ಪ್ರೀತಿ ಎಂದರೆ

ಪ್ರೀತಿ ಎಂದರೇನು??

ಪ್ರೀತಿ ಎಂಬ ಪದವೇ ಅಮೋಘ. ಆ ಶಬ್ದ ಕಿವಿಗೆ ಬೀಳುತ್ತಲೆ ನಮಗರಿವಿಲ್ಲದೆ ಅದೇಷ್ಟೋ ಭಾವಗಳು ಎದೆಯೊಳಗೆ ಒಮ್ಮೆ ಸುಳಿದಾಡಿಬಿಡುತ್ತವೆ. ಪ್ರೀತಿಯ ಮಧುರತೆಯೆ ಹಾಗೇ. ಅದರಲ್ಲಿ ಯಾವುದೇ ಸ್ವಾರ್ಥವಿಲ್ಲ ಪ್ರೀತಿಸುವ ಹೃದಯ ಸದಾ ಜೊತೆಯಿರಬೇಕು ಎಂಬುದೇ ಅದರ ಬಯಕೆ. ಇಲ್ಲಿ ಸಿರಿವಂತ-ಬಡವ, ಮೇಲು-ಕೀಳು ಎಂಬ ಮಾತೆ ಬರಲ್ಲ. ಯಾಕೆಂದರೆ ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ. ಜಾತಿ, ಧರ್ಮ, ಅಂದ-ಚಂದ, ಮೇಲು-ಕೀಳು ದೊಡ್ಡಸ್ತಿಕೆ ಅದೆಲ್ಲವನ್ನು ಮೆಟ್ಟಿ ಏರಿರುವುದು ಪ್ರೀತಿ. ಪ್ರೇಮದಲ್ಲಿರುವುದು ಹೃದಯಗಳ ಪಿಸುಮಾತುಗಳು, ಭಾವನೆಗಳ ಸಮಾಗಮ, ಮೌನಕವಿತೆ.

ಪ್ರೀತಿಯಲ್ಲಿ ಹೆಚ್ಚು-ಕಡಿಮೆ ಎಂಬುದಿಲ್ಲ. ಅದು ಎಲ್ಲೋ ಇಲ್ಲ. ನಮ್ಮಲ್ಲೇ ಇದೆ. ನಾವದನ್ನು ಅಪ್ಪಿಕೊಳ್ಳಬೇಕಿದೆ ಎಷ್ಟೇ. ಪ್ರೀತಿ ಎಂದರೇನು ಎಂಬುದನ್ನು ಹುಡುಕಲು ಸಮಯ ಕಳೆಯಬೇಡಿ. ಅದು ಉತ್ತರವಿಲ್ಲದ ಭಾವ. ಅದನೇನಿದ್ದರು ಅನುಭವಿಸಬೇಕು ಅಷ್ಟೇ ಹೆಚ್ಚೇನಿಲ್ಲ. ಪ್ರೀತಿ ಎಂದರೆ ಎಲ್ಲರಲ್ಲೂ ಅಪಾರ್ಥ ಭಾವಗಳೇ ಹೆಚ್ಚು. ಯಾಕೆ ಪ್ರೀತಿಯನ್ನು ಅಷ್ಟು ಅಪರಾಧಿ ಭಾವನೆಯಿಂದ ನೋಡುವಿರಿ. ತಾಯಿ ಮಗುವನ್ನು, ತಂದೆ ಮಗನನ್ನು, ಹಸು-ಕರುವನ್ನು, ಚಿಟ್ಟೆ ಮಕರಂದವನ್ನು, ಹೂವು-ದುಂಬಿಯನ್ನು, ಪ್ರಾಣಿ-ಪಕ್ಷಿ ನಿಸರ್ಗದ ಎಲ್ಲ ಜೀವಸಂಕುಲಕ್ಕು ಪ್ರೀತಿ ಬೇಕು. ಇಲ್ಲಿ “ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ” ಎಂಬ ಜಿ. ಎಸ್. ಎಸ್ ಅವರ ಸಾಲುಗಳನ್ನು ನೆನಪಿಸಿಕೊಳ್ಳಬಹುದು.

ಪ್ರೀತಿಗೆ ಬೇಕಾಗಿರುವುದು ಹಣ, ಅಂತಸ್ತು ಅಲ್ಲ. ಪ್ರೀತಿಸುವ ಹೃದಯ. ಆ ಹೃದಯಗಳನ್ನು ಅರ್ಥಮಾಡಿಕೊಳ್ಳುವ ಹೃದಯವಂತರು ನೀವಾಗಿ. .

ವಿಜಯಲಕ್ಷ್ಮೀ. ಅಮರೇಗೌಡ. ಪಾಟೀಲ


ಪ್ರೀತಿ ಎಂದರೆ ಸುಮಧುರ ಸೌಗಂಧ ಸೂಸುವ ಸುಮವಿದ್ದಂತೆ. ಪ್ರೀತಿಯ ನೆರಳಲ್ಲಿ ಮನಸ್ಸು ಸ್ವಚ್ಚಂದವಾಗಿ ವಿಹರಿಸುತ್ತದೆ. ಮನಸ್ಸು ಮನಸ್ಸು ಬೆರೆತು, ಸವಿಭಾವನೆಗಳು ಬೆಸೆದುಕೊಂಡಾಗಲೆ ಪ್ರೀತಿ ಎಂಬ ಸವಿ ರಾಗ ಲಹರಿ ಅಲೆ ಅಲೆಯಲ್ಲಿ ಸು ಸ್ವರ ಚೆಲ್ಲಿ ನಿತ್ಯವೂ ಸೊಬಗನ್ನೆರೆಯುವುದು. ಪ್ರೀತಿಯು ಮುನಿಯಿತೆಂದರೆ ಅತೀ ಘೋರ. ಬಾಳು ಬೇಡವೆನಿಸಿ ಬಿಡುತ್ತದೆ. ಅಗಲಿ ಇರದ ಜೀವಗಳು ಅಗಲಿಕೆಯ ಭಾರ ಹೊರಲಾಗದೆ ಸಮಾಧಿಯಾಗಿ ನಿಂತ ಅದೆಷ್ಟೋ ಘಟನೆಗಳೆ ಇದಕ್ಕೆ ಸಾಕ್ಷಿ. ಪ್ರೀತಿಯೊಂದು ಸವಿ ಬಂಧನ. ಆ ಸವಿಯನ್ನು ಉಳಿಸಿಕೊಳ್ಳಿ ಮಿತ್ರರೆ. ಕ್ಷುಲ್ಲಕ ಕಾರಣಕ್ಕೆ ಪ್ರೀತಿಯನ್ನು ಬಲಿ ಕೊಡದಿರಿ. ಹೃದಯದ ಹಿತವ ಹತ್ಯೆಗೈಯ್ಯದಿರಿ. ಬದುಕನ್ನು ಪ್ರೀತಿಸಿ, ಪ್ರೀತಿಯನ್ನು ಬದುಕಿಸಿ. ಪ್ರೇಮ ಪರ್ವ ನಿತ್ಯವೂ ವಿಜ್ರಂಭಿಸಲಿ.
ದಿನೇಶ್, ಎನ್,ಅಮ್ಮಿನಳ್ಳಿ. ಶಿರಸಿ.



ಪ್ರೀತಿ ಎಂದರೆ ಮನಸ್ಸುಗಳ ಮಿಲನ…….

 ಪ್ರೀತಿಗೆ ಹೊತ್ತು ಗೊತ್ತಿಲ್ಲ ಪ್ರೀತಿಗೆ ಕಾರಣ ಬೇಕಿಲ್ಲ ಎನ್ನುವ ಹಾಡು  ಪ್ರತಿಯೊಬ್ಬ ಪ್ರೇಮಿಗಳಿಗೆ ಅನ್ವಯವಾಗುವ ಪ್ರೇಮಗೀತೆ.. ಪ್ರೀತಿ ಎಂಬುದು ಭಾವನೆಯೊಂದಿಗೆ ಮಿಳಿತವಾದ ಲಹರಿ. ಪ್ರೀತಿಯು ತನ್ನದೇ ಪರಧಿಯೊಂದಿಗೆ ಎರಡು ಹೃದಯಗಳನ್ನು ಬೆಸೆಯುವ ಪವಿತ್ರ ಬಂಧ. ಬಾಹ್ಯ ಸೌಂದರ್ಯದಿಂದ ಹುಟ್ಟುವ ಪ್ರೀತಿ ಕೇವಲ ಆಕರ್ಷಣೆಯೇ ಹೊರತು ನಿರ್ಮಲ ಪ್ರೀತಿಯಲ್ಲ. ಪ್ರೀತಿಯಲ್ಲಿ ಬಿದ್ದವರು ಅದರ ಮೌಲ್ಯವನ್ನರಿತು ಬಾಳಬೇಕಿದೆ.

ಮನಸ್ಸಿನಲ್ಲಿರುವ ಆಸೆಯೊಂದು ಪ್ರೀತಿಯ ರೂಪ ಪಡೆದಾಗ ಅನೇಕ ತವಕ , ತಲ್ಲಣಗಳಿಗೆ ಒಳಗಾಗಿ ದ್ವಂದ್ವ ಚಿಂತನೆಗಳಿಗೆ ಆಹ್ವಾನ ನೀಡಬೇಕಾಗುತ್ತದೆ. ಮುಕ್ತ ಮನಸ್ಸಿನಿಂದ ಚಿಗುರಿದ ಪ್ರೀತಿಯನ್ನು ಯಾವುದೇ ಒತ್ತಡವಿಲ್ಲದೆ ಹೇಳಿಬೀಡಬೇಕು ಆಗ ಮನಸ್ಸಿನಲ್ಲಿ ನಿರಾಳಭಾವ ವೊಂದು ಮೈದೆಳೆದು ವಿಶೇಷ ಅನುಭವ ಪಡೆದುಕೊಳ್ಳಬಹುದು. ಎರಡು ಮನಸ್ಸುಗಳು ಪ್ರೀತಿಗೆ ಪರಸ್ಪರ ಒಪ್ಪಿಗೆ ಸೂಚಿಸಿ ಮಿಲನ ವಾಗುವುದು ಪ್ರೀತಿಯ ಪರಿಕಲ್ಪನೆಗೆ ವಿಶೇಷ ಅರ್ಥಬಂದಂತೆ.

 ಮನಸ್ಸುಗಳೆರಡು ಅಮೂರ್ತವಾಗಿ ಮಾತನಾಡಿದಾಗಲೇ ಪ್ರೀತಿಯ ಅಂತರ್ಯ ಅರಿಯಲು ಸಾಧ್ಯ. ಪದೇ ಪದೇ ಕಾಡುವ ಪ್ರೇಮದ ಹಾದಿ ಕನಸಿನಲ್ಲೂ ಹೊಸ ಬಗೆಯ ಪ್ರೀತಿಗೆ ನಾಂದಿ ಹಾಡುತ್ತದೆ. ಮನಸ್ಸಿನ ಅಳದಿಂದ ಹೊಸಬರುವ ಪಿಸುಮಾತುಗಳು ಸಾತ್ವಿಕ ಪ್ರೀತಿಗೆ ಬೆಂಬಲವಾಗಬಲ್ಲದು. ಪ್ರೀತಿಯು ಹೃದಯಗಳ ಸಂಕೇತದೊಂದಿಗೆ ಪ್ರಕಟಗೊಳ್ಳುವ ಅನನ್ಯ ಭಾವ. ಸೂಕ್ಷ್ಮ ಸಂವೇದನೆಯೊಂದಿಗೆ ವಿಶಾಲವಾಗಿದೆ ಪ್ರೀತಿಯ ಗುಂಗು. ಪ್ರೀತಿಯಿಲ್ಲದೆ ಮನುಷ್ಯ ಸಂಬಂಧ ಕಟ್ಟಿಯಾಗಲಾರದು. ಹಂಗುಗಳ ಸರಪಳಿಯಿಂದ ಮುಕ್ತವಾದ ಪ್ರೇಮವು ಧಾರ್ಮಿಕ ಎಲ್ಲೆ ಮೀರಿದ ಬಾಂಧವ್ಯ. ಪ್ರಣಯದ ನೆಲೆಯಲ್ಲಿ ಮನಸ್ಸುಗಳ ಮಿಲನವಾದಗಲೇ ಪ್ರೀತಿಯ ಆಶಯ ನೇರವೆರಿದಂತೆ.    

 – ಪ್ರವೀಣ್ .ಪಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x