ನಿನ್ನ ಪ್ರೇಮದ ಪರಿಯ
ನಾನರಿಯೇ ಕನಕಾಂಗಿ
ನಿನ್ನೊಳಿದೆ ನನ್ನ ಮನಸ್ಸು
ಎನ್ನುವ ಹುಡುಗ
ಮತ್ತು
ಹಂಬಲಿಸೊ ನಿನ್ನ ಕಂಗಳಲಿ
ಬೇರೇನೂ ಕಾಣದು ಹುಡುಗ
ನನ್ನ ದೊರೆಯು ನೀನೆ
ಆಸರೆಯು ನೀನೆ
ಎನ್ನುವ ಹುಡುಗಿಯ ಎದೆ ಬಗೆದು ನೋಡಿದರೂ ಕಾಣುವುದು ನಿರ್ಮಲವಾದ ಹಚ್ಚ ಹಸಿರಿನ ಸ್ವಚ್ಛ ಪ್ರೀತಿ ಮಾತ್ರ ಇದು ಈ ಜಗದ ನೀತಿ ಪ್ರೀತಿಯ ರೀತಿ.
ಹೌದು 'ಪ್ರೀತಿ' ಎಂಬ ಎರಡಕ್ಷರ ಪದಗಳಲ್ಲಿ ಹಿಡಿದಿಡಲಾಗದ ಭಾವ ನೌಕೆ..
ಪ್ರಪಂಚದ ಯಾವಜೀವಿಯನ್ನು ಬಿಡದೆ ಕಾಡುವ ಮಾಯಾಜಿಂಕೆ.
ಅಲ್ಲೆಲ್ಲೋ ಬಸ್ ಸ್ಟಾಂಡ್ ನಲ್ಲಿ ಕಿರುನಕ್ಕ ಹುಡುಗಿ ನಿದ್ದೆಗಣ್ಣಿನಲ್ಲೂ ಕಾಡಿದಂತೆ,
ನೆರೆಮನೆಯಲ್ಲಿ ಮಲ್ಲಿಗೆಯೊಂದು ಅರಳಿದಂತೆ,
ಕ್ಯಾಂಪಸ್ ನಲ್ಲಿ ಕಾಲ್ಗೆಜ್ಜೆ ಹೆಜ್ಜೆಗಳ ಹಿಂಬಾಲಿಸಿದಂತೆ,
ಪ್ರೀತಿಯ ಹುಡುಕಾಟ
ಅದಕ್ಕಾಗಿ ಕಾದಾಟ
ಅಂದು ಇಂದು ಮುಂದು ನಿತ್ಯ ನಿರಂತರ..
ಪ್ರೀತಿಯ ಹುಟ್ಟು ಸಾವು ಎರಡು ಜಗತ್ತಿನ ಪರಮ ಅದ್ಭುತವೆ..
ಹುಟ್ಟಿನ ನಲಿವು ಸಾವಿನ ವೇದನೆ ಅನುಭವಿಸಿದವರಷ್ಟೆ ಹೇಳಬಲ್ಲರು..
ಪ್ರೀತಿಯ ಆರಂಭವೆ ಹಾಗೇ
ಅಲೆಮಾರಿಯೊಬ್ಬ ಮನೆಯೊಳಗೆ ಬಂದಂತೆ ವಿಪರೀತ ತಲ್ಲಣ,ಭಯ,ಕುತೂಹಲ.
ಆಕಸ್ಮಿಕವಾಗಿ ಸಿಕ್ಕವಳು ದಿನವೂ ಸಿಗಲಿ,ನಂತರ ಒಂದಿಷ್ಟು ನಗಲಿ ಎಂದು ಹಂಬಲಿಸುವುದು
ನಕ್ಕಾಗ ಜಗಗೆದ್ದ ಖುಷಿಯಿಂದ ಸಂಭ್ರಮಿಸುವುದು..
ಅನುಕ್ಷಣ ಕಾಯುವುದು ..
ಅರೆಕ್ಷಣ ತಡವರಿಸಿ ನುಡಿಯುದು ಮಾತು,ಕೃತಿ,ಸ್ಮೃತಿ ಎಲ್ಲವೂ ನೀನೆ ಎನ್ನುವ ಅಪರೂಪದ ಅಂತರಾಳದ ಆಲಾಪನೆ.
ಆರಾಧನೆ ಆಕರ್ಷಣೆ ಎಲ್ಲಾ ನಿಂದೆನೇ ಎನ್ನುವ ಪ್ರತಿ ಪ್ರೀತಿಯ ಆರಂಭ ಅಪರೂಪವೂ ಹೌದು ಅದ್ಭುತವು ಹೌದು..
ನಂಬರ್ ಗಳು ಅದಲು ಬದಲಾಗಿ ಭೂಮಿನಿಂತಂತೆ ಬರಬರುತ್ತಾ ದಿನ ಚಿಕ್ಕದಾಗಿ ಬಿಟ್ಟಿರದ ಭಾವಬಂಧ ಸಂಬಂಧಕ್ಕೆ ಹಾತೊರೆದು ಮದುವೆಯ ಅನುಬಂಧದಲ್ಲಿ ದಾಂಪತ್ಯ ಕ್ಕೆ ಕಾಲಿಡುವುದು ಪ್ರೀತಿಯಲ್ಲಿ ಸಹಜ ತಾನೇ.
ಎಲ್ಲೋ ಕೇಳಿದ ಹಾಡೊಂದನ್ನು ಅವಳಿಗಾಗಿ ಗುನುಗೋದು..
ರೋಮಿಯೊ ಜ್ಯೂಲಿಯೆಟ್ ಕತೆ ಕೇಳಿ ನೋಯುವುದು
ಎಂದೋ ಮರೆತ ಮಾತೊಂದನ್ನು ಒಟ್ಟಿಗೆ ಹೇಳುವುದು,ಯಾವದೋ ಕವಿಯ ಭಾವ ತನ್ನದೆನ್ನುವುದು,
ಜಗತ್ತಿನ ಪ್ರೇಮಕಾವ್ಯಗಳಿಗೆಲ್ಲಾ ತಮ್ಮನ್ನು ಹೋಲಿಸಿಕೊಳ್ಳುತ್ತಾ,
" ನೀ ಹಿಂಗ ನೋಡಬ್ಯಾಡ ನನ್ನ" ಪದ್ಯಕ್ಕೆ ಹೊಸ ಅರ್ಥ ಕಟ್ಟಿ ತಿರುಗಿ ತಿರುಗಿ ನೋಡಿ ನಲಿಯುವುದು ಪ್ರೀತಿಯಲ್ಲಿ ಮಾಮೂಲು..
ಹನಿಹನಿಯಾಗಿ ಚಿಮ್ಮುವ ಪ್ರೀತಿ ತಂಪುತಂಪಾಗಿ ಬೆಚ್ಚಗಿನ ಭಾವವೊಂದು ಗುಲಾಬಿಯ ಮೇಲಿನ ಇಬ್ಬನಿಯಂತೆ ಕಾಡಿ ಕನವರಿಸುವ ಮುದ ಮುದ್ದಾದ ಅವಳ ನಗುವಿನಂತೆ ಆಪ್ತವಾದದ್ದು.
ಎಷ್ಟೇ ಸನಿಹವಿದ್ದರೂ ಇನ್ನು ಹತ್ತಿರ ಇನ್ನು ಹತ್ತಿರ ಬರುವೆಯಾ ಎನ್ನುತ್ತಾ ಹತ್ತಿರಕ್ಕೆ ಸೆಳೆಯುವ ಮನದ ರೀತಿಗೆ ಸವಿ ಮಾತಿಗೆ ಕೊನೆಯೆಲ್ಲಿಯದು ಶುರುಎಲ್ಲಿಯದು.
ಅರ್ಥವಾಗದ ಪ್ರೀತಿ ಅತಂತ್ರವಾಗಿಯೆ ಕೊನೆಗೊಳ್ಳುತ್ತದಂತೆ,
ಸ್ವಚ್ಛ ಪ್ರೀತಿಯ ಅಮಲಿಗೆ ಸ್ವಾರ್ಥದ ತೆವಲು ತಾಗಿದರೆ ಮುಗಿದ ಹಣತೆಯಲ್ಲಿ ಬೆಳಕ ಹುಡುಕಿದಂತೆ ವ್ಯರ್ಥವಷ್ಟೇ..
ಹುಚ್ಚು ಕನಸಿನ ಬೆನ್ನುಹತ್ತಿದ ಪ್ರೀತಿ
ಕತ್ತಲೆಯಲ್ಲಿ ಬಂದಿಯಾಗಿ ಮನಸ್ಸು
ಖಾಲಿ ಖಾಲಿಯಾಗಿ ಹರಿದ ಜೋಕಾಲಿಯಾಗುತ್ತದೆ.
ಅಪರೂಪಕ್ಕೆ ಆಗುವ ಕ್ರಷ್ ಕೂಡಾ ಹೆಚ್ಚುಕಾಲ ಪ್ರೆಷ್ ಆಗಿರಲು ಅಸಾಧ್ಯ..
ವಿವರಣೆಗೆ ನಿಲುಕದ ವಿಕೃತಿಯಾಗಿ ಬಂದಷ್ಟೆ ಬೇಗ ಮರೆಯಾಗುದಷ್ಟೆ ಅದರ ಸಾಧನೆ.
ನನಗವಳು ಇಷ್ಟ
ಯಾಕಿಷ್ಟ
ಗೊತ್ತಿಲ್ಲ ಬಲುಇಷ್ಟ
ಎನ್ನುವವರು ಇಷ್ಟಪಟ್ಟೆ ಹೇಳಿರುತ್ತಾರೆ 'ಸುಳ್ಳನ್ನು'…
ಪ್ರೀತಿ ಅನುಭವದ ಆಲಾಪನೆಗಿಂತ ಆತ್ಮದ ಸಂವೇದನೆಯಾದರೆ ಬಲು ಮಧುರ..
ಕಲ್ಲು ಕರಗುವ
ಹೂ ಅರಳುವ
ದೀಪ ಬೆಳಗುವ
ಜಗದ ಸೋಜಿಗ
ಪ್ರೀತಿಯಲ್ಲಿ ಮಾತ್ರ ಕಾಣಲುಸಾಧ್ಯ..
ಅಂದಹಾಗೆ ಸಕಾರಣವಿಲ್ಲದೆ ಪ್ರೀತಿ ಹುಟ್ಟಲೇ ಬಾರದು..
ಕಾರಣವಿಲ್ಲದೆ ಪ್ರೀತಿ ಹುಟ್ಟೋದು
ಸುಖಾಸುಮ್ಮನೆ ಇಷ್ಟವಾಗುವುದು ಸಿನೆಮಾದಲ್ಲಿ ಮಾತ್ರ..
ಆದರೆ ಬದುಕಿನಲ್ಲಿ ಭಾವನೆ ಗಳೆ ಬದುಕ ಬೆಸೆಯುವ ಬಳ್ಳಿಗಳು
ಬೆರೆತ ಜೀವಗಳು ಪರಸ್ಪರ ಅರಿತುಕೊಂಡಮೇಲೆ ಉಳಿಯುವುದು ಬೆಳೆಯುವುದು ಅಂತರಾತ್ಮದ ದಿವ್ಯಸಾಂಗತ್ಯದ ಅರ್ಥಪೂರ್ಣ ಪ್ರೀತಿಯೊಂದೆ ಇದೇ ಸಕಾಲಿಕ ,ಶಾಶ್ವತ.
ನಂಬಿಕೆ, ತಾಳ್ಮೆ, ಕಾಳಜಿ
ಈ ಮೂರು ಪ್ರೀತಿಯ ಗಟ್ಟಿ ಬೇರುಗಳು.
ಎಲ್ಲೋ ಒಂದು ಅಸಹನೆ,ಸಣ್ಣದೊಂದು ಗುಮಾನಿ,ತಣ್ಣನೆಯ ನಿರ್ಲಕ್ಷ್ಯ ಪ್ರೇಮಪಲ್ಲವಿಯ ತಂತಿ ಕತ್ತರಿಸಿ ಎಸೆಯಬಹುದು.
ಪುಟ್ಟ ಪುಟ್ಟ ಜಗಳಗಳು ಪ್ರೇಮವನ್ನು ಗಟ್ಟಿಯಾಗಿಸಬೇಕೆ ಹೊರತು ಕಾದ ಕಾವಲಿಯಾಗಿಸ ಬಾರದೆನ್ನುವುದು ಎಲ್ಲಾ ಪ್ರೇಮಿಗಳ ಮನದಿಚ್ಛೆ.
ಜಗತ್ತಿನಲ್ಲಿ
ಮಗುವಾಗು ನೀನು
ಮಡಿಲಾಗುವೆ ನಾನು
ಎಂದು ಅಕ್ಕರೆ ಚೆಲ್ಲುವ ಹುಡಗನಿಗೆ ಸೋಲದ ಹುಡುಗಿ ಇದ್ದಾಳೇನು??
ಪ್ರೀತಿ ಗೆಲ್ಲುವುದೇ ಹಾಗೆ..
ಪರಸ್ಪರರಲ್ಲಿ ಸಮರ್ಪಣೆಯ ಭಾವವೇ ಇದರ ಜೀವಾಳ.
ಅನುರಾಗ ಇರುವಾಗ
ಸಾವೆಲ್ಲಿಯದು ನೋವೆಲ್ಲಿಯದು.
ಯುಗ ಮರುಳಾಗೊ
ಜಗದ ಸವಿ ಪ್ರೇಮಕ್ಕೆ
ಕರಗದ ಕವಿ ಯಾರಿದ್ದಾರೆ??
ಒಂದು ಮುಗುಳ್ನಗೆಯಲ್ಲಿ
ಅರಳಿದ ಪ್ರೀತಿಗೆ
ಒಂದಿಷ್ಟು ಕಾಳಜಿ
ಹಸಿ ಬಿಸಿ ತುಂಟಾಟ
ಚೂರುಪಾರು ವಿರಹ.
ಜೊತೆಗೊಮ್ಮೆ ವಿಹಾರ,
ಮೌನದಲ್ಲಿ ವಿನೋದ
ಮಾತಿನಲಿ ಮೆಚ್ಚುಗೆ ಇದ್ದರಷ್ಟೆ ಸಾಕು ಈ ಪ್ರೇಮ ನಿತ್ಯ ನೂತನ ವಿನೂತನವಲ್ಲವೇ???
ನಾನು ಬಡವಿ
ಆತ ಬಡವ
ಒಲವೇ ನಮ್ಮ ಬದುಕು
ಎಂದ ಬೇಂದ್ರೆ ಅಜ್ಜನ ಮಾತಿನಂತೆಯೇ ಪ್ರೀತಿ ಜಗದ ರೀತಿಯಾಗಿ ಜಗವೆಲ್ಲಾ ಪ್ರೇಮಮಯವಾಗಿ
ಪ್ರತಿ ಪ್ರೀತಿಯ ಪಲ್ಲವಿಯೂ ಪ್ರೇಮವೇ ಆದರೆ ಎಷ್ಟು ಚೆನ್ನ ಅಲ್ವಾ? ???
ದಿವ್ಯಾಧರ ಶೆಟ್ಟಿ ಕೆರಾಡಿ
ಪ್ರೀತಿಯ ಬರಹ; ಮುದ್ದಾಗಿ ಇದೆ.