಅಷ್ಟಕ್ಕೂ, ಪ್ರೇಮ ಪ್ರೇಮಿಸುವದಲ್ಲ, ಹುಟ್ಟುವುದು. ಅದಕ್ಕೆ ಹುಟ್ಟುವುದು ಮಾತ್ರವೇ ಗೊತ್ತು ವಿನಃ ಸಾಯುವುದಲ್ಲ. ಸತ್ತರೆ ಅದು ನಿಜವಾದ ಪ್ರೇಮವೇ ಅಲ್ಲ. ಪ್ರೇಮವನ್ನು ಸಾಯಿಸಿಕೊಂಡವರು, ನಿಜವಾದ ಪ್ರೇಮಿಗಳೇ ಅಲ್ಲ.
ಹೆತ್ತವರ ಅಣತಿಯಂತೆ, ಅವರೇ ಗೊತ್ತು ಮಾಡಿದ ಜೋಡಿಯೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸಿದರೆ, ಅವರಿಗಿಂತ ಖುಷಿ ಪಡುವವರು ಮತ್ತೊಬ್ಬರಿಲ್ಲ. ಎಲ್ಲವನ್ನೂ ಮಕ್ಕಳ ಆಯ್ಕೆಗೆ ಬಿಡುವ ಪಾಲಕರು ಜೋಡಿಯನ್ನು ಆರಿಸಿಕೊಳ್ಳಲು ಬಿಡುವುದಿಲ್ಲ ಎಂಬುದು ಪ್ರೇಮಿಗಳ ವಾದವಾದರೂ, ಪಾಲಕರು ತಾವು ತೋರಿದವರನ್ನೇ ಮದುವೆ ಆಗಬೇಕೆಂದು ಒತ್ತಡ ಹೇರುವುದಿಲ್ಲ. ಮೊದಲಿಗೆ ಹುಡುಗ ಹುಡುಗಿಯನ್ನೂ ಎದುರುಗೊಳಿಸಿ ಅವರಿಬ್ಬರು ಸಮ್ಮತಿಸಿದ ಮೇಲೆಯೇ ಹಿರಿಯರು ಮುಂದಿನ ಕಾರ್ಯಕ್ಕೆ ಸಾಗುತ್ತಾರೆಂಬುದು ಪ್ರೇಮಿಗಳಿಗೆ ತಿಳಿಯದ ವಿಷಯವೇನಲ್ಲ. ಮೊದಲಿಂದಲೂ ನನಗೆ ಇಂತಹದೇ ವಸ್ತು ಬೇಕು ಎಂದು ಕೇಳುವ ಮಕ್ಕಳು, ಬದುಕಿನುದ್ದಕ್ಕೂ ಜೊತೆಯಾಗಬೇಕಾದವರನ್ನು ಹೆತ್ತವರಿಗೆ ಕೇಳದೇ ಆರಿಸಿಕೊಳ್ಳುತ್ತಾರೆಂಬುದು ಹಿರಿಯರ ನೋವು. ತಮ್ಮ ಮಕ್ಕಳ ಸುಖ ಬಯಸುವ ಹೆತ್ತವರ ದುಗುಡವನ್ನು ಅರಿತು ಮಕ್ಕಳು ಉತ್ತಮ ಮಾರ್ಗದಲ್ಲಿ ಹೆಜ್ಜೆಯಿಟ್ಟರೆ, ಹೆತ್ತವರ ಪ್ರೇಮವನ್ನೂ ಉಳಿಸಿಕೊಳ್ಳಬಹುದು.
ಎಲ್ಲರನ್ನೂ ಎದುರಿಸಿ ನಿಂತು ಮದುವೆಯಾಗುವ ಪ್ರೇಮಿಗಳು, ಮದುವೆ ಬಳಿಕ ಜೀವನದ ಎಡರುಗಳನ್ನು ಎದುರಿಸಲು ವಿಫಲವಾಗಿ, ಭಿನ್ನಮತ ಸ್ಫೋಟಗೊಂಡು ಬದುಕನ್ನು ಸುಟ್ಟುಕೊಳ್ಳುತ್ತಾರೆ. ವಿಚ್ಛೇದನದವರೆಗೂ ಸಾಗಿ, ಸಂಬಂಧ ಮುರಿದುಕೊಳ್ಳುತ್ತಾರೆ. ಹಾಗಾದರೆ ಅವರ ಪ್ರೇಮ ಸುಳ್ಳೇ? ಅವರು ಪ್ರೀತಿಸಿದ್ದು ಸುಳ್ಳೇ? ಅವರು ಪ್ರೀತಿಸಿದ್ದು ಏನನ್ನು? ಕೇವಲ ದೇಹಗಳನ್ನು ಮಾತ್ರ ಪ್ರೀತಿಸಿಕೊಂಡರೇ? ಅವರದು ನಿಚ್ಚಳವಾದ, ನಿಷ್ಕಲ್ಮಷವಾದ ಪ್ರೀತಿಯಾಗಿದ್ದರೆ, ಪ್ರೇಮಿಸುವ ದಿನಗಳನ್ನು ಮುಗಿಸಿಬಿಟ್ಟರೇ? ನಂತರದ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪ್ರೇಮದಿಂದಲೇ ಜೊತೆಗೂಡಿ ಎದುರಿಸಬೇಕಿತ್ತಲ್ಲವೇ? ಸಮಸ್ಯೆ ಬಂದೊಡನೆ ಒಬ್ಬರಿಗೊಬ್ಬರು ಬೇಡವಾಗುತ್ತಾರೆಂದರೆ ಅವರ ಪ್ರೀತಿ ಏನಾಯಿತು? ಪ್ರೀತಿಗೆ ಎಲ್ಲವನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲವೇ ಹಾಗಾದರೆ? ಪ್ರೀತಿಯಲ್ಲಿಯ ಸುಖದ ಸಿಹಿ ಬೇಕು. ಕಷ್ಟದ ಕಹಿ ಬೇಡವೇ? ಈ ಪ್ರಶ್ನೆಗಳಿಗಲ್ಲೆ ಉತ್ತರ ಸ್ವತಃ ದೂರವಾದ ಪ್ರೇಮಿಗಳೇ ಹೇಳಬೇಕು. ಪ್ರೇಮಿಗಳು ಪ್ರೀತಿಸಬೇಕಾದದ್ದು ಏನನ್ನು? ಎಂಬುದನ್ನು ಯೋಚಿಸಬೇಕು. ಮೊದಲು ಪ್ರೀತಿಸಬೇಕಾದದ್ದು ಎದುರಿಸಬೇಕಾದ ಕಷ್ಟದ ಸ್ಥಿತಿಯನ್ನು. ಎಂತಹ ತೊಂದರೆ ಎದುರಾದರೂ, ನಮ್ಮಲ್ಲಿಯ ಪ್ರೀತಿಗೆ ಯಾವ ಕುತ್ತು ಬರುವುದಿಲ್ಲ ಎಂಬ ನಂಬಿಕೆಯನ್ನು ಪ್ರೀತಿಸಬೇಕು. ಅಲ್ಲದೆ ಪ್ರೇಮಿಯ ಒಳ್ಳೆಯ ಗುಣಗಳ ಜೊತೆಗೆ, ಅವನ(ಳ)ಲ್ಲಿರುವ ದುರ್ಗುಣಗಳನ್ನೂ ಒಪ್ಪಿ ಪ್ರೇಮಿಸಬೇಕು. ಒಳ್ಳೆಯ ಗುಣಗಳನ್ನು ಅವಸರವಾಗಿ ಮೆಚ್ಚಿ ಜೊತೆಯಾಗಬಯಸುವ ಜೋಡಿಗಳು, ದರ್ಗುಣಗಳನ್ನು ಏಕಾ ಎಕಿ ಅವಸರವಾಗಿ ತೆಗಳಿದರೆ ಪ್ರೀತಿ ನಿಲ್ಲುವುದಿಲ್ಲ. ಹಂತ ಹಂತವಾಗಿ ಒಬ್ಬರು ಮತ್ತೊಬ್ಬರ ತಪ್ಪುಗಳನ್ನು ಅವರ ಮನಸು ಒಪ್ಪುವಂತಹ ವಿಧಾನದಲ್ಲಿ ತಿದ್ದಬೇಕು. ಅಂದಾಗ ಮಾತ್ರ ಪ್ರೇಮವೆಂಬುದು ಶಕ್ತಿಯಾಗಿ ನಿಲ್ಲುತ್ತದೆ.
ಪ್ರೇಮಕ್ಕೆಂದು ಸಾವಿಲ್ಲ, ಪ್ರೇಮಿಗಳಿಗೆ ಉಂಟು. ಕೇವಲ ಬಾಹ್ಯ ಸೌಂದರ್ಯವನ್ನು ಪ್ರೇಮಿಸದೆ, ಪ್ರೇಮಿಯ ಅಂತರಂಗವನ್ನೂ ಪ್ರೇಮಿಸಬೇಕು. ಒಬ್ಬರು ಮತ್ತೊಬ್ಬರ ಬಯಕೆಗಳನ್ನು, ಕಷ್ಟಗಳನ್ನೂ ಪ್ರೇಮಿಸಬೇಕು. ಆಗ ಪ್ರತಿ ವರುಷವೂ ಪ್ರೇಮುಗಳ ದಿನ ಹಬ್ಬವಾಗುತ್ತದೆ. ಬದುಕಿನುದ್ದಕ್ಕೂ ಈ ಆಚರಣೆ ಜೋಡಿಗಳ ಮಧ್ಯೆ ಇರಬೇಕು. ಆಗ ಮಾತ್ರ ಪ್ರೇಮಿಗಳ ದಿನಕ್ಕೆ ನ್ಯಾಯ ಸಿಕ್ಕಂತಾಗುತ್ತದೆ. ಇದಕ್ಕೆ ಎಲ್ಲರ ಸಮ್ಮತಿಯೂ ಇರುತ್ತದೆ. ಯಾವ ಪ್ರೇಮಿಗಳೂ ದುಡುಕಿ, ಆಕರ್ಷಣೆಗೆ ಸಿಲುಕಿ ಪ್ರೇಮಿಸಬಾರದು. ನೈಜವಾದ, ನಿಷ್ಕಲ್ಮಷವಾದ ಪ್ರೇಮವನ್ನು ಅರಸಿ ಹೋಗಬೇಕು, ಅಂತಹ ಪ್ರೇಮ ಅರಸಿ ಬಂದವರಿಗೆ ಜೊತೆಯಾಗಬೇಕು. ಜೋಡಿಗಳಾಗಿ ಆದರ್ಶ ಪ್ರೇಮಿಗಳಾಗಿ ಬಾಳಬೇಕು. ಆಗ ಪ್ರೇಮವು ಬಾಳಿಗೆ ಬೆಳಕಾಗುತ್ತದೆ. ನಮ್ಮ ಪ್ರೇಮಕ್ಕೆ ನೆರಳಾಗಿಯೂ ಇರುತ್ತದೆ.
ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಷಯಗಳು.
-ವರದೇಂದ್ರ ಕೆ