೧. ಸಾಧ್ಯ
ಮರಳುಗಾಡಿನಲೂ ಹೂದೋಟ
ಬೆಳೆಯಬಲ್ಲೆ ನಾನು,
ಭಾವಗಳು ಹುಟ್ಟಬೇಕಷ್ಟೇ.
೨. ಪರಿಹಾರ
ಹೃದಯಕೊಂದು
ಒಡೆದ ಗಾಜು ನೆಟ್ಟಿದೆ,
ಕಿತ್ತೊಗೆಯಲೊಂದು
ಹೂವು ಬೇಕಿದೆ.
೩. ಅರಿವು
ಕೊಳಕು ಮೆತ್ತಿದ್ದು
ಬಟ್ಟೆಗೆ ತಿಳಿಯಬೇಕಿಲ್ಲ
ಕೊಳೆಗೆ ಗೊತ್ತಾಗಬೇಕು
ಇಲ್ಲ
ಸಾಬೂನು ಅರಿಯಬೇಕು.
೪. ತಪ್ಪು
ಮಡದಿ ಸಿಟ್ಟಾದರೆ
ತಪ್ಪು ಯಾರದ್ದೇ ಆಗಿರಬಹುದು
ಮಗ ಕೋಪಿಸಿಕೊಂಡರೆ ಮಾತ್ರ
ತಪ್ಪು ನನ್ನದೇ.
೫. ಗುರಿ
ನದಿ ಹುಟ್ಟಿದಾರಭ್ಯ
ಸಮುದ್ರ ಹುಡುಕಿ
ಹೊರಡುವುದಿಲ್ಲ;
ಹರಿಯುತ್ತ ಹೋಗುವುದು
ಅನಿವಾರ್ಯ ಕರ್ಮವದಕೆ.
೬. ನಿರರ್ಥಕ
ಸಮುದ್ರದಲ್ಲಿ
ಸ್ಖಲನವಾದರೆ
ಮೀನು ಬಸಿರಾಗುವುದಿಲ್ಲ
ಈಜುವುದು
ದುಸ್ತರವಾಗುತ್ತದೆ.
೭. ಮುಖ್ಯ
ಮನೆ ಕೊಳ್ಳಲೆಂದು
ಬಟ್ಟೆಗಳನ್ನೆಲ್ಲ ಮಾರಿದೆ,
ಈಗ ಬಾಗಿಲು, ಕಿಟಕಿಗಳನೆಲ್ಲ
ಗೋಡೆ ಕಟ್ಟಿ ಮುಚ್ಚಬೇಕಿದೆ
ಬಟ್ಟೆ ಕೊಳ್ಳುವವರೆಗೆ.
೮. ನಿರಾಶೆ
ನಿನ್ನೂರಿಗೆ ಬಂದಾಗ
ನವಿಲೊಂದು ಕುಂತಿತ್ತು ಎದೆಯಲ್ಲಿ
ಸತ್ತು ಹೋಯಿತೊಂದು ದಿನ
ನನ್ನೂರಿಗೆ ನೀ ಪಲ್ಲಕ್ಕಿಯಲ್ಲಿ ಬಂದಾಗ.
೯. ಕೇಳಲಿಲ್ಲ
ಎಷ್ಟು ಬಾರಿ ಹೇಳಿದ್ದೆ ನಾನು
ಅಷ್ಟು ಜೋರಾಗಿ ಓಡಬೇಡ,
ಬಿದ್ದಿಯಾ ಎಂದು;
ನೋಡಲ್ಲಿ ಈಗ
ನೆಲದಲ್ಲಿ ಎಷ್ಟು ದೊಡ್ಡ ತೆಗ್ಗು.
೧೦. ನನಗಿಲ್ಲದ್ದು
ನಿನ್ನೆದೆಗೇಕೆ ನನಗಿಲ್ಲದ ಸುರಕ್ಷಾಕವಚ
ನನ್ನೆದೆಗೋ ಒಳಹೋಗಿ ಬರುವುದು ಸುಲಭ
ನಿನ್ನೆದೆಗೆ ಒಳ ಹೋಗುವುದೂ ಕಠಿಣ
ಹೊರಬರುವಾಗ ಪ್ರಾಣಕ್ಷೀರ.
೧೧. ಒಪ್ಪ ಓರಣ
ಒಪ್ಪ ಓರಣ ಅವಳ ಪ್ರಾಣ
ಸೂಜಿಗೂ ಕೂಡ ಅದರದೇ ಸ್ಥಾನ
ಕಳಿಸಿದರೆ ಚಾಲಕನ ಮರೆತ ಫೈಲನು ತರೋಕೆ
ಅವನೇ ನಾನೆಚಿದು ಕೈಗಿತ್ತಳು ಕಸಪೊರಕೆ.
೧೨. ದುಂದುಗಾರ
ಮಾತುಗಳ ದುಂದುಗಾರ ನಾನಲ್ಲ
ಮಥಿಸಿ ಬಂದ ಮಾತುಗಳ ಕಾಪಿಟ್ಟು
ಕಾವು ಕೊಟ್ಟು, ಹಸಿವು, ನೀರಡಿಕೆ
ನಿದ್ರೆ, ಮೈಥುನಗಳ ಮರೆತು
ಹೊಳಪುಳ್ಳ ರತ್ನ ನಿಮ್ಮ ಕಿವಿಯಡಿಗಿಡುತ್ತೇನೆ.
೧೩. ಚುಟುಕು
ತಿಣುಕಾಡಿ ಬರೆದದ್ದು
ಕುಟುಕು;
ನಿದ್ದೆಯಲ್ಲೂ ಕನವರಿಸಿದ್ದು
ಚುಟುಕು.
೧೪. ಹಳಹಳಿಕೆ
ಬಿಕನಿ ತೊಡಲು
ಕಳವಳ ಪಡದವರು
ಜಗತ್ತಿನೆದುರು ತೆರೆದಿಡಲು
ಹಳಹಳಿಕೆ ಪಡರು.
೧೫. ಕನ್ನಡದ ಅಂಕಿ
ಆಫೀಸಿನವರಿಗಾಗಿಯೇ
ಹುಟ್ಟಿದ್ದು ಕನ್ನಡದ ಅಂಕಿಗಳು
ಏಳು ಗಂಟೆಗೆ ಹಾಸಿಗೆ ಬಿಟ್ಟೇಳು
ಹತ್ತು ಗಂಟೆಗೆ ಗಾಡಿ ಹತ್ತಿ
ಆಫೀಸಿಗೆ ದೌಡು
ಆರು ಗಂಟೆಗೆ ದೀಪ ಆರಿಸಿ
ಮನೆ ಕಡೆಗೆ ಹೊರಡು.
೧೬. ಸ್ವಾತಂತ್ರ್ಯ
ಒಂದು ಮೂರಿಂಚಿನ ಸೂತ್ರದಲಿ ಸಿಲುಕಿ
ಪಡ್ಡೆ ಹುಡುಗನೊಬ್ಬನ ಬೆರಳಿನಾಟಕೆ ಕುಣಿದು
ಪತಂಗ ಹಾರೀತಾದರೂ ಎಷ್ಟು ದೂರ
ಬಿಚ್ಚಿಬಿಡಿ ಸೂತ್ರ, ಹರಿದುಬಿಡಿ ದಾರ
ಪ್ರೀತಿಯಿದ್ದಷ್ಟು ಹಾರಿ, ಮುಟ್ಟೀತು ವಿಶ್ವಹ್ಲದಯ.
೧೭. ಬದಲಾವಣೆ
ಪ್ರತಿ ಬಾರಿ ಕನ್ನಡಿಯ
ಮುಂದೆ ನಿಂತಾಗಲೂ
ನನಗೆ ನಾನೇ ಆಗಂತುಕ
ಕಣ್ಣ ಕೆಳಗಿನ ಕಪ್ಪು,
ಹಣೆಯ ಗಂಟು, ಕೂದಲು
ಮೀಸೆಯ ವಿನ್ಯಾಸ ಎಲ್ಲ ಅದೇ!
ಬದಲಾಗಿದ್ದು ನಾನು
ನೋಡುವ ದೃಷ್ಟಿ.
೧೮. ಕಾರಣ
ಮಳೆಯ ನೀರು
ತೆಗ್ಗಿನಲ್ಲೇ ಬಂದು
ನಿಲ್ಲುವುದು
ಯಾಕೆಂದರೆ
ಚಿಕ್ಕಮಕ್ಕಳು ಅದರಲ್ಲಿ
ಜಿಗಿದು, ನೀರ ಚಿಮ್ಮಿಸಿ
ಆಟವಾಡಲೆಂದು.
೧೯. ಕೌತುಕದ ಕಂಗಳಲಿ
ಮಗುವಿನಂತಾದರೆ ಮನಸು
ಗಾಳಿಯಲೂ ಜೀವ ತುಂಬಿ
ಶರೀರವೇ ಕ್ರೀಡಾಂಗಣವಾಗಿ
ಕಿತ್ತ ಉಗುರಿನಲೂ ಸೌಂದರ್‍ಯ ಕಂಡು
ಜಗತ್ತೇ ಕುಣಿಯುತ್ತದೆ ಕೌತುಕದ ಕಂಗಳಲಿ.
೨೦. ಕನ್ನಡಿ
ನಿನ್ನ ಎತ್ತರದ ರತ್ನಖಚಿತ
ನಿಲುವುಗನ್ನಡಿಯಲ್ಲಿ
ಹಸಿದ ಹೊಟ್ಟೆಗಳ
ಚೀತ್ಕಾರದ ಬಿಂಬಗಳು.
೨೧. ಪ್ರೀತಿ
ತಾಜಮಹಲ್ಲಿನ ಪ್ರತಿ
ಕಲ್ಲುಕುಸುರಿಯಲ್ಲೂ
ಬಲ್ಲಿದರ ಅಹಂಕಾರ
ಇಲ್ಲದವರ ಅಸಹಾಯಕ ಪ್ರೀತಿ
ಅಜ್ಞಾತವಾಗುಳಿದಿವೆ.
೨೨. ಗೋಡೆಗಳು
ಈ ಬಾಗಿಲು ಕಿಟಕಿಗಳ
ಮೂಲಕ ಕಾಣುವುದು
ಅರ್ಧಂಬರ್ಧ, ಚೂರುಪಾರು
ಮನುಜರಿಗಿಂತ ಹೆಚ್ಚಿನ ಈ
ಗೋಡೆಗಳನೆಲ್ಲ ಒಡೆದು ಬಿಡುವಾ
ಕಣ್ತುಂಬಲಿ ಪ್ರತಿಯೊಬ್ಬರ
ಸಂಪೂರ್ಣ ವಿಶ್ವಸೌಂದರ್ಯ.
೨೩. ಮಿಂಚು
ಮಿಂಚು ಹುಡುಕುತ್ತಿತ್ತು ಮೋಡಗಳನ್ನು
ಅವಾಗಲೇ ನಾಚಿ ನೀರಾಗಿ ಭೂಮಿ ತಬ್ಬಿದ್ದವು
ಬೇಸರಿಸಿ ಮಿಂಚು, ಅವಳಾಗಿ,
ಅವಳು ನನ್ನವಳಾಗಿ; ಆಗಾಗ
ಸಿಡಿಲು ಹೊಡೆಯುತ್ತಲೇ ಇರುತ್ತದೆ ನನಗೆ.
೨೪. ಒಂದು ತೊಟ್ಟು ವಿಷ
ರೋಸಿಹೋಗಿದ್ದೇನೆ ನಾನು;
ಹರಿದುಹೋದ ಬಟ್ಟೆಗಳು,
ದಿನವೂ ಎಂಜಲು ಊಟ,
ಚಿಂದಿಯಾದ ಪುಸ್ತಕಗಳು.
ಒಂದು ತೊಟ್ಟು ವಿಷ ಕೊಟ್ಟುಬಿಡಿ.
ಈ ಅನಿಷ್ಟ ಇಲಿಗಳ ಕೊಂದು
ನೆಮ್ಮದಿಯಾಗಿ ಉಸಿರುಬಿಡುತ್ತೇನೆ.
೨೫. ಹಬ್ಬು
ನೀನು ನೆಲ ಕೊಟ್ಟಷ್ಟು
ನನ್ನ ಪ್ರೀತಿ ಹಬ್ಬುತ್ತ ಹೋಗುತ್ತದೆ
ಕಲ್ಲಂಗಡಿಯ ಬಳ್ಳಿಯಂತೆ;
ನಡುನಡುವೆ ಸವಿನೆನಪಿನ
ಹಣ್ಣುಗಳನ್ನೀಯುತ್ತ.
….ಪ್ರೀತೀಶ.
ಚುಟುಕುಗಳಲ್ಲಿಯ ಎಲ್ಲವೂ ಬಾಳ ಚಲೋ ಬರದೀರಿ ಸರ್….ಶುಭದಿನ !