ಪ್ರೇಮದ ಕಾಲ್ಪನಿಕ ಕೊಳದಲ್ಲಿ: ಮಸಿಯಣ್ಣ ಆರನಕಟ್ಟೆ

ಒಲವಿನ ಆತ್ಮದೊಡತಿಗೆ,

ನನ್ನುಸಿರ ಅರ್ಪಣೆಯು, ನನ್ನಾತ್ಮದ ನುಡಿಗೆ ಅರ್ಥವೇನೊಂದಿಲ್ಲ; ಅದರಿಂದ ನೀನು ಅರ್ಥ ಮಾಡಿಕೊಳ್ಳುವುದುದೇನೊಂದು ಇಲ್ಲ. ಆದರೂ, ನೀನು ಕಿವಿಗೊಟ್ಟು ಕೇಳುವೆ, ಅರ್ಥವಾಗದಿದ್ದರೂ, ಅರ್ಥವಾದಂತೆ ಕಿರುನಗೆ ಬೀರುವೆ ಎಂಬುದೇ ನನ್ನ ಭಾವ. ಕಾರಣ, ನೀನು ನನ್ನದೇ ಮನಸ್ಸಿನ ಭಾಗ. ಕಾಲಾನುಗತಿಯಲ್ಲಿ ನಿನ್ನನ್ನೊಗಳುವೆ; ಕ್ಷಣಾರ್ದದಲ್ಲೇ ತೆಗಳುವೆ; ಪ್ರೇಮದ ಕಾವ್ಯಕಲ್ಪನೆಯಲ್ಲಿರಬಹುದು ಅಥವಾ ಮೋಹದ ಮಾಯೆಯಲ್ಲಿರಬಹುದು. ನಾನಾಗಲೇ ನಿನಗೇಳಿದಂತೆ, ಇಲ್ಲಿ ಅರ್ಥಮಾಡಿಕೊಳ್ಳಲು ಏನುಯಿಲ್ಲ ಎಂಬ ಮುಗ್ಧಭಾವ ಆವರಿಸಿದೆ. ಹಾಗಾಗಿ ನುಡಿಯುವೆ, ಒಮ್ಮೆ ಬೆತ್ತಲಾದ ಆಕಾಶವನ್ನು ನೋಡುತ್ತಾ ಕೂತಿದ್ದೆ, ಎರಡು ಗಿಳಿಗಳು ಹಾರಾಡುತ್ತಾ ಇದ್ದವು, ಹಾಗೆ ಕಿವಿಗೊಟ್ಟು ಕೇಳಿದೆ “ಎಲ್ಲಿಯವರೆಗೂ ಈ ಅರ್ಥಹೀನವಾದ ಹಾರಾಟವನ್ನು ನಾವು ಮಾಡುತ್ತಿರಲಿ ? ಎಲ್ಲಿಯಾದರೂ ನಮ್ಮಿಬ್ಬರಿಗೆ ಎನೆಯುಂಟೆ ?!” ಎಂಬ ಮೌನವಾದ ದನಿಯೊಂದು ನನ್ನ ಕಿವಿಗೆ ಹಿತವಾದ ನೋವನ್ನುಂಟು ಮಾಡಿತು.

ತತ್ಕ್ಷಣ ಜೊತೆಗಾರ ಗಿಳಿ ” ನಮ್ಮ ಈ ಹಾರಾಟವೇ ಪ್ರೇಮಕ್ಕಾಗಿ, ಪ್ರೇಮದ ಹುಡುಕಾಟಕ್ಕಾಗಿ! ಅಂತಿಮ ಉಸಿರಿನ ಘಳಿಗೆಯವರೆಗೂ ಹಾರಾಡುವ! ಹುಡುಕುವ!” ಎಂಬ ಆಶಾಭಾವ ತಿಳಿಸಲೀಲದಂತಿದ್ದ ಬೆತ್ತಲ ಆಕಾಶವನ್ನು ಮತ್ತಷ್ಟು ಕಲುಕಿತು. ಆ ಎರಡು ಗಿಳಿಗಳನ್ನೇ ದಿಟ್ಟಿಸಿ ನೋಡುತ್ತಾ ಕುಳಿತಿದ್ದೆ ನನ್ನೆರಡು ಕಣ್ಣುಗಳೇ ಸೋಲನ್ನು ಬಯಸುವವರಿಗೂ.. ಕಣ್ ಮಂಜಾದವು ದೂರದ ದಿಕ್ಕಿನ ಸಂಬಂಧದಲ್ಲಿ. ಹಾಗಾದರೆ, ಆ ಎರಡು ಗಿಳಿಗಳ ಹಾರಾಟ ಅಂತ್ಯವಾಗುವುದು ಯಾವಾಗ? ಆ ಒಂದು ಗಿಳಿ ನುಡಿಯಂತೆ ಆ ಗಳಿಗೆ ಬರುವುದಾ…? ಬರುವುದು! ಹೌದು! ಎಂಬುದೇ ನನ್ನ ಆಶಾಭಾವ. ಕಾರಣ ಹುಡುಕಲು ಹೊರಟರೆ ಮತ್ತೇ ಅರ್ಥವಾಗದು. ‘ ಬಳಿದ ಬಣ್ಣವನ್ನೇ ಅದೆಷ್ಟು ಬಳಿಯಲಿ ” ಅಂದು ಮಾತ್ರ ಬೆತ್ತಲ ಆಕಾಶ ನೀಲಿ ಬಣ್ಣವನ್ನೇ ಬಳಿಸಿಕೊಂಡು ಸುಂದರವಾಗಿ ನನ್ನ ಕಲ್ಪನೆಗೆ ಅಡಿಪಾಯ ಹಾಕಿತ್ತು. ಏನ್ ಗೊತ್ತೇನೇ ಇವ್ಳೆ, ನನಗೀಗಲೂ ಕಾಡುತ್ತಿರುವುದು ಆ ಹೆಣ್ಣು ಗಿಳಿಯ ಮಾತು. ಕೊನೆಯಿರುವ ಉಸಿರಿನ ಹಾರಾಟಕ್ಕೆ ಎನೆಯುಂಟ ? ಅಥವಾ ಉಂಟೇ.? ಎಂಬ ಪ್ರಶ್ನೆ ಹೇಗೆ ಹುಟ್ಟಿರಬಹುದು?! ಮತ್ತೇ ನಿನಗೆ ಅರ್ಥವಾಗದ ಮಾತುಗಳನ್ನಾಡಿ ನಿನ್ನ ಪ್ರೇಮ ಉತ್ಸವದ ಉತ್ಸಾಹಕ್ಕೆ ಧಕ್ಕೆತರಲು ಇಚ್ಛಿಸುವುದಿಲ್ಲ. ಮರೆತೇ ಬಿಟ್ಟಿದ್ದೆ ಪ್ರೇಮಿಗಳ ದಿಾಚರಣೆಯ ಶುಭಹಾರೈಕೆಗಳು ನಿನಗೆ.

ನಾನೇ ನೀನಾಗಿರುವಾಗ ಅಥವಾ ನೀನೇ ನಾನಾಗಿರುವಾಗ ನಮ್ಮಿಬ್ಬರ ಪರಿಚಯ ಅವಶ್ಯಕವಿಲ್ಲ ಇಲ್ಲಿ ಅಂದರೆ ಈ ಪತ್ರದಲ್ಲಿ . ಈಗ ಬಾ ಗೆಳತಿ ಇಬ್ಬರೂ ಮತ್ತೊಂದು ಹೆಜ್ಜೆ ಇಡೋಣ ಈ ಪ್ರೇಮದ ಕಾಲ್ಪನಿಕ ಕೊಳದಲ್ಲಿ. ಹೌದು ಸಖಿ, ಆ ಮಾಯಕೊಳ ಕಾಲ್ಪನಿಕ ಯಾವುದೋ ಕಣ್ಣಿಗೆ. ಆದರೆ ನನ್ನ ನಿನ್ನ ಒಳಗಣ್ಣಿಗಲ್ಲ. ಅದು ನಮ್ಮಿಬ್ಬರ ನಡುವಿನ ಪ್ರೀತಿಯ ಮಕರಂಧದ ಕೊಳ. ಕಾಣದ ಊರಿನ ಚೆಲುವೆ ನೀನು, ನಾನು ಸಹ ನಿನ್ನ ಪಾಲಿಗೆ ಕಾಣಾದೂರಿನ ಚೆಲುವ !? ಹೌದು ಮಾರಾಯ್ತಿ ಚೆಲುವ ಅಂದರೆ ನಿನಗೆ ಅಡ್ಡಿಯಿಲ್ಲ ಎಂದು ಗೊತ್ತಿದೆ ನನ್ಗೆ. ಅದು ತಪ್ಪಾಗಲಾರದು. ಒಂದು ನಿಮಿಷ ಕೇಳಿಲ್ಲಿ ಆ ಗಿಳಿಗಳು ಮತ್ತೇ ನೆನಪಾಗುತ್ತಿದ್ದಾವೆ. ಇರಲಿ ಅದಕ್ಕೂ ಮುನ್ನ ಹಾಗೆ ಒಂದು ಮಾತನ್ನೇಳುತ್ತೇನೆ ಇವ್ಳೆ, ಈ ಜಗತ್ತೆಂಬ ಮಹಾ ವಟವೃಕ್ಷ ಬೆಳೆದು ನಿಂತಿರುವುದು ಗಂಡು ಹೆಣ್ಣು ಎಂಬ ಎರಡು ಬೀಜಗಳ ಸಮ್ಮಿಲನದಿಂದ ; ಅದು ಗೊತ್ತಿದೆ ನಿನ್ಗೆ. ಹೌದು, ಈ ಮಾತು ಸತ್ಯವೇ . ಆದರೆ ಒಂದೇ ಮನಸ್ಸಿನ ಎರಡು ಬೀಜಗಳಿಂದಾಗಿದೆ ಎನ್ನುವುದು ನೈಜತೆಗೆ ಕೊಂಚ ಅನುಮಾವ ಹುಟ್ಟಿಸುವಂತಿದೆ. ಆದರೆ ನನಗೆ ಅರಿವಿದೆ ಆ ಗಿಳಿಗಳ ಕಥೆಯಲ್ಲಿ ಎರಡನೇ ಸಾಲು ಅವುಗಳಿಗೆ ಒಪ್ಪುತ್ತದೆ. ಆಂತರ್ಯದಲ್ಲಿ ಸುಕೃತಿಯನ್ನು ರಚಿಸಿರುವ ಪ್ರೇಮದ ಪರಿಭಾಷೆ ನಾನು ನೀನು. ಅದೇಕೋ ಗೊತ್ತಿಲ್ಲ ಬಾಹ್ಯಲೋಕದಲ್ಲಿ ಉತ್ತರಧ್ರುವ ದಕ್ಷಿಣಧ್ರುವಗಳಾಗಿ ಉರಿಯುತ್ತಿರುವ ಎರಡು ಒಲವಿನ ಪಂಜುಗಳು ನಾವು!

ಅದೊಂದು ದಿನ ಆ ಗಂಡು ಗಿಳಿ ಹೇಳಿದಂತೆ ಆ ಪ್ರೇಮದ ಸೌಖ್ಯವನ್ನು ಅನುಭವಿಸುವ ಘಳಿಗೆ ಬರುವುದೆಂದು ಕಾಲದ ತೆಕ್ಕೆಯಲ್ಲಿ ಸಿಕ್ಕಿದೆ. ನಾವಿಬ್ಬರೂ ಹುಡುಕುತ್ತಾ ಇದ್ದೀವಿ. ಒಂದು ಮಾತಿದೆ ಇವಳೇ, Unlike poles attract each other but like poles will repell each other. Yes, we should repell each other. ಯಾಕೆಂದರೆ ನಮ್ಮಿಬ್ಬರ ದೇಹ ಇಬ್ಭಾಗವಾಗಿದೆ. ಆದರೆ ನಮ್ಮ ನಮ್ಮ ಮನಸಲ್ಲ ಮತ್ತೇ ಅದು ಕಟ್ಟಿರುವ ಕನಸಿನ ಗೋಪುರವಲ್ಲ! ಉರಿಯುತ್ತಿದ್ದೇವೆ ಉತ್ತರ ದಕ್ಷಿಣ ಧ್ರುವಗಳಗಳಾಗಿ…. ಪ್ರಜ್ವಲಿಸುತ್ತಿದ್ದೇವೆ ಪ್ರೇಮದ ಪಂಜುವಿನ ಬೆಳಕಾಗಿ. ಹೌದು ಇವಳೇ, ಅದೊಂದು ದಿನ ಇಬ್ಬರು ಸುಟ್ಟು ಬೂದಿಯಾಗುವೆವು. ಪಂಚಭೂತಗಳಲ್ಲಿ ಕರಗಿ ಹೋಗುವೆವು ಆಗ ಆ ಕ್ಷಣ… ಆ ಒಂದು ಕ್ಷಣ ಆ ಗಿಳಿಯ ಮಾತು ಸಾರ್ಥಕತೆ ಪಡೆಯುವುದು. ಕ್ಷಮಿಸು ನನನ್ನು ಅರ್ಥವಾಗದ ಭಾಷೆಯಲ್ಲಿ ನಿನ್ನನ್ನು ಮಾತಾಡಿಸಿ ಅರ್ಥವಾದಂತೆ ನಟಿಸುವ ನಟಿಯನ್ನಾಗಿ ಮಾಡುತ್ತಿರುವೆ .

ಮತ್ತೊಮ್ಮೆ ಪ್ರೇಮಿಗಳ ದಿನದ ಶುಭಾಶಯ….

-ಇಂತಿ ನಿನ್ನ ಇವ್ನು

-ಮಸಿಯಣ್ಣ ಆರನಕಟ್ಟೆ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x