ಪ್ರೀತಿ ಪ್ರೇಮ

ಪ್ರೀತಿ

ಮನಕ್ಕೆ ಸಿಗದದ್ದು,

ಸಿಕ್ಕಾಗ ದಕ್ಕದದ್ದು,

ಮರೆತಾಗ ನೆನೆದದ್ದು,

ಬಯಸಿದಾಗ ಪಲಾಯನವಾದದ್ದು,

ನಾ ಮುಂದೆ ನೆಡೆದಾಗ

ಹಿಂದೆ ಅತ್ತದ್ದು………

ಬಹಳಷ್ಟು ಜನರ ಪ್ರೀತಿಯ ಅನುಭವ ಇವಿಷ್ಟೇ ಆಗಿರುತ್ತದೆ. ಹೌದಾದರೆ ಲೈಕ್ ಒತ್ತಿ, ಇಲ್ಲವಾದರೆ ಕಾಮೆಂಟ್ ಮಾಡಿ ಎಂದರೆ, ಕಾಮೆಂಟಿಗಿಂತ ಲೈಕ್ಸ್ ಹೆಚ್ಚಾಗಿರುತ್ತದೆ ಎಂಬುದು ನನ್ನ ನಂಬಿಕೆ.

ಅದೇನೇ ಇರಲಿ, ಪ್ರೀತಿ' ಎಂಬ ಭಾವವೇ ಮಧುರ, ವಿಸ್ಮಯ. ಪ್ರೀತಿಗೆ ವಯಸ್ಸಿನ ಪ್ರಶ್ನೆ ಇಲ್ಲ. ಪ್ರೀತಿಯಲ್ಲಿ ಎಲ್ಲರೂ ಟೀನೇಜರೇ,,,,:-))

ಈ ಪ್ರೀತಿಯ ಕಲ್ಪನೆ, ಕನಸುಗಳು ಹುಟ್ಟುವುದೇ ಹದಿಹರೆಯಗಳಲ್ಲಿ. ಅಂದರೆ ಹೈಸ್ಕೂಲ್-ಕಾಲೇಜಿನ ದಿನಗಳಲ್ಲಿ, ತುಂಟತನದ ದಿನಗಳು ಎಂದೇ ಹೇಳಬಹುದು. ಹತ್ತನೇ ತರಗತಿಯಿಂದ ತೇರ್ಗಡೆ ಹೊಂದಿದ್ದ ನಾನು, ಮನೆಯ ಹತ್ತಿರದಲ್ಲೇ ಇರುವ ಪಿ.ಯು ಕಾಲೇಜೊಂದರಲ್ಲಿ ದಾಖಲಾಗಿ, ಹೊಸತನಕ್ಕೆ ಮಂದವಾದ ಆತಂಕದ ಹುಡುಗಿಯಾಗಿದ್ದೆ. ಪ್ರಾರಂಭದ ದಿನಗಳಲ್ಲಿ ಕಾಲೇಜಿಗೆ ಹೋಗುವಾಗ ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದ ಬೇಡಿಕೆಯೆಂದರೆ, "ದೇವಾ, ಆಂಜನೇಯ ನನ್ನ ಯಾರೂ ಲವ್ ಮಾಡೋದು ಬೇಡಪ್ಪ, ನಾನೂ ಯಾರನ್ನೂ ಲವ್ ಮಾಡೋದು ಬೇಡಪ್ಪ, ನನ್ನಂಪ್ಪಂಗೆ ಇವೆಲ್ಲಾ ಇಷ್ಟ ಆಗೋಲ್ಲ, ಕಾಪಾಡಪ್ಪಾ",,,,,,,,ನೆನೆದಾಗಲೆಲ್ಲಾ ನನಗೆ ನಗು. ಪ್ರೀತಿಗೆ ನಮ್ಮಪ್ಪನ ಭೀತಿ ಕಾರಣವಾಗಿತ್ತು. ಜೊತೆಗೆ ಯಾರೂ ಇಷ್ಟನೂ ಆಗಲಿಲ್ಲ ಬಿಡಿ. ನಮ್ಮ ಕಾಲೇಜಿನಲ್ಲಿ ಆಗ ನಾನೇ ಲೇಡಿ ಡಾನ್. ನನ್ನ ಗೆಳೆತಿಯರಿಗೆಲ್ಲಾ ನಾನೇ ಬಾಡಿ ಗಾರ್ಡ್ ತರ ಆಗಿಬಿಟ್ಟಿದ್ದೆ. ಯಾವ ಹುಡುಗನು ನನ್ನ ಗೆಳೆತಿಯರನ್ನು ಗುರ್ರಾಯಿಸೊ ಹಾಗಿಲ್ಲ, ಚುಡಾಯಿಸೊ ಹಾಗಿಲ್ಲ. ಹಾಗೇನಾದರೂ ಆದರೆ ಸರಿಯಾದ ಮರ್ಯಾದೆ ನನ್ನಿಂದ!……. ಹೀಗಿರುವಾಗ ನನ್ನ ಸುದ್ದಿಗೆ ಯಾರು ಬಂದಾರು? ಧೈರ್ಯದ ಪ್ರಶ್ನೆ!! ಹಾಗಂತ ವ್ಯಥೆಯೇನಿಲ್ಲ, ಬಹಳ ಹೆಮ್ಮಯ ವಿಚಾರ ನನಗೆ.

ಪ್ರೀತಿಯ ಭಾವಕ್ಕೆ ಮನಸ್ಸಿನ ಮತ್ತು ವಯಸ್ಸಿನ ಪಕ್ವತೆಯೂ ಅಗತ್ಯವಿದೆ. ಪ್ರೇಮಿಗಳ ದಿನ ಬಂದಿತ್ತೆಂದು ಹಿಂದು ಮುಂದು ನೋಡದೆ ಯಾರಿಗೋ ಹೇಗೋ ಪ್ರೇಮ ನಿವೇದನೆ ಮಾಡಿ 'ಹಾಗೆ ಸುಮ್ಮನೆ' ಎಂಗೇಜ್ ಆಗುವುದು, ಈಗಿನ ಕಾಲದ ಒಂದು ಫ್ಯಾಷನ್ ಆಗಿಬಿಟ್ಟಿದೆ. ಆ ಸಂಬಂಧಗಳು ಎಷ್ಟು ದಿನ ಉಳಿಯುವುದೊ ಅಷ್ಟು ದಿನ ಆ ಪ್ರೀತಿಯ ಆಯಸ್ಸು. ಇಂತಹ ಸ್ವೇಚ್ಛಾಚಾರದ ಪ್ರೀತಿಯಿಂದ ಮನಸ್ಸಿನ ಹುಚ್ಚಾಟದ ಹೊಯ್ದಾಟಗಳಲ್ಲಿ ಏನೆಲ್ಲಾ ಅನಾಹುತಗಳಾಗಿ ಹೋಗುತ್ತದೆ. ಅದರಿಂದಲೇ ಇಂದಿಗೂ ಹೆತ್ತವರಿಗೆ ಮಕ್ಕಳು ಪ್ರೀತಿಸುತ್ತಾರೆಂದರೆ ಬೆಚ್ಚಿಬೀಳುತ್ತಾರೆ. ಪ್ರೀತಿಯ ಅರ್ಥವನ್ನು ಯುವಜನತೆ ಅಷ್ಟು ಕ್ರೂರವಾಗಿಸಿಬಿಟ್ಟಿದ್ದಾರೆ. ಪ್ರೀತಿಯಿಲ್ಲದ ಕತೆಯಿಲ್ಲ. ಪ್ರೀತಿಯಿಲ್ಲದ ಸಿನೆಮಾಯಿಲ್ಲ, ಇವನ್ನೆಲ್ಲಾ ಇಷ್ಟಪಡುವ, ಆಸ್ವಾಧಿಸುವ ಹೆತ್ತವರು ಮಕ್ಕಳ ಪ್ರೀತಿಯನ್ನು ಮಾತ್ರ ತಿರಸ್ಕರಿಸುತ್ತಾರೆ ಇಲ್ಲವೇ ವಿಮರ್ಶಿಸಲು ತೊಡಗುತ್ತಾರೆ. ಕಾರಣ ಇದೇ;'ಸ್ವೇಚ್ಛಾಚಾರ'. ಮಕ್ಕಳು ಹೆತ್ತವರಲ್ಲಿ ಗಳಿಸಿದ ವಿಶ್ವಾಸದಿಂದ ಮಾತ್ರ ತಮ್ಮ ಪ್ರೀತಿಯ ಪವಿತ್ರತೆಯನ್ನು ಧೃಡೀಕರಿಸಿ ಸಮಾಜದೆದುರು ಮಾನ್ಯತೆಯನ್ನು ಪಡೆಯಬಹುದಾಗಿದೆ. ಎಲ್ಲದರಲ್ಲೂ ಒಳ್ಳೆಯಾದನ್ನೇ ಕಾಣುವ, ಒಳ್ಳೆಯದನ್ನೇ ಹುಡುಕುವ ಮನಸ್ಸಿದ್ದರೆ ಖಂಡಿತ ಒಳ್ಳೆಯದೇ ಆಗುತ್ತದೆ. ಪ್ರೀತಿಯನ್ನು ಪ್ರೀತಿಯಿಂದ ನೋಡಬೇಕೆ ಹೊರತು ಕಾಮದಿಂದಲ್ಲ.

ಹೆಣ್ಣಿಗಿಂತ ಗಂಡಿನಲ್ಲಿಯೇ ಮರೆವು ಹೆಚ್ಚು ಎಂದು ಕೇಳಿದ್ದೆ, ಹಾಗೆಯೇ ಅನಿಸುತ್ತದೆ ಕೂಡ. ಆದರೂ ಗಂಡು ಒಬ್ಬಳನ್ನು ಮರೆಯಲು ಮತ್ತೋಬ್ಬಳನ್ನು ಪ್ರೀತಿಸುತ್ತಾನೆ. ಒಂದು ಪ್ರೀತಿಯನ್ನು ಮರೆಯಲು ಮತ್ತೋಂದು ಪ್ರೀತಿಯನ್ನು ಬಯಸುತ್ತಾನೆ. ಇದು ಎಷ್ಟು ಸರಿಯೋ? ಪ್ರೀತಿಸಬೇಕೆಂದು ಪ್ರೀತಿಸಬಾರದು, ಆದರೆ ಪ್ರೀತಿ ಹುಟ್ಟಿದಾಗ ಪ್ರೀತಿಸದೆ ಇರಬಾರದು. ಇಂದು ಮನುಷ್ಯ ಎಷ್ಟು ದುರ್ಬಲನಾಗಿದ್ದಾನೆಂದರೆ, ಪ್ರೀತಿಯನ್ನು ಕಳೆದುಕೊಂಡ ನಂತರ ಖಾಲಿ ಮನಸ್ಸಿನೊಂದಿಗೆ ಆತ ಜೀವಿಸಲು ಸಿದ್ದನಿಲ್ಲ. ಸಾಂಗತ್ಯ ಆತನಿಗೆ ಬೇಕೇ ಬೇಕು, ಅದೇಕೊ ತಿಳಿಯದು. ಪ್ರೀತಿಯೊಂದು ದೌರ್ಬಲ್ಯವಾಗದೆ ಒಂದು ಶಕ್ತಿಯಾಗಿ, ಆತ್ಮವಿಶ್ವಾಸವಾಗಿ ಪರಿಣಮಿಸಿದಾಗ ಮಾತ್ರ ಅದು ಸಂಬಂಧಗಳನ್ನು ಗಟ್ಟಿಗೊಳಿಸುವುದಲ್ಲದೆ ಜೀವಂತಿಕೆಯ ಚಿಲುಮೆಗಳನ್ನಾಗಿಸುತ್ತದೆ.

ಒಮ್ಮೊಮ್ಮೆ ಅನಿರೀಕ್ಷಿತವಾಗಿ ಎಲ್ಲಿಂದ ಎಲ್ಲಿಗೊ ಪ್ರೀತಿ ಅಂಕುರವಾಗಿಬಿಟ್ಟಿರುತ್ತದೆ. ಕೆಲವೊಮ್ಮೆ ಮುಖಾಮುಖಿಯಾಗದೆಯೇ ಮನಸ್ಸು ಮತ್ತು ವ್ಯಕ್ತಿತ್ವಕ್ಕೆ ಶರಣಾಗಿ ಒಬ್ಬರಿಗೊಬ್ಬರಂತೆ ಪ್ರೀತಿಯಲ್ಲಿ ಅನುರಕ್ತರಾಗಿಬಿಟ್ಟಿರುತ್ತಾರೆ. ದೇಹ ಸೌಂದರ್ಯಕ್ಕಿಂತ ಮಾನಸಿಕ ಸೌಂದರ್ಯ ಮಿಗಿಲು. ಎಂದಿಗೂ ನಿಷ್ಕಾಮ ಪ್ರೇಮಕ್ಕೆ ಮಾತ್ರ ದೀರ್ಘಾಯುಷ್ಯ. ಸ್ನೇಹಿತರೇ, ಈ ಪ್ರೇಮಿಗಳ

ದಿನದಂದು ತಮ್ಮೆಲರಿಗೂ ಶುಭಾಶಯಗಳು. ಪ್ರೇಮ ಅಮರವಾಗರಲಿ. ದೀರ್ಘಾಯುಷ್ಯದ ಪ್ರೇಮ ಪ್ರೀತಿಯ ಪ್ರೇಮಿಗಳು ನೀವಾಗಿ ಬಾಳಿರಿ. ಶುಭವಾಗಲಿ. ಧನ್ಯವಾದಗಳು.

-ದಿವ್ಯ ಆಂಜನಪ್ಪ

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ಪ್ರೀತಿ

  1. ತುಂಬಾ ಚನ್ನಾಗಿ ಬರೆದಿದ್ದೀರಿ…ಒಪ್ಪೋ ಮಾತೆ .ಸಣ್ಣ ವಯಸ್ಸಿನಲ್ಲಿ ಪ್ರೀತಿ ಹುಟ್ಟಿದರು ಹೇಳಿಕೊಳ್ಳೋಕೆ ಮನೆಯವರ ಭಯ …ಆದರೆ ಹೆಚ್ಚಿನವರು ಪ್ರೀತಿ ಅಂದರೆ ತಪ್ಪಾಗೆ ತಿಳಿಯೋದು ಜಾಸ್ತಿ…ಪ್ರೀತಿ,ಕಾಮ ಎರಡನ್ನು ಮಿಕ್ಸ್ ಮಾಡೋರೆ ಜಾಸ್ತಿ.ನಿಷ್ಕಲ್ಮಶ ಪ್ರೀತಿಗೆ ಇದರ ಅಗತ್ಯ ಇಲ್ಲ. ನಿಜ ಪ್ರೀತಿ ತ್ಯಾಗ ಕ್ಕೂ ರೆಡಿ  ಇರುತ್ತೆ..ಪ್ರೀತಿ  ಪಾತ್ರದ ವ್ಯಕ್ತಿ ಸುಖವಾಗಿರಲಿ ಆ ಸುಖದಲ್ಲೇ ತಾನು ಸುಖ ಕಾಣುತ್ತೆ.

    1. ಧನ್ಯವಾದಗಳು ತಮ್ಮ,
      ಕನ್ ಫ್ಯೂಸ್ ಆದ್ರಿ ಅಂದ್ರೆ ಅರ್ಧ ಒಪ್ಪಿಕೊಂಡ ಹಾಗೆ ಅಲ್ಲವೇ? ಇರಲಿ ಆದರೆ ಕೆಲವರನ್ನು ಹೊರತುಪಡಿಸಿ ಅಂತ ಹೇಳಬಹುದು.

  2. ವಾವ್ಹ್‌.. ಪ್ರೀತಿ ಬಗ್ಗೆ, ಅದರ ಅತಃಸತ್ವದ ಬಗ್ಗೆ ತುಂಬಾ ಚೆನ್ನಾಗಿ ತಿಳಿ ಹೇಳಿದ್ದೀರ.
    ಧನ್ಯವಾದಗಳು..

  3. ದಿವ್ಯ ಮೇಡಂ,
    ನಿಮ್ಮ ಲೇಖನಗಳು ತುಂಬಾ ಅರ್ಥಪೂರ್ಣವಾಗಿರುತ್ತವೆ.. ಹಾಗೆಯೇ ಈ ಲೇಖನವುೂ ಸಹ ಅಷ್ಟೇ ತುಂಬಾ ಚೆನ್ನಾಗಿದೆ..
    ಆದರೆ ಈ ಲೇಖನದಲ್ಲಿ ನೀವು ಹೇಳಿರುವ ಮಾತುಗಳಾದ “ಹೆಣ್ಣಿಗಿಂತ ಗಂಡಿನಲ್ಲಿಯೇ ಮರೆವು ಹೆಚ್ಚು ಎಂದು ಕೇಳಿದ್ದೆ, ಹಾಗೆಯೇ ಅನಿಸುತ್ತದೆ ಕೂಡ. ಆದರೂ ಗಂಡು ಒಬ್ಬಳನ್ನು ಮರೆಯಲು ಮತ್ತೋಬ್ಬಳನ್ನು ಪ್ರೀತಿಸುತ್ತಾನೆ. ಒಂದು ಪ್ರೀತಿಯನ್ನು ಮರೆಯಲು ಮತ್ತೋಂದು ಪ್ರೀತಿಯನ್ನು ಬಯಸುತ್ತಾನೆ” …. ಎಂಬ ಮಾತನ್ನು ನಾನು ಒಪ್ಪುವುದಿಲ್ಲ ..ಯಾಕೆಂದರೆ ಒಂದು ಪ್ರೀತಿ ವೈಫಲ್ಯವಾದಾಗ ಅದರ ತೀವ್ರತೆ ನೋವು ಸಾಮಾನ್ಯವಾಗಿ ಜಾಸ್ತಿ ತಟ್ಟುವುದು ಹುಡುಗರಿಗೆ… ಆ ನೋವನ್ನು ಮರೆಯಲು ಇನ್ನೊಬ್ನಳನ್ನು ಪ್ರೀತಿಸುತ್ತಾನೆ ಎಂಬ ಮಾತು ಸುಳ್ಳು ..ಒಂದು ಪ್ರೀತಿ ನಡುವಿನಲ್ಲೇ ಅಂತ್ಯ ಕಂಡಾಗ ಅದರೊಳಗಿನ ನೋವಿನಿಂದ ಬೇಗ ಹೊರ ಬರುವುದು ಮಾತ್ರ ಹೆಣ್ಣು ಅಂತ ಖಚಿತವಾಗು ಹೇಳಬಲ್ಲೆ .. ಅದೇ ರೀತಿ ಧಿೀರ್ಗಕಾಲ ನೋವಿನಿಂದ ತೊಳಲಾಡುವುದು ಮಾತ್ರ ಹುಡುಗರೇ ..

Leave a Reply

Your email address will not be published. Required fields are marked *