ಪ್ರೇಮಖೈದಿ-೧: ಅಭಿ ಸಾರಿಕೆ

ವಿಶ್ವನಿಗೆ ಪ್ರಜ್ಞೆ ಬಂದಾಗ ತಾನೊಂದು ಆಸ್ಪತ್ರೆಯಲ್ಲಿರುವುದು ತಿಳಿಯಿತು,  ಎದ್ದು ಕುಳಿತುಕೊಳ್ಳಲು ಹೋದವನಿಗೆ, ತಲೆ ಭಾರವಾದಂತ ಅನುಭವ, ಬಲಗೈ, ಎರಡು ಕಾಲು, ತಲೆ ಪೂರ್ತಿ ಬ್ಯಾಂಡೇಜ್ ಮಾಡಿದ್ದರು, ತಕ್ಷಣಕ್ಕೆ ಅವನಿಗೆ ಯಾವುದು ಗುರುತಿಗೆ ಬರಲಿಲ್ಲ, ಎಷ್ಟು ದಿನವಾಗಿದೆಯೋ ನಾನಿಲ್ಲಿ ಬಂದು ಎಂದುಕೊಂಡ,  ನಿಧಾನವಾಗಿ ನಡೆದ ಘಟನೆ ನೆನೆಸಿಕೊಂಡ, ಅಂದು ಪಾರ್ಸಲ್ ಡೆಲಿವರಿ ಕೊಡಲು ಇಂದಿರಾನಗರದ ಕಡೆಗೆ ಹೊರಟಿದ್ದ, ಸಮಯ ಆಗಲೇ ಐದೂವರೆ ಇದೇ ಕೊನೆಯ ಡೆಲಿವರಿ, ಬೇಗ ಹಿಂದಿರುಗದಿದ್ದರೆ ಕೊರಿಯರ್ ಆಫೀಸು ಬಾಗಿಲು ಮುಚ್ಚುತ್ತಾರೆ, ಮತ್ತೆ ನಾಳೆ ಮ್ಯಾನೆಜರ್ನಿಂದ ಬೈಸಿಕೊಳ್ಳಬೇಕೆಂದು, ಗಾಡಿ ಎಂಬತ್ತರ ಸ್ಪೀಡಿನಲ್ಲಿ ಓಡಿಸುತ್ತಿದ್ದ, ಮೇಯೋಹಾಲ್ನಿಂದ ಎಡಕ್ಕೆ ತಿರುಗುವ ತಿರುವಿನಲ್ಲಿ ನಡೆಯಿತು ಆ ಅಪಘಾತ ಬಲದಿಂದ ಬಂದ ಕಾರು ಇವನ ಬೈಕಿಗೆ ಗುದ್ದಿತು, ಪಾರ್ಸಲ್ ಚೆಲ್ಲಪಿಲ್ಲಿಯಾಯಿತು, ಬೈಕ್ ಒಂದು ಬದಿಗೆ ಬಿತ್ತು , ಬಿದ್ದ ರಭಸಕ್ಕೆ ತಲೆಗಾದ ಪೆಟ್ಟು ಇವನ ಪ್ರಜ್ಞೆ ತಪ್ಪಿಸಿತ್ತು. ಇಷ್ಟೆ ಅವನಿಗೆ ನೆನಪಾದದ್ದು, ಯೋಚಿಸತೊಡಗಿದ ಯಾರು ನನ್ನ ಇಲ್ಲಿಗೆ ಕರೆತಂದರು, ಹೊರಗಡೆ ಯಾರಾದರೂ ಇದ್ದಾರೇನೋ ಎದ್ದು ಮಲಗಿದ್ದ ಜಾಗದಿಂದಲೇ ಬಗ್ಗಿ ನೋಡಲೆತ್ನಿಸಿದ ಯಾರು ಕಾಣಲಿಲ್ಲ. ಅದೇ ಸಮಯಕ್ಕೆ ಒಳಗೆ ಬಂದ ನರ್ಸ್ ಎಂದಳು " ಓಹ್ ನಿಮಗೆ ಪ್ರಜ್ಞೆ ಬಂತಾ? ಇರಿ ಡಾಕ್ಟರ್ ಕರೆಯುತ್ತೇನೆ" ಎಂದು ಹೊರಡಲಿದ್ದವಳನ್ನು "ಒಂದು ನಿಮಿಷ ನಿಲ್ಲಿ, ನಾನು ಹೇಗೆ ಇಲ್ಲಿಗೆ ಬಂದೆ, ಯಾರು ಕರೆ ತಂದರು, ಎಷ್ಟು ದಿನವಾಯಿತು ನಾನು ಬಂದು" ಎಂದು ಕೇಳಿದ. " ನೀವಿಲ್ಲಿ ಬಂದಾಗಲೇ ಮೂರು ದಿನವಾಯ್ತು, ಯಾರೋ ಹುಡುಗಿ ತಂದು ಇಲ್ಲಿ ಸೇರಿಸಿದ್ದು, ಆಕೆ ಸಮಯಕ್ಕೆ ಸರಿಯಾಗಿ ನಿಮ್ಮನ್ನು ಕರೆತರದಿದ್ದರೆ ನೀವು ಬದುಕುವ ಅವಕಾಶ ತುಂಬ ಕಮ್ಮಿ ಇತ್ತು ತಲೆಯಿಂದ ತುಂಬಾ ರಕ್ತ ಹೋಗಿತ್ತು, ಎರಟು ಬಾಟಲ್ ರಕ್ತ ಹಾಕಿದ್ದೇವೆ, ಆಕೆಯೇ ಅದನ್ನು ಅರೇಂಜ್ ಮಾಡಿದ್ದು, ಮೂರು ದಿನದಿಂದ ಅವರೇ ಇದ್ದರು ಇಲ್ಲಿ ಇಂದು ಬೆಳಗ್ಗೆಯಷ್ಟೆ ಮನೆಗೆ ಹೋದರೆಂದು ಕಾಣುತ್ತದೆ. ಸರಿ ಹೆಚ್ಚು ಮಾತನಾಡಬೇಡಿ , ನಾನು ಡಾಕ್ಟರ್ ಕರೆಯುತ್ತೇನೆ" ಎಂದು ನರ್ಸ್ ಹೊರಗೆ ಹೋದಳು. ವಿಶ್ವ ಯೋಚಿಸತೊಡಗಿದ "ಅರೆ ನನ್ನ ಬಗ್ಗೆ ಇಷ್ಟು ಕಾಳಜಿ ತೆಗೆದುಕೊಳ್ಳುತ್ತಿರುವರು ಯಾರು? ಅದು ಹುಡುಗಿ! ನನ್ನವರೆನಿಸಿಕೊಂಡವರನ್ನೆಲ್ಲ ನಾನೆ ದೂರ ಮಾಡಿಕೊಂಡಿರುವಾಗ ಇದು ಯಾರು?

-******

ಯಾರಿರಬಹುದು ಎಂಬ ಯೋಚನೆ ಕಾತರದಲ್ಲಿದ್ದ ವಿಶ್ವನಿಗೆ ಹಾಕಿದ್ದ ಹೈ ಡೋಸೇಜ್ ಮೆಡಿಸನಿಂದ ಯಾವಾಗ ನಿದ್ದೆ ಹತ್ತಿತ್ತೋ ತಿಳಿಯಲಿಲ್ಲ, ಎಚ್ಚರವಾದಾಗ ಪಕ್ಕದಲ್ಲಿ ಹೆಣ್ಣಿನ ಕೈಬಳೆ ಸದ್ದು "ಓಹ್ ಆಕೆ ಬಂದಿರಬಹುದು ಛೆ ನಾನೆಂಥ ದಡ್ಡ ನಿದ್ದೆ ಮಾಡಿಬಿಟ್ಟೆನಲ್ಲ " ಎಂದುಕೊಳ್ಳುತ್ತಾ ಪಕ್ಕಕ್ಕೆ ತಿರುಗಿದವನಿಗೆ ಮೊದಲು ಕಂಡದ್ದು ಎರಡು ಕೈಗಳು ಅದರಲ್ಲಿ ಬಲಗೈಯೊಂದಯ ಸುಟ್ಟು ಬೆಳ್ಳಗಾದ ಕಲೆಯನ್ನು ಎತ್ತಿ ತೋರಿಸುತ್ತಿತ್ತು, ನಂತರ ಕತ್ತಿನ ಬಲ ಭಾಗಕ್ಕೂ ಅಂಥದೇ ಒಂದು ಕಲೆ, ಆಕೆ ಮುಖಕ್ಕೆ ಪುಸ್ತಕವಿಡಿದು ಕುಳಿತಿದ್ದಳು, ವಿಶ್ವ ಒಮ್ಮೆ ಕೆಮ್ಮುವಂತೆ ನಟನೆ ಮಾಡಿದ. ಸದ್ದಿಗೆ ಆಕೆ ಮುಖದಿಂದ ಪುಸ್ತಕ ತೆಗೆದಳು. ಈಗ ನೋಡಿದವನಿಗೆ ಇನ್ನಿಲ್ಲದ ಆಘಾತ ಒಮ್ಮೆಲೇ "ಸ್ಪಂದನಾ..!" ಎಂದು ಉದ್ಗರಿಸಿದ. ಅವಳು ಇವನ ಆಶ್ಚರ್ಯವನ್ನು ಗಮನಿಸದವಳಂತೆ, ನಗುತ್ತಾ ಕೇಳಿದಳು "ಹೇಗಿದ್ದೀಯಾ ವಿಶ್ವ? ಸಾರಿ ನಿಂಗೆ ಪ್ರಜ್ಞೆ ಬಂದಾಗ ನಾನಿಲ್ಲಿರಲಿಲ್ಲ"ಎಂದಳು. "ನೀನು ಇಲ್ಲಿ! ನೀನೆನಾ ನನ್ನ ಕರ್ಕೊಬಂದಿದ್ದು?" " ಹಾ ಅಂದು ಆಕ್ಸಿಡೆಂಟ್ ಅದಾಗ ನನ್ನ ಕ್ಯಾಬ್ ಅದೇ ರಸ್ತೆಯಲ್ಲೇ ಬರ್ತಿತ್ತು, ಕಿಟಕಿಯಿಂದ ಆಕ್ಸಿಡೆಂಟ್ ನೋಡಿದೆ, ಬೈಕಿನ ಮೇಲಿದ್ದದ್ದು ನೀನೆ ಎಂಬ ಅನುಮಾನವಾಗಿ ಇಳಿದು ನೋಡಿದೆ, ಅಷ್ಟೊತ್ತಿಗೆ ನಿನಗೆ ಜ್ಞಾನವಿರಲಿಲ್ಲ ನನ್ನ ಸ್ನೇಹಿತನ ಸಹಾಯದಿಂದ ಇಲ್ಲಿಗೆ ಕರೆತಂದೆ" ಎಂದಳು. ವಿಶ್ವನಿಗೆ ಮಾತೆ ಹೊರಡಲಿಲ್ಲ, ಇದಾದ ಮೇಲೆ ಎಷ್ಟೋ ಹೊತ್ತು ಅದು ಇದು ಹರಟಿದಳು ಸ್ಪಂದನಾ, ತನ್ನ ಈಗಿನ ವೃತ್ತಿ ಬಗ್ಗೆ ಹೇಳಿದಳು, ವಿಶ್ವನ ಬಗ್ಗೆ ಕೇಳಿದಳು, ಏನೇನೋ ಮಾತಾಡುತ್ತಾ ಅವನನ್ನು ವಾಸ್ತವದಲ್ಲಿಡಲು ಯತ್ನಿಸುತ್ತಿರುವಂತೆ ಎನಿಸುತ್ತಿತ್ತು ಅವನಿಗೆ, ಆಶ್ಚರ್ಯವೆಂದರೆ ಇಷ್ಟೆಲ್ಲಾ ಮಾತುಗಳ ಮಧ್ಯೆ ಒಮ್ಮೆಯಾದರೂ ಅವಳು ಹಿಂದಿನ ನೆನಪನ್ನು ಕದಕಲಿಲ್ಲ, ಹೇಗೆ ಸಾಧ್ಯ ಇವಳಿಗೆ ನಾನು ನೀಡಿದ ಹಿಂಸೆಯೆಲ್ಲ ಮರೆತು ಹೀಗೆ ನನ್ನೊಡನಿರಲು ಹೇಗಾಗುತ್ತದೆ ಇವಳಿಗೆ, ಬಹುಶಃ ಸದ್ಯದ ಪರಿಸ್ಥಿತಿ ಹಾಗಿದೆ ಎಂದು ಸುಮ್ಮನಿದ್ದಾಳ? ಮುಂದೆ ಏನಾದರೂ ಕೇಳಬಹುದಾ? ಆದರೂ ಎಲ್ಲಿಂದ ಬಂತು ಇವಳಿಗೆ ಇಂಥಾ ಕ್ಷಮಾ ಗುಣ ಬೇರೆ ಹೆಣ್ಣಾಗಿದ್ದರೆ ನನ್ನೆಡೆ ತಿರುಗಿಯೂ ನೋಡುತ್ತಿರಲಿಲ್ಲವೇನೋ ಎಂದು ಯೋಚಿಸುತ್ತಿದ್ದ ವಿಶ್ವನನ್ನು ಸ್ಪಂದನಾಳೇ ವಾಸ್ತವಕ್ಕೆ ತಂದಳು " ಹೆಲೋ ಸರ್, ಎಲ್ಲಿದ್ದೀರ ಎದ್ದೇಳು ಊಟ ಮಾಡು ನನಗೆ ಹೊತ್ತಾಗುತ್ತೆ ಕತ್ತಲಾದರೆ ಹೋಗೋದು ಕಷ್ಟವಾಗುತ್ತೆ, ಇನ್ನು ಒಂದು ವಾರ ಇಲ್ಲೆ ಇರಬೇಕೆಂದು ಹೇಳಿದ್ದಾರೆ ಡಾಕ್ಟರ್. ನಾನು ರಾತ್ರಿ ಇರಲು ಸಾಧ್ಯವಿಲ್ಲ ಬೆಳಗ್ಗೇನೆ ಬರ್ತೇನೆ ಆಯ್ತ?" ಎಂದು ಅವಳೆ ತಂದ ಕ್ಯಾರಿಯರ್ ತೆಗೆದು ಅವನಿಗೆ ಊಟ ಮಾಡಿಸಿ ಹೊರಟಳು. ಹೊರಡುವಾಗ ಅವನ ಕೈಗೊಂದು ಮೊಬೈಲ್ ಕೊಟ್ಟು "ತಗೊ ನಿಂದೆ ಆಕ್ಸಿಡೆಂಟ್ ಆದ ಜಾಗದಲ್ಲಿ ಸಿಕ್ತು ರಿಪೇರಿ ಮಾಡಿಸಿದ್ದೇನೆ ಏನಾದ್ರು ಇದ್ರೆ ಕರೆ ಮಾಡು" ಎಂದು ಹೇಳಿ ಹೊರಟಳು. ಅವಳು ಹೋದತ್ತಲೇ ನೋಡುತ್ತಿದ್ದ ವಿಶ್ವನ ಕಣ್ಣಲ್ಲಿ ನೀರಿನ ಪೊರೆ ಎದ್ದು ಕಾಣುತ್ತಿತ್ತು. ನೆನಪಿನಾಳಕ್ಕೆ ಜಾರಿದ…

*****

ವಿಶ್ವ ಫ್ಯಾಶನ್ ಡಿಸೈನಿಂಗ್ನಲ್ಲಿ ಡಿಪ್ಲೊಮಾ ಓದುತ್ತಿದ್ದ, ಉತ್ತಮ ಚಿತ್ರಕಾರ, ಕಣ್ಣಲ್ಲಿ ನೋಡಿದ್ದನ್ನು ಕೈಯಲ್ಲಿ ಗೀಚುವ ನಿಸ್ಸೀಮ, ಅಪ್ಪ ಅಮ್ಮ ಓದಿದವರಲ್ಲ ಮಗ ಏನು ಮಾಡುತ್ತೇನೆಂದರೆ ಸರಿ ಎನ್ನುತ್ತಿದ್ದರು, ಅವನ ತಮ್ಮ ರವಿಗೆ ಹೃದಯದ ತೊಂದರೆ, ಹೀಗಾಗಿ ಅಪ್ಪ ಅಮ್ಮನ ಗಮನವೆಲ್ಲ ಹೆಚ್ಚು ರವಿಯ ಕಡೆಗೆ ಇದು ವಿಶ್ವನಿಗೆ ತಾರತಮ್ಯದಂತೆ ಕಾಣುತಿತ್ತು, ಚಿಕ್ಕಂದಿನಿಂದಲೂ ಅಜ್ಜಿಯ ಮನೆಯಲ್ಲಿ ಬೆಳೆದ ವಿಶ್ವ ತನ್ನ ಮನೆಗೆ ಬಂದದ್ದು ಹೈಸ್ಕೂಲಿಗೆ ಹೋಗುವಾಗ, ಹೀಗಾಗಿ ಮನೆಯಲ್ಲಿ ಯಾರು ಅವನೆಡೆಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ, ಎಲ್ಲರಿಗೂ ರವಿಯೇ ಮುಖ್ಯ ನಾನ್ಯಾರಿಗೂ ಬೇಕಿಲ್ಲ ಎಂಬ ಕೀಳರಿಮೆ, ಒಂಟಿ ಭಾವನೆ ವಿಶ್ವನನ್ನು ಹೊರಗಿನ ಸ್ನೇಹಿತರ ಜೊತೆ ಸೇರಲು ಪ್ರೇರೇಪಿಸುತ್ತಿತ್ತು, ಮನೆಯಲ್ಲಿ ಇರುವುದೇ ಕಮ್ಮಿ ಮಾಡಿದ, ಇತರ ಪುಡಾರಿಗಳೊಡನೆ ಸ್ನೇಹ ಬೆಳೆಸುತ್ತಾ ತನ್ನಲ್ಲಿದ್ದ ಕಲೆಗೆ ಸರಿಯಾಗಿ ನೀರೆರೆಯುವುದನ್ನು ಬಿಟ್ಟ. ಹತ್ತನೇ ತರಗತಿಯಲ್ಲಿ ಎರಡನೇ ದರ್ಜೆಯಲ್ಲಿ ಪಾಸಾದ, ನಂತರ ಫ್ಯಾಶನ್ ಡಿಸೈನ್ ಆಯ್ಕೆ ಮಾಡಿಕೊಂಡ. ಕಾಲೇಜಿನಲ್ಲೂ ಸಿಕ್ಕ ಪುಡಾರಿಗಳ ಸಂಗ ಸಿಗರೇಟು, ಮಧ್ಯದ ಸಹವಾಸವನ್ನು ಕಲಿಸಿದವು. ಎರಡು ಮೂರು ಹುಡುಗಿಯರ ಹಿಂದೆ ಬಿದ್ದು ಭಗ್ನ ಪ್ರೇಮಿ ಕೂಡ ಆಗಿದ್ದ. ಅವನ ಜೀವನ ಇದೇ ರೀತಿ ಸಾಗುತ್ತಿತ್ತು ಒಬ್ಬಳ ಆಗಮನ ಅವನ ಬದುಕಿನಲ್ಲಾಗುವವರೆಗೂ….

ಸ್ಪಂದನ ಆಗಿನ್ನು ಕಾಲೇಜಿನ ಮೆಟ್ಟಿಲು ಹೊಸ ಹೊಸ ಕನಸುಗಳು ಕಣ್ಣಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಬೇಕೆಂಬ ಬಯಕೆಯಿಂದ ಕಷ್ಟ ಪಟ್ಟು ಎಸ್ಸೆಸ್ಸೆಲ್ಸಿ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಳು, ಅದೇ ಮೆರಿಟ್ ಡಿಪ್ಲೊಮಾದಲ್ಲಿ ಕಂಪ್ಯೂಟರ್ ಸೈನ್ಸ್ ಗೆ ಸೀಟು ದೊರಕಿಸಿಕೊಂಡಿದ್ದಳು. ತಂದೆ-ತಾಯಿ ಊರಿನಲ್ಲಿದ್ದರು ಇಲ್ಲಿ ಅದೇ ಪಾಲಿಟೆಕ್ನಿಕ್ಕಿನ ಹಾಸ್ಟೆಲ್ನಲ್ಲಿ ವಾಸವಿದ್ದಳು.

ಒಮ್ಮೆ ಕಾಲೇಜಿಗೆ ರಜವಿದ್ದ ದಿನ ವಿಶ್ವ ಗೆಳೆಯರ ಜೊತೆ ಸೇರಿ ಕಾಲೇಜಿನ ಕ್ಯಾಂಪಸಿನಲ್ಲಿ ಸಿಗರೇಟು ಸೇದುತ್ತಿದ್ದರು, ಇದನ್ನು ನೋಡಿದ ಕಾಲೇಜಿನ ಗಾರ್ಡ್ ಓಡಿಸಿಕೊಂಡು ಬಂದರು ಅವರಿಂದ ತಪ್ಪಿಸಿಕೊಂಡು ಓಡಿ ಬರುವಾಗ ಚೆಲ್ಲಾಪಿಲ್ಲಿಯಾಗಿ  ಗರ್ಲ್ಸ್ ಹಾಸ್ಟೆಲಿನೊಳಗೆ ನುಗ್ಗಿದರು ಆಗಲೇ ವಿಶ್ವ ಸ್ಪಂದನಳನ್ನು ಮೊದಲ ಬಾರಿ ನೋಡಿದ್ದು, ಐದಡಿ ಎತ್ತರ ವಿಶ್ವನ ಎತ್ತರಕ್ಕೆ ಹೋಲಿಸಿದರೆ ಕುಳ್ಳಿಯೇ, ತೆಳ್ಳನೆಯ ಮೈಕಟ್ಟು , ಹಾಲು ಬಿಳುಪಲ್ಲದಿದ್ದರೂ ಗೋದಿ ಬಣ್ಣ, ಬಟ್ಟಲು ಕಂಗಳು, ಎಲ್ಲಕ್ಕಿಂತ ಅವನಿಗೆ ಹೆಚ್ಚು ಹಿಡಿಸಿದ್ದು, ಅವಳ ರೇಷಿಮೆಯಂತ ಉದ್ದನೆಯ ಕೂದಲು ಆಗ ತಾನೆ ಸ್ನಾನ ಮಾಡಿಬಂದ ಒದ್ದೆ ಕೂದಲಿನಲ್ಲಿ ಸ್ಪಂದನ ಅವನ ಕಣ್ಣಿಗೆ ಮಂಜಿನಲ್ಲಿ ತೊಳೆದ ಮಲ್ಲಿಗೆಯಂತೆ ಕಂಡಳು. ಅಲ್ಲಿಂದ ಬಂದ ಮೇಲು ಎರಡು ಮೂರು ದಿನ ಹಾಸ್ಟೆಲಿನ ಕಾಂಪೌಂಡಿನ ಮುಂದೆ ಸುತ್ತಿದ ಆದರೆ ಅವಳು ಕಾಣಲಿಲ್ಲ ಹುಡುಕಿ ಸುಮ್ಮನಾದ

*****

ವಿಶ್ವನ ಸ್ನೇಹಿತ ಶಶಿಧರ ಮೊಬೈಲ್ ಶಾಪ್ ಇಟ್ಟಿದ್ದ, ಕಾಲೇಜಿನ ಬಳಿ ಇದ್ದ ಮೊಬೈಲ್ ಶಾಪ್ ವಿಶ್ವ ಮತ್ತು ಅವನ ಸ್ನೇಹಿತರ ಅಡ್ಡ. ವಿಶ್ವ ಎರಡನೇ ಬಾರಿ ಸ್ಪಂದನಳನ್ನು ನೋಡಿದ್ದು ಇಲ್ಲಿಯೇ, ಅಂದು ವಿಶ್ವ ಶಾಪಿಗೆ ಬರುತ್ತಿದ್ದಾಗ ಸ್ಪಂದನ ಅಲ್ಲಿಂದ ಹೊರ ಹೋಗುವುದನ್ನು ನೋಡಿದ, ಅಂಗಡಿಗೆ ಹೋದ ಮೇಲೆ ತಿಳಿದದ್ದು ಸ್ಪಂದನ ಸಿಮ್ ಕೊಳ್ಳಲು ಬಂದಿದ್ದಳೆಂದು ಅಲ್ಲೆ ಇದ್ದ ಅವಳ ಅಪ್ಲಿಕೇಷನ್ನಿನ ಪ್ರತಿಯನ್ನು ಸ್ನೇಹಿತನಿಗೆ ತಿಳಿಯದಂತೆ ತೆಗೆದುಕೊಂಡ, ಇದರೊಂದಿಗೆ ವಿಶ್ವನಿಗೆ ಸ್ಪಂದನಳ ಪೂರ್ತಿ ವಿವರ ತಿಳಿಯಿತು. ಸಿಮ್ ಆಕ್ಟೀವ್ ಆಗುವುದಕ್ಕೆ ಸ್ಪಂದನಳಿಗಿಂತ ವಿಶ್ವನೇ ಹೆಚ್ಚು ಖಾತರನಾಗಿದ್ದ. 

ಅಂದು ಸ್ಪಂದನಳ ಹೊಸ ಮೊಬೈಲ್ಗೆ ಒಂದು ಮೆಸೇಜ್ ಬಂದಿತು. ಆಶ್ಚರ್ಯದಿಂದ ನೋಡಿದಳು ಯಾವುದೋ ಅನಾಮಧೇಯ ನಂಬರ್ ಯಾರು ಎಂದು ರಿಪ್ಲೈ ಕಳಿಸಿದಳು, ಅವನಿಂದ "ಸಾರಿ ಬೈ ಮಿಸ್ಟೇಕ್" ಎಂದು ಉತ್ತರ ಬಂತು "ಇಟ್ಸ್ ಓಕೆ " ಎಂದು ಟೈಪ್ ಮಾಡಿ ಸುಮ್ಮನಾದಳು. ಸಂಜೆಗೆ ಅದೇ ನಂಬರ್ ನಿಂದ ಮತ್ತೊಂದು ಮೆಸೇಜ್ "ಛಿಚಿಟಿ u be ಜಿಡಿieಟಿಜ ತಿiಣh me?" ರಿಪ್ಲೈ ಮಾಡುವ ಗೋಜಿಗೆ ಹೋಗಲಿಲ್ಲ ಸುಮ್ಮನಾದಳು, ಮತ್ತೊಂದು ಮೆಸೇಜ್ ಬಂತು, ಅವಳು ರಿಪ್ಲೈ ಕೊಡುವವರೆಗೂ ಮೆಸೇಜ್ಗಳ ಸುರಿಮಳೆಯಾಗುತ್ತಿತ್ತು, ಕೊನೆಗೆ ಕೇಳಿದಳು "ಯಾರು ನೀವು, ನಾನು ನಿಮಗೆ ಗೊತ್ತಾ, ನನ್ನ ನಂಬರ್ ಹೇಗೆ ನಿಜ ಹೇಳಿದ್ರೆ ಮಾತಾಡ್ತೀನಿ" "ನಿಜ ಹೇಳುದ್ರೆ ಮಾತಾಡ್ತೀರ, ನಂಜೊತೆ ಸ್ನೇಹ ಬೆಳೆಸ್ತೀರ?" "ಹಾ ಮೊದಲು ನಿಜ ಹೇಳಿ" ಅಂದಳು. "ನಾನು ನಿಮ್ಮದೇ ಕಾಲೇಜಿನ ಸೀನಿಯರ್ ಸ್ಟುಡೆಂಟ್, ಫ್ಯಾಷನ್ ಡಿಸೈನಿಂಗಲ್ಲಿ ಓದ್ತಾಯಿದ್ದೀನಿ, ನಿಮ್ಮನ್ನು ಸುಮಾರು ಬಾರಿ ನೋಡಿದೀನಿ, ಏಕೋ ಮಾತಾನಾಡಬೇಕು ಅನ್ನಿಸ್ತು ಅದಕ್ಕೆ ಮೆಸೇಜ್ ಮಾಡ್ದೆ" ಎಂದು ಆಕಡೆಯಿಂದ ಉತ್ತರ ಬಂತು. ಇವಳಿಗೆ ಏನು ಹೇಳಬೇಕೋ ತಿಳಿಯಲಿಲ್ಲ, "ನಿಮ್ಮ ಹೆಸರು?" "ವಿಶ್ವ" "ಸರಿ, ಆದರೆ ನನಗೆ ಈ ಚಾಟಿಂಗ್ ಎಲ್ಲ ಹಿಡಿಸಲ್ಲ, ಬೇಕಾದರೆ ಎದುರಿಗೆ ಸಿಕ್ಕಾಗ ನೀವಾಗೆ ಮಾತಾಡಿಸಿ, ಸ್ನೇಹಕ್ಕೆ ಅಭ್ಯಂತರವಿಲ್ಲ" ಎಂದು ಮೆಸೇಜ್ ಮಾಡುವುದನ್ನು ನಿಲ್ಲಿಸಿದಳು. ವಿಶ್ವನಿಗೆ ತಿಳಿಯಿತು ಇವಳು ಸುಲಭಾವಾಗಿ ಬಗ್ಗುವ ಬಡಪೆಟ್ಟಿಗೆ ಅಲ್ಲ ಎಂದು. ಇದಾದ ಮೇಲೆ ವಿಶ್ವ ಆಗಾಗ ಫಾರ್ವರ್ಡ್ ಮೆಸೇಜ್ ಕಳಿಸುವುದು ಇವಳು ನೋಡಿ ಸುಮ್ಮನಾಗುವುದು ಇದೇ ನಡೆದಿತ್ತು. ಅಂದು ಸ್ಪಂದನ ಕಾಲೇಜಿನ ಕ್ಯಾಂಟೀನಿನಲ್ಲಿ ಗೆಳತಿಯರ ಜೊತೆ ಕುಳಿತಿದ್ದಳು, ಗೆಳೆಯರ ಜೊತೆ ಬಂದ ವಿಶ್ವ ಅವಳನ್ನು ನೋಡಿ ಕೆಲಸವಿದೆ ಎಂದು ಗೆಳೆಯರನ್ನು ಸಾಗುಹಾಕಿ ಸ್ಪಂದನಳಿಗೆ ಕರೆ ಮಾಡಿದ, "ನಾನು ನಿಮ್ಮ ಹಿಂದೆಯೇ ಇದ್ದೇನೆ, ನೀವೇ ಹೇಳಿದ್ರಲ್ಲ ನೋಡಿದಾಗ ಮಾತಾಡಿಸಿ ಅಂತ" ಎಂದ, ಸ್ಪಂದನ ತಿರುಗಿ ನೋಡಿದಳು, ಸುಮಾರು ಐದು ಮುಕ್ಕಾಲು ಅಡಿ ಎತ್ತರದ, ಒಳ್ಳೆಯ ಮೈಕಟ್ಟಿನ ಗುಂಗರು ಕೂದಲಿನ ಯುವಕ ಇವಳತ್ತಲೇ ನೋಡಿ ಸನ್ನೆ ಮಾಡಿದ. ಇವನೇ ಇರಬಹುದೆಂದು ಮುಜುಗರದಿಂದಲೇ ಅತ್ತ ನಡೆದಳು.

*****

ಒಮ್ಮೆ ಭೇಟಿಯಾದ ಬಳಿಕ ವಿಶ್ವ ನಿರಂತರವಾಗಿ ಸ್ಪಂದನಳಿಗೆ ಕರೆ ಮಾಡ ತೊಡಗಿದ. ಸ್ಪಂದನ ಸಹ ಸ್ನೇಹ ಪೂರ್ವಕವಾಗಿ ಮಾತನಾಡತೊಡಗಿದಳು, ಹೀಗೆ ಇಬ್ಬರ ಸ್ನೇಹ ಹತ್ತಿರವಾಯಿತು, ವಿಶ್ವ ತನ್ನೆಲ್ಲ ಖಾಸಗಿ ವಿಷಯಗಳನ್ನು ಸ್ಪಂದನಳೊಡನೆ ಹಂಚಿಕೊಳ್ಳುತ್ತಿದ್ದ, ತನ್ನ ಮನೆಯಲ್ಲಿ ತನ್ನನ್ನು ನೋಡುವ ರೀತಿ ತನ್ನ ಒಂಟಿ ಎಂಬ ಭಾವನೆ ಎಲ್ಲವನ್ನು ಹೇಳಿಕೊಂಡ, ತನಗಿರುವ ಕೆಟ್ಟ ಚಟಗಳನ್ನು ಬಿಟ್ಟು ಮಿಕ್ಕೆಲ್ಲವನ್ನು ತೋಡಿಕೊಂಡ. ಅದೇ ರೀತಿ ಸ್ಪಂದನ ಸಹ ತನ್ನ ಜೀವನದ ಆಸೆ, ಧ್ಯೇಯ ಎಲ್ಲವನ್ನು ಹೇಳಿಕೊಂಡಳು, ಅವಳ ಮಾತು ಜೀವನೋತ್ಸಾಹ ವಿಶ್ವನಿಗೆ ಹೊಸ ಹುರುಪು ನೀಡುತ್ತಿತ್ತು, ಯಾವಾಗಲೂ ಅವಳ ಮಾತು ಕೇಳಬೇಕೆನಿಸುತ್ತಿತ್ತು, ಅವಳನ್ನು ಹೇಗಾದರೂ ದಿನಕ್ಕೊಮ್ಮೆ ನೋಡಬೇಕೆನಿಸುತ್ತಿತ್ತು, ಅವಳಿಗೆ ಗೊತ್ತಾಗದಂತೆ ದಿನಕ್ಕೊಮ್ಮೆಯಾದರೂ ನೋಡಿ ಬರುತ್ತಿದ್ದ, ಆದರೆ ಒಮ್ಮೆ ಸ್ಪಂದನ ವಿಶ್ವನನ್ನು ಅವನ ಗೆಳೆಯರ ಜೊತೆ ಸೇರಿ ಸಿಗರೇಟು ಸೇದುತ್ತಿರುವುದನ್ನು ನೋಡಿಬಿಟ್ಟಳು, ಅಲ್ಲದೇ ಅವನಿದ್ದ ಗುಂಪು ಹಿಂದೊಮ್ಮೆ ಕಾಲೇಜಿನಲ್ಲಿ ಕಲ್ಚರಲ್ ಪ್ರೋಗ್ರಾಂ ನಡೆಯುತ್ತಿದ್ದ ಸಂದರ್ಭದಲ್ಲಿ ಕುಡಿದು ಕುಣಿದು ಇಡೀ ಪ್ರೋಗ್ರಾಂ ನಿಲ್ಲುವಂತೆ ಮಾಡಿದ್ದು ಅವಳಿಗೆ ಚೆನ್ನಾಗಿ ನೆನಪಿತ್ತು, ಆದರೆ ಅಂದು ವಿಶ್ವನನ್ನು ಆ ಗುಂಪಿನಲ್ಲಿ ನೋಡಿದ ಹಾಗನಿಸಲಿಲ್ಲ, ಇಷ್ಟೆ ಅಲ್ಲದೇ ಅದೇ ಗುಂಪು ಹಿಂದೊಮ್ಮೆ ಹಾಸ್ಟೆಲ್ಗೆ ನುಗ್ಗಿ ಸೀನಿಯರ್ ಸ್ಟುಡೆಂಟ್ ಒಬ್ಬಳನ್ನು ರೇಗಿಸಿದ್ದರು. ಈಗ ಅದೇ ಗುಂಪಿನಲ್ಲಿ ವಿಶ್ವ ಇದ್ದಾನೆ ಅಂದರೆ ಈತನು ಆ ಗುಂಪಿಗೆ ಸೇರಿದವನೆ ಇರಬಹುದು ಇವನಿಗೆ ಸಿಗರೇಟು ಸೇದುವ ಚಟವಿದೆ, ಕುಡಿಯುವ ಅಭ್ಯಾಸವಿದ್ದರು ಹೆಚ್ಚಲ್ಲ, ಈತನಿಂದ ಕೊಂಚ ದೂರವಿರುವುದೇ ಒಳಿತು ಎಂದುಕೊಂಡು ಅಂದಿನಿಂದ ಅವನೊಡನೆ ಮಾತು ಕಮ್ಮಿ ಮಾಡಿದಳು, ಅವನು ಕರೆ ಮಾಡಿದಾಗ ಓದಬೇಕು ಎಂತಲೋ ಮತ್ಯಾವುದಾದರೂ ನೆಪ ಹೇಳುತ್ತಿದ್ದಳು, ಮೆಸೇಜಿಗೆ ರಿಪ್ಲೈ ಕೊಡುತ್ತಿರಲಿಲ್ಲ, ವಿಶ್ವನಿಗೆ ಸ್ಪಂದನಳ ಈ ವರ್ತನೆ ನುಂಗಲಾರದ ತುತ್ತಾಯಿತು, ಅವಳು ಬೇಕೆಂತಲೇ ತನ್ನನ್ನು ದೂರವಿಡುತ್ತಿದ್ದಾಳೆ ಎನಿಸಿತು, ಇಷ್ಟರಲ್ಲಿ ಅವನ ಕೊನೆಯ ಹಂತದ ಪರೀಕ್ಷೆ ಹತ್ತಿರ ಬಂದಿತು, ಇತ್ತ ಸ್ಪಂದನಳು ಪರೀಕ್ಷೆಗಾಗಿ ಪೂರ್ತಿ ಗಮನ ಕೊಡಲಾರಂಭಿಸಿದಳು. ವಿಶ್ವನನ್ನು ಕೊಂಚ ಕಾಲ ಮರೆತಳು. ಅಂದು ಕಾಲೇಜು ಮುಗಿಸಿ ಹಾಸ್ಟೆಲ್ಗೆ ಹಿಂತಿರುಗುವಾಗ ವಿಶ್ವ ಇವಳ ದಾರಿ ಕಾಯುತ್ತಾ ನಿಂತಿದ್ದ. ಇವಳು ನೋಡಿಯೂ ನೋಡದಂತೆ ಹೋಗಬೇಕೆಂದುಕೊಂಡಳು. ಆದರೆ ವಿಶ್ವ ಬಿಡಲಿಲ್ಲ. "ಸ್ಪಂದನ ನಿನ್ನೊಂದಿಗೆ ಸ್ವಲ್ಪ ಮಾತನಾಡಬೇಕು" ಎಂದ "ಬೇಗ ಹೇಳಿ ನನಗೆ ಓದುವುದು ಬಹಳಷ್ಟಿದೆ" ಎಂದಳು. "ನೀನೇಕೋ ಇತ್ತೀಚೆಗೆ ನನ್ನಿಂದ ದೂರವಾಗುತ್ತಿದೀಯ ಯಾಕೆ? ನಾನೇದಾರೂ ತಪ್ಪಾಗಿ ನಡೆದುಕೊಂಡೆನಾ ನಿನ್ನ ಜೊತೆ?" "ಹಾಗೇನಿಲ್ಲ ನನಗೆ ಪರೀಕ್ಷೆ ಹತ್ತಿರವಿರುವುದರಿಂದ ಓದಿನ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಅಷ್ಟೆ " "ಅಷ್ಟೆನಾ ಪರೀಕ್ಷೆ ಮುಗಿದ ಮೇಲೆ ಮೊದಲಿನಂತೆ ಇರುತ್ತೀಯಾ?" ಎಂದು ಕೇಳಿದ. ಸ್ಪಂದನಳಿಗೆ ಇದೇಕೋ ಅತಿಯಾಗುತ್ತಿದೆ ಅನಿಸಿತು. ಕೇಳಿಯೇ ಬಿಟ್ಟಳು " ಅರೆ ನಾನು ಮಾತನಾಡಲಿಲ್ಲ ಅಂದರೆ ನೀವೇಕೆ ಅಷ್ಟು ತಲೆ ಕೆಡಿಸಿಕೊಳ್ಳಬೇಕು? ನಿಮಗೆ ನನಗಿಂತ ಹೆಚ್ಚಿನ ಸ್ನೇಹಿತರಿದ್ದಾರೆ ಅವರೊಂದಿಗೆ ಸಿಗರೇಟು ಸೇದುತ್ತ, ಕುಡಿಯುತ್ತ, ಕಾಂಪೌಂಡ್ ಹಾರುತ್ತಾ, ಹುಡುಗಿಯರನ್ನು ಚುಡಾಯಿಸುತ್ತ ಅಲೆಯಬಹುದಲ್ಲ?" ಎಂದು ಖಾರವಾಗಿ ನುಡಿದಳು, ಈ ಮಾತನ್ನು ಕೇಳಿದ ವಿಶ್ವ ನಿನಗೆ ಹೇಗೆ ಗೊತ್ತಾಯಿತು ಎಂಬಂತೆ ಅವಳೆಡೆ ಪ್ರಶ್ನಾತ್ಮಕ ನೋಟ ಬೀರಿದ, "ನನಗೆ ಎಲ್ಲ ಗೊತ್ತು ನಾನು ನಿಮ್ಮನ್ನು ಆ ಗುಂಪಿನಲ್ಲಿ ನೋಡಿದೆ, ಮೊದಲೇ ಗೊತ್ತಿದ್ದರೆ ನಿಮ್ಮ ಸ್ನೇಹ ಸಹ ಮಾಡುತ್ತಿರಲಿಲ್ಲ ದಯವಿಟ್ಟು ಕ್ಷಮಿಸಿ ಮತ್ತೆ ನನಗೆ ಫೋನ್ ಮೆಸೇಜ್ ಯಾವುದು ಮಾಡಬೇಡಿ ಎಂದವಳೆ ಸುಮ್ಮನೇ ನಡೆದು ಬಿಟ್ಟಳು. ವಿಶ್ವ ನಿಂತಲ್ಲಿಯೇ ಶಿಲೆಯಂತೆ ನಿಂತಿದ್ದ.

(ಮುಂದುವರಿಯುತ್ತದೆ)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x