ಪ್ರೇಕ್ಷಕ-ಪರಿಣಾಮ : ಮಹದೇವ ಹಡಪದ್

ಉಪದೇಶ, ಸಂದೇಶ, ನೀತಿಯನ್ನು ಹೆಳಬೇಕಾದ್ದು ಕಲೆಯ ಉದ್ಧೇಶವೆಂದೂ ಅದೇ ವಿಧಾನದಲ್ಲಿಯೇ ಪ್ರದರ್ಶನಗಳು ಆಸ್ವಾದನೆಗೆ ಸಿಕ್ಕಬೇಕೆಂದು ಬಯಸುವುದು ಸಾಮಾನ್ಯವಾಗಿ ಎಲ್ಲ ವಯೋಮಾನದ ಪ್ರೇಕ್ಷಕರಲ್ಲೂ ಇದ್ದೆ ಇರುತ್ತದೆ. ಈ ಜನಪ್ರಿಯ ಬೇಡಿಕೆಯೂ ಆಯಾ ವಯಸ್ಸಿಗನುಗುಣವಾದ ರೀತಿಯಲ್ಲಿ ವ್ಯಕ್ತಗೊಳ್ಳುತ್ತದೆ. ಹುಸಿ ಮೌಲ್ಯಗಳನ್ನ ಬಿತ್ತರಿಸುವುದನ್ನು ಪ್ರೇಕ್ಷಕ ಬಯಸುತ್ತಾನೆಂದು ರುಚಿ ಬದಲಿಸುವ ಪ್ರಯತ್ನ ಮಾಡದಿರುವುದು ತಪ್ಪು. ಕನ್ನಡದ ಚಿತ್ರರಂಗ ಚರಿತ್ರೆಯಲ್ಲಿ ಹೊಸ ಅಲೆಯ ಸಿನೆಮಾಗಳಲ್ಲಿ ಮೊತ್ತಮೊದಲಿನದು ಎಂದು ಗುರುತಿಸಲಾಗುವ “ಸಂಸ್ಕಾರ”ದ ಯಶಸ್ಸಿಗೆ ಕಾರಣರಾದ ಅದೆ ಜನ ಈಗ ಆ ಶೈಲಿಯ ಸಿನೆಮಾಗಳನ್ನು ನೋಡಲಾರರೆಂದು ಹೇಳುವುದಾದರು ಹೇಗೆ… ಬಹುಶಃ ಇಲ್ಲಿ ಪ್ರೇಕ್ಷಕನ ಬಯಕೆ ಮುಖ್ಯವಲ್ಲ ತಯಾರಿಸುವವರ  ಮರ್ಜಿಯನ್ನು ತೋರಿಸುವವ ಎತ್ತಿಹಿಡಿಯುತ್ತಿದ್ದಾನೆ ಎಂದೆನಿಸುತ್ತದೆ.

 

ಭಾರತದ ಮಹಾಕಾವ್ಯಗಳೋ ಅಥವಾ ಅವಾಸ್ತವ ನೆಲೆಯಲ್ಲಿ ಬದುಕಿನ ದಾರಿಯೊಂದರ ಅನ್ವೇಷಣೆಗಾಗಿಯೋ- ಧುತ್ತೆಂದು ಪ್ರತ್ಯಕ್ಷವಾಗು ಯಕ್ಷಿಣಿ ವಿದ್ಯೆಯ ದೃಶ್ಯಗಳು ಇಂದಿನ ಸಿನೆಮಾದಲ್ಲೂ ಕಾಣುತ್ತೇವೆ. ಇಂಥದ್ದೊಂದು ದಾರಿಯನ್ನು ಉದ್ಧೇಶಪೂರ್ವಕವಾಗಿ ನಿರ್ಮಿಸಲಾಯಿತೋ ಗೊತ್ತಿಲ್ಲ.. ಒಟ್ಟಾರೆ ಅವಾಸ್ತವಿಕ ಚಲನಚಿತ್ರಗಳ ಚಲನೆಯಲ್ಲಿ ಧುತ್ತನೇ ಪ್ರತ್ಯಕ್ಷವಾಗುವ ಕ್ಷಣಗಳು ಬಹಳಷ್ಟಿರುತ್ತವೆ. ಕರುಣಾಜನಕ ಸ್ಥಿತಿಯನ್ನು ಸೃಷ್ಟಿಸುವ ಮತ್ತು ಶಕ್ತಿ-ಯುಕ್ತಿಗಳನ್ನು ಬಳಸಿ ಕತೆಯ ಓಘಕ್ಕೆ ತೊಡರಾಗುವ ಸೆಡು-ಕೇಡುಗಳಿಗೆ ಪರಿಹಾರವಾಗಿ ನಾಯಕ ಬರುತ್ತಾನೆ. ಮೈಯೆಲ್ಲ ಬ್ಯಾಂಡೇಜ್ ಕಟ್ಟಿಕೊಂಡವ, ಸತ್ತುಬಿದ್ದಿದ್ದ ವ್ಯಕ್ತಿ ಮತ್ತೆ ಉಸುರಾಡಿ ಎದ್ದುಬರುವ, ಕೂಗಿಕೊಳ್ಳುವ ಹೆಣ್ಣಿಗೆ ಸಹಾಯಕ್ಕಾಗಿ ಎಲ್ಲೋ ಇದ್ದವ ಥಟ್ಟನೆ ಪ್ರತ್ಯಕ್ಷವಾಗುವ ಹೀಗೆ ಜೀವದ ಹಂಗು ತೊರೆದು ಹೋರಾಡುವ ನಾಯಕಪ್ರಣೀತ ಲೀಲಾಕತೆಗಳು ಸಿನೆಮಾದಲ್ಲಿ ಸಹಜವಾಗಿಬಿಟ್ಟಿವೆ.

ಈ ವಾಣಿಜ್ಯ ವಹಿವಾಟಿನವರ ಆಟಗಳು ಆಕರ್ಷಣೀಯವಾಗುವುದು ಇಲ್ಲಿಯೇ… ಆ ಸನ್ನಿವೇಶ ಆಗುಮಾಡುವ ಪರಿಣಾಮಕ್ಕಿಂತ ಥ್ರಿಲ್ ಕೊಡುವ, ಕೊಡಬಹುದಾದ ಉಮೇದನ್ನು ಸಾಮಾಜಿಕರೊಳಗೆ ತುಂಬುತ್ತವೆ. ಸಂಪತ್ತಿಗೆ ಸವಾಲ ಎಂಬ ಸಿನೆಮಾದ ಕತೆಯಲ್ಲಿ.. ನಾಯಕನಟ ಜಮೀನ್ದಾರನನ್ನು ಎದುರು ಹಾಕಿಕೊಳ್ಳುವ ಸಂದರ್ಭವನ್ನು ಅಸಹಾಯಕನಾದ ಸಾಮಾನ್ಯನು ರಾಜಕುಮಾರ ಮುಖಾಂತರ ಅನುಭವಿಸಿ ಸುಮ್ಮನಾಗುತ್ತಾನೆ. ಅಂತೆಯೇ ಈ ನಾಯಕ ಅನ್ಯಾಯದ ವಿರುದ್ಧದ ಆಕ್ರೋಶವನ್ನು ಕತ್ತಲುಕೋಣೆಯಲ್ಲಿ ಸ್ಫೋಟಿಸಿ, ಪ್ರೇಕ್ಷಕನ ಪ್ರತಿನಿಧಿಯಂತೆ ವರ್ತಿಸಿ ಅವನ ಪ್ರಶ್ನೆಗಳನ್ನು ಮುಚ್ಚಿಹಾಕುತ್ತ ದೇವರಾಗಿ ಉಳಿದುಬಿಡುತ್ತಾನೆ. ಇವತ್ತಿನ ಮಾಧ್ಯಮದಲ್ಲಿ ಪ್ರತಿಯೊಬ್ಬ ನಾಯಕ ನಟನು ನೇರ ನಿಷ್ಠುರ ಸಂದರ್ಭಗಳನ್ನು ನಿಭಾಯಿಸುತ್ತಿದ್ದರೆ ನೋಡುಗನ ಮೈ ಪುಲಕಗೊಳ್ಳುತ್ತಿರುತ್ತದೆ. ಆತ ಎಲ್ಲಿಯೂ ಹೇಳಿಕೊಳ್ಳಲಾರದ ನಿಷ್ಠುರ ಸತ್ಯಗಳನ್ನು ಸ್ಕ್ರೀನ್ ಮೇಲೆ ಕಂಡು ಮುದಗೊಳ್ಳಬಲ್ಲನೆ ಹೊರತು ಅವಿತಿದ್ದ ಒತ್ತಡವನ್ನು ಹೊರಹಾಕಲಾರ. ಹಾಗಾಗಿ ಇವತ್ತಿನ ಸಾಮಾಜಿಕ ಚಳುವಳಿಗಳು ದಿಕ್ಕಾಪಾಲಾಗಿ ಒಡೆದುಹೋಗುತ್ತಿರುವುದಕ್ಕೆ ಇದೂ ಕಾರಣವಿರಬಹುದು. ಮುಖ್ಯಪ್ರವಾಹದಿಂದ ದೂರವುಳಿದು ಬಿಡುವುದನ್ನು ಮತ್ತು ಇರುವುದೆಲ್ಲ ಹೀಗೆ ಇರುವಾಗ ಒಬ್ಬ ಏನನ್ನೂ ಸಾಧಿಸಲಾರ ಎಂಬ ತತ್ವವನ್ನು ಜನಪ್ರಿಯ ಕಲೆಗಳ ಮೂಲಕ ಜಾಗತಿಕ ಮಾರುಕಟ್ಟೆ ರವಾನಿಸುತ್ತಿರುತ್ತದೆ.

ಆದರೆ ಕಲಾತ್ಮಕ ಚಿತ್ರಗಳ ವಸ್ತು ವಿನ್ಯಾಸದ ನಿರೂಪಣೆ ನೋಡುಗನನ್ನ ಒಳಗೊಳ್ಳುವ ವಿಧಾನವೇ ಬೇರೆ. ಹಸೀನಾ ನೋವುಂಡು ಬೆಂದರೂ ಜುಲೇಖಾ ಬರೆದುಕೊಟ್ಟ ಉಲ್ಲೇಖಗಳನ್ನು ತೂರುವಲ್ಲಿ ಯಶಸ್ವಿ ಆಗುತ್ತಾಳೆ. ಮುನ್ನಿ ಇಲ್ಲವೆಂದಾದ ಮೇಲೆ ಆಕೆಗೆ ಮೌಲ್ವಿಯ ನ್ಯಾಯವೂ, ಗಂಡ ಕೊಡಬಹುದಾದ ಹಣವೂ  ಬೇಡವೆನಿಸುತ್ತದೆ. ಇದರೊಳಗೆ ಯಾವ ಸಂದೇಶವೂ ಇಲ್ಲ! ಆದರೆ ಬದಲಾಗುತ್ತಿರುವ ಸಮಾಜಸ್ಥಿತಿಯ ಚಿತ್ರಣವಿದೆ. ಪುಟ್ಟಕ್ಕನ ಹೈವೇಯೆಂಬ ಜನಪ್ರಿಯ ಸೂತ್ರಗಳಲ್ಲಿ ನಿರ್ಮಿಸಲಾದ ಕಲಾತ್ಮಕ ಚಿತ್ರದ ಮೊದಲ ದೃಶ್ಯದಲ್ಲಿ ದಾರಿಹೋಕ ಡ್ರೈವರ್ ಹಣ ನೀಡಲು ಬಂದಾಗ ಪುಟ್ಟಕ್ಕ ಅದನ್ನು ನಿರಾಕರಿಸುತ್ತಾಳೆ, ಮನೆಗೆ ಬಂದಾಗ ಮಗಳು ಸೇತುವೆ ಕೆಳಗಿನ ಧಂದೆಯಲ್ಲಿ ತೊಡಗಿ ಹಣ ಸಂಪಾದಿಸುತ್ತಿರುತ್ತಾಳೆ. ಈ ವೈರುಧ್ಯದ ವ್ಯಂಗ್ಯಗಳು ಬೃಹತ್ತಾದ ಬದುಕಿನ ಕಲ್ಪನೆಯನ್ನು ಮೊಟಕುಗೊಳಿಸುವ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಜನಗಳನ್ನು ನಿರ್ವಸತಿ ಯಾತ್ರಿಗಳನ್ನಾಗಿಸುವ  ಕಂದರಗಳನ್ನು ಈ ಸಿನೆಮಾದಲ್ಲಿ ನೋಡಬಹುದೇ ಹೊರತು ಈ ಚಿತ್ರದ ಸಂದೇಶವೇನೆಂದು ಹುಡುಕಲಾಗುವುದಿಲ್ಲ.

ಒಂದು ಅಭಿವ್ಯಕ್ತಿಯ ಪ್ರದರ್ಶನದ ಪರಿಣಾಮವನ್ನು ತತಕ್ಷಣದಲ್ಲಿ ಬಯಸುವುದು ತಪ್ಪೇನಲ್ಲ, ಆದರೆ ಆ ನೋಡುಗನಲ್ಲಿ ಸೆರೆಯಾದ  ಭಾವಗಳು ಅವನ ಅಂತರಾಳದ ಭಾವ ಪ್ರಪಂಚವನ್ನು ಹೇಗೆ ಪ್ರವೇಶಿಸಿದವು ಅನ್ನುವುದು ಬಹಳ ಮುಖ್ಯ. ಪ್ರೇಕ್ಷಕನ ಮನಃಸ್ಥಿತಿಯೂ ಸಿನೆಮಾದ ಗ್ರಹಿಕೆಯನ್ನು ನಿರ್ಧರಿಸುತ್ತದೆ. ಅವನ ವೃತ್ತಿ, ಪ್ರವೃತ್ತಿ, ಆಲೋಚನೆಗಳೊಂದಿಗೆ ಸಂವಹನವನ್ನು ಸಾಧಿಸುವವ ನೋಡುಗನೆ ಹೊರತು, ಕಲಾಕೃತಿ ಯಾವದೇ ರೀತಿಯಲ್ಲೂ ಸಂವಹನವನ್ನು ತಾನೆ ವ್ಯಾಪಾರ ಮಾಡಲಾರದು. ಅನುಭವವನ್ನು ಪಡೆಯಬೇಕೆ ವಿನಃ ಕೊಡಲಿಕ್ಕಾಗದು. ನಟನೆಯಲ್ಲಿ ನಟನಿಗೆ ಹೀಗೆ ಅಭಿನಯಿಸಿ ಎಂದು ವಿವರಿಸಬಲ್ಲರೆ ಹೊರತು ಇದು ನಟನೆ ಹೀಗೆ ಮಾಡಿ ಎಂದು ಯಾರೂ ಹೇಳಲಾರರು. ಅದನ್ನು ಆತ ತಾನೆ ಅನುಭವಿಸಿ ಪಡೆದುಕೊಳ್ಳುತ್ತಾನೆ. ಹಾಗಾಗಿ ರಸಾನುಭೂತಿಯನ್ನು ಪ್ರೇಕ್ಷಕನೇ ಪಡೆದುಕೊಳ್ಳಬೇಕು.

ಪ್ರೇಕ್ಷಕನ ಮನದಾಳದಲ್ಲಿ ಉಳಿದುಕೊಳ್ಳುವ ಪ್ರದರ್ಶನದ ಕುರಿತಾದ ಪ್ರಶ್ನೆಗಳು ಉತ್ತರಗಳು  ಆ ಕ್ಷಣದಲ್ಲಿ ಅಲ್ಲದಿದ್ದರೂ ಎಂದೋ ಒಂದು ದಿನ ಅವು ಬಯಲುಗೊಳ್ಳುತ್ತವೆ. ವೈಯಕ್ತಿಕ ನೆಲೆಯಲ್ಲಿ ಅಲ್ಲದಿದ್ದರೂ ಆ ಭಾವದ ತೀವ್ರತರ ಸ್ಪಂದನೆಯನ್ನು ಆತ ಸಮಾಜದಲ್ಲಿ ನಡೆಯುವ  ಅಕ್ರಮ ಅನ್ಯಾಯವನ್ನು ಖಂಡಿಸುವಾಗಲಾದರೂ ನೆನಪಿಸಿಕೊಳ್ಳಬಲ್ಲ. ಆ ಗ್ರಹಿಕೆ ನೆನಪಿನಾಳದ ಮೆಲುಕಾಗಿ ಇದ್ದರೂ ನಿರ್ಧಾರಗಳ ಹಿಂದಿನ ಶಕ್ತಿಯಾಗಿ ಧ್ವನಿಸಿರುತ್ತದೆ. ಗಮನ ಗ್ರಹಿಕೆಯಲ್ಲಿ ಸಂಗ್ರಹವಾಗುವ ಸೂಪ್ತಭಾವಗಳು  ಯಾವತ್ಕಾಲಕ್ಕೂ  ಸಾತ್ವಿಕಶಕ್ತಿಯನ್ನು ನೀಡುತ್ತವೆ.  ಸೃಜನಶೀಲ ಜಾಗೃತ ಮನಸ್ಸನ್ನು  ಕಲೆ ಹೇಗೆಲ್ಲ ರೂಪಿಸಿರುತ್ತದೋ ಹಾಗೆಯೇ ಆ ಕಲಾಪ್ರಕಾರದ ಪರಿಣಾಮ ಸಮಾಜದ ಮೇಲೂ ಆಗಿರುತ್ತದೆ.

ಮೂಲತಃ ರಂಗಭೂಮಿಯವನಾದ ನಾನು ಪ್ರೇಕ್ಷಕರ ಮನಸ್ಸಿನಲ್ಲಾದ ಪಲ್ಲಟಗಳನ್ನು ತುಂಬ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಪ್ರೊ, ಶಿವರುದ್ರ ಕಲ್ಲೋಳ್ಕರ್ ಅವರ ಹೊಲಗೇರಿ ರಾಜಕುಮಾರ ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸಿ ನಿರ್ದೇಶಿಸಿ ಕರ್ನಾಟಕದಾದ್ಯಂತ ಪ್ರದರ್ಶನ ಕೊಟ್ಟಾದ ಮೇಲೆ ಯಮುನಾ ನದಿಯಲ್ಲಿ ಅಪಾರ ನೀರು ಹರಿದು, ಒಂದು ವರ್ಷದ ನಂತರ ಗೆಳೆಯರು ಚಿಕ್ಕನಾಯಕನಹಳ್ಳಿಗೆ ಯಾವದೋ ಕಾರ್ಯಕ್ರಮ ನಿಮಿತ್ತ ನನ್ನನ್ನು ಕರೆಸಿದ್ದರು. ಅಲ್ಲಿ ಚಿಕ್ಕಮಠದ ನಾಗಣ್ಣನ ತಾಯಿ ಆ ನಾಟಕದಿಂದ ತಾನು ಬದಲಾದ ಕತೆ ಹೇಳಿದಳು. ಆವರೆಗೆ ಮಠದ ಅಂಗಳದಲ್ಲಿ ಕೆಳಜಾತಿಯ ಹುಡುಗರನ್ನು ಕಟ್ಟೆ ಏರಲೂ ಸಹ ಬಿಡದಿದ್ದ ಅವರು ಈಗ ಪಶ್ಚಾತ್ತಾಪದ ಮಾತುಗಳಾಡುತ್ತಿದ್ದರು. ನಿಜಕ್ಕೂ ಅವರು ಆ ನಾಟಕದಿಂದ ಯೋಚನಾಮಗ್ನರಾಗಿದ್ದರು. ಪರಂಪರೆಯನ್ನು ಹಿಂದೆ ಸರಿಸಿ ಸರಿ\ತಪ್ಪುಗಳನ್ನು ತೂಗುವಷ್ಟು ಜಾಗೃತರಾಗಿದ್ದರು. ಸಾಹಿತ್ಯದ ಓದಿನ ಏಕಾಂತವೂ ಓದುಗನನ್ನು ವಸ್ತುವಿನೊಳಗಿನ ಪಾತ್ರವಾಗಿಸುವಂತೆ, ಇತರೆ ಕಲೆಗಳೂ ಪ್ರೇಕ್ಷಕನಿಗೊಂದು ಮುಖ್ಯ ಪಾತ್ರವನ್ನೇ ತೆಗೆದಿರಿಸಿರುತ್ತವೆ.  ಆ ಪಾತ್ರದ ಪ್ರವೇಶ ಬದುಕಿನ ಭಾಗವಾಗಿ ಯಾವಾಗ ಬೇಕಾದರೂ ಅನುಭವಕ್ಕೆ ಬರಬಹುದಾಗಿದೆ.

ಜನಪ್ರಿಯ ಮತ್ತು ಕಲಾತ್ಮಕ ಚಿತ್ರಗಳಿಗಿಂತಲೂ ಇಂದು ವ್ಯಾಪಕವಾದ ಚರ್ಚೆಗಳನ್ನು ಹುಟ್ಟುಹಾಕುತ್ತಿರುವ ವಾಸ್ತವ ನಿರೂಪಣೆಯ ಡಾಕೂಮೆಂಟರಿಗಳು ಮತ್ತೊಂದು ಬಗೆಯ ಪ್ರೇಕ್ಷಕನ ಉದ್ಧೇಶಿಸಿ ತಯಾರಾಗುತ್ತಿವೆ. ಅಲ್ಲಿ ಯಥಾವತ್ ಬದುಕಿನ ದಾಖಲೆಗಳಿರುತ್ತವೆ. ಉತ್ತರಗಳೇ ಇಲ್ಲದ, ಪರ್ಯಾಯ ಚಿಂತನೆಯ ಮಾನವೀಯ ವಾದಗಳು ಚಿತ್ರಿತಗೊಂಡಿರುತ್ತವೆ. ಕೆ.ವಿ.ಸುಬ್ಬಣ್ಣನವರು ಗುರುತಿಸುವಂತೆ ಅಭಿವ್ಯಕ್ತಿ, ಅನನ್ಯ ಸ್ವಂತಿಕೆಗಳು ಡಾಕುಮೆಂಟರಿ ಮಾದ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ ಆದ್ದರಿಂದ ಈ ಚಿತ್ರಗಳು ಶ್ರೇಷ್ಟಕಲಾಕೃತಿಗಳಾಗುತ್ತವೆ. ಇಲ್ಲಿ ಬದುಕಿನ ನೇರಚಿತ್ರಣಗಳನ್ನು ದಾಖಲಿಸುವುದೇ ಕಲಾಮಾರ್ಗವಾದ್ದರಿಂದ  ಈ ಚಿತ್ರಗಳ ಒಟ್ಟು ಸ್ವರೂಪವೇ ಬದಲಿ ಮಾರ್ಗವೊಂದನ್ನು ಅನ್ವೇಷಿಸಿಕೊಂಡಿದೆ. ಆನಂದ ಪಟವರ್ಧನರಂಥ ಮೇಧಾವಿಗಳು ಈ ಮಾರ್ಗದಲ್ಲಿ ಸತತ ಪ್ರಯೋಗಶೀಲಾರಾಗಿದ್ದಾರೆ.

-ಮಹದೇವ ಹಡಪದ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Hipparagi Siddaram
Hipparagi Siddaram
11 years ago

ವೈಚಾರಿಕ ಲೇಖನ, ಹೊಸ ಆಲೋಚನೆಗಳನ್ನು ಹಂಚಿಕೊಂಡಿರುವ ಮಾದೇವಣ್ಣ ಹಡಪದ ಅವರಿಗೆ ಧನ್ಯವಾದಗಳು ! ಹೀಗೆ ಸಾಗಲಿ ನಿಮ್ಮ ನಿಲ್ಲದ ರಂಗಯಾತ್ರೆಯಲ್ಲಿಯ ಸುಂದರ ಅನುಭವಗಳ ಸೂಕ್ಷ್ಮಾವಲೋಖನ ; ಶುಭದಿನ !

ಶರಣು ಶಟ್ಟರ್

ತುಂಬಾ ಚನ್ನಾಗಿದೆ ಸರ್ ನಿಮ್ಮ ಲೇಖನ ಓದಿದೆ.

2
0
Would love your thoughts, please comment.x
()
x