ಪ್ರೀತಿ
ಪ್ರೀತಿಯೆಂಬುದು ಬರಿಯ ಭಾವಗಳೆಂಬ ಅಪ್ಪಳಿಸುವ ಅಲೆಗಳ ಭೋರ್ಗರೆವ ಸಮುದ್ರವಲ್ಲ,
ಎಂದೋ ಪೌರ್ಣಿಮೆ-ಅಮಾವಸ್ಯೆಗಳಲಿ ಮಾತ್ರವೇ ಚಂದಿರನಿಗಾಗಿ ಹಾತೊರೆವ ಮೋಹವಲ್ಲ,
ಒಡಲಲಿ ಸಾವಿರ ಗುಟ್ಟುಗಳನಿಟ್ಟ, ಒಮ್ಮೆ ಈಜಲೇ ಬೇಕೆಂಬ ಕುತೂಹಲವಲ್ಲ,
ಶಾಂತತೆಯ ತೋರಿಕೆಯಲಿ ಒತ್ತಡವ ತನ್ನೂಳಗೆ ಬಚ್ಚಿಟ್ಟು, ಕಡೆಗೆ ಸುನಾಮಿಯೆಬ್ಬಿಸುವ ಭಯಂಕರತೆಯಲ್ಲ,
ಸಿಹಿನದಿಗಳ, ಕರಗುವ ಹಿಮವನೆಲ್ಲವ ಕಬಳಿಸಿ ವಿಸ್ತಾರವಾಗುತಲಿ, ತೀರವ ಕೊರೆವ ಸ್ವಾರ್ಥವಲ್ಲ,
ಎಂದಿಗೂ ಉಪ್ಪೇ ಆಗಿರುವ, ಕುಡಿಯಲೇ ಆಗದ ಜಲವಲ್ಲ,
ದಿನವೂ ರವಿಯೊಡನೆ ಸರಸವಾಡುತಲಿ, ರೂಪ-ನೋಟಗಳಲಿ ಕಣ್ಸೆಳೆಯುವ ಆಕರ್ಷಣೆಯಲ್ಲ,
ದಡದ ಮರಳಿನ ಮೇಲೆ ಗಿಚಿ ಮರೆಯಾದ ಹೆಸರಲ್ಲ, ತಾತ್ಕಾಲಿಕವಲ್ಲ,
ಹೌದು ಪ್ರೀತಿ ಸಾಗರವೆಂಬ ಜಾಗವಲ್ಲ…….
ಸದಾ ಸಹನೆಯ, ಒಂದೇ ತನ್ಮಯತೆಯಲಿ ಬಾರಿ-ಬಾರಿ ಬದಿಯನು ಸಾಂತ್ವನಿಸುವ ಭರವಸೆ,
ಮುಂದಿನಲೆಗೆ ಕಾಯುವ ನಂಬಿಕೆ, ಜೊತೆಗಿರೆ ನೋವನ್ನೂ ಸಂಭ್ರಮಿಸುವ ತೀರ-ಅಲೆಗಳ ಒಪ್ಪಂದ..
ತೀರವಿರದಿರೆ ಅಲೆಯಿಲ್ಲ, ಅಲೆಯಿರದಿರೆ ತೀರವಿಲ್ಲವೆಂಬ ಸತ್ಯ..!!
-ರಾಣಿ.ಪಿ.ವಿ.
(ಚಿಕ್ಕಮಗಳೂರು)
ಪ್ರೀತಿಯೆಂದರೆ
ಪ್ರೀತಿಯೆಂದರೆ
ಪ್ರತಿ ಮುಂಜಾವ ಬುವಿಯೆಡೆಗಿನ ಸೂರ್ಯನ ಸೆಳೆತ.
ರೆಕ್ಕೆಬಿಚ್ಚಿದ ಪುಟ್ಟಹಕ್ಕಿಯ ಆಗಸದೆಡೆಗಿನ ಮೋಹ.
ಹರಿವ ನದಿಯ ಕಡಲೆಡೆಗಿನ ಸೆಳೆತ ಮತ್ತು ಗಿಡಮರಗಳ ನಡುವೆ ಅರಳುವ ಮೊಗ್ಗಿನ ನಗು.
ಪ್ರೀತಿಯೆಂದರೆ
ಯಮುನೆತೀರದಿ ಕಾಯುವವಳ ಒಲುಮೆ ಕಾತುರ.
ಜಗಕಾರಣವ ತೊರೆದು ಅವಳ ಕರೆಗೊಡುವವನ ಆತುರ.
ಗೋಕುಲದಿ ಎದ್ದ ಗೋಧೂಳಿ.
ಅವ ಬಂದ ಸುದ್ದಿ ತರುವ ತಂಗಾಳಿ ಮತ್ತು ಪ್ರೇಮನಾದದ ಕೊಳಲು ಅವಳ ವಿರಹದ ಒಡಲು.
ಪ್ರೀತಿಯೆಂದರೆ
ಹಾಲುಗಲ್ಲದ ಚಂದಿರ.
ನಾಚಿ ನಾಚಿ ಸನಿಹ ಸರಿವ ತಾರೆಸಾಲು.
ವೃಂದಾವನದೆದೆಯೊಳು ಬೆಳಗೊ ಪ್ರಣತಿ ಮತ್ತು ಶೃಂಗಾರಕೋಣೆಯ ಕತ್ತಲೊಳು ಹೊಳೆವವಳ ಮೂಗುತಿ.
ಪ್ರೀತಿಯೆಂದರೆ
ಮೊದಲ ಪ್ರೇಮಪತ್ರ ಬರೆಯುತಿಹ ಹುಡುಗ ಕೈನಡುಕ.
ಅವಳಿಗೆ ತಲುಪಿಸಿ ಬಂದು, ಉತ್ತರ ಕಾಯುತ್ತಿರುವವನ ಹೃದಯದ ನಗಾರಿ.
ಮರುದಿನ ಅವಳು ನಕ್ಕ ಕ್ಷಣದಿ ಅವನೆದೆಯೊಳಗಿನ ಹಗುರತೆ.
ಗಿಡಮರಗಳ ಎದೆಪೊದೆಯೊಳಗೆ ಅರಳಿ ನಗುವ ಅವರೀರ್ವರ ಮೊದಲ ಪ್ರೇಮಕವಿತೆ.
-ಎನ್ ಕೃಷ್ಣಮೂರ್ತಿ, ಭದ್ರಾವತಿ
chennagide……………..
nice.. spr..
Preethi avaravara bavakke bakuthige olidanthe
Eradu prema kavithegallu chenagive
Both of two poems are good…………………..