ಪಂಜು-ವಿಶೇಷ

ಪ್ರೀತಿಯಾಚರಣೆಯ ಹಬ್ಬ: ಸಿಂಧುಚಂದ್ರ

ನಾನು ಪ್ರೀತಿಯಿಂದ ಕೊಂಡುತಂದಿದ್ದ ಜುಮಕಿ ಅದು. ಬಿಳಿ ಚೂಡಿದಾರಕ್ಕೆ ಒಳ್ಳೆಯ ಜೋಡಿಯಾಗುತ್ತಿತ್ತು. ಬಿಳಿಯ ಬಣ್ಣದ ಜುಮಕಿಗೆ ಹೊಳೆಯುವ ಹರಳುಗಳಿದ್ದವು. ತೂಗಾಡುವ ಬಿಳಿ ಬಣ್ಣದ ಮಣಿಗಳು ಅದರ ಅಂದವನ್ನು ಹೆಚ್ಚಸಿದ್ದವು. ಸಿಕ್ಕಾಪಟ್ಟೆ ಚಂದವಿದ್ದ ಆ ಜುಮಕಿಯನ್ನು ಹಾಕಿಕೊಳ್ಳಲು ಇನ್ನೂ ಮುಹೂರ್ತ ಬಂದಿರಲಿಲ್ಲ. ಅಂದೇಕೋ ಅವನು ಫೋನ್ ಮಾಡಿ ಎರಡುವರೆ ಎಕರೆ ವ್ಯಾಪಿಸಿರುವ ಪಿಳಲೆ ಮರವನ್ನು ನೋಡಲು ಹೋಗುತ್ತಿದ್ದೀನಿ, ಬರ್ತೀಯಾ ಎಂದು ಕೇಳಿದಾಗ ಇಲ್ಲವೆನ್ನಲಾಗಲಿಲ್ಲ. ನಾನು ಹೊಸ ಬಿಳಿ ಚೂಡಿದಾರ ತೊಟ್ಟು  ಅದೇ ಬಿಳಿ ಜುಮಕಿಯನ್ನು ಕಿವಿಗೆ ನೇತು ಹಾಕಿದೆ. ಸ್ವಲ್ಪ ಹೆಚ್ಚೇ ತೂಗಾಡುತ್ತಿದೆ ಎನ್ನಿಸಿದರೂ ಚಂದ ಕಾಣಿಸುತ್ತಿದೆ  ಎಂದು ನನ್ನಷ್ಟಕ್ಕೇ ನಾನೇ ಹೇಳಿಕೊಂಡು ತಯಾರಾದಾಗ ಸೂರ್ಯ ಮೆಲ್ಲಮೆಲ್ಲನೆ ಏರತೊಡಗಿದ್ದ ಆಕಾಶದ ನೆತ್ತಿಗೆ.

ಬಹಳಷ್ಟು ಹೊತ್ತು ಕಾದರೂ ಅವನು ಬರಲಿಲ್ಲ.  ನಾನು ಒಂದು ಮೂಸುಂಬೆ ಹಣ್ಣನ್ನು ತಿಂದು ಹಾಗೆಯೇ ನಿದ್ದೆ ಹೋದೆ. ಮೊಬೈಲ್ ರಿಂಗಣಿಸಿದಾಗ ಮತ್ತೆ ಎಚ್ಚರ. ಅವನದೇ ಕರೆ. ನಾನಿಲ್ಲಿ ಹೊರಗಿದ್ದೇನೆ ಬೇಗ ಬಾ… ನಾನು ಮತ್ತೆ ಕನ್ನಡಿ ನೋಡುವ ಗೋಜಿಗೆ ಹೋಗದೆ ಮನೆಯಿಂದ ಹೊರಬಿದ್ದೆ. ಅವನು ಹೀರೋ ಪ್ಲೆಜರ್ ನೊಂದಿಗೆ ಕಾಯುತ್ತಿದ್ದಾನೆ. ದಯವಿಟ್ಟು ಈ ಗಾಡಿ ಚೇಂಜ್ ಮಾಡು..ಎನ್ ಫೀಲ್ಡ್ ಅಂತದ್ದೇನಾದ್ರೂ ಕೊಂಡ್ಕೋ ಎಂದೆ ಎಂದಿನ ಧಾಟಿಯಲ್ಲಿ. ಸದ್ಯ ಅಂತಹ ಕನಸಿಲ್ಲ..ಸುಮ್ನೇ ಕೂತ್ಕೋ ಎಂದವನು ಗದರಿದಂತೆ ಮಾಡಿದ. ಬೈಕ್ ಕೆರೆಯ ಏರಿಗುಂಟ ಸಾಗುತ್ತಿತ್ತು. 4 ಗಂಟೆಯ ಇಳಿಸಂಜೆ ನಮ್ಮೊಂದಿಗಿತ್ತು. 

ನಾನು ಮಾತಾಡುವಾಗಲ್ಲೆಲ್ಲಾ ನನ್ನ ತುಟಿ ಅವನ ಕಿವಿಗಳಿಗೆ ತಾಗುತ್ತಿತ್ತು. ಕೆಲವೊಮ್ಮೆ ಅವನನ್ನು ಬಿಗಿದಪ್ಪಿ ಕೂರುತ್ತಾ,  ಜನರೆದುರಾದಾಗ  ಕೈ ತೆಗೆದು ಹಿಂದೆ ಸರಿಸುತ್ತಾ ನಾನು ಗಾಳಿಯೊಂದಿಗೆ ತೇಲುತ್ತಿದ್ದೆ.   ಊರು, ಕೇರಿ, ಕಾಡು ದಾಟಿದ ಮೇಲೆ ಬಟಾಬಯಲು ಪ್ರದೇಶ ಧುತ್ತೆಂದು ಎದುರಾಯ್ತು. ಎತ್ತ ನೋಡಿದರೂ ಗದ್ದೆ ಬಯಲು….. ಕಣ್ಣು ಹಾಯಿಸಿದಷ್ಟು ದೂರಕ್ಕೂ ಒಣ ಗದ್ದೆ ಪ್ರದೇಶ… ಎಲ್ಲೋ ಒಂದು ಕಡೆ ಮಾತ್ರ ಕಬ್ಬಿನ ಗದ್ದೆಯ ಹಸಿರು ಕಾಣುತ್ತಿತ್ತು. ಮತ್ತೆಲ್ಲಾ ಕಟಾವು ಆಗಿರೋ ಖಾಲಿ ಗದ್ದೆ. ಸಾವಿರ ಎಕರೆ ಗದ್ದೆ ಪ್ರದೇಶದ  ನಡುವಿನ ಹಾದಿಯಲ್ಲಿ ಆತ ಒಮ್ಮೆಲೇ ಬೈಕ್ ನಿಲ್ಲಿಸಿದ. ದೂರದಲ್ಲೆಲ್ಲೋ ಗುಡ್ಡದಂತೆ ಗೋಚರಿಸುತ್ತಿದ್ದ ಆಕೃತಿಯೆಡೆಗೆ ಕೈ ತೋರಿ, ಅದೇ ಎರಡುವರೆ ಎಕರೆ ಪಸರಿಸಿಕೊಂಡಿರುವ ಪಿಳಲೆ ಮರ ಎಂದ. ಬೈಕನ್ನು ಅಲ್ಲೇ ರಸ್ತೆಯ ಬದಿಗಿಟ್ಟು ನಾವಿಬ್ಬರೂ ಗದ್ದೆ ಬಯಲಿನಲ್ಲಿ ನಡೆಯತೊಡಗಿದೆವು. ನನ್ನ ಬಿಳಿ ಚೂಡಿದಾರದ ಪ್ಯಾಂಟಿನ ತುದಿಗೆ ಗದ್ದೆಯ ಮಣ್ಣು ನವಿರಾಗಿ ಮೆತ್ತಿಕೊಳ್ಳತೊಡಗಿತು. ಸಂಜೆ 5 ರ ಬಿಸಿಲು ಇಳಿಮುಖವಾಗಿ ನಮ್ಮಿಬ್ಬರ ಮುಖಕ್ಕೂ ಕೆಂಬಣ್ಣ ಹಚ್ಚುತ್ತಿದ್ದವು. ಸುಮಾರು 2 ಕಿ.ಮೀ ಕ್ರಮಿಸಿದ ನಂತರ ದೈತ್ಯರೂಪದಲ್ಲಿ ಎರಡುವರೆ ಎಕರೆ ಗದ್ದೆಯನ್ನು ವ್ಯಾಪಿಸಿಕೊಂಡಿರುವ ಪಿಳಲಿಮರದ ಹತ್ತಿರ ನಾವಿದ್ದೆವು. ಕೆಂಪು ಮಿಶ್ರಿತ ಹಸಿರಿನ ಚಿಗುರು ದಟ್ಟವಾಗಿ ತುಂಬಿಕೊಂಡಿತ್ತು. ಆಲದ ಜಾತಿಯ ಪಿಳಲಿ ಮರ ಪ್ರತಿ ಬಿಳಲುಗಳನ್ನು ನೆಲಕ್ಕೆ ಊರಿ ಪ್ರತಿ ವರ್ಷ ಪಸರಿಸಿಕೊಳ್ಳುತಿರುವ ಪರಿಗೆ ನಾನು ಬೆರಗಾಗಿ ನಿಂತೆ. ನಮ್ಮ ಪ್ರೀತಿಯೂ ಹೀಗೇ ಪಸರಿಸಲಿ ಎಂದು ಆಶಿಸುತ್ತಾ ಬೀಳುಗಳ ನಡುವೆ ಹೆಜ್ಜೆ ಹಾಕಿದೆ. ಒಳಗೆ ಸೂರ್ಯನ ಕಿರಣಗಳು ಅಲ್ಲಲ್ಲಿ ಮಾತ್ರ ತೂರಿಕೊಂಡು ಒಳಗೆ ಬರುತ್ತಿದ್ದವು. ಅವನು ನನ್ನ ಬಹಳಷ್ಥು ಫೋಟೋಗಳನ್ನು ತೆಗೆದ. 

ನಂತರ ಒಬ್ಬರಿಗೊಬ್ಬರು ಹತ್ತಿರ ಬಂದು ಸ್ವಂತ ಚಿತ್ರಗಳನ್ನು ತೆಗೆದುಕೊಂಡಾಗಲಂತೂ ಸೂರ್ಯ ಕಣ್ಣು ಮಿಟುಕಿಸಿದ.  ಸೂರ್ಯ ಮುಳಗುವುದರ ಮೊದಲು ಹೊರಡೋಣ ಎಂದುಕೊಂಡು ಬೃಹತ್‍ಪಿಳಲಿ ಮರಕ್ಕೆ ಅರ್ಧ ಪ್ರದಕ್ಷಿಣೆ ಹಾಕಿ ನಾವು ಹೊರಟಾಗ ಆರಾಗಿತ್ತು.ಮತ್ತದೇ ಬಟಾಬಯಲಿನಲ್ಲಿ ನಡೆದು, ನಂತರ ಬೈಕ್ ಏರಿ ಬಂದು ತಿರುಗಿ ಮತ್ತದೇ ರಸ್ತೆಯಲ್ಲಿ ಪಯಣ. ಬರುವಾಗ ಕೇರಿಯಲ್ಲೊಂದು ಟೆಂಟ್ ಯಕ್ಷಗಾನ ನಡೆಯುತ್ತಿದ್ದುದ್ದನ್ನು ನೋಡಿ ಆತ ಬ್ರೇಕ್ ಹಾಕಿದ. ಅವನಿಗೆ ಯಕ್ಷಗಾನದ ವಿಪರೀತ ಮೋಹ. ಅವನು ಹೋಗೋಣವೆಂದರೆ ನಾನ್ಹೇಗೆ ಬೇಡವೆನ್ನಲಿ..? ಮಂಡಕ್ಕಿ ಮಿರ್ಚಿ ಭಜೆ ಯೊಂದಿಗೆ ರಾತ್ರಿಯವರೆಗೆ ಯಕ್ಷಗಾನ ನೋಡಿದೆವು. ನಾವು ಕೆರೆಏರಿಗುಂಟ ಮರಳುವಾಗ ಮಧ್ಯರಾತ್ರಿಗೆ ಕೇವಲ 10 ನಿಮಿಷ ಬಾಕಿಯಿತ್ತು.  ಕೊರೆಯುವ ಚಳಿಗೆ ನಾನವನನ್ನು ಗಟ್ಟಿಂಯಾಗಿ ಬಳಸಿದ್ದೆ. ಮುಂಗೈಗಳಿಗೆ ಚಳಿಯಾಗಬಾರದೆಂದು ನನ್ನ ಕೈ ಅವನ ಜರ್ಕಿನ್ ನ ಕಿಸೆಯ ಒಳಗಿತ್ತು. ಎಷ್ಟು ಬೇಗ ಮನೆ ಹತ್ತಿರ ಬಂದೆವು ಎಂದೆನಿಸತೊಡಗಿತ್ತು. ಮನೆಗೆ ಬಂದು ಕಾಡಿಗೆ ಇನ್ನೂ ಉಂಟೇ ಕಣ್ಣಲ್ಲಿ ಎಂದು ನೋಡುತ್ತೇನೆ…ಅರೆ ಒಂದು ಝುಮಕಿಯೇ ಇಲ್ಲ….ತಕ್ಷಣ ಅವನಿಗೆ ಕರೆ ಮಾಡಿದೆ. ನನ್ನ ಝುಮಕಿಯೆಲ್ಲೋ ಬಿದ್ದು ಹೋಗಿದೆ…ನನ್ನ ಪ್ರೀತಿಯ ಝುಮಕಿ ಅದು..ದಯವಿಟ್ಟು ಹುಡುಕಿಕೊಡು.  

ಹುಚ್ಚೇ ನಿನಗೆ,,ಎಕರೆಗಟ್ಟಲೇ ಗದೆಯಲ್ಲಿ ಓಡಾಡುವಾಗ ಯಾವಾಗಲೋ ಬಿದ್ದಿರಬೇಕು..ಮಲಗು ಈಗ…ಹೊಸದು ಕೊಡಿಸುತ್ತೇನೆ ಎಂದು ಕರೆಯನ್ನು ತುಂಡರಿಸಿದ. ನನಗೆ ಏನೋ ಅಮೂಲ್ಯವಾದದ್ದು  ಕಳೆದ ಭಾವ..ಇನ್ನೊಂದು ಝುಮಕಿಯನ್ನು ತೆಗೆದು ಪುಟ್ಟ ಕವರ್ ನಲ್ಲಿ ಹಾಕಿ ಒಂದು ಚೀಟಿ ಬರೆದೆ. ಕಳೆದ ಝುಮಕಿ ಸಿಗುವವರೆಗೂ ನಿನ್ನ ಜೊತೆಯಿರಲಿ ನನ್ನೊಂದಿಗೆ. ಕಳೆದ ಝುಮಕಿ ಸಿಗಲಾರದೆಂಬ ನಂಬಿಕೆ ನನಗಿದೆ.. ಫೆಭ್ರವರಿ 14… ಪ್ರೀತಿಯಾಚರಣೆಯ ಹಬ್ಬ..ಅವನಿಗೆ ಇದನ್ನೇ ಗಿಫ್ಟ್ ಕೊಡಬೇಕು..ಇದಕ್ಕಿಂತ ಒಳ್ಳೆಯ ಉಡುಗೊರೆ ಬೇರೆಯದಿಲ್ಲ… ಎಂದು ಯೋಚಿಸುತ್ತಾ ಮತ್ತೊಂದು ನಿದ್ದೆ ಬಾರದ ರಾತ್ರಿಯನ್ನು ಕಳೆದೆ.
-ಸಿಂಧುಚಂದ್ರ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಪ್ರೀತಿಯಾಚರಣೆಯ ಹಬ್ಬ: ಸಿಂಧುಚಂದ್ರ

  1. ಲೇಖಕಿ ಸಿಂಧುಚಂದ್ರರವರೇ, ಕಚಗುಳಿ ಕೊಡುವ ಅಕ್ಷರಗಳು ಖುಷಿಕೊಟ್ಟವು. ಮುದ್ದಾದ ಬರಹ… 
    – ಪ್ರಸಾದ್, ರಿಪಬ್ಲಿಕ್ ಆಫ್ ಅಂಗೋಲಾ

Leave a Reply

Your email address will not be published. Required fields are marked *