ಪ್ರೇಮಖೈದಿ-೨: ಅಭಿ ಸಾರಿಕೆ

ಸ್ಪಂದನ ಅವನೊಂದಿಗೆ ಮಾತಾನಾಡಲು ನಿಲ್ಲಿಸಿದ ಬಳಿಕ ವಿಶ್ವನಿಗೆ ಹುಚ್ಚು ಹಿಡಿದಂತೆನಿಸಿತು, ಹೇಗಾದರೂ ಅವಳ ಸ್ನೇಹ ಮತ್ತೆ ಬೇಕೆನಿಸಿತು. ಅವತ್ತಿಗೆ ಸ್ಪಂದನಳ ಪರೀಕ್ಷೆ ಮುಗಿದಿತ್ತು. ಇಷ್ಟು ದಿವಸಗಳ ಪರೀಕ್ಷೆಯ ಗುಂಗಲ್ಲಿ ವಿಶ್ವನನ್ನು ಸ್ವಲ್ಪಮಟ್ಟಿಗೆ ಮರೆಯಲು ಸಾಧ್ಯವಾಗಿದ್ದರೂ ಪೂರ್ತಿ ಮರೆತಿರಲಿಲ್ಲ, ಹೇಗಿರುವನೋ ಏನೋ ಎಂದುಕೊಳ್ಳುತ್ತ ಊರಿಗೆ ಹೊರಡುವ ತಯಾರಿಯಲ್ಲಿದ್ದಳು, ಇನ್ನೇನು ಬಸ್ ನಿಲ್ದಾಣ ತಲುಪುವ ವೇಳೆಗೆ ಧುತ್ತನೆ ಪ್ರತ್ಯಕ್ಷನಾದ ವಿಶ್ವ, ಕೈಯಲ್ಲಿ ಪುಟ್ಟ ಕವರ್ ಇತ್ತು, ಸ್ಪಂದನಳನ್ನು ನೋಡಿ ಮುಗುಳ್ನಕ್ಕು ಆದರೆ ಇವಳು ನಗಲಿಲ್ಲ, ಅವನೇ ಮಾತಿಗಿಳಿದ, "ದಯವಿಟ್ಟು ನನ್ನನ್ನು ಕ್ಷಮಿಸು ನಾನು ಹೇಳಿದ್ದೆಲ್ಲವೂ ಸತ್ಯವೇ, ಹಾಗೆ ನೀನು ನೋಡಿದ್ದು ಸತ್ಯವೇ ನಾನು ಅವರ ಸ್ನೇಹದಲ್ಲಿರುವುದು ನಿಜವೇ, ನನಗೆ ಎಲ್ಲ ಕೆಟ್ಟ ಚಟಗಳು ಇವೆ, ಆದರೆ ನಾನು ಕೆಟ್ಟವನಲ್ಲ, ನನ್ನ ಬುದ್ಧಿ ನನ್ನ ಕೈ ಸೇರುವ ಮುನ್ನವೇ ನಾನು ಇವರ ಸಹವಾಸದಲ್ಲಿದ್ದೆ, ಅದು ನನ್ನ ಒಬ್ಬಂಟಿತನವನ್ನು ನಿವಾರಿಸಲು, ಆದರೆ ನಿನ್ನ ಪರಿಚಯ ಆದಮೇಲೆ ಇದ್ಯಾವುದು ನನಗೆ ಬೇಡವೆನಿಸುತ್ತೆ, ಬದುಕು ಹೀಗೆ ಇರಬೇಕು ಅದಕ್ಕೊಂದು ಗುರಿ ನಿದರ್ಶನ ಬೇಕು ಎಂದು ನಾನು ಕಲಿತದ್ದು ನಿನ್ನಿಂದ, ಅದೇಕೋ ನೀನಂದು ಕೋಪಿಸಿಕೊಂಡು ಹೋದಾಗಿನಿಂದ, ನಾನೇನೋ ಕಳೆದುಕೊಂಡೆ ಅನ್ನಿಸುತ್ತೆ, ಯಾವುದರಲ್ಲೂ ಆಸ್ಥೆ ಇಲ್ಲ, ನೀನಿಲ್ದೆ ನಾನೇನು ಅಲ್ಲ ಅನ್ನಿಸೋಕೆ ಶುರುವಾಗಿದೆ, ಇಷ್ಟು ದಿನ ನಿನ್ನೊಂದಿಗಿದ್ದದ್ದು ಸ್ನೇಹ ಎಂದುಕೊಂಡಿದ್ದೆ, ಆದರೆ ಈ ಸ್ನೇಹ ಎಂದೋ ಒಮ್ಮೆ ದೂರವಾದರೆ ನಾನು ಉಳಿಯಲಾರೆ ಅನ್ಸುತ್ತೆ, ಈ ಸ್ನೇಹ ನನಗೆ ಜೀವನಪರ್ಯಂತ ಬೇಕು, ನೀನು ಕೊನೆವರೆಗೂ ನಂಜೊತೆ ಇರಬೇಕು ಆಗಲೇ ನಾನೊಬ್ಬ ಮನುಷ್ಯನಾಗಿರ್ತೇನೆ, ನಾನು ನಿನ್ನ ಮನಸಾರೆ ಪ್ರೀತಿಸ್ತೇನೆ, ನಿನಗಾಗಿ ಆ ಸ್ನೇಹಿತರನ್ನು,  ಕೆಟ್ಟ ಚಟಗಳನ್ನು ಎಲ್ಲ ಬಿಡ್ತೇನೆ, ಪ್ಲೀಸ್ ಕೊನೆವರೆಗೂ ನಂಜೊತೆಗಿರ್ತೀಯಾ?" ಎಂದು ಒಂದೇ ಸಮನೆ ಮನಸ್ಸಿನ ಭಾವನೆಗಳೆಲ್ಲವನ್ನು ಹೇಳಿ ಅವಳ ತನ್ನ ಕೈಲಿದ್ದ ಪಟ್ಟಣ ಹಿಡಿದ, ಸ್ಪಂದನಳಿಗೆ ಮಾತೇ ಹೊರಡಲಿಲ್ಲ,  ಅವನು ತನ್ನನ್ನು ಪ್ರೀತಿಸುತ್ತಿರಬಹುದೆಂಬ ಅನುಮಾನವಿದ್ದರೂ, ಇಷ್ಟು ನೇರವಾಗಿ ಹೇಳಬಹುದೆಂದು ಎಣಿಸಿರಲಿಲ್ಲ, ಅಷ್ಟರಲ್ಲಿ ಬಸ್ ಬಂದಿದ್ದು ನೋಡಿ ಅವನ ಕೈಯೊಳಗಿನ ಪಟ್ಟಣ ಕಸಿದುಕೊಂಡು ಓಡಿ ಹೋಗಿ ಬಸ್ ಹತ್ತಿದಳು, ಒಮ್ಮೆಯೂ ವಿಶ್ವನತ್ತ ತಿರುಗಿ ನೋಡಲಿಲ್ಲ, ವಿಶ್ವ ಮತ್ತೆ ಗೊಂದಲದಲ್ಲಿ ಬಿದ್ದ.

ಊರು ತಲುಪಿದ ಸ್ಪಂದನ ಮೊದಲು ಮಾಡಿದ ಕೆಲಸ ವಿಶ್ವ ಕೊಟ್ಟ ಪಟ್ಟಣವನ್ನು ತೆಗೆದು ನೋಡಿದ್ದು, ಅದರಲ್ಲಿದ್ದುದು ಅವಳದೇ ಚಿತ್ರ ಎಷ್ಟು ಸುಂದರವಾಗಿ ಬರೆದಿದ್ದನೆಂದರೆ, ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿರುವಂತೆ ಭಾಸವಾಯಿತು ಸ್ಪಂದನಳಿಗೆ, ವಿಶ್ವನ ಪ್ರೀತಿ ನಿಜವೆಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಂತಿತ್ತು ಆ ಚಿತ್ರ. ವಿಶ್ವನೊಂದಿಗೆ ತಕ್ಷಣವೇ ಮಾತನಾಡಬೇಕೆನಿಸಿತು. ತಾನು ಅವನನ್ನು ಪ್ರೀತಿಸುತ್ತೇನೆಂದು ಹೇಳಬೇಕೆನಿಸಿತು ಅವಳಿಗೆ, ಆದರೆ ಹೇಳಲಿಲ್ಲ, ತಾನು ಊರಿನಿಂದ ಹಿಂತಿರುಗಿದ ಮೇಲೆ ಹೇಳಬೇಕು, ಅಲ್ಲದೆ ಮುಖ್ಯವಾಗಿ ಅವನನ್ನು ಈ ಪ್ರೀತಿಯ ನೆಪದಲ್ಲಾದರೂ ಅವನ ಕೆಟ್ಟ ಗುಣಗಳಿಂದ ದೂರ ಮಾಡಬೇಕು, ಅವನ ಪ್ರತಿಭೆಯನ್ನು ಬೆಳೆಸಬೇಕು, ಅವನೊಂದು ಒಳ್ಳೆಯ ಕೆಲಸಕ್ಕೆ ಸೇರಬೇಕು, ತನ್ನ ಓದು ಮುಗಿದ ಮನೆಗೆ ಕರೆತಂದು ಅಪ್ಪ ಅಮ್ಮನಿಗೆ ಈ ವಿಚಾರ ತಿಳಿಸಿ ಇಬ್ಬರು ಮದುವೆಯಾಗಬೇಕು ಹೀಗೆ ಏನೇನೋ ಆಲೋಚನೆಗಳಲ್ಲಿ ತನ್ನ ಲೋಕದಲ್ಲೆ ಮುಳುಗಿದ್ದ ಸ್ಪಂದನಳಿಗೆ ರಜ ಕಳೆದದ್ದೆ ತಿಳಿಯಲಿಲ್ಲ, ವಿಶ್ವನನ್ನು ಕಾಣುವ ಆತುರದಲ್ಲಿ ಓಡೋಡಿ ಬಂದಳು ಬೆಂಗಳೂರಿಗೆ,  ಆದರೆ ಅವಳು ಬಂದು ಮೂರು ದಿನವಾದರೂ ವಿಶ್ವನ ಸುಳಿವಿಲ್ಲ, ಕಾಲೇಜು ಸಹ ತೆರೆಯಿತು ಆದರೂ ವಿಶ್ವ ಇರಲಿಲ್ಲ, ಅವನ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು ಏನು ತಿಳಿಯದೆ ಒದ್ದಾಡಿದಳು ಸ್ಪಂದನ. ನಾಲ್ಕನೇ ದಿನ ಬಂದ ವಿಶ್ವನನ್ನು ನೋಡಿ ಆಶ್ಚರ್ಯವಾಯಿತು ಸ್ಪಂದನಳಿಗೆ, ಅವಳೆ ಅವನನ್ನು ಮಾತನಾಡಬೇಕು ಎಂದು ಕಾಲೇಜಿನ ಪಾರ್ಕಿನೊಳಗೆ ಕರೆದೊಯ್ದಳು, "ಏನಾಯ್ತು ವಿಶ್ವ ಯಾಕೆ ಒಂದು ರೀತಿ ಇದ್ದೀಯಾ?  ಹುಷಾರಿಲ್ವ? " ಎಂದು ಕೇಳಿದ್ದೆ ಒಮ್ಮೆಲೇ ಅವಳ ಮಡಿಲ ಮೇಲೆ ತಲೆ ಇಟ್ಟು ಮಗುವಿನಂತೆ ಅತ್ತುಬಿಟ್ಟ. ಸ್ಪಂದನಳಿಗೆ ಏನು ಮಾಡಬೇಕೊ ತೋಚಲಿಲ್ಲ. ಬಹಶಃ ಕುಟುಂಬ ತೊಂದರೆ ಇರಬಹುದು ಎಂದು ಕೊಂಡಳು ಅದೇ ನಿಜವಾಗಿತ್ತು, ಅಂದು ವಿಶ್ವ ಮನೆಯಲ್ಲಿ ತೀರಾ ರಂಪಾಟ ಮಾಡಿಕೊಂಡು ಬಂದಿದ್ದ, ಅಪ್ಪನ ಜೇಬಿನಿಂದ ಎರಡು ಸಾವಿರ ಕದ್ದು ತನ್ನ ಉಪಯೋಗಕ್ಕೆ ಬಳಸಿಕೊಂಡಿದ್ದ, ಅಲ್ಲದೆ ತಂದೆ ಕೇಳಿದ್ದಕ್ಕೆ ಎದುರುವಾದಿಸಿದ್ದ, ಬೇಸರಗೊಂಡ ತಾಯಿ ಕೋಪದಲ್ಲಿ ಹೊಡೆದಿದ್ದಳು, ಆದರೆ ಇದೆಲ್ಲವನ್ನು ಅವನು ಸ್ಪಂದನಳಿಂದ ಮುಚ್ಚಿಟ್ಟು ಕೇವಲ ತನ್ನ ಮೇಲೆ ಕನಿಕರ ಹುಟ್ಟುವಂತೆ ಕಾರಣಗಳನ್ನು ಹೇಳಿದ, ತಾಯಿ, ತಂದೆಗೆ ತಮ್ಮನೇ ಮುಖ್ಯವೆಂದು ತನ್ನನ್ನು ತೀರ ಕೇವಲವಾಗಿ ಕಾಣುತ್ತಾರೆಂದು, ಇದರಿಂದ ಬೇಸರಗೊಂಡು ವಾದಿಸಿದ್ದಕ್ಕೆ, ಹೊಡೆದರು ಎಂದು ಹೇಳಿದ.ಸ್ಪಂದನ ಅವನ ಮಾತುಗಳನ್ನು ನಂಬಿ ಬಿಟ್ಟಳು. ಅಂದು ಅವನ ತಲೆ ಸವರಿ ತಾನು ಪ್ರೀತಿಸುತ್ತಿರುವ ವಿಷಯ ತಿಳಿಸಿ ಕಳಿಸಿದಳು. ವಿಶ್ವನಿಗೆ ಆಕಾಶ ಮೂರೇ ಗೇಣು ಎಂಬಂತಾಯಿತು, ಇದಾದ ನಂತರ ಸ್ಪಂದನಳನ್ನು ಇಂಪ್ರೆಸ್ ಮಾಡಲು, ತನ್ನ ಬಗ್ಗೆ ಸಿಂಪಥಿ ಪಡೆಯಲು ಇನ್ನಷ್ಟು ಸುಳ್ಳುಗಳನ್ನು ಹೇಳುತ್ತಾ ಹೋದ, ಅವನ ಪ್ರಕಾರ ಇದೆಲ್ಲವೂ ಸರಿಯಿತ್ತು . ಸ್ಪಂದನಗಳ ಪ್ರೀತಿಗಾಗಿ ಹೇಳಿದ ಸುಳ್ಳು ತಪ್ಪೇನಲ್ಲ ಎಂದು ತನ್ನೊಳಗೆ ವಾದಿಸತೊಡಗಿದ.

ಇದ್ಯಾವುದರ ಅರಿವು ಸ್ಪಂದನಾಳಿಗಿರಲಿಲ್ಲ, ಅವನು ತಾನು ಹೇಳಿದಂತೆಯೇ ನಡೆಯುತ್ತಿದ್ದಾನೆ, ಸ್ನೇಹಿತರ ಸಹವಾಸ, ಕೆಟ್ಟ ಚಟ ಎಲ್ಲವನ್ನೂ ಬಿಟ್ಟಿದ್ದಾನೆ ಎಂದೇ ಆಕೆ ಧೃಡವಾಗಿ ನಂಬಿದ್ದಳು, ನಂಬುವಂತೆ ಮಾಡಿದ್ದ ವಿಶ್ವ, ಒಂದು ಸಂಜೆ ಫೋನ್ ಮಾಡಿದ ವಿಶ್ವ ತಾನು ಡಿಸ್ಟಿಂಕ್ಷನ್ನಲ್ಲಿ ಪಾಸಾಗಿರುವುದಾಗಿ ತಿಳಿಸಿದ, ಇತ್ತ ಸ್ಪಂದನ ಸಹ ಡಿಸ್ಟಿಂಕ್ಷನ್ ಗಳಿಸಿದ್ದಳು, ಆದರೆ ತನ್ನ ಫಲಿತಾಂಶಕ್ಕಿಂತ ಅವನ ಫಲಿತಾಂಶವೇ ಅವಳಿಗೆ ಹೆಚ್ಚು ಖುಷಿ ನೀಡಿತ್ತು, ಇದರ ಹಿಂದಿನ ಗುಟ್ಟು ಪಾಪ ಅವಳಿಗೇಗೆ ತಿಳಿಯಬೇಕು, ಇದಕ್ಕಾಗಿ ಅವನು ತಾಯಿಯ ಒಡವೆ ಕದ್ದು ಲಂಚ ನೀಡಿ ಪಾಸಾಗಿದ್ದನ್ನು ಅವಳಿಗ್ಯಾರು ಹೇಳಬೇಕು. ಇದೆಲ್ಲಕ್ಕಿಂತ ವಿಶ್ವ ಮಾಡಿದ ದೊಡ್ಡ ತಪ್ಪೆಂದರೆ ಈ ವಿಷಯಗಳಲ್ಲಿ ಸಂಬಂಧವೇ ಇಲ್ಲದ ಸ್ಪಂದನಳನ್ನು ಸಿಲುಕಿಸಿದ್ದು, ಸ್ನೇಹಿತರೊಂದಿಗೆಲ್ಲ ತಾನು ಪ್ರೀತಿಸುತ್ತಿರುವ ಹುಡುಗಿ ಬಡವಿ, ಅವಳ ಕಾಲೇಜು ಫೀಸು ನಾನೆ ಕಟ್ಟಬೇಕು, ಅವಳಿಗೆ ಅದು ಕೊಡಿಸಬೇಕು, ಇದು ಕೊಡಿಸಬೇಕು  ಎಂದೆಲ್ಲಾ ಹೇಳಿ ಸಾಲ ಮಾಡಿದ್ದ ಇದನ್ನೆ ನಿಜವೆಂದು ನಂಬಿದ ಸ್ನೇಹಿತರು ಇದನ್ನು ಅವನ ತಂದೆ ತಾಯಿಗೆ ತಿಳಿಸಿದರು, ಆ ಹುಡುಗಿಗಾಗಿಯೇ ವಿಶ್ವ ಇಷ್ಟೆಲ್ಲಾ ಮಾಡುತ್ತಿರುವುದು, ಅವಳೇ ಇವನನ್ನು ಸುಲಿಗೆ ಮಾಡುತ್ತಿದ್ದಾಳೆ ಎಂದೆಲ್ಲಾ ಹಬ್ಬಿಸಿದರು, ಅಸಲಿಗೆ ಸ್ಪಂದನ ಒಂದು ದಿನಕ್ಕೂ ಅವನನ್ನು ಏನು ಕೇಳಿದವಳಲ್ಲ, ಅವನೊಂದಿಗೆ ಇತರ ಹುಡುಗಿಯರಂತೆ ಪಾರ್ಕ್ ಸಿನಿಮಾ ಎಂದು ಸುತ್ತಿದವಳಲ್ಲ, ಎಂದಾದರೂ ಹೊರಗೆ ಹೋದರೆ ಅರ್ಧ ಖರ್ಚನ್ನು ಪ್ರಾಮಾಣಿಕವಾಗಿ ಭರಿಸುತ್ತಿದ್ದಳು ಅವನಿಂದ ಏನನ್ನು ಅಪೇಕ್ಷೆ ಪಡುತ್ತಿರಲಿಲ್ಲ, ಅವನು ಉಡುಗೊರೆ ತಂದರೆ ಸಹಿಸುತ್ತಿರಲಿಲ್ಲ "ಮೊದಲು ನೀನು ನೆಲೆಗೆ ನಿಲ್ಲು ಅಲ್ಲಿಯವರೆಗೆ ಇಂಥಹದನ್ನೆಲ್ಲ ತರಬೇಡ" ಎಂದು ನಿಷ್ಠುರವಾಗಿ ಬೈಯುತ್ತಿದ್ದಳು. ಒಮ್ಮೆ ಇದ್ದಕ್ಕಿದ್ದಂತೆ ಬಂದ ವಿಶ್ವ ತಾನು ಮನೆಯಲ್ಲಿರಲು ಆಗುವುದಿಲ್ಲ, ಇದಕ್ಕಾಗಿ ಬೇರೆ ಊರಿನಲ್ಲಿ ಕೆಲಸ ಹುಡುಕಿದ್ದೇನೆ, ಅಲ್ಲಿಗೆ ಹೋಗುತ್ತೇನೆ ಆಗಾಗ ನಿನ್ನನ್ನು ಭೇಟಿಯಾಗುತ್ತೇನೆ ಎಂದು ಹೇಳಿದ, ಅಗಲಿಕೆಯ ನೆನಪಿನಿಂದ ದುಃಖಿಸಿದ, ಸ್ಪಂದನಳಿಗೂ ದುಃಖವಾದರೂ ಆತ ಮೊದಲು ನೆಲೆ ನಿಲ್ಲುವುದು ಮುಖ್ಯ ಇಲ್ಲಿ ಸಾಧ್ಯವಿಲ್ಲದಿದ್ದರೆ ಅಲ್ಲೇ ಇರಲಿ ಎಂದುಕೊಂಡಳು. ಅದರಂತೆ ವಿಶ್ವ ಧಾರವಾಡದಲ್ಲಿರುವುದಾಗಿ ಅವಳನ್ನು ನಂಬಿಸಿದ್ದ ಆದರೆ ಅವನು ಯಾವ ಊರಿಗೂ ಹೋಗಿರಲಿಲ್ಲ, ಇದೂ ಸಹ ಸುಳ್ಳೇ ಆಗಿತ್ತು, ಈ ನೆಪದಲ್ಲಿ ಅವಳಿಗೆ ಇನ್ನಷ್ಟು ಸನಿಹವಾಗಬಹುದು ಎಂದುಕೊಂಡ.

ಅಂದು ಅವಳ ಹುಟ್ಟಿದ ಹಬ್ಬವಿತ್ತು.  ವಿಶ್ವನ ಸಲುವಾಗಿ ಊರಿಗೆ ಸಹ ಹೋಗಲಿಲ್ಲ, ಅಂದು ಬಂದ ವಿಶ್ವ ಅವಳಿಗೆ ಒಂದು ದುಬಾರಿ ಉಡುಗೊರೆಯಾಗಿ ಕೈ ಗಡಿಯಾರ ಕೊಟ್ಟ, ಇದನ್ನು ತನ್ನ ಮೊದಲ ಸಂಬಳದಲ್ಲಿ ತಂದಿರುವುದಾಗಿಯೂ ಯಾವುದೇ ಕಾರಣಕ್ಕೂ ಬೇಡವೆನ್ನಬಾರದೆಂದು ಆಗ್ರಹ ಪಡಿಸಿದ, ಈ ಬಾರಿ ಅವಳಿಗೂ ಅವನನ್ನು ನೋಯಿಸಲು ಮನಸ್ಸು ಬಾರದೆ ತೆಗೆದುಕೊಂಡಳು, ಅಂದು ಪೂರ್ತಿ ಅವನೊಡನೆ ಸುತ್ತಿದಳು, ಮಾರನೇ ದಿನ ಮತ್ತೆ ತಾನು ಹೊರಡುತ್ತಿರುವುದಾಗಿ ತಿಳಿಸಿದ ವಿಶ್ವ. ಭಾರವಾದ ಮನದಿಂದಲೇ ಬೀಳ್ಕೊಟ್ಟಳು. ಇದಾಗಿ ಸುಮಾರು ಮೂರು ದಿನಗಳ ನಂತರ ಸ್ಪಂದನಾಳ ಮೊಬೈಲಿಗೆ ಒಂದು ಕರೆ ಬಂತು. ಆ ಕಡೆಯಿಂದ ಹೆಂಗಸೊಬ್ಬಳು ಮಾತನಾಡುತ್ತಿದ್ದಳು, ಸ್ಪಂದನಾಳ ಮಾತಿಗೆ ಅವಕಾಶವೇ ಕೊಡದಂತೆ, ಅವ್ಯಾಚ ಶಬ್ದಗಳಿಂದ ನಿಂದಿಸಿದಳು, ತನ್ನ ಮಗನನ್ನು ಹಾಳು ಮಾಡುತ್ತಿರುವ ನೀನು ನಾಶವಾಗುತ್ತೀಯ ಎಂದೆಲ್ಲ ಶಾಪ ಹಾಕಿದಳು, ಅವಳು ಪಡುತ್ತಿದ್ದ ನೋವು ಅಳುವಿನ ಸದ್ದಿನಲ್ಲೆ ವ್ಯಕ್ತಬಾಗುತ್ತಿತ್ತು, ಸಮಾಧನದಿಂದಲೇ ಕೇಳಿದ ಸ್ಪಂದನ "ನೋಡಿ ಅಮ್ಮ ನೀವು ನನ್ನ ಬಗ್ಗೆ ತಪ್ಪು ತಿಳಿದಿದ್ದೀರ ಸಾಧ್ಯವಾದರೆ ಒಮ್ಮೆ ಭೇಟಿ ಮಾಡಿ" ಎಂದಳು ಆದರೂ ಆಕೆಯ ಕೋಪ ತಣ್ಣಗಾದಂತೆ ಕಾಣಲಿಲ್ಲ, ಸ್ಪಂದನ ಆಕೆಗೆ ಫೋನಿನಲ್ಲೆ ವಿವರಿಸಲು ಪ್ರಯತ್ನಿಸಿದಳು, ಆದರೆ ಆಕೆಗೆ ಅಷ್ಟು ವ್ಯವಧಾನವಿರಲಿಲ್ಲ, ಬಾಯಿಗೆ ಬಂದಂತೆ ಮಾತನಾಡಿ ಫೋನಿಟ್ಟಳು, ಆದರೆ ಇದರಿಂದ ಅವಳಿಗೆ ಕೆಲವು ಸತ್ಯಗಳು ಅರಿವಾದವು. ಪೂರ್ತಿಯಾಗಿ ವಿಷಯ ತಿಳಿಯಲು ಮತ್ತೆ ಅದೇ ನಂಬರಿಗೆ ಪ್ರಯತ್ನಿಸಿದಳು ಈ ಬಾರಿ ಫೋನೆತ್ತಿದ್ದು ವಿಶ್ವನ ತಮ್ಮ ಎಂದು ತಿಳಿಯಿತು, ಅವನು ಸ್ವಲ್ಪ ಸಮಾಧಾನದಿಂದ ಮಾತನಾಡಿದ, ವಿಶ್ವ ಮಾಡುತ್ತಿರುವುದನ್ನೆಲ್ಲಾ ಹೇಳಿದ, ಆದರೂ ಆತನ ಮಾತಿನಲ್ಲೂ ಸ್ಪಂದನಾಳಿಗಾಗೆ ಅವನು ಇಷ್ಟೆಲ್ಲಾ ಮಾಡಿದ ಎಂಬ ಧೋರಣೆಯಿತ್ತು, ವಿಶ್ವ ಬೆಂಗಳೂರಿನಲ್ಲೆ ಇರುವುದೆಂದು ತಿಳಿಯಿತು, ಅವನು ಈವರೆಗೂ ಸ್ಪಂದನಾಳ ಹೆಸರಿನಲ್ಲಿ ಮಾಡಿದ ಸಾಲದ ಪಟ್ಟಿಯೇ ತಿಳಿಸಿದ, ಅಲ್ಲದೆ ನಿನ್ನ ಹುಟ್ಟುಹಬ್ಬಕ್ಕೆ ತಂದ ಉಡುಗೊರೆ, ವಿಶ್ವನ ಚಿಕ್ಕಮ್ಮನ ಮದುವೆಗಾಗಿ ತಂದದ್ದು ಎಂದು ಹೇಳಿದ. ಅದೆಲ್ಲ ಕೇಳಿ ಸ್ಪಂದನಳಿಗೆ ಈ ಕ್ಷಣವೇ ಭೂಮಿ ಬಾಯ್ತೆರೆದು ನನ್ನ ನುಂಗಬಾರದೇ ಎನಿಸಿತು. ಇನ್ನು ತಾನೇನೆ ಹೇಳಿದರೂ ಅವರು ನಂಬಲಾರರೂ ಎಂದೆನಿಸಿತು, ಕೊನೆಯಲ್ಲಿ "ನೋಡಿ ನಾನೇನೆ ಹೇಳಿದರೂ ನೀವು ನಂಬುವ ಸ್ಥಿತಿಯಲ್ಲಿಲ್ಲ,ನಿಮಗಿಂತ ಹೆಚ್ಚಿನ ಮೋಸ ಹೋಗಿರುವವಳು ನಾನು, ಅವನು ನೀಡಿದ ಉಡುಗೊರೆ ನಾನಿನ್ನು ಬಳಸಿಲ್ಲ ಅದನ್ನು ನೀವು ತೆಗೆದುಕೊಂಡು ಹೋಗಬಹುದು, ಇನ್ನು ನಿಮ್ಮ ತಾಯಿಯ ಒಡವೆ ವಿಷಯವಾಗಲಿ ಮತ್ತೊಂದಾಗಲಿ ನನಗೆ ಗೊತ್ತಿಲ್ಲ" ಎಂದು ಹೇಳಿ ಫೋನಿಟ್ಟಳು. ಮುಂದೇನು ಮಾಡಬೇಕೋ ತಿಳಿಯಲಿಲ್ಲ ಇದೇ ಕೋಪದಲ್ಲಿ ವಿಶ್ವನಿಗೆ ಫೋನ್ ಮಾಡಿ ಹಿಗ್ಗಾಮುಗ್ಗಾ ಬೈದುಬಿಟ್ಟಳು, ಅವನ ಸೈಕೋ ಮನಸ್ಥಿತಿಯ ಬಗ್ಗೆ ಅವಳು ಯೋಚಿಸಲಿಲ್ಲ. ಇದಾದ ನಂತರ ರವಿ ಬಂದು ಅವನು ಕೊಟ್ಟ ಉಡುಗೊರೆ ತೆಗೆದುಕೊಂಡು ಹೋದ. ಆದರೆ ಅವಳು ಫೋನ್ ಮಾಡಿದ ದಿನವೇ ವಿಶ್ವ ಮಧ್ಯದೊಂದಿಗೆ ವಿಷ ಬೆರೆಸಿ ಕುಡಿದು ಆಸ್ಪತ್ರೆ ಸೇರಿದ ವಿಷಯ ತಿಳಿಸಲಿಲ್ಲ ಇದು ಅವಳಿಗೂ ಗೊತ್ತಾಗಲಿಲ್ಲ, ತಾನು ಮೋಸ ಹೋದ ಬಗ್ಗೆ ಕೊರಗುತ್ತಲೇ ದಿನ ಕಳೆಯುತ್ತಿದ್ದಳು, ಇಷ್ಟರಲ್ಲಿ ಅವಳ  ಪರೀಕ್ಷೆ ಬಂದದ್ದರಿಂದ ಓದಿನ ಕಡೆ ಗಮನ ಹರಿಸಿದಳು, ಇತ್ತ ವಿಶ್ವ ಆಸ್ಪತ್ರೆ ಸೇರಿದ ಮೇಲೆ ಅವನ ಮನೆಯವರೆಲ್ಲರೂ ಹೀಗಾದರೂ ಇವನನ್ನು ತಮ್ಮ ದಾರಿಗೆ ತೆಗೆದುಕೊಳ್ಳಬೇಕು, ಮತ್ತೆ ಆ ಹುಡುಗಿಯ ಬಳಿ ಹೋಗದಂತೆ ಮಾಡಬೇಕು ಎಂದುಕೊಳ್ಳುತ್ತ, ಅವನಿಗೆ ಪ್ರಜ್ಞೆ ಬಂದಾಗಿನಿಂದಲೇ ಸ್ಪಂದನಾಳ ಕೆಟ್ಟದನ್ನು ತುಂಬಾಲಾರಂಬಿಸಿದರು, "ಅವಳಿಗೆ ನೀನು ವಿಷ ಕುಡಿದದ್ದು ಗೊತ್ತು, ಆದರೂ ನಿನ್ನನ್ನು ನೋಡಲು ಬಂದಿಲ್ಲ, ಅಂಥವಳಿಗಾಗಿ ನೀನು ಇಷ್ಟೆಲ್ಲಾ ಮಾಡಿಕೊಂಡೆ, ನೀನು ಆಸ್ಪತ್ರೆ ಸೇರಿದ ಬಳಿಕ ಮತ್ತೆ ಫೋನ್ ಮಾಡಿ ನಿನ್ನ ಬಗ್ಗೆ ಇಲ್ಲಸಲ್ಲದ್ದೆಲ್ಲಾ ಹೇಳಿದಳು" ಎಂದೆಲ್ಲಾ ಹೇಳಿದರು, ಈಗಲೂ ಸಹ ವಿಶ್ವನಿಗೆ ತಾನು ಮಾಡಿದ ತಪ್ಪಿನ ಅರಿವಾಗುವುದರ ಬದಲು ಅವಳು ಬಿಟ್ಟದ್ದೆ ದೊಡ್ಡದಾಗಿ ಕಾಣಿಸುತ್ತಿತ್ತು, ಮನೆಯವರ ಮಾತೆ ನಿಜವೆನಿಸುತ್ತಿತ್ತು , ಆದರೆ ಅವಳನ್ನು ಪಡೆದರು ತೀರಬೇಕೆಂಬ ಹಠ ಮಾತ್ರ ಹೋಗಲಿಲ್ಲ. ಆಸ್ಪತ್ರೆಯಿಂದ ಬಂದೊಡನೆ ಅವಳಿಗೆ ಫೊನ್ ಮಾಡಿದ, ಅವನೆಂದು ತಿಳಿದ ಕೂಡಲೇ ಕಟ್ ಮಾಡಿದಳು, ಒಂದೆರಡು ದಿನ ತಪ್ಪಿಗಾಗಿ ಕ್ಷಮೆ ಕೇಳುವ ನಾಟಕವಾಡಿದ, ಅವಳಿಂದ ಯಾವುದೇ ರೆಸ್ಪಾನ್ಸ್ ಬರದಿದ್ದಾಗ ಕೆಟ್ಟ ಕೆಟ್ಟ ಸಂದೇಶ ಕಲಿಸಲು ಶುರು ಮಾಡಿದ, ನೊಂದ ಸ್ಪಂದನ ನಂಬರ್ ಬದಲಾಯಿಸಿದಳು, ಹೀಗೆ ಮೂರು ತಿಂಗಳು ಕಳೆಯಿತು, ವಿಶ್ವ ಅವಳ ನಂಬರಿಗಾಗಿ ಪ್ರಯತ್ನಿಸುತ್ತಲೇ ಇದ್ದ, ಕ್ರಮೇಣ ಹುಷಾರಾದ ಬಳಿಕ ಅವಳ ಹಾಸ್ಟೆಲ್ ಬಳಿ ಕಾಲೇಜಿನ ಬಳಿ ಬಂದು ತೊಂದರೆ ಕೊಡಲಾರಂಭಿಸಿದ, ಅವಳಿಂದ ಬಲವಂತವಾಗಿ ಮೊಬೈಲ್ ಕಸಿದುಕೊಂಡು ನಂಬರ್ ಪಡೆದ ಒಟ್ಟು ಅವಳಿಗೆ ಚಿತ್ರಹಿಂಸೆ ಮಾಡತೊಡಗಿದ. ಅಷ್ಟೇ ಅಲ್ಲದೆ ಅಸಭ್ಯ ಸಂದೇಶಗಳಿಂದ ಚಾರಿತ್ರ್ಯ ವಧೆ ಸಹ ಆರಂಭಿಸಿದ. ಆದರೆ ಅವಳು ಯಾವುದಕ್ಕೂ ಬಗ್ಗಲಿಲ್ಲ, ಬಲವಂತವಾಗಿ ಮದುವೆ ಮಾಡಿಕೊಳ್ಳುವುದಾಗಿ ಬೆದರಿಸಿದ, ಆದರೂ ಬಗ್ಗಲಿಲ್ಲ. ಕೊನೆಗೆ ಒಂದು ತೀರ್ಮಾನಕ್ಕೆ ಬಂದ ತನಗೆ ಸಿಗದವಳು ಯಾರಿಗೂ ಸಿಗಬಾರದು ಅವಳು ಜೀವನ ಪೂರ್ತಿ ನರಳುವಂತೆ ಮಾಡುತ್ತೇನೆ ಎಂದು ಹಠ ತೊಟ್ಟ, 

*****

ಅಂದು ಸ್ಪಂದನಾಳ ಕೊನೆ ವರ್ಷದ ಪರೀಕ್ಷೆಯ ಕೊನೆ ದಿನ, ಕಳೆದ ಎರಡು ತಿಂಗಳಿಂದ ವಿಶ್ವನ ಹಿಂಸೆ ತಪ್ಪಿತ್ತು ಮಾನಸಿಕವಾಗಿ ಕೊಂಚ ನೆಮ್ಮದಿಯಾಗಿದ್ದಳು, ತೃಪ್ತಿಯಿಂದ ಪರೀಕ್ಷೆ ಬರೆದು ಊರಿಗೆ ಹೊರಡಬೇಕು ಎಂದುಕೊಳ್ಳುತ್ತಾ ಹಾಸ್ಟೆಲ್ ಕಡೆಗೆ ಹೊರಟಿದ್ದಳು ಕೈನಲ್ಲಿ ಅಂದಿನ ಪ್ರಾಕ್ಟಿಕಲ್ ಪರೀಕ್ಷೆಯ ಸಲಕರಣೆಗಳಿದ್ದ ಬ್ಯಾಗ್ ಒಂದಿತ್ತು, ದೂರದಲ್ಲಿ ಇವಳಿಗಾಗಿ ಹೊಂಚು ಹಾಕಿ ಕುಳಿತಿದ್ದ ವಿಷಯ ತಿಳಿದಿರಲಿಲ್ಲ, ಸುಮ್ಮನೆ ತಲೆತಗ್ಗಿಸಿ ನಡೆದು ಬರುತ್ತಿದ್ದಳು, ಹಿಂದಿನಿಂದ ಮೆಲ್ಲಗೆ ಬಂದ ವಿಶ್ವ ಅವಳ ಮುಂದೆ ಬಂದು ಆಸಿಡ್ ದಾಳಿ ನಡೆಸಿದ ಏನಾಗುತ್ತಿದೆಯೋ ತಿಳಿಯದೇ ಗಾಬರಿಯಿಂದ ಕೈಲಿದ್ದ ಬ್ಯಾಗನ್ನು ಮುಖಕ್ಕೆ ಅಡ್ಡವಿಡಿದಳು ಅಷ್ಟರಲ್ಲಿ ಅದರಲ್ಲಿದ್ಡ್ರಾಫ್ಟ್ ತಗುಲಿ ಅದೃಷ್ಟವಶಾತ್ ಬಾಟೆಲ್ ಕೆಳಗೆ ಆದರೆ ಅವಳ ಕೈ ಮತ್ತು ಕೊರಳಿಗೆ ಆಸಿಡ್ ಬಿದ್ದಿತು, ಅವಳು ಕಿರುಚಿದ್ದರಿಂದ ಮುಂದೆ ಹೋಗುತ್ತಿದ್ದ ಜನ ಇವಳತ್ತ ಓಡಿ ಬಂದರು, ಭಯಗೊಂಡ ವಿಶ್ವ ಅಲ್ಲಿಂದ ಓಡಿಹೋದ. ಅಷ್ಟೇ ಅಂದೆ ಅವಳನ್ನು ಅವನು ಕೊನೆಯ ಬಾರಿ ನೋಡಿದ್ದು, ಮತ್ತೆ ಅವಳೆಲ್ಲೂ ಕಾಣಲಿಲ್ಲ, ಇವನು ನೋಡುವ ಪ್ರಯತ್ನ ಮಾಡಲಿಲ್ಲ, ಇದಾದ ನಂತರ ಮತ್ತೆ ಮನೆಯಲ್ಲಿ ತನ್ನ ಹಳೆ ಚಾಳಿಯಿಂದ ಜಗಳ ಮಾಡಿಕೊಂಡು ಹೊರಬಂದ, ಅವನು ನಂಬಿದ್ದ ಸ್ನೇಹಿತರ್ಯಾರು ಅವನಿಗೆ ಆಸರೆ ನೀಡಲಿಲ್ಲ. ಹೀಗೆ ಅಲೆಯುತ್ತಿದ್ದಾಗ  ಪ್ರಕಾಶ್ ಎಂಬ ಒಳ್ಳೆ ಸ್ನೇಹಿತನ ಪರಿಚಯವಾಯಿತು  ಆತನೆ ಫ್ರೊಫೆಸಿನಲ್ ಕೊರಿಯರ್ ವಿಭಾಗದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಕೊಡಿಸಿದ, ಹೊರಗೆ ಬಂದ ಮೇಲೆ ಕಷ್ಟವೇನೆಂದು ಅರಿವಾಯಿತು, ತಾನು ಇಷ್ಟು ಮಾಡಿದ ತಪ್ಪಿನ ಪಶ್ಚಾತಾಪವಾಯಿತು, ತಾನೇನು ಕಳೆದುಕೊಂಡೆನೆದ್ದು ಅರಿವಾಯಿತು, ಈಗ ಸಿಕ್ಕ ವೃತ್ತಿಯನ್ನು ಪ್ರಾಮಾಣಿಕತೆಯಿಂದ ಮಾಡತೊಡಗಿದ. ಎರಡು ವರ್ಷಗಳಿಗಿಂತ ಹೆಚ್ಚಾಗಿತ್ತು ಸ್ಪಂದನಳನ್ನು ನೋಡಿ ಈಗ ಹೀಗೆ ಆಸ್ಪತ್ರೆಯಲ್ಲಿ ನೋಡಿದ.

ಮುಂದುವರೆಯುವುದು…


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x