
ನನ್ನ ಮುದ್ದು ಮಮ್ಮಿ ಜಾನ್‍ಗೆ ನನ್ನ ಮನದಾಳದಿಂದ ಪ್ರೀತಿ ತುಂಬಿದ ಒಂದು ಸಲಾಮ್. ಅಮ್ಮೀಜಾನ್ ತುಂಬಾ ನೆನಪಾಗ್ತಿದ್ದೀರಾ ನಿಮ್ಮ ಮಡಿಲಿಗೆ ಹಾಗೆ ಓಡಿ ಬಂದು ಮಗುವಾಗಿ ನೆಮ್ಮದಿಯ ತುಸು ಗಳಿಗೆ ಕಳಿಬೇಕು ಅಂತಾ ಅನಿಸ್ತಿದೆ ಆದರೆ ಏನ್ಮಾಡಲಿ ನಿಮ್ಮಿಂದ ನನ್ನನ್ನು ಬಹಳ ದೂರಕ್ಕೆ ಕಳಿಸಿದ್ದೀರಾ. ಮಮ್ಮೀಜಾನ್ ನೆನ್ನೆ ಒಂದು ಪದ್ಯ ಓದ್ದೆ ಸುಭದ್ರಕುಮಾರಿ ಚೌಹಾನ್ ‘ಮೈ ಬಚ್‍ಪನ್ ಕೊ ಭೂಲ್ ರಹಿತಿ ಬೋಲ್ ಉಲಿ ಬಿಟಿಯಾ ಮೇರಿ’ ‘ನಂದನ ವನಸಿ ಖಿಲ್ ಉಟ್ಟಿ ಯಹ ಛೋಟಿಸಿ ಕುಟಿಯಾ ಮೇರಿ’ ಎಷ್ಟು ಚೆನ್ನಾಗಿದ್ದೀಯಾ ಅಲ್ವಾ. ತಾಯಿ ಮನಸು ಹೀಗೆ ಇರುತ್ತಾ? ಎಲ್ಲಾ ಋತುಮಾನಗಳ ಚೆಲುವು ಮೀರಿಸುವ ಹಾಗೇ? ನಿಮ್ಮ ಹತ್ರಾ ಇದನ್ನು ಕೇಳಬೇಕು ಅಂತಿದೆ. ಕೇಳೋದೇನು ಪ್ರತಿಯೊಂದು ಕ್ಷಣನೂ ನಿಮ್ಮ ತಾಯ್ತನವನ್ನು ನಿಮ್ಮ ಆ ಭೂಮಿಕೆ ಎನ್ನ ಭಾವನೆಯನ್ನ ನಾನು ಪ್ರತಿದಿನ ಆನಂದಿಸುತ್ತಾ ಬಂದಿದ್ದೇನೆ. ಥೇಟ್ ಮುಂಜಾನೆಯ ಆ ಎಳೆಸೂರ್ಯನ ನಿರ್ಮಲ ಪ್ರೀತಿಯಂತೆ. ಆ ಹೆಣ್ತನದ ಸುಂದರ ಭಾವನೆಯನ್ನು ಅನುಭವಿಸಬೇಕು ಎಂದು ಆಸೆ ಬಂದಿದೆ.
ಮಾರ್ಚಿನಲ್ಲಿ “ಮಹಿಳಾ ದಿನ” ಆಚರಣೆ ಮಾಡಿದ್ರು. ಹೆಣ್ಣಿನ ಶಕ್ತಿ ಹಾಗೆ ಅವಳು ಮನಸ್ಸು ಮಾಡಿದ್ರೆ ಎಂಥಹ ಸಾಧನೆಗೂ ಸೈ. ಅವಳೇ ಶಕ್ತಿ ಅವಳೇ ಸಮಷ್ಠಿ ಅವಳನ್ನು ಗೌರವಿಸಿ ಹೇಗೆ ಅನೇಕಾನೇಕ ಲೇಖನಗಳನ್ನು ಪದ್ಯಗಳನ್ನು ಓದಿದ್ದೆ. ಕಾರ್ಯಕ್ರಮಗಳನ್ನು ನೋಡ್ದೆ. ಬಹಳ ಚೆನ್ನಾಗಿತ್ತು. ಹೆಣ್ಣಿನ ಗೌರವದ ಬಗ್ಗೆ ಸುಂದರ ಹೋಲಿಕೆ ಉದಾಹರಣೆಯೊಂದಿಗೆ ಬುದ್ಧಿಜೀವಿಗಳು ಬರೆದಿದ್ದರು. ಹೆಣ್ಣು ಹೇಗೆ ಇರಬೇಕು ಅನ್ನೋ ತರ್ಕಕ್ಕೆ ನಾನು ಕುಳಿತಾಗ ನನ್ನ ಭಾವಲೋಕಕ್ಕೆ ಇಣುಕಿ ನೋಡಿದ್ದು ನೀವೇ. ನನ್ನನ್ನು ಸುಂದರ ಲೋಕಕ್ಕೆ ಕರೆದ್ಯೋದಿದ್ದು ನೀವು. ದೂರದಿಂದಲೇ ಕೈಬೀಸಿ ಇಲ್ಲಿ ಬಾ ಮಗಳೇ ಎಷ್ಟು ಚೆನ್ನಾಗಿದೆ ಹೆಣ್ತನದ ಸೊಬಗು ಇದನ್ನು ನೋಡು ಅನುಭವಿಸು ಎಂದು ಹೇಳಿ ಕೊಟ್ಟರು ನೀವು. ನನಗೆ ನೆನಪಿದೆ, ಆಗೀಗ ನೀವು ಹೇಳುತ್ತಿದ್ದನಿಮ್ಮ ಬಾಲ್ಯದ ಕಥೆಗಳು ಅಬ್ಬಾ ! ಎಷ್ಟು ಸಾಹಸಿ ನೀವು. ಶಾಲೆಗೆ ಹೋಗದಿದ್ದರೂ ಸಾಹಸಮಯ ಕಥೆಗಳು ಬಹಳ ನಿಮ್ಮದು. ಬರೀ 7ನೇ ತರಗತಿ ಓದಿದ ನಿಮಗೆ ಎಷ್ಟೆಲ್ಲಾ ಜ್ಞಾನ ಇದೆ. ಅದೇ ನೀವು ಉನ್ನತ ಮಟ್ಟದ ವಿದ್ಯಾರ್ಹತೆ ಹೊಂದಿದ್ದರೆ ಬದುಕನ್ನು ಇನ್ನೆಷ್ಟು ಸೊಗಸಾಗಿ ಸೌಂದರ್ಯಮಯವಾಗಿ ವರ್ಣಿಸುತ್ತಿರೋ ಏನೋ.
ಅಮ್ಮೀಜಾನ್ ಪ್ರವಾದಿಯವರ ಒಂದ ಮಾತಿದೆ ಅದನ್ನು ಅಬ್ಬು ಯಾವಾಗ್ಲೂ ಹೇಳ್ತಾಯಿದ್ರು “ತಾಯಿಯ ಪಾದದಡಿಯಲ್ಲಿ ಸ್ವರ್ಗವಿದೆ ನಿನಗೆ” ಹೌದಲ್ವ ನಿಮ್ಮಿಂದಲೇ ಸ್ವರ್ಗ. ನಾನು ಇವತ್ತು ಬೇರೆ ಮನೆಯ ನಂದಾದೀಪವಾಗಿ ಬೆಳಗಬೇಕೆಂದರೆ ಅದರ ಹಿಂದೆ ನೀವು ಸವೆದ ಜೀವನ ಇದೆ. ನಾನು ಧೈರ್ಯವಂತಳಾಗಿ ಬೆಳೆಯಬೇಕಾದರೆ ಒಂದು ಶಿಲ್ಪವಾಗಿ ನಿಲ್ಲಬೇಕಾದರೆ ಆ ಕಲ್ಲು ನಾನಾದರೂ ಸುತ್ತಿಗೆಯ ಏಟು ತಿಂದವರು ನೀವು. ಸೂಕ್ಷ್ಮಾತೀಸೂಕ್ಷ್ಮ ಕೆತ್ತನೆ ಕಸೂತಿಗಳಿಗೆ ನಿಮ್ಮ ಬಯಕೆಗಳ ಬಲಿ ನೀಡಿದರು. ನೀವು ನಿಮ್ಮ ಜೀವನದ ಸಾರಾ ಶಾಹಿಯಾಗಿಸಿ ಬಿಡಿಸಿದ ಚಿತ್ರ ನಾನು ಅಷ್ಟೇ ಮತ್ತೆಲ್ಲ ನಿಮ್ಮದೇ. ಅಮ್ಮೀಜಾನ್ ಆ ದಿನಗಳಲ್ಲಿ ನಿಮ್ಮ ಮಾತುಗಳಲ್ಲಿ ನನ್ನ ಬಾಲ್ಯದ ವರ್ಣನೆ ಹೇಳುತ್ತಿರುವಾಗ ಬಹಳ ಖುಷಿ ನನಗೆ. ಅರೇ ನಾನು ಇಷ್ಟು ತುಂಟಿಯಾಗಿದ್ದೆ ಎಷ್ಟು ಚತುರೆಯಿದ್ದೆ ಎಷ್ಟು ಸೌಂದರ್ಯವತಿಯೆಂದು ಜಂಭದಿಂದನೇ ಬೀಗುತ್ತಿದ್ದೆ.
ಆದರೆ ಈಗ ಆ ಮಾತುಗಳಲ್ಲಿ ಕಥೆಗಳಲ್ಲಿ ನಿಮ್ಮ ಮಮತೆಯ ಸವಿ ನನಗೆ ಜೇನ ಹನಿಯಾಗಿದೆ. ನಿಮ್ಮ ವಾತ್ಸಲ್ಯ ನನಗೆ ದಾರಿದೀಪವಾಗ್ತದೆ. ಆ ನಿಮ್ಮ ಪ್ರತಿಯೊಂದು ಭಾವನೆ ನನಗೆ ಹೆಬ್ಬಂಡೆಯಂತೆ ನಿಂತಿದೆ, ಆಹಾ ಎಷ್ಟು ಸುಂದರ ಜೀವನ ನಿಮ್ಮ ಜೊತೆ ಅಮ್ಮೀಜಾನ್ ಆ ದಿನ ನಾನು ನಿಮ್ಮ ಮಡಿಲಿಗೆ ಬರುವ ಸಂಕೇತ ನೀಡಿದಾಗ ನಿಮ್ಮ ಕರುಳ ಬಳ್ಳಿಯಾಗಿ ಚಿಗುರೊಡೆದಾಗ ನೀವು ಪಟ್ಟ ಖುಷಿ ಅಷ್ಟಿಷ್ಟಲ್ಲ ಅಂತ ನಿಮ್ಮ ಕಣ್ಣ ಭಾಷೆ ಅಬ್ಬುವಿನ ಅನೇಕ ಪದ್ಯಗಳಿಗೆ ಲಾಲಿತ್ಯವಾಗಿತ್ತು. ಆ ಪದ್ಯಗಳು ಕೂಡ ನನಗೆ ಈಗ ಕಾಡುತ್ತಿವೆ. ನಿಮ್ಮ ಆ ಸುಂದರ ಭಾವವನ್ನು ನನ್ನ ತೊದಲು ನುಡಿಯಲ್ಲಿ ವರ್ಣಿಸುವುದಕ್ಕಂತೂ ಆಗೊಲ್ಲ ಆದರೆ ಅನುಭವಿಸುವ ಆಸೆ. ತಾಯ್ತನದ ಮರದ ಕೆಳಗೆ ನನ್ನ ಚಿಗುರು ಎಲೆಗಳನ್ನು ನೋಡೋ ಆಸೆ ಫಲವತ್ತಾಗಿ ಬೆಳೆಯತ್ತಿದೆ. ನೀವು ನನಗೆ ಯಾವತ್ತೂ ಮಗಳು ಎಂದು ಬೆಳೆಸಲಿಲ್ಲ ನಿಮ್ಮ ಗೆಳತಿಯಾಗಿ ನಾನು ಬೆಳೆದೆ. ಅಬ್ಬು ಹೇಳುತ್ತಿದ್ದರು ನನಗೆ ಎಳೆಯ ವಯಸ್ಸಿನಲ್ಲಿಯೇ ಮಾಡೆಲಿಂಗ್ ಅಂದರೆ ತುಂಬಾ ಇಷ್ಟ ಇತ್ತಂತೆ ಅಜ್ಜನೂ ಹೇಳುತ್ತಿದ್ದರು. ಮ್ಯಾಚಿಂಗ್ ಬ್ಲೌಸ್, ಮ್ಯಾಚಿಂಗ್ ಪರ್ಸ, ಮ್ಯಾಚಿಂಗ್ ಶೂ ಇಲ್ಲ ಅಂದರೆ ನಾನು ಹೊರಗೆ ಹೋಗುತ್ತಿರಲಿಲ್ಲವಂತೆ. ಅಬ್ಬಾ ಅದೆಷ್ಟು ಸೌಂದರ್ಯ ಪ್ರಜ್ಞೆ ಬೆಳೆಸಿದ್ದೀರಿ. ಅಮ್ಮೀಜಾನ್ ನೀವು ಈ ಗೊಂಬೆಯನ್ನು ಸಿಂಗರಿಸೋದೆ ನಿಮ್ಮ ಕೆಲಸವಾಗಿತ್ತು. ಜೀವನದ ಅನೇಕ ನಿಲುವುಗಳಲ್ಲಿ ಅಬ್ಬು ನಿಮಗೆ ಮುಂದುವರಿಯುವ ಅವಕಾಶಗಳನ್ನು ಬಂದಿದ್ದರೂ ಅವರಿಗೆ ಗೊತ್ತಿತ್ತು ನೀಡುತ್ತಾ ನಿಮ್ಮ ಪ್ರತಿಭೆ ಏನು ಅಂತ ನೀವು ಕಲಾಸುರಭಿ ನಿಮ್ಮ ಕೌಶಲ್ಯದಿಂದ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವಂತಹ ಕಲೆ ನಿಮ್ಮದು. ಆದರೂ ಯಾವುದು ಬೇಡ ನನ್ನ ಬಂಗಾರದಂತಹ ಮಗಳೇ ನನಗೆ ಎಲ್ಲಾ ಎಂದು ನೀವು ಅಪ್ಪಿಕೊಂಡಿದ್ದು ನನ್ನನ್ನೇ.
ನೀವು ಮತ್ತೇ ಅಬ್ಬು ನನ್ನ ಮೇಲೆ ಆ ಕಷ್ಟದ ಸುರಿಮಳೆಯಲ್ಲಿಯೂ ಒಂದು ಹನಿ ನನಗೆ ಸಿಡಿಯದಂತೆ ಕೊಡೆಯಾಗಿ ನಿಂತದ್ದು ನನ್ನಲ್ಲಿ ಯಾವತ್ತೂ ಜಾಗೃತ ಅನುಭವ. ಕುರಾನ್ ಪಠಣ ಅದರ ಸಾರಾಂಶ, ತಾಯಿ ಮಕ್ಕಳ ಕಥೆಗಳು ಎಂತಹ ನಿರೂಪಣೆ ನಿಮ್ಮದು ಮಂತ್ರ ಮುಗ್ಧರಾಗುತ್ತಿದ್ದರು ಎಲ್ಲರೂ. ”ತಾಯಿಯೇ ದೇವರು” ಇದು ಅಕ್ಷರಶಃ ನಿಜವಾದದ್ದು. ಈ ಹುಚ್ಚು ಪ್ರಪಂಚದಲ್ಲಿ ಅಮ್ಮಂದಿರಿಗಾಗಿ ಒಂದು ವಿಶೇಷವಿದೆ ಅಂತೆ ಅದು ವಿಶ್ ಕೂಡಾ ಮಾಡಬೇಕಂತೆ. ನನಗೆ ನಗು ಬರುತ್ತೆ ಅಷ್ಟೇ ಭಾವುಕಳು ಅನ್ತೀನಿ. ಯಾಕೆಂದರೆ 30ವರ್ಷಗಳಿಂದ ನನ್ನ ಹುಟ್ಟು ಹಬ್ಬ ನಿಮಗೆ ವಿಶೇಷ ಎಂದು ನೀವು ಆಚರಿಸುವ ಪರಿ ನೋಡಿ ಎಲ್ಲಾ ತಾಯಿಯರಿಗೆ ಮಗು ಹುಟ್ಟಿದ ದಿನವೇ ಅಮ್ಮಂದಿರ ದಿನ ಅಲಾ.್ವ ಅದೆಲ್ಲಾ ಏನೋ ಇರಲಿಬಿಡಿ. ನಾನು ಯಾವತ್ತು ಅಲ್ಲಾನಿಗೆ ವಂದಿಸುತ್ತಿಸರಬೇಕು. ಅವನು ನಿಮ್ಮಿಬ್ಬರ ರೂಪದಲ್ಲಿ ನನ್ನ ಬೆಳೆಸುತ್ತಿದ್ದಾನೆ. ಯಾ ಅಲ್ಲಾ ನಿನಗೆ ಕೋಟಿ ನಮನ.
-ಜಹಾನ್ ಆರಾ