ರಾಧಮ್ಮನವರ ನಂತರ ಬಹಳ ವರ್ಷಗಳ ಮೇಲೆ ಹುಟ್ಟಿದವನೇ ಅವರ ತಮ್ಮ ಸುಧಾಕರ್. ರಾಧಮ್ಮನಿಗೂ ಸುಧಾಕರ್ ಗೂ ಅಂತರ ಹೆಚ್ಚಾಗಿದ್ದರಿಂದ ಅವನನ್ನು ಕಂಡರೆ ಎಲ್ಲರಿಗೂ ಅತೀವ ಪ್ರೀತಿ. ಅಕ್ಕನ ಮುದ್ದಿನ ತಮ್ಮ ಅವನು. ರಾಧಮ್ಮನವರ ಮದುವೆ ಆದಾಗ ಸುಧಾಕರ್ಗೆ ಕೇವಲ ಎಂಟು ವರ್ಷ. ಮದುವೆ ಆದ ವರ್ಷದೊಳಗೆ ರಾಧಮ್ಮ ಹೆಣ್ಣು ಮಗುವಿನ ತಾಯಿ ಆದಾಗ ಎಲ್ಲರಿಗೂ ಸಂತಸ. ರಾಧಳ ತಂದೆ ತಾಯಿಗೆ ದೂರದ ಒಂದು ಆಸೆ ಮೊಳೆಯಲಾರಂಭಿಸುತ್ತದೆ. ಪುಟ್ಟ ಸುರಭಿಯೇ ಮುಂದೆ ಸುಧಾಕರ್ನ ಕೈ ಹಿಡಿದು ಮೊಮ್ಮಗಳು ಮನೆ ಬೆಳಗಲಿ ಎಂದು. ಇದನ್ನು ಮಗಳು ಅಳಿಯನ ಮುಂದೆ ಎಷ್ಟೋ ಬಾರಿ ಆಡಿದರು ಕೂಡ. ಎಂಟು ವರ್ಷದ ಸುಧಾಕರ್ ಗೆ ತೊಟ್ಟಿಲ ಮಗು ಸುರಭಿ ಒಂದು ಪುಟ್ಟ ಬೊಂಬೆಯಂತೆ. ಶಾಲೆಯಿಂದ ಬಂದೊಡನೆ ಮಗುವಿನ ಜೊತೆ ಇವನ ಆಟ ಪಾಠ ಎಲ್ಲ. ಎಲ್ಲರೂ “ಏನೋ.. ಹೆಂಡತಿ ಮೇಲೆ ಈಗಲೇ ಅಷ್ಟು ಪ್ರೀತಿ” ಅಂತ ಛೇಡಿಸುವವರೇ. ಆದರೆ ಪುಟ್ಟ ಬಾಲಕನ ತಲೆಗೆ ಇವೆಲ್ಲ ಅರ್ಥವಾಗದ ವಿಷಯ. ರಾಧಾ ಕೂಡ ಉದ್ಯೋಗಸ್ಥ ಮಹಿಳೆ ಆದ್ದರಿಂದ ಮಗುವನ್ನು ಬೇರೆ ಊರಿನಲ್ಲಿ ಇರುವ ತಾಯಿ ಮನೆಯಲ್ಲಿ ಬಿಟ್ಟು ಗಂಡ ಹೆಂಡತಿ ಪಟ್ಟಣ ಸೇರುತ್ತಾರೆ.
ಸುರಭಿಗೆ ಹತ್ತು ವರ್ಷ ಆದಾಗ ಪಟ್ಟಣದಲ್ಲಿ ಒಳ್ಳೆ ಶಾಲೆಗೆ ಸೇರಿಸಲು ಕರೆದೊಯ್ಯುತ್ತಾರೆ. ಅಜ್ಜಿ ತಾತ ವಿಧಿ ಇಲ್ಲದೆ ಮೊಮ್ಮಗಳನ್ನು ಕಳಿಸಿ ಕೊಡುತ್ತಾರೆ. ಸುಧಾಕರ್ ಗೆ ಹೊಸತರಲ್ಲಿ ಸುರಭಿಯನ್ನು ಬಿಟ್ಟಿರಲು ಬೇಜಾರಾದರೂ ಒಂದಷ್ಟು ದಿನ ಕಳೆದ ಮೇಲೆ ಸುರಭಿಯನ್ನು ಮರೆತು ತನ್ನ ಓದಿನಲ್ಲಿ ತೊಡಗಿ ಕೊಳ್ಳುತ್ತಾನೆ.
ಪಟ್ಟಣದಲ್ಲಿ ಆಂಗ್ಲ ಮಾಧ್ಯಮಕ್ಕೆ ಸೇರಿದ ಸುರಭಿ ಓದಿನಲ್ಲಿ ಯಾವಾಗಲೂ ಮುಂದೆ. ಟೆಸ್ಟ್ ಎಕ್ಸಾಮ್ ಎನ್ನುತ್ತ ಹಳ್ಳಿ ಕಡೆ ಹೋಗಲು ಆಗುವುದೇ ಇಲ್ಲ.
ಇತ್ತ ಸುಧಾಕರ್ ಪದವಿ ಓದುವಾಗ ಒಮ್ಮೆ ರಜೆ ಸಿಕ್ಕಿದಾಗ ಅಕ್ಕನ ಮನೆಗೆ ಬರುತ್ತಾನೆ. ಆಗಿನ್ನೂ ಪ್ರೌಢ ತರಗತಿಗೆ ಕಾಲಿಟ್ಟ ಸುರಭಿಯನ್ನು ನೋಡಿ ಅವನಿಗೆ ಆಶ್ಚರ್ಯವಾಗುತ್ತದೆ. ತಾನು ಈ ಹಿಂದೆ ಎತ್ತಿ ಆಡಿಸಿದ ಪುಟ್ಟ ಮಗುವಿಗೂ ಹರೆಯಕ್ಕೆ ಕಾಲಿಟ್ಟ ಸುರಭಿಗೂ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತದೆ. ಸುರಭಿಯ ಹೊಳೆಯುವ ಕಣ್ಣುಗಳು, ಆಕರ್ಷಕ ಮೈಮಾಟ, ಅವನನ್ನು ಬಹುವಾಗಿ ಆಕರ್ಷಿಸುತ್ತದೆ. ತನಗೇ ಗೊತ್ತಿಲ್ಲದ ಹಾಗೆ ಸುರಭಿಯನ್ನು ಮನಸಾರೆ ಪ್ರೀತಿಸುತ್ತಾನೆ. ಹೇಗೂ ಚಿಕ್ಕ ವಯಸ್ಸಿನಿಂದಲೇ ತಾವಿಬ್ಬರು ಮುಂದೆ ಗಂಡ ಹೆಂಡತಿ ಆಗುವವರು ಎಂದು ಎಲ್ಲರೂ ಹೇಳುತ್ತಿದ್ದದು ನೆನಪಾಗಿ ರೋಮಾಂಚನ ಆಗುತ್ತದೆ. ಅದೇ ಕನಸು ಹೊತ್ತು ಊರಿಗೆ ಹಿಂತಿರುಗುತ್ತಾನೆ.
ರಾಧಮ್ಮ ಗೋಪಾಲರಾವ್ ದಂಪತಿಗಳಿಗೆ ಸುರಭಿ ಒಬ್ಬಳೇ ಮಗಳು. ಸುಖವಾಗಿ ಬೆಳೆದ ಹುಡುಗಿ. ಬೇಕು ಬೇಕಾದ್ದೆಲ್ಲ ಕೇಳಿದೊಡನೇ ಪೂರೈಸುವ ತಂದೆ ತಾಯಿ. ಅವಳು ತಂದೆ ತಾಯಿಯ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳದೇ ಎಲ್ಲ ತರಗತಿಯಗಳಲ್ಲೂ ಉತ್ತಮ ಅಂಕ ಗಳಿಸುತ್ತಾ ಒಳ್ಳೆ ವಿದ್ಯಾರ್ಥಿನಿ ಎಂದು ಶಾಲೆಯಲ್ಲಿ ಮತ್ತು ಪಿಯುಸಿಯಲ್ಲಿ ಒಳ್ಳೆ ಹೆಸರು ಪಡೆಯುತ್ತಾಳೆ. ಪದವಿಗೆ ಬಂದಾಗ ತನ್ನ ತರಗತಿಯಲ್ಲಿ ಓದುತ್ತಿರುವ ಶ್ರೇಯಸ್ ನ ಆಕರ್ಷಣೆಗೆ ಒಳಗಾಗಿ, ಸ್ನೇಹ ಸಲುಗೆ ಬೆಳೆದು ಇಬ್ಬರು ಪರಸ್ಪರ ಪ್ರೀತಿಸಿಲಾರಂಭಿಸುತ್ತಾರೆ.
ಪದವಿಯ ಕೊನೆಯ ಹಂತಕ್ಕೆ ಬಂದಾಗ ಸುರಭಿ ಮನೆಯಲ್ಲಿ ಮದುವೆಯ ಮಾತುಕತೆ ಶುರುವಾಗುತ್ತದೆ.
ತಮ್ಮನಿಗೆ ನಿನ್ನನ್ನು ಮದುವೆ ಮಾಡಿ ಕೊಡುವುದಾಗಿ ರಾಧಮ್ಮ ಮಗಳಿಗೆ ತಿಳಿಸಿದಾಗ ಸುರಭಿ ಹೌಹಾರುತ್ತಾಳೆ. ತಕ್ಷಣ ಈ ವಿಷಯವನ್ನು ಶ್ರೇಯಸ್ ಗೆ ತಿಳಿಸಿ “ನಾವು ಈಗ ಮನೆಯಲ್ಲಿ ಹೇಳದೆ ಇದ್ದರೆ ತಾನು ಬೇರೆ ಯಾರನ್ನೋ ಮದುವೆ ಆಗಬೇಕಾಗುತ್ತದೆ” ಎಂದಾಗ ಶ್ರೇಯಸ್ ನಿಮ್ಮ ಮನೆಯಲ್ಲಿ ನಮ್ಮ ವಿಷಯ ನೀನೇ ಹೇಳು ಸುರಭಿ. ನಾನು ನನ್ನ ತಂದೆ ತಾಯಿಗೆ ನಮ್ಮಿಬ್ಬರ ವಿಷಯ ತಿಳಿಸುತ್ತೇನೆ. ಆದರೆ ನಾನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಬೇಕು. ಹಾಗಾಗಿ ನಮ್ಮ ಮದುವೆ ಈಗಲೇ ಸಾಧ್ಯ ಇಲ್ಲ” ಅನ್ನುತ್ತಾನೆ . ಇದಕ್ಕೆ ಒಪ್ಪಿದ ಸುರಭಿ ನಿನ್ನ ವಿದ್ಯಾಭ್ಯಾಸ ಮುಗಿಯುವರೆಗೆ ತಾನು ಕಾಯುವುದಾಗಿ ತಿಳಿಸುತ್ತಾಳೆ.
ಮನೆಯಲ್ಲಿ ವಿಷಯ ತಿಳಿಸಿದಾಗ ದಿಗ್ಭ್ರಾಂತರಾದ ತಂದೆ ತಾಯಿ ಎಷ್ಟೋ ರೀತಿ ಮಗಳಿಗೆ ತಿಳಿ ಹೇಳಲು ಪ್ರಯತ್ನ ಪಡುತ್ತಾರೆ. ಆದರೆ ಗಟ್ಟಿ ನಿರ್ಧಾರ ಮಾಡಿದ ಸುರಭಿ ಯಾವುದಕ್ಕೂ ಬಗ್ಗುವುದಿಲ್ಲ. ಬೇರೆ ವಿಧಿ ಇಲ್ಲದೆ ರಾಧಮ್ಮ ತನ್ನ ತವರಿಗೆ ವಿಷಯ ಮುಟ್ಟಿಸುತ್ತಾರೆ. ನಮ್ಮ ಕಣ್ಣ ಮುಂದೆ ಬೆಳೆದ ಹುಡುಗಿ ಇಷ್ಟು
ಮುಂದುವರಿದಿದ್ದಾಳಲ್ಲ ಅಂತ ಆಶ್ಚರ್ಯಚಕಿತರಾದ ಅಜ್ಜ ಅಜ್ಜಿ ಒಳಗೊಳಗೆ ನೋವು ನುಂಗಿಕೊಂಡು
ಸುಮ್ಮನಾಗುತ್ತಾರೆ. ಆದರೆ ವಿಷಯ ತಿಳಿದ ಸುಧಾಕರ್ ಹೃದಯ ಒಡೆದು ಚೂರಾಗುತ್ತದೆ . ಅದಾಗಲೇ ಕೆಲಸಕ್ಕೆ ಸೇರಿದ ಸುಧಾಕರ್ ಎಲ್ಲದರಲ್ಲೂ ಆಸಕ್ತಿ ಕಳೆದು ಕೊಳ್ಳುತ್ತಾನೆ. ತನ್ನನ್ನು ನಿರಾಕರಿಸಿ ಬೇರೆಯವರನ್ನು ಮೆಚ್ಚಿದ್ದಾಳೆ ಅಂದ್ರೆ ಅವನು ಎಷ್ಟು ಅದೃಷ್ಟಶಾಲಿ. ತನಗೆ ಆ ಅದೃಷ್ಟ ಇಲ್ಲ ಎಂದುಕೊಂಡು ದುಃಖ ಅದುಮಿಟ್ಟು ಹೊರಗೆ ಮಾಮೂಲಿಯಂತೆ ನಗುತ್ತಿರುತ್ತಾನೆ.
ತಾವು ಹೇಳಿದ ತಿಳುವಳಿಕೆ ಪ್ರಯೋಜನ ಇಲ್ಲ ಎಂದು ತಿಳಿದ ರಾಧಮ್ಮ ದಂಪತಿಗಳು ಮಗಳ ಇಚ್ಛೆಯಂತೆ ನಡೆಯಲು ನಿರ್ಧರಿಸಿ ಒಂದು ಶುಭಾ ಮುಹೂರ್ತದಲ್ಲಿ ಶ್ರೇಯಸ್ ಮನೆಗೆ ಬರುತ್ತಾರೆ. ಶ್ರೇಯಸ್ ತಂದೆ ತಾಯಿಗೂ ಸುರಭಿ ಒಪ್ಪಿಗೆ ಆಗಿ ಎರಡು ವರ್ಷದ ನಂತರ ಮದುವೆ ಎಂದು ಎರಡೂ ಕುಟುಂಬ ಸೇರಿ ನಿರ್ಧರಿಸುತ್ತಾರೆ. ಆಣೆ ಪ್ರಮಾಣಗಳೊಂದಿಗೆ ಸುರಭಿ ಇಂದ ಬೀಳ್ಕೊಂಡ ಶ್ರೇಯಸ್ ವಿಮಾನ ಏರುತ್ತಾನೆ .
ಮೂರ್ನಾಲ್ಕು ತಿಂಗಳು ಇಬ್ಬರ ನಡುವೆ ಕರೆಗಳು ವಿಡಿಯೋ ಕಾಲ್ ಗಳು ನಿರಂತರವಾಗಿ ಓಡಾಡುತ್ತವೆ. ನಂತರ ಕ್ರಮೇಣ ಶ್ರೇಯಸ್ ನಿಂದ ಕರೆ ಬರುವುದು ಸ್ವಲ್ಪ ಕಡಿಮೆ ಆಗುತ್ತದೆ. ಕಾರಣ ಕೇಳಿದರೆ “ತನಗೆ ಓದಲು ಪ್ರಾಜೆಕ್ಟ್ ಅಸೈನ್ ಮೆಂಟ್ಸ್ ತುಂಬಾ ಇರುವುದಾಗಿ ಯಾವುದಕ್ಕೂ ಬಿಡುವೇ ಇಲ್ಲದ ಹಾಗಾಗಿದೆ. ಅದು ಅಲ್ಲದೇ ತಾನೇ ಅಡುಗೆ ಮಾಡಿಕೊಂಡು ತಿನ್ನಬೇಕು. ಅರ್ಥ ಮಾಡಿಕೋ ಸುರಭಿ” ಎನ್ನುವ ಮಾತು ಕೇಳಿ ಸುರಭಿ. ಪಾಪ ಎಷ್ಟು ಕಷ್ಟ ಪಡುತ್ತಾನೆ ಎಂದು ಕೊಳ್ಳುತ್ತಾ ನಿನಗೆ ಬಿಡುವು ದೊರೆತಾಗ ಕಾಲ್ ಮಾಡು ಶ್ರೇಯಸ್. ಪರವಾಗಿಲ್ಲ. ನಾನು ಕಾಯುತ್ತೇನೆ ಎಂದು ಕಾಲ್ ಕಟ್ ಮಾಡುತ್ತಾಳೆ. ಕ್ರಮೇಣ ಶ್ರೇಯಸ್ನಿಂದ ಬರುವ ಕರೆಗಳು ಸಂಪೂರ್ಣ ನಿಂತು ಹೋಗಿ ಸುರಭಿ ಕಂಗಾಲಾಗುತ್ತಾಳೆ. ಅವರ ತಂದೆ ತಾಯಿಯನ್ನು ಕೇಳಿದರೆ ಇದಕ್ಕೆ ಉತ್ತರವಿಲ್ಲ. ಇದೇ ವಿಷಯವಾಗಿ ಕೊರಗಿ ಕೊರಗಿ ಕ್ಷೀಣವಾಗುತ್ತಾಳೆ .
ಮಗಳ ಪರಿಸ್ಥಿತಿ ಕಂಡು ತಂದೆ ತಾಯಿಯ ಹೃದಯ ಹಿಂಡುತ್ತದೆ . ಇವತ್ತು ಏನಾದರು ಸರಿ. ಅವರ ಮನೆಗೆ ನಾವೇ ಹೋಗಿ ಮಾತನಾಡಿ ಬರೋಣ ಅಂತ ಮೂವರು ಅವರ ಮನೆಗೆ ಬರುತ್ತಾರೆ. ಇವರನ್ನು ಕಂಡೊಡನೇ ಎಂದಿನ ಆದರ ಆತ್ಮೀಯತೆ ತೋರದೇ ಅವರ ತಂದೆ ತಾಯಿ ನೀರಸವಾಗಿ ಒಳಗೆ ಬರ ಮಾಡಿ ಕೊಳ್ಳುತ್ತಾರೆ. ಹೀಗೀಗೆ ಎಂದು ವಿಷಯ ಹೇಳಿದಾಗ ಅವರ ತಂದೆ ತಾಯಿ ನಾವೇ ನಿಮಗೆ ಹೇಳಿ ಕಳಿಸೋಣ ಅಂತ ಇದ್ವಿ ನೀವೇ ಬಂದಿದ್ದು ಒಳ್ಳೆದಾಯಿತು . ಈಗ ಶ್ರೇಯಸ್ ಕಾಲ್ ಮಾಡುತ್ತಾನೆ. ಅವನ ಹತ್ರನೇ ಮತಾಡಿ ಎಂದಾಗ ಎಲ್ಲರೂ ಅವನ ಕರೆಯ ನಿರೀಕ್ಷೆಯಲ್ಲಿ ಮುಳ್ಳಿನ ಮೇಲೆ ಕೂತ ಹಾಗೆ ಚಡಪಡಿಸುತ್ತಾರೆ. ಶ್ರೇಯಸ್ ಕಾಲ್ ಮಾಡಿ ಮೊದಲು ತಂದೆ ತಾಯಿ ಬಳಿ ಮಾತನಾಡಿ ಸುರಭಿಯ ಬಳಿ ಮಾತಾಡುತ್ತಾನೆ. ಸ್ಪೀಕರ್ ಆನ್ ಇದ್ದುದರಿಂದ ಅವನ ಮಾತುಗಳು ಎಲ್ಲರಿಗೂ ಕೇಳುತ್ತದೆ.
“Listen carefully ಸುರಭಿ. ಏನೋ ಆಗಿದ್ದು ಆಯಿತು. ಇಲ್ಲಿ ಬಂದ ಒಂದೆರಡು ತಿಂಗಳಿಗೆ ನಂಗೆ ಪೂಜಾಳ ಪರಿಚಯ ಆಯಿತು. ಅವಳು ನನ್ನ ಹಾಗೆ ಎಂ ಎಸ್ ಮಾಡಲು ಇಂಡಿಯಾ ದಿಂದ ಬಂದಿದ್ದಾಳೆ. ಒಂದೆರಡು ತಿಂಗಳ ಪರಿಚಯದಿಂದ ಅವಳೇ ನನಗೆ ಸರಿಯಾದ ಜೋಡಿ ಅಂತ ಅನ್ನಿಸಲು ಶುರು ಆಯಿತು. ನನ್ನ ಮತ್ತು ಪೂಜಾಳ ಆಲೋಚನೆ ಮುಂದಿನ ಗುರಿಗಳು ಒಂದೇ ರೀತಿ ಇದೆ. ನಾನು ನೀನು ಪ್ರೀತಿಸಿದೆವು ಅಷ್ಟೇ.. ನಮ್ಮಿಬ್ಬರ ಆಲೋಚನೆಯಗಳು ಯಾವತ್ತೂ ಒಂದೇ ಆಗಲೇ ಇಲ್ಲ ಅಂತ ಪೂಜಾಳನ್ನು ಭೇಟಿ ಆದ ಮೇಲೆ ನನ್ನ ಅರಿವಿಗೆ ಬಂತು. ಯಾವುದಾದರು ಒಳ್ಳೆ ಹುಡುಗನ ಒಪ್ಪಿ ಮದುವೆಯಾಗಿ ಸುಖವಾಗಿರು. ನಾನು ಮತ್ತು ಪೂಜಾ ಎಂ ಎಸ್ ಮುಗಿದೊಡನೆ ಮದುವೆ ಆಗಲು ನಿರ್ಧರಿಸಿದ್ದೇವೆ. ಇದಕ್ಕೆ ನಮ್ಮ ತಂದೆ ತಾಯಿ ಕೂಡ ಒಪ್ಪಿಗೆ ಕೊಟ್ಟಿದ್ದಾರೆ. ಟೇಕ್ ಕೇರ್ ಬೈ”. ಎಂದು ಎಲ್ಲ ವಿಷಯ ಒಂದೇ ಸಮನೆ ಹೇಳಿ ಮುಗಿಸಿ ಕಾಲ್ ಕಟ್ ಮಾಡುತ್ತಾನೆ.
ಸುರಭಿ ತಾನೇನು ಕೇಳಿಸಿ ಕೊಂಡೆ ಎಂದು ಅರಿವಿಗೆ ಬರುವ ಹೊತ್ತಿಗೆ ಅವಮಾನದಿಂದ ಕಣ್ಣೀರು ಧಾರಾಕಾರವಾಗಿ ಹರಿಯಲಾರಂಭಿಸುತ್ತದೆ. ಎಲ್ಲ ಮಾತು ಕೇಳಿಸಿಕೊಂಡ ತಂದೆ ತಾಯಿ ಇನ್ನು ಇವರ ಬಳಿ ಮಾತನಾಡಿ ಪ್ರಯೋಜನ ಇಲ್ಲ ಎಂದು ತಿಳಿದು ಮಗಳನ್ನು ಕರೆದುಕೊಂಡು ಮನೆಗೆ ಬರುತ್ತಾರೆ.
ಸುರಭಿ ಊಟ ನಿದ್ದೆ ಬಿಟ್ಟು ಕೊರಗಿ ತಾನೆಲ್ಲಿ ಎಡವಿದೆ ಎಂದು ತಿಳಿಯದೆ ಯೋಚಿಸಿ ಯೋಚಿಸಿ ಹೈರಾಣಾಗುತ್ತಾಳೆ. ಛೇ.. ಇಂಥ ಮನುಷ್ಯನಿಗಾಗಿ ತಾನು ತನ್ನ ಪ್ರೀತಿಯನ್ನು ಮುಡಿಪಾಗಿಟ್ಟೆನಲ್ಲ ಎಂದು ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಾಳೆ. ಇಂಥವರ ಸ್ನೇಹ ಮಾಡಿ ಸುಧಾಕರ್ ಮಾವನ ನಾನು ನಿರಾಕರಿಸಿ ಎಲ್ಲರಿಗೂ ನೋವು ಕೊಟ್ಟೆ ಎಂದು ಒಳಗೊಳಗೆ ಕೊರಗುತ್ತಾಳೆ.
ಶ್ರೇಯಸ್ ಸುರಭಿಗೆ ಮಾಡಿದ ಮೋಸ ತಿಳಿದು ಅಕ್ಕನಿಗೆ ಫೋನ್ ಮಾಡುತ್ತಾನೆ. ರಾಧಮ್ಮ ” ಹೌದು ಸುಧಿ.. ಸುರಭಿ ಕೊರಗೋದು ನನ್ ಕೈಲಿ ನೋಡಲು ಆಗುತ್ತಿಲ್ಲ. ಎಲ್ಲದರಲ್ಲೂ ಆಸಕ್ತಿ ಕಳೆದು ಕೊಂಡಿದ್ದಾಳೆ. ನೀ ಒಂದು ಸಲ ಬಂದು ಹೋಗು” ಎನ್ನುತ್ತಾರೆ. ನಾನು ಹೋಗಿ ಸಮಾಧಾನ ಹೇಳಲು ಸಾಧ್ಯವೇ ಸುರಭಿಗೆ. ನನ್ನ ಮಾತು ಕೇಳುತ್ತಾಳೆಯೇ ಅನ್ನುವ ಅನುಮಾನ ಇದ್ದರೂ ಅಕ್ಕನಿಗಾಗಿ ಅವರ ಮನೆಗೆ ಬರುತ್ತಾನೆ.
ಸುರಭಿಯ ನಿರ್ಲಿಪ್ತ ಮನೋಭಾವ, ಬೇಸರದ ನಡೆ ನುಡಿ ನೋಡಿ ಅವನ ಕರುಳು ಕಿವುಚುತ್ತದೆ. ತನ್ನನ್ನು ಇವಳು ಒಪ್ಪುದೇ ಇದ್ದದ್ದು ಹಳೆ ವಿಷಯ. ಆದರೆ ಹೇಗಾದರೂ ಇವಳನ್ನು ಮೊದಲಿನ ಸ್ಥಿತಿಗೆ ತರಬೇಕು ಎಂದು ಯೋಚಿಸಿ ಕೆಲಸಕ್ಕೆ ದೀರ್ಘ ರಜೆ ತೆಗೆದು ಕೊಳ್ಳುವಂತೆ ಅಕ್ಕನಿಗೆ ತಿಳಿಸಿ ಇಬ್ಬರನ್ನು ಊರಿಗೆ ಕರೆದುಕೊಂಡು ಬರುತ್ತಾನೆ. ಎಷ್ಟೇ ಆಗಲಿ ಅಜ್ಜಿ ತಾತ ಅಲ್ಲವೇ.. ಮೊಮ್ಮಗಳು ಮಗಳನ್ನು ಆದರದಿಂದ
ಬರಮಾಡಿಕೊಳ್ಳುತ್ತಾರೆ. ಸುರಭಿ ಮಾಮೂಲಿಯಂತೆ ಆಗಲು ಎಲ್ಲರೂ ಶತಪ್ರಯತ್ನ ಪಡುತ್ತಾರೆ.
ಒಂದೆರಡು ವಾರ ಅಲ್ಲಿ ಕಳೆದ ಮೇಲೆ ಸುರಭಿಗೆ ಅಜ್ಜಿ ತಾತನ ಪ್ರೀತಿ, ಮಾವನ ಅಂತಃಕರಣ ಅರ್ಥವಾಗುತ್ತದೆ. ಸುಧಾಕರ್ ಲೈಬ್ರರಿಯಿಂದ ಒಳ್ಳೊಳ್ಳೆಯ ಬರಹಗಾರರ ಪುಸ್ತಕ ಓದಲು ಕೊಟ್ಟು ಅವಳ ಮನಸ್ಸು ಬೇರೆ ಕಡೆ ತಿರುಗುವಂತೆ ನೋಡಿ ಕೊಳ್ಳುತ್ತಾನೆ. ಅವಳ ಚಿಕ್ಕ ವಯಸ್ಸಿನ ಗೆಳತಿಯರನ್ನು ಭೇಟಿ ಮಾಡಿಸುತ್ತಾನೆ. ಒಂದು ತಿಂಗಳು ಕಳೆಯುವಷ್ಟರಲ್ಲಿ ಅವಳು ಸುಧಾಕರ್ನನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸುತ್ತಾಳೆ.
ಶ್ರೇಯಸ್ಗೂ ಸುಧಾಕರ್ಗೂ ಇರುವ ಅಜಗಜಾಂತರ ವ್ಯತ್ಯಾಸ ಗೋಚರವಾಗುತ್ತದೆ. ವೃದ್ಧಾಪ್ಯದಲ್ಲಿರುವ ತಂದೆ ತಾಯಿಯನ್ನು ಬಿಟ್ಟು ಅಲ್ಲಿ ತನ್ನ ಸುಖ ಕಂಡುಕೊಂಡಿರುವ ಶ್ರೇಯಸಗೂ, ತಂದೆ ತಾಯಿಯನ್ನು ಕಣ್ಣ ರೆಪ್ಪೆಯಂತೆ ನೋಡಿ ಕೊಳ್ಳುತ್ತಾರೆ, ತನ್ನ ಸಂತೋಷಕ್ಕೂ ಶ್ರಮಿಸುತ್ತಿರುವ ಸುಧಾಕರ್ ಎಲ್ಲ ವಿಷಯದಲ್ಲಿ ಶ್ರೇಯಸ್ಗಿಂತ ಶ್ರೇಷ್ಠ ಎನಿಸುತ್ತದೆ. ಒಂದು ದೃಢ ನಿರ್ಧಾರ ಮಾಡಿಕೊಂಡು ಆ ರಾತ್ರಿ ಮಲಗುತ್ತಾಳೆ.
ಮಾರನೇ ದಿನ ಸುಧಾಕರ್ ಅಕ್ಕನೊಡನೆ “ಅಕ್ಕ.. ನಮ್ಮೂರ ದೇವಸ್ಥಾನಕ್ಕೆ ನೀವು ಬಂದಾಗಿನಿಂದ ಹೋಗೇ ಇಲ್ಲ. ಇವತ್ತು ಸಂಜೆ ಎಲ್ಲರೂ ಹೋಗಿ ಬರೋಣ” ಎಂದಾಗ ರಾಧಮ್ಮನಿಗೆ ಮನಸ್ಸಿನಲ್ಲದಿದ್ದರೂ
ತಮ್ಮನಿಗಾಗಿ ಆಯ್ತಪ್ಪ ಹೋಗೋಣ ಎನ್ನುತ್ತಾರೆ.
ಸಂಜೆ ಆದಾಗ ರಾಧಮ್ಮಳ ತಾಯಿ ಯಾಕೋ ತುಂಬಾ ಸುಸ್ತು ಅಂತ ಮಲಗಿ ಬಿಡುತ್ತಾರೆ. ರಾಧಾ ತಮ್ಮನಿಗೆ ಅಮ್ಮನನ್ನು ಈ ಸ್ಥಿತಿಯಲ್ಲಿ ಒಬ್ಬಳನ್ನೇ ಬಿಟ್ಟು ನಾವು ದೇವಸ್ಥಾನಕ್ಕೆ ಇವತ್ತು ಹೋಗೋದು ಬೇಡ. ಮತ್ತೆ ಯಾವಾಗಲಾದರೂ ಹೋದರೆ ಆಯಿತು ಎಂದಾಗ ಸುಧಾಕರ್ ಸುಮ್ಮನೆ ಆಗುತ್ತಾನೆ. ಸುರಭಿ “ಅಮ್ಮ, ನನಗೆ ಮನೇಲಿ ಇದ್ದೂ ಇದ್ದೂ ತುಂಬಾ ಬೋರ್ ಆಗಿದೆ. ನಾನು ಮಾವ ಹೋಗಿ ಬರುತ್ತೇವೆ ದೇವಸ್ಥಾನಕ್ಕೆ” ಎನ್ನುತ್ತಾಳೆ. ಯಾವಾಗಲೂ ಸುಧಾಕರನ ಜೊತೆ ಅಂತರ ಕಾಯ್ದು ಕೊಳ್ಳುತ್ತಿದ್ದ ಮಗಳು ಈ ರೀತಿ ಹೇಳಿದ್ದು ಕೇಳಿ ಆಶ್ಚರ್ಯವಾದರೂ ತೋರಿಸಿಕೊಳ್ಳದೆ ತಮ್ಮನಿಗೆ “ಸುಧಿ,.. ಸುರಭಿ ನೀನು ಹೋಗಿ ಬನ್ನಿ. ದೇವಸ್ಥಾನಕ್ಕೆ ಹೋಗೋಣ ಅಂತ ಬಾಯಿಂದ ಬಂದ ಮೇಲೆ ತಪ್ಪಿಸ ಬಾರದು ಎಂದಾಗ ಸುಧಾಕರ್ “ಸರಿ ಅಕ್ಕ” ಎನ್ನುತ್ತ ಇಬ್ಬರೂ ಹೊರಟು ದೇವಸ್ಥಾನಕ್ಕೆ ಬರುತ್ತಾರೆ.
ಸುರಭಿಯೊಡನೆ ಹೆಚ್ಚು ಮಾತಾಡದೇ ಪೂಜೆ ಮಂಗಳಾರತಿ ಎಲ್ಲ ಆದ ಮೇಲೆ ಅಲ್ಲಿಂದ ಹೊರಡಲು ಚಪ್ಪಲಿ ಹಾಕಿಕೊಳ್ಳುವಾಗ ಸುರಭಿ “ಮಾವ, ನಿನ್ ಹತ್ರ ಸ್ವಲ್ಪ ಮಾತನಾಡಬೇಕು. ಇಲ್ಲೇ ಎಲ್ಲಾದರು ಸ್ವಲ್ಪ ಹೊತ್ತು ಕೂತ್ಕೊಳೋಣ” ಅಂತಾಳೆ . ಸುಧಾಕರ್ ಸರಿ ಎನ್ನುತ್ತ ಹತ್ತಿರದಲ್ಲಿ ಇದ್ದ ಕಲ್ಲು ಬೆಂಚಿನ ಮೇಲೆ ಇಬ್ಬರೂ ಕುಳಿತಾಗ ಸುರಭಿಯೆ ಮಾತಿಗಾರಂಭಿಸುತ್ತಾಳೆ.
“ಮಾವ, ಏನೋ ಆಕರ್ಷಣೆಗೆ ಒಳಗಾಗಿ ನಾನು ಶ್ರೇಯಸ್ ನನ್ನು ಪ್ರೀತಿಸಿದೆ. ಅವನು ನನಗೆ ದ್ರೋಹ ಮಾಡಿ ಇನ್ನೊಬ್ಬಳನ್ನು ಆರಿಸಿಕೊಂಡಾಗ ನನ್ ಬದುಕೇ ಮುಗಿದು ಹೋಯಿತು ಅನ್ಕೊಂಡೆ. ಅದೇ ಸಮಯದಲ್ಲಿ ನೀನು ನನ್ನನ್ನು ನಿಮ್ ಊರಿಗೆ ಕರೆ ತಂದೆ. ಇಲ್ಲಿಯ ವಾತಾವರಣ, ಅಜ್ಜಿ ತಾತ ನೀನು ನನ್ನ ಮೇಲೆ ಇಟ್ಟಿರುವ ಕಾಳಜಿ ಕಂಡು ನಾನು ಇಷ್ಟು ದಿನ ಏನು ಕಳೆದು ಕೊಂಡಿದ್ದೇನೆ ಅನ್ನುವುದು ಮನವರಿಕೆ ಆಗುತ್ತಿದೆ. ಇವತ್ತು ನಾನು ಮನಸಾರೆ ಹೇಳುತ್ತಾ ಇದ್ದೇನೆ. ನೀನೇ ನನಗೆ ಸರಿಯಾದ ಜೀವನಸಂಗಾತಿ ಅಂತ ಅನ್ನಿಸುತ್ತಿದೆ. ಹಿಂದೆ ನಾನು ನಿನ್ನನ್ನು ನಿರಾಕರಿಸಿ ಎಂಥ ದೊಡ್ಡ ತಪ್ಪು ಮಾಡಿದೆ ಅಂತ ಈಗ ಅರಿವಾಗಿದೆ . ನನ್ನ ಕ್ಷಮಿಸಿ ನನ್ನನ್ನು ಸ್ವೀಕರಿಸುತ್ತೀರಾ ಮಾವ. ನನ್ನನ್ನು ಮದುವೆ ಆಗುತ್ತೀರಾ” ಎಂದು ಎಲ್ಲ ಒಂದೇ ಉಸಿರಿಗೆ ಹೇಳಿ ಮುಗಿಸಿ ತಲೆ ತಗ್ಗಿಸುತ್ತಾಳೆ. ಸುಧಾಕರ್ಗೆ ತನ್ನ ಕಿವಿಯನ್ನೇ ನಂಬಲಾಗುವುದಿಲ್ಲ. ಮೂಕ ವಿಸ್ಮಿತನಾಗಿ ಅವಳನ್ನೇ ದಿಟ್ಟಿಸಿ ನೋಡುತ್ತಾ ಕುಳಿತು ಬಿಡುತ್ತಾನೆ.
ಮಾವ… ಮಾವ… ಏನಾದರು ಹೇಳಿ ಎಂದಾಗ ಎಚ್ಚೆತ್ತ ಸುಧಾಕರ್ ಅವಳ ಕೈಯಲ್ಲಿ ಬುಟ್ಟಿಯಲ್ಲಿದ್ದ ದೇವರ ಮೇಲಿನ ಮಲ್ಲಿಗೆ ಹೂವನ್ನು ತೆಗೆದು ಅವಳ ಮುಡಿಗೆ ಮುಡಿಸುತ್ತಾನೆ. ಮಾವ.. ಎನ್ನುತ್ತ ಸುರಭಿ ಭಾವುಕಳಾಗುತ್ತಾಳೆ. ಸುರಭಿ ಇನ್ನೂ ಏನೋ ಹೇಳಲು ಹೊರಟಾಗ ಸುಧಾಕರ್ ಅವಳ ಬಾಯಿಗೆ ತನ್ನ ಕೈ ಅಡ್ಡ ಇಡುತ್ತಾ “ಇನ್ನೇನು ಹೇಳಬೇಡ ಸುರಭಿ” ಎನ್ನುತ್ತ ಅವಳನ್ನು ತನ್ನೆದೆಗೆ ಒರಗಿಸಿಕೊಳ್ಳುತ್ತಾನೆ. ಇವರ ಮೌನ ಸಂಭಾಷಣೆಗೆ ದೇವಸ್ಥಾನದ ಘಂಟೆ ಮೊಳಗಿ ಶುಭ ಕೋರುತ್ತದೆ. ಆ ಘಂಟಾನಾದ ಇವರಿಬ್ಬರಿಗೆ ಪ್ರೇಮನಾದದಂತೆ ಕೇಳಿಸುತ್ತದೆ.
-ಸುಮ ಉಮೇಶ್