ಪ್ರೀತಿ ಪ್ರೇಮ

ಪ್ರೀತಿ, ಪ್ರೇಮ, ಪ್ರಣಯ: ಗಣೇಶ್ ಖರೆ

೧.
ನನಗಾಗ ಹದಿನೆಂಟು, ಅವಳಿಗೋ ಹದಿನೈದಿರಬಹುದು. ನೋಡಲು ಸುರಸುಂದರಿ. ಇನ್ನೇನು ಬೇಕು ಪ್ರೇಮಾಂಕುರವಾಗಲು? ನಮ್ಮ ಪ್ರೇಮಕ್ಕೆ ಕೆಲ ವರುಷಗಳೇ ಕಳೆದವು, ಅವಳಿಗೂ ನನ್ನ ಮೇಲೆ ಪ್ರೀತಿಯಿತ್ತು, ನನ್ನ ನೋಡಿದಾಗೆಲ್ಲ ಅವಳು ಬೀರುವ ಮುಗುಳ್ನಗೆಯೇ ಅದಕ್ಕೆ ಸಾಕ್ಷಿ. ಒಬ್ಬರಿಗೊಬ್ಬರು ಎಂದೂ ಪ್ರೇಮದ ಪ್ರಸ್ತಾಪವನ್ನು ಮಾಡಲಿಲ್ಲ. ಕೊನೆಗೆ ನಾನೇ ಮಡಿದೆ, ಅವಳಿಗೆ ಗುಲಾಬಿ ಕೊಟ್ಟಾಗ ನನಗೆ ವಯಸ್ಸು ಇಪ್ಪತ್ತೈದು. ಗುಲಾಬಿ ಪಡೆದು ನಾಚಿ ನಡೆದಿದ್ದಳು, ಅವಳ ಸಮ್ಮತಿ ಕಣ್ಣಲ್ಲೇ ವ್ಯಕ್ತಪಡಿಸಿದ್ದಳು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಅವಳಿಗೆ ಗುಲಾಬಿ ಅರ್ಪಿಸುತ್ತಿದ್ದೇನೆ. ಪ್ರೀತಿಯಿಂದ ಅವಳ ಕೈಗಲ್ಲ, ದುಃಖದಿಂದ ಅವಳ ಗೋರಿಯ ಮೇಲೆ. ನಾ ಗುಲಾಬಿ ಕೊಟ್ಟ ಮರುದಿನವೇ ಅಪಘಾತದಲ್ಲಿ ಅವಳ ಮೃತ್ಯುವಾಗಿತ್ತು. ನನ್ನ ಅವಳ ಗುಲಾಬಿಯ ನಂಟು ಇನ್ನೂ ಮುಗಿದಿಲ್ಲ, ನನಗೀಗ ಎಪ್ಪತ್ತೈದು.

೨.
ಅವಳೊಂದು ತೀರ, ಇವನೊಂದು ತೀರ. ಅವಳೊ ಅವನ ಪ್ರೀತಿಯಲ್ಲಿ ತೇಲಿಹೋದವಳು, ಅವನ ನಡೆ ನುಡಿಗೆಲ್ಲ ಮರುಳಾದವಳು. ಇವನಿಗೋ ಅವಳಂತವಳು ನೂರಾರು, ಎಲ್ಲರೊಂದಿಗೂ ಒಂದೇ ತರಹ ಬೆರೆಯುತ್ತಿದ್ದನವ. ಪರಸ್ಪರ ಇಬ್ಬರೂ ಭೇಟಿಯಾಗಿ ಮಾತನಾಡಿದರು, ಕೊನೆಗೂ ಒಂದಾಗಲಿಲ್ಲ, ಅವಳು ಇನ್ನೊಬ್ಬನನ್ನು ಮದುವೆಯಾದಳು, ಅವನೂ ಬೇರೆಯವಳನ್ನು ಮದುವೆಯಾದ. ವರ್ಷದೊಳಗೇ ಅವಳ ಗಂಡ ತೀರಿಹೋದ, ಅವನೂ ಹೆಂಡತಿಯನ್ನು ಬಿಟ್ಟ. ಒಂದು ದಿನ ಅವಳು ಮತ್ತು ಅವನು ಆಕಸ್ಮಿಕವಾಗಿ ಭೆಟಿಯಾದರು. ಹಳೆಯ ಪ್ರೇಮದ ಬೇರು ಮತ್ತೆ ಚಿಗುರೊಡೆಯಿತು. ಇವತ್ತು ಅವಳ ಮತ್ತು ಅವನ ಮದುವೆ. ನನಗೂ ಮದುವೆಯ ಕರೆ ಬಂದಿದೆ.

೩.
ಅವರಿಬ್ಬರದು ಆಳವಾದ ಪ್ರೇಮ, ಒಬ್ಬರಿಗೊಬ್ಬರು ಬಿಟ್ಟಿರದಷ್ಟು. ಮದುವೆಯ ಪ್ರಸ್ತಾಪವನ್ನು ಮನೆಯಲ್ಲಿಟ್ಟರು, ಹುಡುಗನ ಮನೆಯವರ ತಿರಸ್ಕಾರ. ಕಾರಣವಿಷ್ಟೇ ಹುಡುಗಿ ಕೆಟ್ಟ ನಕ್ಷತ್ರದಲ್ಲಿ ಹುಟ್ಟಿರುವುದು, ಇದರಿಂದ ಹುಡುಗನ ವೈವಾಹಿಕ ಜೀವನ ಸುಖವಾಗಿರದು ಎನ್ನುವುದು. ಇಬ್ಬರ ನೋವು ಹೇಳತೀರದು. ಕೊನೆಗೆ ಇಬ್ಬರೂ ತಮ್ಮ ಮನಸ್ಸನ್ನು ಗಟ್ಟಿ ಮಾಡಿ ಬೇರೆಬೇರೆಯಾದರು. ಇಬ್ಬರ ಮದುವೆಯೂ ಅನ್ಯರೊಂದಿಗೆ ನಡೆಯಿತು. ಎರಡು ವರ್ಷಗಳ ತರುವಾಯ ಅವಳು ಗಂಡ ಮಗುವಿನೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾಳೆ. ಅವನೋ ವರ್ಷದೊಳಗೇ ಹೆಂಡತಿಯೊಡನೆ ವಿಚ್ಚೇದನ ಪಡೆದು ಹೆಂಡದ ದಾಸನಾಗಿದ್ದಾನೆ. ಹುಡುಗನ ಮನೆಯವರು ಹಣೆಬರಹವನ್ನು ಹಳಿಯುತ್ತಿದ್ದಾರೆ.

೪.
ನಾನು ಅವಳನ್ನು ಪ್ರೀತಿಸುತ್ತಾ ಇದ್ದೆ, ಅವಳೋ ಅವನನ್ನು, ಅವನೋ ಇವಳನ್ನು, ಇವಳೋ ನನ್ನನ್ನು ಪ್ರೀತಿಸುತ್ತಾ ಇದ್ದಳು. ಇದು ಗೊತ್ತಾಗಿದ್ದು ಹೇಗೆನ್ನುವುದೇ ಒಂದು ವಿಶೇಷ. ನಾನು ಬರೆದ ಪ್ರೇಮ ಪತ್ರವನ್ನು ಅವಳಿಗೆ ನೀಡಿದ್ದೆ, ಅವಳು ಹೆಸರು ಬದಲಾಯಿಸಿ ಅವನಿಗೆ ಕೊಟ್ಟಳು, ಅವನೋ ಇವಳಿಗೆ ಕೊಟ್ಟಿದ್ದ, ಇವಳದನ್ನೇ ನನಗೆ ಕೊಟ್ಟಿದ್ದಳು. ನಾನು ಇವಳಿಗೆ ಇಲ್ಲವೆಂದೆ, ಇವಳು ಅವನಿಗೆಂದಳು, ಅವನು ಅವಳಿಗೆಂದ, ಅವಳು ನನಗಿಲ್ಲವೆಂದಳು. ಇದರ ಜಾಲು ಹಿಡಿದಾಗೆ ಇದು ತಿಳಿದಿದ್ದು. ಇದಕ್ಕೆ ಪರಿಹಾರ ಕಂಡುಕೊಳ್ಳಲು ನಾವೆಲ್ಲ ಒಟ್ಟಾದೆವು, ಕೊನೆಗೊಂದು ನಿರ್ಣಯವಾಯಿತು ಪ್ರತಿಯೊಬ್ಬರೂ ನಮ್ಮ ಗುಂಪಿನಲ್ಲಿರುವರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬೇಕೆಂದು.

೫.
ಅವರಿಬ್ಬರ ಪರಿಚಯ ಫೇಸ್ ಬುಕ್ಕಿನಲ್ಲಾದದ್ದು, ಇಬ್ಬರೂ ಬೇರೆ ಬೇರೆ ಊರಿನವರು. ಸ್ನೇಹ ದಿನ ಕಳೆದಂತೆ ಗಾಢವಾಯಿತು, ಕೆಲ ದಿನದಲ್ಲೇ ಪ್ರೇಮವಾಗಿ ಪರಿವರ್ತನೆಯಾಯಿತು. ಚಾಟಿಂಗ್ ನಲ್ಲಿ ಶುರುವಾದ ಗೆಳೆತನ ಕ್ರಮೇಣ ಮೊಬೈಲ್ ಮೆಸೇಜ್ ಗಳಲ್ಲಿ ತರುವಾಯ ತಾಸುಗಟ್ಟಲೇ ಹರಟುವಲ್ಲಿ ಬದಲಾವಣೆಯಾಯಿತು. ವರ್ಷಗಟ್ಟಲೇ ಹರಟಿದರು, ನಗು ಅಳುವಿನಲ್ಲಿ ಭಾಗಿಯಾದರು, ಪರಸ್ಪರ ವಿಚಾರಗಳನ್ನು ವಿನಿಮಯ ಮಾಡಿಕೊಂಡರು, ಸ್ಪಂದನೆಗಳನ್ನು ಹಂಚಿಕೊಂಡರು. ಕೊನೆಗೊಮ್ಮೆ ಪರಸ್ಪರ ಭೇಟಿಯಾಗುವ ನಿರ್ಣಯಕ್ಕೆ ಬಂದರು. ದಿನ, ಸ್ಥಳವನ್ನು ನಿರ್ಧರಿಸಿದರು. ಕೊನೆಗೂ ಅವರಿಬ್ಬರೂ ಮುಖಾಮುಖಿಯಾಗುವ ದಿನ ಬಂದೇಬಿಟ್ಟಿತು. ಪರಸ್ಪರ ಭೇಟಿಯಾದಾಗಲೇ ಗೊತ್ತಾಗಿದ್ದು ಅವರಿಬ್ಬರು ಅಕ್ಕ ತಮ್ಮನೆಂದು. ಇಬ್ಬರೂ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾಗಿದ್ದರು. ತಮ್ಮ ಅಪ್ಪ ಅಮ್ಮ, ಊರು ಕೇರಿ, ಮನೆ ಮಠ ಇವುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮುಂದುವರೆದಿದ್ದು ಇದಕ್ಕೆ ಕಾರಣವಾಗಿದ್ದು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *