ಲೇಖನ

ಪ್ರೀತಿಯೆಂದರೆ ಬರೀಯ ಭಾವವಲ್ಲ. . . ನಂಬಿಕೆ !: ಜಯಪ್ರಕಾಶ್ ಪುತ್ತೂರು

ಪ್ರೀತಿ ಬರಿಯ ಎರಡಕ್ಷರ ಅಷ್ಟೇ, ಅಷ್ಟೇನಾ? ಖಂಡಿತಾ ಅಲ್ಲ. ಬರೆಯುತ್ತಾ ಹೋದಂತೆ ಅದೊಂದು ಕಾದಂಬರಿ, ಬರೆದಷ್ಟು ಮುಗಿಯದು ಈ ಪ್ರೀತಿಗೆ ವ್ಯಾಖ್ಯಾನ. ಪ್ರೀತಿ ಒಂದು ಅವ್ಯಕ್ತ ಭಾವ, ಹೆಸರು ಹೇಳುತಿದ್ದಂತೆ ನಮ್ಮನ್ನು ನಾವೇ ಮರೆಸುವ ಸುಂದರ ಶಕ್ತಿ ಈ ಪ್ರೀತಿ. ಕೆಲವೊಮ್ಮೆ ಅನ್ನಿಸುತ್ತೆ ಮಾನವ ಏನೇನೋ ಕಂಡು ಹಿಡಿದ, ಕಂಡು ಹಿಡಿಯುತ್ತಲೇ ಇದ್ದಾನೆ, ಮತ್ತೆ ಈ ಪ್ರೀತಿನಾ ಯಾರು ಹುಡುಕಿದ್ರು? ಗೊತ್ತಾ ಖಂಡಿತಾ ಇಲ್ಲಾರಿ, ಮನಸಲ್ಲಿ ಹುಟ್ಟಿ ಮನಸಲ್ಲೇ ಸಂಚರಿಸೋ ಇದೊಂದು ತರಹ ವಿದ್ಯುತ್, ಇದನ್ನ ಯಾರು ಕಂಡುಹಿಡಿಲೇ ಇಲ್ಲ ಬದಲಾಗಿ ಎಲ್ಲರೂ ಅನುಭವಿಸಿದ್ರು ಅಷ್ಟೇ. ಪ್ರೀತಿ ಒಂತರಾ ಮಾಯೆನೇ ಬರಿಯ ಅನುಭವಕ್ಕೆ ಸಿಗುವ ಆದರೆ ಕಣ್ಣಿಂದ ನೋಡಲಾಗದ ಭಾವ, ಆದ್ರೂ ಪ್ರೀತಿನಾ ನಾವು ನೋಡಬಹುದು ವ್ಯಕ್ತಿ, ವಸ್ತು ಮತ್ತು ದೇವರಲ್ಲಿ. ಆದ್ರು ಈ ಭಾವಕ್ಕೆ ಪ್ರೀತಿ, ಪ್ಯಾರ್, ಲವ್ ಅನ್ನೊ ಸುಂದರ ಹೆಸರನ್ನು ಇಟ್ಟವರಿಗೊಂದು ಸಲಾಮ್. ಪ್ರೀತಿ ದೇವರ ತರಹಾ ಕಣ್ಣಿಗೆ ಕಾಣಲ್ಲ ಆದ್ರೂ ಪ್ರೀತಿಸ್ತಿವಿ, ಪೂಜಿಸ್ತೀವಿ. ಪ್ರೀತಿ ಎರಡಕ್ಷರಾನೂ ಅಲ್ಲ, ಬರೀಯ ಒಂದು ಭಾವವೂ ಅಲ್ಲ, ಇದೊಂದು ಭಾವ ಸಂಗಮ. ಪ್ರೀತಿಗಿದೆಯಿಲ್ಲಿ ನಾನಾ ರೂಪಗಳು, ಪ್ರೀತಿನೂ ಒಂಥರಾ ವಿರಾಟರೂಪಿ. ಸಂಭಂಧಗಳ ನಡುವೆ ಹಂಚಿಹೋಗುವ ಈ ಭಾವ ತನ್ನ  ಜಾಗಕ್ಕೆ ತಕ್ಕಂತೆ ತನ್ನ ಹೆಸರನ್ನು ಬದಲಿಸಿಕೊಂಡಿರುತ್ತದೆ, ಸಂಭಂಧಗಳ ಜಂಜಾಟಗಳೊಳಗೆ ಪ್ರೀತಿ ತನ್ನತನವನ್ನು ಸದಾ ಮೆರೆಯುತ್ತದೆ. 

ಹಾಗದ್ರೆ ಪ್ರೀತಿಯ ಪ್ರಾರಂಭ ಎಲ್ಲಿ? ಗಂಡು ಹೆಣ್ಣಿನ ಮನಸಿನಾಳದಲ್ಲೇ? ಖಂಡಿತಾ ಅಲ್ಲ, ಪ್ರೀತಿ ನಮ್ಮ ಹುಟ್ಟಿಗಿಂತ ಮೊದಲೇ ಹುಟ್ಟಿರುತ್ತದೆ, ಹೇಗೆ ಅಂತಿರಾ ಗರ್ಭದಲ್ಲಿರುವಾಗಲೇ ತಾಯಿ ನಮ್ಮ ಮುಖ ನೋಡದೆ ಪ್ರೀತಿಸಿಬಿಡ್ತಾಳೆ. ಬಹುಶಃ ಪ್ರೀತಿ ಕುರುಡಾಗಿದ್ದು ಇದಕ್ಕೆ ಇರಬೇಕು ಅಂದರೆ ಪ್ರೀತಿ ಅನ್ನುವ ಭಾವ ಸದಾ ಶರಣಾಗತ ಭಾವವಾಗಿದ್ದು. ಭೂಮಿಗೆ ಬರುವ ಮುಂಚೆ ಭ್ರೂಣ ಅದರೊಂದಿಗೆ ತಾಯಿ ಪ್ರೀತಿ, ಭೂಮಿಗೆ ಬಂದ ಮೇಲೆ ಜೀವ ಆಗಲೇ ಸಂಭಂಧಗಳ ಉದಯ. ಎದೆಹಾಲು ಕುಡಿಸಿ ಲಾಲಿಸುವ ತಾಯಿಯದು ಋಣ ತೀರಿಸಲಾಗದ ಬಂಧ ಮೊದಲ ಪ್ರೀತಿಯಾದರೆ, ಎತ್ತಿ ಆಡಿಸುವ, ಕೈ ಹಿಡಿದು ನಡೆಸುವಾ ತಂದೆಯದು ಎರಡನೇಯ ಪ್ರೀತಿ. ಸಂಭಂಧಗಳ ಜೊತೆ ಮತ್ತೆ ಸುತ್ತಿಕೊಳ್ಳುವುದು ಅಜ್ಜಿ ತಾತ, ಧೊಡ್ಡಪ್ಪ ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ ಅನ್ನೋ ಸಂಭಂಧಗಳ ಪ್ರೀತಿ. ಬರೀಯ ಸಂಭಂಧಗಳ ಬಂಧ ಇಲ್ಲಿಗೇ ಮುಗಿಯೊದಿಲ್ಲ, ಬಿದ್ದಾಗ ಹಿಡಿದೆತ್ತುವ ಅಣ್ಣ, ಅತ್ತಾಗ ಕಣ್ಣೀರೊರೆಸುವ ಕೈ ಅಕ್ಕನದೂ ಪ್ರೀತಿನೇ. ತಿಂಡಿ ಹಂಚಿಕೊಳ್ಳುವ ತಮ್ಮ, ತಂಗಿ ಪ್ರೀತಿಯ ರೂಪಾನೇ. ಹೀಗೆ ಪ್ರೀತಿ ಅಪ್ಪ, ಆಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ ಎಂಬ ಸಂಭಂಧದೊಳಗೆ ಬೆಳೆದು ಹೆಮ್ಮರವಾಗಿ ಬಿಡುತ್ತದೆ, ತನ್ನದೇ ಅಸ್ತಿತ್ವವನ್ನು ನಿರ್ಮಿಸಿಕೊಳ್ಳುತ್ತದೆ. ಬರೀಯ ಇಷ್ಟಕ್ಕೆ ಮುಗಿಯೋದಿಲ್ಲ ಪ್ರೀತಿಯಲಿ ಸಂಭಂಧ, ಜೀವನ ಮುಂದುವರಿದಂತೆಲ್ಲಾ ಸ್ನೇಹ, ಪ್ರೇಮವಾಗಿ ತೆರೆದುಕೊಂಡು ತನ್ನ ವ್ಯಾಪ್ತಿಯನ್ನು ಇನ್ನು ವಿಸ್ತಾರವಾಗಿಸುತ್ತದೆ.  
                                             
ಬರೀಯ ನಂಬಿಕೆಗಳಿಂದ ಬೆಸೆದ ಸಂಭಂಧಗಳಿಗಷ್ಟೇ ಪ್ರೀತಿ ಮೀಸಲಾಗಿಬಿಡುವುದಿಲ್ಲ, ಪ್ರೀತಿಗೆ ಇನ್ನು ಹಲವು ಮುಖಗಳಿವೆ, ಹಲವು ರೂಪಗಳಿವೆ. ಬಿದ್ದಾಗ ಎದ್ದು ನಿಲ್ಲುತ್ತೇವೆ, ಸೋತಾಗ ಮತ್ತೆ ಗೆಲುವನ್ನು ಹಂಬಲಿಸಿ ಮುಂದೆ ಹೆಜ್ಜೆ ಇಡುತ್ತೇವೆ ಇದುವೇ ಜೀವನ ಪ್ರೀತಿ. ಬೇರೆಯವರಿಗಾಗಿ ನಾವು, ನಮಗಾಗಿಯೇ ಜೀವನ ಎನ್ನುವ ಸಣ್ಣ ಸ್ವಾರ್ಥದ ಜೊತೆಗೂ ಈ ಪ್ರೀತಿ ನಿಲ್ಲುತ್ತದೆ. ನಾನು ನನ್ನದು ಇವುಗಳ ನಡುವೆ ಎಲ್ಲೋ ಒಂದೆಡೆ ನಮ್ಮನ್ನ ಮುಂದೆ ಸಾಗುವಂತೆ ಪ್ರೇರೇಪಿಸುವ ಶಕ್ತಿಯೇ ಈ ಪ್ರೀತಿ. ಹುಟ್ಟಿನ ಜೊತೆಗೇ ನಮ್ಮನ್ನು ಆವರಿಸೋ ಈ  ನಾನು ನನ್ನದು ಎಂಬ ಭಾವ ತಾಯಿ, ತಾಯಿ ನಾಡಿನ ಬಗೆಗೆ ನಮಗರಿವಿಲ್ಲದೆಯೆ ಒಂದು ಕಿಚ್ಚು, ಸ್ವಾಭಿಮಾನವನ್ನು ರೂಪಿಸಿಬಿಡುತ್ತದೆ. ನೆಲ ಜಲ ಅಂದಾಗ ಅದೊಂದು ತರಹದ ಮಿಂಚು ಮೈಯೆಲ್ಲಾ ಸಂಚಾರವಾಗುತ್ತದೆ ಇದೇ ತಾಯಿ ನಾಡಿನ ಪ್ರೀತಿ, ದೇಶ ಭಕ್ತಿ. ಈ ಪ್ರೀತಿ ಇಷ್ಟಕ್ಕೆಲ್ಲ ಮೀಸಲಾಗದೆ ಆಧ್ಯಾತ್ಮದ ಕಡೆಗೆ ತನ್ನ ಪಯಣ ಮುಂದುವರಿಸುತ್ತದೆ. ಮಾನವ ಜೀವಿ ಪ್ರಕೃತಿಯ ವರಪುತ್ರ, ಪಂಚಭೂತಗಳಿಂದ ನಿರ್ಮಿತ, ತನ್ನೆಲ್ಲಾ ಭಾವುಕತೆಯನ್ನು ಒಗ್ಗೂಡಿಸಿ ಸೃಷ್ಟಿಯ ಆಧಾರ ಭಗವಂತನ ಕಡೆಗೆ ಸೆಳೆಯಲ್ಪಡುತ್ತಾನೆ, ಇದೇ ದೈವೀ ಪ್ರೀತಿ. ಭಗವಂತ ಪ್ರೇಮ ಸ್ವರೂಪಿ, ಕಣ್ಣಿಗೆ ಕಾಣೊದಿಲ್ಲ, ಆದರೆ ನಮ್ಮನ್ನು ಆವರಿಸಿಕೊಂಡಿರೋ ಶಕ್ತಿ. ನಮ್ಮೊಳಗಿನ ಋಣಾತ್ಮಕ ಚಿಂತನೆಗಳನ್ನು ಬಿಟ್ಟು ಯೋಚಿಸಿದಲ್ಲಿ ಭಗವಂತನ ಸಾಕ್ಷಾತ್ಕಾರ ಖಂಡಿತಾ ಸಾಧ್ಯ . ಹೌದು ಪ್ರೀತಿಯಲಿ ದೇವರಿದ್ದಾನೆ. ನಂಬಿಕೆಯಲ್ಲಿ ಪ್ರೀತಿಯಿದಿ, ಸಂಭಂಧವಿದೆ. ಪ್ರೀತಿಯಲಿ ನಮ್ಮೊಳಗೆ ದೇವರನ್ನು ಕಾಣಬಹುದು, ನಮ್ಮೊಳಗೆ ನಾವೇ ದೈವಾಂಶಸಂಭೂತರಾಗಬಹುದು


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಪ್ರೀತಿಯೆಂದರೆ ಬರೀಯ ಭಾವವಲ್ಲ. . . ನಂಬಿಕೆ !: ಜಯಪ್ರಕಾಶ್ ಪುತ್ತೂರು

  1. ಪ್ರೀತಿ ಅವ್ಯಾಹತ ಚೇತನ ಶಕ್ತಿ. ಮನುಷ್ಯ ಮಾಗಿದಷ್ಟೂ ಎಲ್ಲವನ್ನೂ ಪ್ರೀತಿಸತೊಡಗುತ್ತಾನೆ.

Leave a Reply

Your email address will not be published. Required fields are marked *