ಪ್ರೇಮದುತ್ಕಟತೆಯ ಅನಂತ ಹುಡುಕಾಟ: ಸಚೇತನ

ಉತ್ಕಟ ಪ್ರೇಮದ ಪ್ರಾತಿನಿಧಕವಾಗಿ ಹಲವಾರು ಸಿನಿಮಾಗಳು ಬಂದು ಹೋಗಿವೆ. ದುರಂತ ಪ್ರೇಮಕ್ಕೆ ಸಿನಿಮಾದ ರೂಪದಲ್ಲಿ  ಪರಂಪರಾಗತ ಸಾಕ್ಷಿ ಎನ್ನುವಂತೆ ನಾವು ಟೈಟಾನಿಕ್ ಸಿನಿಮಾವನ್ನು ನೋಡಿದ್ದೇವೆ, ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಥರದ ಭಾರತೀಯ ಶೈಲಿಯ ಪ್ರೇಮದ ಹಂಬಲ ಮತ್ತು ತ್ಯಾಗವನ್ನು  ಕಂಡಿದ್ದೇವೆ.  ಆದರೆ ಸಿನಿಮಾವೊಂದರಲ್ಲಿನ ಪ್ರೇಮದ ಉತ್ಕಟತೆ ತೆರೆಯಾಚೆಗೆ ಸಾಗಿ ಪ್ರೇಕ್ಷನಲ್ಲಿ ಆಳಕ್ಕಿಳಿದು ನೆನಪಿನಲ್ಲಿ ಉಳಿಯುವದು,  ಪ್ರೀತಿಸಿದ ಪಾತ್ರಗಳೆರಡರ  ನಡುವಿನಲ್ಲಿ ಅತೀ ಆರ್ದವಾದ ಸಂಬಂಧವೊಂದು ಸಾಧ್ಯವಾದಾಗ ಹಾಗೂ ಅದಕ್ಕೆ ಪೂರಕವಾಗಿ  ಕ್ಯಾಮರಾ ಕಣ್ಣಿನಲ್ಲಿ  ಸೆರೆಯಾದಾಗಲೇ.  

ಭೂತಕಾಲದ ನೆನಪುಗಳ ನಡುವಿನ ಅಲೆದಾಟ, ವರ್ತಮಾನದ  ಅಸಹಾಯಕತೆಯ  ತಡಕಾಟ, ಕಾಯುತ್ತಿರುವ ಭವಿಷ್ಯದ ಸ್ಪುಟ ಪಲ್ಲಟ  ಇವೆಲ್ಲವುಗಳ ಬಂಧಿಸುವ ಬಯಕೆ,ಹಂಬಲಗಳಲ್ಲಿ ಉತ್ತರವಿಲ್ಲದ ಪ್ರಶ್ನೆಯ ಹುಡುಕಾಟದಲ್ಲಿ ನಿರತನಾದ ಇಂಗ್ಲೀಶ್  ಪೇಷೆಂಟ್ ನ ಅಸಾಮಾನ್ಯ ನಿರೂಪಣೆ  'ಇಂಗ್ಲೀಶ್  ಪೇಷೆಂಟ್ ' ಎನ್ನುವ ೧೯೯೬ ರಲ್ಲಿ ತೆರೆ ಕಂಡ ಅಂಥೋಣಿ ಮಿಗೆಲ್ಲ್ ನಿರ್ದೇಶನದ ಚಿತ್ರ. 

ಪದರ ಪದರವಾಗಿ , ಒಂದಕ್ಕೊಂದು ಜೋಡಿಸಿಟ್ಟ ಕೊಂಡಿಗಳನ್ನು ಬಿಚ್ಚುತ್ತಾ, ಯಾವುದೋ  ಹರದಾರಿಯಷ್ಟು ಉದ್ದದ ಒಗಟಿನ ಎಳೆಯೊಂದನ್ನು ಹಿಡಿದು ಬಿಡಿಸಿ, ಕಥೆಯೊಳಗೆ ಸಂಪೂರ್ಣ ಇಳಿದು ಅದನ್ನು ಅನುಭವಿಸಿ ಹೊರಬರುವಷ್ಟರಲ್ಲಿ, ಸಾಯುತ್ತಿರುವ ಇಂಗ್ಲೀಶ್  ಪೇಷೆಂಟ್ ನ ಕಥೆಯೊಳಗೆ ನಾವು ಸಣ್ಣದೊಂದು ತಂತಿಯಾಗಿ, ವಸ್ತುವಾಗಿ  ಅಪರಿಮಿತ ಪ್ರೇಮವಾಗಿ , ಉತ್ಕಟತೆಯಾಗಿ , ಬಯಕೆಯಾಗಿ, ಆರದ ಗಾಯವಾಗಿ ಉಲಿದುಬಿಡುತ್ತೇವೆ. ಸಿನಿಮಾದೊಳಗಿನ ನೋವೊಂದು ಚಟಕ್ಕನೆ ಚಿಮ್ಮಿ ನಮ್ಮಲ್ಲಿ ಚುಚ್ಚಿದಂತೆ ಭಾಸವಾಗುತ್ತದೆ.  ಮೈಕೆಲ್ ಒಂಡಾಚಿ  ಅವರ ಕಾದಂಬರಿ ಆಧರಿಸಿದ, ರೇಲ್ಫ್  ಫೈನೆಸ್, ಕ್ರಿಸ್ಟಿನ್ ಸ್ಕಾಟ್ ಥಾಮಸ್, ನವೀನ್ ಆ೦ಡ್ರು,ಜುಲಿಯೇತ್ ಬಿನೋಚ್    ಅಭಿನಯದ  'ಇಂಗ್ಲೀಶ್  ಪೇಷೆಂಟ್' ಎನ್ನುವ ಸಿನಿಮಾದ ಶುರುವಿನಲ್ಲಿ, ತೆರೆದ ಕಾಕ್ ಪಿಟ್ ನಲ್ಲಿ  ವಿಮಾನವೊಂದು ಇಬ್ಬರು ಪ್ರಯಾಣಿಕರನ್ನು ಹೊತ್ತು ಮರಳುಗಾಡಿನ ಮೇಲೆ ಸಾಗುತ್ತಿರುವದನ್ನು ತೋರಿಸುತ್ತದೆ. ಸಿನಿಮಾದ ಸಂಪೂರ್ಣ ಕತೆ ಮುಂದೆ ತೆರೆದಿಡುವದು ಈ ಇಬ್ಬರು ಪ್ರಯಾಣಿಕರು ಯಾರು ಮತ್ತು ಅವರ ನಡುವಿನ ಸಂಬಂಧವೇನು, ಅವರಿಬ್ಬರು ವಿಮಾನದಲ್ಲಿ ಹೊರಟಿರುವದೇಕೆ, ಎಲ್ಲಿಗೆ  ಎನ್ನುವದನ್ನು ಹಾಗೂ ಇವರಿಬ್ಬರ ನಡುವಿನ ಸಂಬಂಧವನ್ನು ನಿರೂಪಿಸುವಾಗ ಸಿಗುವಂತ ಇನ್ನು ಹಲವು ಜೀವಗಳನ್ನ ತೆರೆದಿಡುವದು.

ಸಿನಿಮಾದ ಸಧ್ಯದ ಕತೆ ನಡೆಯುವದು ಎರಡನೆಯ ಮಹಾಯುದ್ಧದ ಅಂತ್ಯಭಾಗದ  ಇಟಲಿಯಲ್ಲಿ.  ಅತ್ಯಂತ ದಾರುಣವಾಗಿ ಸುಟ್ಟ  ಗಾಯಗಳಾಗಿರುವ  ಇಂಗ್ಲೀಶ್  ಪೇಷೆಂಟ್  ಮಿಲಿಟರಿಯ ವೈದ್ಯಕೀಯ  ಪಂಗಡದ ಜೊತೆಯಿದ್ದಾನೆ, ರೋಗಿಯ ಮುಖ ಅತ್ಯಂತ ಭೀಕರವಾಗಿ ಸುಟ್ಟಿದೆ, ಗುರುತಿಸಲಾಗದಷ್ಟು ವಿರೂಪಗೊಂಡಿರುವ ಮುಖದೊಂದಿಗೆ  ಅವನು ತನ್ನ ಹಳೆಯ ನೆನಪುಗಳನ್ನು, ಜ್ಞಾಪಕ ಶಕ್ತಿಯನ್ನೂ ಕಳೆದುಕೊಂಡಿದ್ದಾನೆ. ರೋಗಿಯ ಸ್ಥಿತಿ ಗಂಭೀರವಾದಾಗ, ಪಂಗಡದ ಜೊತೆ ಸಾಗಿಸಲಾಗದಷ್ಟು ಚಿಂತಾಜನಕವಾದಾಗ  'ಹನಾ' ಎನ್ನುವ ನರ್ಸ್  ಹಾದಿಯಲ್ಲಿನ ಮುರುಕು ವಿಹಾರವೊಂದರಲ್ಲಿತಾತ್ಕಾಲಿಕ ಸೂರು ನಿರ್ಮಿಸಿ  ಅವನ ಶುಶ್ರೂಷೆಗೆ ಉಳಿಯುತ್ತಾಳೆ. ಸ್ವಲ್ಪ ದಿನಗಳಲ್ಲಿಯೇ ಅವರಿಗೆ ಬಾಂಬ್ ನಿಶಸ್ತ್ರೀಕರಣ ತಂಡದ ಇಬ್ಬರು ಹಾಗೂ ಒಬ್ಬ ನಿಗೂಢ  ಆಗಂತುಕ ಜೊತೆಯಾಗುತ್ತಾರೆ.   ರೋಗಿಯ ಸುಟ್ಟ  ಮುಖದಲ್ಲಿ, ಗಾಯಗೊಂಡ ದೇಹದಲ್ಲಿ, ಘಾಸಿಗೊಂಡ ಮನಸ್ಸಿನಲ್ಲಿ, ವಿರೂಪಗೊಂಡ  ನೆನಪಿನಲ್ಲಿ  ಹನಾಗೆ ತನ್ನ ಕಳೆದುಹೋದ ಪ್ರಿಯತಮನ ನೆನಪಾಗುತ್ತದೆ. ' ನಾನೊಬ್ಬಳು ಶಾಪಗ್ರಸ್ಥೆ , ನಾನು ಪ್ರೀತಿಸಿದವರು, ಇಷ್ಟಪಟ್ಟವರು, ಕನಸು ಕಂಡವರು ಸಾಯುತ್ತಾರೆ ' ಎಂದು ಹಲಬುವ ನರ್ಸ್ ಹನಾ ಪಾತ್ರದಲ್ಲಿ ಅಸಾಧ್ಯ ವಿಷಾದವಿದೆ.  ' ವಿರಕ್ತನಂತಿರುವ ಈ ನಿನ್ನ ರೋಗಿಯನ್ನೆ  ಕೇಳು, ಯಾರ್ಯಾರನ್ನು ಅವನು ಕೊಂದಿರುವನೆಂದು, ಬಹುಶ  ಅವನು ಯಾವುದನ್ನು ಮರೆತಿರಲಾರ' ಎಂದು ಹೊಂಚಿಕೆಯ ನಡೆಯಲ್ಲಿ ಕೇಳುವ ಮನೆಯೊಳಗಿನ ನಿಗೂಢ  ಅಪರಿಚಿತ ದಿಗಿಲು ಹುಟ್ಟಿಸುತ್ತಾನೆ. ಹನಾಳ ಮನಸ್ಸನ್ನು   ಬಾಂಬ್ ನಿಶಸ್ತ್ರೀಕರಣ ತಂಡದಲ್ಲಿನ ಕಿಪ್ ಎನ್ನುವ ಸಿಖ್ ಯುವಕ ಸೆಳೆಯುತ್ತಿದ್ದಾನೆ.   ಇವೆಲ್ಲವುಗಳ ಮಧ್ಯದಲ್ಲಿ ರೋಗಿಯ ಸುಟ್ಟ ಮುಖದ ಪಕ್ಕದಲ್ಲಿನ ಮೇಜಿನ ಮೇಲಿರುವ ಡೈರಿ, ವಿರೂಪಗೊಂಡ  ಮುಖದ ಹಿಂದಿನ ಕತೆಯನ್ನು  ಬಿಚ್ಚಿಡತೊಡಗಿದೆ. ಪದರವಾಗಿ ಬಿಚ್ಚಿಕೊಳ್ಳುವ ಇಂಗ್ಲೀಶ್  ಪೇಷೆಂಟ್ ನ ಕತೆಯ ಜೊತೆಗೆ ಹನಿ ಹನಿಯಾಗಿ ಇಳಿಯುವದು ಕಿಪ್ ಮತ್ತು ಹನಾ  ನಡುವಿನ ಪ್ರೇಮ.  ಡೈರಿಯ ಪುಟಗಳನ್ನು ನೋಡುತ್ತ, ಹನಾಳ  ಸಹಾಯದಿಂದ ಕೇಳುತ್ತ ಮಂಚದ  ಮೇಲೆ ಮಲಗಿರುವ  ಇಂಗ್ಲೀಶ್  ಪೇಷೆಂಟ್ ಗೆ ಗತಕಾಲದ ನೆನಪು ಮರುಕಳಿಸುತ್ತಿದೆ. ಡೈರಿಯ ಪ್ರತಿ  ಪುಟದಲ್ಲಿ,ಪ್ರತಿ  ಅಕ್ಷರದಲ್ಲಿ, ಪ್ರತಿ  ಚಿತ್ರದಲ್ಲಿ ತನ್ನ ಕಥೆಯನ್ನು ಬಿಚ್ಚಿಡುತ್ತಾ ಹೋಗುವ  ಇಂಗ್ಲೀಷ್ ಪೆಶೆಂಟ್ , ನಿಜವಾಗಿಯೂ ಇಂಗ್ಲಿಶ್  ಮನುಷ್ಯ ಅಲ್ಲ. ಹಂಗೆರೀ ದೇಶದವನಾದ ಲಾಸ್ಜೋಲ್ ಡಿ ಅಲ್ಮಾಸಿ ಎನ್ನುವ ಈತ  ನ್ಯಾಷನಲ್ ಜಿಯೋಗ್ರಾಫಿ ' ಕಡೆಯಿಂದ ಈಜಿಫ್ಟ ದೇಶದ ಮರಳುಗಾಡಿನಲ್ಲಿ ಕೆಲಸ ಮಾಡುವ ಹಾಗೂ ನ್ಯಾಷನಲ್ ಜಿಯೋಗ್ರಾಫಿಗಾಗಿ ನಕಾಶೆ ಬಿಡಿಸಿ ಕೊಡುವ ಉದ್ಯೋಗದಲ್ಲಿ ಇರುವಾತ.  ಅಲ್ಮಾಸಿ ಯುಧ್ಧ ಸನ್ನದ್ದವಾದ ಈಜಿಫ್ಟನ ಕೈರೋದಲ್ಲಿ  ಜಾಫ್ರಿ ಹಾಗೂ ಕ್ಯಾಥರೀನ್ ಕ್ಲಿಫ಼್ಟನ್ ಎನ್ನುವ  ಜೋಡಿಯನ್ನು ಭೇಟಿಯಾಗುತ್ತಾನೆ. ಕ್ಯಾಥರೀನ್ ಕ್ಲಿಫ಼್ಟನ್ ಎನ್ನುವ ಮದುವೆಯಾದ ಯುವತಿ ಹಾಗೂ ಅಲ್ಮಾಸಿ ಎನ್ನುವ ನಕಾಶೆ ಬಿಡಿಸುವ, ಕಥೆ ಬರೆಯುವ ಯುವಕನ ನಡುವಿನ ಪ್ರೇಮೊನ್ಮಾದದ ಕಥಾನಕವೇ ಇಂಗ್ಲಿಶ್ ಪೆಶೆಂಟ್ ಎನ್ನುವ ಸಿನಿಮಾ. 

ಸಿನಿಮಾ ಹಲವಾರು ಕೋನಗಳಲ್ಲಿ ನ  ಕಾಣಸಿಗುತ್ತದೆ.  ಅಲ್ಮಾಸಿ ಹಾಗೂ ಕ್ಯಾಥರೀನ್ ನಡುವಿನ ಉತ್ಕಟ ಪ್ರೇಮ, ಕಿಪ್ ಎನ್ನುವ ಸಿಖ್ ಯುವಕ ಹಾಗೂ ಹನಾ ನಡುವಿನ ಸರಳ ಪ್ರೇಮ ಇವೆರಡನ್ನೂ ಸಮನಾಗಿ ತೂಗಿಸಿಕೊಂಡು ಸಾಗುವ ಚಿತ್ರ ಪ್ರೀತಿಯ ಸರಳತೆ ಹಾಗೂ ಸಾಂದ್ರತೆ ಇವೆರಡನ್ನೂ ಕಾಣಿಸುತ್ತದೆ.  ಅಲ್ಮಾಸಿ ಹಾಗೂ ಕ್ಯಾಥರೀನ್ ನಡುವಿನ ಅತ್ಯಂತ ಪ್ರಖರವಾದ ಸಂಭಾಷಣೆಯ ದೃಶ್ಯಗಳು ಅದ್ಭುತವಾಗಿವೆ. 
ಅಲ್ಮಾಸಿ, ಪ್ರೇಯಸಿ ಕ್ಯಾಥರೀನ್ ಳ  ತಲೆಗೂದಲಿಗೆ ನೀರನ್ನು ಸುರಿಯುತ್ತ ಕೇಳುತ್ತಾನೆ  "ನೀನು ಯಾವಾಗ ಅತ್ಯಂತ ಖುಷಿಯಾಗಿದ್ದೆ ? "
"ಈಗ " ಕ್ಯಾಥರೀನ್ 
"ಯಾವಾಗ ನೀನು ಅತ್ಯಂತ ದು:ಖಿತಳಾಗಿದ್ದೆ ? " 
"ಈಗ "

ಸಿನಿಮಾವನ್ನು ಆಳವಾಗಿಸಲು ಇನ್ನೊಂದು ಕಾರಣ ಚೆಂದನೆಯ ಕ್ಯಾಮರ ಕೈಚಳಕ. ಕೈರೋದ  ಹಾಸು ಹಾಸಾಗಿರುವ ಮರಳುಗಾಡು,  ಇಂಗ್ಲೀಷ್ ಪೆಶೆಂಟ್ ನ ವಿರೂಪಗೊಂಡ ಮುಖ ಹಾಗೂ ನೋವು, ಮರಳುಗಾಡಿನ  ಭಯ ಹುಟ್ಟಿಸುವ ನಿರ್ಜನದ ಕ್ಯಾಥರೀನ್ ಹಾಗೂ ಅಲ್ಮಾಸಿ ಜೋಡಿ, ಚುರುಕು ಕಣ್ಣಿನ ಕಿಪ್, ಅರ್ಧ ತೆರೆದ ಪುಸ್ತಕದ ಪುಟಗಳು, ಹನಾಗೆ ಹಚ್ಚಿಟ್ಟ ಹಣತೆ, ಹಾರುತ್ತಿರುವ ವಿಮಾನ ಎಲ್ಲವನ್ನು ಬಹಳ ಸುಂದರವಾಗಿ ಕ್ಯಾಮರಾದಲ್ಲಿ ಹಿಡಿದಿಟ್ಟಿದ್ದಾರೆ ಕ್ಯಾಮರಾಮೆನ್ ಡೆವಿಡ್ ಲೀನ್. ತೆಳು ಬಂಗಾರದ ಬಣ್ಣದಲ್ಲಿ ಗತಕಾಲದ ಕತೆಯನ್ನು  ಕಟ್ಟಿಕೊಡುವ ಜಾನ್ ಸೆಲೆ ಅವರ ಸಿನಿಮಾಟೊಗ್ರಫಿ, ಸ್ಟುವರ್ಟ್ ಗ್ರೆಗ್ ಅವರ ದೃಶ್ಯ ಸಜ್ಜಿಕೆ, ಗ್ಯಾಬ್ರಿಯಲ್ ಯಾರ್ಡ್  ಅವರ ಹಿನ್ನೆಲೆ ಸಂಗೀತ   ನೋಡುಗರನ್ನು ಉದ್ದೀಪನಗೊಳಿಸುತ್ತದೆ.   

ಸಿನಿಮಾ ಮುಗಿದ ಮೇಲೆ, ಅಲ್ಮಾಸಿಯನ್ನು  ಪ್ರೀತಿಸುವ ಕ್ಯಾಥರೀನ್ ನಮಗೆ ನೆನಪುಳಿಯುವ ರೀತಿಯಲ್ಲಿ  ಗಂಡನಿಗೆ ದ್ರೋಹ ಮಾಡುವ ಕ್ಯಾಥರೀನ್ ನೆನಪಿನಲ್ಲಿ ಉಳಿಯುವದಿಲ್ಲ. ಸಿನಿಮಾದ ಆರಂಭದಿಂದಲೇ  ಸುಟ್ಟ, ವಿರೂಪವಾದ ಮುಖದೊಂದಿಗೆ ಕಾಣ ಸಿಗುವ ಅಲ್ಮಾಸಿ ಮರೆತು, ಕೊನೆಗೆ ನೆನಪಿನಲ್ಲಿ ಉಳಿಯುವದು ಆಫ್ರಿಕಾದ ಕಾಡಿನಲ್ಲಿ  ಮೋಡಗಳಿಲ್ಲದ ಆಕಾಶದ ಅಡಿಯಲ್ಲಿ ಕ್ಯಾಥರೀನ್ ಳನ್ನು  ಹುಚ್ಚನಾಗಿ ಪ್ರೀತಿಸಿದ  ಅಲ್ಮಾಸಿ,  ಬಾಂಬ್ ನಿಷ್ಕ್ರೀಯಗೊಳಿಸುವಾಗ ಮೃಗದಂತ  ಎಚ್ಚರಿಕೆಯಿಂದ ಬಾಂಬ್ ನ ವೈರ್ ನೋಡುವ  ಕಿಪ್ ನೆನಪಿನಲ್ಲಿ ಉಳಿಯುವದಕ್ಕಿಂತ  ಹನಾ ಕೊಟ್ಟ ಒಂದು ಬಾಟಲ್ ಆಲಿವ್ ಎಣ್ಣೆಯನ್ನು ಸಂತಸದಿಂದ ನೋಡುವ ಕಿಪ್ ಉಳಿಯುತ್ತಾನೆ. ಪ್ರೇಮಿಸಿದರೆ, ಇಷ್ಟಪಟ್ಟರೆ ತನ್ನ ಶಾಪಗ್ರಸ್ಥ  ಜೀವನದಿಂದ  ಎಲ್ಲಿ ಕಿಪ್  ಸಾಯುವನೋ ಎಂದು ಭಯ ಪಡುವ, ಕಿಪ್ ಹಚ್ಚಿಟ್ಟ ದೀಪದಷ್ಟೇ  ನಿರ್ಮಲವಾದ, ಪ್ರೀತಿಸಿದಷ್ಟೇ  ಗಾಢವಾಗಿ  ರೋಗಿಯನ್ನು ಆರೈಸುವ ಹನಾ ಸಿನಿಮಾ ಮುಗಿದ ಮೇಲೂ ಕಾಡುತ್ತಾರೆ. 

ಸಿನಿಮಾ : ದ ಇಂಗ್ಲಿಷ್ ಪೆಶೆಂಟ್  (The English Patient)
ಭಾಷೆ : ಇಂಗ್ಲೀಶ್ 
ದೇಶ : ಅಮೇರಿಕ  
ನಿರ್ದೇಶನ : ಅಂಥೋಣಿ ಮಿಗೆಲ್ಲ್

Final Cut : ಸಿನಿಮಾದ ಒಂದು ಸಂಭಾಷಣೆ 
ನಾವು ಎಲ್ಲವನ್ನು ಒಳಗೊಂಡು ಸಾಯುತ್ತೇವೆ. ಪ್ರೇಮಿಗಳ ಶ್ರೀಮಂತಿಕೆ, ಬುಡಕಟ್ಟು, ನಾವು ಅನುಭವಿಸಿದ ಅಭಿರುಚಿ..  ನಾವು ದೇಹಗಳಾಗಿ ಮುಳುಗಿದ್ದೇವೆ ಹಾಗೂ  ಬುದ್ಧಿವಂತಿಕೆಯ ನದಿಯಲ್ಲಿ ಈಜಾಡಿದ್ದೇವೆ,  ಪಾತ್ರಗಳು ನಾವು, ಮರಗಳಂತೆ ಹತ್ತಿದ್ದೇವೆ, ಭಯವಾಗಿದ್ದೇವೆ,  ಯಾವುದೋ ಗುಹೆಗಳ೦ತೆ ಅಡಗಿ ಕುಳಿತಿದ್ದೇವೆ.  ನಾನು ಸತ್ತಾಗ ಇವೆಲ್ಲವೂ ನನ್ನ ನೆನಪಿನ  ಗುರುತಾಗಿರಲಿ ಎಂದು ಕೇಳಿಕೊಳ್ಳುತ್ತೇನೆ.  ನಾನು  ನೆನಪಾಗಿರಬೇಕಾಗಿರುವದು ಕೇವಲ  ನಕ್ಷೆಯ  ಮೇಲಿನ ರಸ್ತೆ ಕಟ್ಟಡಕ್ಕೆ ಹೆಸರಾಗಿರುವ ಶ್ರೀಮಂತ ಜನಗಳಂತಲ್ಲ , ಪ್ರಕೃತಿಯಲ್ಲಿನ ಗುರುತುಗಳಲ್ಲೊಂದಾಗಿ ನಾನಿರಬೇಕು. ನಾವು ಒಂದು ಜನಾಂಗದ ಪುಸ್ತಕಗಳು, ನಾವು ಒಂದು ಜನಾಂಗದ ಇತಿಹಾಸ. ನಾವು ಯಾರೊಬ್ಬರ  ಯಜಮಾನಿಕೆಯ  ಅಥವಾ ಸ್ವತ್ತಿನ ಅಭಿರುಚಿ ಅಥವಾ ಅನುಭವವಲ್ಲ. 

ಇಂತಿ, 
ಸಚೇತನ

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ನಾಗರಾಜ್ ಹರಪನಹಳ್ಳಿ.
ನಾಗರಾಜ್ ಹರಪನಹಳ್ಳಿ.
9 years ago

ಪ್ರೇಮದ ಹುಡುಕಾಟ ದಾಖಲಾಗುವಂತೆಯೇ ಕುತೂಹಲಕಾರಿಯಾಗಿದೆ ಬರಹ

Ramesh Bhat
Ramesh Bhat
9 years ago

Good narration.. added to my movie wishlist.. Thanks 🙂

2
0
Would love your thoughts, please comment.x
()
x