ಪಂಜು-ವಿಶೇಷ

ಪ್ರೇಮವೆಂಬ ಸರಿಗಮಪ…: ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ


‘ನಿನ್ನ ಕಣ್ಣ ಕಾಡಿಗೆಯಂತೆ ಕಾಪಿಟ್ಟುಕೊಂಡು ಬರುವೆ’ ಎಂದೆಯಲ್ಲ. ಆ  ನಿನ್ನ ಮಾತಿನಲ್ಲಿ ಎಷ್ಟು ಪ್ರೀತಿ ಇತ್ತು ಅನ್ನೋದು ಗೊತ್ತಾದಾಗ ಎಷ್ಟು ಖುಶಿ ಆಯ್ತು ಗೊತ್ತಾ? ಕ್ಷಮಿಸು.. ಒಂದು ಕ್ಷಣ ನಿನ್ನ ಮೇಲೆ ಸಂಶಯ ಪಟ್ಟಿದ್ದಂತೂ ನಿಜ. ಈಗ ನಾನು ಯಾರನ್ನೂ ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಕ್ರಮೇಣ ನಿನ್ನ ಪ್ರೀತಿಯ ಆಳವನ್ನು ಕಂಡು ಪುಳಕಿತಳಾದೆ.. ನಿನಗೊತ್ತಾ… ನಿನ್ನ ಪ್ರೀತಿಯನ್ನು ಸ್ವೀಕರಿಸುವ ಧೈರ್ಯವೂ ನನ್ನಲ್ಲಿರಲಿಲ್ಲ…ನಿನ್ನಿಂದ ದೂರವಾಗುವ ಕಲ್ಪನೆಯನ್ನೂ ಮಾಡುವ ಸ್ಥಿತಿಯಲ್ಲೂ ನಾನಿರಲಿಲ್ಲ.. ಅರ್ಥೈಸಿಕೊಳ್ಳಬಲ್ಲೆ ಅಲ್ವಾ ನನ್ನ ಪರಿಸ್ಥಿತಿಯನ್ನು…ಆ ಕಾರಣಕ್ಕಾಗಿ ನಾನು ನಿನಗೆ ತುಂಬಾ ನೋವು ಕೊಟ್ಟೆ. ಆದರೆ ನಿನಗಿಂತ ಹೆಚ್ಚು ನೋವು ನಾನು ಅನುಭವಿಸಿದ್ದೆ. 

ಒಂದು ಹೆಣ್ಣು ಎಷ್ಟೇ ಅಲಂಕಾರ ಮಾಡಿಕೊಂಡರೂ ಕಣ್ಣಿಗೆ ಕಾಡಿಗೆ ಹಚ್ಚಿಲ್ಲ ಅಂದ್ರೆ ಅದು ಅಪೂರ್ಣ. ಅವಳ ಪ್ರೀತಿಯ ಅಲಂಕಾರದ ವಸ್ತು ಅದು. ಅವಳ ಸುಂದರ ಕಣ್ಣಿಗೆ ಕಾಡಿಗೆ ಹಚ್ಚಿದಾಗಲೇ ಅವಳ ಸೌಂದರ್ಯ ಇಮ್ಮಡಿಯಾಗಿ ಹೊಸ ಕಳೆಯಿಂದ ಆಕೆ ಕಂಗೊಳಿಸುತ್ತಾಳೆ. ನಿನ್ನ ಕಲ್ಪನೆ ನೋಡಿದೆಯಾ? ಆ ಕಣ್ಣ ಕಾಡಿಗೆಯಂತೆ ಜೋಪಾನವಾಗಿ ನೋಡುವೆಯೆಂದೆಯಲ್ಲ.? ನೀನೆ ನನ್ನ ಕಣ್ಣಾಗಿ ಬಂದರೆ ಅದೆಷ್ಟು ಚಂದ ಅಲ್ವಾ? ಎಂಥಹ ಕಲ್ಪನೆ ಕಣೋ ನಿನ್ನದು…ಸೂಪರ್..ಅದಿರಲಿ ಬಿಡು. ಒಂದು ಮಾತು ಹೇಳು..ನೀನು ಮನಸು ಮಾಡಿದ್ದರೆ ಬಹುಶ: ಸುಂದರ ಹೆಣ್ಣುಗಳು ನಿನಗೆ ದೊರೆಯುವುದು ಕಷ್ಟವೆನಿಸುತ್ತಿರಲಿಲ್ಲ. ಅಲ್ವಾ.. ಮತ್ತೆ ನಾನೇಕೆ ಇಷ್ಟವಾದೆ.. ಓ.. ಸಾರಿ ಕಣೋ.. ನಿನಗೆ ಹಾಗೆ ಕೇಳಿದ್ರೆ ಕೋಪ ಬರತ್ತೆ ಅಲ್ವಾ.. ನಿನಗೆ ಕೋಪ ಬರಿಸೋದು ನನಗೆ ಇಷ್ಟವಿಲ್ಲ. ಆದರೆ ನಿನ್ನ ಹತ್ತಿರ ಸತ್ಯ ಹೇಳ್ಲಾ..ಎಷ್ಟೋ ವರ್ಷಗಳ ನಮ್ಮ ಸ್ನೇಹ ಹೊಸ ತಿರುವು ಪಡೆದುಕೊಳ್ಳತ್ತೆ ಅಂತ ನಾನಂತೂ ಕನಸಲ್ಲೂ ಎಣಿಸಿರಲಿಲ್ಲ. ಅದ್ಯಾವ ಗಳಿಗೆಯಲ್ಲಿ ನಿನ್ನಂತರಂಗ ಪ್ರವೇಶಿಸಿ ನಿನ್ನ ಹೃದಯ ಸಿಂಹಾಸನದ ರಾಣಿಯಾದೆನೋ ನಾನರಿಯೆ.. ನನ್ನದೇ ಲೋಕದಲ್ಲಿ ಮೌನವಾಗಿ ವಿಹರಿಸುತ್ತಿದ್ದ ನನ್ನ ಮನಸ್ಸಿನಲ್ಲಿ ಭಾವನೆಗಳ ಅಲೆಯನ್ನು ಎಬ್ಬಿಸಿ ಜೀವನದ ಹೊಸ ಭಾಷ್ಯವನ್ನು ಬರೆದ ನೀನು ನನ್ನ ಮನಸ್ಸನ್ನು ಆವರಿಸಿದ್ದಂತೂ ನಿಜ. ಅಯಸ್ಕಾಂತದಂತಹ ಸೆಳೆತ..ನನ್ನ ಅಕ್ಷಿಗಳು ಸದಾ ನಿನ್ನನ್ನು ನೋಡುವ ಕಾತರದಲ್ಲಿರುತ್ತವೆ. ಮೊದಲ ದಿನ ನಿನ್ನ ಸ್ಪರ್ಶವಾದಾಗ ನನಗಾದ ರೋಮಾಂಚನವನ್ನು ಹೇಗೆ ವರ್ಣಿಸಲಿ ಹೇಳು?  ಸದಾ ನಿನ್ನ ಕೈಯಲ್ಲಿ ನನ್ನ ಕೈಯನ್ನು ಹೆಣೆದು ನಿನ್ನೊಂದಿಗೆ ಜೀವನ ಪೂರ್ತಿ ಹೆಜ್ಜೆ ಹಾಕಬೇಕು ಅನ್ನೋ ಆಸೆ. ನಿನ್ನ ಕಣ್ಣ ತುಂಬಾ ತುಂಬಿಕೊಂಡು ರೆಪ್ಪೆ ಬಡಿಯದಂತೆ ಜೋಪಾನವಾಗಿ ನೋಡಿಕೊಳ್ಳಬೇಕು ಅನ್ನೋ ಆಸೆ.. ನಿನ್ನ ತೋಳ್ತೆಕ್ಕೆಯಲ್ಲಿ ಬಂಧಿಯಾಗಿ ಜಗತ್ತನ್ನೇ ಮರೆಯುವಾಸೆ.. ಏನೇನೋ ಆಸೆಗಳು… ಅವೆಲ್ಲ ಪರಿಪೂರ್ಣವಾಗೋದಿಲ್ಲ ಅಂತಾನೂ ಗೊತ್ತು.. ಆದರೆ ಕನಸು ಕಾಣೋದರಲ್ಲಿ ಏನು ತಪ್ಪು ಅಲ್ವ..

ಮತ್ತೆ ಹಾಡಿದ ಹೃದಯ..ನಿನ್ನ ನೆನೆನೆನೆದು ..ಮತ್ತೆ ಮುಳುಗಿದೆ ಮನ..ನೆನಪ ಹನಿಗಳಲಿ ನೆನೆದು.. ಮನಸ್ಸು ಹಾಡುತ್ತಿತ್ತು ನಿನ್ನನ್ನು ನೆನೆದು.. ಈ ನೆನಪೇ ಹೀಗೆ ಅಲ್ವಾ.. ಸುಳಿಸುಳಿಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಿನ್ನ ಜೊತೆ ನಾನೆಷ್ಟು ಬಾರಿ ಎಷ್ಟು ಕಡೆ ತಿರುಗಾಡುತ್ತಿರಲಿಲ್ಲ.. ನಿಧಾನಕ್ಕೆ ನಿನ್ನ ಜೊತೆ ಸಲುಗೆ ಬೆಳೆದಂತೆ ಧ್ವನಿಯಲ್ಲೂ ಅಧಿಕಾರವಾಣಿಯಾಗಿ ಬದಲಾದದ್ದು ಗಮನಿಸಿದ್ದೆಯಾ? ಆದರೆ ನಮ್ಮ ಸಂಬಂಧ ಎಷ್ಟು ಸುಂದರವಾಗಿತ್ತು ಅಲ್ವ.. ಅಲ್ಲಿ ಯಾವ ಸ್ವಾರ್ಥವೂ ಇರಲಿಲ್ಲ. ಇದ್ದದ್ದು ಕೇವಲ ಪ್ರೀತಿ ಮಾತ್ರ.. ನಿಷ್ಕಲ್ಮಶ ಪ್ರೀತಿ..ನಿನ್ನ ಪ್ರೇಮರೂಪ ನನ್ನ ಮನಸ್ಸಿನಲ್ಲಿ ಯಾವಾಗ ಅಚ್ಚೊತ್ತಿತ್ತೋ ನನಗೇ ಗೊತ್ತಿರಲಿಲ್ಲ. ನಿನ್ನನ್ನು ಸರಿಯಾಗಿ ದೃಷ್ಟಿ ನೆಟ್ಟು ಎಂದೂ ನೋಡದ ನಾನು ಸ್ನೇಹದ ಪರಿಧಿಯಿಂದ ಹೊರಬಂದು ನೋಡುವ ಧೈರ್ಯ ಮಾಡಿರಲೇ ಇಲ್ಲ. ಆದರೆ ನನ್ನ ಬಾನಂಗಳದಲ್ಲಿ ನೀ ಬಿತ್ತಿದ ಪ್ರೀತಿಯ ಬೀಜವಿಂದು ಮೊಳಕೆಯೊಡೆದಿರುವುದಂತೂ ಸತ್ಯ. ಹೊಸ ಜಗತ್ತನ್ನು ನನಗಾಗಿ ತೆರೆದು ವಿಸ್ಮಯಲೋಕದಲ್ಲಿ ವಿಹರಿಸುವಂತೆ ಮಾಡಿದೆಯಲ್ಲ.. ಇದೀಗ ನಮ್ಮದೇ ಆದ ಪ್ರೇಮಲೋಕದಲ್ಲಿ ನಿನ್ನ ಪ್ರೀತಿಗೆ ಶರಣಾಗಿದ್ದೇನೆ. ನಿನ್ನನ್ನು ಕಂಡೊಡನೆ ನನ್ನ ಕಣ್ಣುಗಳು ಹೊಳೆಯುತ್ತವೆಯಲ್ಲ ಆಗ ನನಗೇ ಏನೋ ಭಯ ಕಣೋ.. ಯಾರಾದರೂ ನನ್ನಲ್ಲಿನ ಬದಲಾವಣೆಯನ್ನು ಗುರುತಿಸಿದರೇ..? ಅದಕ್ಕೆ ಏಕಾಂತದಲ್ಲಿ ಮಾತ್ರ ನಿನ್ನ ಜೊತೆ ಮಾತನಾಡುವ ಆಸೆ, ನಿನ್ನನ್ನು ನೋಡ ಬಯಸುತ್ತೇನೆ. ನನಗೊತ್ತು ಇದರಿಂದ ನಿನಗೂ ನೋವಾಗತ್ತೆ.. ನಿನ್ನನ್ನು ದೂರ ಮಾಡುವ ಯಾವ ಉದ್ದೇಶವೂ ಇಲ್ಲ.. ಭಯ ಅಷ್ಟೇ.. 
 
ನೀನು ಹತ್ತಿರ ಬಂದಾಗ ನನ್ನ ಹೃದಯ ಬಡಿತ ಹೆಚ್ಚತ್ತೆ.. ನೀನು ಬಳಿ ಬಂದು ಮಾತನಾಡಿದಾಗ ನನ್ನ ಮನ ಮಲ್ಲಿಗೆಯಾಗುತ್ತೆ. ನಿನ್ನ ಅಚಲವಾದ, ಆಳವಾದ ಪ್ರೀತಿಗೆ ‘ನೀನು ನನಗೆ ಬೇಕು’ ಎಂದ ಆ ನಿನ್ನ ಮುಗ್ದ ಮಾತು ಬಾಳ ಪಥವನ್ನೇ ಬದಲಾಯಿಸಿತು. ಕಲ್ಲಿನಂತ ನನ್ನ ಮನಸ್ಸನ್ನೇ ಕರಗಿಸಿದ ಪ್ರೇಮ ನಿನ್ನದು. ನಾನು ಭಾವಜೀವಿ.. ನೀನು ಪ್ರೇಮಜೀವಿ..ಸಾಸುವೆ ಕಾಳಷ್ಟು ವಂಚನೆಯಿಲ್ಲದೆ ಪ್ರೀತಿಸುತ್ತೇನೆ ಎಂದ ನಿನ್ನ ಮಾತಿನಲ್ಲಿ ನಾನು ನಿರ್ಮಲ ಪ್ರೀತಿಯನ್ನು ಕಂಡೆನೇ ಹೊರತು ಎಳ್ಳಷ್ಟು ಸಂಶಯ ಪಡಲಿಲ್ಲ. ನಿನ್ನ ಬದುಕಿನ ಪ್ರತಿಯೊಂದು ಕ್ಷಣ ಹಸಿರಾಗಿರಬೇಕು ಎಂಬುದು ನನ್ನಾಸೆ. ನಿನ್ನ ನೋವುಗಳೆಲ್ಲ ನನ್ನದಾಗಿ ನನ್ನ ಪಾಲಿನ ಸುಖವೆಲ್ಲ ನಿನಗಿರಲಿ ಎಂಬುದು ನನ್ನಾಸೆ. ನನ್ನ ಬದುಕನ್ನೇ ನಿನಗರ್ಪಿಸಿ ನಿನ್ನ ಉಸಿರಾಗಿರುವೆ. ನಿನ್ನ ಎದೆಗೊರಗಿ ಈ ಪ್ರಪಂಚವನ್ನೇ ಮರೆಯುವೆ.. ಸುಂದರ ಜಗತ್ತಿನಲ್ಲಿ ನಿನ್ನಲ್ಲಿ ನಾನು, ನನ್ನಲ್ಲಿ ನೀನು ಬೆರೆತು ಒಂದಾಗಿ ಸುಖ ದು:ಖಗಳನ್ನು ಹಂಚಿಕೊಳ್ಳೋಣ..ಎಂದಾಗ ನಸುನಕ್ಕ ನೀನು ನನ್ನ ಕಣ್ಣಲ್ಲಿ ಕಣ್ಣ ನೆಟ್ಟು ಭರವಸೆಯ ನೋಟದಿ ನೋಡಿದೆಯಲ್ಲ. ಆ ನಿನ್ನ ತುಂಟ ಕಣ್ಣುಗಳಲ್ಲಿ ಮತ್ತೆ ಮುಳುಗುವಾಸೆ ಕಣೋ..ಮತ್ತೆ ನೀ ನನ್ನ ಕರ್ಣಗಳಲ್ಲಿ ‘ಕಣ್ಣ ಕಾಡಿಗೆಯಂತೆ ಕಾಪಿಟ್ಟುಕೊಳ್ಳುವೆ’ ಎಂದಾಗ ನಸುನಾಚಿ ರೋಮಾಂಚಿತಳಾದೆ..ನಿನ್ನ ದೃಷ್ಟಿಸಲಾಗದೆ ನನ್ನ ಕಣ್ಣ ರೆಪ್ಪೆ ಬಾಗಿದಾಗ ಅದರೊಳಗೆ ನೀ ಭದ್ರವಾಗಿದ್ದೆ… ಪ್ರೀತಿ ಅಂದರೇನೇ ಸಂಗೀತವಂತೆ. ಹೃದಯದ ತುಂಬ ಮಧುರ ಆಲಾಪನೆ. ಆ ಪ್ರೇಮವೆಂಬ ಸರಿಗಮಪದಲ್ಲಿ ತೇಲಿ ಹೋದ ನಿನ್ನ ನನ್ನ ಜೋಡಿ ಸುಂದರ ಜಗತ್ತನ್ನು ಸೃಷ್ಟಿಸಿದ್ದಂತೂ ನಿಜ.. ಅಲ್ವಾ.

-ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ, ಮುಂಬಯಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಪ್ರೇಮವೆಂಬ ಸರಿಗಮಪ…: ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ

  1. 'Break-up' ಆಗುವ ಲವ್ ಸ್ಟೋರಿಗೆ ಹುಡುಗಿ ಕೊಡಬಹುದಾದಂತ ಪರ್ಫೆಕ್ಟ್ ಉತ್ತರ ಇದು. ಅಥವಾ ನಿವೆದಿಸದೆ ಹೋದ ಪ್ರೇಮದ ಸುಂದರ ನೆನಪು 🙂  ಚೆನ್ನಾಗಿದೆ ಲೇಖನ. 

Leave a Reply

Your email address will not be published. Required fields are marked *