ಪ್ರೀತಿ ಕಾಣದ ಮನಸು: ಚಂದ್ರಯ್ಯ ಕೆ. ಎಚ್.

ಆಕೆಯ ಮುಖದಲ್ಲಿದ್ದ ಸಂಭ್ರಮ ಮನಸಲಿಲ್ಲ. ಮನಸಿನ ವೇದನೆಯ ಕಹಿ ಘಟನೆಗಳ ಅರಿಯುವರಾರಿಲ್ಲ, ದಾರಿಯುದ್ದಕ್ಕೂ ಮುಳ್ಳುಗಳ ರಾಶಿ, ಹತ್ತಿರ ಹೋದಷ್ಟು ಸಂಬಂಧಗಳು ದೂರ. ಆದರೆ ಆಕೆಯ ಮುಖದಲ್ಲಿ ಇದ್ಯಾವುದರ ಪರಿವಿಲ್ಲದಂತೆ ನರ್ತಿಸುವ ಪಂಚೇಂದ್ರಿಯಗಳು, ಮನಸ್ಸಿನ ನೋವು ಮನಸಿರುವವರಿಗೆ ಮಾತ್ರ ತಿಳಿಯುವುದು.

ಒಂಟಿಯಾದಷ್ಟು ಕಷ್ಟ-ನೋವುಗಳ ಸುರಿಮಳೆ ಗುಡುಗು-ಮಿಂಚಂತೆ ಆಗಾಗ ಬಂದು ಹೋಗುತ್ತಿವೆ. ಜೀವ ಕಳೆದುಕೊಳ್ಳಲು ಮುಂದಾಗದ ಮನಸ್ಸು, ಜೀವನ ಸಾಗಿಸಲು ಸಂಬಂಧವಿದ್ದರೂ ಇಲ್ಲದಂತಾದ ಸಂಸಾರ. ಬದುಕಿನ ಜಂಜಾಟಗಳ ಸುಳಿಯಲ್ಲಿ ಸಿಕ್ಕು ಬಲಿಯಾಗುತ್ತಿರುವ ಆಕೆಯ ನೋವುಗಳನ್ನು ಅರಿಯುವರಾರು.

ಸದಾ ಏನನ್ನೋ ಕಳೆದುಕೊಂಡಂತೆ ತವಕಿಸುತ್ತಿರುವ ಮನಸ್ಸು, ಸಂಗಾತಿಯಿದ್ದರೂ ಏಕಾಂಗಿಯಾಗಿ ಜೀವಿಸುವ ಸ್ಥಿತಿ. ನನ್ನೀ ಸ್ಥಿತಿ ಮತ್ತಾರಿಗೂ ಬರಬಾರದೆಂಬ ಪ್ರಾರ್ಥನೆ ದೇವರಲ್ಲಿ. ಆಕಾಶ ಬಾಗಿದಂತೆ ಕಂಡರೂ ಎಷ್ಟು ದೂರು ಕ್ರಮಿಸಿದರೂ ಕೈಗೆ ಸಿಗಲಾರದು. ಜೀವನ ಕೈಗೆ ಸಿಕ್ಕಂತಾದರೂ ಸಿಗದು. ಹೃದಯದ ಮಾತು ಕೇಳುವವರಿಲ್ಲ, ಚಿಗುರೊಡೆದ ಮೊಳಕೆ ಚಿಗುರಲು ನೀರೆರೆಯುವರಿಲ್ಲ. ಮನಸ್ಸಿನ ಆಸೆ ಅರಿಯುವವರಿಲ್ಲದೆ ಸತ್ವ ಕಳೆದುಕೊಂಡಿದೆ ಹೃದಯ.

ಮೋಡದಂಚಲ್ಲಿ ಹೆಪ್ಪುಗಟ್ಟಿದ ನೀರು. ಆಕೆಯ ಕಣ್ಣರೆಪ್ಪೆಯಲ್ಲಿ ತುಂಬಿಕೊಂಡ ಕಣ್ಣೀರು ಜಾರಲು ಮುಂದಾಗದೆ ಹೆಪ್ಪುಗಟ್ಟಿ ಕಣ್ಣ ಕೆಂಪಾಗಾಗಿಸಿದೆ. ಹೃದಯದಲ್ಲಿ ಮೂಡುವ ಬೆಳಕು ಜೀವನದ ಕತ್ತಲನ್ನು ಹೋಗಲಾಡಿಸಲಾಗಲಿಲ್ಲ. ದಕ್ಕಿದ ಪ್ರೀತಿ, ಪ್ರೀತಿಯಾಗದೇ ಮೋಹಕ್ಕೆ ತಿರುಗಿತು. ಪ್ರೀತಿ ಹುಡುಕಿದಷ್ಟು ಆಕಾಶದೆತ್ತರ, ಸ್ನೇಹ ದೊರಕಲಿಲ್ಲ. ಜೀವನ ಕಹಿ ಘಟನೆಗಳ ಸಾಗರವಾಯಿತೇ ವಿನಃ ಸಿಹಿಯ ಒಂದನಿಯೂ ಇಲ್ಲ.

ಕಳೆದ ದಿನಗಳು ಕಳೆದುಹೋದವು ಮತ್ತೆ ಬಾರದ ಲೋಕಕೆ, ಆದರೆ ನಡೆದ ಘಟನೆಗಳು ಇಡೀ ಜೀವನವನ್ನೇ ತಳ್ಳುತ್ತಿವೆ ಮುಳ್ಳಿನ ಲೋಕಕೆ. ಆತ್ಮೀಯನಾರೋ, ಆಪತ್ಪಾಂಧವನಾರೊ ಎಂಬುದನ್ನು ತಿಳಿಯಲಾರದ ಮನಸ್ಸು ಕಳವಳ ವ್ಯಕ್ತಪಡಿಸುತ್ತಿದೆ.

ಹೃದಯದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಲು ಬಿಡದ ಪಾಪಿಗಳು, ಮತ್ತೆ ಬೀಜವ ಬಿತ್ತುವ ಕಾರ್ಯಕ್ಕೆ ಬಿಡದ ರಾಕ್ಷಸರು, ಜೀವನವೆಂಬ ಭೂಮಿಯನ್ನು ಬರಡು ಪ್ರದೇಶವಾಗಿ ಮಾಡಿಬಿಟ್ಟರು. ನನ್ನ ನಿವೇದನೆ ಯಾರಿಗೆ ಹೇಳಲಿ, ಯಾರು ಹಿತವರು, ಯಾರನ್ನು ನಂಬಲಿ ಎಂಬ ಹಲವು ಪ್ರಶ್ನೆಗಳು ಮನಸ್ಸಲ್ಲೇ ಉಳಿದವು. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುವರಾರು. ನನ್ನ ಜೀವನ ಬರೀ ಪ್ರಶ್ನೆಯೇ? ಉತ್ತರವಿಲ್ಲದ ನನ್ನ ಮುಂದಿನ ಜೀವನ ನಾನೇ ಊಹಿಸಿದಾದೆನು.  ನನ್ನಿ ಖೇದ ನನಗೆ ಮಾತ್ರ ಸೀಮಿತವಾಗಲಿ ಬೇರೆಯವರ ಬಾಳಲ್ಲಿ ವಿಧಿ ನೀ ಆಡಬೇಡ ಕಣ್ಣಾಮುಚ್ಚಾಲೆ. . . . . .

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x