ಪ್ರೀತಿಯ ಯಾನಕ್ಕೆ ಏರಿಳಿತಗಳ ಓಟ, ನನ್ನವಳು ಜೊತೆಗಿದ್ದರೇ ಅದ ಮರೆವ ಆಟ
ನನ್ನ(ಅ)ವಳ ಪ್ರೀತಿಗೆ ಇಂದು 8 ವರ್ಷಗಳ ‘ವಸಂತ’. ಎಂದೂ, ಯಾವತ್ತೂ ದೂರಾಗಿದ್ದಿಲ್ಲ. ಭಾವನೆಗಳ ತೋಯ್ದಾಟದಲ್ಲಿ ನಾವಿಬ್ಬರೂ ಎಂದು ಒಂದೆಂಬ ಭಾವನೆ. ಕಲ್ಪನೆಯ ಗೂಡಲ್ಲಿ ಜೋತೆಯಾಗಿ ಹುಟ್ಟಿದ ಹಕ್ಕಿಗಳೆಂಬ ಭಾವನೆ ನಮ್ಮೊಳಗೆ.
ಅದೇಕೋ ಮುನಿಸು ನಮ್ಮಲ್ಲಿಲ್ಲ, ಪ್ರೀತಿಯೇ ನಮ್ಮೊಳಗೆಲ್ಲ. ನೋಡಿದ ಎಲ್ಲರೂ ಕಲಿಯುಗದ ಅಮರ ಪ್ರೇಮಿಗಳು ಎಂಬ ಭಾವನೆಯಿಂದಲೇ ನಮ್ಮನ್ನ ಕಂಡವರು. ಎಲ್ಲರ ಹಾಗೇ ನಾವು ಸುತ್ತಾಟ, ತಿರುಗಾಟ ಮಾಡಿದ್ದು ಅಲ್ಪವೇ, ಅದರೇ ಮನಸ್ಸೆಂಬ ಭಾವನೆಯ ಯಾನದೊಳಗೆ ನಾವಿಬ್ಬರು ತಿರುಗಾಡಿದ ಸ್ಥಳವಿಲ್ಲ, ಜೊತೆಯಾಗಿ ಹೆಜ್ಜೆ ಇಟ್ಟ ಹಾದಿ ಹುಡುಕುವುದಾದರೂ ಕಷ್ಟವೇ. ಹಾಗಂತ ನಾವು ಸದಾ ತಿರುಗಾಡೋ ಪೊರಂತೂ ಅಲ್ಲ.
ಸಂಜೆಯ ಯಾನವೆಂದರೇ ಅವಳಿಗೆ ತುಂಬಾ ಇಷ್ಟ, ಆ ಸಂಜೆಯಲಿ ಅವಳೊಟ್ಟಿಗೆ ಸುತ್ತಾಡಿದ್ದು, ತಿರುಗಾಡಿದ್ದು ಕಡಿಮೆ ಎಂದರೂ ಒಂದು ಅರ್ಧ ವಯಸ್ಸಿನ ದಾರಿ ಸವೆಸುವಷ್ಟು. ಆಗಂತ ಅವಳು ಕರೆದಾಗ ನಾನೆಂದೂ ಮುಖ ಸಿಂಡಿರಿಸಿಕೊಂಡು ಹೋಗದೇ ಬಿಟ್ಟಿಲ್ಲ. ನಾ ಬರೋದಿಲ್ಲವೆಂದರೂ ಅಕೆ ಬಿಡಬೇಕಲ್ಲ..? ನಾ ಎಷ್ಟೋ ಬಾರಿ ಆಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಾಗ, ಅವಳು ಮುನಿಸಿನ ಮುದ್ದು ಚೆಲುವೆಯಾದ್ದೂ ಉಂಟು.
ಒಮ್ಮೆ ಹೀಗಾಯಿತು.., ಸಂಜೆಯ ಹೊಂಬಣ್ಣ, ಪ್ರಕೃತಿಯ ನಿದ್ರಾವಸ್ಥೆಯ ನೋಡಲು ಹೊರಟೆವು. ಮುಂಗಾರು ಮಳೆಯ ಕೆಂಬಣ್ಣ ಬಾನ ತುಂಬಿತ್ತು.
ಕೈ ಕೈ ಹಿಡಿದು ಎಂದೂ ಜೊತೆ ಬಿಡದ ಜೋಡಿಗಳಂತೆ ಹೊರಟೆವು. ಎಷ್ಟು ದೂರ ಸಾಗಿದ್ದೇವೆ ಎಂಬುದು, ಮೈ ಮರೆತ ಪ್ರೀತಿಯ ಮಾತು ಸ್ವಲ್ಪ ಕಡಿಮೆಯಾದಾಗ ಅರಿವಾಗಿರಬೇಕು.
ಅಬ್ಬಾ..! ಆ ಸಂಜೆ ಇನ್ನೂ ನೆನಪು. ಬಾನ ಬಣ್ಣ ಮುಂಗಾರಿನ ಮಿಂಚಿನ ಜೊತೆಗೂಡಿತ್ತು. ಸಿಂಗಾರಗೊಂಡ ವಧುವಂತಾಗಿದ್ದ ಭುವಿ, ನವ ವರನ ಜೊತೆಗೆ ಕೂಡಲು ತವಕಿಸುತ್ತಿರುವಂತೆ ಕಂಡಿದ್ದು, ಅವಳದೇ ರೂಪಕ, ಉಪಮೆ ಸೇರಿಸಿ ಅಲ್ಲಿ ನೋಡಿ, ಆ ಮುಗಿಲ ಮುಂಗಾರಿನ ಮಿಂಚ, ಭೂಮಿ-ಭಾನು ಒಂದುಗೂಡಿಸಿದ ಚೆಂದನದ ಚಂದುರಂಗವನ್ನ ಎಂದು ಕಣ್ ರೆಪ್ಪೆ ಬಡಿಯದೇ ಹೇಳಿ ತೋರಿಸುತ್ತಲಿದ್ದಳು.
ಈ ಕಲ್ಪನಾ ಲೋಕದಲ್ಲಿ ಮೈ ಮರೆತು ಹೊರ ಬರುವ ಹೊತ್ತಿಗೆ ಬಹು ದೂರ ನನ್ನ ಅವಳ ಸಂಜೆ ಓಕುಳಿಯಾಟ ಸಾಗಿ ಹೋಗಿತ್ತು. ಅಂತೂ ಸಾವರಿಸಿಕೊಂಡು ಹಿಂದಿರುಗಿ ಮನೆ ಸೇರಿದ್ದೂ ಆಯ್ತು. ಆದರೇ ಅವಳ ವರ್ಣನೆಯ ಬಣ್ಣನೆ, ಕಣ್ ಪಿಳಿ ಪಿಳಿ ಗುಟ್ಟುತ್ತಾ, ಭಾವಾವೇಶ ತುಂಬಿ ಹೇಳುತ್ತಿದ್ದ ಆ ಸಂಜೆಯ ವರ್ಣನೆ ಮಾತ್ರ ಮೌನವಹಿಸಿದ್ದು, ನಿದ್ರಾದೇವಿಯ ಮೊರೆಕ್ಕಾಗಲೇ….!
ಮತ್ತದೇ ಬೆಳಗು, ಅವಳೊಟ್ಟಿಗೆ ಪ್ರೀತಿ ಬೆಸೆದ ಬೆಸುಗೆಯ ಕೊಂಡಿಯ ಬದುಕು…
ಬದುಕು ಹಲವು ದಿಕ್ಕುಗಳ ತಿರುವು ಮುರುವಾದರೂ ಎಂದೂ ಹೀಗೆ, ಹಾಗೆ ಎಂದು ನಾವಿಬ್ಬರೂ ಚಿಂತಿಸಿದ್ದಿಲ್ಲ. ಬಂದಿದ್ದು ಬರಲಿ, ಆ ದೇವರ ದಯೆ, ಕರುಣೆ, ಈ ಭುವಿಯ ಜನರ ಮೇಲೆ ಇರಲಿ ಎಂದೇ ಪ್ರತಿದಿನದ ನಮ್ಮ ಬದುಕಿನ ಸುಪ್ರಭಾತ. ಈ ಸುಪ್ರಭಾತದ ಜೊತೆಗೆ ದಿನದ ಬದುಕೂ ಪ್ರಾರಂಭ.
ಓ ಮರತೇ ಬಿಟ್ಟೆ, ಸಂಜೆಯ ಬಾನಿನ ಓಕುಳಿಯಷ್ಟೇ, ಅವಳ ಅಡುಗೆಯ ಊಟ ಚೆಂದ. ಬಗೆ ಬಗೆಯ ಭಕ್ಷ್ಯ ಬೋಜನ, ಅದರೊಟ್ಟಿಗೆ ಪ್ರೀತಿ ಬೆರೆಸಿದ ಮಾತು ಊಟಕ್ಕೆ ಕೂತಾಗ ನಮ್ಮಿಬ್ಬರಲ್ಲಿ ಸಾಗುತ್ತಲೇ ಇತ್ತು. ಅಡುಗೆಯ ರುಚಿಗೆ ಮನಸೋತೋ, ಅವಳ ಸಿಟ್ಟುಗೊಂಡಾಗ ಕಾಣುವ ಮೊಗದ ಚೆಂದ ಮತ್ತೊಮ್ಮೆ ಕಣ್ ತುಂಬಿಕೊಳ್ಳಲು ಚಾಡಿಸಿದರೇ, ಅವಳ ಮುನಿಸಿನೊಳಗಣ ಮುಖ ಭಾವಾಭಿವ್ಯಕ್ತಿ ಚೆಂದವೋ ಚೆಂದ..
ಹೀಗಿದ್ದ ನಮ್ಮ ಪ್ರೀತಿ ಇಂದು…,
ಅಷ್ಟ ವಸಂತಗಳ ಕಾಲ, ಸ್ನೇಹ ಜೊತೆಗೂಡಿದ ಪ್ರೀತಿಗೆ ಬರೋಬ್ಬರಿ ಅಷ್ಟ ವಸಂತ. ಅಶ್ಚರ್ಯ ಎನಿಸಬಹುದು ನಿಮಗೆ, ಆದರೂ ಈ ಮಾತು ಸತ್ಯ. ಸ್ನೇಹ ಪ್ರೀತಿಯಾಗಬಹುದು, ಪ್ರೀತಿ ಎಂದೂ ಸ್ನೇಹ ಆಗಲಾರದು ಎಂಬಂತೆ ನಮ್ಮಿಬ್ಬರ ಸ್ನೇಹ ತುಂಬಿದ ಪ್ರೀತಿಗೆ ಅಷ್ಟ ‘ವಸಂತ’.
ಪ್ರೀತಿಯ ಹೊಸತರಲ್ಲಿ, ಕಣ್ ಮುಚ್ಚಿದರೂ, ಪೋನ್ ಹಿಡಿದು ರಿಂಗಾಯಿಸ ಹೊರಟರೂ, ಅವಳದೇ ನೆನಪು. ಪ್ರತಿ ದಿನದ ಮೊದಲ ಕರೆ ಅವಳಿಗೆ ಮೀಸಲು.
ಆದರೇ…!
ಈಗ ಮೌನ, ಬರೀ ಮೌನ, ಕತ್ತಲು. ಮನೆಯಲ್ಲಿ ಅಷ್ಟೇ ಅಲ್ಲ, ಮನಸ್ಸಿನ ಒಳಗೆಲ್ಲ ಕತ್ತಲು.
ಪ್ರೀತಿ ಹುಟ್ಟಿಸಿ, ಸ್ನೇಹ ದೂರ ಸರಿಸಿ, ಬಾಳ ಸಂಗಾತಿಗಳಾಗುವ ತಹ ತಹಿಕೆಯಲಿ, ಸ್ನೇಹ ತುಂಬಿದ ಪ್ರೀತಿಯಲಿ ಬಿರುಕು ಮೂಡಿತು. ಬಾಳೆಲ್ಲ ಕತ್ತಲಾಯಿತು. ಎಂಟು ವರ್ಷದ ಸ್ನೇಹ ತುಂಬಿದ ಪ್ರೀತಿ, ಮದುವೆ ಎಂಬ ಪೆಡಂಭೂತಕ್ಕೆ ಜೋತು ಬಿದ್ದು, ಒಂದೇ ಕ್ಷಣದಲ್ಲಿ ದೂರಾಗೇ ಹೊಯ್ತು.
ಆದರೇ.., ನೆನಪು, ಪ್ರತಿ ಮಾತು, ಪ್ರೀತಿಯ ಒಡನಾಟ ಮಾತ್ರ, ಎಷ್ಟೇ ಅವಳು ದೂರಾಗಿ ಹೋದರೂ, ದೂರವಾಗಲೇ ಇಲ್ಲ.
ಹಠವಿತ್ತು, ಮನಸ್ಸಿನಾಳದಲ್ಲಿ ಮುನಿಸಿದ್ದರೂ, ಪ್ರೀತಿಯ ಒತ್ತಾಸೆ ಉಕ್ಕಿ ಉಕ್ಕಿ ಬರುತ್ತಿತ್ತು. ಮತ್ತೆ ಸೇರಿ, ಸ್ನೇಹದ ಪ್ರೀತಿಯ ಬೆರೆಸಿ ಸ್ರವಿಸುವ ಹಂಬಲ ತಕ ತಕನೆ ಕುಣಿಯುತಲಿತ್ತು.
ಬಿಟ್ಟೋದ ಗಳಿಗೆಯಿಂದ ಇದಕ್ಕೆಲ್ಲ ಸ್ವಲ್ಪ ತಡೆಯಾದರೂ, ಆಗಾಗ ಸೂಸುವ ಅವಳೆಡೆಯ ಸುಗಂಧ ಬರಿತ ಗಾಳಿಯಿಂದಾಗಿ ಮತ್ತೆ ಅವಳ ನೆನಪುಗಳ ನನ್ನ ಸುತ್ತ ಸುತ್ತುವರೆಯುತ್ತಲೇ ಇತ್ತು.
ದೇವರಾದೆ, ನಾನು ದೇವದಾಸನೂ ಆದೆ. ಮೌನಿಯಾದೆ, ಕಣ್ಣೀರ ಧಾರೆಯಲಿ ಅವಳ ನೆನಪಲಿ, ಎಷ್ಟೋ ದಿನ ತಲೆ ದಿಂಬ ಒದ್ದೆ ಮಾಡಿದೆ. ಆದರೂ ಬತ್ತಲಿಲ್ಲ. ನನ್ನಾಸೆಯ ಮರ, ಸಿಡಿಲು ಬಡಿದು ಸುಟ್ಟು ಕರಕಲಾದರೂ, ನನ್ನ ಒಡಲೊಳಗಿನ ಪ್ರೀತಿ, ಪ್ರತಿ ವಸಂತದಲಿ ಹಣ್ಣೆಲೆ ಉದುರಿ, ಹೊಸ ಚಿಗುರು ಒಡೆದಂತೆ ಕುಡಿ ಹೊಡೆಯುತಲೇ ಇತ್ತು.
ದೇವರಲಿ ಬೇಡಿದೆ, ದೇವತೆಯ ಓಲೈಕೆಯಲಿ ಎನೆಲ್ಲ ಮಾಡಿದೆ ಎಂಬುದೇ ನೆನಪಿಲ್ಲ. ಏಕಾಏಕಿ ಮತ್ತೆ ಬಂದು ಸೇರಿದ ನನ್ನವಳ ಪ್ರೀತಿಯಲಿ ಈಗ ಅವೆಲ್ಲ ನೆನಪಿಲ್ಲ. ನೆನಪಾದಾಗ, ನೆನಪು ಬಂದಾಗ, ಈಗ ಕೇವಲ ಆನಂದ ಭಾಶ್ಪಗಳಷ್ಠೇ ನನ್ನಯ ಕಂಗಳಲಿ.
ನೀ ಬಂದೆ, ಮತ್ತದೇ ಜೀವ, ಜೀವನ, ಪ್ರೀತಿಯ ಯಾನ ತಂದೆ.
ಎರೆಡು ವರ್ಷ ನನ್ನಿಂದ ದೂರಾಗಿದರೂ, ಈಗಿನ ನಿನ್ನ ನೆನಪಿನಲಿ, ಪ್ರೀತಿಯ ಕನವರಿಕೆಯಲಿ, ಅಭಿಸಾರಿಕೆಯ ಆಲಿಂಗನದ ತವಕದಲಿ, ಈ ನಿನ್ನ ಪೆದ್ದು ಹುಡುಗನಿಗೀಗ ಎಲ್ಲವೂ ಮಾಯ. ನಿನ್ನ ಪ್ರೀತಿಯ ಮಾಯೆಯಲಿ, ಆಗಾಗ ಸಿಗುವ ಆಲಿಂಗನದಲಿ, ನಿನ್ನೆದೆಯ ಅಪ್ಪುಗೆಯಲಿ, ಸಿಹಿ ಮುತ್ತಿನ ಚುಂಬನದಲಿ ಮಾಯ, ಮಾಯ, ಮಾಯ…
ಹೇ ಚಿನ್ನಾ,
ನಿನ್ನಾಣೆ ನಾ ಕೈ ಬಿಡನೇ ನಿನ್ನ,
ನಿನೇ ನನ್ನ ಮನೆ-ಮನದ ಒಡತಿಯಾಗಿದ್ದರೇ ಚೆನ್ನ…
-ವಸಂತ ಬಿ ಈಶ್ವರಗೆರೆ
*****
ತುಂಬಾ ಚೆನ್ನಾಗಿದೆ…..
ಚೈತ್ರ ಮೇಡಂ ನಿಮ್ಮ ಪ್ರತಿ ನುಡಿಗೆ ವಂದನೆಗಳು. ಈ ಸಹೃದಯ ಓದಿನ ನುಡಿಯೇ ಬರೆಯುವ ಕೈಗಳಿಗೆ ಸ್ಪೂರ್ತಿ.