ಲೇಖನ

ಪ್ರಾಯ.. ಪ್ರಾಯ..ಪ್ರಾಯ..: ಪ.ನಾ.ಹಳ್ಳಿ.ಹರೀಶ್ ಕುಮಾರ್


ಹರೆಯದ ಮಾತು ಬಲು ಸೊಗಸು, ಅಂದವಾಗಿರುವುದೆಲ್ಲ ನನ್ನದೆಂಬ ಭಾವನೆ, ಮೀಸೆ ಚಿಗುರುವ ವಯಸು, ನಾವೀನ್ಯತೆಗೆ ಚಡಪಡಿಸುವ ಮನಸು, ಸೊಲನ್ನೊಪ್ಪದೇ ಬರೀ ಗೆಲುವೇ ಬೇಕೆಂಬ ಹಂಬಲ, ಹದಿನೈದು ದಾಟಿ ಬಂದ ಈ ವಯಸ್ಸು ನೋಡಿದ್ದೆಲ್ಲಾ ಸುಂದರವಾಗೇ ಕಾಣಬೇಕು, ಕೇಳಿದ್ದೆಲ್ಲಾ ಸಂಗೀತವೇ ಆಗಿರಬೇಕು, ಕಷ್ಟಕಾರ್ಪಣ್ಯಗಳಿಲ್ಲದೇ ಕೇವಲ ಸುಖದಲ್ಲೇ ಒರಳಾಡಬೇಕೆಂಬ ತುಡಿತ ಈ ಹರೆಯದ್ದು. ಮನ್ಮಥನನ್ನೂ ನಾಚಿಸುವ ರಸಿಕತೆ, ಮದಕರಿಯನ್ನೂ ಮೀರಿಸುವ ಧೈರ್ಯ, ಜಗತ್ತನ್ನೇ ಗೆಲ್ಲಬಲ್ಲ ಆತ್ಮವಿಶ್ವಾಸ ಈ ಹುಚ್ಚುಕೋಡಿ ಮನಸ್ಸಿನದು.

ಪರಾವಲಂಬನೆಯಿಂದ ಹೊರಬಂದು ಸ್ವಾವಲಂಬಿ ಜೀವನದತ್ತ ಮುಖಮಾಡುವ ಮಧ್ಯಂತರ ಅವಧಿಯೇ ಹರೆಯ, ಆಂಗ್ಲಭಾಷೆಯಲ್ಲಿ ಟೀನೇಜ್ ಎಂದು ಕರೆಯಲ್ಪಡುವ ಕೌಮಾರ್ಯವನ್ನೇ ‘ಪ್ರಾಯದ ಹರೆಯ’ ಎಂದು ಗುರ್ತಿಸುವುದುಂಟು. ಈ ಹಂತದಲ್ಲಿ ಪ್ರಾಯದ ಯುವಕ ಯುವತಿಯರಿಗೆ ಎದುರಾಗುವ ಮೊದಲ ಸಮಸ್ಯೆಯೆಂದರೆ ಎಲ್ಲಾದಿಕ್ಕಿನಿಂದಲೂ ಬರುವ ಪ್ರವಚನಗಳು, ಎಲ್ಲರೂ ಹಿತನುಡಿಗಳನ್ನು ಸದಾ ಕಾಲ ಜೀವನದ ಪ್ರತೀ ಹಂತದಲ್ಲೂ ಹೇಳುತ್ತಲೇ ಇರುತ್ತಾgಲ್ಲಿ ಪ್ರಾಯದವರ ಪರಿಸ್ಥಿತಿ ಹೇಗಿರುತ್ತದೆಯೆಂದರೆ ನದಿ ದಾಟಲು ನೀರಿಗಿಳಿದು ಸುಳಿಗೆ ಹೆದರಿ ಮುಂದೆಯೂ ಹೆಜ್ಜೆಯಿಡಲಾರದೇ, ಹಿಂದಕ್ಕೆ ಬಂದು ಅವಮಾನವನ್ನೂ ಸಹಿಸಲಾರದಂತಹ ಮನಸ್ಥಿತಿ ಅವರದಾಗಿರುತ್ತದೆ. ಧೈರ್ಯ ತುಂಬುವವರು ಒಬ್ಬರಾದರೆ, ಅಧೈಯ್ಗೊಳಿಸುವವರು ಹಲವರಿರುತ್ತಾರೆ. ಇವರಲ್ಲಿ ಯಾರನ್ನು ಆಯ್ದುಕೊಳ್ಳಬೇಕೆಂಬ ಮನೋಗೊಂದಲವನ್ನು ಹರೆಯದವರು ಅನುಭವಿಸುತ್ತಾರೆ. ಇಲ್ಲಿ ತಾನೊಬ್ಬ ಅಸಹಾಯಕನಾಗಿದ್ದೇನೆಂಬ ಭಾವನೆ ಅವರನ್ನು ಕಾಡಿದರೆ ಅತಿಶಯೋಕ್ತಿಯೆನಿಸುವುದಿಲ್ಲ. ಆದರೆ ಇವೆಲ್ಲವನ್ನೂ ದಾಟಿ ಹೊರಬಂದಲ್ಲಿ ಅವರು ಯಶಸ್ವೀ ವ್ಯಕ್ತಿಗಳೆನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಶರವೇಗದಲ್ಲಿ ಸ್ವಾಭಾವಿಕವಾಗಿ ವಯೋಸಹಜವಾಗಿ ಉಂಟಾಗುವ ದೈಹಿಕ ಬದಲಾವಣೆಗಳು, ಸಾಗರದಲ್ಲಿನ ಅಲೆಗಳಂತಹ ಪ್ರಶ್ನೆಗಳು, ಸುಳಿಗಳಂತೆ ಬರುವ ಆತಂಕಗಳು ಹರೆಯದವರ ಮನಸ್ಸನ್ನು ಆತಂಕಕ್ಕೀಡಾಗಿಸುತ್ತವೆ. ಅವರ ಬಗ್ಗೆ ಪೋಷಕರಿಗಿರುವ ಅತ್ಯಾಕಾಂಕ್ಷೆಗಳು ಹರೆಯದವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ. ತಮ್ಮಲ್ಲಿನ ದೈಹಿಕ ವಿಕಾಸವೂ ಸಹ ಅವರಲ್ಲಿ ಕುತೂಹಲವನ್ನುಂಟುಮಾಡಬಲ್ಲವು. ಲೈಂಗಿಕತೆಯಲ್ಲಿನ ಬದಲಾವಣೆಯೂ ಸಹ ಹರೆಯದ ಮನಸ್ಸುಗಳಲ್ಲಿ ಹೊಸದೊಂದು ಬ್ರಾಹ್ಮಕತೆಯನ್ನು ಮೂಡಿಸಬಲ್ಲದು. ದೈಹಿಕವಾಗಿ ಎತ್ತರವಾದವರಿಗೆ ಹಾಗೂ ಕುಳ್ಳಗಿನವರಿಗೆ  ತಮ್ಮ ಎತ್ತರ ಅಥವಾ ಕುಳ್ಳನೆಯ ಬಗ್ಗೆ ಹೆಮ್ಮೆ ಹಾಗೂ ಕೀಳರಿಮೆ ಎರೆಡನ್ನೂ ಮೂಡಿಸುತ್ತದೆ. ತೆಳ್ಳಗಿದ್ದರೆ ಸಣಕಲ ಎಂದೂ, ದಪ್ಪಗಿದ್ದರೆ ಡುಮ್ಮ ಎಂದೂ ಹೀಯಾಳಿಸುವ ಸ್ನೇಹಿತರ ಕುರಿತು ಆತಂಕ ಸಹಜವಾದದ್ದೇ, ಅಷ್ಟೇ ಅಲ್ಲದೇ ದೇಹದ ಬಣ್ಣವೂ ಇದೇ ರೀತಿ ಆತಂಕತೆಯಲ್ಲಿ ದೂಡುತ್ತದೆ. ಹುಡುಗಿಯರಲ್ಲಿ ಬೇಗನೇ ಋತುಮತಿಯಾದೆನಲ್ಲ ಎಂಬ ಭಾವನೆಗಳು, ಅದರ ನಂತರದ ಜೀವನ ಶೈಲಿಯಲ್ಲಿನ ಹೊಂದಾಣಿಕೆಗಳು ಬಹುಮಟ್ಟಿಗೆ ಮಾನಸಿಕವಾಗಿ ಕಾಡಬಹುದು. ಇನ್ನು ಯುವಕ ಯುವತಿಯರಿಬ್ಬರಿಗೂ ಬಹಳವಾಗಿ ಕಾಡುವ ಸಮಸ್ಯೆಯೆಂದರೆ ಯಾರಲ್ಲೂ ಹೇಳಿಕೊಳ್ಳಲಾಗದ ಲೈಂಗಿಕ ಭಾವನೆಗಳು. ಅದರಲ್ಲೂ ಭಿನ್ನ ಲಿಂಗದವರ ಬಗ್ಗೆ ಇರಬಹುದಾದ ಕುತೂಹಲಗಳಿಗೆ ಪಾರವೇ ಇಲ್ಲ. ಯಾವುದು ಸರಿ? ಯಾವುದು ತಪ್ಪು?, ತಾನು ಅನುಸರಿಸುತ್ತಿರುವ ನಡೆ ಸೂಕ್ತವಾದುದೇ ಎಂಬೆಲ್ಲಾ ಆತಂಕಗಳು ಅವರನ್ನು ಬಹಳವಾಗಿ ಕಾಡಿಸಬಲ್ಲವು. ಭವಿಷ್ಯದ ಕುರಿತಾದ ಆಲೋಚನೆಗಳು ಮೂಡಿದಾಗ ಮತ್ತಷ್ಟೂ ಘಾಸಿಗೊಳಗಾಗುತ್ತಾರೆ. ವಿಧ್ಯಾಭ್ಯಾಸ ಮುಗಿಸಿ ಭವಿಷ್ಯದಲ್ಲಿ ನೆಲೆನಿಲ್ಲುವ ಆಲೋಚನೆಗಳು ಅವರಲ್ಲಿ ಮೂಡಲು ಪ್ರಾರಂಭವಾಗುತ್ತವೆ.

ಪ್ರಾಯದಲ್ಲಿ ಉಂಟಾಗಬಹುದಾದ ಬದಲಾವಣೆಗಳು, ಬರುವ ಆತಂಕಗಳು ಮತ್ತು ಸೂಕ್ತ ಸಮಯದಲ್ಲಿ ಸಿಗಬಹುದಾದ ಉತ್ತಮ ಮಾರ್ಗದರ್ಶನಗಳು ಅವರ ಬವಿಷ್ಯವನ್ನು ನಿರ್ಧರಿಸುತ್ತವೆ. ಇಷ್ಟೇ ಅಲ್ಲದೇ ಮಾದಕತೆಯಲ್ಲಿ ತೊಡಗಿ ಮಾರಣಾಂತಿಕ ಚಟಗಳಿಗೆ ಬಲಿಯಾಗಿ ಜೀವನವನ್ನು ಬಲಿಕೊಡದೆ, ತಮ್ಮೆಲ್ಲಾ ಸಮಸ್ಯೆಗಳನ್ನು ಆಪ್ತರಾದವರಲ್ಲಿ ಯಾವುದೇ ಹಿಂಜರಿಕೆಯಿಲ್ಲದೇ ಸಮಾಲೋಚಿಸಿದಲ್ಲಿ ಹಾಗೂ ಹರೆಯದವರ ಈ ಸಮಸ್ಯೆಗಳಿಗೆ ಸಮಾಜ, ಪಾಲಕರು, ಸ್ನೇಹಿತರು ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ಅವರ ಬವಿಷ್ಯವೂ ಉಜ್ವಲವಾಗಿರುವುದಲ್ಲದೇ, ಸದೃಢ ಸಮಾಜವೂ ನಿರ್ಮಾಣವಾಗುವುದು.

ಪ.ನಾ.ಹಳ್ಳಿ.ಹರೀಶ್ ಕುಮಾರ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಪ್ರಾಯ.. ಪ್ರಾಯ..ಪ್ರಾಯ..: ಪ.ನಾ.ಹಳ್ಳಿ.ಹರೀಶ್ ಕುಮಾರ್

  1. ಲೇಖನ ಸೊಗಸಾಗಿದೆ. ಧನ್ಯವಾದಗಳು.
      –  ದಂಡಿನಶಿವರ ಮಂಜುನಾಥ್

Leave a Reply

Your email address will not be published. Required fields are marked *