ಪಂಜು-ವಿಶೇಷ

ಪ್ರೀತಿ…ಹಾಗೆಂದರೇನು!!: ಸಹನಾ ಪ್ರಸಾದ್

ಮಾನಸಳನ್ನು ವರಿಸಲು ಪ್ರಜ್ವಲನಿಗೆ ಸುತರಾಂ ಇಷ್ಟ ಇರಲಿಲ್ಲ. ಮೊದಲನೆಯದಾಗಿ, ಅವಳನ್ನು ನೋಡಿದ ತಕ್ಷಣ ಯಾವ ಭಾವನೆಯೂ ಉದಯಿಸಿರಲಿಲ್ಲ. ಅವನ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಹೆಣ್ಣುಗಳ ಹಾಗೆ ಕಂಡಿದ್ದಳು. ಹೇಳಿಕೊಳ್ಳುವಂತಹ ವಿಶೇಷವೇನೂ ಅವಳಲ್ಲಿರಲಿಲ್ಲ. ವಯಸ್ಸು 28 ಆದರೂ ಮುಖದಲ್ಲಿ ಪ್ರೌಢ ಕಳೆ, ವಯಸ್ಸಿಗೆ ಮೀರಿದ ಗಾಂಭೀರ್ಯ..ಎರಡನೆಯದಾಗಿ ಅವನು ಪ್ರೀತಿಸಿದ್ದ ರಮ್ಯಳ ಚಿತ್ರ ಮನಸ್ಸಲ್ಲಿ ಇನ್ನು ಹಸಿಯಾಗಿತ್ತು. ಬೇರೊಬ್ಬನನ್ನು ವರಿಸಿ ಆಸ್ಟ್ರೇಲಿಯಾಗೆ ಹಾರಿದ ಅವಳ ನೆನಪಿನಿಂದ ಇನ್ನೂ ಹೊರಬರಲಾಗಿರಲಿಲ್ಲ. 34 ಹತ್ತಿರ ಬಂದ ವಯಸ್ಸು, ಆಗಲೇ ಬಿಳಿ ಆಗುತ್ತಿರುವ ಗಡ್ಡ, ತಲೆಕೂದಲು ಅವನನ್ನು ಮದುವೆಗೆ ಒಪ್ಪುವಂತೆ ಮಾಡಿತು. ಅವಳ ಕಡೆಯಿಂದಲೂ ಹೆಚ್ಚು ಉತ್ಸಾಹವೇನೂ ಇರಲಿಲ್ಲ. ಇಷ್ಟು ನೀರಸ ಜೋಡಿಯನ್ನು ನೋಡಿ ಇಬ್ಬರ ತಂದೆ ತಾಯಿಯರಿಗೆ ಆತಂಕ ಆಗಿದ್ದು ಸಹಜ.

ಅಂತೂ ಇಂತು ಮದುವೆ ಆಗಿ 2 ವರುಷ, ಅಷ್ಟರಲ್ಲಿ ಮಾನಸ ಗರ್ಭಿಣಿ. ಯಾಂತ್ರಿಕ ಜೀವನ, ಬೆಳಗ್ಗೆ ಏಳು, ಅಲ್ಪ ಸ್ವಲ್ಪ ಮನೆ ಕೆಲಸ ಮುಗಿಸು, ಕೆಲಸಕ್ಕೆ ಹೊರಡು, ಸುಸ್ತಾಗಿ ಬಾ, ಆದರೆ ಏನೋ ಒಂದು ಅಡುಗೆ ಮಾಡು, ಇಲ್ಲದಿದ್ದರೆ ಆರ್ಡರ್ ಮಾಡು, ತಿನ್ನು, ಮಲಗು..ಇಷ್ಟೇ ಜೀವನ. ಹೇಳಿಕೊಳ್ಳುವಂತಹ ವಿರಸ ಇಲ್ಲದಿದ್ರೂ ಪ್ರೀತಿಯಂತೂ ಬಹಳ ಕಡಿಮೆ ಇತ್ತೆಂದರೆ ತಪ್ಪಾಗಲಾರದು. ದೈಹಿಕ ಪ್ರೀತಿಯೂ ಕಡಿಮೆ ಆದರೂ ಪ್ರಕೃತಿ ತನ್ನ ಮಹಿಮೆ ತೋರಿಸಿ, ಚೊಚ್ಚಲ ಮಗು ಮಡಿಲು ತುಂಬುವಷ್ಟರಲ್ಲಿ ಗಂಡ ಹೆಂಡತಿ ಸುಮಾರು ದೂರವೇ ಸರಿದಿದ್ದರು. ಮಗುವಿನ ಲಾಲನೆ, ಪಾಲನೆಯಲ್ಲಿ ದಿನ ಉರುಳಿ ಅಪ್ಪ, ಅಮ್ಮನ ಸ್ಥಾನಕ್ಕೇರಿದ ಅವರ ದಾಂಪತ್ಯ ಜೀವನ ಇನ್ನು ಹಳಸಿತ್ತು. ಆದರೆ ಪ್ರಪಂಚದ ಕಣ್ಣಿಗೆ ಇವರದ್ದು ಸುಖ ಸಂಸಾರ.

ಮಗುವಿಗೆ 5 ತುಂಬಿದಾಗ ಮಾನಸ ಖಾಯಿಲೆ ಬಿದ್ದಳು. ಸಿಕ್ಕಾಪಟ್ಟೆ ಕೆಲಸ, ಯದ್ವಾತದ್ವಾ ಟೈಮಿಂಗ್ಸ್, ಸರಿಯಾದ ಸಮಯಕ್ಕೆ ಊಟ, ತಿಂಡಿ ಇಲ್ಲ, ಮಾನಸಿಕ ಒತ್ತಡ…ಎಲ್ಲದರ ಪರಿಣಾಮ ಎಂದರು ಡಾಕ್ಟರ್. ಮಗು ಅಜ್ಜಿ ತಾತನ ಹತ್ತಿರ ಬೆಳೆಯತೊಡಗಿತು. ತನಗೇ ಆಶ್ಚರ್ಯ ಆಗುವಂತೆ ಪ್ರಜ್ವಲ್ ಕೊರಗತೊಡಗಿದ.

ಇಷ್ಟು ದಿನ ಇಲ್ಲದಿದ್ದ ಪ್ರೀತಿ ಮೂಡತೊಡಗಿತು. ಕಾಣದಿದ್ದ ಸೌಂದರ್ಯ ಮನ ಸೂರೆಗೊಳ್ಳತೊಡಗಿತು. ಮನೆಯೊಡತಿ ಮಲಗಿದ ಮೇಲೆ ಮನೆ ಬರಡಾಗಿತ್ತು, ಮನ ಸಂಪೂರ್ಣವಾಗಿ ಖಿನ್ನವಾಗತೊಡಗಿತ್ತು. ಇಷ್ಟು ವರುಷ ವ್ಯಕ್ತ ಪಡಿಸಲಾಗದ ಒಲವು ಮನಸ್ಸನ್ನು ಕೊರೆದು ಹೊರಬರಲು ಕಾತರಗೊಂಡಿತ್ತು. ಆದರೆ ಯಾವುದೋ ಅಹಂ ಬಾಯಿಗೆ ಬೀಗ ಹಾಕಿ ಅವನನ್ನು ಸುಮ್ಮನಾಗಿಸಿತ್ತು. ಮನೆ ಕೆಲಸ ನೋಡಿಕೊಳ್ಳಲು, ಅಡುಗೆ ಮಾಡಲು, ಮಾನಸನಿಗೆ ಸಹಾಯ ಮಾಡಲು ಒಬ್ಬಾಕೆ ನೇಮಕಗೊಂಡರು. ಹೆಂಡತಿಯ ರೂಮಿನ ಮುಂದೆ ಅಡ್ಡಾಡುವುದು, ಮಲಗಿದ ಅವಳ ಮುಖ ದಿಟ್ಟಿಸುವುದು, ಅವಳ ಸನಿಹಕ್ಕೆ ಹಾತೊರೆಯುವುದು ನಡೆದೇ ಇತ್ತು. ಆದರೆ ಹೇಳಿಕೊಳ್ಳಲು ಕಷ್ಟ. ಮೌನದ ಭಾಷೆ ಅರ್ಥವಾಗುವಷ್ಟು ಸಮಯ ಮಾನಸಳಿಗಿರಲಿಲ್ಲ. ಗಂಡನ ಬಗ್ಗೆ ಅವಳ ಮನದಲ್ಲಿದ್ದ ಮಾತು ಮನದಲ್ಲೇ ಉಳಿಯಿತು. ಅವನ ಮನಸ್ಸಿನ ಮಾತು ಕೂಡ ಎದೆಯಲ್ಲೇ ಹೂತು ಹೋಯಿತು. ಪ್ರೀತಿ ಎನ್ನುವುದರ ಅರ್ಥ ತೋರಿಕೆಯಲ್ಲಿಲ್ಲ ನಿಜ ಆದರೂ ತೋರಿಕೊಂಡರೆ ಪ್ರೀತಿ ಇನ್ನು ಉಕ್ಕಿ ಹರಿಯುವುದು!
ಸಹನಾ ಪ್ರಸಾದ್


ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಪ್ರೀತಿ…ಹಾಗೆಂದರೇನು!!: ಸಹನಾ ಪ್ರಸಾದ್

  1. ಎಷ್ಟೋ ಸಂಸಾರಗಳು ಅಹಂ ಬಿಗುಮಾನದಿಂದಲೇ ಮುಗಿದು ಹೋಗಿಬಿಡುತ್ತವೆ. ದಂಪತಿಗಳು ಮೊದಲು ಪ್ರೇಮಿಗಳಾಗಬೇಕು. ಪ್ರೇಮನಿವೇದನೆಗೆ ಯಾವುದನ್ನೂ ಅಡ್ಡಿ ಮಾಡಿಕೊಳ್ಳಬಾರದು. ವಯಸ್ಸಂತೂ ಅಡ್ಡಿ ಅಲ್ಲವೇ ಅಲ್ಲ ಬಿಡಿ. ಯವ್ವನವನ್ನು ಬೇಕಾಬಿಟ್ಟಿ ಕಳೆದರೆ, ನಂತರದ ಅವಸ್ಥೆಯಲ್ಲಿ ಯವ್ವನದಲ್ಲಿ ಕಳೆದುಕೊಂಡದ್ದನ್ನು ಹುಡುಕಬೇಕಾಗುತ್ತದೆ. ಇನ್ನೊಂದು ವಿಷಯವೆಂದರೆ, ಮಕ್ಕಳನ್ನು ಅಜ್ಜ ಅಜ್ಜಿ ಮನೆಯಲ್ಲಿ ಬಿಡುವುದು, ಇದರಿಂದಂತೂ ದಾಂಪತ್ಯ ಮುಕ್ಕಾಲು ಪಾಲು ಹಳಸಿದಂತೆಯೇ ಸರಿ. ಚೆನ್ನಾಗಿ ಬರ್ದೀರಿ ಮೇಡಂ

Leave a Reply

Your email address will not be published. Required fields are marked *