ಪ್ರೀತಿಸಿ ಬಿದ್ದ ಯುವಜನರೇ ಭೇಷ್!: ಅಕ್ಷಯ ಕಾಂತಬೈಲು

                 
ಪ್ರೀತ್ಸೇ… ಪ್ರೀತ್ಸೇ… ಕಣ್ಣುಮುಚ್ಚಿ ನನ್ನೆ ಪ್ರೀತ್ಸೆ ಎಂಬ ಹಾಡಿನಂದದಿ ಪ್ರೀತಿಸಿ ಬಿದ್ದ ಯುವಜನರೇ ನಿಜಕ್ಕೂ ನೀವೇ ಭೇಷ್! ಯಾಕೆ ಗೊತ್ತುಂಟಾ; ಕೆಲವರಿಗೆ ಆ ಸುಖ ಮತ್ತು ಯಾತನೆ ಲಭಿಸಿಲ್ಲ. ಪ್ರೇಮ ಜೀವನವ ಸಾಂಗವಾಗಿ ನಡೆಸುತ್ತಿರುವಾಗ ಹಠಾತ್ತನೆ ಯಾವುದೋ ಒಂದು ಕಾರಣಕ್ಕೆ ನೀವು -ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗ ಅಥವಾ ಹುಡುಗಿ ಕೈಕೊಟ್ಟರೆಂದು ದೇವದಾಸನ ಥರ ಆಗಿ, ಆಕಾಶವೇ ಹರಿದುಬಿತ್ತು ಅಂದುಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಅರ್ಧಕ್ಕೆ ನಿಲ್ಲಿಸುವುದು, ಬೇರೆಯಾಗಿ ಬಿಟ್ಟೆವು ಎಂದು ಜೀವನದಲ್ಲಿಯೇ ಜಿಗುಪ್ಸೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗುವುದು, ಕೊನೆಗೊಂಡ ಪ್ರೇಮವ ಮರೆಯಲು ಹೆಂಡದ ಸಹವಾಸ ಮತ್ತು ಧೂಮಪಾನ ಮಾಡುವುದು, ಮಾರಕ ಡ್ರಗ್ಸ್ ಚಟ ಬೆಳೆಸಿಕೊಳ್ಳುವುದು ಇಂಥ ಸಮಾಜಬಾಹಿರ ಕೃತ್ಯಗಳನ್ನು ಮಾಡಿ ನಿಮ್ಮ ಅಮೂಲ್ಯವಾದ ಜೀವನಕ್ಕೆ ನೀವೇ ಬೆಂಕಿ ಹಾಕದಿರಿ. ನಿಮ್ಮನ್ನು ಬಿಟ್ಟು ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಹಾಗೆಯೇ ನಿಮ್ಮ ಭಗ್ನಗೊಂಡ ಪ್ರೇಮ ಕೂಡ ಶಾಶ್ವತವಲ್ಲ. 
                             
ಈಗಿನ ಕಂಪ್ಯೂಟರ್ ಯುಗದ ಒಂದು ದುರಂತವೆಂದರೆ ಸಿನಿಮಾ ಶೈಲಿಯ ಪ್ರೀತಿಸುವಿಕೆ; ಹಿನ್ನಲೆ ಗೊತ್ತಿಲ್ಲದೆ ನೋಡಿದ ತಕ್ಷಣ ಪ್ರೀತಿಯ ಭಾವ ಮೂಡುವುದು, ಮುಖ ಪರಿಚಯವಿಲ್ಲದೆಯೇ ಫೋನಿನಲ್ಲಿ ಪ್ರೀತಿ ಧ್ವನಿಸುವುದು, ಇಂಟರ್ನೆಟ್‌ನಲ್ಲಿ ಪರಸ್ಪರ ಫೋಟೋ ನೋಡಿ ಪ್ರೀತಿಸುವಿಕೆ ಇವುಗಳೆಲ್ಲವನ್ನೂ ಕೂಡ ಪ್ರೀತಿ ಅಂದುಕೊಂಡಿದೆ ಯುವಜನತೆ. ಅವು ನಿಜವಾದ ಪ್ರೀತಿಯಲ್ಲ ದೈಹಿಕವಾದ ಆಕರ್ಷಣೆಯಷ್ಟೆ. ಇಂಥ ಆಕರ್ಷಣೆಗಳಿಗೆ ದೀರ್ಘ ಬಾಳಿಕೆಯಿಲ್ಲ ಎಂಬುವುದರನ್ನು ಅರಿತು ನಮ್ಮ ಪ್ರೀತಿ ಯಾವ ರೀತಿಯದ್ದು ಅನ್ನುವುದನ್ನು ಪ್ರೀತಿಸುವ ಮೊದಲೇ ಯೋಚಿಸುವುದು ಉತ್ತಮ. 

ವೇದಾಂತದ ಪ್ರಕಾರವಾಗಿ ಹೇಳುವುದಾದರೆ ಏಳು ಜನುಮಗಳಲ್ಲಿ ನಮ್ಮೀ ಮಾನವ ಜನ್ಮ ಶ್ರೇಷ್ಠವಾದುದು. ಮತ್ತ್ಯಾಕೆ ಪ್ರೀತಿಯಲ್ಲಿ ಮಿಂದೆದ್ದ ನಿಮ್ಮ ಶರೀರಕ್ಕೆ ಪ್ರೀತಿ ಕೈಕೊಟ್ಟಿತೆಂಬ ಒಂದೇ ಒಂದು ಕಾರಣಕ್ಕಾಗಿ ಶಿಕ್ಷಿಸುವಿರಾ? ನೀವಿಬ್ಬರೂ ಪ್ರೀತಿಸಿದ್ದ ಕ್ಷಣಗಳನ್ನು ಆರಾಮವಾಗಿ ಕೂತು ಮೆಲುಕುಹಾಕಿ. ಆ ದಿನಗಳಲ್ಲಿ ಪ್ರೇಮಿಗಳಾಗಿದ್ದ ನೀವಿಬ್ಬರು -ಕಡಲತಡಿಯಲ್ಲಿ ಕೈ ಕೈ ಬೆಸೆದು ನಲಿದಿದ್ದು, ಜೊತೆಯಾಗಿ ಶಾಪಿಂಗ್ ಮಾಡಿದ್ದು, ಸಿನಿಮಾ ನೋಡಿದ್ದು, ಪಾರ್ಕಿನ ಕಲ್ಲುಬೆಂಚಿನಲ್ಲಿ ಕುಳಿತು ತಾಸುಗಟ್ಟಲೆ ಹರಟಿದ್ದು, ಪರಸ್ಪರ ಜೊಕ್ ಹೊಡೆದು ನಕ್ಕಿದ್ದ ಕ್ಷಣಗಳೂ ಸೇರಿರಬಹುದು. ಹಸಿರಾಗಿಯೇ ಅವೆಲ್ಲವನ್ನೂ ಒಮ್ಮೆ ನೆನಪಿಸಿಕೊಂಡು ಬಿಟ್ಟುಬಿಡಿ. ಪ್ರೀತಿಸುವಿಕೆ ಗುರುಕಲಿಸದ ವಿದ್ಯೆ ಎಂಬ ಮಾತಿದೆ. ಅದರಂತೆ ನೀವು ಪ್ರೀತಿಸಿದಿರಿ ಅದು ನಿಮ್ಮ ತಪ್ಪಲ್ಲ ಆದರೆ ನಮ್ಮ ಮುಂದಿನ ಭವಿಷ್ಯವನ್ನು ಚಿಂತಿಸದೆ ಸದಾ ಪ್ರೀತಿಯ ಚಿಂತೆಯಲ್ಲಿಯೇ ಕಾಲ ಕಳೆಯುವುದು ತಪ್ಪು. ಈ ಜಗತ್ತಿನಲ್ಲಿ ಯಾವ ರೀತಿಯಾಗಿ ಪವಾಡಗಳು ನಡೆಯಲ್ಪಡುತ್ತವೆಂದು ಯಾರೂ ಹೇಳಲು ಸಾಧ್ಯವಿಲ್ಲ. ನಿಮ್ಮ ಕಾಲಿನಲ್ಲಿ ನೀವು ನಿಂತಮೇಲೆ ಹಿಂದೆ ನೀವು ಪ್ರೀತಿಸಿದ್ದ ಅದೇ ಹುಡುಗ ಅಥವಾ ಹುಡುಗಿ ಸಿಕ್ಕಿ ನೀವಿಬ್ಬರೂ ಜೀವನ ಸಂಗಾತಿಗಳಾಗಲೂಬಹುದು ಯಾರು ಬಲ್ಲ…? ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಪ್ರೀತಿಸಿದ್ದ ಅನುಭವಗಳು ಮುಂದೆ ನಿಮಗೆ ಸಿಗುವ ಬಾಳ ಸಂಗಾತಿಯ ಜೊತೆ ಅನ್ಯೋನ್ಯವಾಗಿ ನಡೆದುಕೊಳ್ಳಲು ಸಹಕಾರಿಯಾಗಬಹುದಲ್ಲವೇ.

ನಾವು ದೈಹಿಕ ಮತ್ತು ಮಾನಸಿಕ ಆರೋಗ್ಯವಾಗಿದ್ದು, ಆರ್ಥಿಕವಾಗಿ ಸಬಲರಾಗಿದ್ದೇವೆಂದಾದರೆ ನಮಗೆ ಸರಿಹೊಂದುವವರನ್ನು ಪ್ರೀತಿಸಿ ಜೀವನ ಸಂಗಾತಿಯನ್ನಾಗಿಸಲು ಕಷ್ಟಪಡಬೇಕಾಗಿಲ್ಲ. ಹಾಗಾಗಿ ಮಿತ್ರರೇ ನಿಮ್ಮ ಸುಟ್ಟುಹೋದ ಪ್ರೀತಿಯನ್ನು ಯೋಚಿಸಿ ಕಣ್ಣೀರಿಡಬೇಡಿ. ಅದಾಗ್ಯೂ ನಿಮ್ಮಿಬ್ಬರ ಪ್ರೀತಿ -ಬಾಂಧವ್ಯದ ಕೊರತೆಯಿಂದ, ಆರ್ಥಿಕ ದೃಷ್ಟಿಯಿಂದ, ವಿದ್ಯಾರ್ಜನೆ ನೆಲೆಯಿಂದ, ಕೌಟುಂಬಿಕ ಕಾರಣಗಳಿಂದ, ವಯಸ್ಸಿನ ಅಂತರದಿಂದ ಹೀಗೆ ನಾನಾ ವಿಧದಿಂದಲಾಗಿ ಕೊನೆಗೊಂಡಿರಬಹುದು. ಆ ಕೊರತೆಯನ್ನು ನೀಗಿಸಲು ಮತ್ತು ಅದರಿಂದ ಹೇಗೆ ಮೇಲೆ ಬರಬಹುದೆಂದು ಸಮಯ ತೆಗೆದುಕೊಂಡು ಯೋಚನೆಮಾಡಿ. ನಿಮ್ಮ ಸುತ್ತಮುತ್ತಲಿರುವ ಹಿರಿಯರ ಬದುಕಿನಲ್ಲಿಯೂ ಜವ್ವನದಲ್ಲಿ ಮಾಡಿದ್ದ ರಸವತ್ತಾದ ಪ್ರೇಮ ಕಥೆಗಳಿರುತ್ತವೆ, ಒಮ್ಮೆ ಕೇಳಿ ನೋಡಿ. ಅವರೂ ಕೂಡ ಹರೆಯದಲ್ಲಿ ಇಂಥವುಗಳನ್ನೆಲ್ಲಾ ಮಾಡಿಬಿಟ್ಟು ಎದ್ದು ಬಂದವರೇ ಗಟ್ಟಿಗೆ ಸಂಸಾರ ಕಟ್ಟಿದವರೇ ತಾನೆ. ಇನ್ನೇಕೆ ಕಿರಿಯವರಾದ ನಮಗೆ ಮುರಿದುಬಿದ್ದ ಪ್ರೀತಿಯ ಬಗ್ಗೆ ಯೋಚನೆ. 
                                                     
ಅಕ್ಷಯ ಕಾಂತಬೈಲು

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x