ಪಂಜು-ವಿಶೇಷ

ಪ್ರೀತಿಯ ದಿನದಂದು: ನಾಗರೇಖಾ ಗಾಂವಕರಯಾವುದರಲ್ಲೂ ಆಸಕ್ತಿಯಿಲ್ಲ. ಗುರಿಯಿರದ ಶೂನ್ಯದೆಡೆ ದೃಷ್ಟಿ, ಚಂಚಲತೆ, ಮರೆವು, ನಾನು ಎನ್ನುವುದೇ ಮರೆತು ಹೋದ ಸ್ಥಿತಿ. ಹೌದು.. ಇದು ಪ್ರೀತಿಯ ಮೊದಲ ಕನವರಿಕೆಯ ದಿನಗಳ ಮಾನಸಿಕ ಸ್ಥಿತಿ. ಪ್ರೀತಿ ಎನ್ನುವದು ಅದೂ ಹೇಗೋ ಬೇಡ ಬೇಡವೆಂದರೂ ಬಂದು ಹೇಗಲೇರಿಕೊಂಡು ಆಡಬಾರದ ಆಟ, ನೋಟ, ಕಾಟಗಳ ಜೊತೆಗೆ ಬದುಕಿಗೆ ನೋವನ್ನು, ನಲಿವನ್ನು, ತೃಪ್ತಿಯನ್ನು, ಉನ್ಮತ್ತತೆಯನ್ನು ಕೆಲವು ಬಾರಿ ಅಧ್ವಾನವನ್ನೂ ಮಾಡಿಬಿಡುವ, ಆದರೂ ಜೀವ ಸಂಕುಲ ಜೀವ ಬಿಡುವ ಆಪ್ತ ಭಾವ. ಪ್ರೇಮ ಅನಿರ್ವಚನೀಯವಾದದ್ದು, ಪ್ರೀತಿ ಬಣ್ಣವಿಲ್ಲದ್ದು ಆದರೂ ಹಲವು ಬಣ್ಣಗಳಲ್ಲಿ ವ್ಯಕ್ತವಾಗುವಂತದ್ದು. ರೂಪವಿಲ್ಲದ್ದು, ಆದರೂ ಭಿನ್ನ ರೂಪಗಳ ತಳೆಯುವಂತದ್ದು. ಹಾಗಾಗೇ ಪ್ರೀತಿಗೆ ಮರುಳಾಗದವರಾರು ಇಲ್ಲ.

“ My love has made me selfish. I cannot exist without you…. Men could die Martyrs for religion- I have shuddered at it- I shudder no more- I could be martyr’ for my Religion- love is my religion –I could die for that- I could die for you”.

ಇಂಗ್ಲೀಷ ಸಾಹಿತ್ಯ ಲೋಕದಲ್ಲಿ ಅತ್ಯಲ್ಪ ಅವಧಿಯಲ್ಲಿ ವಿಶಿಷ್ಟ ಕವಿಯಾಗಿ ಮೆರೆದ ಜಾನ್ ಕೀಟ್ಸ್ ತನ್ನ ಪ್ರೇಯಸಿ ಪ್ಯಾನ್ಸಿಗೆ ಬರೆದ ಪ್ರೇಮ ಪತ್ರದ ಸಾಲುಗಳಿವು. ಫ್ಯಾನಿಯನ್ನು ಬಿಟ್ಟಿರಲಾಗದ ಸಮ್ಮೋಹಕ್ಕೆ ಒಳಗಾಗಿದ್ದ ಕೀಟ್ಸ್ ತನ್ನ ಪತ್ರದಲ್ಲಿ ಅದನ್ನು ತೀರಾ ಭಾವುಕ ನೆಲೆಯಲ್ಲಿ ನಿವೇದಿಸುತ್ತಾನೆ.

ಮಾನವ ಸಂಘಜೀವಿ. ಮನುಷ್ಯ ಸಂಬಂಧಗಳನ್ನು ಆರೋಗ್ಯ ಪೂರ್ಣಗೊಳಿಸುವಲ್ಲಿ ಪ್ರೀತಿಗೆ ಮಹತ್ತರ ಸ್ಥಾನವಿದೆ. ಹಾಗಾಗೇ ಪ್ರೀತಿಯ ಬಗ್ಗೆ ಅದೆಷ್ಟು ಮನಸ್ಸುಗಳು ಹೀಗೆ ಸದಾ ಕಾಯುತ್ತಲೇ ಇರುತ್ತವೆಯಲ್ಲ? ಕಾಯುತ್ತ ಮಾಗುತ್ತಲೇ ಹೋಗುವುದು ನೈಜ ಪ್ರೀತಿಯ ಸ್ವರೂಪವೇ ಇರಬೇಕು! ಪ್ರೀತಿಯ ಬಗ್ಗೆ ಅದೆಷ್ಟೊ ಕವಿಗಳು, ಸಾಹಿತಿಗಳು ಬರೆದರೂ, ಕೊರೆದರೂ, ಮರುಗಿದರೂ, ಕೊರಗಿದರೂ,ಬರೆಯುತ್ತಲೇ, ಬರೆಯಿಸಿಕೊಳ್ಳುತ್ತಲೇ ಇರುವ ಈ ಪ್ರೀತಿಗೆ ಕೊನೆಯಿಲ್ಲ. ಅದರ ಅಸ್ತಿತ್ವಕ್ಕೆ ಭಂಗವಿಲ್ಲ. ಪ್ರೇಮದ ಕುರಿತ ಕಾವ್ಯUಳು, ಅದನ್ನು ನಿರ್ವಚಿಸಿದ ಪರಿಯಲ್ಲಿ, ವಿರಹದ ಉರಿಯಲ್ಲಿ ಬೇಯುವ ವಿಶಿಷ್ಟತೆಯಿಂದಲೇ ಅಲ್ಲವೇ ಪ್ರೇಮ ಅಮರತೆಯನ್ನು ಕಂಡಿದ್ದು. ದುಶ್ಯಂತ-ಶಕುಂತಲೆ, ರೋಮಿಯೋ- ಜ್ಯೂಲಿಯಟ್, ಆಂಟನಿ- ಕ್ಲೀಯೋಪಾತ್ರ, ಪುಂಟಲೀಕ- ಮಹಾಶ್ವೇತೆ ಇಂತಹ ನೂರಾರು ದಂತಕಥೆಯಾದ ಪಾತ್ರಗಳು ನಮ್ಮ ಮುಂದಿರುವುದು.

ನೈಜ ಪ್ರೇಮ ಅಲೌಕಿಕತೆಯ ಮಟ್ಟವನ್ನು ಏರುತ್ತದೆ. ಅದು ನಿಧಾನವಾಗಿ ಪ್ರೇಮಿಗಳಲ್ಲಿ ಪರಸ್ಪರ ಹೊಂದಾಣಿಕೆಯನ್ನು ತರುತ್ತದೆ. ಅವರಿಬ್ಬರೂ ಪರಸ್ಪರ ಕಳೆದುಕೊಳ್ಳುವ ಭೀತಿಯಿರುವುದಿಲ್ಲ. ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತ ಭೌತಿಕ ಜಗತ್ತನ್ನು ಮೀರಿ ತಮ್ಮದೇ ಆದ ಹೊಸ ಜಗತ್ತನ್ನು ಪ್ರವೇಶಿಸುತ್ತಾರೆ. ಹೆದರಿಕೆ, ಮತ್ಸರ ಇತ್ಯಾದಿ ಕ್ಷುಲಕಗಳೆಲ್ಲ ಮೀರಿ ನಿಲ್ಲುತ್ತಾರೆ. ಪ್ರೇಮಿಗಳಿಬ್ಬರ ಪ್ರೇಮಲೋಕದ ಸಣ್ಣ ಕೋಣೆ ಅವರ ಇಡೀ ಜಗತ್ತು. ಹೊರ ಜಗತ್ತಿನ ಶೋಧಗಳು ಅವರನ್ನು ಸೆಳೆಯುವುದಿಲ್ಲ. ಶುದ್ಧ ಪ್ರೇಮದ ಜಗತ್ತು ಅವರ ಶೋಧದ ಆದ್ಯತೆ. ಪ್ರೀತಿಯಲ್ಲಿ ಕಳೆದು ಹೋಗುವ ಸುಖ ಆ ಸುಭಗರಿಗೆ ಮಾತ್ರ ತಿಳಿಯಬಲ್ಲದು. ನೀನು ನಿನ್ನ ಕಳೆದುಕೋಳ್ಳ ಬೇಕೆನ್ನಿಸಿದರೆ ಉತ್ಕಟವಾಗಿ ಯಾರನ್ನಾದರೂ ಪ್ರೀತಿಸು. ಅದು ನಿನ್ನ ಭಗ್ನಗೊಳಿಸಲಿ ಅಥವಾ ದೇದಿಪ್ಯಮಾನ್ಯಗೊಳಿಸಲಿ. ಎನ್ನುತ್ತಾನೆ ಕವಿಯೊಬ್ಬ.

ಸಾಮಾಜಿಕ ಕಟ್ಟುಕಟ್ಟಳೆಗೆ ಮೀರಿದ ಒಂದು ಸುಂದರ ಭಾಂದವ್ಯ, ನಿರೀಕ್ಷೆಗಳೇ ಇಲ್ಲದ ಕಡೆಯಲ್ಲಿ ಮೂಡುವ ಬಂಧ, ಬಹುಶಃ ಅಪರೂಪದ ಗಟ್ಟಿತನಕ್ಕೆ ಸಾಕ್ಷಿಯಾದ ಉದಾಹರಣೆಗಳಿವೆ. ಮಾತಿಗೆ ನಿಲುಕದ ವೇದ ವೇದಾಂತಗಳು ನಿಷ್ಕಲ್ಮಶ ಪ್ರೀತಿಯಲ್ಲಿ ದಕ್ಕುತ್ತವೆ ಕೂಡಾ. ಹಾಗಾಗಿ ಪ್ರೀತಿ ಸದಾ ಪರಮಪವಿತ್ರ. ದೈತ ಅದೈತಗಳು ಭಕ್ತಿ ಪರಂಪರೆಯಲ್ಲಿ ಭಗವಂತನ ಸಾನಿದ್ಯಕ್ಕಾಗಿ ಸಾಕ್ಷಾತ್ಕರಾಕ್ಕಾಗಿ ನಡೆಸಿದ ಎಲ್ಲ ಪ್ರಯತ್ನಗಳು ದೈವದ ಒಲವನ್ನು ಗಳಿಸುವುದಕ್ಕಾಗಿಯೇ ಎಂಬುದನ್ನು ಮರೆಯಲಾಗದು. ಹಾಗಾಗಿ ಪ್ರೀತಿಯೋಗವೂ ಭಕ್ತಿಯೋಗದಷ್ಟೇ ಪರಿಣಾಮಕಾರಿ ಮತ್ತು ಅರ್ಪಣಾ ಭಾವದ ಪ್ರೀತಿ ಭಕ್ತಿಗಿಂತ ಒಂದು ಹೆಚ್ಚೆ ಮುಂದೆ. ಭಕ್ತಿ ಸಾಧನೆಯಲ್ಲಿ ಸೂಫಿ ಸಂತರು ದೇವರನ್ನೇ ಪ್ರೇಯಸಿಯಾಗಿಸಿಕೊಂಡರೆ, ರಾಧಾ-ಶ್ಯಾಮರು ಐಕ್ಯ ಪ್ರೀತಿಗೆ ಮುನ್ನುಡಿಯಾಗಿ ನಿಲ್ಲುತ್ತಾರೆ.ಎಲ್ಲದರ ಮೂಲ ಹುಡುಕಾಟ ಆತ್ಮಾನುಸಂಧಾನ. ಉತ್ತರ ಸಿಗದ ಅದೆಷ್ಟೋ ಪ್ರಶ್ನೆಗಳು ಇದ್ದರೂ ಪ್ರೀತಿ ಜಗತ್ತನ್ನು ಗೆಲ್ಲುತ್ತಲೇ ಇದೆ. ಲೌಕಿಕ ಪ್ರೇಮಕ್ಕೂ ದೈವಿ ಪ್ರೇಮಕ್ಕೂ ನಡುವಿನ ಅಂತರವನ್ನು ದಾಟುವ ಆ ಮೂಲಕ ಪ್ರೇಮವನ್ನು ಅಜರಾಮರವಾಗಿಸುವ ಈ ಜಗತ್ತು ನಿತ್ಯ ಪ್ರೀತಿಯ ಬೆನ್ನು ಬಿದ್ದಿದೆ.

ಗಂಡು ಹೆಣ್ಣು ಸ್ವಂತ ಅಸ್ತಿತ್ವವನ್ನು ನಿರಾಕರಿಸದೇ ವಿಶಿಷ್ಟವಾಗಿ ಪ್ರೀತಿಸಬಹುದಲ್ಲ! ಪ್ರೇಮ ಮನಸ್ಸುಗಳ ಬೆಸುಗೆ. ಪ್ರೀತಿಯನ್ನು ಕುರಿತು ಬರೆಯುವಾಗೆಲ್ಲ ನಾವೇಕೆ ಭಾವುಕರಾಗುತ್ತೇವೆ. ಅಂತದ್ದೇನಿದೆ ಪ್ರೀತಿಯಲ್ಲಿ? ಅದೂ ಗಂಡು ಹೆಣ್ಣಿನ ಪ್ರೇಮ ಸಂಬಂಧದಲ್ಲಿ ಎಂದುಕೊಳ್ಳುತ್ತೇವೆ. ಯಾವ ಹಂಗಿಲ್ಲದೇ, ನಂಜಿಲ್ಲದೇ, ಯಾರ ಒತ್ತಾಯವೂ ಇಲ್ಲದೇ ಹುಟ್ಟುವ ಪರಸ್ಪರ ಆಕರ್ಷಣೆ, ನಂತರ ಒಲವು ಮಾಗುತ್ತಲೇ ಅದು ಭಕ್ತಿಗೆ ಸಮವೆನಿಸುತ್ತದೆ.

ಆದರೂ ಸಾಮಾಜಿಕ ಜೀವನದಲ್ಲಿ ಮಾನವ ವರ್ಗ ಸಂಘರ್ಷಗಳಲ್ಲಿ ಧರ್ಮ ಜಾತಿಗಳ ,ಮೇಲಾಟಗಳಲ್ಲಿ ಬದುಕಿನ ಅತ್ಯಮೂಲ್ಯ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದರೆ, ಆರ್ಥಿಕ ವ್ಯವಸ್ಥೆಯ ಅಂತಸ್ತಿನಲ್ಲಿ, ಬಂಡವಾಳಶಾಹಿ ಧೋರಣೆಯಲ್ಲಿ, ಶ್ರೇಷ್ಟತೆಯ ವ್ಯಸನಗಳಲ್ಲಿ ಜೀವಪರವಾದ ತೀವ್ರ ಭಾವದ ಪ್ರೀತಿಯನ್ನು ಕಡೆಗಣಿಸಲಾಗುತ್ತಿದೆ. ಪ್ರಕೃತಿ ಸಹಜ ನಿಲುವಿನ ಬದುಕಿನ ಸುಖವನ್ನು ನಾವು ದೂರವಿಡುತ್ತಿರುವಂತೆ ಭಾಸವಾಗುತ್ತಿದೆ.

ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಪ್ರೀತಿಯ ದಿನದಂದು: ನಾಗರೇಖಾ ಗಾಂವಕರ

  1. ನಿಜ ಪ್ರೀತಿಯ ಕನವರಿಕೆಯೇ ಹಾಗೆ ನೋಡಿ, ಪ್ರಾರಂಭದಲ್ಲಿ ಎಲ್ಲವನ್ನೂ ಬೇಡವಾಗಿಸುವ ಮತ್ತಾವುದನ್ನೋ ಬೇಕು ಎನಿಸುವ, ತನ್ನೊಳಗೇ ಎಲ್ಲ ಇದೆ ಎಂದು ಭಾವಿಸುವ ಮರುಕ್ಷಣ ನೀ ನಿಲ್ಲದೆ ಏನಿಲ್ಲ ಎನಿಸುವ ಪ್ರೇಮ ಅಪೂರ್ವವಾದುದು. ಉತ್ತಮ ಬರಹ

Leave a Reply

Your email address will not be published. Required fields are marked *