ಪ್ರಾಮಾಣಿಕತೆ ಎಂಬ ಪ್ರತಿಬಿಂಬ: ಎಂ.ಎಚ್. ಮೊಕಾಶಿ ವಿಜಯಪುರ


ಯಾವುದೇ ಸಂಸ್ಕೃತಿಯಾದರೂ ಕೆಲವು ಮೌಲ್ಯಗಳನ್ನು ಹೊಂದಿರುತ್ತದೆ. ಅದರಲ್ಲಿ ಪ್ರಾಮಾಣಿಕತೆ ಎಂಬುದು ಮಹಾಮೌಲ್ಯವಾಗಿದೆ ಎಂದು ಜಗತ್ತಿನ ಎಲ್ಲ ಸಂಸ್ಕೃತಿಗಳ ನಂಬಿಕೆ. ಪ್ರಾಮಾಣಿಕತೆ ಎನ್ನುವುದು ವ್ಯಕ್ತಿಯ ನಡತೆಯ ಅಂಶವನ್ನು ಸೂಚಿಸುವುದಾಗಿದೆ. ಪ್ರಾಮಾಣಿಕತೆಯಲ್ಲಿ ನಿಷ್ಠೆ, ನಿಷ್ಪಕ್ಷಪಾತ, ವಿಶ್ವಾಸರ್ಹ ಮೊದಲಾದ ಗುಣಗಳು ಸೇರಿವೆ.

ಇಂದಿಗೂ ನಮ್ಮಲ್ಲಿ ಸತ್ಯ, ನಿಷ್ಟೆ, ಪ್ರಾಮಾಣಿಕತೆಯಂತಹ ಹಲವಾರು ಸದ್ಗುಣಗಳಿವೆ. ಆದರೆ ಅದನ್ನು ಗುರುತಿಸುವ ಒಳಗಣ್ಣು ಬೇಕಾಗಿದೆ. “ನಾನು ಸರಿ, ಉಳಿದವರು ಸರಿಯಿಲ್ಲ” ಎಂಬ ಭಾವನೆಗಳು ಪ್ರಸ್ತುತ ಹೆಚ್ಚಾಗುತ್ತಿವೆ. ನಾವು ಸತ್ಯ ನಿಷ್ಟರೇ? ಎಂಬುದನ್ನು ಮೊದಲು ಪರಾಮರ್ಶಿಸಿಕೊಳ್ಳಬೇಕು. ಪ್ರಾಮಾಣಿಕತೆಯ ಬಗ್ಗೆ ಮಾತನಾಡುವವರು ತಮ್ಮ ನಡೆ-ನುಡಿಗಳಲ್ಲಿ ಎಷ್ಟು ಪ್ರಾಮಾಣಿಕತೆ ಇದೆ ಎಂಬುದನ್ನು ಅವಲೋಕಿಸಿಕೊಳ್ಳಬೇಕು. ನಾವು ಪ್ರಾಮಾಣಿಕರಾಗಿದ್ದರೆ, ನಮ್ಮಂತೆಯೇ ಪರರು ಎಂದು ಭಾವಿಸಿದರೆ ಪ್ರತಿಯೊಬ್ಬರಲ್ಲೂ ಪ್ರಾಮಾಣಿಕತೆ ಗೋಚರಿಸುವುದು. ಇದು ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ ಇರಬಹುದು. ಅವರವರು ಬೆಳೆದು ಬಂದ ದಾರಿ, ಪಡೆದ ಸಂಸ್ಕಾರ, ಅವರು ಆಯ್ದುಕೊಂಡ ಬಾಳಹಾದಿಯ ಗುಣಾವಗುಣಗಳ ಮೊತ್ತದ ಮೇಲೆ ನಿರ್ಧರಿತ. ಆದರೆ ಪ್ರತಿಯೊಬ್ಬರ ಗುಣಾವಗುಣಗಳಲ್ಲಿ ನಮಗೆ ಬೇಕಾದುದನ್ನು ತೆಗೆದುಕೊಂಡು ಉಳಿದಿದ್ದನ್ನು ನಿರ್ಲಕ್ಷಿಸಿದರೆ ಪ್ರಾಮಾಣಿಕತೆಯ ಕೊರತೆ ನೀಗುವುದು.

ಸದ್ಗುಣಗಳು ಯಾವತ್ತೂ Out Of Fashion ಅಥವಾ Out dated ಆಗಲು ಸಾಧ್ಯವಿಲ್ಲ; ಅವು ಎಂದೆಂದಿಗೂ ಪ್ರಸ್ತುತವೇ; ಹೀಗಾಗಿ ಇಂಥ ಸದ್ಗುಣಗಳಲ್ಲಿ ಪ್ರಾಮಾಣಿಕತೆ ಎಂಬುದು ಬಹು ಮುಖ್ಯವಾದ ಒಂದು ವಜ್ರ, ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದು, ಅಳವಡಿಸಿಕೊಳ್ಳುವುದು ಕಷ್ಟವೇನಲ್ಲ. ನಾವು ಸತ್ಯವಾದುದನ್ನು, ಸರಿಯಾದುದನ್ನು ಯೋಚಿಸಿದರೆ, ಶ್ರದ್ಧೆಯಿಂದ ಆಡಿದರೆ, ಮಾಡಿದರೆ, ಅದು ನಮ್ಮ ವ್ಯಕ್ತಿತ್ವದ ಭಾಗವಾಗಿ ನಮ್ಮೊಂದಿಗೆ ನಾವು ವ್ಯವಹರಿಸುವಾಗ ಮಾತ್ರವಲ್ಲ ಇತರರೊಂದಿಗೆ ವ್ಯವಹರಿಸುವಾಗ ಪ್ರಾಮಾಣಿಕತೆಯು ತಾನಾಗಿಯೇ ಒಡಮೂಡುತ್ತದೆ.

ಒಮ್ಮೆ ಸಂತ ಇಬ್ರಾಹಿಂ ದೇಶ ಸಂಚರಿಸುತ್ತ ಒಬ್ಬ ಧನಿಕನ ತೋಟಕ್ಕೆ ಬಂದನು. ಧನಿಕನು, ಸಂತ ಇಬ್ರಾಹಿಂನ ಸಾಧಾರಣ ಉಡುಪನ್ನು ಕಂಡು ಅವನನ್ನು ಸಾಮಾನ್ಯ ಬಡ ಮನುಷ್ಯನೆಂದು ಭಾವಿಸಿದನು. ಅವನಿಗೆ ತೋಟ ಕಾಯಲು ಆಳು ಬೇಕಾಗಿತ್ತು. ಆಗ ಇಬ್ರಾಹಿಂಗೆ “ನೀನು ನನ್ನ ತೋಟದ ಕಾವಲು ಮಾಡುವೆಯಾ?” ಎಂದು ಕೇಳಿದನು. ಆಗ ಇಬ್ರಾಹಿಂಗೆ ಧನಿಕನ ತೋಟದ ಶಾಂತ ವಾತಾವರಣ, ಸುಂದರ ಪರಿಸರ ಇಷ್ಟವಾಯಿತು. ಏಕಾಂತದಲ್ಲಿ ದೇವರ ಧ್ಯಾನ ಮಾಡಲು ಇದು ಸೂಕ್ತ ಸ್ಥಳವೆನಿಸಿತು. ಹೀಗಾಗಿ ಧನಿಕನ ಮಾತನ್ನು ಒಪ್ಪಿಕೊಂಡನು.

ಇಬ್ರಾಹಿಂ ಬಹಳ ಮುತುವರ್ಜಿಯಿಂದ ತೋಟದ ಕಾವಲು ಮಾಡುತ್ತಿದ್ದನು. ಒಂದು ದಿನ ಧನಿಕನು ಮಿತ್ರರೊಂದಿಗೆ ತೋಟಕ್ಕೆ ಬಂದು ಮಾವಿನ ಮರದಲ್ಲಿನ ಹಣ್ಣುಗಳನ್ನು ಕಿತ್ತು ತರುವಂತೆ ಇಬ್ರಾಹಿಂಗೆ ಹೇಳಿದನು. ಅವನು ಕೆಲವು ಮಾವಿನ ಹಣ್ಣುಗಳನ್ನು ಕಿತ್ತು ತಂದನು. ಆಗ ಆ ಹಣ್ಣುಗಳೆಲ್ಲವೂ ಹುಳಿಯಾಗಿದ್ದವು. ಆಗ ಧನಿಕನು ಇಬ್ರಾಹಿಂನನ್ನು ಕುರಿತು “’ಹಲವು ದಿನಗಳಿಂದ ನನ್ನ ತೋಟದ ಕಾವಲು ಮಾಡುತ್ತಿರುವೆ. ಆದರೆ ಯಾವ ಮರದ ಹಣ್ಣು ಹುಳಿಯಾಗಿವೆ, ಯಾವ ಮರದ ಹಣ್ಣು ಸಿಹಿಯಾಗಿವೆ ಎಂದು ನಿನಗೆ ಗೊತ್ತಿಲ್ಲವೆ?” ಎಂದು ಕೇಳಿದನು.

ಇದನ್ನು ಕೇಳಿ ಇಬ್ರಾಹಿಂ ನಕ್ಕನು. ಆಗ ಧನಿಕನು “ಏಕೆ ನಗುತ್ತಿರುವೆ?” ಎಂದನು. ಇಬ್ರಾಹಿಂ “ಒಡೆಯರೇ! ನೀವು ನನ್ನನ್ನು ನೇಮಿಸಿರುವದು ತೋಟವನ್ನು ಕಾಯುವುದಕ್ಕಾಗಿಯೇ ಹೊರತು ಮಾವಿನ ಹಣ್ಣುಗಳನ್ನು ತಿನ್ನುವುದಕ್ಕಲ್ಲ. ನಿಮ್ಮ ಆಜ್ಞೆ ಇಲ್ಲದೇ ನಾನು ಹಣ್ಣುಗಳನ್ನು ಹೇಗೆ ತಿನ್ನಲು ಸಾಧ್ಯ? ನಾನು ಹಣ್ಣುಗಳನ್ನು ತಿಂದೇ ಇಲ್ಲ ಎಂದ ಮೇಲೆ ನನಗೆ ಯಾವ ಹಣ್ಣು ಸಿಹಿ, ಯಾವ ಹಣ್ಣು ಹುಳಿ ಎಂದು ಹೇಗೆ ಗೊತ್ತಾದೀತು?” ಎಂದನು. ಆಗ ಧನಿಕನು ಇಬ್ರಾಹಿಂನ ಪ್ರಾಮಾಣಿಕತೆಯನ್ನು ಕಂಡು ತಲೆದೂಗಿದನು. ಮತ್ತು ತನ್ನ ನಡವಳಿಕೆಗಾಗಿ ಇಬ್ರಾಹಿಂನಲ್ಲಿ ಕ್ಷಮೆಯಾಚಿಸಿದನು.

ಪ್ರಾಮಾಣಿಕತೆಯಂತಹ ಸದ್ಗುಣಗಳು ಅಲೌಕಿಕ ಮೋಕ್ಷಕ್ಕಷ್ಟೇ ಅಲ್ಲದೇ, ಲೌಕಿಕ ಸಂತೃಪ್ತಿಯ ಸಾಧನೆಗೆ ಬೇಕೇ ಬೇಕು. ಆದುದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಬದುಕಿನಲ್ಲಿ ಪ್ರಾಮಾಣಿಕರಾಗಿರಬೇಕೆಂದು ಬಯಸುವರು.

ಬೆಂಜಮಿನ್ ಫ್ರಾಂಕ್ಲಿನ್ ಹೇಳಿದಂತೆ “Honesty is the best Policy” ಪ್ರಾಮಾಣಿಕತೆಯನ್ನು ರೂಢಿಸಿಕೊಂಡು ನೋಡಿದರೆ ಖಂಡಿತವಾಗಿ ಅದು ನಮ್ಮ ಅರಿವಿಗೆ ಬರುತ್ತದೆ. ಸರಿಯಾದುದನ್ನು ಹೇಳಿದರೆ ಯಾವ ಭಯವೂ ಇರಲಾರದು. “ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ” ಎಂಬಂತೆ ಕಳ್ಳ ಯೋಚನೆಗಳಿಲ್ಲದೇ ನಮ್ಮ ಮನಸ್ಸು ಸ್ವಚ್ಚಂದ ಕನ್ನಡಿಯಂತೆ ಇಟ್ಟುಕೊಂಡರೆ ಯಾರ ಭಯವೇಕೆ? ಇದ್ದದ್ದನ್ನು ಇದ್ದ ಹಾಗೆ ಹೇಳುವ ಗುಣವೊಂದು ಅದ್ಭುತ ಮಾನದಂಡದಂತೆ. ಆದರೆ ಇದರಲ್ಲಿ ನಾನು “Straight Forward” ಎಂಬ ಅಹಂಕಾರ ಇರದಿರಲಿ. ಅನಗತ್ಯ ನೇರವಂತಿಕೆ ಹಾಗೂ ಹಿತವಿಲ್ಲದ ನುಡಿ ಎರಡೂ ಹಿಂಸೆಯೇ, ಹಾಗೆಂದು ಜೇನಿನಲ್ಲಿ ಅದ್ದಿ ತೆಗೆದಂತೆ ಅನಗತ್ಯ ಸಿಹಿಯಾಗಿ ಮಾತನಾಡುವುದು ತಪ್ಪೇ! ಇರುವ ವಿಷಯವನ್ನು ಎಲ್ಲಿ ಯಾವಾಗ, ಹೇಗೆ, ಹೇಳಬೇಕು ಎಂಬ ವಿವೇಚನೆ ಮುಖ್ಯ.
ಒಳಗೆ ಕೋಪವನ್ನು ಅಡಗಿಸಿಟ್ಟು ಹೊರಗೆ ಮಂದಹಾಸ ಬೀರಿದರೂ, ಒಳಗೆ ಸತ್ಯವನ್ನು ಮುಚ್ಚಿಟ್ಟು ಸುಳ್ಳನ್ನು ಹೇಳಿದರೂ, ಅದು ಎದುರಿನವರಿಗೆ ತಿಳಿಯದ್ದೇನೂ ಇಲ್ಲ; ನಾವು ಎಷ್ಟೇ ಚೆನ್ನಾಗಿ ನಟಿಸಿದರೂ ನಮಗೆ ಅರಿವಿಲ್ಲದಂತೆ ನಮ್ಮ ಮಾತಿನಲ್ಲಿ ಇಣುಕುವ ಯಾವುದೋ ಪದವೋ, ದಾಟಿಯೋ, ಕಣ್ಣಿನ ಕೊಂಕೋ, ಆಂಗಿಕ ಶೈಲಿಯೋ ನಿಜಭಾವವನ್ನು ಹೊರಹಾಕಿಯೇ ಬಿಡುತ್ತದೆ. “ಒಬ್ಬ ವ್ಯಕ್ತಿಯಲ್ಲಿ ಮೂರು ವಿಷಯಗಳನ್ನು ಗಮನಿಸಬೇಕು. ಅವುಗಳೆಂದರೆ ಬುದ್ಧಿಮತ್ತೆ, ಸಾಮಥ್ರ್ಯ, ಮತ್ತು ಪ್ರಾಮಾಣಿಕತೆ. ಆತನಲ್ಲಿ ಕೊನೆಯದು ಇಲ್ಲವೆಂದಾದರೆ ಮೊದಲ ಎರಡನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು” ಎಂದು ವಾರನ್ ಬಫೆಟ್ ಹೇಳಿದ್ದಾರೆ.

ಅಪ್ರಾಮಾಣಿಕತೆಯ ಜಾಡ್ಯಕ್ಕೆ ಮದ್ದು ಪ್ರಾಮಾಣಿಕತೆಯೇ ಆಗಿದೆ. ನಾವು ಪ್ರಾಮಾಣಿಕರಾಗಿ ಸರಳವಾಗಿ, ಸುಖವಾಗಿ ಬದುಕುತ್ತಾ ಸಕಲರಿಗೂ ಒಳಿತನ್ನೇ ಬಯಸುತ್ತ ಇದ್ದುಬಿಟ್ಟರೆ ತಾನಾಗಿಯೇ ನಮ್ಮ ಆಲೋಚನೆಗಳು, ವರ್ತನೆಗಳು ಧನಾತ್ಮಕವಾಗುತ್ತಾ ಜಗತ್ತಿಗೇ ಗೋಚರಿಸುತ್ತವೆ. ನಾವಾಡುತ್ತಿರುವುದು ಸತ್ಯ ಎಂಬ ನಂಬಿಕೆ ನಮಗಿರಬೇಕು. ನಂತರ ನಮ್ಮ ಮಾತಿನ ಮೇಲೆ ಸ್ನೇಹಿತರು, ಸಹಚರರು, ಸಂಬಂಧಿಕರು ನಂಬಿಕೆ ಇಡುವರು.

-ಎಂ.ಎಚ್. ಮೊಕಾಶಿ ವಿಜಯಪುರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x