ಪ್ರೀತಿ ಇದ್ದಲ್ಲಿ ಭೀತಿ ಇರದು. ಅದು ಭೀತಿಯನ್ನು ದೂರಕ್ಕೆಸೆಯುತ್ತದೆ. ಇದು ಏಸುಕ್ರೀಸ್ತನ ವಾಣಿ. ಮಾನವಕುಲವನ್ನು ಮೇಲಕ್ಕೆತ್ತುವ ಸ್ಪೂರ್ತಿಯನ್ನು ನೀಡುವುದೇ ಪ್ರೀತಿ. ಆಯುರಾಗೋಗ್ಯ, ಶಾಂತಿಯನ್ನು ನೀಡಬಲ್ಲದ್ದು ಪ್ರೀತಿ. ಕಷ್ಟದ ಆಳದಿಂದಲೂ ವ್ಯಕ್ತಿಯ ನೋವನ್ನು ನಿವಾರಿಸಬಲ್ಲದ್ದು ಪ್ರೀತಿ. ಆದರೆ ಇಂದಿನ ಕಾಲದಲ್ಲಿ ಈ ಪ್ರೀತಿಯ ಅಭಾವ ಕಂಡುಬರುತ್ತಿದೆ. ಬಾಲ್ಯವಸ್ಥೆಯಲ್ಲಿ ತಂದೆತಾಯಿಯರ ಪ್ರೀತಿ ಕಂಡರಿಯದ ಮಕ್ಕಳು ದುಷ್ಟರು ಭ್ರಷ್ಟರು ಕ್ರೂರಿಗಳು ಆಗುತ್ತಾರೆಂದು ಪ್ರಾಜ್ಞರು ಹೇಳಿರುವುದನ್ನು ನಾವು ಕೇಳಿದ್ದೇವೆ. ಮಕ್ಕಳನ್ನು ತಂದೆ ತಾಯಿಯರು ಯಾವಾಗಲೂ ಭಯದಲ್ಲಿರಿಸಬಾರದು. ಅಲ್ಲಿ ಸೇಡಿನ ಮನೋಭಾವ ಹಿಂಸಾಪ್ರವೃತ್ತಿ, ಹೃದಯಹೀನತೆಯು ಬೆಳೆಯುತ್ತದೆ. ಮಕ್ಕಳಿಗೆ ಪರಿಶುದ್ಧ ಪ್ರೀತಿ ತೋರಿಸುವುದೆಂದರೆ ಮನಸ್ಸಿಗೆ ಬಂದಂತೆ ನೀಡುವ ಸಲುಗೆ ಎಂದರ್ಥವಲ್ಲ. ಉತ್ತಮ ಕೆಲಸ ಮಾಡಿದಾಗ ಹುರಿದುಂಬಿಸುವುದು, ಅನಾಚಾರ ಮಾಡಿದಾಗ ಗದರಿ ತಿಳಿ ಹೇಳುವುದು ಸಮರ್ಥನೀಯ ಕಾರ್ಯವಾಗಿರುತ್ತದೆ. ಪ್ರೀತಿಯಲ್ಲಿ ಗೆದ್ದವನೂ ಸೋಲುತ್ತಾನೆ, ಸೋತವನು ಗೆಲ್ಲುತ್ತಾನೆ. ಅಲ್ಲಿ ದರ್ಪ, ಅಹಂಕಾರ ಇವೆಲ್ಲ ಮಾಯವಾಗಿ ಬಿಡುತ್ತದೆ. ಪ್ರೀತಿ ಎಂದರೆ ಭಾವಪರವಶತೆ. ಯಾವನು ಸರಿಯಾದ ಪ್ರೀತಿಯನ್ನು ಅನುಭವಿಸುತ್ತಾನೋ ಅವನೇ ಇತರರಿಗೂ ಪ್ರೀತಿಯನ್ನು ಹಂಚಬಲ್ಲ. ಶಿಶುವಾಘಿದ್ದಾಗ ಮಗು ಮಾತನಾಡುವುದಿಲ್ಲ. ತಾಯಿ ತಾನೇಕೆ ಮಾತನಾಡಬೇಕೆಂದುಕೊಳ್ಳುವುದಿಲ್ಲ. ಪ್ರೀತಿಯಿಂದ ಎಷ್ಟೊಂದು ಮಾತನಾಡಿಸುತ್ತಾಳೆ. ಆ ತಾಯಿಯ ಪ್ರೀತಿಗೆ ಮಗು ಮಾತನಾಡುವ ಬದಲು ನಗುತ್ತದೆ. ನಗುತ್ತಲೇ ತೊದಲುತ್ತ ತಾಯಿಗೆ ಪ್ರಿಯವಾಗುವ ಮಾತನ್ನು ಪ್ರಾರಂಭಿಸುತ್ತದೆ.
ನಾವು ಮನೆಯಲ್ಲಿ ತಂದೆತಾಯಿ ಹಿರಿಯರ ಶಾಲೆಯಲ್ಲಿ ಗುರುಗಳ ಹಾಗೂ ಸಹ ವಿದ್ಯಾರ್ಥಿಗಳ ಪ್ರೀತಿಯಿಂದಲೇ ಬೆಳೆದುಬಂದಿದ್ದೆವೆ. ಯಾರು ನಮ್ಮಲ್ಲಿರುವ ಗುಣಗಳನ್ನು ಗ್ರಹಿಸಿ ತಪ್ಪುಗಳನ್ನು ಕ್ಷಮಿಸಿ ತಿದ್ದಿಹೇಳಿ ನಮ್ಮನ್ನು ಬೆಳೆಯುವಂತೆ , ಮಾಡುವರೋ ಅವರದೇ ನಿಸ್ವಾರ್ಥ ಪ್ರೀತಿಯಾಗಿರುತ್ತದೆ. ಆದರೆ ಇಂದು ಅದು ಅಷ್ಟು ಸರಳವಲ್ಲ. ಜನರೇನೋ ಪ್ರೀತಿಸುವುದು ಸುಲಭಕಾರ್ಯವೆಂದು ತಿಳಿದಿದ್ದಾರೆ. ಎಲ್ಲರಲ್ಲೂ ಪ್ರೀತಿಸುವ ಸಾಮಥ್ರ್ಯವಿದ್ದರೂ ನಿಜವಾಘಿ ಪ್ರೀತಿಸುವುದು ಅಸಮಾನ್ಯ ಸಿದ್ದಿಯೇ ಸರಿ ಎಂದು ವಿದ್ವಾಂಸರು ಹೇಳುತ್ತಾರೆ. ಎಲ್ಲವನ್ನೂ ಪ್ರೀತಿಸುವ ಕಲೆಯನ್ನು ತಂದೆ ತಾಯಿ ಮಕ್ಕಳಿಗೆ ಕಲಿಸಬೇಕು. ಯಾರಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ದಕ್ಷತೆ ಚುರುಕು ಬುದ್ದಿ ಸುಂದರತೆ ಎಲ್ಲವೂ ಇರುತ್ತದೆ. ಹಾಗಂತ ಪ್ರೀತಿ ಎಂದರೆ ಗಂಡು ಹೆಣ್ಣುಗಳ ದೈಹಿಕ ಆಕರ್ಷಣೇ ಎಂದೆ ಬಹಳ ಜನ ತಿಳಿಯುತ್ತಾರೆ. ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದೆಂದರೆ ಆತನ ಸರ್ವತೋಮುಖ ಅಬಿವೃದ್ಧಿಯ ಬಗ್ಗೆ ಕಾಳಜಿ ಇರಬೇಕೆಂಬುದು ಆಗಿರುತ್ತದೆ.
ನಾವು ಜನಪ್ರಿಯರಾಗಬೇಕೆಂದರೆ ನಮ್ಮಲ್ಲಿ ಎಲ್ಲವನ್ನೂ ಸ್ವಾಗತಿಸಿ ಆನಂದಿಸುವ ಗುಣ ಇರಬೇಕು. ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುವ ಭಾವನೆ ಇರಬೇಕು. ಎಲ್ಲರನ್ನು ನಿಸ್ವಾರ್ಥ ಪ್ರೀತಿಯಿಂದ ನೋಡಿದಾಗ ಇಡಿ ಸಮಾಜ ನಮ್ಮನ್ನು ಪ್ರೀತಿಯಿಂದ ನೋಡುತ್ತದೆ. ಸ್ವಾರ್ಥ ರಹಿತ ಪ್ರೀತಿಗೆ ಅಪಾರ ಶಕ್ತಿ ಇರುತ್ತದೆ. ಅಂಗುಲಿಮಾಲ ಕ್ರೂರಿಯಾದರೂ ಗೌತಮನ ಕಣ್ಣುಗಳ ಪ್ರೀತಿಸ್ಪುರಣೆಗೆ ಶರಣಾದ. ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ ಪ್ರೀತಿಯೇ ದೊಡ್ಡ ಔಷಧಿ. ದಡ್ಡನಿಗೆ ಗುರುಗಳು ಪ್ರೀತಿಯಿಂದ ಪ್ರೋತ್ಸಾಹಿಸಿದ್ದಲ್ಲಿ ಆತ ಅಸಾದ್ಯವಾದದ್ದನ್ನು ಸಾಧಿಸಬಹುದು. ಅದೇ ಅವನನ್ನು ದ್ವೇಷಿಸಿದರೆ ಆತ ಸಮಾಜ ಕಂಟಕನೂ ಆಗಬಹುದು. ಸಮಾಜದ ಅಭ್ಯುದಯಕ್ಕೆ , ಪ್ರಗತಿಗೆ ಬದುಕಿನ ಏಳಿಗೆಗೆ ಪ್ರೀತಿ ಅತ್ಯಂತ ಮುಖ್ಯವಾದದ್ದು. ಯಾರೂ ಎಲ್ಲವನ್ನೂ ಪ್ರೀತಿಯಿಂದ ಕಾಣುವರೋ ಅವರೇ ಧೀರ್ಘಾಯುಗಳಾಗುತ್ತಾರೆ. ಆದರೆ ಇಂದು ಸಂಕುಚಿತ ಮನೋಭಾವದಿಂದಾಗಿ ಪ್ರೀತಿಗೂ ಬರಬಂದದ್ದನ್ನು ನಾವು ಕಾಣಬಹುದು. ಇದು ಬುದ್ಧಿ ಜೀವಿಗಳು, ಪ್ರಾಜ್ಞರು, ಶ್ರೀಮಂತ, ಬಡವರೂ ಎಲ್ಲರನ್ನು ಒಳಗೊಂಡಿದೆ.
ಪ್ರೀತಿಯ ವರ್ತನೆಗೆ ಖರ್ಚೆನೂ ಇರುವುದಿಲ್ಲ. ಇದು ಪ್ರತಿಯೊಬ್ಬನ ಹೃದಯದಲ್ಲಿ ಇದ್ದೇ ಇರುತ್ತದೆ. ಯಾರೂ ಇದನ್ನು ನೀಡುತ್ತಾರೋ, ಪಡೆಯುತ್ತಾರೋ ಅವರು ಧನ್ಯರು. ಪ್ರೀತಿಯನ್ನು ನೀಡುವವರೂ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕಾರಣ ಅವರಲ್ಲಿರುವ ಅಜ್ಞಾನ. ರಾಮಕೃಷ್ನ ಪರಮಹಂಸರಲ್ಲಾಗಲಿ, ಅಥವಾ ಡಾ. ಅಬ್ದುಲ್ ಕಲಾಂರಲ್ಲಾಗಲಿ ಶಿಷ್ಯವರ್ಗ ಮೊದಲು ಕಂಡಿದ್ದು ಅವರ ಪ್ರೀತಿಯನ್ನು ಆನಂತರ ಗುರುತಿಸಿದ್ದು, ಅವರ ಬುದ್ಧಿವಂತಿಕೆಯನ್ನು. ನಾವು ಪ್ರಕೃತಿಯನ್ನು ಕಣ್ತೆರೆದು ನೋಡಿದಾಗ ಅಲ್ಲಿ ಎಲ್ಲವೂ ಪ್ರೀತಿಯ ಸಂದೇಶಗಳೇ ಇರುತ್ತವೆ, ಅರಳಿದ ಹೂವಿನ ಕಡೆ ಹಾತೊರೆದು ಬರುವ ದುಂಬಿಗಳನ್ನು ಪುಷ್ಪವು ದ್ವೇಷಿಸಿ ಮುದುಡಿಕೊಳ್ಳುವುದಿಲ್ಲ.
ಹಾಲುಕೊಡುವ ಕಾಮಧೇನು ಗೊಲ್ಲನನ್ನು ತುಳಿಯುವುದಿಲ್ಲ. ಬೀಸುವ ಗಾಳಿಯು ಪಕ್ಷಿಗಳನ್ನೆಂದೂ ಮಾತ್ಸರ್ಯದಿಂದ ನೋಡುವುದಿಲ್ಲ. ಪ್ರಕೃತಿಯಲ್ಲಿ ನಾವು ಕಾಣುವುದು ಪರಿಶುಧ್ಧ ಪ್ರೀತಿಯನ್ನೆ. ಪರಸ್ಪರ ಕೊಡುಕೊಳ್ಳುವ ವ್ಯವಹಾರ ನಿಸರ್ಗದಿಂದಲೇ ಕಲಿತ ಪಾಠ. ಮರಕ್ಕೆ ಕಲ್ಲು ಹೊಡೆದರೂ ಮರ ಪ್ರೀತಿಯಿಂದಲೇ ಹಣ್ಣನ್ನು ಉದುರಿಸುತ್ತದೆ.
ಅಸಹಾಯಕನ್ನು ಪ್ರೀತಿಸಿ ನೋಡಿ ಅಲ್ಲಿ ಯಾವ ಪ್ರತಿಫಲದ ಆಶೆಯಿಲ್ಲದ ನಿಮ್ಮ ಪ್ರೀತಿ ನಿಮಗೆ ಆಶ್ಚರ್ಯ ನೀಡುವಂತೆ ಮಾನಸಿಕ ತೃಪ್ತಿಯನ್ನು ನೀಡಬಲ್ಲದು. ಮುಗ್ಧ ಮಗುವಿನ ನಿಷ್ಕಲ್ಮಶ ಪ್ರೀತಿಗೆ ಒಮ್ಮೆ ಸಿಲುಕಿದರೆ ಸಾಕು. ಆ ಪ್ರೀತಿ ನಿಮ್ಮ ಬದುಕಿನಲ್ಲಿ ಪವಾಡವನ್ನೆ ಮಾಡಬಲ್ಲದು. ತಂದೆ ತಾಯಿಯರ ಪ್ರೀತಿಗೆ ಸಾಟಿ ಇನ್ನು ಯಾವುದು ಇಲ್ಲ. ಆ ಪ್ರೀತಿಗಾಗಿ ಹಂಬಲಿಸದೇ ಇರುವ ನರಪಿಳ್ಳೆಗಳೇ ಇಲ್ಲ. ಇನ್ನು ಪತಿ-ಪತ್ನಿಯ ನಡುವಿನ ದೈಹಿಕ ವಾಂಛೆಗೆ ಮೀರಿದ ಪ್ರೀತಿ ವೃದ್ಯಾಪ್ಯದಲ್ಲೇ ಸ್ಪುಟಗೊಳ್ಳುವುದು. ಮಕ್ಕಳಂತ ಸುಖವಿಲ್ಲ, ಮಕ್ಖಳಂತಹ ದುಃಖವಿಲ್ಲ. ಮಕ್ಕಳ ಪ್ರೀತಿಯಲ್ಲಿ ಹಿರಿಯರು ಅನುಭವಿಸುವ ಅನೂಹ್ಯವಾಧ ಆನಂದ ವರ್ಣಿಸಲಾಗದು.
ಪ್ರಾಯದ ಹುಮಸ್ಸಿನಲ್ಲಿ ಬರೀಯ ದೈಹಿಕ ಆಕರ್ಷಣೆಗೆ ಒಳಗಾಗಿ ಪ್ರೀತಿಸುವ ಇಂದಿನ ಯುವಪೀಳಿಗೆ ಪ್ರೀತಿ ಹೆಸರಿಗೆ ಅಪಚಾರ ಎಸಗುತ್ತಿದೆ. ಹಿಂದೆ ಪ್ರೀತಿಸಿದ ಜೋಡಿಗಳು ಮದುವೆ ಎಂಬ ಬಂಧಕ್ಕಾಗಿ ತನ್ನ ಸಂಗಾತಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಾಗುತ್ತಿದ್ದರು ಆದರೆ ಇಂದು ಹಾಗಿಲ್ಲ. ಬಟ್ಟೆ ಬದಲಾಯಿಸಿದಂತೆ ಪ್ರೀಮಿಗಳ ಬದಲಾಯಿಸುವ ಕಾಲಮಾನ ಇದು. ಯಾವ ತತ್ವ ಆದರ್ಶಗಳಿಲ್ಲದೇ ಪ್ರೀತಿ ಎಂಬ ಹುಚ್ಚು ಹೊಳೆಗೆ ಹಾರುವ, ಅಪಮಾನದ ಬೆಂಕಿಗೆ ಬಇದ್ದು ಅಷ್ಢೇ ಬೇಗ ಜೀವನದಿಂದಲೂ ಪಲಾಯನಗೈಯುವ ಇಂದಿನ ಪೀಳಿಗೆ ಪ್ರೀತಿಯ ನಿಜವಾದ ಅರ್ಥ ತಿಳಿಯಬೇಕಿದೆ. ಅದೂ ಕೂಡ ನಮ್ಮ ಭಾರತೀಯ ಸಂಸ್ಕೃತಿಯ ತಳಪಾಯದ ಮೇಲೆ ಕಟ್ಟಲ್ಪಡುವ ಪ್ರೀತಿಯಾಗಿದ್ದರೆ ಚೆನ್ನ. ಲಿವಿಂಗ್ ಟುಗೆದರ್ ಎನ್ನುವ ಪ್ರೀತಿಯ ಜೀವನ ನಮ್ಮ ನೆಲಕ್ಕೆ ಒಪ್ಪದ್ದು. ನಮ್ಮ ನಡತೆಗೆ ಸಲ್ಲದ್ದು.
ಅಪೂರ್ವ ಪ್ರೀತಿಯ ಸಮ್ಮೋಹನ ಅಪಾರವಾಗಿದ್ದರೂ ಕೂಡ ಜಗತ್ತು ನಿಜವಾಗಿ ಅದನ್ನು ಅನುಭವಿಸುತ್ತಿಲ್ಲ. ಆದ ಕಾರಣ ಜಗತ್ತನ್ನು ಪ್ರೀತಿಗಿಂತ ದ್ವೇಷವೇ ಹೆಚ್ಚು ಆಳುತ್ತಿದೆ.
–ಪ್ರವೀಣ ನಾಯಕ, ದಾಂಡೇಲಿ