ಬಯಸಿದ್ದೆಲ್ಲಾ ಸಿಕ್ಕಿಬಿಡಬೇಕು – ಹುಟ್ಟಿದ ದಿವಸದಿಂದಲೂ ಇದು ಮನುಷ್ಯನಿಗೆ ಅಂಟಿಕೊಂಡಿರುವ ಒಂದು ತೆರನಾದ ವಿಚಿತ್ರ ಖಾಯಿಲೆ. ಈ ಖಾಯಿಲೆಯಿಂದ ಯಾರು ಹೊರಬರುತ್ತಾರೋ ಅವರೇ ಸುಖಜೀವಿಗಳು. ಇಲ್ಲದಿದ್ದರೆ, ಅವರಷ್ಟು ವಿಚಿತ್ರವಾಗಿ ನಡೆದುಕೊಳ್ಳುವವರೇ ಸಿಗುವುದಿಲ್ಲ. ಇದಕ್ಕೆ ಬುದ್ಧ ಹೇಳಿದ “ಆಸೆಯೇ ದುಃಖಕ್ಕೆ ಮೂಲ” ಎಂಬ ಮಾತು ಒಂದು ಉದಾಹರಣೆ. ಬದುಕಿನಲ್ಲಿ ಆಸೆಯನ್ನು ತ್ಯಜಿಸಿದವರು ಬಹಳಷ್ಟು ಮಂದಿ ಸಿಗುತ್ತಾರೆ. ಆದರೆ, ಪ್ರೀತಿಯಲ್ಲಿ ಆಸೆ ತ್ಯಜಿಸುವವರು ಅಥವಾ ಪ್ರೀತಿಯೆಂಬ ಆಸೆಯನ್ನೇ ತ್ಯಜಿಸುವವರು ಕೇವಲ ಬೆರಳೆಣಿಕೆಯ ಹೃದಯಗಳಷ್ಟೇ. ಈಗ ನಾನು ಆ ದಾರಿಯಲ್ಲಿ ಹೆಜ್ಜೆ ಇಡುತ್ತಿರುವವನು. ಅಂದರೆ, ಪ್ರೀತಿ ಮತ್ತು ಆಸೆ – ಎರಡನ್ನೂ ತ್ಯಜಿಸಲೊರಟಿರುವವನು.
ನೀವು ಬೇಕೆಂಬುದು ಕೇವಲ ಆಸೆ.
ನೀವೇ ಬೇಕೆಂಬುದು ನಿಜವಾದ ಪ್ರೀತಿ.
ನಾನು ನಿಮ್ಮನ್ನು ನಿಜವಾಗಿಯೂ ಪ್ರೀತಿಸಿದವನು, ಪ್ರೀತಿಸು_.
ಇದು ತಿಳಿದ ಮೇಲೂ, ಈ ಎರಡನ್ನೂ ತ್ಯಜಿಸಲಣಿಯಾಗಿದ್ದೇನೆ. ಅದಕ್ಕೆ ಕಾರಣ, #ನಿಮ್ಮ ಮೇಲಿನ ಅತಿ ದೊಡ್ಡ ಗೌರವ.
ನಾನು ನಿಮ್ಮನ್ನು ಪ್ರೀತಿಸಿದ್ದಕ್ಕಿಂತ ಗೌರವಿಸಿದ್ದೇ ಹೆಚ್ಚು. ಏಕೆಂದರೆ, ಈ ಕ್ಷಣದವರೆಗೂ (ಮಂದೆಯೂ ಕೂಡ) ಒಮ್ಮೆಯೂ ನಾನು ನಿಮ್ಮನ್ನು ಎರಡನೆಯ ಭಾವನೆಯಿಂದಾಗಲೀ ಅಥವಾ ಕೆಟ್ಟ ದೃಷ್ಟಿಯಿಂದಾಗಲೀ ನೋಡಿದ್ದೇ ಇಲ್ಲ. ನಿಮ್ಮನ್ನು ಕನಸಲ್ಲಿ ನೆನೆಸಿಕೊಂಡರೂ ಕೂಡ ನನಗೆ ಆ ಭಾವನೆ ಬರಲು ಸಾಧ್ಯವೇ ಇಲ್ಲ. ಕಾರಣ, ನಾನು ನಿಮ್ಮನ್ನು ಪ್ರೀತಿಸಿದ್ದಷ್ಟೇ ಅಲ್ಲ. ಕ್ಷಣಕ್ಷಣಕ್ಕೂ ಆರಾಧಿಸಿದೆ. ಅದನ್ನು ಲೆಕ್ಕ ಹಾಕಿಕೊಂಡು, ಅಳೆದು ತೂಗಿ ನೋಡಿದರೆ ಪ್ರೀತಿಯ ಮುಂದೆ ನಿಮ್ಮ ಮೇಲಿನ ಗೌರವವೇ ಗೆಲ್ಲುತ್ತದೆ.
ನೀವು ನನ್ನನ್ನು ಪ್ರೀತಿಸುವುದಿಲ್ಲ ಎಂಬ ನಿಜಾಂಶ ಗೊತ್ತಾದಾಗಲೇ ಆಕಾಶದೆತ್ತರಕ್ಕೆ ಬೇಸರವಾಗಿದ್ದು, ಕಂಗಳು ಹೇಳದಂತೆ ತೇವವಾಗಿದ್ದು, ಹೃದಯ ಒಮ್ಮೆಲೇ ಬೆಚ್ಚಿದ್ದು, ಗಂಟಲು ಒಂದೇ ಸವನೆ ಒಣಗಿದ್ದು, ಕೈ-ಕಾಲುಗಳು ಕ್ಷಣಕಾಲ ನಿಶ್ಯಕ್ತವಾಗಿದ್ದು. ಹೌದು, ಹೀಗೆಲ್ಲ ಆಗಿದ್ದು ಖಂಡಿತ ನಿಜ.
ನೀವು ನನ್ನನ್ನು ಮತ್ತು ನನ್ನ ನಿಶ್ಕಲ್ಮಶ ಪ್ರೀತಿಯನ್ನು ತಿರಸ್ಕರಿಸಿದ್ದು ಎಷ್ಟು ನಿಜವೋ, ನೀವು ಮನಸು ಬದಲಿಸಬಹುದು ಎಂದು ನಾನು ಇಷ್ಟು ದಿನಗಳು ಕಾದದ್ದೂ ಕೂಡ ಅಷ್ಟೇ ನಿಜ. ಅದಕ್ಕೆ ಕಾರಣ ಮನದ ಮೂಲೆಯಲ್ಲಿ ನನಗಷ್ಟೇ ಕಾಣುತ್ತಿದ್ದ ಒಂದು ಸಣ್ಣ ನಿರೀಕ್ಷೆಯಷ್ಟೆ. ಭವಿಷ್ಯದಲ್ಲಿ ನಿಮ್ಮನ್ನು ಮತ್ತೆ ಪ್ರೀತಿಯ ಬಗ್ಗೆ ಕೇಳಲಿಲ್ಲವಲ್ಲ ಎಂಬ ಠಕ್ಕತನ ನನ್ನನ್ನು ಕಾಡಬಾರದೆಂದು ಕೇಳಿದೆ. ಆದರೆ, ನನ್ನ ನಿರೀಕ್ಷೆ ನಿಜವಾಗಲಿಲ್ಲ,,, ಕೊನೆಗೂ ನಿಜವಾಗಲೇ ಇಲ್ಲ.
ಪ್ರೀತಿ ಮಾಡುವುದಲ್ಲ, ಅದು ತಂತಾನೇ ಆಗಬೇಕು. ನನಗೆ ನಿಮ್ಮ ಮೇಲೆ ಪ್ರೀತಿಯಾದ ಕೂಡಲೇ, ನಿಮಗೂ ನನ್ನ ಮೇಲೆ ಪ್ರೀತಿಯಾಗಬೇಕು ಎಂದು ಅಂದುಕೊಳ್ಳುವಷ್ಟು ದಡ್ಡನಾಗಿದ್ದೆ ನಾನು. ಯಾವುದೇ ವಸ್ತುವಾಗಲೀ ಅಥವಾ ವ್ಯಕ್ತಿಯಾಗಲೀ ಸಿಗುವುದಿಲ್ಲ ಎಂದು ಗೊತ್ತಿದ್ದೂ ಪ್ರೀತಿಸಿದರೆ ಅದು ದಡ್ಡತನ ಎನ್ನುವುದು ಕೆಲವರ ಅಭಿಪ್ರಾಯ. ಆದರೆ, ಕೆಲವೇ ಕೆಲವರಿಗೆ ಮಾತ್ರ ಗೊತ್ತಿರುತ್ತದೆ ಅದು ದೊಡ್ಡತನ ಕೂಡ ಎಂದು. ಒಂದು ಸಂಪೂರ್ಣವಾಗಿ ಅರ್ಥವಾಯಿತು. ಯಾರೇ ಆಗಲೀ, ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಬೇಕೇ ಹೊರತು ಹಿಂಸೆಯಿಂದಲ್ಲ.
ಬಹುಶಃ ನಾನು ನಿಮಗೆ ನನಗೇ ಗೊತ್ತಿಲ್ಲದ ರೀತಿಯಲ್ಲಿ ನನ್ನನ್ನು ಪ್ರೀತಿ ಮಾಡಲು ಹಿಂಸಿಸಿದನೇನೋ ಅನಿಸುತ್ತಿದೆ. ಏಕೆಂದರೆ, ನಿಮ್ಮ ಪ್ರತಿಯೊಂದು ಸಂದೇಶವೂ ಅದನ್ನು ಸಾರುತ್ತಿತ್ತು. ನಾನು ನಿಮಗೆ ಎಷ್ಟು ಪ್ರೀತಿಯಿಂದ ಏನೆಲ್ಲಾ ಬರೆದು ಕಳುಹಿಸಿದರೂ ಅದಕ್ಕೆ ನಿಮ್ಮ ಮರುಉತ್ತರಗಳು ವಾಕ್ಯಗಳಲ್ಲಲ್ಲ, ಕೇವಲ ಎರಡು ಅಥವಾ ಮೂರು ಪದಗಳಲ್ಲಷ್ಟೇ ಮುಕ್ತಾಯವಾಗುತ್ತಿತ್ತು. ಹೌದು, ನಾನು ಒಪ್ಪುತ್ತೇನೆ. ನಿಮಗೆ ನಾನು ಇಷ್ಟವಿಲ್ಲ ಎಂದು ನೇರವಾಗೇ ಹೇಳಿದಿರಿ. ಆದರೆ, ನಾನೇನು ಮಾಡಲಿ,,, ಪುಟ್ಟ ಹೃದಯ… ಸಂತೆಯಲ್ಲಿ ಮಗುವನ್ನು ಕಳೆದುಕೊಂಡ ತಾಯಂತೆ ಅದು ನಿಮ್ಮನ್ನೇ ಹುಡುಕತೊಡಗಿತು, ನಿಮ್ಮನ್ನೇ ಸೇರಬಯಸಿತು. ಕೊನೆಗೂ ಅದು ಈಡೇರಲಿಲ್ಲ.
ನಿಮ್ಮನ್ನು ನೆನೆಯದ ದಿನ ನನ್ನ ನಿಜವಾದ ಮರಣ. ಇದಂತೂ ಕಟು ಸತ್ಯ. ನಿಮ್ಮನ್ನು ನಾನು ಸದಾ ನೆನೆಯುತ್ತಲೇ ಇರುತ್ತೇನೆ – ಕೊನೆಯವರೆಗೂ! ನನ್ನ ಸಾವಿನಾಚೆಗೂ ನನಗೆ ನಿಮ್ಮ ನೆನಪಿರುತ್ತದೆ. ಆದರೆ, ನಿಮ್ಮ ನೆನಪಿಗೆ ನನ್ನಲ್ಲಿ ಸಾವೇ ಇರುವುದಿಲ್ಲ. ಅದು, ಸದಾ ಜೀವಂತವಾಗಿರುತ್ತದೆ. ನನಗೆ ಇನ್ನೂ ಒಂದು ವಿಷಯ ತಿಳಿಯಿತು – ನಿಮ್ಮನ್ನು ಪಡೆಯಲು ಯೋಗ ಮತ್ತು ಯೋಗ್ಯತೆ ಎರಡೂ ಇರಬೇಕು ಎಂದು. ಆದರೆ, ಆ ಯೋಗ ಮತ್ತು ಯೋಗ್ಯತೆ ಎರಡೂ ನನಗಿಲ್ಲ ಎಂದುತೊಳ್ಳುತ್ತೇನೆ. ಹಾಗಾಗಿ ನಾನು ನಿಮ್ಮನ್ನು ಪಡೆಯಲಾಗಲಿಲ್ಲ. ಇನ್ನೊಮ್ಮೆ ಹೇಳುತ್ತೇನೆ, ಇನ್ನೆಂದಿಗೂ ನಿಮಗೆ ತೊಂದರೆ ಕೊಡುವುದಿಲ್ಲ. ಈ ಪತ್ರ ಬರೆಯುವಾಗ ನನ್ನ ಹೃದಯದಲ್ಲಿ ಬೀಳುತ್ತಿದ್ದ ಒಂದೊಂದು ಹನಿಗಳೂ ಕೂಡ “ನನಗೆ ಸಿಗದ ನಿಮ್ಮನ್ನೇ ಹುಡುಕುತ್ತಿದ್ದವು.” ಆದರೆ, ಅವುಗಳಿಗೆ ವಾಸ್ತವವೇ ಗೊತ್ತಿರಲಿಲ್ಲ.
ನನ್ನ ಪ್ರಕಾರ, ನಾನು ನಿಮ್ಮನ್ನು ಇನ್ನು ಮುಂದೆ ಕೇವಲ ಎರಡು ಅಥವಾ ನಾಲ್ಕು ಬಾರಿ ನೋಡಬಹುದೇನೋ ಅಷ್ಟೆ. ಅದರಾಚೆಯ ಎಣಿಕೆಯಾಗಲಾರದು ಎಂಬುದು ಸತ್ಯ. ಅದಕ್ಕೆ ಉತ್ತರ ನನಗೆ ಮಾತ್ರ ಗೊತ್ತು, ಆ ಗುಟ್ಟು ನನ್ನಲ್ಲೇ ಇರಲಿ ಕೂಡ. ಒಮ್ಮೊಮ್ಮೆ ಬುದ್ಧಿ ಹೇಳುತ್ತದೆ, “ಪರವಾಗಿಲ್ಲ, ಪ್ರೀತಿ ಮಾಡೋದಿಲ್ಲ ತಾನೆ. ಆದ್ರೆ, ಮಾತಾಡ್ಸ್ಕೊಂಡಾದ್ರು ಇರ್ಬೋದಲ್ವ?” ಅಂತ . ಹಾಗೆ ಯೋಚನೆ ಮಾಡ್ತಿರೋ ಸಮಯದಲ್ಲೇ ಹೃದಯ ಹೇಳುತ್ತೆ, “ಬೇಡ, ಈಗ ತೊಂದರೆ ಕೊಟ್ಟಿರೋದೇ ಸಾಕು. ಮತ್ತೆ ಅವ್ರಿಗೆ ತೊಂದರೆ ಕೊಡ್ಬೇಡ. ಕೊನೆಯ ತನಕ ಅವರ ಮೇಲೆ ಗೌರವವಿಟ್ಟುಕೊ ಸಾಕು. ಬೇರೇನು ಬೇಡ.” ಎನ್ನುತ್ತದೆ.
ಬುದ್ಧಿ ಮತ್ತು ಹೃದಯ ಎರಡನ್ನೂ ತಕ್ಕಡಿಯಲ್ಲಿಟ್ಟು ತೂಗಿದಾಗ ಹೃದಯವೇ ಹೆಚ್ಚು ತೂಗುತ್ತಿತ್ತು. ಹಾಗಾಗಿ, ಹೃದಯದ ಮಾತೇ ಕೇಳಿದೆ, ಕೇಳುವಂತಾಯಿತು.
ಇದರ ಹೊರತಾಗಿ, ನಾನು ನಿಮಗೆ ಬರೆವ ಕೊನೆಯ ಪತ್ರವೂ ಇದೇ ಆಗಿರುತ್ತದೇನೋ?!
ಹಾಗೇನಾದರೂ ಆದರೆ, ನಾನು ಮೊದಲೇ ಹೇಳಿದ ಹಾಗೆ ನಾನು ನಿಮ್ಮನ್ನು ನನ್ನ ಪ್ರತೀ ಹಾಡಿನಲ್ಲೂ ಕೂರಿಸಿರುತ್ತೇನೆ. ನಿರ್ದೇಶಕರು ಯಾವುದೋ ನಾಯಕಿಯನ್ನು ನೆನೆಸಿಕೊಂಡು ಹಾಡು ಬರೆಯಲೇಳಿದರೂ ಕೂಡ ನಾನಂತು ನಿಮ್ಮನ್ನು ನೆನೆಸಿಕೊಂಡೇ ಹಾಡು ಬರೆಯುತ್ತೇನೆ. ಸಾಧ್ಯವಾದಲ್ಲಿ, ಮುಂಬರುವ ಚಿತ್ರಗಳಲ್ಲಿ ಹಾಡಿನ ಸಾಹಿತ್ಯ ಬರೆದವರಾರು ಎಂದು ಗೂಗಲ್ ನಲ್ಲಿ ಹುಡುಕಿ. ಅಲ್ಲಿ ನನ್ನ ಹೆಸರಿದ್ದರೆ, ಆ ಹಾಡುಗಳನ್ನಾದರೂ ಕೇಳಿ. ಪ್ರತೀ ಹೆಜ್ಜೆಯಲ್ಲೂ ನಿಮ್ಮನ್ನು ನೆನೆಯುತ್ತಿರುತ್ತೇನೆ. ತೀರ ಸಂಕಟದಿಂದಲೇ… ಎಲ್ಲದಕ್ಕೂ ಒಂದು ದೊಡ್ಡ ಕ್ಷಮೆ ಇರಲಿ.
ಬರೆದಿರುವೆ ನಿಮಗೆ ನನ್ನ ಕೊನೆಯ ಕಾಗದ
ವಿವರಿಸುತಲಿ ವಿಷಯವೆಲ್ಲ ಎದೆಯ ಭಾಗದ
ಹೇಳುತಾ ಪ್ರೀತಿಗೆ ವಿದಾಯವ
ನೀಗುತಾ ಪ್ರೀತಿಯ ವಿದಾಹವ…!!!
ಇಷ್ಟಾದರೂ ಕೊನೆಯ ವಿಜ್ಞಾಪನೆ: ಎಂದಿಗೂ ಆ ಮೂಗುತಿ ತೆಗೆಯಬೇಡಿ. ಆ ಮೂಗುತಿಯಿಂದ ನಿಮಗೆ ಅಂದ ಬಂದಿಲ್ಲ. ಬದಲಾಗಿ, ನಿಮ್ಮಿಂದಲೇ ಆ ಮೂಗುತಿಗೆ ಅಂದ ಹೆಚ್ಚಾಗಿರುವುದು.
ನೀವು ಒಬ್ಬ ಸುಂದರವಾದ ಹುಡುಗಿ ಎನ್ನುವುದನ್ನೂ ಒಬ್ಬ ಕುರುಡ ಕೂಡ ಒಪ್ಪುತ್ತಾನೆ, ಒಪ್ಪಲೇ ಬೇಕು. ನಿಜವಾಗಿಯೂ ನೀವು ಅಷ್ಟು ಚೆನ್ನಾಗಿದ್ದೀರಿ.
ಕಟ್ಟ ಕಡೆಯ ಸಾಲುಗಳು: ಎಲ್ಲೇ ಇದ್ದರೂ ಚೆನ್ನಾಗಿರಿ. ನೀವು ಚೆನ್ನಾಗಿರುತ್ತೀರಿ ಎಂದು ನನಗೆ ಗೊತ್ತು. ನಿಮ್ಮನ್ನು ನಿತ್ಯವೂ ನೆನೆಯುತ್ತೇನೆ, ನೀವು ನಿತ್ಯವೂ ನನ್ನ ಪ್ರಾರ್ಥನೆಯಲ್ಲಿ ಇದ್ದೇ ಇರುತ್ತೀರಿ ಮತ್ತು ನಿಮಗೆ ಒಳ್ಳೆಯದಾಗಲೆಂದು ನಾನು ಆ ದೇವರಲ್ಲಿ ನಿಷ್ಠೆಯಿಂದ ಕೇಳಿಕೊಳ್ಳುತ್ತೇನೆ.
ಶುಭವಾಗಲಿ ನಿಮಗೆ.
ಇತಿ,
“ನೀವು ನನ್ನವರು – ನಾನು ನಿಮ್ಮವನು”
ಎಂದು ಕನಸುಕಟ್ಟಿಕೊಂಡು ಅದನ್ನು ನನಸು ಮಾಡಿಕೊಳ್ಳಲಾಗದೆ ಸದಾ ಕಣ್ಣೀರಲ್ಲೇ ನಗುತ್ತಿರುವ ಪಾಪಿ.
-ನಾಗೇಶ್ ಪ್ರಸನ್ನ.ಎಸ್.