ಪ್ರೀತಿಯ ಗೆಳೆಯಾ,
ನೀನು ಹಾಕುವ ಸ್ಟೇಟಸ್ ಗಳನ್ನು ನಾನು ನೋಡುತ್ತಲೇ ಇದ್ದೇನೆ. ಅದೇನೋ ಖಿನ್ನತೆ, ಮುಗಿಯದ ಬೇಸರ ನಿನಗೆ ಅಲ್ವಾ? ಮೊನ್ನೆ ನೀನು ‘ಪ್ರೀತಿಯ ಪಾರಿವಾಳ ಹಾರಿ ಹೋಯ್ತೋ ಗೆಳೆಯಾ’ ಎಂದು ವ್ಯಕ್ತಿಯೊಬ್ಬ ಅಳುತ್ತಾ ಹಾಡುತ್ತಿರುವ ಹಾಡನ್ನು ಹಾಕಿಕೊಂಡಿದ್ದೆಯಲ್ಲಾ? ಅದನ್ನು ನೋಡಿ ನಿನಗೂ ನನಗೂ ಗೆಳೆಯನಾಗಿದ್ದವನೊಬ್ಬ ‘ಅವನದೆಂಥಾ ಕರ್ಮ ಮಾರಾಯಾ? ಲವ್ ಫೇಯ್ಲೂರಿರಬೇಕು’ ಎಂದು ನಿನ್ನ ಆಡಿಕೊಂಡ. ಯಾಕೋ ಪಿಚ್ಚೆನಿಸಿ ಈ ಪತ್ರ ಬರೆಯುತ್ತಿದ್ದೇನೆ.
ಪ್ರೀತಿಯ ಮೊಟ್ಟಮೊದಲ ಕನಸು ಬಿದ್ದ ದಿನದಿಂದ ಈ ಕ್ಷಣ ತನಕ ಅದೆಷ್ಟೋ ಪ್ರೇಮದ ಕಥೆಗಳನ್ನು ಕೇಳಿ, ನೋಡಿಬಿಟ್ಟಿದ್ದೇನೆ. ಅದೆಷ್ಟೋ ಪ್ರೇಮಿಗಳು ನನ್ನೆದುರೇ ಪ್ರೇಮಿಸಿ, ಮುದ್ದಾಡಿ ಎದ್ದುಹೋಗಿದ್ದಾರೆ. ಪ್ರೀತಿಯೂ ಈ ಮನುಷ್ಯ ಜಗತ್ತಿನ ಹುಟ್ಟಿ ಮುಗಿಯುವ ಸರ್ವೇ ಸಾಮಾನ್ಯ ಸಂಗತಿಗಳ ಪೈಕಿ ಒಂದೆಂಬ ಅಭಿಪ್ರಾಯ ನನ್ನದು. ಇದನ್ನು ಕೇಳಿ ನೀನೇನೆನ್ನುವೆಯೆಂಬುದೂ ನನಗೆ ಗೊತ್ತಿದೆ. “ಪ್ರೀತಿಸಿದವರಿಗಷ್ಟೇ ಗೊತ್ತು ಪ್ರೀತಿಯ ಬೆಲೆ” ಎನ್ನುವೆ ತಾನೇ? ಆದರೆ ಸಜೀವ ಸಂಬಂಧವೊಂದರ ಸಮತೋಲನದ ಸೂತ್ರವೇನು ಗೊತ್ತೇ? ಅದನ್ನುಳಿಸಿಕೊಳ್ಳಲು ನಿನಗಿರುವಷ್ಟೇ ಕಾಳಜಿ ಅವರಿಗೂ ಇರಬೇಕು!
ಬಹಳ ಸಲ ಯೋಚಿಸಿದ್ದೇನೆ: ಒಂದು ಹಂತದಲ್ಲಿ ‘ನೀನೇ ನನ್ನ ಪ್ರಾಣ’ ಎಂದು ನುಡಿದ ವ್ಯಕ್ತಿಯೊಬ್ಬರು ‘ನೀನು ಸಾಯಿ’ ಎನ್ನುವ ಹಂತ ತಲುಪುವುದಾದರೂ ಹೇಗೆ? ಈಚೆಗಿನ ವ್ಯಕ್ತಿಯಿನ್ನೂ ‘ನೀನಿಲ್ಲದೆ ನಾನಿಲ್ಲ’ ಎಂದು ಜಪಿಸುತ್ತಿರುವಾಗಲೇ ಅವರೇಕೆ ‘ನೀನು ನನಗೆ ಬೇಡ’ ಎಂದುಬಿಡುತ್ತಾರೆ? ದ್ವೇಷ ದ್ವೇಷವನ್ನು ಹಡೆಯುತ್ತದೆ ನಿಜ, ಆದರೆ ಪ್ರೀತಿಯ ಬಸುರಿನಲ್ಲೂ ದ್ವೇಷವೇ ಏಕೆ ಹುಟ್ಟುತ್ತದೆ? ಅಕ್ಕರೆಯ ಹಕ್ಕಿಯಿಟ್ಟ ಮೊಟ್ಟೆಗಳೇಕೆ ತಿರಸ್ಕಾರದ್ದಾಗಿರುತ್ತದೆ? ಅತಿಯಾದ ಪ್ರೀತಿಯೇ ಪ್ರೀತಿಯ ಕೊಲೆಗಾರನೇ?
ಕೆಲವೊಂದು ಸಂಬಂಧಗಳೇ ಹಾಗೆ ಗೆಳೆಯಾ. ಅವು ಹುಟ್ಟುವಾಗಲೇ ರೋಗಗ್ರಸ್ತವಾಗಿರುತ್ತವೆ. ಅವಕ್ಕೆ ದೃಢವಾದ ತಳಪಾಯವೇ ಇರುವುದಿಲ್ಲ. ಇಂದು ಹುಟ್ಟಿ, ನಾಳೆಗಾಗಲೇ ಬೆಳೆದುಬಿಡುವ ಕೀಟವೊಂದು ನಾಡಿದ್ದಿನ ಹೊತ್ತಿಗೆ ಸತ್ತುಹೋಗುತ್ತದಲ್ಲಾ? ಇದೂ ಹಾಗೇ. ಅವುಗಳ ಆಯುಷ್ಯ ಚಿಕ್ಕದು. ನಿನ್ನ ಯಾವುದೋ ಒಂದು ಒಳ್ಳೆಯ ಗುಣ ಅವಳಿಗೆ ಇಷ್ಟವಾಗಿರುತ್ತದೆ. ಯಾವುದೇ ಕ್ಷಣದಲ್ಲಿ ನೀನು ತೋರಿದ ಕಾಳಜಿಯನ್ನು ಅವಳು ಮೆಚ್ಚಿಕೊಂಡಿರುತ್ತಾಳೆ. ನಿನ್ನ ಇಡೀ ವ್ಯಕ್ತಿತ್ವವೇ ಇಂಥಹಾ ನೂರಾರು ಸಿಹಿಸಿಹಿ ಗುಣಗಳ ಸಂಕಲನವೆಂದು ಭ್ರಮಿಸಿರುತ್ತಾಳೆ. ಆದರೆ ಕೊನೆಗೆ ನೀನೂ ಎಲ್ಲರಂತೆಯೇ ರಾಗ-ದ್ವೇಷಗಳಿರುವ, ಕೋಪವುಕ್ಕುವ, ಅಸಡ್ಡೆ-ಸೋಂಬೇರಿತನಗಳಿರುವ ವ್ಯಕ್ತಿಯೆಂಬುದು ತಿಳಿದಾಗ ಅವಳ (ಅಪ)ನಂಬಿಕೆಗೆ ಘಾಸಿಯಾಗಿರುತ್ತದೆ. ಅದರ ಫಲವೇ ಈ ತಿರಸ್ಕಾರ.
ಹಾಗಂತ ತಪ್ಪೆಲ್ಲ ಅವರದ್ದೇ ಎನ್ನುವುದಿಲ್ಲ. ನಿನ್ನ ಯಾವುದೋ ಒಂದು ಗುಣವನ್ನವರು ಒಪ್ಪಿಕೊಂಡಿದ್ದನ್ನು ನೋಡಿ ‘ನಾನು ಮಾಡಿದ್ದೆಲ್ಲಾ ಸರಿ’ ಎಂಬ ಭಾವ ನಿನ್ನೊಳಗೆ ನೀನೇ ಬೆಳೆಸಿಕೊಂಡೆ ಅಲ್ವಾ? ಇಷ್ಟೆಲ್ಲಾ ಪ್ರೀತಿಸುವವಳು, ನನ್ನ ಬಿಟ್ಟು ಇನ್ನೆಲ್ಲಿ ಹೋಗ್ತಾಳೆ? ಎಂಬ ಅಸಡ್ಡೆಯೊಂದು ಗೊತ್ತೂ ಗೊತ್ತಿಲ್ಲದಂತೆ ನಿನ್ನೊಳಗೇ ಬೆಳೆದುಕೊಂಡಿತು. ನಿನಗಾದ ಯಾವುದೋ ಬೇಸರವನ್ನು ತಲೆಯೊಳಗಿಟ್ಟುಕೊಂಡು ಅವಳ ಮನನೋಯುವಂತೆ ಮಾತನಾಡಿದೆ. ಅವಳು ನಿನಗಾಗಿ ತನ್ನ ಸಮಯವನ್ನು ಮೀಸಲಿಟ್ಟ ಹೊತ್ತಿನಲ್ಲಿ ನೀನು ಮತ್ಯಾವುದೋ ಕೆಲಸದಲ್ಲಿ ಮುಳುಗಿದ್ದೆ. ಸಾಕು.. ಅಷ್ಟೇ ಸಾಕು. ತೆಳುವಾದ ಎಳೆಯ ಸಂಬಂಧವೊಂದು ಸಾಯುವುದಕ್ಕೆ ಅಷ್ಟು ಮಾತ್ರದ ಕಡೆಗಣನೆ ಸಾಕು ಗೆಳೆಯಾ. ಅವಳಿಗೆ ತನ್ನ ಅಂತರಂಗದಲ್ಲಿ ಬಿಡಿಸಿಟ್ಟುಕೊಂಡಿದ್ದ ನಿನ್ನ ಚಿತ್ರದ ಕಣ್ಣಲ್ಲಿ ಬಿರುಕೊಂದು ಗೋಚರಿಸಿರುತ್ತದೆ. ಆಗಲಾದರೂ ನೀವು ತಾಳ್ಮೆಯಿಂದ ಕೂತು, ನಯವಾಗಿ ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ನಿಮ್ಮ ನಿಮ್ಮ ಹಮ್ಮಿನಲ್ಲೇ ವಾದ ಹೂಡಿದಿರಿ. ಜಗಳ ಕಾದಿರಿ. ಒಂದು ಸಂಗತಿ ನೆನಪಿರಲಿ ಮಿತ್ರಾ: ಪ್ರೇಮಿಗಳಿಬ್ಬರು ವಾದಮಾಡತೊಡಗಿದಾಗ ಗೆಲ್ಲುವುದು ಯಾರೇ ಆದರೂ ಸೋಲುವುದು ಮಾತ್ರ ಪ್ರೀತಿ. ನಿಮ್ಮ ವಿಷಯದಲ್ಲಿ ಆಗಿದ್ದೂ ಅದೇ.
*************
ವಾಟ್ಸಾಪ್, ಫೇಸ್ಬುಕ್ಕುಗಳಲ್ಲಿ ಅಳುವುದರಿಂದ ಹಾರಿಹೋದ ಪಾರಿವಾಳ ಮರಳಿ ಬರುವುದಿಲ್ಲ. ನೋಡಿದ ಜನ ಕಿಸಕ್ಕೆಂದು ನಕ್ಕು ಸುಮ್ಮನಾಗುತ್ತಾರಷ್ಟೇ. ಅಷ್ಟಕ್ಕೂ ಎದೆಯೊಳಗೆ ಉರಿಯುವ ಅಸಹಾಯಕತೆಯನ್ನೂ, ವೇದನೆಯನ್ನೂ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುವುದು, ಯಾರಿಗೋ ಕರೆಮಾಡಿ ನಿನ್ನ ಕಥೆಯನ್ನೆಲ್ಲಾ ಹೇಳುವುದು.. ಇವೆಲ್ಲಾ ಹಗುರಾಗಲಿಕ್ಕೆ ಮನುಷ್ಯ ಕಂಡುಕೊಂಡ ತಪ್ಪು ಮಾರ್ಗಗಳು. ಆಚೆಕಡೆಯವರು ಅವಳನ್ನು ಬೈಯುತ್ತ ನಿನ್ನ ಬಗ್ಗೆ ಸಂತಾಪದ ಮಾತುಗಳನ್ನಾಡಿದಾಗ ನಿನಗೊಂದು ರೀತಿ ಸಮಾಧಾನವಾಗುತ್ತದೆ ಅಲ್ವಾ? ಅದು ಸುಳ್ಳು ಗೆಳೆಯಾ. ಬೇರೆಯವರಿಂದ ದೊರೆಯುವ ಈ ಸಮಾಧಾನ ತಾತ್ಕಾಲಿಕವೂ, ಅಡಿಕ್ಟೆಬಲ್ಲೂ ಆಗಿರುತ್ತದೆ. ಮೊದಲ ಬಾರಿಗೆ ಸಿಗುವ ಅದನ್ನು ನೀನು ಎರೆಡನೆಯ ಬಾರಿಯೂ ಬಯಸುತ್ತೀಯ. ಬಳಿಕ ಮೂರನೇ ಬಾರಿಗೂ ಅದು ನಿನಗೆ ಬೇಕೆನಿಸುತ್ತದೆ. ನಾಲ್ಕು, ಐದು, ಆರು.. ಹೀಗೆ, ಮತ್ತೆ ಮತ್ತೆ ಸಾಂತ್ವನ ಕೇಳುವ ಪ್ರಯತ್ನದಲ್ಲಿ ಅವರೆದುರು ನಿನ್ನ ಘನತೆಯನ್ನು ನೀನಾಗಿಯೇ ಕಳೆದುಕೊಳ್ಳುತ್ತೀಯ. ನಿನ್ನೊಳಗೇ ಹುಟ್ಟದ ಹೊರತು ಇನ್ಯಾರೋ ವ್ಯಕ್ತಿಯೊಬ್ಬ ಅದೆಷ್ಟು ಬಾರಿ ಹೇಳಿದರೂ ಆ ಸಮಾಧಾನ ನಿನ್ನದಾಗುವುದಿಲ್ಲ.
ನಮ್ನಮ್ಮ ದುಃಖಗಳಿಗೆ ಕಟ್ಟಕಡೆಗೆ ನಾವೇ ಹೊಣೆಗಾರರು ಮಿತ್ರಾ. ನಮ್ಮೊಳಗೆ ಹರಿಯುತ್ತಿರುವ ನೋವು ನಮ್ಮೊಳಗೇ ಹೆಪ್ಪುಗಟ್ಟಿ ಗಟ್ಟಿಯಾಗಬೇಕೇ ಹೊರತು ಅದು ಮತ್ಯಾರದೋ ಕಣ್ಣೆದುರು ಅನಾವಶ್ಯಕವಾಗಿ ಹರಿಯಬಾರದು. ಆಸ್ತಿಗೆ ಪಾಲುದಾರರಿರುತ್ತಾರೇ ಹೊರತು ನೋವಿಗಲ್ಲ. ಹರುಷಕ್ಕೆ ಹಿಂಬಾಲಕರಿರುತ್ತರೇ ಹೊರತು ದುಃಖಕ್ಕಲ್ಲ. ಹಳೆಯ ಮಧುರ ಘಳಿಗೆಯೊಂದು ನೆನಪಾಗಿ ಯಾರ ಬಳಿಯಾದರೂ ಅದನ್ನು ಹೇಳಿಕೊಳ್ಳಬೇಕು, ಸ್ಟೇಟಸ್ ಹಾಕಬೇಕು ಅಥವಾ ಅವಳ ಬಳಿಯೇ ಮಾತನಾಡಬೇಕು ಎಂದೆಲ್ಲಾ ಅನಿಸುವ ಆ ದುರ್ಬಲ ಕ್ಷಣವೊಂದನ್ನು ತುಟಿಕಚ್ಚಿ ಸಹಿಸಿಕೊಂಡು ನೋಡು? ಮುಂದಿನ ನಿಮಿಷ ನಿನಗೇ ನೀನು ಮಾಡಹೊರಟಿದ್ದರ ಬಗ್ಗೆ ನಾಚಿಕೆಯಾಗುತ್ತದೆ. ಇದಕ್ಕೆ ಹೊರತಾದ, ಚಿಂತಿಸಿ ಪರಿಹರಿಸಬೇಕಾದ ಬಹುಮುಖ್ಯ ಸಂಗತಿಗಳು ಬದುಕಿನಲ್ಲಿ ಬಹಳಷ್ಟಿವೆಯೆಂಬುದು ನಿನಗೇ ಅರಿವಾಗುತ್ತದೆ.
ಕೊನೆಯದಾಗಿ ಒಂದು ಮಾತು: ಪ್ರೀತಿಯಿರುವುದೇ ಹೌದಾದರೆ ಪಾರಿವಾಳ ಅಷ್ಟು ಸುಲಭಕ್ಕೆ ಹಾರಿಹೋಗುವುದಿಲ್ಲ!
–ವಿನಾಯಕ ಅರಳಸುರಳಿ