
ಅದೊಂದು ಹಳೆಯ ಮರ! ಹಸಿರಿನ ಯಾವ ಕುರಹೂ ಇರದ ಬೋಳು ಮರ. ಅದರ ರೆಂಬೆ-ಕೊಂಬೆಗಳೆಲ್ಲ ಒಣಗಿವೆ. ಮರದ ಬೇರುಗಳಿನ್ನೂ ಸತ್ತಿಲ್ಲವಾದರೂ ನೆಲದ ಕಸುವ ಹೀರಿ ಕಾಂಡ ರೆಂಬೆ ಕೊಂಬೆಗಳಿಗೆ ಜೀವರಸ ತುಂಬಿ ಮತ್ತೆ ಹಸಿರೊಡೆಸುವ ಶಕ್ತಿ ಕ್ಷೀಣವಾಗಿದೆ.
ಅದು ಮುಂಚೆ ಹೀಗಿರಲಿಲ್ಲ. ಎಂತಾ ಬಿರು ಬೇಸಿಗೆಯಲ್ಲೂ ಮೈಯೆಲ್ಲಾ ಹಸಿರಾಗಿ ಕೈ ಇಟ್ಟಲ್ಲೆಲ್ಲಾ ಸಮೃದ್ದ ಹಣ್ಣುಗಳ ಖಜಾನೆ. ಅದರ ನೆರಳಲ್ಲಿ ದಣಿವಾರಿಸಿ ಕೊಂಡವರ, ಹಸಿವು ನೀಗಿಸಿಕೊಂಡವರ ಲೆಕ್ಕ ಸ್ವತ: ಅದಕ್ಕೂ ಸಿಕ್ಕಿಲ್ಲ. ಸದಾ ಹಕ್ಕಿಗಳ ಚಿಲಿಪಿಲಿಯಿಂದ ತುಂಬಿರುತ್ತಿದ್ದ ಮರವಿಂದು ಒಂಟಿಯಾಗಿದೆ. ಮೌನದಲಿ ಮೈ ಅದ್ದಿ ನಿಂತಿದೆ. ಒಂದು ಮಳೆಗಾಲದ ರಾತ್ರಿ ಹೊಡೆದ ಸಿಡಿಲು ಮರದ ರಸವನೆಲ್ಲ ಹೀರಿ ಅದನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಅಂದಿನಿಂದ ಮರಕ್ಕೆ ವಸಂತದ ನಿರೀಕ್ಷೆಯಾಗಲಿ, ಚಿಗುರೊಡೆವ ಕನಸಾಗಲಿ ಇಲ್ಲದೆ ,ಮತ್ತೆ ಮೈ ಕೊಡವಿ ಎದ್ದು ನಿಲ್ಲುವ ಶಕ್ತಿಯಿಲ್ಲದೆ ಸಾವಿಗಾಗಿ ಕಾಯುತ್ತಿದೆ.
ಹೀಗಿರುವಾಗ ಮರದ ಬುಡದಲ್ಲಿ ಪುಟ್ಟದೊಂದು ಹೂ-ಬಳ್ಳಿ ಮೊಳಕೆಯೊಡೆಯಿತು. ಚಿಗುರುತ್ತಾ ಚಿಗುರುತ್ತಾ ಮರವನ್ನದು ಒಂದು ಸುತ್ತು ಹಬ್ಬಿಕೊಂಡಿತು. ಈಗಿನ್ನೂ ಕುಡಿಯೊಡೆಯುತ್ತಿರುವ ಹೂ-ಬಳ್ಳಿಯ ಕಂಡು ಮರಕ್ಕೆ ಅಪಾರ ಸಂತೋಷವಾದರೂ,ಸಾವಿನಂಚು ತಲುಪಿರುವ ತನ್ನಿಂದ ಅದಕೆಲ್ಲಿ ತೊಂದರೆಯಾಗುತ್ತದೆಯೊ ಎಂದು ಆತಂಕವಾಯಿತು.
ಭಯ ತಡೆಯಲಾರದೆ ಒಂದು ದಿನ ಮರ ಬಾಗಿ ಬಳ್ಳಿಗೆ ಹೇಳಿತು:
ಓ,ನನ್ನ ಪುಟ್ಟ ಬಳ್ಳಿಯೆ, ನೀನು ನನ್ನನ್ನು ಹಬ್ಬ ಬೇಡ, ಹಸಿರಿರುವ ಗಟ್ಟಿಯಾದ ಬೇರೆಮರಕ್ಕೆ ನಿನ್ನ ಸುತ್ತಿಕೊ. ನಾನೋ ಈಗಲೋ ಆಗಲೋ ಬಿದ್ದು ಹೋಗಲು ಸಿದ್ದವಾಗಿರುವವನು. ಎಲ್ಲಾದರು ಹಸಿರಾಗಿ ಸುಖವಾಗಿರೆನ್ನ ಹೊಸ ಜೀವವೇ!
ಹಟಮಾರಿ ಹೂ-ಬಳ್ಳಿ ಮುಗುಳ್ನಕ್ಕಿತು:
ಇಲ್ಲಾ ನಾನು ಬೇರೇ ಮರಕ್ಕೆ ಹಬ್ಬಲಾರೆ. ನನಗೆ ನೀನೇ ಬೇಕು. ನೀನೇ ಸಾಕು. ನಿನ್ನಲ್ಲಿ ನನ್ನ ಕಾಪಾಡುವ ಶಕ್ತಿಯಿಲ್ಲದಿದ್ದರೇನು, ಪ್ರೀತಿ ತುಂಬಿದ ನಿನ್ನ ಸ್ಪರ್ಶ ಸಾಕೆನಗೆ! ಅನ್ನುತ್ತಾ ಬೆಳೆಯತೊಡಗಿತು. ಮರಕ್ಕೆ ಅದರ ಪ್ರೀತಿ ಕಂಡು ಸಂತೋಷವಾದರೂ,ಮನದಲ್ಲಿ ಹೇಳಲಾಗದ ಆತಂಕ!
ಹೀಗಿರಲು ಆ ವರ್ಷದ ಮೊದಲ ಮಳೆ ಬಿತ್ತು:
ಆ ಮಳೆಗೆ ಇಡೀಕಾಡು ಹರ್ಷದಿಂದ ಬೀಗತೊಡಗಿತು.
ತೊಯ್ದು ತೊಪ್ಪೆಯಾದ ಬಳ್ಳಿಯ ಪುಟ್ದ ಎಲೆಗಳಿಂದ ಉದುರಿದ ನೀರ ಹನಿಗಳು ಮರದ ಸುತ್ತಲ ನೆಲವನ್ನು ಹಸಿಯಾಗಿಸಿದವು. ತನ್ನೊಳಗಿನ ಬೇರುಗಳಲ್ಲಿ ಉದುಗಿದ್ದ ಅಳಿದುಳಿದ ಶಕ್ತಿಯನೆಲ್ಲ ಬಸಿದು ಮರ ನೆಲದ ಕಸುವ ಹೀರ ತೊಡಗಿತು. ತನ್ನ ಕಾಂಡ ರೆಂಬೆ-ಕೊಂಬೆಗಳಿಗೆ ಜೀವರಸ ತುಂಬತೊಡಗಿತು.
ಪ್ರತಿ ಮುಂಜಾವು ಸಂಜೆ ತೆಳುಗಾಳಿಗೆ ತಲೆದೂಗುತ್ತ ಬಳ್ಳಿ ಮರದ ಕಿವಿಯೊಳಗೆ ಪಿಸುಗುಟ್ಟುತ್ತಿತ್ತು.:
ನನ್ನ ಪ್ರೀತಿಯ ಮರವೇ!
ನಾನು ನಿನ್ನ
ಉಸಿರು
ನೀನು ನನ್ನ ಬದುಕಿನ ಪಥ
ನಿನಗೆ ಮರುಹುಟ್ಟು ನೀಡುವೆ
ನಾನು
ಜೀವ
ಸಂಜೀವಿನಿ!
ಆಶ್ಚರ್ಯವೆಂಬಂತೆ,ದಿನ ಕಳೆದಂತೆ ಮರ ಮತ್ತೆ ಚಿಗುರ ತೊಡಗಿತು. ಸಾವನ್ನು ಕನಸುತ್ತಿದ್ದ ಮರವೀಗ ಬದುಕಿನ ಕಡೆ ಮುಖ ಮಾಡತೊಡಗಿತು.
ಇದೀಗ ಬಳ್ಳಿ ಇಡೀ ಮರವ ಹಬ್ಬಿದೆ-ತಬ್ಬಿದೆ. ಪರಸ್ಪರ ಪ್ರೀತಿ ಶಕ್ತಿ ಧಾರೆ ಎರೆಯುತ್ತಾ ಹಸಿರು ಚಪ್ಪರ ಕಟ್ಟಲು ತಯಾರಿ ನಡೆಸಿವೆ!
-ಕು.ಸ.ಮಧುಸೂದನ ರಂಗೇನಹಳ್ಳಿ
Super sir.. Beautiful image, full of life n love.
Congratulations..