ಕೆ ಟಿ ಸೋಮಶೇಖರ್ ಅಂಕಣ

ಪ್ರಾಮಾಣಿ – ಕತೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

   somashekar-k-t

ಇಂದು ಬೇರೆಯವರನ್ನು , ಭ್ರಷ್ಟರನ್ನು  ಸರಿಮಾಡುವುದೆಂದರೆ ನಾವು ಕೆಟ್ಟುಹೋಗುವುದು ಅಂಥ ಅರ್ಥ! ಅಥವಾ ಅತಿ ದುಷ್ಟರಾಗುವುದು ಅಂಥ!  ಏಕೆಂದರೆ ಅವರಿಗೆ ನಾವು ಸರಿಯಿಲ್ಲ ಅನ್ನಿಸುವುದರಿಂದ ನಮ್ಮನ್ನು ಅವರು ಅವರಂತೆ ಆಗಿಸಿಬಿಡುತ್ತಾರೆ!

ಪುರಾಣಗಳಲ್ಲಿ ದುಷ್ಟರ ದೌಷ್ಟ್ಯ ಹೆಚ್ಚಾದಾಗ ಭಗವಂತ ಬಂದು ದುಷ್ಟರ ಸಂಹರಿಸುವುದನ್ನು ಓದಿರುತ್ತೇವೆ. ಅಂದರೆ ಸಾಮಾನ್ಯರು ಇವರನ್ನು  ಮಟ್ಟ ಹಾಕಲು ಅಸಮರ್ಥರು ಎಂಬ ಸತ್ಯ ಅಲ್ಲಿ ಅಡಗಿದೆ! ದುಷ್ಟರ ನಾಶ ಮಾಡುವುದಕ್ಕೆ ಭಗವಂತನೇ ಅವತರಿಸಬೇಕಾಗುತ್ತದೆ. ಅವನೆ ಸಮರ್ಥ! ಭ್ರಷ್ಟತೆಯನ್ನು ನಿರ್ನಾಮ ಮಾಡುವವರೆ ಮಹಾಭ್ರಷ್ಟರಾಗಿರುವುದರಿಂದ ಎಲ್ಲಾ ಕಡೆ ಭ್ರಷ್ಟಾಚಾರ, ಅನೀತಿ ತಾಂಡವವಾಡುತ್ತಿದೆ! ಇಂದು ಎಲ್ಲಾ ಕಡೆ ಭ್ರಷ್ಟರು, ದುಷ್ಟರು, ಅನೀತಿವಂತರು ಹೆಚ್ಚಿ ಸಮಾಜ ಅಧಃಪತನ ಹೊಂದುತ್ತಿರುವುದನ್ನು ಕಂಡ ಕೆಲವೇ ಉತ್ತಮರು ಅವರ ತಿದ್ದಲು ಪ್ರಯತ್ನಿಸಿ ಆಗದೆ ಅವರೂ ಭ್ರಷ್ಟರಾಗಿ ಪರಿವರ್ತನೆಯಾಗಿರುವುದನ್ನು ಕಂಡಿರುತ್ತೇವೆ! ಇನ್ನೂ ಕೆಲವರು ಕೈಚೆಲ್ಲಿದ್ದಾರೆ! ಇದು ವಿಪರ್ಯಾಸ! ಆದರೂ ಸತ್ಯ! ಅಷ್ಟರಮಟ್ಟಿಗೆ ಭ್ರಷ್ಟತೆ ಕಬಂಧ ಬಾಹುಗಳು ಎಲ್ಲ ಕಡೆ ಸುತ್ತುವರಿದಿವೆ. ಉತ್ತಮರಾಗುವುದರಿಂದ ಏನು ಲಾಭ? ಎಂಬ ಪ್ರಶ್ನೆ ಎದುರಾಗುತ್ತದೆ. ಬದುಕಲು ಹಣ ಬೇಕು. ಉತ್ತಮರೆಂಬ ಪ್ರಮಾಣ ಪತ್ರದಿಂದ ಬದುಕು ಸಾಗಿಸಲು ಇಂದು ಸಾಧ್ಯವಿಲ್ಲ! ಹಿಂದೆ ಏನೆಲ್ಲ ಸಾಧ್ಯವಿತ್ತು! ಉತ್ತಮರೆಂಬ ಪ್ರಮಾಣ ಪತ್ರ ಪಡೆಯುವುದು ಅತಿ ಕಷ್ಟ! ಆದರೂ ಅದರಿಂದ ಹಣ ಸಂಪಾದಿಸಲಾಗದು! ಪ್ರಯೋಜನಕ್ಕೆ ಬಾರದು!  ಹಣವಿಲ್ಲದೆ ಬದುಕು ದುಸ್ತರವಾಗಿದೆ. ಹಣವೇ ಜಗವ ಆಳುತ್ತಿದೆ! ಆದ್ದರಿಂದ ಉತ್ತಮರೆಂಬ ನಡೆ ರೂಪಿಸಿಕೊಳ್ಳಲು ಶ್ರಮಿಸುವ ಅವಶ್ಯಕತೆ ಇದೆಯೆ? ಇಲ್ಲ! ಉತ್ತಮರಾಗುವುದರಿಂದ ಏನೂ ಅನುಕೂಲವಿಲ್ಲ ಎಂದಾದ ಮೇಲೆ ಹಾಗೂ ಅದರಿಂದ ಅನಾನುಕೂಲವೇ ಹೆಚ್ಚು ಎಂದಾದುದರಿಂದಾಗಿ ಜನ ಉತ್ತಮರಾಗುವ ತೊಂದರೆ ತೆಗೆದುಕೊಳ್ಳುತ್ತಿಲ್ಲ! ಏಕೆ ತೆಗೆದುಕೊಳ್ಳಬೇಕು?  

ಉತ್ತಮರಾಗುವುದು ಸುಲಭವಲ್ಲ. ಅನೀತಿ, ಭ್ರಷ್ಟಾಚಾರಗಳ ಗುಡುಗು ಸಿಡಿಲುಗಳ, ಬಿರುಗಾಳಿ, ಮಳೆ ಎದುರಿಸುತ್ತ ಉತ್ತಮಿಕೆಯ ಜ್ಯೋತಿಯ ಆರದಂತೆ ಬೆಳಗಿಸಬೇಕಾಗಿರುವುದು ಸುಲಬವಲ್ಲ! ವ್ರತಗಳೆಂದರೆ ಕಷ್ಟ. ಉತ್ತಮರಾಗಲು ಭ್ರಷ್ಟರೂ, ದುಷ್ಟರೂ ಅನೀತಿವಂತರೂ ಆಗದ ವ್ರತ ಪಾಲಿಸುವುದು ತುಂಬಾ ಕಷ್ಟ. ಅದರಿಂದ ಕಛೇರಿ, ಮನೆ, ಸಂಬಂಧೀಕರು, ಸಮಾಜದ ಪ್ರಮುಖರ ಸಂಬಂಧ ಕೆಡಿಸಿಕೊಂಡು ಶತೃಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಎಲ್ಲರಿಂದ ಬಾರಿ ಸತ್ಯಹರಿಶ್ಚಂದ್ರ! ಗಾಂಧಿ ತುಂಡು! ಎಂಬ ಮುೂದಲಿಕೆಗಳ, ಸಹೋದ್ಯೋಗಿಗಳಲ ವಿಲನ್ ನೋಡಿದಂತೆ ನೋಡುವುದನ್ನು ಹೆಜ್ಜೆ ಹೆಜ್ಜೆಗೂ ಸಹಿಸಬೇಕಾಗುತ್ತದೆ. ಎಲ್ಲರಿಗೆ ವಿಚಿತ್ರ ಪ್ರಾಣಿಯಂತೆ ಕಾಣಬೇಕಾಗುತ್ತದೆ! ಇಷ್ಟೆಲ್ಲ ಆಗಿ ಸುಖವಾಗಿರಲು ಸಾಧ್ಯವೆ? ನೆಮ್ಮದಿಯಿಂದ ಇರಲು ಸಾಧ್ಯವಾಗದು. ಇಷ್ಟು ಪ್ರಮಾಣಿಕರಾಗಿದ್ದು, ಇಷ್ಟು ಶ್ರಮಪಟ್ಟು ಉತ್ತಮರಾಗುವುದರಿಂದ ಏನು ಲಾಭ? ಉತ್ತಮರಾಗಲು ಎಲ್ಲರ ಶತೃಗಳ ಮಾಡಿಕೊಳ್ಳಬೇಕಿದೆ! ಜತೆಗೆ ಉತ್ತಮ ಜೀವನ ನಡೆಸಲೂ ಸಾಧ್ಯವಾಗದಂತಾಗುತ್ತದೆ! ಕಷ್ಟಪಟ್ಟರೂ ಭ್ರಷ್ಟರಂತೆ ಸುಖಪಡಲಾಗದು. ಹಾಗೆ ಉತ್ತಮರೂ, ಪ್ರಾಮಾಣಿಕರೂ, ಆದರ್ಶ ವ್ಯಕ್ತಿಗಳು ಕೆಲವು ಇಲಾಖೆಗಳಲ್ಲಿ ಕೆಲಸಮಾಡುವುದು ಕಷ್ಟ. ಹಾಗೇ ರಾಜಕಾರಣದಲ್ಲಿ ಇರಲಾಗದು! ಮುಖ್ಯಮಂತ್ರಿ, ಮಂತ್ರಿಯುಗಿಯಂತೂ ಕೆಲಸಿಸಲು ಸಾಧ್ಯವಿಲ್ಲ. ಅಲ್ಲಿ ಕೆಲಸಮಾಡಲು  ಬೇಕಾಗುವ ಅರ್ಹತೆಗಳೆಂದರೆ ಅಪ್ರಾಮಾಣಿಕತೆ,  ದುಷ್ಟತೆ, ಅತಿ ಭ್ರಷ್ಟತೆ! 

ಹಾಗೆ ಭ್ರಷ್ಟರಾದರೆ ಎಲ್ಲರೂ ಸ್ನೇಹಿತರಾಗುತ್ತಾರೆ. ಹಣ ಹರಿದು ಬರುತ್ತದೆ. ಬಯಸಿದುದ ಪಡೆದು ಸುಖಿಸಬಹುದು. ಎಲ್ಲಾ ಕಡೆಗೆ ಆಹ್ವಾನಿಸುತ್ತಾರೆ. ಗೌರವ ನೀಡುತ್ತಾರೆ.  ಭ್ರಷ್ಟರಾಗಲು ಶ್ರಮಿಸಬೇಕಿಲ್ಲ! ಹಣ ವ್ಯಯಿಸಬೇಕಿಲ್ಲ! ವ್ರತಗಳ ಆಚರಿಸುವ ಅವಶ್ಯಕತೆಯಿಲ್ಲ! ಆದರೂ ನೆಮ್ಮದಿ ಜೀವನ ನಡೆಸಬಹುದು! ಎಂದಾದರೂ ಒಮ್ಮೆ ಇದು ಬಯಲಾಗಬಹುದು. ಆಗ ಇದೇ ಭ್ರಷ್ಟ ವ್ಯವಸ್ಥೆ ಬೆನ್ನಿಗಿದ್ದು ಕಳಂಕ ತೊಳೆದು ಪವಿತ್ರವಾಗಿಸುತ್ತದೆ! ಆಶ್ಚರ್ಯ !ಆದರೂ ಸತ್ಯ! ಇಲ್ಲಿ ಕಷ್ಟಪಡದಿದ್ದರೂ ಸುಖಪಡಬಹುದು! ಇಂದಿನ ಸಮಾಜ ಹೀಗಾಗಿದೆ! ಇದೇ ಮೌಲ್ಯಯುತವೂ, ಗೌರವಯುತವೂ, ಆದರ್ಶ ಬದುಕೆಂದು ಒಪ್ಪಿತವಾಗುತ್ತಿದೆ!

ಮೇಲಿನ ಎರಡರಲ್ಲಿ ಎರಡನೆಯದನ್ನು ಆಯ್ಕೆ ಮಾಡಿಕೊಂಡವನನ್ನು  ಬುದ್ದಿವಂತ ಎಂದು ಸಮಾಜ ಭಾವಿಸುತ್ತಿದೆ. ಸರ್ಕಾರದ ಯಾವುದೇ ಕೆಲಸಕ್ಕೆ ಸೇರಿದೊಡನೆ ಕಾರು, ಸೈಟ್, ಬಂಗ್ಲೆ … ಒಡೆಯನಾದವನನ್ನು ಸಮಾಜ ಗೌರವಿಸಿ ಸತ್ಕರಿಸುತ್ತಿದೆ! ಆ ಬದುಕಿಗೆ ಬೆಲೆ ಕೊಡುತ್ತಿದೆ! ಅಂದರೆ ಎಲ್ಲರೂ ಹಾಗೆ ಆಗಬೇಕೆಂಬ ಸಂದೇಶ ರವಾನಿಸುತ್ತಿದೆ. ಅವನ ಮೇಲೆ ಅರೋಪಗಳು ಬಂದೊಡನೆ ಸಹಾಯಕ್ಕೆ ನಿಲ್ಲುತ್ತಿದೆ! ಹೀಗೆ ರಕ್ಷಣೆ ಮಾಡುವ ಸಂದೇಶ ಈ ಸಮಾಜ, ಜನ ಮತ್ತು ವ್ಯವಸ್ಥೆ  ಒಪ್ಪಿಕೊಂಡು ಪೋಷಿಸುತ್ತಿದೆ! ಆದ್ದರಿಂದು ಇದು ಮೌಲ್ಯವಾಗಿದೆ!  ಇದನ್ನ ಸಮಾಜ ಒಪ್ಪಿಕೊಳ್ಳುವ ಸಂದರ್ಭದಲ್ಲಿ ಪ್ರಮಾಣಿಕತೆ, ಸುನೀತಿಗಳಿಗೆ ಸ್ಥಾನ ಕೊಡದಿರುವುದರಿಂದ ಅದಕ್ಕೆ ಬೆಲೆಯಿಲ್ಲ ಎಂಬ ಸಂದೇಶ ರವಾನಿಸುತ್ತಿದೆ!  ಪ್ರಯುಕ್ತ ಸಮಾಜ ಎತ್ತ  ಸಾಗುತ್ತಿದೆ ಎಂಬುದನ್ನು ನಾವು ಸುಲಭವಾಗಿ ಗ್ರಹಿಸಬಹುದಾಗಿದೆ! ಇಂದು ಭ್ರಷ್ಟರು ಸಮಾಜದಲ್ಲಿ ಶ್ರಮಪಡದೆ ಸುಖವಾಗಿ ಬದುಕುವುದನ್ನು, ಪ್ರಮಾಣಿಕರು ಬದುಕಲು ಕಷ್ಟಪಡುವುದನ್ನು, ಕಷ್ಟಪಟ್ಟರು ಸುಖವಾಗಿರಲು ಸಾಧ್ಯ ಆಗದಿರುವುದನ್ನು ಕಾಣುತ್ತಿದ್ದೇವೆ.

ಪೂರ್ಣಚಂದ್ರ ತೇಜಸ್ವಿಯವರ ತಬರನ ಕತೆಯ ತಬರ ಭ್ರಷ್ಟ ವ್ಯವಸ್ಥೆಯ ಬಲಿಪಶು, ಪ್ರಾಮಾಣಿಕರಿಗೆ ದೊರೆತ ಕೊಡುಗೆಗೆ ಸಾಕ್ಷಿಯಾಗಿದೆ! ಪ್ರಾಮಾಣಿಕರ ಕೆಲಸ ಕಾರ್ಯಗಳು ಯಾವ ಕಛೇರಿಗಳಲ್ಲಿ ಕಾನೂನು ರೀತಿಯಿಂದಿದ್ದರೂ  ಆಗದಿರುವುದನ್ನು, ಭ್ರಷ್ಟರ ಕೆಲಸ ಕಾರ್ಯಗಳು ಕಾನೂನುಬಾಹಿರವಾದರೂ ಕ್ಷಣಾರ್ದದಲ್ಲಿ ಆಗುವುದನ್ನು ನೋಡಿರುತ್ತೇವೆ! ಇದು ಭ್ರಷ್ಟ ವ್ಯವಸ್ಥಗೆ ಹಿಡಿದ ಕನ್ನಡಿಯಲ್ಲವೆ? 

ಮನವರಿಯದ ಕಳ್ಳತನವಿಲ್ಲ ಮರುಳೇ … ಲೇಖನದಲ್ಲಿ ಮಹದೇವ್ ಪ್ರಕಾಶ್ ರವರು ೧೯೮೯ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರ ಪ್ರಾಮಾಣಿಕತೆ ಬಗ್ಗೆ ಹೀಗೆ ಹೇಳುತ್ತಾರೆ. ಎಐಸಿಸಿ ಅದ್ಯಕ್ಷರಾಗಿದ್ದ ರಾಜೀವಗಾಂಧಿ ಚೆನೈನಲ್ಲಿ ಎಐಸಿಸಿ ಅಧಿವೇಶನ ನಡೆಯಿಸಲು ತೀರ್ಮಾನಿಸಿ ಅದರ ಖರ್ಚು – ವೆಚ್ಚಕ್ಕಾಗಿ  ಹಣ ಕೊಡಬೇಕೆಂದು ಪಾಟೀಲರನ್ನು ಕೇಳುತ್ತಾರೆ.  ಪಾಟೀಲರು ಭ್ರಷ್ಟಾಚಾರ ಮಾಡಿ ಹಣ ಕೊಡಲು ಇಷ್ಟಪಡದೆ ನಿರಾಕರಿಸುತ್ತಾರೆ. ಕೊಡಲೇಬೇಕೆಂಬ ಒತ್ತಡ ಉಂಟಾದಾಗ ಪಾರ್ಶ್ವವಾಯು  ್  ಪೀಡಿತರಾಗಿ ತೊಂದರೆಗೊಳಗಾಗುವುದನ್ನು ಕಾಣುತ್ತೇವೆ. ಭ್ರಷ್ಟಾಚಾರ ಮತ್ತು ಅಧಿಕಾರದ ಗದ್ದುಗೆ ಒತ್ತಡಕ್ಕೆ ಸಿಲುಕಿ ಭ್ರಷ್ಟಾಚಾರ ಮಾಡಲು ಇಷ್ಟವಾಗದೆ ಅನಾರೋಗ್ಯ ಪೀಡಿತರಾಗಿ ಆರೋಗ್ಯ ಮತ್ತು ಅಧಿಕಾರ ಎರಡನ್ನೂ ಕಳೆದುಕೊಳ್ಳುತ್ತಾರೆ! ಇದು ಪ್ರಾಮಾಣಿಕ ಬದುಕಿಗೆ ದೊರೆತ ಪ್ರತಿಫಲ!

ಬದುಕು ಮುಖ್ಯವಾಗಿರುವುದರಿಂದ ಬದುಕುವುದು ಎಲ್ಲರ ಮೊದಲ ಆಧ್ಯತೆಯಾಗಿರುತ್ತದೆ. ಸುಖವಾಗಿ ಬದುಕುವ ದಾರಿಯಿದ್ದರೂ ಕಷ್ಟಪಟ್ಟು ಬದುಕುವ ದಾರಿಯನ್ನು ಆಯ್ದುಕೊಳ್ಳುವವನನ್ನು ಮೂರ್ಖ ಎನ್ನುವುದಿಲ್ಲವೆ? ಆದ್ದರಿಂದ ಸುಖಪಡುವ ದಾರಿಯಲ್ಲಿ ಎಲ್ಲರೂ ನಡೆಯಲು ಬಯಸುವುದು ತಪ್ಪಾ? ಇದಕ್ಕೆ ಇಂದಿನ ಸಮಾಜ, ವ್ಯವಸ್ಥೆ ಕಾರಣವಲ್ಲವೆ? ಈ ವ್ಯವಸ್ಥೆಗೆ ನಾಡನ್ನು ಆಳುತ್ತಿರುವ ರಾಜಕಾರಣಿಗಳೆ ಕಾರಣಗಳಾಗಿಲ್ಲವೆ? ಈ ವ್ಯವಸ್ಥೆ ಹೇಗಾಗಿದೆಯೆಂದರೆ ಬಸ್ಮಾಸುರನ ತಪಸ್ಸಿಗೆ ಮೆಚ್ಚಿ ಬಸ್ಮಾಸುರನಾಗುವಂತೆ ವರ ಕರುಣಿಸಿದ ಪರಶಿವನಿಗೆ ಅವನನ್ನು ನಿಗ್ರಹಿಸುವುದು ಕಷ್ಡವಾಗಿ ದೇವತೆಗಳೆಲ್ಲಾ ಇವನನ್ನು ಕಂಡು ಓಡಿದರೂ ರಕ್ಷಿಸಲಾಗದೆ ನಿಸ್ಸಹಾಯಕನಾಗಿ, ಮೂಕ ಪ್ರೇಕ್ಷಕನಾಗಿ ನೋಡುವಂತಾಯಿತು. ಹಾಗೆ ಭ್ಬ್ರಷ್ಟತೆ  ಬೆಳೆದುನಿಂತಿದೆ!

ಭ್ರಷ್ಟಾಚಾರದ ವಿರುದ್ದ ಹೋರಾಡುವುದೆಂದರೆ ಪ್ರವಾಹದ ವಿರುದ್ದ ಈಜುವುದು ಅಂತ! ಭ್ರಷ್ಟಾಚಾರ ಪ್ರವಾಹದೋಪಾದಿಯಲ್ಲಿ ಪ್ರವಹಿಸುತ್ತಿದೆ! ಇದಕ್ಕೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಎಲ್ಲರೂ ಕಾರಣರಾಗಿದ್ದೇವೆ! ಭ್ರಷ್ಟಾಚಾರದಲ್ಲಿ ತೊಡಗುವವರಷ್ಟೇ ಅಲ್ಲ ಅದನ್ನು ತಡೆಯದೆ ಮೌನ ವೀಕ್ಷಕರಾಗಿರುವುದೂ ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸಿದಂತೆ! ಭ್ರಷ್ಟಾಚಾರ  ಮಟ್ಟ ಹಾಕಬೇಕಾದವರೇ ಮಹಾ ಭ್ರಷ್ಟಾಚಾರದ ಕೂಪದಲ್ಲಿರಬೇಕಾದರೆ ಭ್ರಷ್ಟಾಚಾರ ತಡೆಯುವವರು ಯಾರು? ಅಂದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಯಕ್ಷ ಪ್ರಶ್ನೆಗೆ ಉತ್ತರ ದೊರೆಯದೆ ಕಂಗಾಲಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ! ಇದರ ಜವಾಬ್ದಾರಿ ಯಾರೂ ಹೊರದಿರುವುದು ,ಹೊರಲು ಬಿಡದಿರುವುದ ಕಾಣುವಂತಾಗಿದೆ!  ಇದಕ್ಕೆ ಉತ್ತಮ ಉದಾಹರಣೆ ಲೋಯುಕ್ತಕ್ಕೆ ಲೋಕಾಯುಕ್ತರ ನೇಮಿಸದೆ ವಿಳಂಬಿಸಿದುದು! ಹಾಗೂ ಎಸಿಬಿ ರಚಿಸಿದುದು! ಎಲ್ಲರೂ ಈ ಭ್ರಷ್ಟ ವ್ಯವಸ್ಥೆಯ ಆಶ್ರಯಿಸಿರುವುದರಿಂದ ಇದನ್ನು ಇಲ್ಲವಾಗಿಸಲು ಹೇಗೆ ಬಿಟ್ಟಾರು? ಕೊಟ್ಟಕೊನೆಗೆ ಉಳಿವುದೊಂದೇ ಆಶಾಭಾವ  ' ಅತಿಹತ ' . ಇದು ಹತವಾಗಲು  ಇನ್ನೆಷ್ಟು ಅತಿಯಾಗಬೇಕೋ?

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *