ಹೀಗೆ ಯೋಚಿಸುತ್ತಿದ್ದ ವಿಶ್ವನಿಗೆ ಸಮಯವಾಗಿದ್ದೆ ತಿಳಿಯಲಿಲ್ಲ, ಈ ಮಧ್ಯೆ ನರ್ಸ್ ಬಂದು ಎರಡು ಬಾರಿ ಡ್ರಿಪ್ಸ್ ಬದಲಾಯಿಸಿ ಹೋಗಿದ್ದಳು. ವಿಶ್ವ ಬೆಳಗ್ಗೆ ಸ್ಪಂದನ ಕೊಟ್ಟ ಮೊಬೈಲ್ ತೆಗೆಯಲು ಪ್ರಯತ್ನಿಸಿದ, ತುಂಬಾ ಕಷ್ಟವಾಯಿತು ಕೈಗಳಿಗೆ ಆದರೂ ತೆಗೆದು ಸಮಯ ನೋಡಿದ, ಸಂಜೆ ಐದಾಗಿತ್ತು ಸ್ಪಂದನ ಬರಬಹುದೆಂದು ಕಾದು ಕುಳಿತ, ಅವಳ ಸುಳಿವಿರಲಿಲ್ಲ, ಆರಕ್ಕೆ ವಿಶ್ವನಿಗೆ ಕರೆ ಮಾಡಿದ ಸ್ಪಂದನ ತನಗೆ ತುಂಬಾ ಕೆಲಸವಿರುವುದಾಗಿಯೂ ತಾನಿಂದು ಬರುವುದಿಲ್ಲವೆಂದು ಹೇಳಿದಳು, "ನಿನ್ನ ಸ್ನೇಹಿತ ಪ್ರಕಾಶ್ ಫೋನ್ ಮಾಡಿದ್ದರು ಬೆಳಿಗ್ಗೆ ನಿನ್ನ ಮೊಬೈಲಿಗೆ ಸಂಜೆ ಏಳಕ್ಕೆ ಬರುವುದಾಗಿ ಹೇಳಿದರು, ಅಂದು ಸಿಕ್ಕ ಪಾರ್ಸಲ್ ಅಲ್ಲೆ ಆಸ್ಪತ್ರೆಯ ರಿಸಪ್ಶನ್ನಿನಲ್ಲಿದೆ ತಿಳಿಸು ಅವರಿಗೆ ನಾನು ಬೆಳಗ್ಗೆ ಬರುತ್ತೇನೆ" ಎಂದು ಹೇಳಿದಳು. ಅವಳು ಬರುವುದಿಲ್ಲವೆಂಬ ನಿರಾಸೆಯಾದರೂ ತೋರ್ಪಡಿಸದೆ ಫೋನಿಟ್ಟ. ಯಾವ ಜನ್ಮದ ಋಣವೋ ನಾನಿವಳಿಗೆ, ನಾನು ಮಾಡಿದ ತಪ್ಪನ್ನೆಲ್ಲ ಮನ್ನಿಸಿ ಈಗ ಇಷ್ಟು ಕಾಳಜಿ ವಹಿಸುತ್ತಿದ್ದಾಳೆ. ಇವಳಂತವಳನ್ನು ಪಡೆದ ನಾನೇ ಧನ್ಯ ಎಂದುಕೊಂಡ, ಅರೆಗಳಿಗೆ ಅರೆ! ನಾನೆಲ್ಲಿ ಅವಳನ್ನು ಪಡೆದಿದ್ದೇನೆ, ಪಡೆದುಕೊಂಡಿದ್ದನ್ನು ನಾನೆ ಕಳೆದುಕೊಂಡೆ, ಮತ್ತೆ ಪಡೆಯಲಾರೆ. ಅವಳು ಇಷ್ಟು ಕಾಳಜಿ ವಹಿಸುತ್ತಿರುವುದನ್ನು ನೋಡಿದರೆ ಬಹಶಃ ಅವಳಿನ್ನು ನನ್ನನ್ನು ಪ್ರೀತಿಸುತ್ತಿರಬಹುದೇ? ಇಲ್ಲ ಅವಳಿಗೆ ನನ್ನ ಮೇಲೆ ಕನಿಕರವಿರಬಹುದಷ್ಟೆ. ಅವಳನ್ನು ಪಡೆಯುವ ಅದೃಷ್ಟ ನನಗಿಲ್ಲ. ಹೀಗೆ ಏನೇನೊ ಯೋಚಿಸುತ್ತ ಕುಳಿತಿದ್ದವನನ್ನು ಎಚ್ಚರಿಸಿದ್ದು ಪ್ರಕಾಶನ ದನಿ "ಬಂದವನೇ ಏನಾಯ್ತೋ ಯಾಕ್ ಹಿಂಗೆ ಮಾಡ್ಕೊಂಡ್ಯೋ, ಎರಡು ಮೂರು ದಿನ ಏನು ಗೊತ್ತಾಗ್ಲಿಲ್ಲ ನೆನ್ನೆ ನಿನ್ನ ಬಾಸ್ ಹೇಳಿದಾಗ್ಲೆ ಗೊತ್ತಾಗಿದ್ದು ನಾನು ಊರಲ್ಲಿ ಇರಲಿಲ್ಲ ರಾತ್ರೀನೇ ಬಂದದ್ದು ನಿನ್ನ ಬಾಸ್ ನಾಳೆ ಬರ್ತಾರಂತೆ ನೋಡೋಕೆ" ಎಂದು ಒಂದೇ ಸಮನೆ ಎಲ್ಲ ಉಸುರಿಬಿಟ್ಟ. ಅವನ ವರಸೆಗೆ ವಿಶ್ವನಿಗೆ ನಗು ಬಂತು, "ಏನೋ ಗ್ರಹಚಾರ ಬಿಡೋ ಅವಸರದಲ್ಲಿ ಬರ್ತಿದ್ದೆ ಹೀಗಾಯ್ತು" "ಹೊಡೆದವನು ಇನ್ನು ಸಿಕ್ಕಿಲ್ವಂತೆ ಪೋಲೀಸಿನವರು ನಾಳೆ ಬರ್ತಾರಂತೆ ವಿಚಾರಣೆಗೆ? " ಎಂದು ಕೇಳಿದ, ವಿಶ್ವನಿಗೆ ಮೊದಲ ಬಾರಿಗೆ ಇದು ಪೋಲಿಸ್ ಕೇಸ್ ಆಗಿದೆ ಎಂಬುದು ತಿಳಿಯಿತು, ಅಲ್ಲದೆ ಈ ವಿಷಯವನ್ನು ಸ್ಪಂದನ ಸಹ ಅವನಿಂದ ಮುಚ್ಚಿಟ್ಟದ್ದು ಆಶ್ಚರ್ಯವಾಯಿತು. "ಏನು ಗೊತ್ತಿಲ್ಲ ನನಗೆ ನೆನ್ನೆಯಷ್ಟೆ ಪ್ರಜ್ಞೆ ಬಂದಿದ್ದು ಯಾರು ಏನು ಸರಿಯಾಗಿ ಹೇಳುತ್ತಿಲ್ಲ" ಅಂದ, "ಸರಿ ನಿನನ್ನಿಲ್ಲಿ ಸೇರಿಸಿದವರು ಯಾರು ಯಾವದೋ ಹುಡುಗಿಯಂತೆ?" "ಹಾ ಸ್ಪಂದನ" ಎಂದ, "ಹೌದಾ ಯಾರಂತೆ ಹುಡುಗಿ?" ಎಂದಿ ಕೇಳಿದ ಪ್ರಕಾಶನಿಗೆ ವಿಶ್ವ ಎಲ್ಲವನ್ನು ವಿವರಿಸಿದ, ವಿಷಯ ಕೇಳಿದ ಪ್ರಕಾಶ ಮೂಕನಾದ, ಕೊಂಚ ಸಮಯದ ನಂತರ ಕೇಳಿದ "ಏನು? ಒಂದು ಕಾಲದಲ್ಲಿ ನಿನ್ನಿಂದ ಆಸಿಡ್ ದಾಳಿಗೆ ಒಳಗಾದ ಹುಡುಗಿ ಈಗ ನಿನ್ನ ರಕ್ಷಿಸುತ್ತಿದ್ದಾಳ, ಈಗಲೂ ನಿನ್ನ ಪ್ರೀತಿಸುತ್ತದ್ದಾಳೆಂದರೆ ಆಕೆ ನಿಜಕ್ಕೂ ಗ್ರೇಟ್" ಎಂದವನನ್ನು ತಡೆದು ಹೇಳಿದ ವಿಶ್"ಛೆ ಪ್ರೀತಿ ಗೀತಿ ಏನು ಇರಲ್ಲ ಕೇವಲ ಮಾನವೀಯ ದೃಷ್ಟಿಯಿಂದ ತಂದು ಸೇರಿಸಿದ್ದಾಳೆ ಅಷ್ಟೆ ಇಲ್ಲದೆಲ್ಲಾ ಕಲ್ಪಿಸಿಕೊಳ್ಳುವುದು ಬೇಡ" ಎಂದು. "ಸರಿ ಬಿಡು ಈಗ ನಿನ್ನ ಆರೋಗ್ಯದ ಬಗ್ಗೆ ಹೇಳು" ಎನ್ನುತ್ತಾ ಪ್ರಕಾಶ ಅದು ಇದು ಮಾತನಾಡಿ ಸುಮಾರು ಹೊತ್ತಿನ ಮೇಲೆ ಹೋದ. ಮಾರನೇ ದಿನ ಬೆಳಗ್ಗೆಯೇ ಬಂದಳು ಸ್ಪಂದನ, ವಿಶ್ವ ಕೇಳುವುದರಲ್ಲಿ ಅವಳೇ ಪೊಲೀಸು ಬರುತ್ತಿರುವ ಬಗ್ಗೆ ಕೇಸಿನ ಬಗ್ಗೆ ಎಲ್ಲಾ ಸ್ಪಷ್ಟನೆ ನೀಡಿದಳು, ಆ ನಂತರ ಅಂದು ವಿಶ್ವನ ಮಾಲೀಕರು, ಪೋಲಿಸರು ಎಲ್ಲಾ ಬಂದು ವಿಚಾರಿಸಿದರು, ಸಂಜೆಯ ಹೊತ್ತಿಗೆ ಹೆಚ್ಚಿನ ಮಾತಿಂದ ಆಯಾಸವಾದಂತೆ ತೋರಿತು ಅದನ್ನು ಗುರುತಿಸಿದ ಸ್ಪಂದನ ಅವನಿಗೆ ಊಟ ನೀಡಿ ಮಲಗಿಸಿ ಮಾರನೇ ದಿನ ಬರುವುದಾಗಿ ಹೇಳಿ ಹೊರಟಳು, ಹೀಗೆ ಐದಾರು ದಿನಗಳು ಉರುಳಿದವು, ವಿಶ್ವ ಗುಣಮುಖನಾದ, ಕಾಲು ಕೈ ಕೊಂಚ ನೋವಿದ್ದರೂ, ನಡೆಯಲು ತೊಂದರೆ ಇರಲಿಲ್ಲ, ಇನ್ನು ವಾರದಲ್ಲಿ ಪೂರ್ತಿಯಾಗಿ ವಾಸಿ ಆಗುವುದೆಂದು ಹೇಳಿದ ಡಾಕ್ಟರ್ ವಿಶ್ವನನ್ನು ಡಿಸ್ಚಾರ್ಜ್ ಮಾಡಿದರು, ಅವನನ್ನು ಪ್ರಕಾಶ ತನ್ನ ರೂಮಿಗೆ ಕರೆದುಕೊಂಡು ಹೋದ, ಸ್ಪಂದನಾ ಆಗಾಗ ಅಲ್ಲಿಗೆ ಹೋಗಿ ನೋಡಿಕೊಂಡು ಬರುತ್ತದ್ದಳು ವಿಶ್ವನನ್ನು, ಇಷ್ಟು ದಿನಗಳಲ್ಲಿ ವಿಶ್ವನ ಸದ್ಯದ ಪರಿಸ್ಥಿತಿಯ ಬಗ್ಗೆ ಸ್ಪಂದನಾಳಿಗೆ ಚೆನ್ನಾಗಿ ಅರಿವಿಗೆ ಬಂದಿತ್ತು ಆತನಲ್ಲಿ ಮೊದಲಿಗೂ ಈಗಲಿಗೂ ತುಂಬಾ ವ್ಯತ್ಯಾಸ ಕಂಡಿತು, ಆದರೆ ಒಂದು ಮಾತ್ರ ಅವಳ ಅರಿವಿಗೆ ಬಂದಿತ್ತು, ಅವನಿನ್ನು ತನ್ನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾನೆಂಬುದು ಅವಳಿಗೆ ತಿಳಿದರೂ ತಿಳಿಯದಂತಿದ್ದುಬಿಟ್ಟಳು. ಅವನು ಈಗ ಮಾಡುತ್ತಿರುವ ಕೆಲಸವನ್ನು ವಿರೋಧಿಸಿದಳು, ಅಷ್ಟೆಲ್ಲ ಓದಿ ಈಗ ಇಂಥ ಕೆಲಸ ಮಾಡೋದ ಅದೇ ಫೀಲ್ಡ್ನಲ್ಲಿ ಯಾಕೆ ಕೆಲಸ ಹುಡುಕಬಾರದು ಎಂದು ಕೇಳಿದಳು, ಅದಕ್ಕೆ ತನಗೆ ಅನುಭವವಿಲ್ಲದ ಕಾರಣ ಇಲ್ಲೀವರೆಗೂ ತುಂಬಾ ಗ್ಯಾಪ್ ಆದ್ದರಿಂದ ಯಾರು ಕೆಲಸ ಕೊಡುವುದಿಲ್ಲ ಎಂದು ಹೇಳಿದ ವಿಶ್ವ. ಸರಿ ಎಂದು ಸುಮ್ಮನಾದಳು, ಆದರೆ ತನಗೆ ತಿಳಿದವರೊಬ್ಬರ ಬಳಿ ಮಾತನಾಡಿ ಅವರ ತಮ್ಮನ ಅಪಾರೆಲ್ಸ್ ಇಂಡಸ್ಟ್ರಿಯಲ್ಲಿ ವಿಶ್ವನಿಗೊಂದು ಕೆಲಸ ಕೊಡಿಸಲು ಕೇಳಿದಳು, ಅವರು ಸಂದರ್ಶನಕ್ಕೆ ಬರುವಂತೆ ಹೇಳಿದರು, ಅಂದು ಧೃಡಮನಸ್ಸಿನಿಂದ ಸಂದರ್ಶನಕ್ಕೆ ಹೋದ ವಿಶ್ವ , ಅವನ ಚಿತ್ರಕಲಾ ಮತ್ತು ಕಲಾರಚನೆಯನ್ನು ನೋಡಿದ ಸಂದರ್ಶಕರು ನಿಜಕ್ಕೂ ಹರ್ಷಿತರಾದರು, ಅವನಿಗೆ ಡಿಸೈನಿಂಗ್ ಡಿಪಾರ್ಟ್ಮೆಂಟಿನ ಅಸಿಸ್ಟೆಂಟ್ ಇಂಚಾರ್ಜ್ ಕೆಲಸ ನೀಡಿದರು. ಒಳ್ಳೆಯ ಸಂಬಳ ಸಹ ನಿಗಧಿಯಾಯಿತು, ವಿಷಯ ಕೇಳಿ ತುಂಬ ಸಂತೋಷಪಟ್ಟವಳು ಸ್ಪಂದನ, ಅಂದು ಸಿಕ್ಕ ವಿಶ್ವ "ಇದೆಲ್ಲವೂ ನಿನ್ನಿಂದಲೇ ಸಾಧ್ಯವಾಯಿತು ತುಂಬಾ ಥ್ಯಾಂಕ್ಸ್" ಎಂದ "ನನ್ನದು ಪ್ರಯತ್ನ ಅಷ್ಟೆ ಪರಿಶ್ರಮ ನಿನ್ನದು, ನಿನ್ನಲ್ಲಿದ್ದ ಕಲೆಯೇ ನಿನ್ನನ್ನು ರಕ್ಷಿಸಿದೆ, ಆದರೆ ಆಗ ನೀನು ಇದರ ಸದುಪಯೋಗ ಪಡಿಸಿಕೊಳ್ಳಲಿಲ್ಲವಷ್ಟೆ" ಎಂದಳು, ವಿಶ್ವನಿಗೆ ಅವಳ ಮಾತು ಕೇಳಿ ಮಾತು ಬಾರದಾಯಿತು, ಅವಳೆದುರು ತಾನು ತುಂಬ ಚಿಕ್ಕವನಾದ ಭಾವನೆ ಹುಟ್ಟಿತು.
******
ಇದಾದ ಮೇಲೆ ವಿಶ್ವನಿಗೆ ಅವಳ ಮೇಲಿನ ಪ್ರೀತಿ ಇನ್ನು ಹೆಚ್ಚಾಯಿತು, ಹೇಗಾದರೂ ಅವಳಿಗೆ ವಿಷಯ ತಿಳಿಸಬೇಕು, ಅವಳು ಒಪ್ಪುತ್ತಾಳೋ ಇಲ್ಲವೋ ಎಂದು ಕೊಳ್ಳುತ್ತಿದ್ದ, ಒಂದು ದಿನ ಸಂಜೆ ಬೇಟಿಯಾದಾಗ "ಸ್ಪಂದನ ನಾನು ನಿನಗೊಂದು ವಿಷಯ ಹೇಳಬೇಕು" ಎಂದ, ಅಷ್ಟರಲ್ಲಿ ಸ್ಪಂದನ " ಹೌದು ನಾನು ನಿನಗೊಂದು ವಿಷಯ ಹೇಳಬೇಕು ಮರೆತೆಬಿಟ್ಟಿದ್ದೆ, ನಾನು ಮುಂದಿನ ವಾರ ಅಮೆರಿಕಾಗೆ ಹೊರಡಲಿದ್ದೇನೆ, ನನ್ನ ಕಂಪನಿಯವರೆ ಪ್ರಮೋಟ್ ಮಾಡಿ ಕಳಿಸುತ್ತಿದ್ದಾರೆ ನನಗೆಷ್ಟು ಖುಷಿ ಆಗ್ತಿದೆ ಗೊತ್ತಾ" ಎಂದಳು, ವಿಶ್ವನಿಗೆ ಸಿಡಿಲೆರಗಿದಂತಾಯಿತು, ಆಘಾತವನ್ನು ಮುಚ್ಚಿಟ್ಟು " ಕಂಗ್ರಾಟ್ಸ್ " ಎಂದ, "ಸರಿ ನೀನೇನೋ ಹೇಳಬೇಕೆಂದಲ್ಲ ಹೇಳು" "ಏನು ಇಲ್ಲ" ಎಂದು ಸುಮ್ಮನಾದ. ಅದಾದ ವಾರಕ್ಕೆ ಸ್ಪಂದನ ಹೊರಡಲು ಸಿದ್ದವಾದಳು, ವಿಶ್ವನೊಂದಿಗೆ ಅವಳ ಸ್ನೇಹಿತರು, ಕುಟುಂಬದವರು ಎಲ್ಲಾ ಬಂದಿದ್ದರು ಅವಳನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ, ಎಲ್ಲರೊಡನೆಯೂ ಮಾತನಾಡಿದ ಬಳಿಕ ವಿಶ್ವನನ್ನು ಏಕಾಂತದಲ್ಲಿ ಬೇಟಿಯಾದಳು, ವಿಶ್ವನಿಗೆ ಹೇಳಲೋ ಬೇಡವೋ ಎಂಬ ಗೊಂದಲ, ಅಷ್ಟರಲ್ಲಿ ಅವಳೇ ಎಂದಳು " ಅಂದು ಏನೋ ಹೇಳಬೇಕು ಎಂದಲ್ಲ ಹೇಳು" ಅವನು ತಡವರಿಸುತ್ತಿದ್ದನ್ನು ನೋಡಿ ಅವಳೆ ಹೇಳಿದಳು "ಬಹುಶಃ ನೀನು ನನ್ನ ಪ್ರೀತಿಸುತ್ತರಬಹುದು ಅದನ್ನೆ ಹೇಳಬೇಕೆಂದುಕೊಂಡೆನೋ ಅಲ್ವಾ" ಎಂದಳು, ವಿಶ್ವ ಹೌದೆಂಬಂತೆ ತಲೆಯಾಡಿಸಿದ, "ನಿನಗೆ ಹೇಗನ್ನಿಸುತ್ತೆ ವಿಶ್ವ ನಾನು ಮತ್ತೆ ನಿನ್ನನ್ನು ಪ್ರೀತಿಸ್ತೀನಿ ಅಂಥಾ, ನನ್ನಲ್ಲಿದ್ದ ಪ್ರೀತಿನ ಎಂದೋ ಸಾಯಿಸಿಬಿಟ್ಟೆ ನೀನು, ಅಂದು ನಿನ್ನ ಮನೆಯವರ ಬಳಿ ಸುಳ್ಳು ಹೇಳಿದೆಯಲ್ಲಾ ಅಂದೆ ಸಾಯಿಸಿದೆ, ನನ್ನ ದಾರಿಗಟ್ಟಿ ಹಿಂಸಿಸಿದೆಯಲ್ಲ ಅಂದೇ ಸತ್ತು ಹೋಯಿತು ಆ ಪ್ರೀತಿ, ನನ್ನ ಮೇಲೆ ಆಸಿಡ್ ಹಾಕಿದೆಯಲ್ಲ ಅಂದೆ ಮಣ್ಣಾಯಿತು ಆ ಪ್ರೀತಿ, ಆಗೆಲ್ಲ ನಾನೆಷ್ಟು ನರಳಿದ್ದೆ ಅನ್ನೋದು ನಿನಗೆ ಗೊತ್ತಿಲ್ಲ, ನಿನಗೆ ಆಕ್ಸಿಡೆಂಟ್ ಆದಾಗ ಒಮ್ಮೆ ಅನಿಸಿತು, ಛೇ ನಾನೇಕೆ ಇವನನ್ನು ನೋಡಬೇಕು ಅಂತ ಅದು ಕ್ಷಣಿಕವಷ್ಟೆ, ಮತ್ತೆ ನಿನ್ನನ್ನು ಆಸ್ಪತ್ರೆಗೆ ಸೇರಿಸಿದೆ, ಅದು ಪ್ರೀತಿಯಿಂದಲ್ಲ ಮಾನವತೆಯಿಂದ, ಕನಿಕರದಿಂದ, ನಿನಗೆ ಕೆಲಸ ಕೊಡಿಸಿದ್ದು, ನನ್ನ ಸ್ವಾರ್ಥಕ್ಕೆ , ಅಂದರೆ ಅಂದು ನಾನು ಮಾಡದ ತಪ್ಪಿಗೆ ನೀನು ನನಗೆ ಅಂಟಿಸಿದ್ದೆಯಲ್ಲ ಕಳಂಕ, ನಿನ್ನನ್ನು ದೋಚಿದವಳೆಂದು, ಅದನ್ನು ನಿವಾರಿಸಿಕೊಳ್ಳಲು, ಇನ್ನಾದರೂ ನಿನ್ನವರ ಜೊತೆ ನೆಮ್ಮದಿಯಾಗಿರು, ನಿನಗಾಗಿ ಎಲ್ಲೋ ಒಬ್ಬಳು ಕಾಯುತ್ತಿರುತ್ತಾಳೆ ಅವಳ ಕೈ ಹಿಡಿದು ಕೈ ಬಿಡದೆ ನಡೆಸು, ನಾವಿಬ್ಬರೂ ಒಳ್ಳೆಯ ಸ್ನೇಹಿತರಂತಿರೋಣ, ಬರ್ತೇನೆ " ಎಂದು ಹೇಳಿ ಹೊರಟಳು, ವಿಶ್ವ ಅವಳು ಹೋದ ದಾರಿಯತ್ತಲೇ ನೋಡುತ್ತ ಶಿಲೆಯಂತೆ ನಿಂತ, ಅವಳ ದೃಷ್ಟಿಯಲ್ಲಿ ಕೊನೆವರೆಗೂ ಪ್ರೇಮಖೈದಿಯಾಗೆ ಉಳಿದುಹೋದ…
****ಮುಕ್ತಾಯ****